ಬೆಂಗಳೂರು: ಗುಡ್ ನ್ಯೂಸ್ ಬಗ್ಗೆ ನನಗೆ ಗೊತ್ತಿಲ್ಲ. ಪ್ರತಿಸಲವೂ ಗುಡ್ ನ್ಯೂಸ್ ಇದ್ದೇ ಇರುತ್ತದೆ. ಕೆಲವೊಂದು ಸಲ ಪಕ್ಷದ ಕೆಲಸ, ಇನ್ನೊಮ್ಮೆ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗುತ್ತಿರುತ್ತೇವೆ. ಆಗಾಗ್ಗೆ ಸರ್ಕಾರದ ಕೆಲಸಗಳಿಗೂ ಹೋಗಿರುತ್ತೇವೆ. ಇದರಲ್ಲಿ ವಿಶೇಷತೆ ಏನೂ ಇಲ್ಲ” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಹೇಳಿದರು.
ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ಕಚೇರಿಯಲ್ಲಿ ಬುಧವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಡಿಸಿಎಂ ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಏನಾದರೂ ಗುಡ್ ನ್ಯೂಸ್ ಇದೆಯೇ ಎಂದು ಕೇಳಿದಾಗ, “ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಅವರು ಹುಟ್ಟುಹಬ್ಬಕ್ಕೆ ಯಾವುದೇ ಪ್ಲೆಕ್ಸ್, ಬ್ಯಾನರ್ ಹಾಕಬೇಡಿ ಎಂದಿದ್ದಾರೆ. ಎಲ್ಲರೂ ದಯವಿಟ್ಟು ಇದನ್ನು ಪಾಲನೆ ಮಾಡುವುದು ಒಳಿತು” ಎಂದರು.
ಅಧಿಕಾರ ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲವೇ ಎಂದು ಕೇಳಿದಾಗ, “ಈ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ. ಇದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ಪಾಲನೆ ಮಾಡುತ್ತೇವೆ ಎಂದು ಹೇಳಿದ್ದೇವೆ” ಎಂದರು.
ಶಾಸಕರ ಒತ್ತಡ ಹೆಚ್ಚಾಗಿರುವ ಬಗ್ಗೆ ಕೇಳಿದಾಗ, “ಮಂತ್ರಿಗಳಾಗಬೇಕು ಎಂಬ ಒತ್ತಡ ಇದೆ” ಎಂದರು. ಈ ಬಾರಿಯ ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ನಾನು ಹಾಗೂ ಶಿವಕುಮಾರ್ ಅವರು ಆಗಾಗ್ಗೆ ದೆಹಲಿಗೆ ಹೋಗುತ್ತಲೇ ಇರುತ್ತೇವೆ. ಅಪರೂಪಕ್ಕೆ ಹೋಗುವುದಾದರೆ ನೀವು ಕೇಳಬೇಕಿತ್ತು. ತಿಂಗಳಿಗೆ ಎರಡು ಸಲವಾದರೂ ಹೋಗುತ್ತೇವೆ” ಎಂದರು.



