Home Blog Page 3136

ಬಂಧನ ಭೀತಿ; ನಗರಸಭೆ ಆಯುಕ್ತ ರಮೇಶ್ ಜಾಧವ್ ನಾಪತ್ತೆ! ಪ್ರಭಾರ ಹುದ್ದೆಗೆ ರಮೇಶ್ ವಟಗಲ್ಲ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ

ಘನತ್ಯಾಜ್ಯ ವಿಲೇವಾರಿ ಘಟಕದ ಮಣ್ಣು ಸಾಗಾಟ ಮಾಡಿದ ಬಿಲ್ ಮಾಡಿಕೊಡಲು ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ನಾಪತ್ತೆಯಾಗಿದ್ದಾರೆ. ಸೋಮವಾರ ಮುಂಜಾನೆ ನಗರಸಭೆ ಕಛೇರಿಗೆ ಬಂದ ಅರ್ಧಗಂಟೆಯಲ್ಲಿಯೇ ವಾಪಾಸು ಹೋದವರು ಮಂಗಳವಾರ ಸಂಜೆಯವರೆಗೂ ಸುಳಿದಿಲ್ಲವಂತೆ.

ಇದನ್ನೂ ಓದಿ ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ; ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಇಇ ಬಂಧನ

ಬಹುತೇಕ ಎಸಿಬಿ ಪ್ರಕರಣದಲ್ಲಿ ಮೂರನೇ ಆರೋಪಿ ಆಗಿರುವ ರಮೇಶ್ ಜಾಧವ್ ಅವರನ್ನು ಸತತ ಎರಡು ದಿನಗಳ ಕಾಲ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಕಳೆದ ಬುಧವಾರ ಸಂಜೆ 25 ಸಾವಿರ ಲಂಚ ಪಡೆಯುತ್ತಿದ್ದಾಗ ಎಇಇ ವರ್ಧಮಾನ್ ಹುದ್ದಾರ್ ಅವರನ್ನು ಬಂಧಿಸಲಾಗಿತ್ತು. ಮರುದಿನ ರಾತ್ರಿ‌ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಅನಿಲಕುಮಾರ್ ಮುದ್ದಾ  ಅವರನ್ನು 10 ಸಾವಿರ ರೂ. ಲಂಚ ಪಡೆದ ಆರೋಪದಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ ಲಂಚ ಸ್ವೀಕಾರ ಪ್ರಕರಣ, ಅನಿಲ್ ಮುದ್ದಾ ಅಂದರ್; ಎಸಿಬಿಯಿಂದ ಮುಂದುವರೆದ ರಮೇಶ್ ಜಾಧವ್ ವಿಚಾರಣೆ

ಮೂರನೇ ಆರೋಪಿ ಆಗಿರುವ ರಮೇಶ್ ಜಾಧವ್ ಅವರು 1.50 ರೂ. ಲಕ್ಷ ಹಣ ಕೇಳಿದ ಆರೋಪ ಇದೆ. ಈ ಆರೋಪದ ಹಿನ್ನೆಲೆಯಲ್ಲಿ ದ್ವನಿ ಹಾಗೂ ಚಿತ್ರಣದ ಖಚಿತತೆ ಕುರಿತು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ ಅದರ ವರದಿ ಇನ್ನೂ ಬಂದಿಲ್ಲ. ಇದರ ಮಧ್ಯೆ ರಮೇಶ್ ಜಾಧವ್ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಇನ್ನೂ ಜಾಮೀನು ‌ಸಿಕ್ಕಿಲ್ಲ ಎನ್ನಲಾಗಿದೆ.

ಹೀಗಾಗಿಯೇ ರಮೇಶ್ ಜಾಧವ್ ಅವರು ನಾಪತ್ತೆಯಾಗಿದ್ದರೆ ಎಂದು ಹೇಳಲಾಗುತ್ತದೆ.
ನಗರಸಭೆ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದಕ್ಕೆ ಡಿಸಿ ಸುಂದರೇಶ್ ಬಾಬು ಅವರು ಮತ್ತೊಬ್ಬ ಅಧಿಕಾರಿಗೆ ನಗರಸಭೆಗೆ ಪ್ರಭಾರ ಆಯುಕ್ತರನ್ನು ನೇಮಿಸಿ‌ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ರಮೇಶ್ ವಟಗಲ್ಲ ಅವರಿಗೆ ನಗರಸಭೆಯ ಪ್ರಭಾರ ಹುದ್ದೆಗೆ ‌ನೇಮಿಸಿ ಸಂಜೆ ಆದೇಶ ಹೊರಡಿಸಲಾಗಿದೆ. ರಮೇಶ್ ಜಾಧವ್ ಅವರು ಅನಧಿಕೃತವಾಗಿ ಗೈರು ಹಾಜರಾಗಿದ್ದರಿಂದ ನಗರಸಭೆಯ ದೈನಂದಿನ ಚಟುವಟಿಕೆಗೆ ತೊಂದರೆ ಆಗಿದ್ದನ್ನು ಮನಗಂಡು ಈ ಆದೇಶ ಮಾಡಲಾಗಿದೆ.

ಸಿಎಂ ಬದಲಾಣೆ ಪ್ರಶ್ನೆಯೇ ಇಲ್ಲ; ಶಾಸಕ ಹಾಲಪ್ಪ ಆಚಾರ್

ವಿಜಯಸಾಕ್ಷಿ ಸುದ್ದಿ, ವಿಜಯನಗರ

ಸಿಎಂ ಬದಲಾವಣೆ ಅನ್ನೋದು ಈ ಹೊತ್ತಿನ ದೊಡ್ಡ ಸುದ್ದಿ ಅಷ್ಟೇ. ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೇಳಿದ್ದಾರೆ.

ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷ, ಜತೆಗೆ ಶಿಸ್ತಿನ ಪಕ್ಷ. ಇದಕ್ಕೆ ಈಚೆಗೆ ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಮ್ಮ ಕಣ್ಮಂದೆ ಇದೆ. ಬದಲಾವಣೆ ಆಗೋದಿದ್ದರೆ ಪಕ್ಷದ ನಾಯಕರು ಅದನ್ನೆಲ್ಲ ತೀರ್ಮಾನ ಮಾಡುತ್ತಾರೆ. ನನ್ನ ಪ್ರಕಾರ ಸದ್ಯಕ್ಕೆ ಯಾವುದೇ ರೀತಿಯ ಬದಲಾವಣೆ ಇಲ್ಲ.

ಬದಲಾವಣೆ ಬಗ್ಗೆ ರಾಷ್ಟ್ರೀಯ ನಾಯಕರೂ ಹೇಳಿಲ್ಲ, ಯಾರೂ ಕೂಡ ಹೇಳಿಲ್ಲ. ಆದರೂ ಚರ್ಚೆ ಆಗುತ್ತಿದೆ. ಇದು ಸುದ್ದಿ ಅಷ್ಟೆ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ಎರಡು ವರ್ಷ ಅವಧಿ ಪೂರೈಸಿದ್ದೇವೆ. ಇನ್ನೂ ಎರಡು ವರ್ಷ ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಸಿಎಂ ಬದಲಾವಣೆ: ಪಕ್ಷದೊಳಗೆ ಚರ್ಚೆಯೇ ಆಗಿಲ್ಲ; ರಾಜೂಗೌಡ

ವಿಜಯಸಾಕ್ಷಿ ಸುದ್ದಿ, ವಿಜಯನಗರ

ಸಿಎಂ ಯಡಿಯೂರಪ್ಪ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಮಾತ್ರ ಚರ್ಚೆ ಆಗುತ್ತಿದೆ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸುರಪುರ ಶಾಸಕ ರಾಜೂಗೌಡ ಪ್ರತಿಕ್ರಿಯಿಸಿದ್ದಾರೆ.

ಹೊಸಪೇಟೆಯಲ್ಲಿ ಮಾತನಾಡಿದ ಅವರು, ನಮ್ಮದು ದೊಡ್ಡ ಪಕ್ಷ, ಸಿಎಂ ಬದಲಾವಣೆ ವಿಚಾರವಾಗಿ ನಮ್ಮ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಜುಲೈ 26ಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಲಿದೆ. ಹೀಗಾಗಿ ಸಿಎಂ
ಅದರ ಹಿಂದಿನ ದಿನ ಔತಣಕೂಡ ಕರೆದಿದ್ದಾರೆ, ಅದನ್ನೇ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ ಅಷ್ಟೆ. ಹೈಕಮಾಂಡ್ ರಾಜೀನಾಮೆ ಕೊಡು ಅಂದ್ರೆ ಕೊಡ್ತಿನಿ ಎಂದು
ಸಿಎಂ ಯಡಿಯೂರಪ್ಪ ಅವರೇ ಹೇಳಿದ್ದಾರೆ.

ಕೆಲ ನಮ್ಮ ಶಾಸಕರ ಗೊಂದಲದ ಹೇಳಿಕೆಗಳಿಂದ ಈ ರೀತಿಯಲ್ಲಿ ಸೃಷ್ಟಿಯಾಗಿದೆ. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೆ ಸಿಎಂ ಆಗಿರ್ತಾರೆ ಎಂದರು.

ಸಿಎಂ ಯಡಿಯೂರಪ್ಪ ಅವರಿಗೆ ಪಕ್ಷಾತೀತವಾಗಿ ಬೆಂಬಲ ಇದೆ. ಕಾಂಗ್ರೆಸ್ ನ ಶಾಮನೂರು ಶಿವ ಶಂಕ್ರಪ್ಪ, ಎಂ.ಬಿ. ಪಾಟೀಲ್ ಅವರೂ ಬೆಂಬಲ ನೀಡಿದ್ದಾರೆ. ಅವರ ನಿರ್ಧಾರ ನಾವು ಸ್ವಾಗತಿಸುತ್ತೇವೆ ಎಂದರು.

ವಲಸೆ ಬಂದ ಶಾಸಕರು ಅವರ ವೈಯಕ್ತಿಕ ವಿಚಾರಕ್ಕೆ ಸಭೆ ಮಾಡಿರಬಹುದು.
ಯಡಿಯೂರಪ್ಪ ಅವರನ್ನೇ ನಂಬಿ ಬಂದಿದ್ದಾರೆ. ಊಹಾಪೋಹದ ಬಗ್ಗೆ ಚರ್ಚೆ ನಡೆಸಿರಬಹುದು. ಯಾಕೆ ಸಭೆ ಮಾಡಿದ್ದಾರೋ ಗೊತ್ತಿಲ್ಲ. ನಮಗೂ ಮಾಹಿತಿ ಇಲ್ಲ. ಆದರೆ ನಮ್ಮದು ಬಹಳ ಗಟ್ಟಿ ಹೈಕಮಾಂಡ್ ಇದೆ ಎಲ್ಲವನ್ನೂ ಅವರೇ ನಿರ್ಧರ ಮಾಡುತ್ತಾರೆ ಎಂದು ಹೇಳಿದರು.

ದೆಹಲಿಗೆ ಹೋದ್ರೆ ನಾಯಕತ್ವ ಬದಲಾವಣೆ ಆಗುತ್ತದೆ ಅನ್ನೋದಾದ್ರೆ ದಿನಾ 100 ಜನ ಹೋಗ್ತಾರೆ. ಅವರ ವೈಯಕ್ತಿಕ ಕೆಲಸ ಇರ್ತದೆ, ಇಲಾಖೆ ಕೆಲಸ ಇರ್ತದೆ.
ಕೆಲವರದು ಡೆಲ್ಲಿಗೋಗುದು ಒಂದು ಟ್ರಂಡ್ ಆಗಿದೆ. ಅಟ್ ಲೀಸ್ಟ್ ನಾವು ಮಾಧ್ಯಮದಲ್ಲಿ ಬರ್ತಿವಿ ಅನ್ನೋ ಆಸೆಯಿಂದಾದ್ರೂ ಡೆಲ್ಲಿಗೆ ಹೋಗ್ತಾರೆ. ದೆಹಲಿಗೆ ಹೋಗೋದು ವಿಶೇಷ ಏನೂ ಅಲ್ಲಾ, ಇಲ್ಲಿದ್ದು ಯಾರೇ ಕೆಲಸ ಮಾಡಿದ್ರೂ ಅದು ತೋರ್ಸಲ್ಲಾ, ಡೇಲ್ಲಿಗೆ ಹೋದ್ರೆ ಮಾತ್ರ ತೋರಿಸ್ತಾರೆ ಎಂದು ಪ್ರತಿಕ್ರಿಯಿದರು.

ವಾಮಾಚಾರ ಮಾಡಿಟ್ಟ ವಸ್ತು ಕಂಡ ಯುವಕ ಹೀಗೇಕೆ ಮಾಡಿದ?

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಅವಳಿ ನಗರದಲ್ಲಿ ಪಾಲಿಕೆ ಚುನಾವಣೆಯ ಜ್ವರ ಜೋರಾಗಿದ್ದು, ಆಕಾಂಕ್ಷಿಗಳ ನಿದ್ದೆಯೇ ಮಾಯವಾಗಿದೆ.

ಈಗಿನಿಂದಲೇ ಪಾಲಿಕೆ ಮಾಜಿ ಸದಸ್ಯರಿಂದ ಹಿಡಿದು ಹೊಸಬರು ತೀವ್ರ
ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ವಾರ್ಡ್ ವಿಂಗಡನೆಯ ಟೆನ್ಷನ್ ಒಂದೆಡೆಯಾದರೆ, ಒಬ್ಬರ ಕಾಲು ಮತ್ತೊಬ್ಬರೆಳೆಯುವ ಹುನ್ನಾರ ಆರಂಭವಾಗಿದೆ.

ಈ ಮಧ್ಯೆ ಪಾಲಿಕೆಯ ವಾರ್ಡ್ ಒಂದರಲ್ಲಿ ಟಿಕೆಟ್ ಆಕಾಂಕ್ಷಿಯೊಬ್ಬರ ಮನೆಯ ಮೂಲೆಯಲ್ಲಿ ವಾಮಾಚಾರ ಮಾಡಿಸಿದ್ದಾರೆ. ವಿಚಿತ್ರ ಪದಾರ್ಥಗಳನ್ನು ಮನೆಯ ಮೂಲೆಗೆ ಇಡಲಾಗಿತ್ತು. ಇದನ್ನು ಕಂಡು ಬಡಾವಣೆಯ ಜನ ಭೀತಿಗೊಂಡಿದ್ದರು. ಆದರೆ, ಜೆಲಾನಿ ಎಂಬ ಯುವಕ ವಾಮಾಚಾರಕ್ಕೆ ಇಟ್ಟಿದ್ದ ವಸ್ತುಗಳನ್ನು ನಿರಾತಂಕವಾಗಿ ಮುಟ್ಟುವ ಮೂಲಕ ಜನರಲ್ಲಿನ ಮೂಢನಂಬಿಕೆಯನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾನೆ.

ಮನೆಯ ಹೊರಭಾಗದ ಮೂಲೆಯೊಂದರಲ್ಲಿ ಪೇಪರ್ ಹಾಳೆಯ ಮೇಲೆ ಬಾಳೆ ಹಣ್ಣು, ಮೊಟ್ಟೆ, ಮೆಣಸಿಣಕಾಯಿ, ಅನ್ನ, ಕುಂಕುಮ ಸೇರಿಸಿ ಇಟ್ಟಿದ್ದರು. ಇವುಗಳನ್ನು ಒಂದೊಂದಾಗಿ ಮುಟ್ಟಿ ತೋರಿಸಿ ಜನರಲ್ಲಿನ ಭೀತಿ ಹೋಗಲಾಡಸಲು ಪ್ರಯತ್ನಿಸಿದರು.

ವಾಮಾಚಾರದ ಬಗ್ಗೆ
ಜನರಲ್ಲಿನ ಭಯ ದೂರವಾಗಬೇಕು. ಇದರಿಂದ ಯಾವುದೇ ಕೆಡಕು ಉಂಟಾಗುವುದಿಲ್ಲ ಎಂದು ಆ ಪ್ರದೇಶದ ಜನರಿಗೆ ಧೈರ್ಯ ತುಂಬಿದ್ದಾನೆ.

ಚಾಕು ತೋರಿಸಿ ಹಣ ಕೀಳಲು ಯತ್ನ; ಜನರ ನೋಡಿ ಕಾಲ್ಕಿತ್ತ ಖದೀಮ

ವಿಜಯಸಾಕ್ಷಿ ಸುದ್ದಿ, ಗದಗ

ರಸ್ತೆ ಮೇಲೆ ನಡೆದುಕೊಂಡು ಹೊರಟಿದ್ದ ವ್ಯಕ್ತಿಗೆ ಚಾಕು ತೋರಿಸಿ ಹಣ ಕೀಳಲು ಯತ್ನಿಸಿದ ಖದೀಮ ಜನರನ್ನು ಕಂಡು ಓಡಿಹೋದ ಘಟನೆ ಗದಗ ನಗರದಲ್ಲಿ ನಡೆದಿದೆ.

ನಗರದ ಮೋದಿನಸಾಬ ಕಾಶಿಮಸಾಬ ಮುಲ್ಲಾ ಎಂಬುವವರು ವೀರೇಶ್ವರ ಲೈಬ್ರರಿ ಹತ್ತಿರ ಸಾಲ ಓಣಿ ಕಡೆಗೆ ಹೊರಟಿದ್ದಾಗ ಉಮೇಶ ಬಸವರಾಜ ಕವಲೂರು ಎಂಬಾತ ಚಾಕು ತೋರಿಸಿ ಕಿಸೆಗೆ ಕೈಹಾಕಿದ್ದು ಗಾಬರಿಗೊಂಡ ಮೋದಿನಸಾಬ್ ಚೀರಲಾರಂಭಿಸಿದ್ದರಿಂದ ಜನರು ಸೇರಿದ್ದು, ಜನರನ್ನು ನೋಡುತ್ತಲೇ ಉಮೇಶ ಅಲ್ಲಿ ಕಾಲ್ಕಿತ್ತಿದ್ದಾನೆ.

ಈ ಕುರಿತು ಮೋದಿನಸಾಬ ಮುಲ್ಲಾ ಗದಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪರಾರಿಯಾಗಿದ್ದ ಖದೀಮ ಉಮೇಶ್ ಕವಲೂರನನ್ನು ಪೊಲೀಸರು ಬಂಧಿಸಿದ್ದಾರೆ.

ನಾಯಕತ್ವ ಬದಲಾವಣೆಗೆ ಸೂಕ್ತ ಸಮಯವಲ್ಲ; ಮುರುಘಾ ಶ್ರೀ ಆಕ್ಷೇಪ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

  • ಸಿಎಂ ಬಿಎಸ್ ವೈ ಬದಲಾವಣೆಗೆ ಮುರುಘಾ ಶ್ರೀ ಆಕ್ಷೇಪ
  • ನಿರ್ಲಕ್ಷಿಸಿದರೆ ಮುಂದೆ ಪಕ್ಷಕ್ಕೆ ಭಾರಿ ನಷ್ಟ ಉಂಟಾಗುವ ಸಾಧ್ಯತೆ!

ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಿದರೆ ಪಕ್ಷಕ್ಕೆ ಮುಂದೆ ಭಾರಿ ನಷ್ಟವಾಗಲಿದೆಂಬ ಭಾವನೆ ಇದೆ ಎಂದು ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶ್ರೀಗಳು ಹೇಳಿದ್ದಾರೆ.

ಸಿಎಂ ಬಿ.ಎಸ್. ವೈ ತಮ್ಮ ರಾಜಕೀಯ ಜೀವನವನ್ನು ಏಕ ವ್ಯಕ್ತಿಯಾಗಿ ಆರಂಭಿಸಿ, ಬಿಜೆಪಿ‌ಯನ್ನು ತಳಮಟ್ಟದಿಂದ ಸಂಘಟನೆ ಮಾಡಿದ್ದಾರೆ. ಈ ಹಂತದಲ್ಲಿ ನಾಯಕತ್ವ ಬದಲಾವಣೆ ಸಮಂಜಸವಲ್ಲ ಎಂದು ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ರಚನೆ ಹೆಗ್ಗಳಿಕೆ ಅವರದ್ದು, ನೇರ ನುಡಿ, ಧೀರ ನಡೆಗೆ ಯಡಿಯೂರಪ್ಪ ಹೆಸರಾದವರು. ಪ್ರತಿ ಚುನಾವಣೆ ಅವರ ಮುಂದಾಳತ್ವದಲ್ಲಿ ನಡೆಯುತ್ತಾ ಬಂದಿವೆ. ಪಕ್ಷದ ಸಂಘಟನೆಗೆ ಅಪಾರವಾಗಿ ಶ್ರಮಿಸಿದ್ದು, ಅವರ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಇದೆ ಎಂದರು.

ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅಂಥ ಮೇಧಾವಿ, ಮುತ್ಸದ್ಧಿ ಮುಖಂಡರು. ಇಂತಹ ನಾಯಕನನ್ನು ಗೌರವದಿಂದ ನಡೆಸಿಕೊಳ್ಳುವುದು ಸೂಕ್ತ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟ್ಯಾಂಕರ್-ಕಾರು ಡಿಕ್ಕಿ; ಸ್ಥಳದಲ್ಲೇ ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಕಲಬುರಗಿ ತಾಲೂಕಿನ ಕೋಟನೂರು ಬಳಿ ನಿನ್ನೆ ರಾತ್ರಿ ನಡೆದಿದೆ.

ಕಲಬುರಗಿ ನಗರ ನಿವಾಸಿಗಳಾದ
ರಾಹುಲ್ 25, ಖಾಸಿಂ 26, ಉಲ್ಲಾಸ್ 26, ಮೃತರು. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೇವರ್ಗಿ ಮಾರ್ಗದಿಂದ ಕಲಬುರಗಿ ನಗರದ ಕಡೆ ಹೊರಟಿದ್ದ ಇಟೋಸ್ ಕಾರು ಹಾಗೂ ಕಲಬುರಗಿ ನಗರದಿಂದ ಜೇವರ್ಗಿ ಕಡೆ ಹೊರಟಿದ್ದ ಟ್ಯಾಂಕರ್ ಮಧ್ಯೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ. ಕಲಬುರಗಿ ನಗರ ಸಂಚಾರಿ 2 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡ್ಡಿ ವ್ಯವಹಾರ ಕಲಿಸಿದಾತಗೇ ಮುಹೂರ್ತವಿಟ್ಟ ರೌಡಿ ಶೀಟರ್! ಗುರುವಿಗೇ ಗುನ್ನ!

ವಿಜಯಸಾಕ್ಷಿ ಸುದ್ದಿ, ಗದಗ

ಇನ್ನೆರಡು ದಿನಗಳಲ್ಲಿ ಮದುವೆ ನಿಶ್ಚಯವಾಗಬೇಕಿದ್ದ ಯುವಕನಿಗೆ ಮನಬಂದಂತೆ ಚುಚ್ಚಿದ ದುಷ್ಕರ್ಮಿಗಳು

ಹೆಣ್ಣು… ಹೊನ್ನು…ಮಣ್ಣು… ಇದು ಯಾವಾಗ ಬೇಕಾದರೂ ಮನುಷ್ಯನನ್ನು ಬದಲಿಸಬಹುದು. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗೆಳೆಯ, ಗೆಳತಿ ಹತ್ತಿರವಾಗಬಹುದು ಅಥವಾ ದೂರಾಗಬಹುದು. ಯಾರನ್ನಾದರೂ ಪ್ರೀತಿಸಬಹುದು ಅಥವಾ ದ್ವೇಷವನ್ನೂ ಮಾಡಬಹುದು. ಇದಕ್ಕೆ ಸಾಕ್ಷಿಯಾಗುವಂತಹ ಘಟನೆ ಗದಗ ನಗರದಲ್ಲಿ ನಡೆದಿದೆ.

ಇಬ್ಬರೂ ರೌಡಿ ಶೀಟರ್‌ಗಳು. ಕೊಲೆಯಾದ ಯುವಕ ಮುತ್ತು ಅಲಿಯಾಸ್ ಗುಂಡಪ್ಪ ಚಲವಾದಿ ಒಂದಿಷ್ಟು ಪಳಗಿದ ಆಸಾಮಿ. ಕೊಲೆ ಆರೋಪ ಹೊತ್ತ ಯುವಕ ಇತ್ತೀಚೆಗೆ ಕಣ್ಣು ಬಿಟ್ಟಾತ. ಸಣ್ಣ ಪುಟ್ಟ ಜಗಳ ಮಾಡಿಕೊಂಡು ಹವಾ ಮೆಂಟೇನ್ ಮಾಡಿಕೊಂಡಿದ್ದ. ಒಂದಿಷ್ಟು ದಿನ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಆಮೇಲೆ ಮುತ್ತು ಚಲವಾದಿ ಮೂಲಕ ಬಡ್ಡಿ ವ್ಯವಹಾರ ಶುರು ಹಚಗೊಂಡ ಯುವಕ, ಮುತ್ತು ಚಲವಾದಿ ಮೂಲಕವೇ ಜನರಿಗೆ ಮೀಟರ್ ಬಡ್ಡಿಗೆ ಹಣ ಕೊಡುತ್ತಾ ಹೋದ.

ಇದನ್ನೂ ಓದಿ ಹಣ್ಣಿನ ವ್ಯಾಪಾರಿಯ ಭೀಕರ ಕೊಲೆ; ಪಾರ್ಟಿಗೆ ಕರೆದವರೇ ಕೊಲೆ ಮಾಡಿದ್ರಾ?

ಇಡೀ ಮಾರುಕಟ್ಟೆಯ ಜನರಿಗೆ ಪರಿಚಯ ಮಾಡಿಸಿಕೊಟ್ಟ ಮುತ್ತು ಚಲವಾದಿ ಒಂದು ರೀತಿಯಲ್ಲಿ ಕೊಲೆ ಆರೋಪ ಹೊತ್ತ ಯುವಕ ಅಲಿಯಾಸ್ ( ೨೨೦-)ಗೆ ಬದುಕೋಕೆ ದಾರಿತೋರಿಸಿದ ಗುರುವಾಗಿದ್ದ.

ಆತ್ಮೀಯ ಮಿತ್ರರು

ಕಳೆದ ೧೦-೧೨ ವರ್ಷಗಳಿಂದ ಮುತ್ತು ಚಲವಾದಿ ಹಾಗೂ ಕೊಲೆ ಆರೋಪ ಹೊತ್ತ ಯುವಕ ಆತ್ಮೀಯ ಗೆಳೆಯರಾಗಿದ್ದವರು. ಅದ್ಯಾಕೋ ಇಬ್ಬರ ನಡುವೆ ಒಂದು ವರ್ಷದಿಂದ ವೈಮನಸ್ಸು ಉಂಟಾಗಿದೆ. ಆಗಾಗ ಇಬ್ಬರ ನಡುವೆ ಜಗಳವೂ ಆಗಿದೆ. ಕಾರಣ ಹಣಕಾಸಿನ ವಿಚಾರವೋ ಅಥವಾ ಹೆಣ್ಣಿನ ವಿಚಾರವೋ ಗೊತ್ತಿಲ್ಲ. ಇದೆಲ್ಲ ಇಬ್ಬರನ್ನೂ ಚೆನ್ನಾಗಿ ಬಲ್ಲವರೇ ಬಾಯಿ ಬಿಟ್ಟರೆ ಮಾತ್ರ ಕೊಲೆಯ ಕಾರಣ ಹೊರಬೀಳಲಿದೆ.

ಕೊಲೆಗೆ ಸ್ಕೆಚ್ ಇದೇಮೊದಲಲ್ಲ

ಆರು ತಿಂಗಳ ಹಿಂದೆ ಕಾರ್ಯಕ್ರಮ ಒಂದಕ್ಕೆ ಕರೆಸಿಕೊಳ್ಳಲಾಗಿತ್ತು. ಅಲ್ಲಿ ಕುಡಿದುಕುಪ್ಪಳಿಸಿದ್ದರು.ಅಂದೇ ಕೊಲೆಗೆ ಪ್ರಯತ್ನ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಅದೃಷ್ಟ ಮುತ್ತು ಚಲವಾದಿಯ ಕೈ ಹಿಡಿದಿತ್ತು. ಪಾರಾಗಿದ್ದ.

ಆರೋಪಿಯ ಹಿನ್ನೆಲೆ

ಮುತ್ತು ಚಲವಾದಿಯ ಕೊಲೆ ಆರೋಪ ಹೊತ್ತಿರುವ ಪ್ರಮುಖ ಆರೋಪಿಯ ಹಿಂದೆ ಇದ್ದವರು ಯಾರು? ಎಂಬುದು ಮುಖ್ಯವಾಗಿದೆ. ಈ ಹಿಂದೆ ಬಡ್ಡಿ ಹಣ ಕೊಡದ ಯುವಕನ ಮೇಲೆ ಹಲ್ಲೆ ಮಾಡಿದ್ದ ಈತ, ಅವರ ಸಂಬಂಧಿಕರ ಕಂಗೆಣ್ಣಿಗೆ ಗುರಿಯಾಗಿದ್ದ. ಆಗ ಗದಗನಲ್ಲಿ ಯಾವಾಗಲೂ ಹವಾ ಮೆಂಟೇನ್ ಮಾಡಿದ ಕುಟುಂಬದ ವ್ಯಕ್ತಿ ಬಂದು ರಾಜೀ ಪಂಚಾಯತಿ ನಡೆಸಿ ಪೊಲೀಸ್ ಠಾಣೆಯ ಮೆಟ್ಟಲು ಹತ್ತದಂತೆ ನೋಡಿಕೊಳ್ಳಲಾಯಿತು ಎನ್ನಲಾಗಿದೆ.

ರೌಡಿಗಳ ಹಾವಳಿಗೆ ಕಡಿವಾಣ ಯಾವಾಗ?

ಒಂದು ವರ್ಷದಿಂದಲೂ ಕೆಲವು ರೌಡಿಗಳು ಬಾಲ ಬಿಚ್ಚಿದ್ದಾರೆ. ಅಲ್ಲಲ್ಲಿ ಬೆದರಿಕೆ ಹಾಕೋದು, ಹಲ್ಲೆ ಮಾಡೋದು ನಡೆದೇ ಇದೆ. ಆದರೆ ಆ ಪ್ರಕರಣಗಳು ಪೊಲೀಸರ ಗಮನಕ್ಕೆ ಬಂದಿಲ್ಲ. ಈಗಲೂ ರಾತ್ರಿ ಆದರೆ ಸಾಕು ಮುಳಗುಂದ ನಾಕಾ, ಕಳಸಾಪುರ ರಸ್ತೆಯ ಸೇವಾಲಾಲ್ ಸರ್ಕಲ್ ಮುಂತಾದ ಪ್ರದೇಶಗಳಲ್ಲಿ ಮರಿ ಪುಡಾರಿಗಳ ದಂಡೇ ನಿಲ್ಲುತ್ತೆ. ಇತ್ತೀಚೆಗೆ ಇಬ್ಬರ ಯುವಕರ ಮಧ್ಯೆ ನಡೆದ ಸಂಭಾಷಣೆ (ಕೊಂದ ಬಿಡ್ತೀನಿ) ಅನ್ನೋ ಆಡಿಯೋ ವೈರಲ್ ಆಗಿತ್ತು. ಇಂತಹ ಮರಿಪುಡಾರಿಗಳ, ರೌಡಿ ಶೀಟರ್‌ಗಳ ಹೆಡಮುರಿ ಕಟ್ಟಿ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಹಿರಿಯ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.

ತನಿಖೆ ನಡೆಸುತ್ತಿದ್ದೇವೆ

ಭಾನುವಾರ ರಾತ್ರಿ ೧೦.೩೦ರಿಂದ ೧೧ ಗಂಟೆ ಸುಮಾರಿಗೆ ಮುತ್ತು ಚಲವಾದಿ ಅನ್ನೋ ಯುವಕನಿಗೆ ಯಾರೋ ದುಷ್ಕರ್ಮಿಗಳು ಚುಚ್ಚಿ ಸಾಯಿಸಿದ್ದಾರೆ. ನೈಟ್ ಬೀಟ್‌ನವರು ನಗರ ಠಾಣೆಯ ಸಿಬ್ಬಂದಿಗೆ ತಿಳಿಸಿದ್ದಾರೆ. ಸದ್ಯ ಕೇಸ್ ದಾಖಲಿಸಿಕೊಂಡು ತನಿಖೆ ಮಾಡ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನ ಬಂಧಿಸುತ್ತೇವೆ,

  • ಎನ್ ಯತೀಶ್, ಎಸ್ಪಿ

ಬಡ್ಡಿ ದಂಧೆ ಮಾಡುವವನಿಂದಲೇ ಕೊಲೆ

ರಾತ್ರಿ ೮ ಗಂಟೆಯವರೆಗೆ ಮನೆಯಲ್ಲಿಯೇ ಮಲಗಿದ್ದ. ಅವಾಗ ಯಾರೋ ಗೆಳೆಯರು ಅಂತ ಕರೆ ಮಾಡಿ ಪಾರ್ಟಿಗೆ ಕರೆದುಕೊಂಡು ಹೋಗಿದ್ದಾರೆ. ಅವನಿಗಾಗಿಯೇ ಚಿಕನ್ ಊಟ ಮಾಡಿಸಿ ಕಾದು ಕುಳಿತಿದ್ವಿ ರಾತ್ರಿ ೧೦.೩೦ ಗಂಟೆ ಸುಮಾರಿಗೆ ಕೊಲೆಯಾಗಿದೆ ಬನ್ನಿ ಅಂತ ಕರೆದರು. ಇನ್ನೆರಡು ದಿನದಲ್ಲಿ ಅವನಿಗೆ ಕನ್ಯೆ ನಿಶ್ಚಯ ಮಾಡುವ ಹಂತದಲ್ಲಿ ಇದ್ದೆವು. ಬಡ್ಡಿ ದಂಧೆ ಮಾಡುವವನೇ ಕೊಲೆ ಮಾಡಿದ್ದಾನೆ. ಅವನಿಗೆ ಗಲ್ಲುಶಿಕ್ಷೆಯಾಗಲಿ.

  • ಯಲ್ಲಪ್ಪ ಚಲವಾದಿ, ಕೊಲೆಯಾದ ಯುವಕನ ತಂದೆ

ಕಷ್ಟದಿಂದ ಗಳಿಸಿದ ಇಮೇಜ್, ಕೋಪದಿಂದ ಡ್ಯಾಮೇಜ್

0

-ಚಾಲೇಂಜಿಂಗ್ ಸ್ಟಾರ್‌ಗೆ ಮತ್ತೆ ಚಾಲೆಂಜಿಂಗ್ ಡೇಯ್ಸ್

-ನೇರ-ನಿಷ್ಠುರತೆಯೇ ಮುಳುವಾಯ್ತೆ? ಅಥವಾ ಸ್ಟಾರ್‌ಗಿರಿ ತಲೆ ತಿರಗಸ್ತಿದಿಯಾ?

-ನಟ ದರ್ಶನ್‌ಗೂ-ವಿವಾದಗಳಿಗೂ ಇರೊ ನಂಟು ಇಂದು-ನಿನ್ನೆಯದಲ್ಲ

ವಿಶೇಷ ವರದಿ.
-ಬಸವರಾಜ ಕರುಗಲ್.

ಮಾಡೋಕೆ ವರುಷ, ಒಡೆಯೋಕೆ ನಿಮಿಷ ಅನ್ನೋ ಮಾತಿಗೂ ನಟ ದರ್ಶನ್‌ನ ಇವತ್ತಿನ ಸ್ಥಿತಿಗೆ ಹೆಚ್ಚು ಸಾಮ್ಯತೆ ಇರುವ ಸಮಯವಿದು.

ಅಂಬಿಕಾ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಅಡಿ ಇಟ್ಟ ದರ್ಶನ್, ವಿನೋದ್‌ರಾಜ್ ಅಭಿನಯದ ಮಹಾಭಾರತ ಹೆಸರಿನ ಸಿನಿಮಾದಲ್ಲಿ ವಿಲನ್ ಆಗಿ ಬೆಳ್ಳಿ ತೆರೆಗೆ ಕಾಲಿಟ್ಟರು. ಆನಂತರ ಭಾ.ಮಾ.ಹರೀಶ್ ನಿರ್ಮಾಣದ ಸತ್ಯ ನಿರ್ದೇಶನದ ಮೆಜೆಸ್ಟಿಕ್ ಸಿನಿಮಾ ಮೂಲಕ ನಾಯಕನ ನಟನಾಗಿ ಗುರುತಿಸಿಕೊಂಡರು. ಈ ಸಿನಿಮಾ ಬಿಡುಗಡೆಯಾಗಿ ದಶಕದ ಮೇಲೆ ಈ ಸಿನಿಮಾ ಹೆಸರಿನಲ್ಲೇ ವಿವಾದ ಉದ್ಭವಿಸಿತು. ಕಿಚ್ಚ ಸುದೀಪ್ ಮತ್ತು ದಚ್ಚು ದರ್ಶನ್ ಸ್ನೇಹ ಮಾಸಲು ಕಾರಣವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ವಿವಾದ ಇತ್ತೀಚಿನದಾದರೂ ಮೆಜೆಸ್ಟಿಕ್ ದರ್ಶನ್ ನಾಯಕನಟನಾಗಿ ಅಭಿನಯಿಸಿದ ಮೊದಲ ಸಿನಿಮಾ ಎಂಬುದನ್ನು ಗಮನಿಸಬೇಕು.

ಹಲವು ಸಿನಿಮಾಗಳ ನಂತರ ನನ್ನ ಪ್ರೀತಿಯ ರಾಮು ಸಿನಿಮಾ ಮೂಲಕ ಅಪಾರ ಅಭಿಮಾನಿಗಳನ್ನು ದರ್ಶನ್ ಸಂಪಾದಿಸಿಕೊಂಡರು ಎಂದರೆ ಅತಿಶಯೋಕ್ತಿ ಏನಲ್ಲ. ಆ ಪಾತ್ರ ನಿರ್ವಹಣೆಗೆ ಅಷ್ಟೊಂದು ಡೇಡಿಕೇಟ್ ವರ್ಕ್ ಮಾಡಿದ್ದರು. ಆದರೂ ಸಿನಿಮಾ ಸೋತಿದ್ದು ವಿಪರ್ಯಾಸ.

ಬಳಿಕ ಪ್ರೇಮ್ ನಿರ್ದೇಶನದ ಕರಿಯ, ಇಂದ್ರಜಿತ್ ಲಂಕೇಶ್ ನಿರ್ದೇಶನದ ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ‌ ನಟಿಸಿದರು. ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ‌ ಹ್ಯಾಟ್ರಿಕ್ ಹೀರೋ ಶಿವಣ್ಣ ನಟಿಸಬೇಕಿತ್ತು. ಆದರೆ ಆ ಪಾತ್ರ ದರ್ಶನ್ ಪಾಲಾಗಿದ್ದು , ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸದಿರುವುದು ಹೊಸದೇನಲ್ಲ. ಕರಿಯ ತಕ್ಕ ಮಟ್ಟಿಗೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತು. ಅದಕ್ಕೆ ಖಂಡಿತವಾಗಿ ದರ್ಶನ್ ಹೆಸರು ಕಾರಣವಲ್ಲ, ನಿರ್ದೇಶಕ ಪ್ರೇಮ್ ಸಿನಿಮಾ ಎನ್ನುವ ಕಾರಣಕ್ಕೆ ಕರಿಯ ಗೆದ್ದದ್ದು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ದುರಂತವೆಂದರೆ ಈ ಇಬ್ಬರೂ ನಿರ್ದೇಶಕರ ಈ ಸಿನಿಮಾಗಳು ತೆರೆ ಕಂಡು ಎರಡು ದಶಕಗಳೇ ಗತಿಸಿವೆ. ಈಗ ದರ್ಶನ್ ಇವರಿಬ್ಬರ ವಿರೋಧ ಕಟ್ಟಿಕೊಂಡು ದಿನ ದೂಡುತ್ತಿದ್ದಾರೆ.

ಇಷ್ಟೊತ್ತಿಗಾಗಲೇ ದರ್ಶನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದವು. ಹಾಗೆ ನೋಡಿದರೆ ಈ ವಿವಾದಗಳು ದರ್ಶನ್‌ಗೆ ಸುತ್ತಿಕೊಳ್ಳುತ್ತಿರುವುದು ಇತ್ತಿಚೇಗೇನಲ್ಲ. ದರ್ಶನ್ ಸುಮಾರು ಆರೆಂಟು ಸಿನಿಮಾ ಮಾಡಿದ ನಂತರ ಖಾಸಗಿ ವಾಹಿನಿಯೊಂದು ಅವರ ಸಂದರ್ಶನ ಮಾಡಿದ ವೇಳೆ “ಹಣ ಕೊಟ್ಟರೆ ಸಿಂಗಲ್ ಪೀಸ್ ಬಟ್ಟೆಯಲ್ಲೇ ಆ್ಯಕ್ಟ್ ಮಾಡೋಕೂ ರೆಡಿ” ಎನ್ನುವ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಆಗ ದರ್ಶನ್‌ಗೆ ಈಗಿನ‌ ಸ್ಟಾರ್‌ಡಮ್ ಇರಲಿಲ್ಲ. ಹಾಗಾಗಿಯೇ ಅದು ವಿವಾದದ ರೂಪ ತಾಳಲಿಲ್ಲವಷ್ಟೇ.

ಆನಂತರ ದರ್ಶನ್ ಅಕ್ಷರಶಃ ವಿಲನ್‌ನಂತೆ ಕಂಡದ್ದು ಅವರ ಪತ್ನಿ‌ ಜೊತೆಗಿನ ವಿವಾದದಲ್ಲಿ. ಆ ವೇಳೆ ಜೈಲನ್ನು ಕಂಡ ದರ್ಶನ್ ಕೈ ಹಿಡಿದದ್ದು ಅವರ ಸಹೋದರ ದಿನಕರ್ ನಿರ್ದೇಶಿಸಿದ ಸಾರಥಿ ಸಿನಿಮಾ.

ಅಲ್ಲಿಂದ ಅವರ ಕೌಟುಂಬಿಕ ವಿವಾದ ಸುಖಾಂತ್ಯ ಕಂಡಿತು. ಸಾರಥಿಯ ಹಿಟ್ ಅನುಕಂಪವಾಗಿ ಫ್ಯಾನ್ ಫಾಲೋಯಿಂಗ್ ಅವರನ್ನೇ ಬಾಕ್ಸಾಫೀಸ್ ಸುಲ್ತಾನ ಎನ್ನುವಷ್ಟರಮಟ್ಟಿಗೆ ತಂದು ನಿಲ್ಲಿಸಿತು. ಎಲ್ಲವೂ ಸರಿಯಾಯ್ತು ಎಂದುಕೊಳ್ಳುವಷ್ಟರಲ್ಲೇ ನವರಸ ನಾಯಕ ಜಗ್ಗೇಶ್ ಜೊತೆಗೆ ತಾವು ನಟಿಸಿದ್ದ ಅಗ್ರಜ ಸಿನಿಮಾದ ಪ್ರಮೋಷನ್ ವರ್ಕ್‌ಗೆ ಸಂಬಂಧಿಸಿದಂತೆ ವಿವಾದದ ಅಲೆಗೆ ಸಿಲುಕಿದರು.

ಆನಂತರ ಸ್ಯಾಂಡಲ್‌ವುಡ್ ದೋಸ್ತಿ ಎಂದೇ ಕರೆಸಿಕೊಂಡಿದ್ದ ಕಿಚ್ಚ ಸುದೀಪ್ ಜೊತೆ ವಿವಾದ ಅಂಟಿಕೊಂಡಿತು. ಇವರಿಬ್ಬರ ವಿಷಯ ಸ್ಟಾರ್‌ಗಿರಿಗೆ ಸಂಬಂಧಿಸಿದ್ದು. ಸ್ಟಾರ್‌ಪಟ್ಟದ ಕಾದಾಟ ಅಣ್ಣಾವ್ರು-ವಿಷ್ಣುದಾದಾ ಕಾಲದಿಂದಲೂ ಇದೆ. ಆದರೆ ಆಗ ಆರೋಗ್ಯಕರ ಪೈಪೋಟಿ ಇತ್ತು. ದಚ್ಚು-ಕಿಚ್ಚನದ್ದು ಶೀತಲಸಮರವಲ್ಲ, ಅಭಿಮಾನಿಗಳಿಂದಲೂ ಆಗಾಗ ಸಮರ ನಡೆಯುತ್ತಲೇ ಇರುತ್ತೆ. ಇದಕ್ಕೆ ತಾಜಾ ಉದಾಹರಣೆ “ಮದಕರಿ” ಸಿನಿಮಾದ ಹೆಸರು.

ಈಗ 25 ಕೋಟಿ ರೂ. ಫೇಕ್‌ನಿಂದ ಶುರುವಾದ ದರ್ಶನ್ ಜೊತೆಗಿನ ವಿವಾದ ಕಳೆದ ಒಂದು ವಾರದಿಂದ ಮುಂದುವರಿದಿದೆ. ವಿವಾದದ ಕೇಂದ್ರಬಿಂದುವಾಗಿದ್ದ ಅರುಣಾಕುಮಾರಿ ಸದ್ಯ ಹಿನ್ನೆಲೆಗೆ ಸರಿದಿದ್ದು, ನಿರ್ಮಾಪಕ ಉಮಾಪತಿ ಜೊತೆ ತೆರೆಮರೆ ಯುದ್ಧ ಶುರುವಾದಂತಿದೆ. ಇದರಲ್ಲಿ ದೊಡ್ಮನೆ ಆಸ್ತಿ ವಿಚಾರವನ್ನು ಥಳುಕು ಹಾಕಿಕೊಂಡದ್ದು ಬೇಡದ ವಿಷಯವಾಗಿತ್ತೇನೊ?

ಈಗ ದರ್ಶನ್ ಮಾಧ್ಯಮಗಳ ಜೊತೆ ಮಾತನಾಡುವಾಗ ಮಾಧ್ಯಮದವರ ಬಗ್ಗೆನೂ ಬೈತಾರೆ. ಜೊತೆ ತಮ್ಮ ಸಿನಿಮಾ ನಿರ್ದೇಶಿಸಿದ ನಿರ್ದೇಶಕರ ಬಗ್ಗೆಯೂ ಅಗೌರವ ತೋರುತ್ತಾ, ಎರಡು ದಶಕಗಳಿಂದ ಕಷ್ಟಪಟ್ಟು ಗಳಿಸಿದ ಒಳ್ಳೇಯ ಇಮೇಜ್‌ನ್ನ ಡ್ಯಾಮೇಜ್ ಮಾಡಿಕೊಳ್ಳುವಂತೆ ಕಾಣುತ್ತಿದೆ. ಇಂದ್ರಜಿತ್ ಲಂಕೇಶ್ ಬರೀ ಸಿನಿಮಾ ನಿರ್ದೇಶಕ ಮಾತ್ರವಲ್ಲ, ಪತ್ರಕರ್ತರಾಗಿಯೂ ಗುರುತಿಸಿಕೊಂಡಿರುವುದರಿಂದ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಇದು ಸೊಕ್ಕಾ ಅಥವಾ ನೇರ-ನಿಷ್ಠುರ ನಡವಳಿಕೆಯಾ?
ನಿಷ್ಠುರವಾದಿ ಲೋಕ ವಿರೋಧಿ ಎಂಬ ಮಾತಿದೆ. ದರ್ಶನ್ ಅವರ ಮಾತುಗಳನ್ನು ಮೊದಲಿನಿಂದಲೂ ಗಮನಿಸುತ್ತಾ ಬಂದರೆ ಅವರೊಬ್ಬ ಸ್ಟ್ರೇಟ್ ಫಾರ್‌ವರ್ಡ್ ಮ್ಯಾನ್ ಅಂತ ಯಾರಿಗಾದರೂ ಅನಿಸುತ್ತೆ. ಆದರೂ ನೇರ-ನಿಷ್ಠುರವಾಗಿ ಮಾತನಾಡುವಾಗ ಸಭ್ಯತೆ ಎಲ್ಲೆ ಮೀರಬಾರದಲ್ಲವೇ? ಹಾಗಾಗಿ ಕೆಲವೊಮ್ಮೆ ದರ್ಶನ್‌ಗೆ ಸ್ಟಾರ್ ಪಟ್ಟ, ಗಳಿಸಿದ ಹಣ ತಲೆ ತಿರುಗಿಸುತ್ತಿದೆ ಎಂಬ ಭಾವ ಸಹಜವಾಗಿ ಎಲ್ಲರಲ್ಲೂ ಮೂಡುತ್ತೆ. ಇದರಿಂದ ಡ್ಯಾಮೇಜ್ ಆಗೋದು ಬೇರಾರಿಗೂ ಅಲ್ಲ, ಸ್ವತಃ ದರ್ಶನ್ ಇಮೇಜ್‌ಗೆ.

ದರ್ಶನ್ ಸದಾ ವಿವಾದದ ಸುತ್ತ ಸಿಲುಕುತ್ತಾರೆ ಎಂಬುದು ಎಷ್ಟು ಸತ್ಯವೊ ಅವರೊಬ್ಬ ಅಪ್ಪಟ ಕೃಷಿಕ, ಶ್ರಮಜೀವಿ, ಮಾನವೀಯ ಮೌಲ್ಯವುಳ್ಳ ನಟ ಎಂಬುದೂ ಅಷ್ಟೇ ಸತ್ಯ. ಇದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಈಗಲಾದರೂ ದರ್ಶನ್ ಪ್ರಬುದ್ಧತೆ ಬೆಳೆಸಿಕೊಳ್ಳಲಿ, ಭಾಷೆ ಸುಧಾರಿಸಿಕೊಳ್ಳಲಿ, ಕೋಪ ನಿಯಂತ್ರಿಸಿಕೊಳ್ಳಲಿ ಎಂಬುದು ಅವರನ್ನು ಇಷ್ಟಪಡುವ ಎಲ್ಲ ವರ್ಗಗಳ ಜನರ ಪ್ರೀತಿಯ ಹಕ್ಕೋತ್ತಾಯ.


ಡಾ.ಶಿವಣ್ಣ-ರವಿ ಮಧ್ಯಸ್ಥಿಕೆ ವಹಿಸಿದರೆ ಸರಿಯಾಗಬಹುದಾ?
ಚಿತ್ರರಂಗ ಅಂದ ಮೇಲೆ ಹಲವು ಸಮಸ್ಯೆಗಳು ಸಹಜ. ಚಿತ್ರರಂಗದ ಹಿರಿಯರು ಅದನ್ನ ಬಗೆ ಹರಿಸುವುದು ಡಾ.ರಾಜ್, ಅಂಬಿ ಕಾಲದಿಂದಲೂ ಬಂದಿದೆ. ಈಗ ಖಾಸಗಿ ವಿಚಾರಗಳನ್ನು ಬಿಟ್ಟು ನಿರ್ದೇಶಕರು-ನಿರ್ಮಾಪಕ ಹಾಗೂ ನಟ ದರ್ಶನ್ ಸುತ್ತ ನಡೆಯುತ್ತಿರುವ ವಿವಾದವನ್ನು ಬಗೆಹರಿಸಲು ಚಿತ್ರರಂಗದ ಹಿರಿಯರಾದ ಡಾ.ಶಿವಣ್ಣ ಮತ್ತು ರವಿಚಂದ್ರನ್ ಮುಂದಾಗಬೇಕಿದೆ. ಎಲ್ಲರಿಗೂ ಹಂಸಕ್ಷೀರ ನ್ಯಾಯ ನೀಡಬೇಕಿದೆ.

ಸೋಂಕು ನಿಯಂತ್ರಣ; ಆಗಸ್ಟ್ 2ರವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಾದ್ಯಂತ ಕೋವಿಡ್-19 ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ದಂಡ ಪ್ರಕ್ರಿಯೆ ಸಂಹಿತೆ 1973, ಸಾಂಕ್ರಾಮಿಕ ರೋಗ ಕಾಯ್ದೆ 1897 ದಿ ಕರ್ನಾಟಕ ಎಪಿಡಮಿಕ್ ಡಿಸೀಸ್ ಕೋವಿಡ್-19 ರೆಗ್ಯುಲೇಷನ್ 2020 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಖಗವಸುಗಳನ್ನು ಧರಿಸುವಿಕೆ, ಕೈಗಳನ್ನು ಶುಚಿಯಾಗಿಡುವಿಕೆ, ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

ಸರ್ಕಾರ ಹೊರಡಿಸಿದ ಜುಲೈ 18 ರ ಆದೇಶದಲ್ಲಿ ಅವಕಾಶ ನೀಡಿದ ಚಟುವಟಿಕೆಗಳಿಗೆ ಅನುಮತಿ ನೀಡಿದೆ. ಆದೇಶದಲ್ಲಿ ಹೊರಡಿಸಿರುವ ಷರತ್ತುಗಳಿಗೆ ಒಳಪಟ್ಟು ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಜುಲೈ 19 ರ ಬೆಳಗಿನ 6 ಗಂಟೆಯಿಂದ ಆಗಸ್ಟ್ 2ರ ಬೆಳಗಿನ 6ಗಂಟೆಯವರೆಗೆ ಜಿಲ್ಲಾದ್ಯಂತ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ.

ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿ ಇರುತ್ತದೆ.

ಮುಖಗವಸು ಧರಿಸದಿದ್ದರೆ ಅಂತಹವರ ವಿರುದ್ಧ ನಗರ ಪಾಲಿಕೆ ಪ್ರದೇಶಗಳಲ್ಲಿ ರೂ.250 ಮತ್ತು ಇನ್ನಿತರ ಪ್ರದೇಶಗಳಲ್ಲಿ ರೂ.100 ದಂಡವನ್ನು ವಿಧಿಸಲಾಗುವುದು ಹಾಗೂ ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾದಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

error: Content is protected !!