Home Blog Page 315

ಸುಮನಹಳ್ಳಿ ಫ್ಲೈ ಓವರ್‌ನಲ್ಲಿ ಸರಣಿ ಅಪಘಾತ: ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು!

ಬೆಂಗಳೂರು: ನಗರದಲ್ಲಿನ ಸುಮನಹಳ್ಳಿ ಫ್ಲೈ ಓವರ್  ಮೇಲೆ ಸರಣಿ ಅಪಘಾತ ಸಂಭವಿಸಿದ್ದು, ಕಾರು ಹಾಗೂ ಲಾರಿ ಸೇರಿದಂತೆ 7 ರಿಂದ 8 ವಾಹನಗಳು ಪರಸ್ಪರ ಡಿಕ್ಕಿಯಾದ ಘಟನೆ ನಡೆದಿದೆ.

ಅಪಘಾತದಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.

ಮಳೆಯ ಕಾರಣದಿಂದ ಫ್ಲೈ ಓವರ್ ಮೇಲೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರಸ್ತೆ ಮೇಲೆ ಬಿದ್ದಿರುವ ವಾಹನಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.

ಇದೇ ವೇಳೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದ್ದು, ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮಳೆಯ ಸಮಯದಲ್ಲಿ ವಾಹನ ಸವಾರರು ಹೆಚ್ಚು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ: ಹಲವೆಡೆ ರಸ್ತೆ ಜಲಾವೃತ!

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಂಗಳವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಗುಡುಗು ಸಹಿತ ಭಾರಿ ಮಳೆ ಹಾಗೂ ಆಲಿಕಲ್ಲು ಮಳೆಯು ನಗರದಲ್ಲಿ ವ್ಯಾಪಕ ಅವಾಂತರಗಳನ್ನು ಸೃಷ್ಟಿಸಿದೆ.

ಶಿವಾಜಿನಗರ, ಕೆಆರ್ ಪುರ, ಕೋರಮಂಗಲ, ವಸಂತನಗರ, ಹೆಬ್ಬಾಳ ಮತ್ತು ಯಲಹಂಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಮಳೆಯ ತೀವ್ರತೆಗೆ ಹಲವೆಡೆ ಮರಗಳು ಹಾಗೂ ಮರದ ರೆಂಬೆ-ಕೊಂಬೆಗಳು ಧರೆಗೆ ಉರುಳಿವೆ.

ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿಯೂ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ಕೆಲವು ವಾಹನಗಳಿಗೆ ಹಾನಿ ಸಂಭವಿಸಿದೆ. ಆವರಣದಲ್ಲಿ ನೀರು ತುಂಬಿ ಹೊಳೆಯಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಗ್ಗು ಪ್ರದೇಶಗಳ ರಸ್ತೆಗಳು ಜಲಾವೃತವಾಗಿದ್ದು, ದ್ವಿಚಕ್ರ ವಾಹನ ಸವಾರರ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕ್ರೆಸೆಂಟ್ ರಸ್ತೆ ಹಾಗೂ ಶಿವಾನಂದ ಸರ್ಕಲ್ ಪ್ರದೇಶದಲ್ಲಿಯೂ ಮರಗಳು ಉರುಳಿ ಬಿದ್ದ ಘಟನೆಗಳು ವರದಿಯಾಗಿವೆ.

ಮಳೆ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ನಾಗರಿಕರು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಸೂಚಿಸಿದ್ದಾರೆ.

ಗರ್ಭಿಣಿಗೆ ಕ್ಯಾನ್ಸರ್ ಬಂದರೆ ಚಿಕಿತ್ಸೆ ಹೇಗೆ? ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?

0

ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಹಾರ್ಮೋನಲ್ ಹಾಗೂ ದೈಹಿಕ ಬದಲಾವಣೆಗಳು ಸಾಮಾನ್ಯ. ಆದರೆ ಇದೇ ಸಂದರ್ಭದಲ್ಲಿ ಕ್ಯಾನ್ಸರ್ ಪತ್ತೆಯಾದರೆ, ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಆತಂಕ ಉಂಟಾಗುವುದು ಸಹಜ.

ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಅಪರೂಪವಾದರೂ ಗಂಭೀರ ಸ್ಥಿತಿಯಾಗಿದೆ.

ವೈದ್ಯರು ತಿಳಿಸುವಂತೆ, ಹೆಚ್ಚಿನ ಸಂದರ್ಭಗಳಲ್ಲಿ ಕ್ಯಾನ್ಸರ್ ತಾಯಿಯಿಂದ ನೇರವಾಗಿ ಮಗುವಿಗೆ ಹರಡುವುದಿಲ್ಲ. ಆದರೆ ತಾಯಿಯ ಆರೋಗ್ಯ ದುರ್ಬಲವಾಗಿದ್ದರೆ, ಅದರ ಪರಿಣಾಮವಾಗಿ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕ್ಯಾನ್ಸರ್‌ನ ಪ್ರಕಾರ ಮತ್ತು ಅದರ ಹಂತದ ಮೇಲೆ ಅಪಾಯದ ಮಟ್ಟ ಬದಲಾಗುತ್ತದೆ.

ಇದರ ಜೊತೆಗೆ, ಗರ್ಭಾವಸ್ಥೆಯಲ್ಲಿ ನೀಡುವ ಕೆಲವು ಔಷಧಿಗಳು ಮತ್ತು ಚಿಕಿತ್ಸೆಗಳು, ವಿಶೇಷವಾಗಿ ಆರಂಭಿಕ ತಿಂಗಳಲ್ಲಿ, ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ ಜಾಗ್ರತೆ ವಹಿಸಲಾಗುತ್ತದೆ. ವೈದ್ಯರು ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ, ಅಗತ್ಯವಿದ್ದರೆ ಚಿಕಿತ್ಸೆ ಮುಂದೂಡುವುದು ಅಥವಾ ಸುರಕ್ಷಿತ ವಿಧಾನಗಳನ್ನು ಆಯ್ಕೆ ಮಾಡುವುದಾಗಿ ಹೇಳಿದ್ದಾರೆ.

ಗರ್ಭಿಣಿಯ ಆರೋಗ್ಯವನ್ನು ನಿರಂತರವಾಗಿ ಪರಿಶೀಲಿಸುವುದು ಅತ್ಯಂತ ಮುಖ್ಯ. ತಜ್ಞರ ಸಲಹೆ, ಸಮಯೋಚಿತ ಚಿಕಿತ್ಸೆ ಮತ್ತು ನಿಯಮಿತ ತಪಾಸಣೆಗಳ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಬಹುದೆಂದು ವೈದ್ಯರು ತಿಳಿಸಿದ್ದಾರೆ.

ರಾಜ್ಯದಲ್ಲಿ ನಾಲ್ಕು ದಿನ ಮಳೆ ಅಬ್ಬರ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಇಂದು (ಏಪ್ರಿಲ್ 29) ಬೆಂಗಳೂರು ಸೇರಿದಂತೆ 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ನಾಳೆ (ಏಪ್ರಿಲ್ 30) ರಾಜ್ಯದ 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದೆ.

ಮೇ 1ರಂದು ರಾಯಚೂರು, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಾಮರಾಜನಗರ ಸೇರಿ ಒಟ್ಟು 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮೇ 2ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ.

ಈ ಅವಧಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು-ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಭೀಕರ ರಸ್ತೆ ಅಪಘಾತ: ಕಾರು ನಾಲೆಗೆ ಪಲ್ಟಿ, ತಾಯಿ-ಮಗು ಸಾವು, ನಾಲ್ವರಿಗೆ ಗಾಯ

0

ಹಾಸನ: ಧರ್ಮಸ್ಥಳದಿಂದ ವಾಪಸ್ ಆಗುತ್ತಿದ್ದ ವೇಳೆ ಸ್ವಿಫ್ಟ್ ಕಾರು ನಾಲೆಗೆ ಉರುಳಿದ ಪರಿಣಾಮ ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಲ್ಲನಘಟ್ಟ ಗ್ರಾಮದ ಸಮೀಪ ನಡೆದಿದೆ.

ಮೃತರನ್ನು ಪ್ರಿಯಾಂಕ (30) ಮತ್ತು ಅವರ ಒಂದೂವರೆ ವರ್ಷದ ಪುತ್ರ ವೈಭವ್ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ದೇವನಹಳ್ಳಿ ನಿವಾಸಿಗಳಾಗಿದ್ದಾರೆ.

ಮಂಜುನಾಥ್, ಪತ್ನಿ ಪ್ರಿಯಾಂಕ, ಪುತ್ರ ವೈಭವ್ ಹಾಗೂ ಸಂಬಂಧಿಗಳಾದ ಚಂದನ್, ದಿಲೀಪ್ ಮತ್ತು ದೇವರಾಜು ಅವರು KA-02-MT-2690 ಸಂಖ್ಯೆಯ ಸ್ವಿಫ್ಟ್ ಕಾರಿನಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಮರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಹೇಮಾವತಿ ನಾಲೆಗೆ ಬಿದ್ದಿದೆ.

ಅಪಘಾತದ ತೀವ್ರತೆಗೆ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದ ಬಳಿಕ ಕಾರನ್ನು ನಾಲೆಯಿಂದ ಮೇಲಕ್ಕೆತ್ತಲಾಗಿದೆ. ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಕುರಿತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸಾರಿಗೆ ನೌಕರರಿಗೆ ಸಿಹಿ ಸುದ್ದಿ: 26 ತಿಂಗಳ ಹಿಂಬಾಕಿ ಪಾವತಿಗೆ ಸರ್ಕಾರದಿಂದ 1271 ಕೋಟಿ ಅನುಮೋದನೆ

ಬೆಂಗಳೂರು: ರಾಜ್ಯದ ಸಾರಿಗೆ ನೌಕರರಿಗೆ ಸರ್ಕಾರದಿಂದ ಸಿಹಿ ಸುದ್ದಿ ದೊರೆತಿದ್ದು, 26 ತಿಂಗಳ ಹಿಂಬಾಕಿ ವೇತನ ಪಾವತಿಗೆ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಈ ಸಂಬಂಧ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.

ಒಟ್ಟು 1,271 ಕೋಟಿ ರೂಪಾಯಿ ಹಿಂಬಾಕಿ ಪಾವತಿಗೆ ಸರ್ಕಾರ ಅನುಮೋದನೆ ನೀಡಿದ್ದು, ಮೊದಲ ಹಂತದಲ್ಲಿ 450 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 2021ರ ಜನವರಿ 1ರಿಂದ 2023ರ ಫೆಬ್ರವರಿ 28ರವರೆಗೆ ಬಾಕಿ ಉಳಿದಿರುವ ವೇತನವನ್ನು ಈ ಮೂಲಕ ಪಾವತಿಸಲಾಗುತ್ತಿದೆ.

ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಸಹಾನುಭೂತಿಯ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದರ ಪ್ರಯೋಜನ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ನೌಕರರಿಗೆ ಲಭ್ಯವಾಗಲಿದೆ.

ನೌಕರರಿಗೆ ಏಕಕಾಲದಲ್ಲಿ ಹಣ ಪಾವತಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಕಳೆದ ಫೆಬ್ರವರಿಯಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಾರಿಗೆ ನೌಕರರ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, 38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ಬಾಕಿಯನ್ನು ಪಾವತಿಸಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದರು. ಬಜೆಟ್ ನಂತರ 1,271 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂಬ ಭರವಸೆಯನ್ನೂ ನೀಡಿದ್ದರು.

ಸಾರಿಗೆ ನೌಕರರು 38 ತಿಂಗಳ ಸಂಪೂರ್ಣ ಹಿಂಬಾಕಿ ಪಾವತಿ, ಸರ್ಕಾರಿ ನೌಕರರಿಗೆ ಸಮಾನ ವೇತನ, ಕಾರ್ಮಿಕರ ಮೇಲಿನ ಕಿರುಕುಳಕ್ಕೆ ತೆರೆ ಹಾಗೂ 2024ರ ಜನವರಿ 1ರಿಂದ ಹೊಸ ವೇತನ ಜಾರಿಗೆ ತರಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದರು.

ಸರ್ಕಾರದ ಈ ನಿರ್ಧಾರ ಸಾರಿಗೆ ನೌಕರರಲ್ಲಿ ಸಂತಸ ಮೂಡಿಸಿದ್ದು, ಉಳಿದ ಬೇಡಿಕೆಗಳ ಈಡೇರಿಕೆಗೆ ಕೂಡ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಶಿವಕುಮಾರ್ ಹುಟ್ಟುಹಬ್ಬದಂದು ಗುಡ್ ನ್ಯೂಸ್ ಬಗ್ಗೆ ನನಗೆ ಗೊತ್ತಿಲ್ಲ: ಡಿ.ಕೆ. ಸುರೇಶ್

ಬೆಂಗಳೂರು: ಗುಡ್ ನ್ಯೂಸ್ ಬಗ್ಗೆ ನನಗೆ ಗೊತ್ತಿಲ್ಲ. ಪ್ರತಿಸಲವೂ ಗುಡ್ ನ್ಯೂಸ್ ಇದ್ದೇ ಇರುತ್ತದೆ. ಕೆಲವೊಂದು ಸಲ ಪಕ್ಷದ ಕೆಲಸ, ಇನ್ನೊಮ್ಮೆ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗುತ್ತಿರುತ್ತೇವೆ. ಆಗಾಗ್ಗೆ ಸರ್ಕಾರದ ಕೆಲಸಗಳಿಗೂ ಹೋಗಿರುತ್ತೇವೆ. ಇದರಲ್ಲಿ ವಿಶೇಷತೆ ಏನೂ ಇಲ್ಲ” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಹೇಳಿದರು.

ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ಕಚೇರಿಯಲ್ಲಿ ಬುಧವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಡಿಸಿಎಂ ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಏನಾದರೂ ಗುಡ್ ನ್ಯೂಸ್ ಇದೆಯೇ ಎಂದು ಕೇಳಿದಾಗ, “ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಅವರು ಹುಟ್ಟುಹಬ್ಬಕ್ಕೆ ಯಾವುದೇ ಪ್ಲೆಕ್ಸ್, ಬ್ಯಾನರ್ ಹಾಕಬೇಡಿ ಎಂದಿದ್ದಾರೆ. ಎಲ್ಲರೂ ದಯವಿಟ್ಟು ಇದನ್ನು‌ ಪಾಲನೆ ಮಾಡುವುದು ಒಳಿತು” ಎಂದರು‌.

ಅಧಿಕಾರ ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲವೇ ಎಂದು ಕೇಳಿದಾಗ, “ಈ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ. ಇದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ಪಾಲನೆ ಮಾಡುತ್ತೇವೆ ಎಂದು ಹೇಳಿದ್ದೇವೆ” ಎಂದರು‌.

ಶಾಸಕರ ಒತ್ತಡ ಹೆಚ್ಚಾಗಿರುವ ಬಗ್ಗೆ ಕೇಳಿದಾಗ, “ಮಂತ್ರಿಗಳಾಗಬೇಕು ಎಂಬ ಒತ್ತಡ ಇದೆ” ಎಂದರು. ಈ ಬಾರಿಯ ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ನಾನು ಹಾಗೂ ಶಿವಕುಮಾರ್ ಅವರು ಆಗಾಗ್ಗೆ ದೆಹಲಿಗೆ ಹೋಗುತ್ತಲೇ ಇರುತ್ತೇವೆ. ಅಪರೂಪಕ್ಕೆ ಹೋಗುವುದಾದರೆ ನೀವು ಕೇಳಬೇಕಿತ್ತು. ತಿಂಗಳಿಗೆ ಎರಡು ಸಲವಾದರೂ ಹೋಗುತ್ತೇವೆ” ಎಂದರು.

594 ಕಿ.ಮೀ ಗಂಗಾ ಎಕ್ಸ್ ಪ್ರೆಸ್ʼವೇ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ!

0

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮೀರತ್‌ನಿಂದ ಪ್ರಯಾಗ್‌ರಾಜ್‌ವರೆಗೆ ಸಂಪರ್ಕ ಕಲ್ಪಿಸುವ 594 ಕಿಲೋಮೀಟರ್ ಉದ್ದದ ಮಹತ್ವಾಕಾಂಕ್ಷಿ ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಇದೇ ವೇಳೆ ಎರಡು ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೂ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ವಾರಾಣಸಿಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಾಬಾ ವಿಶ್ವನಾಥ ಧಾಮದವರೆಗೆ ರೋಡ್‌ ಶೋ ನಡೆಸಿ ಭಕ್ತರ ಅಭಿವಾದನ ಸ್ವೀಕರಿಸಿದರು. ನಂತರ ಸರ್ವತ್ರ ಸಿದ್ಧಿ ಯೋಗದಲ್ಲಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದರು.

ಹರ್ದೊಯಿ ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ಈ ಆರು ಪಥಗಳ ಗ್ರೀನ್‌ಫೀಲ್ಡ್ ಹೈ-ಸ್ಪೀಡ್ ಕಾರಿಡಾರ್‌ 36,230 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಮೀರತ್, ಉನ್ನಾವೊ, ರಾಯ್‌ಬರೇಲಿ, ಪ್ರತಾಪ್‌ಗಢ, ಪ್ರಯಾಗ್‌ರಾಜ್‌, ಬುಲಂದ್‌ಶಹರ್‌, ಹಾಪುರ್‌, ಅಮ್ರೋಹಾ, ಸಂಭಲ್‌, ಬದೌನ್ ಹಾಗೂ ಶಹಜಹಾನ್‌ಪುರ ಸೇರಿದಂತೆ ಒಟ್ಟು 13 ಜಿಲ್ಲೆಗಳ ಮೂಲಕ ಈ ಎಕ್ಸ್‌ಪ್ರೆಸ್‌ವೇ ಹಾದು ಹೋಗುತ್ತದೆ.

ಉತ್ತರ ಪ್ರದೇಶದ ಪಶ್ಚಿಮ, ಮಧ್ಯ ಮತ್ತು ಪೂರ್ವ ಭಾಗಗಳನ್ನು ವೇಗವಾಗಿ ಸಂಪರ್ಕಿಸುವ ಈ ಕಾರಿಡಾರ್ ರಾಜ್ಯದ ಸಾರಿಗೆ ಮೂಲಸೌಕರ್ಯಕ್ಕೆ ಹೊಸ ಆಯಾಮ ನೀಡಲಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಈ ಯೋಜನೆಯಿಂದ ಮೀರತ್‌ನಿಂದ ಪ್ರಯಾಗ್‌ರಾಜ್‌ವರೆಗೆ ಪ್ರಯಾಣ ಸಮಯವು ಈಗಿನ 10ರಿಂದ 12 ಗಂಟೆಗಳ ಬದಲಿಗೆ ಕೇವಲ 6 ಗಂಟೆಗೆ ಇಳಿಕೆಯಾಗಲಿದೆ. ಇದರಿಂದ ಸರಕು ಹಾಗೂ ಪ್ರಯಾಣಿಕರ ಸಂಚಾರ ಹೆಚ್ಚು ಸುಗಮವಾಗಲಿದೆ.

ಶಹಜಹಾನ್‌ಪುರ ಜಿಲ್ಲೆಯಲ್ಲಿ 3.5 ಕಿಲೋಮೀಟರ್ ಉದ್ದದ ತುರ್ತು ವಿಮಾನ ಲ್ಯಾಂಡಿಂಗ್ ಸೌಲಭ್ಯವನ್ನು ಈ ಯೋಜನೆಯಲ್ಲಿ ಕಲ್ಪಿಸಲಾಗಿದೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಗಾ ಎಕ್ಸ್‌ಪ್ರೆಸ್‌ವೇ ಕೇವಲ ರಸ್ತೆ ಯೋಜನೆಯಷ್ಟೇ ಅಲ್ಲದೆ, ಪ್ರಮುಖ ಆರ್ಥಿಕ ಕಾರಿಡಾರ್ ಆಗಿಯೂ ಬೆಳೆಯಲಿದೆ. ಸುಮಾರು 2,635 ಹೆಕ್ಟೇರ್ ಪ್ರದೇಶದಲ್ಲಿ ಲಾಜಿಸ್ಟಿಕ್ಸ್ ಹಾಗೂ ಉತ್ಪಾದನಾ ಕೇಂದ್ರಗಳ ಅಭಿವೃದ್ಧಿಗೆ ಇದು ನೆರವಾಗಲಿದೆ. ಇದರಿಂದ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗುವುದರ ಜೊತೆಗೆ ಪೂರೈಕೆ ಸರಪಳಿ ದಕ್ಷತೆ ಹೆಚ್ಚಲಿದೆ.

ಇದರ ಜೊತೆಗೆ ರೈತರಿಗೆ ನಗರ ಹಾಗೂ ರಫ್ತು ಮಾರುಕಟ್ಟೆಗಳಿಗೆ ನೇರ ಸಂಪರ್ಕ ದೊರೆಯಲಿದ್ದು, ಉತ್ತಮ ಬೆಲೆ ಮತ್ತು ಹೆಚ್ಚುವರಿ ಆದಾಯ ಸಿಗುವ ನಿರೀಕ್ಷೆಯಿದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದ್ದು, ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ಕೆ.ಆರ್.ಪೇಟೆಯಲ್ಲಿ ಭ್ರೂಣಲಿಂಗ ಪತ್ತೆ ಜಾಲ ಬಯಲು: ಮೂವರು ಖಾಸಗಿ ವೈದ್ಯರ ಬಂಧನ

0

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಅಕ್ರಮ ಭ್ರೂಣಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಖಾಸಗಿ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಚೇತನಾ ನರ್ಸಿಂಗ್ ಹೋಮ್‌ನ ವೈದ್ಯೆ ಡಾ. ದಿವ್ಯಾ, ನಾವಿ ಡಯಾಗ್ನಸ್ಟಿಕ್ ಸೆಂಟರ್‌ನ ವೈದ್ಯ ಡಾ. ಹರ್ಷಿತ್ ಹಾಗೂ ಕುಶಾಲ್ ಡಯಾಗ್ನಸ್ಟಿಕ್ ಸೆಂಟರ್‌ನ ಡಾ. ಪರೀಶ್ ಬಂಧಿತರಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣ ಸಂಬಂಧ 31 ಬಾಲಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಸ್ಕ್ಯಾನಿಂಗ್ ನಡೆಸಿರುವ ಆರೋಪ ಕೇಳಿಬಂದಿದ್ದು, ಇದೇ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಪ್ರಿಯಾಂಕಾ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 17 ಆರೋಪಿಗಳ ವಿರುದ್ಧ 12 ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಸರ್ಕಾರಿ ವೈದ್ಯೆ, ಮೂವರು ಖಾಸಗಿ ವೈದ್ಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ ಹಾಗೂ ಕೆಲವು ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಲೋಕಾಯುಕ್ತ ಸಂಸ್ಥೆಯೂ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಇತ್ತೀಚೆಗೆ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯಲ್ಲಿ ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನಸ್ಟಿಕ್ ಸೆಂಟರ್‌ಗಳಲ್ಲಿ ಅಕ್ರಮ ಭ್ರೂಣಲಿಂಗ ಪತ್ತೆಗಾಗಿ ಸ್ಕ್ಯಾನಿಂಗ್ ನಡೆಸಿರುವುದು ಬೆಳಕಿಗೆ ಬಂದಿತ್ತು.

ಪರಿಶೀಲನೆ ವೇಳೆ ನಾವಿ ಡಯಾಗ್ನಸ್ಟಿಕ್ ಸೆಂಟರ್‌ನಲ್ಲಿ 2024ರಲ್ಲಿ 19 ಮತ್ತು 2025ರಲ್ಲಿ 5 ಸೇರಿದಂತೆ ಒಟ್ಟು 24 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿರುವುದು ಪತ್ತೆಯಾಗಿದೆ. ಇದೇ ವೇಳೆ ಕುಶಾಲ್ ಡಯಾಗ್ನಸ್ಟಿಕ್ ಸೆಂಟರ್‌ನಲ್ಲೂ 7 ಬಾಲಗರ್ಭಿಣಿಯರಿಗೆ ಅಕ್ರಮ ಸ್ಕ್ಯಾನಿಂಗ್ ಮಾಡಿರುವ ಆರೋಪ ಕೇಳಿಬಂದಿದೆ.

ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಉಪ ಲೋಕಾಯುಕ್ತ ಬಿ. ವೀರಪ್ಪ ತನಿಖೆಗೆ ಆದೇಶಿಸಿದ್ದರು. ಅವರ ಸೂಚನೆಯ ಮೇರೆಗೆ ಲೋಕಾಯುಕ್ತ ಪೊಲೀಸರು ಏಪ್ರಿಲ್ 17ರಂದು ಜಿಲ್ಲೆಯ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಕೆ.ಆರ್.ಪೇಟೆಯ ಖಾಸಗಿ ಡಯಾಗ್ನಸ್ಟಿಕ್ ಸೆಂಟರ್‌ಗಳ ಅಕ್ರಮ ಚಟುವಟಿಕೆಗಳು ಬಯಲಾಗಿದ್ದವು.

ಆರೋಗ್ಯ ಇಲಾಖೆ ಅಧಿಕಾರಿಗಳ ದೂರಿನ ಆಧಾರದ ಮೇಲೆ ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 65(1), 64(2)(ಎಂ), 376(2)(ಎನ್) ಹಾಗೂ ಪೋಕ್ಸೋ ಕಾಯ್ದೆ-2017ರ ಸೆಕ್ಷನ್ 6 ಮತ್ತು 21ರಡಿ ಒಟ್ಟು 12 ಪ್ರಕರಣಗಳನ್ನು ದಾಖಲಿಸಲಾಗಿದೆ.

ಗದಗ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಂತರರಾಜ್ಯ ಕಳ್ಳರ ಬೃಹತ್ ಜಾಲ ಬಯಲು! 11 ಆರೋಪಿಗಳ ಬಂಧನ

ಗದಗ: ಜಿಲ್ಲೆಯಲ್ಲಿ ಸರಣಿ ಮನೆ ಕಳ್ಳತನ ಪ್ರಕರಣಗಳಿಂದ ಆತಂಕ ಸೃಷ್ಟಿಸಿದ್ದ ಅಂತರರಾಜ್ಯ ಕಳ್ಳರ ಸಂಘಟಿತ ಜಾಲವನ್ನು ಗದಗ ಪೊಲೀಸರು ಭೇದಿಸಿ ಭಾರೀ ಸಾಧನೆ ಮಾಡಿದ್ದಾರೆ. ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದ ತನಿಖೆಯಲ್ಲಿ ಒಟ್ಟು 14 ಪ್ರಕರಣಗಳನ್ನು ಪತ್ತೆ ಹಚ್ಚಿ, 11 ಆರೋಪಿಗಳನ್ನು ಬಂಧಿಸಿ, ಸುಮಾರು ₹1,26,53,780 ಮೌಲ್ಯದ ಆಭರಣ ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ

ಎಪ್ರಿಲ್ 1, 2026ರಂದು ಬೆಟಗೇರಿ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಖ್ಯೆ 22/2025ರಲ್ಲಿ ₹3.25 ಲಕ್ಷ ಮೌಲ್ಯದ ಆಭರಣ ಕಳವು ಮಾಡಲಾಗಿತ್ತು. ವಿಜಯಲಕ್ಷ್ಮೀ ಕೋಂ ಸಂಪತ್ ಕುಮಾರ ಜಾಡಗೌಡ ಅವರು ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ IPS ಹಾಗೂ ಉಪ ಪೊಲೀಸ್ ಅಧೀಕ್ಷಕ ಮುರ್ತಾಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಬೆಟಗೇರಿ ಠಾಣೆಯ ಸಿಪಿಐ ಧೀರಜ್ ಬಿ. ಸಿಂಧೆ, ಪಿಎಸ್ಐ ಮಾರುತಿ ಎಸ್. ಜೋಗದಂಡಕರ, ಎಎಸ್ಐಗಳಾದ ಐ.ಎಸ್. ಲಮಾಣಿ, ಬಿ.ಎಫ್. ಯರಗುಪ್ಪಿ ಹಾಗೂ ಸಿಬ್ಬಂದಿಗಳಾದ ಜಿ.ಡಿ. ಹೂಲಿ, ಆನಂದಸಿಂಗ್ ದೊಡಮನಿ, ಎನ್.ಡಿ. ನದಾಫ್, ಎಸ್.ಬಿ. ಬಣಕಲ್, ಪರಶುರಾಮ ದೊಡಮನಿ,

ಪ್ರವೀಣ ಕಲ್ಲೂರ, ನಾಗರಾಜ ಬರಡಿ, ಅಶೋಕ್ ಗದಗ, ಅವಿನಾಶಸಿಂಗ್ ಬ್ಯಾಳಿ, ಮಂಜುನಾಥ ಅಸೂಟಿ, ಕುಮಾರ ತಿಗರಿ, ಅಣ್ಣಪ್ಪ ಕವಲೂರ, ಎನ್.ಡಿ. ಹುಬ್ಬಳ್ಳಿ, ಎಸ್.ಹೆಚ್. ದೊಣಿ ಹಾಗೂ ತಾಂತ್ರಿಕ ಸಹಾಯಕರಾದ ಗುರುರಾಜ ಬೂದಿಹಾಳ, ಸಂಜು ಕೊರಡೂರು ಒಳಗೊಂಡ ವಿಶೇಷ ತಂಡ ಕಾರ್ಯಚರಣೆ ನಡೆಸಿ 1) ಸುರೇಶ್ @ ಸಣ್ಣ ಸುರೇಶ್, ತಂದೆ ಸತ್ಯಪ್ಪ ಸಿಂಗನೂರು, ವಯಸ್ಸು 27 ವರ್ಷ, ಸಾ: ಕಾದ್ರೋಳಿ, ತಾ: ಕಿತ್ತೂರು, ಜಿ: ಬೆಳಗಾವಿ, 2) ನಾಗಪ್ಪ, ತಂದೆ ತಿಮ್ಮಪ್ಪ ದುರಗಮುರಗಿ, ವಯಸ್ಸು 45 ವರ್ಷ,

ಸಾ: ಅಳ್ನಾವರ, ಜಿ: ಧಾರವಾಡ, 3) ಶಿವು, ತಂದೆ ಸುಂಕಪ್ಪ ಬೆಳಗಂಟಿ, ವಯಸ್ಸು 24 ವರ್ಷ, ಸಾ: ಗರಗ, ತಾ/ಜಿ: ಧಾರವಾಡ, 4) ಸುರೇಶ್ @ ದೊಡ್ಡ ಸುರೇಶ್, ತಂದೆ ಬಾಬು ತವಮ್ಮನವರ್, ವಯಸ್ಸು 35 ವರ್ಷ, ಸಾ: ದಡ್ಡಿ, ತಾ: ಹುಕ್ಕೇರಿ, ಜಿ: ಬೆಳಗಾವಿ, 5) ಶಂಕರ @ ಕುಡ್ಡ ಶಂಕರ, ತಂದೆ ಯಲ್ಲಪ್ಪ ಕರಿ, ವಯಸ್ಸು 24 ವರ್ಷ, ಸಾ: ವೆಂಕಟಾಪುರ, ತಾ/ಜಿ: ಧಾರವಾಡ, 6) ಮಂಜುನಾಥ, ತಂದೆ ನಾಗರಾಜ ಬಾದಗಿ, ವಯಸ್ಸು 30 ವರ್ಷ, ಸಾ: ಧಾರವಾಡ, ತಾ/ಜಿ: ಧಾರವಾಡ, 7) ಹುಲಗಪ್ಪ, ತಂದೆ ಫಕೀರಪ್ಪ ಬೆಳಗಾಲಪೇಟೆ, ವಯಸ್ಸು 19 ವರ್ಷ, ಸಾ: ಬೆಳಗಾಲಪೇಟೆ,

ತಾ: ಹಾನಗಲ್, ಜಿ: ಹಾವೇರಿ, 8) ಆನಂದ, ತಂದೆ ದುರಗಪ್ಪ ಯರಗಣ್ಣವರ್, ವಯಸ್ಸು 21 ವರ್ಷ, ಸಾ: ಮುನವಳ್ಳಿ, ತಾ/ಜಿ: ಧಾರವಾಡ, ಇನ್ನೊಂದು ಪ್ರಕರಣದ ಆರೋಪಿಗಳಾದ 9) ಗಂಗಾರಾಮ, ತಂದೆ ಬೈರಾಮ ಚವಾಣ್, ವಯಸ್ಸು 50 ವರ್ಷ, ಜಾತಿ ಹಿಂದೂ ಪಾರದಿ (ಹರಣಶಿಕಾರಿ), ಸಾ: ಮೊಗಾಬಿ, ತಾ: ಆಳಂದ, ಜಿ: ಕಲಬುರಗಿ, 10) ಕನಿರಾಮ, ತಂದೆ ಕಮಸರ ಚವಾಣ್,

ವಯಸ್ಸು 60 ವರ್ಷ, ಜಾತಿ ಹಿಂದೂ ಪಾರದಿ (ಹರಣಶಿಕಾರಿ), ಸಾ: ಶಕಾಪುರ, ತಾ: ಆಳಂದ, ಜಿ: ಕಲಬುರಗಿ ಹಾಗೂ 11) ಶ್ರೀಕಾಂತ್, ತಂದೆ ಶರಣಪ್ಪ ದೂಧಳೆ @ ಪೂಜಾರಿ, ವಯಸ್ಸು 44 ವರ್ಷ, ಸಾ: ಮೊಗಾಬಿ, ತಾ: ಆಳಂದ, ಪ್ರಸ್ತುತ: ಶಿವಶಕ್ತಿ ನಗರ, ತುರುಬೆ ಸ್ಟೋರ್ಸ್ ಹತ್ತಿರ, ಮುಂಬೈ, ಮಹಾರಾಷ್ಟ್ರ ಇವರನ್ನು ಬಂಧಿಸಲಾಗಿದೆ.

ಬಂಧಿತರಿಂದ 587 ಗ್ರಾಂ ಬಂಗಾರದ ಆಭರಣಗಳು ಅಂದಾಜು ಮೌಲ್ಯ ₹89,22,400 ರೂ.ಗಳು.
₹9,31,680 ಮೌಲ್ಯದ 3822 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ₹9,33,000 ರೂ.ಮೌಲ್ಯದ 4 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಒಟ್ಟು ₹1,07,87 ,080 ವಶಪಡಿಸಿಕೊಳ್ಳಲಾಗಿದೆ.

ಹಾಗೆಯೇ ಮತ್ತೊಂದು ಪ್ರಕರಣವನ್ನು ಭೇದಿಸಿರುವ ಪೊಲೀಸರು, 116 ಗ್ರಾಂ –ಬಂಗಾರದ ಆಭರಣಗಳು ಅಂದಾಜು ಮೌಲ್ಯ ₹17,32,800 ಹಾಗೂ 515 ಗ್ರಾಂ –ಬೆಳ್ಳಿಯ ಆಭರಣಗಳು ಅಂದಾಜು ಮೌಲ್ಯ ₹1,33,900 ರೂ. ಜಪ್ತಿ ಮಾಡಿದ್ದಾರೆ.

ಇನ್ನೂ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡದ ಪರಿಶ್ರಮ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರೋಹನ್ ಜಗದೀಶ್ ಹೇಳಿದ್ದಾರೆ.