Home Blog Page 3161

ಜೈನ ಸಮಾಜ ವತಿಯಿಂದ ಆಹಾರದ ಕಿಟ್ ವಿತರಣೆ

ವಿಜಯಸಾಕ್ಷಿ ಸುದ್ದಿ, ಗದಗ

ಜೈನ್ ಸಮಾಜದ ವತಿಯಿಂದ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ಸೇರಿದಂತೆ ಅಗತ್ಯ ಚಿಕಿತ್ಸೆಗಾಗಿ ದಾಖಲಾದವರ ಸಂಬಂಧಿಕರು ಆಸ್ಪತ್ರೆಯ ಹೊರೆಗಿರುವ ಅವರ ಕುಟುಂಬಸ್ಥರಿಗೆ ಪಲಾವ್ ಪ್ಯಾಕೆಟ್ ವಿತರಿಸಲಾಯಿತು.

ಗದಗ ಜಿಮ್ಸ್ ಕೋವಿಡ್ ಆಸ್ಪತ್ರೆ, ಜರ್ಮನಿ ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಜೈನ ಸಮಾಜದ ಅಧ್ಯಕ್ಷ ಮನೋಜ ಭಾಫಣಾ ಸೇರಿ 8ರಿಂದ 10 ಜನರ ತಂಡ ಶನಿವಾರ 300 ಕಿಟ್‌ಗಳನ್ನು ವಿತರಣೆ ಮಾಡಿದೆ. ಮುಂದಿನ 7 ದಿನಗಳ ಕಾಲ ಅವಳಿ ನಗರದಾದ್ಯಂತ ಆಸ್ಪತ್ರೆಯ ಹೊರಗೆ ಆತಂಕದಲ್ಲಿ ಕಾಯುತ್ತಿರುವ ಕುಟುಂಬಸ್ಥರಿಗೆ ಆಹಾರದ ಪ್ಯಾಕೆಟ್ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಜೈನ ಸಮಾಜ ವತಿಯಿಂದ ಆಹಾರದ ಕಿಟ್ ವಿತರಣೆ

ವಿಜಯಸಾಕ್ಷಿ ಸುದ್ದಿ, ಗದಗ

ಜೈನ್ ಸಮಾಜದ ವತಿಯಿಂದ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ಸೇರಿದಂತೆ ಅಗತ್ಯ ಚಿಕಿತ್ಸೆಗಾಗಿ ದಾಖಲಾದವರ ಸಂಬಂಧಿಕರು ಆಸ್ಪತ್ರೆಯ ಹೊರೆಗಿರುವ ಅವರ ಕುಟುಂಬಸ್ಥರಿಗೆ ಪಲಾವ್ ಪ್ಯಾಕೆಟ್ ವಿತರಿಸಲಾಯಿತು.

ಗದಗ ಜಿಮ್ಸ್ ಕೋವಿಡ್ ಆಸ್ಪತ್ರೆ, ಜರ್ಮನಿ ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಜೈನ ಸಮಾಜದ ಅಧ್ಯಕ್ಷ ಮನೋಜ ಭಾಫಣಾ ಸೇರಿ ೮ರಿಂದ ೧೦ ಜನರ ತಂಡ ಶನಿವಾರ ೩೦೦ ಕಿಟ್‌ಗಳನ್ನು ವಿತರಣೆ ಮಾಡಿದೆ. ಮುಂದಿನ ೭ ದಿನಗಳ ಕಾಲ ಅವಳಿ ನಗರದಾದ್ಯಂತ ಆಸ್ಪತ್ರೆಯ ಹೊರಗೆ ಆತಂಕದಲ್ಲಿ ಕಾಯುತ್ತಿರುವ ಕುಟುಂಬಸ್ಥರಿಗೆ ಆಹಾರದ ಪ್ಯಾಕೆಟ್ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದುವರೆದ ಸಾವಿನ ಸರಣಿ; 307 ಜನರಿಗೆ ಸೋಂಕು, ಐವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಶನಿವಾರವೂ ಸಾವಿನ ಸರಣಿ ಮುಂದುವರೆದಿದೆ. ಇವತ್ತು ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಐವರು ಮೃತಪಟ್ಟಿದ್ದಾರೆ. ಇವತ್ತು 307 ಜನರಿಗೆ ಸೋಂಕು ತಗುಲಿದೆ.

ಇಂದಿನ 307 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 23037 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -126, ಮುಂಡರಗಿ-47, ನರಗುಂದ-26, ರೋಣ-50, ಶಿರಹಟ್ಟಿ-48, ಹೊರಜಿಲ್ಲೆಯ-10 ಸೇರಿದಂತೆ 307 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 241 ಕ್ಕೇರಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಇಬ್ರಾಹಿಂಪೂರ ನಿವಾಸಿ 43 ವರ್ಷದ ವ್ಯಕ್ತಿ ಮೇ-26 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 27 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಹನುಮಾನ್ ನಹರ ನಿವಾಸಿ 31 ವರ್ಷದ ವ್ಯಕ್ತಿ, ಮೆ,22 ರಂದು ಖಾಸಗಿ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 24 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ತಾಜ್ ನಗರ ನಿವಾಸಿ 76 ವರ್ಷದ ವ್ಯಕ್ತಿ ಮೇ 25 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 26 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಹೊಸೂರ ನಿವಾಸಿ 70 ವರ್ಷದ ಮಹಿಳೆ ಮೇ 19 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ 21 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಹೊನ್ಬಾಪೂರ ‌ ನಿವಾಸಿ 39 ವರ್ಷದ ಮಹಿಳೆ ಮೇ 11 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 24 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 400 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 19998 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2798 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 195 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಜೂನ್ 1ರ ನಂತರವೂ ಸೋಂಕು ಹತೋಟಿಗೆ ಬರದಿದ್ದರೆ ಕಠಿಣ ನಿರ್ಬಂಧ ಜಾರಿ; ಡಿಸಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ  ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೋವಿಡ್-19  ಎರಡನೇ ಅಲೆಯ  ಸೋಂಕು  ನಿಯಂತ್ರಣಕ್ಕಾಗಿ ಸರ್ಕಾರದಿಂದ  ಜಾರಿ ಮಾಡಿದ  ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಟಾನ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಅವರು, ಜಿಲ್ಲಾ ಪಂಚಾಯತ್ ಸಭಾಂಗಣದ ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ  ಕೋವಿಡ್ ಸೋಂಕು ನಿಯಂತ್ರಣ ಕುರಿತಂತೆ  ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ  ಕೋವಿಡ್-19   2ನೇ ಅಲೆಯ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ  ಕಠಿಣ  ನಿರ್ಬಂಧಗಳನ್ನು ಜೂನ್ 1 ರ ಬೆ 6 ವರೆಗೆ ವಿಧಿಸಲಾಗಿದೆ. ಸೋಂಕಿನ ಪ್ರಮಾಣ ನೋಡಿಕೊಂಡು ಇನ್ನೂ ಹೆಚ್ಚಿನ ನಿರ್ಬಂಧ ಅಗತ್ಯವಿದೆ ಎಂದು ಕಂಡು ಬಂದಲ್ಲಿ  ಜೂನ್ 1 ರ ನಂತರ ಹೆಚ್ಚುವರಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದರು.

ಸದ್ಯ ಜಿಲ್ಲೆಯ ಎಲ್ಲ ಹೋಟೆಲ್‌ , ಚಹಾದ ಅಂಗಡಿ, ಬಾರ್, ರೆಸ್ಟೋರೆಂಟ್ ತೆರೆಯದಂತೆ ನಿರ್ಬಂಧಿಸಿದೆ.  ಹೋಟೆಲ್ ಬಂದ ಆಗಿರುವುದರಿಂದ ನಿರ್ಗತಿಕರಿಗೆ ಹಾಗೂ ಬಡವರಿಗೆ  ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಪಾರ್ಸಲ್ ಕೊಡುವ ವ್ಯವಸ್ಥೆ ಮಾಡಬೇಕು.  ಇಲ್ಲದಿದ್ದಲ್ಲಿ ಆಹಾರ ತಯಾರಿಕೆ ಹಾಗೂ ವಿತರಣೆಗೆ   ಸ್ವಯಂ ಪ್ರೇರಿತರಾಗಿ ಸಹಾಯ ಮಾಡಲು  ಮುಂದೆ ಬರುವವರ ಅಥವಾ ದಾನಿಗಳ ಮುಖಾಂತರವಾಗಿ ಆಹಾರ ವಿತರಿಸುವ ವ್ಯವಸ್ಥೆಯನ್ನು ಸ್ಥಳೀಯ ಅಧಿಕಾರಿಗಳು ಮಾಡಬೇಕು ಎಂದು ಸೂಚನೆ ನೀಡಿದರು.

ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ  ಸಾರಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಂಬುಲನ್ಸ್ ವ್ಯವಸ್ಥೆ ಅಲ್ಲದೇ ಸಣ್ಣ ಪುಟ್ಟ ರೋಗಿಗಳಿಗೆ , ವಿಕಲಚೇತನರಿಗೆ ,  ಸ್ಥಳೀಯ ಸಂಸ್ಥೆಗಳಿಂದ ಸಾರಿಗೆಗೆ ವ್ಯವಸ್ಥೆ ಕಲ್ಪಿಸಬೇಕು.  ಆದರೆ ಸಾರಿಗೆ ಸೌಲಭ್ಯದ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
 
 ಗ್ರಾಮೀಣ ಪ್ರದೇಶಗಳಲ್ಲಿ  ಪಿ.ಡಿ.ಓಗಳು ಹೆಚ್ಚು ಕಾರ್ಯಪ್ರವೃತ್ತರಾಗುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ನೋಡಿಕೊಳ್ಳಬೇಕು.  ತಾಲೂಕು ಮಟ್ಟದ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು.  ಗ್ರಾ.ಪಂ. ನಲ್ಲಿ ಟಾಸ್ಕ್ ಫೋರ್ಸ ಹೆಚ್ಚು ಕ್ರಿಯಾಶೀಲವಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನುಡಿದರು.  
 
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ರೋಗಿಗಳು ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳಬೇಕು. ಕೋವಿಡ್ ಕೇರ್ ಸಂಟರ್ ಗೆ ರೋಗಿಗಳನ್ನು ಸ್ಥಳಾಂತರ ಮಾಡುವಲ್ಲಿ ಆರೋಗ್ಯ ಇಲಾಖೆಯ  ಜೊತೆಗೆ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವವೂ ಮುಖ್ಯವಾಗಿದೆ ಎಂದರು.

ಕೋವಿಡ್ ಕೇರ್ ಸೆಂಟರ್ ಗಳು ಸ್ವಚ್ಛವಾಗಿರುವಂತೆ ಡಿ ಗ್ರುಪ್ ಕೆಲಸಗಾರರು ಕಾರ್ಯನಿರ್ವಹಿಸುವಂತೆ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.  

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್  ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು  ಅನಗತ್ಯ ಸಂಚಾರ  ಮಾಡದಂತೆ ಪಿ.ಡಿ.ಓಗಳು ಕ್ರಮ ವಹಿಸಬೇಕು.  ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ವಿಕಲಚೇತನರಿಗೂ ಲಸಿಕೆ ಹಾಕುವ ಕುರಿತು ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ , ನಗರಸಭೆ ಪೌರಾಯುಕ್ತ  ರಮೇಶ ಜಾಧವ ಸೇರಿದಂತೆ  ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜೂ. 7ರ ನಂತರ ಲಾಕ್ ಡೌನ್ ಮುಂದುವರೆಸುವುದು ಬೇಡ; ಸಚಿವ ಸೋಮಶೇಖರ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ಜೂ. 7ರಂದು ಮುಕ್ತಾಯವಾಗಲಿದ್ದು, ಆನಂತರ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸುವುದು ಬೇಡ ಎಂದು ಸಚಿವ ಎಸ್.ಟಿ. ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಎರಡು ತಿಂಗಳುಗಳಿಂದ ಲಾಕ್ ಡೌನ್ ಘೋಷಣೆಯಾಗಲಿದೆ. ಲಾಕ್ ಡೌನ್ ನಿಂದಾಗಿ ದಿನಂಪ್ರತಿ ಕೂಲಿ ಮಾಡಿ ಜೀವನ ನಡೆಸುತ್ತಿರುವವರ ಬದುಕು ಬೀದಿಗೆ ಬಂದಿದೆ. ಹೀಗಾಗಿ ಈ ಸಂದರ್ಭದಲ್ಲಿ ಮತ್ತೆ ಲಾಕ್ ಡೌನ್ ಘೋಷಿಸಿದರೆ ಅವರಿಗೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಸಿಎಂ ಅವರು ನಮ್ಮ ಅಭಿಪ್ರಾಯ ಕೇಳಿದರೆ, ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ. ಈಗಾಗಲೇ ರಾಜ್ಯದಲ್ಲಿ ಕೊರೊನಾ ಪ್ರಕರಣ ಇಳಿಮುಖ ಕಾಣುತ್ತಿದೆ. ಹೀಗಾಗಿ ಲಾಕ್ ಡೌನ್ ಮುಂದುವರೆಸುವುದು ಬೇಡ. ಮನೆ ಮನೆ ಸರ್ವೆ ಕಾರ್ಯದ ಬಗ್ಗೆ ರಿವಿವ್ಯೂ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ. 65 ರಿಂದ 70ರಷ್ಟು ಮನೆ ಮನೆ ಸರ್ವೆ ಕಾರ್ಯ ಮುಕ್ತಾಯವಾಗಿದೆ. ಎರಡ್ಮೂರು ದಿನದಲ್ಲಿ ನೂರರಷ್ಟು ಸರ್ವೆ ಕಾರ್ಯ ಮುಕ್ತಾಯವಾಗಲಿದೆ. ಯಾರಿಗೆ ಲಕ್ಷಣಗಳು ಇವೆ ಎಂಬುವುದನ್ನು ನೋಡಲು ಪದೇ ಪದೇ ಸರ್ವೆ ಮಾಡಲು ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ಔಷಧಿ ಕೊರತೆ ಬಗ್ಗೆ ಶಾಸಕರು ಗಮನಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಬಾರಿ ಡಿ.ಎಚ್‌.ಓ ಅವರನ್ನು ಕೇಳಿದಾಗ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಇದೀಗ ಸಮಸ್ಯೆಗಳ ಬಗ್ಗೆ ಶಾಸಕರು ಗಮನಕ್ಕೆ ತಂದಿದ್ದಾರೆ. ಸುಳ್ಳು ಮಾಹಿತಿ ಕೊಡಬೇಡಿ ಎಂದು ಡಿಎಚ್ ಓ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಸಮಸ್ಯೆ ಬಗೆ ಹರಿಸುವಂತೆ ಡಿಎಚ್.ಓ ಗೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ನೋಂದಾಯಿತ ಕಾರ್ಮಿಕರ ಖಾತೆಗೆ ನೇರವಾಗಿ ಸಹಾಯಧನ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ/ಗದಗ

ಸರ್ಕಾರ ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ವಿವಿಧ ವರ್ಗಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತವಾದ ಕಟ್ಟಡ ಕಾರ್ಮಿಕರಿಗೆ 3000 ಹಾಗೂ ಅಸಂಘಟಿತ ಕಾರ್ಮಿಕರಿಗೆ 2000 ರೂಪಾಯಿಗಳನ್ನು ಸರ್ಕಾರದ ನಿರ್ದೇಶನದಂತೆ ನೇರವಾಗಿ ಖಾತೆ ಜಮಾ ಮಾಡಲಾಗುವುದು.

ನೊಂದಾಯಿತ ಕಾರ್ಮಿಕರು ಯಾವುದೇ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆಯಿಲ್ಲ. ಕಾರ್ಮಿಕರು ಮಧ್ಯವರ್ತಿಗಳ ಬಳಿ ಅರ್ಜಿಸಲ್ಲಿಸಲು ಹೋಗಬಾರದು ಎಂದು ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ಮೂರ್ತಿ ತಯಾರಿಸಿ ಕೊರೊನಮ್ಮ ಎಂದು ಪೂಜೆ ಸಲ್ಲಿಸಿದ ಜನ!

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ಮಹಾಮಾರಿಯ ಹಾವಳಿ ಜೋರಾಗಿದೆ. ಹೀಗಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಒಂದು ಗ್ರಾಮದಲ್ಲಿನ ಜನರು ಕೊರೊನಮ್ಮಗೆ ವಿಶೇಷ ಪೂಜೆ ಸಲ್ಲಿಸಿರುವ ಘಟನೆ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸರ್ಕಾರ ಏನೇ ಹೇಳಿದರೂ ಜನರ ಮೂಢನಂಬಿಕೆ ಮಾತ್ರ ನಿಲ್ಲುತ್ತಿಲ್ಲ. ಇಲ್ಲಿಯೂ ಇದೇ ರೀತಿ ಜನರು ಮೂಢ ನಂಬಿಕೆಯ ಮೊರೆ ಹೋಗಿದ್ದಾರೆ. ಹೀಗಾಗಿ ಕೊರೊನಮ್ಮಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ಗ್ರಾಮದ ಜನರು ಕೊರೊನಮ್ಮ ದೇವಿಯ ಮಣ್ಣಿನ ಮೂರ್ತಿ ರಚಿಸಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಮೂರ್ತಿಗೆ ಬೇವು ಉಡಿಸಿ, ಕುರಿ, ಕೋಳಿ, ಮೊಸರನ್ನವನ್ನು ನೈವೇದ್ಯ ಮಾಡಿ ಅರ್ಪಿಸಿದ್ದಾರೆ. ಪೂಜೆ ಮುಗಿದ ನಂತರ ಗ್ರಾಮಸ್ಥರು ಕೊರೊನಮ್ಮನನ್ನು ಊರ ಸೀಮೆ ದಾಟಿಸಿದ್ದಾರೆ.

ಈ ಕಾರ್ಯಕ್ರಮ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಮಾಸ್ಕ್ ಧರಿಸದೆ ದೈಹಿಕ ಅಂತರ ಮರೆತಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ನೂರಾರು ಜನ ಭಾಗವಹಿಸಿದ್ದರು. ಜನರು ಕೊರೊನಾ ಭೀತಿ ಮರೆತು, ಮೌಢ್ಯಾಚರಣೆ ಮಾಡುತ್ತಿರುವುದಕ್ಕೆ ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ರೈತರು ಗಮನಿಸಲೇಬೇಕಾದ ವಿಷಯವಿದು! ರಸಗೊಬ್ಬರ ಖರೀದಿ ಸಮಯ ವಿಸ್ತರಿಸಿದ ಸರ್ಕಾರ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮುಂಗಾರು ಬಿತ್ತನೆ ಆರಂಭವಾಗಿರುವುದರಿಂದಾಗಿ ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರಸಗೊಬ್ಬರ, ಬಿತ್ತನೆ ಬೀಜ ಖರೀದಿಗೆ ಈಗ ಸಕಾಲವಾಗಿದ್ದರಿಂದಾಗಿ ಸರ್ಕಾರ, ಖರೀದಿ ಸಮಯ ವಿಸ್ತರಿಸಿ ಆದೇಶಿಸಿದೆ.

ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಜೂ. 7ರ ವರೆಗೆ ಜಾರಿಯಲ್ಲಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 10ರ ವರೆಗೆ ಸಮಯ ನಿಗದಿಪಡಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಸಮಯದ ನಿರ್ಬಂಧ ವಿಧಿಸಿಲ್ಲ. ಆದರೂ ಹಲವೆಡೆ ರೈತರು ಮುಗಿಬಿದ್ದು ಬೀಜ ಖರೀದಿ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ಚರ್ಚಿಸಿ ರೈತರಿಗೆ ಅಗತ್ಯ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆ ಖರೀದಿ ಸಮಯವನ್ನು ವಿಸ್ತರಿಸಿದ್ದಾರೆ. ಹೀಗಾಗಿ ಖರೀದಿ ಸಮಯ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಲಾಕ್ ಡೌನ್ ಸಮಯದಲ್ಲಿಯೂ ಕೃಷಿಗಾಗಲಿ, ರೈತಾಪಿ ಚಟುವಟಿಕೆಗಳಿಗಾಗಲಿ ಅಥವಾ ಕೃಷಿ ಯಂತ್ರೋಪಕರಣಗಳ ಖರೀದಿಗಾಗಲಿ ಸರ್ಕಾರ ಯಾವುದೇ ನಿರ್ಬಂಧ ಹೇರಿಲ್ಲ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಅಂದಾಜು 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳಿಗೆ ಬೇಡಿಕೆಯಿದ್ದು, ಕಳೆದ ಮೇ. 28 ರ ವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಇದುವರೆಗೂ 19,675 ಕ್ವಿಂಟಾಲ್ ಗಳಷ್ಟು ಬಿತ್ತನೆ ಬೀಜ ವಿತರಿಸಲಾಗಿದೆ. ಅಲ್ಲದೇ, 1,74,653 ಕ್ವಿಂಟಾಲ್ ಗಳಷ್ಟು ಬೀಜ ಇನ್ನೂ ದಾಸ್ತಾನ ಇದೆ. ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಪೂರೈಸಲಾಗುತ್ತಿದ್ದು, ಬಿತ್ತನೆ ಬೀಜ ಪೂರೈಕೆಗೆ ಯಾವುದೇ ಕೊರತೆ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ.

ಅದರಂತೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 26.47 ಲಕ್ಷ ಮೆಟ್ರಿಕ್ ಟನ್ ವಿವಿಧ ರಾಸಾಯನಿಕ ಗೊಬ್ಬರಗಳಿಗೆ ಬೇಡಿಕೆಯಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 7,97,662 ಮೆಟ್ರಿಕ್ ಟನ್ ರಸಗೊಬ್ಬರಗಳಿಗೆ ಬೇಡಿಕೆಯಿದ್ದು, ಮೇ. 28 ರ ವರೆಗೆ ಒಟ್ಟು 5,67,239 ಮೆಟ್ರಿಕ್ ಟನ್ ಪ್ರಮಾಣದಲ್ಲಿ ರಸಗೊಬ್ಬರ ಸರಬರಾಜಾಗಿದೆ. ಇನ್ನೂ ಒಟ್ಟು 12,38,600 ಮೆಟ್ರಿಕ್ ಟನ್ ಗಳಷ್ಟು ರಸಗೊಬ್ಬರ ದಾಸ್ತಾನು ಇದ್ದು, ಯಾವುದೇ ರಸಗೊಬ್ಬರದ ಕೊರತೆ ಇಲ್ಲ ಎಂದು ಸರ್ಕಾರ ತಿಳಿಸಿದೆ.

ಕಾಂಗ್ರೆಸ್ ನಿಧಾನವಾಗಿ ಸಾಯುವ ಪಕ್ಷ – ಈಶ್ವರಪ್ಪ

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ಬಿಜೆಪಿಗೆ ಅಧಿಕಾರ ಬಂದರೆ ಐದು ವರ್ಷ ಸಂಪೂರ್ಣಗೊಳಿಸಲು ರೋಗ ಬಂದಿರುತ್ತದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಖಾಲಿ ರೋಗವಿದ್ದರೆ. ಕಾಂಗ್ರೆಸ್ ನಲ್ಲಿ ಹೆಮ್ಮಾರಿ ಕ್ಯಾನ್ಸರ್ ರೋಗವಿದೆ. ಕಾಂಗ್ರೆಸ್ ಪಕ್ಷವು ಹುಳುಕುಗಳಿಂದಲೇ ಕೂಡಿದೆ. ಕಾಂಗ್ರೆಸ್ ಸರ್ಕಾರದ ಇತಿಹಾಸ ನೋಡಿದರೆ ಮೂರು ಮೂರು ಜನ ಸಿಎಂ ಆಗಿರುವ ಉದಾಹರಣೆಗಳಿವೆ.

ವೀರೇಂದ್ರ ಪಾಟೀಲ್ ಅವರಂತಹ ಪ್ರಾಮಾಣಿಕ ವ್ಯಕ್ತಿ ಸಿಎಂ ಆಗಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿಯೇ ಅವರಿಂದ ರಾಜೀನಾಮೆ ಪಡೆದ ಕೆಟ್ಟ ಪಕ್ಷ ಅದು ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಸಿದ್ದರಾಮಯ್ಯ ಅವರ ಸಮಯದಲ್ಲಿಯೇ ಹೆಚ್ಚಾಗಿತ್ತು. ಅದರ ಫಲಿತಾಂಶವೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸುವಂತಾಯಿತು.

2019ರ ಲೋಕಸಭೆ ಸಂದರ್ಭದಲ್ಲಿಯೂ ಕಾಂಗ್ರೆಸ್ ಹೀನಾ ಸ್ಥಿತಿ ಅನುಭವಿಸಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿತು ಎಂದು ಆರೋಪಿಸಿದ್ದಾರೆ.
ಸದ್ಯ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೊಬ್ಬ ಸಚಿವ ಮಾತನಾಡಿದರೆ, ಅದನ್ನು ರೋಗ ಎನ್ನುವುದಾದರೆ, ಕಾಂಗ್ರೆಸ್ ಗೆ ಕ್ಯಾನ್ಸರ್ ರೋಗವೇ ಇದ್ದಂತಾಗಿದೆ. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆನೇ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಅಧಿಕಾರದಿಂದ ಕೆಳಗೆ ಇಳಿಯಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ವಾಗ್ದಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರ ಅಧಿಕಾರವಧಿಯ ಸಂದರ್ಭದಲ್ಲಿ ಸೆಕ್ಸ್ ಸ್ಕ್ಯಾಂಡಲ್ ಪ್ರಕರಣ ಬೆಳಕಿಗೆ ಬಂದಾಗ ಅವರು ಏನು ಮಾಡಿದರು? ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿದ್ದಾಗ ಬಚಾವ್ ಮಾಡುವ ಕೆಲಸ ಮಾಡಿದರು. ಇದನ್ನು ಅವರು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸಚಿವರು ಹಾಗೂ ಶಾಸಕರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರು ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನ ಡಿಕೆಶಿ ಮತ್ತು ಸಿದ್ದರಾಮಯ್ಯ ವಿನಾಕಾರಣ ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಆರಂಭಿಸಿದ ಸಂದರ್ಭದಲ್ಲಿ ವ್ಯಾಕ್ಸಿನ್ ಹಾಕಿಕೊಳ್ಳಬೇಡಿ ಎಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಹಾಗೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ ಎಂದು ಗುಡುಗಿದ್ದಾರೆ.

ಜಯರಾಂ ರಮೇಶ್, ಕರ್ನಾಟಕದ ಉಸ್ತುವರಿ ಆಗಿದ್ದ ವೇಣುಗೋಪಾಲ್ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ವ್ಯಾಕ್ಸಿನ್ ಕುರಿತು ಟೀಕೆ ಮಾಡಿದ್ದರು. ಹೀಗಾಗಿ ದೇಶದಲ್ಲಿ ಕೋವಿಡ್ ಹೆಚ್ಚಾಗಲು ಕಾಂಗ್ರೆಸ್ ನಾಯಕರೇ ಕಾರಣ. ಆದರೆ, ಸದ್ಯ ಇದೇ ಕಾಂಗ್ರೆಸ್, ಆ ರೋಗ ಈ ರೋಗವೆಂದು ನಿಧಾನವಾಗಿ ಹುಡುಕುವ ಕೆಲಸದಲ್ಲಿ ತೊಡಗಿದೆ. ಇಂದಲ್ಲ, ನಾಳೆ ಈ ಕಾಂಗ್ರೆಸ್ ನಿಧಾನವಾಗಿ ಸಾಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡಿಸಲು ಸಂಗೀತ ಸುಧೆ ಹರಿಸಿದ ಶಾಸಕ

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಕೊರೊನ ಸೋಂಕಿತರಿಗಾಗಿ ಶಾಸಕ ಡಾ. ಕೆ. ಅನ್ನದಾನಿ ಅವರು ಸಂಗೀತ ಸುಧೆ ಹರಿಸಿ, ಅವರಲ್ಲಿ ಚೈತನ್ಯ ತುಂಬುವ ಕಾರ್ಯ ಮಾಡಿದ್ದಾರೆ. ತಾಲೂಕಿನ ಬಾಚನಹಳ್ಳಿ ವಸತಿ ಶಾಲೆಯ ಕೋವಿಡ್ -19 ಕ್ವಾರೆಂಟೈನ್ ಚಿಕಿತ್ಸಾ ಕೇಂದ್ರದಲ್ಲಿರುವ ಸೋಂಕಿತರನ್ನು ರಂಜಿಸಿ, ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಶಾಸಕರು ಈ ಕಾರ್ಯ ಮಾಡಿದ್ದಾರೆ. ಯರಳ್ಳಿ ಪುಟ್ಟಸ್ವಾಮಿ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಶಾಸಕ ಡಾ. ಕೆ. ಅನ್ನದಾನಿ ಅವರು ತಾವೇ ಸ್ವತಃ ಹಾಡು ಹೇಳಿ, ರೋಗಿಗಳು ಆತ್ಮವಿಶ್ವಾಸದಿಂದ ಕುಣಿದು ಕುಪ್ಪಳಿಸುವಂತೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸೋಂಕಿತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನ ಸಾಂಕ್ರಾಮಿಕ ಕಾಯಿಲೆ. ಸೋಂಕಿನಿಂದಾಗಿ ಚಿಕಿತ್ಸೆ ಗಾಗಿ ಕ್ವಾರೆಂಟೈನ್ ಗೆ ಒಳಗಾಗಿರುವ ಸೋಂಕಿತರು ಮಾನಸಿಕ ಖಿನ್ನತೆಗೆ, ಆತಂಕಕ್ಕೆ ಒಳಗಾಗಬಾರದು. ಆತ್ಮಸ್ಟೈರ್ಯದಿಂದ ಇಲ್ಲಿ ಇರುವವರೆಗೂ ಉಲ್ಲಾಸ ದಿಂದ, ಖುಷಿಯಾಗಿರಬೇಕು ಎಂದು ಧೈರ್ಯ ತುಂಬಿದ್ದಾರೆ.

ಸಂಗೀತಕ್ಕೆ ಮಾರು ಹೋದವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಅಂತಹ ಆತ್ಮಸ್ಟೈರ್ಯ ತುಂಬುವ ಶಕ್ತಿ ಸಂಗೀತಕ್ಕೆ ಮಾತ್ರ ಇದೆ. ಹೀಗಾಗಿಯೇ ಈ ವಿನೂತನ ಮನರಂಜನಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾನು ಕೂಡ ನಿಮ್ಮ ಜೊತೆ ಯಾವಾಗಲು ಇರುತ್ತೇನೆ. ಸೋಂಕಿತರು ದೃತಿಗೆಡದೆ ಸಂತೋಷದಿಂದ ಇದ್ದು, ಕೊರೋನಾ ಗೆದ್ದು ಹೊರಬನ್ನಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ನಿದೇರ್ಶಕ ರಾಜೇಶ್, ಜಯರಾಜು ಒಕ್ಕರಹಳ್ಳಿ, ಕುಮಾರ್ ಸೇರಿದಂತೆ ಹಲವರು ಇದ್ದರು.

error: Content is protected !!