Home Blog Page 3149

ವಿಷ ಇಟ್ಟ ಕಿಡಿಗೇಡಿಗಳು; 30ಕ್ಕೂ ಅಧಿಕ ಹಂದಿಗಳ ಸಾವು

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ನಗರದ ಸಜ್ಜಿಓಣಿಯಲ್ಲಿ ಮಂಗಳವಾರ ರಾತ್ರಿ ಕೆಲ‌ ಕಿಡಿಗೇಡಿಗಳು ಅಲ್ಲಿದ್ದ ಹಂದಿಗಳಿಗೆ ವಿಷ ಇಟ್ಟಿದ್ದರಿಂದ ಮೂವತ್ತಕ್ಕೂ ಅಧಿಕ ಹಂದಿಗಳು ಅಸುನೀಗಿವೆ.
ದುರ್ಗಪ್ಪ ಪೂಜಾರ ಅವರಿಗೆ ಸೇರಿದ ಈ ಹಂದಿಗಳ ಸಾವಿನಿಂದ ಸುಮಾರು 40 ಸಾವಿರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ವಿಷ ಇಟ್ಟಿದ್ದಾರೆ.
ಹಂದಿ ಸಾಕಾಣಿಕೆಯಿಂದ ಬದುಕು ಸಾಗಿಸುತ್ತಿರುವ ನಮಗೆ ದಿಢೀರನೇ ಇಷ್ಟೊಂದು‌‌ ನಷ್ಟ ಎದುರಿಸುವ ಶಕ್ತಿ ಇಲ್ಲ ಎಂದು ಅವರು ಅಲವತ್ತುಕೊಂಡರು.

ಪೆಟ್ರೋಲ್ ಸುರಿದು ಮಗನನ್ನೇ ಮುಗಿಸಲು ಯತ್ನಿಸಿದ ತಂದೆ!

ವಿಜಯಸಾಕ್ಷಿ ಸುದ್ದಿ, ಮಂಗಳೂರು

ತಂದೆಯೇ ಮಗನನ್ನು ಮನೆಯಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಜಪ್ಪಿನಮೊಗರು ಗ್ರಾಮದ ಕೊಪ್ಪರಿಗೆಗುತ್ತು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಿಶ್ವನಾಥ ಶೆಟ್ಟಿ ಎಂಬ ವ್ಯಕ್ತಿಯೇ ತಮ್ಮ ಮಗ ಸ್ವಾಮಿತ್ ಶೆಟ್ಟಿ(25) ಯನ್ನು ಕೂಡಿ ಹಾಕಿ ಪೆಟ್ರೋಲ್ ಸುರಿದು ಕೊಲೆ ಮಾಡಲು ಯತ್ನಿಸಿದವರು.

ದನಗಳನ್ನು ಹೊರಗೆ ಕಟ್ಟುವ ವಿಚಾರವಾಗಿ ತಂದೆ ಹಾಗೂ ಮಗನ ಮಧ್ಯೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಆ ನಂತರ ಮಗನನ್ನು ಮನೆಯೊಳಗೆ ಕೂಡಿ ಹಾಕಿದ್ದಾನೆ. ಅದೇ ಸಿಟ್ಟಿನಲ್ಲಿ ಪುತ್ರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸುಟ್ಟಗಾಯಗಳಿಂದ ಬಳಲುತ್ತಿರುವ ಸ್ವಾಮಿತ್ ಶೆಟ್ಟಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಕನಾಡಿ ನಗರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಮರ್ಯಾದೆ ಹತ್ಯೆಯಿಂದ ಬೆಚ್ಚಿ ಬಿದ್ದ ವಿಜಯಪುರ!

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಅಪ್ರಾಪ್ತ ಬಾಲಕಿಯ ತಂದೆಯೇ ಸ್ವಂತ ಮಗಳು ಹಾಗೂ ಆಕೆಯ ಪ್ರಿಯಕರನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಗಡಿ ಗ್ರಾಮ ಸಲಾದಹಳ್ಳಿಯಲ್ಲಿ ಈ ಘನಘೋರ ಕೃತ್ಯ ನಡೆದಿದೆ. ಗ್ರಾಮದ ಯುವಕ ಬಸವರಾಜ ಬಡಿಗೇರ (19) ಹಾಗೂ ಪಕ್ಕದ ಗ್ರಾಮ ಖಾನಾಫುರದ ಅಪ್ರಾಪ್ತ ಬಾಲಕಿ ಕೊಲೆಯಾದವರು.

ಅಪ್ರಾಪ್ತ ಬಾಲಕಿಯು ಇಂದು ತನ್ನ ಪ್ರಿಯಕರ ಬಸವರಾಜ ಬಡಿಗೇರನನ್ನು ಭೇಟಿ ಮಾಡಿದ್ದಳು. ಈ ಸಂದರ್ಭದಲ್ಲಿ ಇಬ್ಬರನ್ನೂ ಒಟ್ಟಿಗೆ ಕಂಡ ಬಾಲಕಿಯ ತಂದೆ ಇಬ್ಬರನ್ನೂ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಅಕ್ಕಪಕ್ಕದ ಗ್ರಾಮದವರಾದ ಬಸವರಾಜ್ ಹಾಗೂ ಅಪ್ರಾಪ್ತ ಬಾಲಕಿ ಅನ್ಯಕೋಮಿನವರಾದರೂ ಇಬ್ಬರ ಮಧ್ಯೆ ಈ ಹಿಂದೆ ಸ್ನೇಹ ಉಂಟಾಗಿ ಅದು ಪ್ರೇಮಾಂಕುರಕ್ಕೆ ತಿರುಗಿತ್ತು. ಆದರೆ, ಇವರಿಬ್ಬರ ಪ್ರೇಮಕ್ಕೆ ಬಾಲಕಿಯರ ಮನೆಯವರ ತೀವ್ರ ವಿರೋಧವಿತ್ತು.
ಇಷ್ಟಾದರೂ ಬಸವರಾಜ್ ಹಾಗೂ ಅಪ್ರಾಪ್ತೆ ನಡುವೆ ಪ್ರೀತಿ ಕಡಿಮೆಯಾಗಿರಲಿಲ್ಲ. ಇಂದು ಇಬ್ಬರು ಪ್ರೇಮಿಗಳು ಸಲಾದಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಒಟ್ಟಿಗೆ ಇದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಅಪ್ರಾಪ್ತೆಯ ಬಾಲಕಿಯ ತಂದೆ, ಇಬ್ಬರನ್ನು ನೋಡಿ ಕೋಪಗೊಂಡು ಕೊಲೆ ಮಾಡಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಕಲಕೇರಿ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ. ಘಟನೆಯಿಂದಾಗಿ ಸಲಾದಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ರಾಜ್ಯದಲ್ಲಿ ಇಂದು ಸೋಂಕಿತರ ಸಂಖ್ಯೆ ಹೇಗಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದು ಸೋಂಕಿತರ ಸಂಖ್ಯೆ ತಗ್ಗಿದ್ದು, ಇಂದು ಕೇವಲ 3,709 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 139 ಜನ ಸಾವನ್ನಪ್ಪಿದ್ದಾರೆ.

ಇಂದು 8,111 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 1,18,592 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಇದುವರೆಗೂ 3,34,164 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಇಂದು 803 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 26 ಜನ ಸಾವನ್ನಪ್ಪಿದ್ದಾರೆ. ಸದ್ಯ ನಗರದಲ್ಲಿ 69,344 ಸಕ್ರಿಯ ಪ್ರಕರಣಗಳಿವೆ. ಇಂದು ಬೆಂಗಳೂರಿನಲ್ಲಿ 1,745 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ರಾಜ್ಯದ ಬಾಗಲಕೋಟೆ 7, ಬಳ್ಳಾರಿ 44, ಬೆಳಗಾವಿ 134, ಬೆಂಗಳೂರು ಗ್ರಾಮಾಂತರ 103, ಬೆಂಗಳೂರು ನಗರ 803, ಬೀದರ್ 6, ಚಾಮರಾಜನಗರ 52, ಚಿಕ್ಕಬಳ್ಳಾಪುರ 38, ಚಿಕ್ಕಮಗಳೂರು 163, ಚಿತ್ರದುರ್ಗ 77, ದಕ್ಷಿಣ ಕನ್ನಡ 374, ದಾವಣಗೆರೆ 90, ಧಾರವಾಡ 30, ಗದಗ 11, ಹಾಸನ 309, ಹಾವೇರಿ 13, ಕಲಬುರಗಿ 14, ಕೊಡಗು 161, ಕೋಲಾರ 65, ಕೊಪ್ಪಳ 25, ಮಂಡ್ಯ 124, ಮೈಸೂರು 486, ರಾಯಚೂರು 15, ರಾಮನಗರ 20, ಶಿವಮೊಗ್ಗ 169, ತುಮಕೂರು 144, ಉಡುಪಿ 81, ಉತ್ತರ ಕನ್ನಡ 114, ವಿಜಯಪುರ 16 ಮತ್ತು ಯಾದಗಿರಿಯಲ್ಲಿ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮತ್ತೆ ನಾಲ್ಕು ಜಿಲ್ಲೆಗಳಲ್ಲಿ ಅನ್ ಲಾಕ್ ಜಾರಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಹಲವು ಜಿಲ್ಲೆಗಳಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭಿಸಲಾಗಿತ್ತು. ಸದ್ಯ ಈ ಸಾಲಿಗೆ ಮತ್ತೆ ನಾಲ್ಕು ಜಿಲ್ಲೆಗಳು ಸೇರ್ಪಡೆಗೊಂಡಿವೆ.

ದಕ್ಷಿಣ ಕನ್ನಡ, ಚಾಮರಾಜನಗರ, ಹಾಸನ, ದಾವಣಗೆರೆ ಜಿಲ್ಲೆಗಳನ್ನು ಅನ್ ಲಾಕ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಜಿಲ್ಲೆಗಳಲ್ಲಿ ಕೂಡ ಸಂಜೆ 5ರ ವರೆಗೆ ಅಂಗಡಿ – ಮುಂಗಟ್ಟು ತೆರೆಯಲು ಸರ್ಕಾರ ಅವಕಾಶ ನೀಡಿದೆ.

ನಿನ್ನೆಯಷ್ಟೇ ಸರ್ಕಾರ 6 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಿ ಘೋಷಿಸಿತ್ತು. ಇದರ ಬೆನ್ನಲ್ಲಿಯೇ ಸದ್ಯ ಮತ್ತೆ ನಾಲ್ಕು ಜಿಲ್ಲೆಗಳನ್ನು ಅನ್ ಲಾಕ್ ಮಾಡಿದೆ. ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಿಗೆ ನಿನ್ನೆಯಷ್ಟೇ ಅನ್ ಲಾಕ್ ನಿಯಮ ಜಾರಿಗೊಳಿಸಲಾಗಿತ್ತು. ಇಂದು ಮತ್ತೆ ನಾಲ್ಕು ಜಿಲ್ಲೆಗಳಲ್ಲಿ ಸಡಿಲಿಕೆ ಘೋಷಣೆಯಾಗಿದೆ.

ಈ ಮೊದಲು ಅನ್ಲಾಕ್ ಪ್ರಕಿಯೆಗೆ ಚಾಲನೆ ನೀಡಿದ್ದ ಸಿಎಂ, ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಜಿಲ್ಲೆ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ, ಬೀದರ್ ಹಾಗೂ ಧಾರವಾಡ ಜಿಲ್ಲೆಗಳಿಗೆ ಮಾತ್ರ ಈ ಸಡಿಲಿಕೆ ಅನ್ವಯವಾಗಲಿದೆ ಎಂದು ತಿಳಿಸಿದ್ದರು.

ಕೊರೊನಾ; ಮಂಗಳವಾರ ಯಥಾಸ್ಥಿತಿ ಕಾಯ್ದುಕೊಂಡ ಗದಗ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಇಂದು 21 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಕಳೆದ ಮಂಗಳವಾರವೂ 21 ಜನರಲ್ಲಿ ಸೋಂಕು ಪತ್ತೆಯಾಗಿತ್ತು.

ಇಂದು 21 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25649 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -03, ಮುಂಡರಗಿ-03, ನರಗುಂದ-04, ರೋಣ-03, ಶಿರಹಟ್ಟಿ-08, ಹೊರಜಿಲ್ಲೆಯ-00 ಸೇರಿದಂತೆ 21 ಪ್ರಕರಣಗಳು ದೃಢಪಟ್ಟಿವೆ.

ಇಂದು ಕೋವಿಡ್ ನಿಂದ ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ 294 ಜನರು ಮೃತಪಟ್ಟಿದ್ದಾರೆ.

ಇಂದು 53 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25082 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 273 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 70 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ – ಯೆಲ್ಲೋ ಅಲರ್ಟ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಕಳೆದ 10 ದಿನಗಳಿಂದ ಮಳೆಯರಾಯನ ಅಬ್ಬರ ಜೋರಾಗಿದ್ದು, ಹಲವೆಡೆ ಪ್ರವಾಹ ಭೀತಿಯೂ ಎದುರಾಗಿದೆ. ಇಂದು ಮತ್ತೆ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಈ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು,ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಮತ್ತೆ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾಯಿಸಲು ಅವಕಾಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಲಾಕ್ ಡೌನ್ ಹಿನ್ನೆಲೆಯಲ್ಲಿ ಬೇರೆ ಬೇರೆ ಊರುಗಳಿಗೆ ತೆರಳಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ವಲಸೆ ಕಾರ್ಮಿಕರ ಮಕ್ಕಳು ಹಾಗೂ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳು ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿರುವುದರಿಂದ, ಆ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಬಾರದು ಎನ್ನುವ ಕಾರಣಕ್ಕೆ ಮಹತ್ತರವಾದ ನಿರ್ಣಯ ತಗೆದುಕೊಳ್ಳಲಾಗಿದೆ.

ಈ ನಿಯಮದಂತೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಮ್ಮ ಶಾಲೆಗಳ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆಯಲು ಕಷ್ಟವಾದರೆ, ತಾವಿರುವ ಸ್ಥಳದ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಬಹುದು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ತಮ್ಮ ಸ್ವಂತ ಜಿಲ್ಲೆ, ತಾಲೂಕುಗಳ ವ್ಯಾಪ್ತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.

ಮೂತ್ರ ವಿಸರ್ಜನೆ ಸಯಮದಲ್ಲಿ ವಿದ್ಯುತ್ ಶಾಕ್ ಗೆ ಇಬ್ಬರು ಬಲಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮೂತ್ರ ವಿಸರ್ಜನೆಗೆ ತೆರಳಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ನಿಂದಾಗಿ ಇಬ್ಬರು ಕಾರ್ಮಿಕರು ದುರ್ಮರಣ ಹೊಂದಿರುವ ಘಟನೆ ನಗರದಲ್ಲಿ ನಡೆದಿದೆ. ಈ ಘಟನೆ ನಗರದ ಕಲಾಸಿಪಾಳ್ಯದಲ್ಲಿ ನಡೆದಿದೆ. ಕರಿಯಪ್ಪ (22) ಹಾಗೂ ನಾಗರಾಜು (19) ಇಬ್ಬರೂ ಮೃತ ದುರ್ದೈವಿಗಳು.

ಈ ಕಾರ್ಮಿಕರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನವರು ಎಂದು ತಿಳಿದು ಬಂದಿದೆ. ಇಬ್ಬರೂ ಒಜಾಸ್ ಎನ್ನುವ ಕಂಪನಿಯಲ್ಲಿ ಕಳೆದೊಂದು ವರ್ಷದಿಂದ ಕೆಲಸ ಮಾಡುತ್ತಿದ್ದರು. ರಾಜಕಾಲುವೆ ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡಿದ್ದ ಇವರು ನಿನ್ನೆ ಮಲ್ಲಸಂದ್ರ ಬಳಿಯ ರಾಜಕಾಲುವೆ ಕೆಲಸ ಮುಗಿಸಿ ಎಚ್‌ ಎಸ್‌ ಆರ್ ಲೇಔಟ್‌ ನಲ್ಲಿರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಲಾಲ್ ಬಾಗ್ ರಸ್ತೆಯ ನಾಲೆಯ ರಸ್ತೆ ಬಳಿ ಕೆಲಸ ಮಾಡುತ್ತಿದ್ದ ಸಂಗಡಿಗರನ್ನು ಕರೆದೊಯ್ಯಲು ಬಂದಿದ್ದಾರೆ. ಆಗ ಇಬ್ಬರೂ ಮೂತ್ರ ವಿಸರ್ಜನೆಗೆ ತೆರಳಿದ್ದಾರೆ. ಈ ಸಮಯದಲ್ಲಿ ತುಂಡಾಗಿದ್ದ ವಿದ್ಯುತ್ ವೈರ್ ತಗುಲಿ ಸ್ಥಳದಲ್ಲಿಯೇ ಇಬ್ಬರೂ ಸಾವನ್ನಪ್ಪಿದ್ದಾರೆ.

ಘಟನೆಯ ಕುರಿತು ಕಲಾಸಿಪಾಳ್ಯ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304(ಎ) ಅಡಿಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಲಸಿಕೆ ಹಾಕಿಸಿಕೊಳ್ಳಬಾರದೆಂದು ಊರನ್ನೇ ಖಾಲಿ ಮಾಡಿರುವ ಜನರು!

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಲಸಿಕೆ ಪಡೆಯಬೇಕಾಗುತ್ತದೆಂದು ಮನೆಗೆ ಬೀಗ ಹಾಕಿ ಬಹುತೇಕ ಗ್ರಾಮಸ್ಥರು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಲು ಹೋಗಿದ್ದ ಅಧಿಕಾರಿಗಳಿಗೆ ಶಾಕ್ ಆಗಿದೆ.
ಊರಿನ ಬಹುತೇಕ ಮನೆಗಳಿಗೆ ಬೀಗ ಹಾಕಿ ಗ್ರಾಮಸ್ಥರು ಪರಾರಿಯಾಗಿದ್ದಾರೆ. ಯಾದಗಿರಿ ತಾಲೂಕಿನ ಕಂಚಗಾರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಲಸಿಕೆ ಪಡೆಯಲು ಹಿಂದೇಟು ಹಾಕಿ, ಮನೆಗಳಿಗೆ ಬೀಗ ಹಾಕಿ ಗ್ರಾಮಸ್ಥರು ಹೋಗಿದ್ದಾರೆ.

ಇನ್ನೂ ಹಲವರು ಮನೆಯೊಳಗೆ ಇದ್ದರೂ ಹೊರಬಾರದೆ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹಲವರು ಲಸಿಕೆ ಪಡೆಯಿದಿದ್ದರೂ ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಅಧಿಕಾರಿಗಳ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ.

ಹೀಗಾಗಿ ಸಹಾಯಕ ಆಯುಕ್ತ ಪ್ರಶಾಂತ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಮನೆಯಲ್ಲಿದ್ದವರನ್ನು ಹುಡುಕಿ ತಿಳುವಳಿಕೆ ಹೇಳಿ, ಲಸಿಕೆ ಹಾಕಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಆದರೂ ಗ್ರಾಮದ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಬಹುತೇಕ ಜನರು ಲಸಿಕೆ ಪಡೆಯದೆ ನಿಷ್ಕಾಳಜಿ ತೋರಿಸುತ್ತಿದ್ದಾರೆ. ಲಸಿಕೆ ಹಾಕಿಸಲು ಅಧಿಕಾರಿಗಳು ಮಾತ್ರ ಸಂಕಷ್ಟ ಪಡುತ್ತಿದ್ದಾರೆ.

error: Content is protected !!