Home Blog Page 3135

ಮಹಾಮಳೆಗೆ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿದ ಪ್ರವಾಹ ಭೀತಿ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

  • ಕೃಷ್ಣಾ, ವೇದಗಂಗಾ, ದೂದಗಂಗಾ ನದಿಯ ಒಳಹರಿವು ಹೆಚ್ಚಳ

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕಾರಣ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.

ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಲ್ಲಿ ಒಳಹರಿವು ಹೆಚ್ಚಳಗೊಂಡಿದ್ದು, ಗುರುವಾರ ಒಂದೇ ದಿನ 8 ಅಡಿಯಷ್ಟು ನೀರು ಏರಿಕೆಯಾಗಿದ್ದು, ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಬುಧವಾರ ಕೃಷ್ಣಾ ನದಿಯ ಒಳಹರಿವು 63 ಸಾವಿರ ಕ್ಯೂಸೆಕ್ ಇದ್ದದ್ದು, ಗುರುವಾರ 77 ಸಾವಿರ ಕ್ಯೂಸೆಕ್‍ಗೆ ಏರಿಕೆಯಾಗಿದೆ.

ನದಿಯಂತಾದ ಹೆದ್ದಾರಿ

ಬೆಳಗಾವಿ ಜಿಲ್ಲೆಯಾದ್ಯಂತ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದೆ.
ಗುರುವಾರ ಬೆಳಗಾವಿಯ ಹೊರವಲಯ ವಂಟಮೂರಿ ಘಾಟ್ ಬಳಿ ರಾಷ್ಟ್ರೀಯ ಹೆದ್ದಾರಿ 4 ಜಲಾವೃತಗೊಂಡು ನದಿಯಂತೆ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನೀರಿನ ರಭಸಕ್ಕೆ ಕಾರೊಂದು ಜಾರಿಹೋದ ಪ್ರಸಂಗ ನಡೆದಿದೆ.

ಕುಸಿದ ಮನೆ

ಖಡೇ ಬಜಾರದಲ್ಲಿ ಹಳೆಯ ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲ. ಇನ್ನು ಮಹಾಂತೇಶ ನಗರದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳು ತೀವ್ರ ಪರದಾಡುವಂತಾಗಿದೆ. ಬಳ್ಳಾರಿ ನಾಲಾ ನೀರು ನುಗ್ಗಿ ಯಳ್ಳೂರು ಗ್ರಾಮದ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ.

ಗ್ರಾಮಗಳ ಸಂಪರ್ಕ ಕಡಿತ

ಖಾನಾಪೂರ ತಾಲೂಕಿನ ಕಣಕುಂಬಿ, ಜಾಂಬೋಟ್ಟಿ, ಲೋಂಡಾ ಮತ್ತು ನೀಲಾವಡೆ ಬ್ರಿಜ್ ಹಾಗೂ ಹೆಬ್ಬಾನಟ್ಟಿ ಬ್ರಿಜ್ ಗಳ ಮೇಲೆ ನೀರು ಬಂದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಖಾನಾಪೂರ ತಾಲೂಕಿನಲ್ಲಿ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ನೀಲಾವಡೆ, ಅಂಬೋಲಿ, ಕಬನಾಳ್ಳಿ ಹೆಬ್ಬಾನಟ್ಟಿ ಗ್ರಾಮಗಳಿಗೂ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಸಿಎಂ ಬಿಎಸ್ ವೈ ಗೆ ವಿಜಯಪುರ ಜಿಲ್ಲೆ ಮಠಾಧೀಶರ ಬೆಂಬಲ

ವಿಜಯಸಾಕ್ಷಿ ಸುದ್ದಿ, ವಿಜಯಪುರ

  • ವಿಜಯಪುರ ಖಾಸಗಿ
    ಹೊಟೇಲ್ ಸಭೆ ನಡೆಸಿದ 20ಕ್ಕೂ ಹೆಚ್ಚು ಮಠಾಧೀಶರು

ಸಿಎಂ ಯಡಿಯೂರಪ್ಪ ಬದಲಾವಣೆ ಹಿನ್ನೆಲೆ ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ 20 ಕ್ಕೂ ಅಧಿಕ ಸ್ವಾಮೀಜಿಗಳು ಸಭೆ ನಡೆಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಬಬಲೇಶ್ವರ ಸ್ವಾಮಿಜಿ, ಮನಗೂಳಿ ಸ್ವಾಮೀಜಿ, ಯೋಗೇಶ್ವರಿ ಮಾತಾಜಿ, ಶಂಕರಾನಂದ ಸ್ವಾಮಿಜಿ, ಶಂಭುಲಿಂಗ ಸ್ವಾಮಿಜಿ, ನಾಗಠಾಣ ಸ್ವಾಮಿಜಿ, ಮಲ್ಲಿಕಾರ್ಜುನ, ಮುತ್ತಗಿ ಸ್ವಾಮಿಜಿ, ತಿಕೋಟಾ ಸ್ವಾಮಿಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗಿಯಾಗಿದ್ದರು.

ಸರ್ಕಾರ ಮುಂದುವರಿಯಬೇಕಿದ್ದರೆ ಸಿಎಂ ಯಡಿ ಯೂರಪ್ಪ ತಮ್ಮ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಮಠಾಧೀಶರು ಆಗ್ರಹಿಸಿದ್ದಾರೆ.

ಹಣ್ಣಿನ ‌ವ್ಯಾಪಾರಿ ಕೊಲೆ ಪ್ರಕರಣ; ರೌಡಿ ಶೀಟರ್ ಪ್ರಕಾಶ್ ಸೇರಿ ಮೂವರು ಕೊಲೆಗಾರರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಭಾನುವಾರ ರಾತ್ರಿ ರೌಡಿ ಶೀಟರ್ ಮುತ್ತು ಅಲಿಯಾಸ್ ಗೋವಿಂದಪ್ಪ ಯಲ್ಲಪ್ಪ ಚಲವಾದಿಯ ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು, ರೌಡಿ ಶೀಟರ್ ಪ್ರಕಾಶ್ ಕೋರಿಶೆಟ್ಟರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಅಮೀರಸೋಹೈಲ್ ನದಾಫ್, ಪ್ರವೀಣ್ ಸಕ್ರಿ ಬಂಧಿತ ಇನ್ನಿಬ್ಬರು ಆರೋಪಿಗಳು.

ಇಂದು ಎಸ್ಪಿ ಕಚೇರಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್, ಕೊಲೆ ನಂತರ ಆರೋಪಿಗಳ ಬಂಧನಕ್ಕೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರಿಗೆ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಲಾಗಿತ್ತು.

ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರು, ಶಹರ ಠಾಣೆ ಇನ್ಸ್‌ಪೆಕ್ಟರ್ ಪಿ ವಿ ಸಾಲಿಮಠ, ಬೆಟಗೇರಿ ಸಿಪಿಐ ಬಿ ಜಿ ಸುಬ್ಬಾಪೂರಮಠ, ಶಹರ ಠಾಣೆಯ ಪಿಎಸ್ಐ ಗಿರಿಜಾ ಜಕ್ಕಲಿ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡು ಮೂರು ತಂಡಗಳು ಆರೋಪಿಗಳ ಹೆಡಮುರಿ ಕಟ್ಟಿ ಕೊಲೆಯ ಬಗ್ಗೆ ಬಾಯಿ ಬಿಡಿಸಿದ್ದಾರೆ.

ಸಂಶಯಾಸ್ಪದವಾಗಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಸಿಮೆಂಟ್ ವ್ಯಾಪಾರಿ, ರೌಡಿ ಶೀಟರ್, ಬಯಲು ಆಂಜನೇಯ ದೇವಸ್ಥಾನದ ಬಳಿ ನಿವಾಸಿ ಪ್ರಕಾಶ್ @ ಫಕ್ಕೀರೇಶ್ @220 ಫಕ್ಕ್ಯಾ ತಂದೆ ಬಸವರಾಜ್ ಕೋರಿಶೆಟ್ಟರ್, ವಿವೇಕಾನಂದ ನಗರದ ಪ್ರವೀಣ್ @ ಪವನ್ ಯಮನಪ್ಪ ಸಕ್ರಿ, ಇನ್ಬೊಬ್ಬ ಹೊಟೇಲ್ ವೊಂದರಲ್ಲಿ ಸಪ್ಲಾಯರ್ ಆಗಿದ್ದ ಕಮ್ಮಾರ ಸಾಲಿನ ಅಮೀರಸೋಹೈಲ್ ಸುಭಾನಸಾಬ್ ನದಾಫ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕೊಲೆಗೆ ಬಳಸಿದ ಎರಡು ಚಾಕು ಹಾಗೂ ಡಿಯೋ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.

ಕೊಟ್ಟ ಹಣ ಕೇಳಿದಾಗ ಮುತ್ತು ಚಲವಾದಿ ಸತಾಯಿಸಿದ್ದಲ್ಲದೇ ನಿನ್ನನ್ನೇ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಕ್ಕೆ ಪ್ರಕಾಶ್ ಕೋರಿಶೆಟ್ಟರ್ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನೊಬ್ಬ ಆರೋಪಿ ಪ್ರವೀಣ್ ಸಕ್ರಿಗೆ ಪದೇ ಪದೇ ಜೀವ ಬೆದರಿಕೆ ಹಾಕುತ್ತಿದ್ದ ಆ ಕಾರಣಕ್ಕಾಗಿ ನಾನು ಕೊಲೆ ಮಾಡಿದ್ದೇನೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಯತೀಶ್ ಎನ್ ಮಾಹಿತಿ ನೀಡಿ ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದರು.

ಅಮೀರಸೋಹೈಲ್ ನದಾಫ್ ಎಂಬಾತ ಇಬ್ಬರು ಆರೋಪಿಗಳೊಂದಿಗೆ ಸಹಾಯ ಮಾಡಿದ್ದಾನೆ ಎನ್ನಲಾಗಿದೆ.

ಕೊಲೆಯ ನಂತರ ಹುಲಕೋಟಿ ಬಳಿಯ ಟೆಕ್ಸ್ ಟೈಲ್ ಮಿಲ್ ಬಳಿ‌ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಇನ್ಸ್‌ಪೆಕ್ಟರ್ ಸಾಲಿಮಠ ಬಂಧಿಸಿದ್ದಾರೆ.

ಕೊಲೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿದ್ದಕ್ಕಾಗಿ ಬೆಳಗಾವಿ ಉತ್ತರ ವಲಯದ ಐಜಿಪಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹಳೇ ತಪ್ಪನ್ನೇ ಬಿಜೆಪಿ ಮಾಡಲು ಹೊರಟಿದೆ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಯಡಿಯೂರಪ್ಪ ಇಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿ ಈ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಯಾಕೆ ಮಾಡಲು ಹೊರಟಿದೆ? ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಸಿಎಂ ಯಡಿಯೂರಪ್ಪ ಬದಲಾವಣೆಗೆ ರಾಜ್ಯದ ಮಠಾಧೀಶರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿಯ ಹಿರಿಯ ನಾಯಕ ಅವರ ಪರ ಬ್ಯಾಟ್ ಬೀಸಿರಿವುದು ಬಿಎಸ್ ವೈ ಗೆ ಆನೆ ಬಲ ಬಂದಂತಾಗಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರೇ ಯಡಿಯೂರಪ್ಪ. ಅವರು ಬೇರೆ ನಾಯಕರಿಗೆ ಚಮಚಾ ಆಗದೇ ಕಾರ್ಯನಿರ್ವಹಿಸುತ್ತಿರುವುದರಿಂದ ಸಿಎಂ ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರ್ಯವನ್ನು ಕೆಲವರು ನಡೆಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಮನೆ ಕಡೆ ಬರಬೇಡ ಅಂತ ತಾಕೀತು ಮಾಡಿದವನ ಕೊಲೆಗೆ ಯತ್ನ

ವಿಜಯಸಾಕ್ಷಿ ಸುದ್ದಿ, ಗದಗ

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನಿಗೆ ಮತ್ತೆ ಮನೆ ಕಡೆ ಬರಬೇಡ ಎಂದು ತಾಕೀತು ಮಾಡಿದ ವ್ಯಕ್ತಿಗೆ ಕಂದ್ಲಿಯಿಂದ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ಮುಂಡರಗಿ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದ ಮೈಲಾರಪ್ಪನ ಪತ್ನಿ ಹಾಗೂ ಅದೇ ಗ್ರಾಮದ ಗಾಳೆಪ್ಪ ಕಟಗಿ ನಡುವೆ ಅನೈತಿಕ ಸಂಬಂಧ ಇತ್ತು. ಎಷ್ಟೋ ಸಲ ಇಬ್ಬರಿಗೂ ಬುದ್ದಿ ಮಾತು ಹೇಳಿದರೂ ಕೇಳಿರಲಿಲ್ಲ.

ಇತ್ತೀಚೆಗೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಇದರಿಂದಾಗಿ ಕೆರಳಿದ ಮೈಲಾರಪ್ಪ ಪತ್ನಿಗೆ ಥಳಿಸಿ ಗಾಳೆಪ್ಪನಿಗೆ ಮತ್ತೊಮ್ಮೆ ತನ್ನ ಮನೆಯ ಕಡೆಗೆ ಬಾರದಂತೆ ತಾಕೀತು ಮಾಡಿದ್ದ. ಇದರಿಂದ ಕೋಪಗೊಂಡ ಗಾಳೆಪ್ಪ, ಮೈಲಾರಪ್ಪ ತನ್ನ ಮನೆಯಲ್ಲಿ ಮಲಗಿದ್ದಾಗ ಕಂದ್ಲಿಯಿಂದ ಕುತ್ತಿಗೆ ಹಾಗೂ ತಲೆಗೆ ಚುಚ್ಚಿ
ಮಾರಣಾಂತಿಕ ಹಲ್ಲೆ ನಡೆಸಿದ ಪರಾರಿಯಾಗಿದ್ದ.

ಗಾಯಗೊಂಡ ಮೈಲಾರಪ್ಪನನ್ನು ಮನೆಯವರು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಯನ್ನು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊಡಸಿದ್ದರು.

ಈ ಕುರಿತು ಮೈಲಾರಪ್ಪನ ಸಹೋದರನ ಮಗ ಸರೆಪ್ಪ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಟ ದರ್ಶನ ನೋಡಲು ನೂಕು ನುಗ್ಗಲು; ಮೂರು ದಿನಗಳಿಂದ ಹಾವೇರಿಯಲ್ಲಿದ್ದ ದರ್ಶನ

ವಿಜಯಸಾಕ್ಷಿ ಸುದ್ದಿ, ಹಾವೇರಿ

ಜಿಲ್ಲೆಯ ಬ್ಯಾಡಗಿಯಲ್ಲಿ ಮಾಜಿ ಶಾಸಕ ಸುರೇಶಗೌಡರಿಗೆ ಸೇರಿದ ಅತಿಥಿಗೃಹದಲ್ಲಿ ಮೂರು ದಿನಗಳಿಂದ ವಾಸ್ತವ್ಯ ಹೂಡಿದ್ದ ದರ್ಶನ್ ತೂಗುದೀಪ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಪ್ರಸಂಗ ನಡೆದಿದೆ.

ಸೋಮವಾರ ರಾತ್ರಿಯಿಂದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಈ ಸುದ್ದಿ ತಿಳಿದು ಇಂದು ಬೆಳಗ್ಗೆ ಸಾವಿರಾರು ಅಭಿಮಾನಿಗಳು ಸೇರಿದ್ದರಿಂದ ಅತಿಥಿ ಗೃಹದಿಂದ
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಕಾರು ಹತ್ತಿ ದರ್ಶನ ಹೊರಟಿದ್ದಾರೆ. ಅತಿಥಿ ಗೃಹದಿಂದ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮನೆಗೆ ಉಪಹಾರಕ್ಕೆ ತೆರಳಿದರು.

ನಟ ದರ್ಶನ ನಿರ್ಗಮನದ ನಂತರ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಎರಡು ದಿನಗಳ ಕಾಲ ವಿಶ್ರಾಂತಿಗಾಗಿ ಅತಿಥಿ ಗೃಹಕ್ಕೆ ಬಂದಿದ್ದರು. ವಿಶ್ರಾಂತಿ ಮುಗಿಸಿ ಮನೆಗೆ ಬಂದು ಉಪಹಾರ ಮುಗಿಸಿ ಹೋದರು. ಮೈಸೂರು, ಬೆಂಗಳೂರು ಭಾಗದಲ್ಲಿ ಗಲಾಟೆ ಆಗುತ್ತದೆ ಅಂದುಕೊಂಡು ಇಲ್ಲಿಗೆ ಬಂದಿದ್ದರು. ವಾಸ್ತವ್ಯ ಯಾರಿಗೆ ಗೊತ್ತಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದರು ಎಂದು ಪ್ರತಿಕ್ರಿಯಿಸಿದರು.

ಬೀದರ್ ಪೊಲೀಸರ ಭರ್ಜರಿ ಬೇಟೆ; 1.58 ಕ್ವಿಂಟಾಲ್ ಗಾಂಜಾ ವಶ

ವಿಜಯಸಾಕ್ಷಿ ಸುದ್ದಿ, ಬೀದರ್

ಬೀದರ್ ನಗರದ ಮಾರ್ಕೆಟ್
ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಮನೆಯೊಂದರ ಮೇಲೆ ದಾಳಿ‌ ನಡೆಸಿ 3,17,709 ಲಕ್ಷ ರೂ. ಮೌಲ್ಯದ 1.58 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೀದರ್ ನಗರದ ಕಾನನ ಕಾಲೋನಿ ಮನೆಯೊಂದರಲ್ಲಿ ಭಾರಿ ಪ್ರಮಾಣದಲ್ಲಿ ಗಾಂಜಾ ಸಂಗ್ರಹಿಸಿದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಗಾಂಜಾ ಸಂಗ್ರಹಿಸಿಟ್ಟಿದ್ದ ಆರೋಪಿ ಮಹ್ಮದ್ ಆರೀಫ್ ಎಂಬಾತನನ್ನು ಬಂಧಿಸಿದ್ದು, ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಕ್ಕದ ತೆಲಂಗಾಣ ರಾಜ್ಯದಿಂದ ಗಾಂಜಾ ತಂದು ಸ್ಟಾಕ್ ಮಾಡಿರುವ ಶಂಕೆಯಿದೆ ಎಂದರು.
3,17,709 ಲಕ್ಷ ರೂ. ಮೌಲ್ಯದ
1.58 ಕ್ವಿಂಟಾಲ್ ಗಾಂಜಾ ಹಾಗೂ ಸಾಗಾಟಕ್ಕೆ ಬಳಸುವ ಸ್ಕಾರ್ಪಿಯೋ ವಾಹನ, ಫೋರ್ಡ್ ಕಂಪನಿ ಕಾರು ಮತ್ತು ಆಟೋ ವಾಹನ‌ ಜಪ್ತಿ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳಾದ ಹೆಚ್ಚುವರಿ ಎಸ್ಪಿ ಗೋಪಲ ಕೃಷ್ಣ, ಡಿಎಸ್ಪಿ ಕೆ.ಎಂ ಸತೀಶ್ ಸಿಪಿಐ ಶ್ರಿಕಾಂತ ಅಲ್ಲಾಪೂರೆ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರುಣ ಕ್ಷೇತ್ರದಲ್ಲಿ ಕೊರೊನಾಗೆ 120ಕ್ಕೂ ಹೆಚ್ಚು ಜನ ಬಲಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೊರೊನಾ ಮಹಾಮಾರಿಗೆ ವರುಣ ಕ್ಷೇತ್ರದಲ್ಲಿ 120ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಸಹಾಯಹಸ್ತ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಗ್ರಾ.ಪಂ ಮಟ್ಟದಿಂದಲೂ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸದ್ಯದ ಮಾಹಿತಿ ಪ್ರಕಾರ ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ 120ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ ಎಂದು ಹೇಳಿದರು.

ವರುಣ ಕ್ಷೇತ್ರ‌ದಲ್ಲಿ ಮೈಸೂರು, ಟಿ. ನರಸೀಪುರ, ನಂಜನಗೂಡು ತಾಲೂಕುಗಳು ಒಳಗೊಂಡಿದ್ದು,ಶಾಸಕ ಯತೀಂದ್ರ ಅವರು, ಕೊರೊನಾಗೆ ಬಲಿಯಾದ ಪ್ರತಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದಾರೆ.

ಬೆಳ್ಳಂಬೆಳಗ್ಗೆ ವ್ಯಕ್ತಿಯ ಬರ್ಬರ ಹತ್ಯೆ; ಮಚ್ಚಿನಿಂದ ತಲೆಗೆ ಹೊಡೆದು ದುಷ್ಕರ್ಮಿಗಳು ಪರಾರಿ

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಮಚ್ಚಿನಿಂದ ತಲೆಗೆ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಕಾಸಿಂಸಾಬ್ ತಂದೆ ಚಾಂದಸಾಬ್ ಚೌದ್ರಿ ( 50 ) ಕೊಲೆಯಾದ ವ್ಯಕ್ತಿ.

ಕಾಸಿಂಸಾಬ್ ಗ್ರಾಮದಲ್ಲಿ ಚಿಕನ್ ಸೆಂಟರ್ ಹಾಗೂ ಮಜೀದ್ ಲ್ಲಿ ಅಕೌಟೆಂಟ್ ಆಗಿ
ಕಾರ್ಯನಿರ್ವಹಿಸುತ್ತಿದ್ದ. ಇಂದು ಬೆಳಗಿನ ಜಾವ 4 ಗಂಟೆಯ ಸುಮಾರು ಕಾಸಿಂಸಾಬ್ ನನ್ನು ಮನೆಯ ಹತ್ತಿರವೇ ದುಷ್ಕರ್ಮಿಗಳು
ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಹತ್ಯೆಗೆ ‌ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಗಿ ಠಾಣೆ ಕ್ರೈಂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೋಮಲಿಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದರು.
ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ್ಣಿನ ವ್ಯಾಪಾರಿಯ ಕೊಲೆ ಆರೋಪಿ 220-ಪಕ್ಕು ಅಲಿಯಾಸ್ ಪ್ರಕಾಶ್, ಸಹಚರರು ಪೊಲೀಸರ ವಶಕ್ಕೆ?

ವಿಜಯಸಾಕ್ಷಿ ಸುದ್ದಿ, ಗದಗ

ಭಾನುವಾರ ರಾತ್ರಿ ರೌಡಿ ಶೀಟರ್ ಮುತ್ತು ಅಲಿಯಾಸ್ ‌ಗೋವಿಂದಪ್ಪ ಚಲವಾದಿಯ ಬರ್ಬರ್ ಹತ್ಯೆಗೆ ಆತನ ಸ್ನೇಹಿತ, ರೌಡಿ ಶೀಟರ್ ಹಾಗೂ ಆತನ ಸಹಚರರನ್ನು ಪೊಲೀಸರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರ ರಾತ್ರಿ ಮನೆಯಿಂದ ಕರೆದುಕೊಂಡು ಬಂದ 220- ಪಕ್ಕು ಅಂತಾನೇ ಕರೆಸಿಕೊಳ್ಳುತ್ತಿದ್ದ ಪ್ರಕಾಶ್ ಕೋರಿಶೆಟ್ಟರ್ ಹಾಗೂ ಆತನ ಸಹಚರರು ಕಾರಣ ಎಂದು ಕೊಲೆಗೀಡಾದ ಮುತ್ತು ಚಲವಾದಿಯ ಕುಟುಂಬಸ್ಥರು ದೂರು ನೀಡಿದ್ದಾರೆ.

ಪ್ರಕಾಶ್ ಕೋರಿಶೆಟ್ಟರ್ ಮೀಟರ್ ಬಡ್ಡಿ ದಂದೆ ನಡೆಸುತ್ತಿದ್ದ ಎನ್ನಲಾಗಿದ್ದು, ವಾರದ ಬಡ್ಡಿಗೆ ಹಣ ಕೊಡುತ್ತಿದ್ದ. ಸಾವಿರಕ್ಕೆ ನೂರು ರೂಪಾಯಿ ಬಡ್ಡಿಯಂತೆ ಹಣ್ಣಿನ ವ್ಯಾಪಾರಿಗಳು, ಹೂ ಮಾರಾಟಗಾರರು ಪ್ರಕಾಶ್ ಕೋರಿಶೆಟ್ಟರ್ ಬಳಿ ಹಣ ಪಡೆಯುತ್ತಿದ್ದರು.

ತಿಂಗಳಿಗೆ 100 ಕ್ಕೆ 5ರೂ, 8ರೂ. ಹಾಗೂ 10 ರಂತೆಯೂ ಹಣ ಕೊಡುತ್ತಿದ್ದ ಪ್ರಕಾಶ್ ಕೋರಿಶೆಟ್ಟರ್, ಮುಖ‌ ನೋಡಿ ಬಡ್ಡಿ ದರ ಫಿಕ್ಸ್ ಮಾಡುತ್ತಿದ್ದ ಎನ್ನಲಾಗಿದೆ. ಹೊಸಗಿರಾಕಿಗಳಿಗೆ 12ರೂಪಾಯಿನಂತೆಯೂ ಹಣ ಕೊಡುತ್ತಿದ್ದನಂತೆ.

ಇದನ್ನೂ ಓದಿ ಬಡ್ಡಿ ವ್ಯವಹಾರ ಕಲಿಸಿದಾತಗೇ ಮುಹೂರ್ತವಿಟ್ಟ ರೌಡಿ ಶೀಟರ್! ಗುರುವಿಗೇ ಗುನ್ನ!

ಇದೇ ರೀತಿ ಮುತ್ತು ಚಲವಾದಿಗೂ 20 ಸಾವಿರ ಹಣ ಕೊಟ್ಟಿದ್ದ ಎಂದು ಪೋಷಕರು ಹೇಳುತ್ತಿದ್ದಾರೆ. ಇದೇ‌ ಹಣ ಕೊಡಲು ತಡವಾಗಿದ್ದಕ್ಕೆ ಆಗಾಗ ಜಗಳ ಮಾಡುತ್ತಿದ್ದನಂತೆ. ಕೊನೆಗೂ ಕೊಲೆ ಮಾಡುವ ಉದ್ದೇಶದಿಂದ ಭಾನುವಾರ ರಾತ್ರಿ ಕರೆತಂದು ತನ್ನ ಕೆಲ ಸಹಚರರೊಂದಿಗೆ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತಿತ್ತು?

ಕೊಲೆಗೀಡಾದ‌ ಮುತ್ತು ಚಲವಾದಿಯ ಪೋಷಕರು ಹೇಳಿದಂತೆ ಕೊಲೆ ಆರೋಪಿ ಪ್ರಕಾಶ್ ಕೋರಿಶೆಟ್ಟರ್ ಬಳಿ ಅಷ್ಟೊಂದು ಹಣ ಎಲ್ಲಿಂದ ಬರುತ್ತಿತ್ತು. ಆತ ಲಕ್ಷ ಲಕ್ಷ ಹಣ ಅದ್ಹೇಗೆ ಬಡ್ಡಿಗೆ ಬಿಡುತ್ತಿದ್ದ ಎಂಬ ಸಂಶಯ ಆತನ ಕುಟುಂಬದ ಹಿನ್ನೆಲೆ ಬಲ್ಲವರದು.

ಹುಬ್ಬಳ್ಳಿಯಿಂದ ಹಣ ಬರ್ತಾ ಇತ್ತಾ?

ಪ್ರಕಾಶ್ ಕೋರಿಶೆಟ್ಟರ್ ಅಷ್ಟೇನೂ ಸ್ಥಿತಿವಂತನಲ್ಲ. ಆದರೆ ಆತ ಬೆಳೆದಿದ್ದು ಮಾತ್ರ ರೌಡಿ ಶೀಟರ್ಸ್ ಬಳಿ. ಹೀಗಾಗಿಯೇ ಆತ ಪುಂಡ ಪೋಕರಿಯಂತೆ ತಿರುಗುತ್ತಿದ್ದ. ಆತ ಯಾರ ಜೊತೆಗಾದರೂ ಕಿರಿಕ್ ಮಾಡಿಕೊಂಡು ಪ್ರಕಾಶ್ ನ ಆ ರೌಡಿ ಶೀಟರ್ಸ್ ಕುಟುಂಬ ಬೆಂಗಾವಲು ಇತ್ತು. ಆ ಕುಟುಂಬದವರ ಸಂಪರ್ಕದಿಂದಲೇ ಹುಬ್ಬಳ್ಳಿಯ ಕೆಲ ರೌಡಿ ಶೀಟರ್ಸ್ ಪರಿಚಯ ಮಾಡಿಕೊಂಡಿದ್ದ ಪ್ರಕಾಶ್ ಬರು ಬರುತ್ತಾ ಅವರಿಂದಲೇ ಹಣ ಪಡೆದು ಬಡ್ಡಿ ವ್ಯವಹಾರಕ್ಕೆ ಇಳಿದ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.

ಪೊಲೀಸರ ತನಿಖೆಯ ಕುರಿತು…

ಈ ಕೊಲೆ ಪ್ರಕರಣವನ್ನು ಪೊಲೀಸರು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ. ಕೊಲೆ ಆರೋಪ ಹೊತ್ತ ಪ್ರಕಾಶ್ ಕೋರಿಶೆಟ್ಟರ್, ಕೊಲೆಯ ನಂತರ ಯಾರಿಗೆ ಪೋನ್ ಮಾಡಿದ, ಅದಕ್ಕೂ ಮೊದಲು ಆತ ಯಾರನ್ನು ಸಂಪರ್ಕ ಮಾಡಿದ್ದ, ಮೀಟರ್ ಬಡ್ಡಿಗೆ ಹಣ ಕೊಡುತ್ತಿದ್ದ ಹುಬ್ಬಳ್ಳಿಯ ಮೂಲದವರು ಯಾರು? ಗದಗನಲ್ಲಿ ಪ್ರಕಾಶ್ ನ ಬೆಳೆಸಿದವರು ಯಾರು? ಕೊಲೆಗೆ ಸಾಥ್ ಕೊಟ್ಟವರು ಯಾರು? ಕೊಲೆ ಮಾಡಿದ ಪ್ರಕಾಶ್ ಹಾಗೂ ಆತನ ಸಹಚರರು ಎಷ್ಟು ಜನ ಇದ್ರು? ಎಂಬ ಇತ್ಯಾದಿ ಪ್ರಶ್ನೆಗಳನ್ನು ಮಾಡುತ್ತಿದ್ದು, ತನಿಖೆಯ ನಂತರ ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.

ಒಬ್ಬ ರೌಡಿ ಶೀಟರ್, ಮತ್ತೊಬ್ಬ ರೌಡಿ ಶೀಟರ್ ನ ಕೊಲೆ ಮಾಡುವ ಮಟ್ಟಿಗೆ ಈ ಮೀಟರ್ ಬಡ್ಡಿ ಮಾಫಿಯಾ ಗದಗನಲ್ಲಿ ಬೆಳೆದು‌ ನಿಂತಿದೆ. ಇದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಒಟ್ನನಲ್ಲಿ ಇನ್ನು ಮುಂದಾದರೂ ಪೊಲೀಸರು ಮೀಟರ್ ಬಡ್ಡಿ ಮಾಫಿಯಾಗೆ ಕಡಿವಾಣ ಹಾಕಬೇಕು. ಜೊತೆಗೆ ರೌಡಿ ಶೀಟರ್ಸ್ ಬಾಲ ಬಿಚ್ಚದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಅನ್ನೋದು ಸಾರ್ವಜನಿಕರು ಒತ್ತಾಯ.

error: Content is protected !!