Home Blog Page 3134

ಭಾರಿ ಮಳೆಗೆ ರಾಜ್ಯಾದ್ಯಂತ 21 ರಾಜ್ಯ ಹೆದ್ದಾರಿ ಸಂಪರ್ಕ ಕಡಿತ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

  • ಪರ್ಯಾಯ ಸಂಚಾರಕ್ಕೆ ಅಗತ್ಯ ಕ್ರಮ
  • ಡಿಸಿಎಂ ಗೋವಿಂದ ಕಾರಜೋಳ ಮಾಹಿತಿ

ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಧಾರಾಕಾರ ಮಳೆಯಿಂದಾಗಿ 26 ಜಿಲ್ಲಾ ಮುಖ್ಯ ರಸ್ತೆ, 21 ರಾಜ್ಯ ಹೆದ್ದಾರಿಗಳ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಡಿಸಿಎಂ ಹಾಗೂ ಲೋಕೋಪಯೋಗಿ ಸಚಿವ ಗೋವೀಂದ ಕಾರಜೋಳ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 24 ಗಂಟೆಯಿಂದ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯ 26 ಜಿಲ್ಲಾ ಮುಖ್ಯ ರಸ್ತೆ, 21 ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ತುರ್ತು ರಸ್ತೆ ರಿಪೇರಿಗೆ 50 ಕೋಟಿ ರೂಪಾಯಿ ಬೇಕಾಗುತ್ತದೆ. ಎಂದು ತಿಳಿಸಿದರು.

ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆ‌ ಸೇರಿ 400 ಕೋಟಿಯಷ್ಟು, ರಸ್ತೆ, ಸೇತುವೆಗಳಿಗೆ ಹಾನಿ‌ ಆಗಿದೆ. ಹಣ ಬಿಡುಗಡೆಗೆ ಸಿಎಂ ನೇತೃತ್ವದ ಸಭೆಯಲ್ಲಿ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.

ಕಳೆದ 24 ಗಂಟೆಯಲ್ಲಿ 300ಮಿಮೀಗಿಂತ ಹೆಚ್ಚು ಮಳೆ ಆಗಿದೆ. ಕೊಯ್ನಾ ಡ್ಯಾಂ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕ ಹೊಂದಿದ್ದು,
ಜನರಿಗೆ ತೊಂದರೆ ಆಗದಂತೆ ಕಾಳಜಿ ಕೇಂದ್ರ, ಜಾನುವಾರು ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.
ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ ಎಂದು ಕಾರಜೋಳ ತಿಳಿಸಿದರು.

ರೈಲು ಸಂಚಾರ ರದ್ದು

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಬೆಳಗಾವಿ-ಗೋವಾ ರೈಲ್ವೆ ಮಾರ್ಗದಲ್ಲಿ ದೂಧಸಾಗರ ಬಳಿ ಶುಕ್ರವಾರ ಭೂಕುಸಿತ ಹಾಗೂ ಸೋನಾಲಿಂ ಕುಲೆಂ ನಡುವೆ ರೈಲು ಹಳಿ ತಪ್ಪಿದೆ ಹಿನ್ನೆಲೆಯಲ್ಲಿ ಕೆಲವು ರೈಲು ಸಂಚಾರ ರದ್ದುಪಡಿಸಿದ್ದು, ಇನ್ನು ಹಲವು ರೈಲುಗಳನ್ನು ಭಾಗಶಃ ರದ್ದುಪಡಿಸಿ, ಒಂದು ರೈಲಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ನಿರ್ದೇಶನ ನೀಡಿ ನೈರುತ್ಯ ರೈಲ್ವೆ ಅಧಿಕಾರಿಗಳು ಆದೇಶ ನೀಡಿದ್ದಾರೆ.

ಅಂದರ್-ಬಾಹರ್ ಜೂಜಾಟ; 10 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಈಶ್ವರ ದೇವಸ್ಥಾನದ ಪಕ್ಕದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್- ಬಾಹರ್ ಜೂಜಾಟದಲ್ಲಿ ತೊಡಗಿದ್ದ 10 ಜನರ ತಂಡವನ್ನು ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಈಶ್ವರ ದೇವಸ್ಥಾನದ ಬಳಿ ಜೂಜಾಟದಲ್ಲಿ ತೊಡಗಿದ್ದ ಬನ್ನಿಕೊಪ್ಪದ ನೀಲಪ್ಪ ಬಸಪ್ಪ ಕಡಕೋಳಿ, ಮುತ್ತಪ್ಪ ಶಿವಪ್ಪ ಬಡ್ನಿ, ವಿಜಯಕುಮಾರ್ ಮಂಜುನಾಥ್ ಹೆಸಿ, ಹನುಮಂತ ಮುರೆಗೆಪ್ಪ ಹಳ್ಳೆಪ್ಪನವರ್, ಬಸಪ್ಪ ಮಲ್ಲಪ್ಪ ಆರೇರ್, ನಾಗಪ್ಪ ಸತ್ಯಪ್ಪ ತಳವಾರ, ಪಕ್ಕೀರಪ್ಪ ರಾಮಣ್ಣ ಪೆಡ್ಡಾರ, ಶ್ರೀಕಾಂತ್ ಶಾಂತಪ್ಪ ಕಂಚಿನಕೋಟಿ, ಮಾಚೇನಹಳ್ಳಿಯ ಶಂಕರ್ ಗೌಡ ಗೋವಿಂದಗೌಡ್ ಪಾಟೀಲ್, ಮುತ್ತಪ್ಪ ಗುಡದಪ್ಪ ಕಮತರ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 5930 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೂಜಾಟದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಶಿರಹಟ್ಟಿ ಪಿಎಸ್ಐ ನವೀನ್ ಜಕ್ಕಲಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

ಪೊಲೀಸರ ದಾಳಿ; 7 ಜನ ಜೂಜುಕೋರರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಏಳು ಜನರ ತಂಡವೊಂದು ಗ್ರಾಮದ ದೇವಸ್ಥಾನ ವೊಂದರಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಬಂಧಿಸಿದ ಘಟನೆ ಜಿಲ್ಲೆಯ ಯಲಿಶಿರೂರು ಗ್ರಾಮದಲ್ಲಿ ನಡೆದಿದೆ.

ಮುಳಗುಂದ ಠಾಣೆಯ ಪಿಎಸ್ಐ ಸಚಿನ್ ಅಲಮೇಲಕರ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ ನಿಂಗಪ್ಪ ಬಸಪ್ಪ ಶಿರಹಟ್ಟಿ, ರವಿ ಮಲ್ಲಪ್ಪ ಬಾರಕೇರ, ಚಂದ್ರಶೇಖರಯ್ಯ ಬೊಗೆಶ್ವರಯ್ಯ ಜಂಗಮರ, ಬಸವರಾಜ್ ಚನ್ನಪ್ಪ ಕಳಸಾಪೂರ, ಯಲ್ಲಪ್ಪ ನಿಂಗಪ್ಪ ಹರಿಹರ, ಬಸವರಾಜ್ ರಾಮಪ್ಪ ಹಳ್ಳಿ ಹಾಗೂ ಶಂಕರಪ್ಪ ಕಲ್ಲಪ್ಪ ಹೊನ್ನಪ್ಪನವರ್ ಎಂಬುವವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 3700 ರೂ.ಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೂ ಕುಸಿತ; ಬೆಳಗಾವಿ- ಗೋವಾ ಮಾರ್ಗದಲ್ಲಿ ಸಿಕ್ಕಿಕೊಂಡ ರೈಲು

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಬೆಳಗಾವಿ- ಗೋವಾ ರೈಲ್ವೆ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ ರೈಲು ಸಂಚಾರ ಬಂದ್ ಆಗಿ, ಗೋವಾಕ್ಕೆ ಹೊರಟಿದ್ದ ರೈಲೊಂದು ದೂಧಸಾಗರ ಬಳಿ ನಿಲುಗಡೆಯಾಗಿದ್ದು, ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.

ಭಾರಿ ಮಳೆಯಿಂದ ಗುಡ್ಡ ಕುಸಿತಗೊಂಡಿದ್ದರಿಂದ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ರೈಲಿನಲ್ಲಿ ಸಿಲುಕಿರುವ ಸಾವಿರಾರು ಜನರಿಗೆ ರೈಲ್ವೆ ಇಲಾಖೆ ಆಹಾರ, ನೀರು ವ್ಯವಸ್ಥೆ ಮಾಡಿದೆ.

ಡಿಪ್ಲೊಮಾ ಪರೀಕ್ಷೆ ರದ್ದುಗೊಳಿಸಲು ಆಗ್ರಹ

ವಿಜಯಸಾಕ್ಷಿ ಸುದ್ದಿ, ಗದಗ

  • ಗದಗ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು

ಪಿಯುಸಿ ಮಾದರಿಯಲ್ಲೇ ಡಿಪ್ಲೊಮಾ ಪರೀಕ್ಷೆ ರದ್ದುಪಡಿಸಿ ಮುಂದಿನ ಸೆಮಿಸ್ಟರ್ ಗೆ ಪ್ರಮೋಟ್ ಮಾಡಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಡಿಪ್ಲೊಮಾ ವಿದ್ಯಾರ್ಥಿಗಳು ಧರಣಿ ನಡೆಸಿದರು.

ಮಹಾಮಾರಿ ಹಿನ್ನೆಲೆ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಆನ್ ಲೈನ್, ಆಫ್ ಲೈನ್ ಕ್ಲಾಸ್ ಗಳು ನಡೆದಿಲ್ಲ. ತರಗತಿ ನಡೆಸದೇ ಪರೀಕ್ಷೆ ನಡೆಸೋದು ಸರಿಯಲ್ಲ. ಹೀಗಾಗಿ ಕೂಡಲೇ ಪರೀಕ್ಷೆ ರದ್ದು ಮಾಡಬೇಕು. ಕೆಲ ವಿವಿಗಳ ಮಾದರಿಯಲ್ಲೇ ಡಿಪ್ಲೊಮಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿದಲ್ಲಿ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ದಲಿತರನ್ನು ಸಿಎಂ ಮಾಡಿದ್ದೇವೆ ಎಂಬುದನ್ನು ಮೊದಲು ಹೇಳಿ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

  • ಕಟೀಲ್ ದಲಿತರನ್ನು ಸಿಎಂ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ತಿರುಗೇಟು

ಸ್ವಾತಂತ್ರ್ಯ ಬಳಿಕ ಇಷ್ಟು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ರಾಜ್ಯದಲ್ಲಿ ಎಷ್ಟು ಮಂದಿ ದಲಿತರನ್ನು ಸಿಎಂ ಮಾಡಿದೆ ಎಂದು ಮೊದಲು ಹೇಳಲಿ. ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಬಿಜೆಪಿಗೆ ಸವಾಲ್ ಹಾಕುವ ಅವಶ್ಯಕತೆ ಇಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ದಲಿತರನ್ನು ಸಿಎಂ ಮಾಡಲಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ,
ದಲಿತರನ್ನ ಸಿಎಂ ಮಾಡಲು ಆಗಿಲ್ಲ. ತುಳಿದಿದ್ದೇವೆ ಎಂಬುದನ್ನು ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳಲಿ. ನಾವು ತುಳಿದಿದ್ದೇವೆ, ನೀವು ಉದ್ಧಾರ ಮಾಡಿ ಎಂದರೆ ಬೆಲೆ ಇದೆ. ಮುಂದೆಯೂ ನಾನೇ ಸಿಎಂ ಎಂದು ಹೇಳುವ ಸಿದ್ದರಾಮಯ್ಯನವರಿಗೆ ಕಟೀಲ್ ಬಗ್ಗೆ ಮಾತನಾಡುವ ನೈತಿಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

ಈ ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಅವರು ದಲಿತರನ್ನ ಸಿಎಂ ಮಾಡಲ್ಲ. ಸಿದ್ದರಾಮಯ್ಯ ಬೆಂಬಲಿಗರ ಮೂಲಕ ಸಿಎಂ ಎಂದು ಕೂಗಿಸುತ್ತಾರೆ. ಒಂದು ಕಡೆ ಡಿಕೆಶಿ ಅಭಿಮಾನಿಗಳ ಮೂಲಕ ಘೋಷಣೆ ಹಾಕಿಸುತ್ತಾರೆ. ಇಂಥವರಿಗೆ ಬಿಜೆಪಿ ಬಗ್ಗೆ ಸವಾಲ್ ಹಾಕಲು ಯೋಗ್ಯತೆ ಇದೆಯಾ ಅಯೋಗ್ಯರು ಎಂದು ವಾಗ್ದಾಳಿ ನಡೆಸಿದರು.

ದಲಿತ ರಾಷ್ಟ್ರ ಪತಿ ಮಾಡಿದ್ದು ನಾವು. ರಾಷ್ಟ್ರದಲ್ಲಿ ಹಲವು ದಲಿತ ಸಿಎಂ ಮಾಡಿದ್ದೇವೆ.
ರಾಜ್ಯದಲ್ಲಿರುವ ರಾಜ್ಯಪಾಲರು ದಲಿತರು. ಬಿಜೆಪಿ ರಾಷ್ಟ್ರಭಕ್ತಿ ಇರುವವರಿಗೆ ಹುದ್ದೆ ನೀಡುತ್ತದೆ ಹೊರತು ಅವರ ಜಾತಿ ನೋಡಿಯಲ್ಲ ಎಂದರು.
ಸಾಮಾಜಿಕ ನ್ಯಾಯ ಎಂದು ಧರ್ಮಸಿಂಗ್ ಅವರನ್ನು ಉದ್ಧಾರ ಆಗಲು ಬಿಡಲಿಲ್ಲ.
ಡಾ.ಜಿ. ಪರಮೇಶ್ವರ ಅವರನ್ನ ಸಿದ್ದರಾಮಯ್ಯ ಸೋಲಿಸಿದರು. ಇಂತವರು ಬಿಜೆಪಿ ಅಧ್ಯಕ್ಷರಿಗೆ ಸವಾಲ್ ಹಾಕುವ ನೈತಿಕತೆ ಉಳಿಸಿಕೊಂಡಿಲ್ಲ ಎಂದರು.

ಮುಂದೆ ಬಿಜೆಪಿಯಲ್ಲಿ ಯಾರೇ ಸಿಎಂ ಆದರೂ ಭ್ರಷ್ಟರೇ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ತೀಡಿದ ಈಶ್ವರಪ್ಪ, ಭ್ರಷ್ಟರ ಬಾಯಲ್ಲಿ ಎಂಥ ಮಾತು ಬರುತ್ತೆ. ಭ್ರಷ್ಟ ಆಗಿದ್ದ ಸಿಎಂ ಯಾಕೆ ಸರ್ಕಾರ ಕೆಡವಿಕೊಂಡರು. ಸಿದ್ದರಾಮಯ್ಯ ಯಾಕೆ ಚಾಮುಂಡೇಶ್ವರಿಯಲ್ಲಿ ಸೋತರು. ಕಾಂಗ್ರೆಸ್ ಸರ್ಕಾರ ಯಾಕೆ ರಾಜ್ಯದಲ್ಲಿ ಹೋಯ್ತು. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲಿದೆ ಎಂದು ಹೇಳಿದರು.

ಕಾಡಿನಲ್ಲಿ ನಾಪತ್ತೆಯಾಗಿದ್ದ ಹುಬ್ಬಳ್ಳಿಯ ಆರು ಯುವಕರು ಪ್ರತ್ಯಕ್ಷ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

  • ಜಲಪಾತ ನೋಡಲು ಅರಣ್ಯ ಪ್ರದೇಶಕ್ಕೆ ತೆರಳಿದ್ದ ನವನಗರ ಯುವಕರ ತಂಡ

ನವನಗರದಿಂದ ಪ್ರವಾಸಿ ತಾಣ ನೋಡಲು ಹೋಗಿ ನಿನ್ನೆ ಶಿರ್ಲೆ ಫಾಲ್ಸ್‌ ನಲ್ಲಿ ನಾಪತ್ತೆಯಾಗಿದ್ದ ಆರು ಯುವಕರು ಇಂದು ಯಲ್ಲಾಪುರ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಸುರಕ್ಷಿತವಾಗಿ ಯಲ್ಲಾಪುರ ಪೊಲೀಸ್ ಠಾಣೆಗೆ ಕರೆತರಲಾಗಿದೆ.
ನವನಗರದ ಆಸೀಫ್ ಮಕಬೂಲಸಾಬ ಡಾಲಾಯಿತ್, ಅಹ್ಮದ ಸೈಯ್ಯದ ಶೇಖ್, ಅಬತಾಬ್ ಸದ್ದಾಂ ಶಿರಹಟ್ಟಿ, ಮಾಬುಸಾಬ ಮಕಬೂಲಸಾಬ ಶಿರಹಟ್ಟಿ, ಶಾನು ಬಿಜಾಪುರಿ ಹಾಗೂ ಇಮ್ತಿಯಾಜ್ ನೀರಸಾಬ ಮುಲ್ಲಾನವರ ನಾಪತ್ತೆಯಾಗಿದ್ದ ಯುವಕರು.

ಮಳೆಯ ಹಿನ್ನಲೆ ಜಲಪಾತ ಕಣ್ತಂಬಿಕೊಳ್ಳಲು ಕಾಡಿನತ್ತ ತೆರಳಿ ನಾಪತ್ತೆಯಾಗಿದ್ದರು.
ಯಲ್ಲಾಪುರ ಸಮೀಪದ ಶಿರ್ಲೆ ಪಾಲ್ಸ್ ಬಳಿ ಮೂರು ಸ್ಕೂಟಿಗಳು ಸಿಕ್ಕಿದ್ದವು. ಯುವಕರು ನಾಪತ್ತೆಯಿಂದ ಕುಟುಂಬದವರು ಆತಂಕಗೊಂಡಿದ್ದರು. ಯುವಕರು ಸುರಕ್ಷಿತವಾಗಿರುವ ಸುದ್ದಿ ತಿಳಿದು ಪಾಲಕರು
ನಿಟ್ಟುಸಿರು ಬಿಟ್ಟಿದ್ದಾರೆ.

ಉಕ್ಕಿ ಹರಿಯುತ್ತಿವೆ ನದಿಗಳು, ಚಿಕ್ಕೋಡಿ ಭಾಗದ 4 ಸೇತುವೆ ಜಲಾವೃತ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಮಹಾರಾಷ್ಟ್ರದಲ್ಲಿ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಲಾಶಯಗಳು ತುಂಬಿ ತುಳುಕುತ್ತಿದ್ದು, ಹೆಚ್ಚಿನ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ.
ಇದರ ಪರಿಣಾಮ ಚಿಕ್ಕೋಡಿ ತಾಲೂಕಿನಲ್ಲಿ ನದಿಗಳು ಉಕ್ಕಿಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.

ಮಹಾರಾಷ್ಟ್ರದ ಕೊಯ್ನಾ, ರಾಧಾನಗರಿ, ವಾರಣಾ, ರಾಜಾಪೂರ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚಿನ ನೀರನ್ನು ನದಿಗಳಿಗೆ ಹರಿಬಿಡಲಾಗುತ್ತಿದೆ. ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ 10 ಸಾವಿರ ಕ್ಯೂಸೆಕ್, ರಾಜಾಪೂರ ಜಲಾಶಯದಿಂದ 1 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
ಹೀಗಾಗಿ ಕೃಷ್ಞಾ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳು ಉಕ್ಕಿಹರಿಯುತ್ತಿದ್ದು,
ಚಿಕ್ಕೋಡಿ ತಾಲೂಕಿನ 4 ಸೇತುವೆಗಳು ಜಲಾವೃತ್ತವಾಗಿವೆ.

ಇಂಗಳಿ, ಮಾಂಜರಿ, ಯಡೂರ, ಚಂದೂರ, ಅಂಕಲಿ, ಸೌಂದತ್ತಿ ಸೇರಿದಂತೆ ನದಿತೀರದ ಜನರಿಗೆ ‌ಪ್ರವಾಹದ ಭೀತಿ‌ ಎದುರಾಗಿದೆ.
ಮುಂಜಾಗ್ರತಾ ‌ಕ್ರಮವಾಗಿ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಬೋಟ್ ಗಳ ವ್ಯವಸ್ಥೆ ಮಾಡಿದ್ದು, ಎನ್ ಡಿಆರ್ ಎಫ್ ತಂಡದ ನಿಯೋಜನೆ ಮಾಡಲಾಗಿದೆ. ನದಿ ತೀರದತ್ತ ಜನರು ಹೋಗದಂತೆ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಸತ್ತ ಮನೆಯಲ್ಲಿ ರಾಜಕಾರಣ ಮಾಡೋದು ಬೇಡ..!

ವಿಜಯಸಾಕ್ಷಿ ಸುದ್ದಿ, ಮಂಡ್ಯ

  • ಸಿಎಂ ಆಗಲು ಆತುರ ಇಲ್ಲ
  • ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿಕೆ ಹೇಳಿಕೆ

ನನಗೆ ಸಿಎಂ ಆಗೋಕೆ ಆತುರ ಇಲ್ಲ. ಜನರ ಸಮಸ್ಯೆಗಳ ಬಗ್ಗೆ ಅರ್ಥಮಾಡಿಕೊಂಡಿದ್ದೇನೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಬೆಳಕವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಜನರು ಸಂಕಷ್ಟದಲ್ಲಿದ್ದಾರೆ. 30 ಸಾವಿರಕ್ಕೂ ಹೆಚ್ಚು ಜನ ಕೊವಿಡ್ ಗೆ ಬಲಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡಬಾರದು. ಸತ್ತ ಮನೆಯಲ್ಲಿ ರಾಜಕಾರಣ ಸಲ್ಲ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಒಳ್ಳೆಯ ಕೆಲಸ ಮಾಡಿ ಎಂದು ಸಲಹೆ ಕೊಟ್ಟಿದ್ದೆ. ಅದನ್ನು ಎಷ್ಟು ಸರಿಯಾಗಿ ಪಾಲಿಸದ್ರೋ ಗೊತ್ತಿಲ್ಲ ಎಂದು ಬಿಜೆಪಿಯಲ್ಲಿನ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದರು.

ನನಗೆ ಜಾತಿ ಇಲ್ಲ. ನಾಡಿನ ಜನತೆ ನನ್ನನ್ನು ಜಾತಿಯಿಂದ ಗುರುತಿಸಿಲ್ಲ. ಆರುವರೆ ಕೋಟಿ ಜನರು ನನ್ನ ಅಣ್ಣ ತಮ್ಮಂದಿರು. ಜಾತಿ ಹೆಸರಿನಿಂದ ಪಕ್ಷ ಕಟ್ಟೋಕೆ ಹೋಗಲಾರೆ ಎಂದು ಹೇಳಿದರು.

ಈ ನಾಡಿನಲ್ಲಿ ಜನ ಸಂಕಷ್ಟದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಐದು ಕಾರ್ಯಕ್ರಮ ಅನುಷ್ಠಾನ ಬಗ್ಗೆ ಚರ್ಚೆ ಮಾಡ್ತಿದ್ದೇನೆ. ಆ ಕಾರ್ಯಕ್ರಮಗಳನ್ನು ತರುವುದಕ್ಕೆ ನಾಡಿನ ಜನತೆ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಬೇಕು ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು. ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯ ಸರಿಪಡಿಸುವುದರ ಸವಾಲು ಸ್ವೀಕರಿಸುತ್ತೇನೆ. ಮುಂದಿನದನ್ನು ಜನರ ತೀರ್ಮಾನಕ್ಕೆ ಬಿಡುತ್ತೇನೆ ಎಂದರು.

error: Content is protected !!