Home Blog Page 3147

ತಾಯಿ ಕಳೆದುಕೊಂಡ ಬಾಲಕಿಯ ಪತ್ರ ಓದಿದವರ ಕರುಳು ಹಿಂಡಿದಂತಾಗುತ್ತಿದೆ!

ವಿಜಯಸಾಕ್ಷಿ ಸುದ್ದಿ, ಕೊಡಗು

ಕೊರೊನಾದಿಂದ ಸಾವನ್ನಪ್ಪಿದ ತನ್ನ ತಾಯಿಯ ತಾಯಿಯ ಮೊಬೈಲ್ ಕೊಡುವಂತೆ ಪುಟ್ಟ ಬಾಲಕಿಯೊಬ್ಬಳು ಮನವಿ ಮಾಡಿರುವ ಮನ ಮಿಡಿಯುವ ಘಟನೆ ನಡೆದಿದೆ.

ಜಿಲ್ಲೆಯ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ಹೃತಿಕ್ಷಾ ಎಂಬ ಬಾಲಕಿಯೇ ಈ ರೀತಿ ಮನವಿ ಮಾಡಿದ್ದಾಳೆ. ತಾಯಿ ಕಳೆದುಕೊಂಡು ನಾನು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ನೆನಪುಗಳು ಆ ಮೊಬೈಲ್ ನಲ್ಲಿವೆ. ದಯಾಮಾಡಿ ಆ ಮೊಬೈಲ್ ಹಿಂದಿರುಗಿಸಿ ಎಂದು ಮನವಿ ಮಾಡಿದ್ದಾಳೆ.

ತಾಯಿಯ ಮೊಬೈಲ್ ಗಾಗಿ ಈ ಬಾಲಕಿ, ಶಾಸಕರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾಲಕಿಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೇ. 16ರಂದು ಸಾವನ್ನಪ್ಪಿದ್ದಳು.

ತಾಯಿ ಕಳೆದುಕೊಂಡು ತಬ್ಬಲಿಯಾಗಿರುವ ಬಾಲಕಿ, ನನ್ನ ತಾಯಿಯೊಂದಿಗೆ ಮೊಬೈಲ್ ಕೂಡ ಮರೆಯಾಗಿದೆ. ಮೊಬೈಲ್ ತೆಗೆದುಕೊಂಡವರು ಅಥವಾ ಸಿಕ್ಕವರು ದಯವಿಟ್ಟು ಮರಳಿ ಕೊಡಿ. ತಾಯಿಯನ್ನು ಕಳೆದುಕೊಂಡ ಈ ತಬ್ಬಲಿಗೆ ಮೊಬೈಲ್ ಹಿಂದಿರುಗಿಸಿ ಎಂದು ಮನವಿ ಮಾಡಿದ್ದಾಳೆ.

ಈ ಬಾಲಕಿಯ ಪತ್ರ ಓದಿದ ಪ್ರತಿಯೊಬ್ಬ ಓದುಗರ ಕರುಳು ಹಿಂಡಿದಂತಾಗುತ್ತಿದೆ. ಹೀಗಾಗಿ ಹೃತಿಕ್ಷಾಳ ತಾಯಿಯ ಮೊಬೈಲ್ ಇದ್ದವರು ಕೂಡಲೇ ಕೊಡಬೇಕೆಂಬುವುದು ವಿಜಯಸಾಕ್ಷಿ ಪತ್ರಿಕೆ, ವೆಬ್ ಹಾಗೂ ಓದುಗರ ಮನವಿಯಾಗಿದೆ.

ಉಗ್ರರ ಹೆಡೆಮೂರಿ ಕಟ್ಟಿದ ಸೇನೆ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಅಸ್ಸಾಂ ಹಾಗೂ ನಾಗಾಲ್ಯಾಂಡ್ ಗಡಿ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ದಿಮಸಾ ನ್ಯಾಷನಲ್ ಲಿಬರೇಷನ್ ಆರ್ಮಿ(ಡಿಎನ್ಎಲ್ಎ) ನಡುವೆ ಗುಂಡಿನ ಚಕಮಕಿ ನಡೆದಿದ್ದು, 6 ಜನ ಉಗ್ರರ ಹೆಡೆಮೂರಿ ಕಟ್ಟಲಾಗಿದೆ.

ಡಿಎನ್ ಎಲ್ ಎ ಸಂಘಟನೆಯ 6 ಜನ ಉಗ್ರರನ್ನು ಸೇನೆ ಬಲಿ ಪಡೆದಿದೆ. ಅಸ್ಸಾಂ ರೈಫಲ್ಸ್ ಪರ್ಸನಲ್ ಮತ್ತು ಪೊಲೀಸರು ಪಶ್ಚಿಮ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಹೆಣ ಉರುಳಿಸಿದ್ದಾರೆ.

ಈ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸೋನೋವಲಾ ತಿಳಿಸಿದ್ದಾರೆ. ಅಲ್ಲದೇ, ದಿಮಸಾ ನ್ಯಾಷನಲ್ ಲಿಬರೇಷನ್ ಆರ್ಮಿಗೆ ಸೇರಿದ ಮೃತ 6 ಜನ ಉಗ್ರರ ಬಳಿಯಿದ್ದ ನಾಲ್ಕು ಎಕೆ – 47 ರೈಫಲ್ ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಅಲ್ಲದೇ, ಮಿಚಿಬೈಲಂಗ್ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಅನುಮಾನ ವ್ಯಕ್ತವಾಗಿದ್ದು, ಸೇನಾ ಕಾರ್ಯಾರಣೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.

ತಂದೆಯ ಶವ ಬೇಡ..ಹಣ ಬೇಕು ಎಂದ ಪಾಪಿ ಮಗ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೊರೊನಾ ಮಹಾಮಾರಿಯಿಂದ ತಂದೆ ಸತ್ತರೆ, ಹೆಣ ನೋಡಲು ಬಾರದ ಪಾಪಿ ಮಗ, ಶವ ನೀವೆ ಸುಡಿ ಹಣ ತಂದು ಕೊಡಿ ಎಂದು ಹೇಳಿರುವ ಅಮಾನವೀಯ ಘಟನೆ ನಡೆದಿದೆ.

ನಗರದ ಹೆಬ್ಬಾಳದ ಸೂರ್ಯ ಬೇಕರಿ ಹತ್ತಿರ ಮನೆಯೊಂದರಲ್ಲಿ ವೃದ್ಧ ನಿವಾಸಿಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದರು. ತಂದೆ ಮೃತಪಟ್ಟಿರುವ ಕುರಿತು ಅವರಿಂದ ದೂರ ಇದ್ದ ಅವರ ಮಗನಿಗೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಫೋನ್ ಮಾಡಿ ಹೇಳಿದರು. ಆದರೆ, ಇದಕ್ಕೆ ದುಃಖ ವ್ಯಕ್ತಪಡಿಸಬೇಕಾಗಿದ್ದ ಮಗ, ಏನೂ ಆಗದವರಂತೆ ವರ್ತಿಸಿದ್ದಾನೆ. ಅಲ್ಲದೇ, ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ತಂದೆಯ ಬಳಿ ಇರುವ ರೂ. 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ. ನಾನು ಕುವೆಂಪು ನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್ ಬಳಿ ಇದ್ದೇನೆ. ಅಲ್ಲಿಗೆ ಹಣ , ದಾಖಲೆ ತೆಗೆದುಕೊಂಡು ಬಂದು ಎಲ್ಲ ಕೊಟ್ಟು ಬಿಡಿ ಎಂದು ಹೇಳಿದ್ದಾನೆ.

ಆ ಪಾಪಿ ಇಷ್ಟು ಹೇಳಿದ್ದೆ ತಡ ಪಾಲಿಕೆಯ ಸದಸ್ಯ ಶ್ರೀಧರ್, ಆತನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇವಲ 15 ದಿನಗಳಲ್ಲಿ ಒಂದೇ ಹಳ್ಳಿಯ 60 ಜನರ ನಿಗೂಢ ಸಾವು!

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಕೇವಲ 15 ದಿನಗಳಲ್ಲಿಯೇ ಬರೋಬ್ಬರಿ 60 ಜನ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈಗಾಗಲೇ ಕೋವಿಡ್ ನಿಂದ 6 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ವೈದ್ಯಕೀಯ ಸಿಬ್ಬಂದಿ ಹೇಳಿದ್ದಾರೆ. ಇನ್ನುಳಿದವರು ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಹೀಗಾಗಿ ಆತಂಕ ಮನೆ ಮಾಡಿದೆ.

ಈ ಗ್ರಾಮದಲ್ಲಿ ಪ್ರತಿದಿನ ಸುಮಾರು 2 ರಿಂದ ನಾಲ್ಕು ಜನ ಸಾವನ್ನಪ್ಪುತ್ತಿದ್ದಾರೆ. ಸದ್ಯ ಈ ಗ್ರಾಮದಲ್ಲಿನ ಬಹುತೇಕ ಜನರಲ್ಲಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡಿದೆ.
ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ವೈದ್ಯಾಧಿಕಾರಿಗಳು ಮಾತ್ರ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಜನ ನಮ್ಮ ಪಾಲಿಕೆ ಸರ್ಕಾರವೇ ಇಲ್ಲ, ಅದು ಸತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಗ್ರಾಮದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಸಾಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಗ್ರಾಮದಲ್ಲಿ ಜನ ಸಾಯುತ್ತಿದ್ದರು ಯಾರು ಕೂಡ ಬಂದು ನಮ್ಮ ಗೋಳು ಕೇಳುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ ಸೋಂಕಿಗೆ ಹೆದರಿ ಮಹಿಳೆ ಆತ್ಮಹತ್ಯೆಗೆ ಶರಣು!

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನ ಸೋಂಕಿಗೆ ಭಯಪಟ್ಟ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಕದಡಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕೊರೊನಾ ಸೋಂಕಿಗೆ ಭಯಪಟ್ಟ 45 ವರ್ಷದ ಮಹಿಳೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಳೆದ 15 ದಿನಗಳಿಂದ ಈ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಕುಟುಂಬಸ್ಥರು ಮನವಿ ಮಾಡಿದ್ದರು. ಇದರಿಂದಾಗಿ ನನಗೆ ಕೊರೊನಾ ಬಂದಿದೆ ಎಂದು ಹೆದರಿದ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಿಲ್ಲೆಗೆ ಎಂಟ್ರಿ ಕೊಟ್ಟ ರೆಮ್ಡಿಸಿವರ್ ಕರಾಳ ದಂಧೆ; ನಾಲ್ಕು ಜನ ಅರೆಸ್ಟ್

ವಿಜಯಸಾಕ್ಷಿ ಸುದ್ದಿ, ಗದಗ

ರೆಮ್ಡಿಸಿವರ್ ನ್ನು ಜಿಲ್ಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಜಿಲ್ಲಾ ಸೈಬರ್ ವಿಭಾಗದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಯತೀಶ್ ಎನ್. ಹೇಳಿದ್ದಾರೆ. ಸದ್ಯ ನಾಲ್ವರ ಬಂಧನವಾಗಿದ್ದು, ಇನ್ನೊಬ್ಬ ಮಹಿಳಾ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಆಸ್ಪತ್ರೆಯ ನರ್ಸ್, ಜಿಮ್ಸ್ ನ ಲ್ಯಾಬ್ ಟೆಕ್ನಿಷಿಯನ್, ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ಆರೋಪಿಗಳು ರೂ. 3 ಸಾವಿರದ ಔಷಧವನ್ನು ರೂ. 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಎಸ್ಪಿ ಹೇಳಿದ್ದಾರೆ.

ಮಹ್ಮದ್ ಇಸ್ಮಾಯಿಲ್ ಓದೇಕಾರ, ಪಿರೋಜ್ ಖಾನ್ ಪಠಾಣ, ಜಿಮ್ಸ್ ನ ಲ್ಯಾಬ್ ಟೆಕ್ನಿಷಿಯನ್ ಗವಿಸಿದ್ದಯ್ಯ ಹಿರೇಮಠ, ರಮೇಶ ಚವಟಗಿ, ನರ್ಸ್ ಜ್ಯೋತಿ ಲಮಾಣಿ ಆರೋಪಿತರು. ಸದ್ಯ ನಾಲ್ವರ ಬಂಧನವಾಗಿದ್ದು, ಜ್ಯೋತಿ ಲಮಾಣಿ ಅವರ ಬಂಧನವಾಗಬೇಕಿದೆ.

ಜೀವ ರಕ್ಷಕ ಇಂಜೆಕ್ಷನ್ ಔಷಧಿಯನ್ನು ಇವರು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಕುರಿತು ಗುಪ್ತ ಮಾಹಿತಿ ಸಂಗ್ರಹಿಸಲಾಗಿತ್ತು. ಸೈಬರ್ ಪೊಲೀಸ್ ಇನ್ಸಪೆಕ್ಟರ್ ಮಹಾಂತೇಶ ಟಿ ಅವರ ನೇತೃತ್ವದ ತಂಡ, ಗದಗ – ಮುಳಗುಂದ ರಸ್ತೆಯ ರಾಧಾಕೃಷ್ಣ ನಗರದ ಹತ್ತಿರ ನಿಗದಿತ ಬೆಲೆಗಿಂತ ಹೆಚ್ಚು ಅಂದರೆ ರೂ. 30 ಸಾವಿರಕ್ಕೆ ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನೂ ಮೂವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ಸದ್ಯ ಅವರಿಗಾಗಿ ಹುಡುಕಾಟ ನಡೆದಿದೆ. ಬಂಧಿತ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 409, 420 ಸಹ ಕಲಂ- 34, ಐಪಿಸಿ ಮತ್ತು ಕಲಂ – 4,5,6 ಮತ್ತು 13, ಡ್ರಗ್ಸ್ ಕಂಟ್ರೋಲ್ ಕಾಯ್ದೆ -1950ರ ಅಡಿ ಪ್ರಕರಣ ದಾಖಲಾಸಿಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತರಿಂದ ವಶಪಡಿಸಿಕೊಂಡಿರುವ 14 ರೆಮಿಡಿಸಿವರ್ ನ ಸರ್ಕಾರ ನಿಗದಿಪಡಿಸಿದ ಮೌಲ್ಯ ರೂ. 48,860 ಇದೆ. ಆದರೆ, ಆರೋಪಿತರು ರೂ. 30 ಸಾವಿರದಂತೆ ರೂ. 4,20,000ನ ಲೆಕ್ಕಾಚಾರದಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಸದ್ಯ ಬಂಧಿತರಿಂದ ರೂ. 2,500 ನಗದ ಹಾಗೂ 4 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಈ ಪ್ರಕರಣದ ತನಿಖೆಯನ್ನು ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ ಮುಂದುವರೆಸಲಿದ್ದಾರೆ ಎಂದು ಎಸ್ಪಿ ಯತೀಶ್ ಎನ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿಯೂ ಬಲಿ ಪಡೆದ ಬ್ಲ್ಯಾಕ್ ಫಂಗಸ್!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಇಲ್ಲಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ಲ್ಯಾಕ್ ಫಂಗಸ್ ಸೊಂಕಿತ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ.
ಈ ಮೂಲಕ ಕಿಮ್ಸ್ ನಲ್ಲಿ ಬ್ಲ್ಯಾಕ್ ಫಂಗಸ್‍ ಗೆ ಬಲಿಯಾದ ಮೊದಲ ಪ್ರಕರಣ ಇದಾಗಿದೆ. ನಗರ ಮೂಲದ ವ್ಯಕ್ತಿಯೊಬ್ಬರು ಕಳೆದ ಕೆಲವು ದಿನಗಳಿಂದ ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದರು. ಕೂಡಲೇ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಬ್ಲ್ಯಾಕ್ ಫಂಗಸ್ ಗೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 78 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಕಿಮ್ಸ್ ವೈದ್ಯರು ತಿಳಿಸಿದ್ದಾರೆ.

ಇಂದು ದಾಖಲೆಯ ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್; ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅಲ್ಲದೇ, ದಾಖಲೆಯ ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದುತ್ತಿದ್ದಾರೆ. ಹೀಗಾಗಿ ಜನರು ಸಂತಸದತ್ತ ಮುಖ ಮಾಡಿದ್ದಾರೆ.

ಇಂದು ದಾಖಲೆಯ 61,766 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆ ಮೂಲಕ ಚೇತರಿಸಿಕೊಂಡವರ ಸಂಖ್ಯೆ 18,91,042ಕ್ಕೆ ಏರಿಕೆ ಕಂಡಿದೆ. ಅಲ್ಲದೇ, ಕಳೆದ 24 ಗಂಟೆಗಳಲ್ಲಿ 451 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 24,658ಕ್ಕೆ ಏರಿಕೆ ಕಂಡಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 31,183 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 23,98,925ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಇಂದು 8,214 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 11,12,058ಕ್ಕೆ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ 200 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಕೊರೊನಾ; ಶನಿವಾರ 443 ಜನರಿಗೆ ಸೋಂಕು, ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕು ಹಾವು-ಏಣಿ ಆಟ ಮುಂದುವರೆಸಿದೆ. ನಿನ್ನೆ ಐದು ನೂರರ ಗಡಿ ದಾಟಿದ್ದ ಸೋಂಕಿನ ಸಂಖ್ಯೆಯಲ್ಲಿ ಇವತ್ತು ಕಡಿಮೆಯಾಗಿದೆ.

ಇಂದಿನ 443 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 20758 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -170, ಮುಂಡರಗಿ-30, ನರಗುಂದ-28, ರೋಣ-60, ಶಿರಹಟ್ಟಿ-140, ಹೊರಜಿಲ್ಲೆಯ-15 ಸೇರಿದಂತೆ 443 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 211 ಕ್ಕೇರಿದೆ.

ಬೆಳಗಾವಿ ಜಿಲ್ಲೆಯ ‌ನಿವಾಸಿ
69 ವರ್ಷದ ವ್ಯಕ್ತಿ ಮೇ-11 ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 20 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಹೊಂಬಳ ನಿವಾಸಿ 45 ವರ್ಷದ ವ್ಯಕ್ತಿ ಮೇ -18 ರಂದು ಖಾಸಗಿ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 20 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಕದಡಿ ನಿವಾಸಿ 45 ವರ್ಷದ ಮಹಿಳೆ ಮೇ 17 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 20 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಸೂಡಿ ನಿವಾಸಿ 60 ವರ್ಷದ ವ್ಯಕ್ತಿ ಮೇ 16 ರಂದು ರೋಣ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 18 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಒಂದೇ ದಿನ ದಾಖಲೆಯ 409 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 17090 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3457 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 185 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಎಚ್ಕೆ ವಿರುದ್ಧ ಏಕ ವಚನದಲ್ಲಿ ಮಾತನಾಡಬಾರದಿತ್ತು; ಸಿ ಸಿ ಪಾಟೀಲ್

ವಿಜಯಸಾಕ್ಷಿ ಸುದ್ದಿ, ಗದಗ

ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಅವರು ಏಕವಚನದಲ್ಲಿಯೇ ಮಾತನಾಡಿದ್ದರು. ಸದ್ಯಕ್ಕೆ ಈ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಸುಟ್ಟ ಮನೆಯಲ್ಲಿ ಗಳ ಎಣಿಸುವ ವ್ಯಕ್ತಿ. ಟೂಲ್ ಕಿಟ್’ನ ಪ್ರಮುಖ ರೂವಾರಿ ಎಚ್.ಕೆ. ಪಾಟೀಲ್ ಎಂದು ಆರೋಪಿಸಿದ್ದರು.

ಪಾಟೀಲರು ಹೇಳುವುದೆಲ್ಲ ವೇದವಾಕ್ಯವೇ? ಎಂದು ಪ್ರಶ್ನಿಸಿದ್ದ ಅವರು, ಒಂದು ವೇಳೆ ಎಚ್.ಕೆ. ಪಾಟೀಲ್ ಸಚಿವರಾಗಿದ್ದ ಸಂದರ್ಭದಲ್ಲಿ ಕೋವಿಡ್ ಬಂದಿದ್ದರೆ, ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಹೆಣಗಳ ರಾಶಿ ಬೀಳುತ್ತಿದ್ದವು. ಅವರು ಕೆವಿಕೆಯಲ್ಲಿ ಕದ ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದರು. ಇತ್ತ ಜನರು ಹೆಣವಾಗುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಎಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಮೇಲೆ ವಿಶ್ವಾಸ ಇಲ್ಲವೆಂದರೇ ಅವನನ್ನೇ ಮಂತ್ರಿಮಾಡಬೇಕಿತ್ತು ಎಂದು ಎಚ್.ಕೆ. ಪಾಟೀಲ ಅವರ ವಿರುದ್ಧ ಏಕ ವಚನದಲ್ಲಿಯೇ ಸಂಬೋಧಿಸಿದ್ದರು. ಸದ್ಯ ಈ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಅಂದು ನಾನು ಮಾತಿನ ಭರದಲ್ಲಿ ತಾಳ್ಮೆ ಕಳೆದುಕೊಂಡು ಮಾತನಾಡಿದ್ದೆ. ಆ ಸಂದರ್ಭದಲ್ಲಿ ನಾನು ಹಿರಿಯ ನಾಯಕರ ಬಗ್ಗೆ ಏಕವಚನದಲ್ಲಿಯೇ ಮಾತನಾಡಿದ್ದೆ. ಆ ರೀತಿ ಮಾತನಾಡ ಬಾರದಿತ್ತು. ಹೀಗಾಗಿ ಆ ಮಾತನ್ನು ಹಿಂಪಡೆಯುತ್ತಿದ್ದೇನೆ. ಅಲ್ಲದೇ, ಆ ಮಾತಿಗೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.

error: Content is protected !!