ಕೊರೊನಾ ಸೋಂಕಿತ ದಂಪತಿಯ ವಿರುದ್ಧ ಕೋವಿಡ್ ಉಲ್ಲಂಘನೆಯ ಪ್ರಕರಣ ದಾಖಲಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ವಿರಗೋಟ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕುರುಬರದೊಡ್ಡಿ ನಿವಾಸಿಯಾಗಿರುವ ದಂಪತಿಗಳ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಐಪಿಸಿ 269, 270 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೇ, ಈ ದಂಪತಿಯ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರೊಂದಿಗೆ ಇವರ ಪಡಿತರ ಚೀಟಿಯನ್ನು ಕೂಡ ರದ್ದುಗೊಳಿಸಲಾಗಿದೆ.
ಇತ್ತೀಚೆಗಷ್ಟೇ ಈ ದಂಪತಿಗಳಿಗೆ ಕೊರೊನಾ ಸೋಂಕು ತಗುಲಿದ್ದು ದೃಢವಾಗಿತ್ತು. ಹೀಗಾಗಿ ದಂಪತಿಗಳನ್ನು ಹೋಂ ಕ್ವಾರಂಟೈನ್ ಮಾಡಲು ಆರೋಗ್ಯ ಸಿಬ್ಬಂದಿ ದೊಡ್ಡಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸ್ಪಂದಿಸದ ದಂಪತಿ, ಅವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ, ಅಧಿಕಾರಿಗಳ ಕೈಗೆ ಸಿಗದೆ ಮನೆ, ಗುಡ್ಡದಲ್ಲಿ ಅಡಗಿ ಕುಳಿತಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಈ ದಂಪತಿ ಮಾತ್ರ ಅವರ ಮಾತಿಗೆ ಸ್ಪಂದನೆ ನೀಡಿರಲಿಲ್ಲ. ಬದಲಾಗಿ ಅಧಿಕಾರಿಗಳನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹೀಗಾಗಿಯೇ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಲಾಕ್ ಡೌನ್ ಇದ್ದರೂ ಜಿಲ್ಲೆಯ ಜನ ಬೇಕಾಬಿಟ್ಟಿಯಾಗಿ ತಿರುಗಾಡುವುದು ತಪ್ಪುತ್ತಿಲ್ಲ. ಪೊಲೀಸರು ಎಷ್ಟೇ ಕಠಿಣ ಕ್ರಮ ಜರುಗಿಸಿದರೂ ಜನರ ತಿರುಗಾಟ ಮಾತ್ರ ಇನ್ನೂ ನಡೆದಿದೆ. ಹೀಗಾಗಿ ಜಿಲ್ಲಾ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಜಿಲ್ಲೆಯಲ್ಲಿ ರೌಂಡ್ ಹಾಕಿ, ಕಠಿಣ ನಿಯಮ ಜಾರಿಗೊಳಿಸುತ್ತಿದ್ದಾರೆ.
ಇಂದು ಬೆಳಂಬೆಳಿಗ್ಗೆ ಎಸ್ಪಿ ಯತೀಶ್ ಎನ್ ಅವರು ಫೀಲ್ಡ್ ಗೆ ಇಳಿದು, ಗದಗ- ಬೆಟಗೇರಿ ಅವಳಿ ನಗರ ರೌಂಡ್ ಹಾಕುತ್ತಿದ್ದಾರೆ. ಅಲ್ಲದೇ, ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದವರ ವಾಹನಗಳನ್ನು ಪರಿಶೀಲನೆ ನಡೆಸಿದ್ದಾರೆ.
ವಿನಾಕಾರಣ ರಸ್ತೆಗೆ ಇಳಿದ ವಾಹನ ಮಾಲೀಕರಿಗೆ ಇಂದು ಬೆಳಿಗ್ಗೆಯಿಂದ ಕೂಡ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಮೇ. 27 ರಿಂದ ಜೂ. 7ರ ವರೆಗೂ ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದರೂ ಜನ ಮಾತ್ರ ತಮ್ಮ ತಿರುಗಾಟ ಬಿಡುತ್ತಿಲ್ಲ. ಹೀಗಾಗಿ ಬೈಕ್ ಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಎಸ್ಪಿ ಸ್ವತಃ ರೋಡ್ ಗೆ ಇಳಿದು ಜನರಿಗೆ ಹಾಗೂ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಜಿಲ್ಲೆಯವರೇ ಆಗಿರುವ ಹಾಗೂ ತೆಲಂಗಾಣ ರಾಜ್ಯದ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿರುವ ವಿಶ್ವನಾಥ್ ಸಜ್ಜನರ್ ಅವರು ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಸುಮಾರು ರೂ. 40 ಲಕ್ಷ ಮೌಲ್ಯದ ವೈದ್ಯಕೀಯ ಔಷಧಿ ಸಾಮಾಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ವೈದ್ಯಕೀಯ ನೆರವು ನೀಡಿ ಜಿಲ್ಲೆಯ ಜನರ ಮೆಚ್ಚುಗೆ ಗಳಿಸಿದ್ದಾರೆ.
ಸಜ್ಜನರ್ ಅವರು, 22 ಆಕ್ಸಿಜನ್ ಕಾನ್ಸನ್ ಟ್ರೇಟರ್, 84 ಆಕ್ಸಿಜನ್ ಸಿಲಿಂಡರ್, 2 ಸಾವಿರ ಕೋವಿಡ್ ಕಿಟ್, 20 ಸಾವಿರ ಮಾಸ್ಕ್, 200 ಲೀಟರ್ ಸ್ಯಾನಿಟೈಸರ್, 1 ಸಾವಿರ ಫೇಸ್ ಶೀಲ್ಡ್, 24 ಯುನಿಟ್ ರೆಮ್ ಡಿಸಿವಿರ್ ಸೇರಿದಂತೆ ಇನ್ನಿತರ ವೈದ್ಯಕೀಯ ಸಾಮಾಗ್ರಿಗಳನ್ನು ಕಳುಹಿಸಿದ್ದಾರೆ.
ವಿಶ್ವನಾಥ್ ಸಜ್ಜನರ್ ಅವರನ್ನು ಎನ್ ಕೌಂಟರ್ ಸ್ಪೇಷಲಿಸ್ಟ್ ಎಂದೇ ಕರೆಯುತ್ತಾರೆ. ಇವರು ಎಲ್ಲ ಐಪಿಎಸ್ ಅಧಿಕಾರಿಗಳಂತೆ ಕೇವಲ ತಾವು ಕರ್ತವ್ಯ ನಿರ್ವಹಿಸಿದ ಕ್ಷೇತ್ರಗಳಲ್ಲಿ ಮಾತ್ರ ಚಿರಪರಿಚತರಾಗಿದ್ದವರು ಅಲ್ಲ. ಇವರು ಭ್ರಷ್ಟರಿಗೆ, ಅನ್ಯಾಕೋರರಿಗೆ ಹಾಗೂ ಅತ್ಯಾಚಾರಿಗಳಿಗೆ ಸಿಂಹ ಸ್ವಪ್ನ, ಖಡಕ್ ಐಪಿಎಸ್ ಆಫೀಸರ್. ಹೀಗಾಗಿಯೇ ಇವರು ಇಡೀ ಭಾರತದ ಜನರಿಗೆ ಚಿರಪರಿಚಿತ.
ಸೇವೆಯಷ್ಟೇ ಮಾನವೀಯ ಮೌಲ್ಯ ಹೊಂದಿರುವ ಇವರು, ಸದ್ಯ ತಮ್ಮ ತಾಯ್ನಾಡಿನ ಜನರು ಕೊರೊನಾದಿಂದ ಸಂಕಷ್ಟ ಅನುಭವಿಸುತ್ತಿರುವುದಕ್ಕೆ ಮಮ್ಮಲ ಮರುಗಿ ಸಹಾಯ ಮಾಡಿದ್ದಾರೆ. ವಿಶ್ವನಾಥ್ ಸಜ್ಜನರ್ ಅವರು, ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸಿದ್ದ ತೆಲಂಗಾಣ ಪಶುವೈದ್ಯೆ ದಿಶಾ ಅತ್ಯಾಚಾರ ಪ್ರಕರಣವನ್ನು ಕೇವಲ 24 ಗಂಟೆಗಳಲ್ಲಿಯೇ ಬೇಧಿಸಿ, ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಇಡೀ ದೇಶದ ಜನರ ಮನಸ್ಸಿನಲ್ಲಿ ಇಂದಿಗೂ ಹೀರೋ ಆಗಿಯೇ ಉಳಿದುಕೊಂಡವರು.
ಆರೋಪಿಗಳು ಪಶು ವೈದ್ಯೆ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಆ ಯುವತಿಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಇದಕ್ಕೆ ಇಡೀ ರಾಷ್ಟ್ರವೇ ಆಕ್ರೋಶ ವ್ಯಕ್ತಪಡಿಸಿತ್ತು. ಆಗ ಈ ಪ್ರಕರಣದ ತನಿಖೆಯ ಹೊಣೆಯನ್ನು ನಮ್ಮ ಹೆಮ್ಮೆಯ ಕನ್ನಡಿಗ ಹಾಗೂ ಗದಗ ಜಿಲ್ಲೆಯ ಮಣ್ಣಿನಲ್ಲಿ ಹುಟ್ಟಿದ ವಿಶ್ವನಾಥ್ ಸಜ್ಜನರ್ ಅವರಿಗೆ ವಹಿಸಲಾಗಿತ್ತು.
ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಚೆರ್ಲಪಲ್ಲಿ ಜೈಲಿಗೆ ಕಳುಹಿಸಿದ್ದರು. ಆ ನಂತರ ಆರೋಪಿಗಳನ್ನು ದುಷ್ಕೃತ್ಯ ನಡೆಸಿದ್ದ ಸ್ಥಳಕ್ಕೆ ಮಹಜರು ಮಾಡಲು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಆರೋಪಿಗಳು ಕಲ್ಲುಗಳನ್ನು ಪೊಲೀಸರತ್ತ ಎಸೆಯಲು ಪ್ರಾರಂಭಿಸಿದ್ದಲ್ಲದೆ, ಗಂಡು ಹಾರಿಸಲು ಪ್ರಾರಂಭಿಸಿದ್ದರು. ಆರೋಪಿಗಳಿಗೆ ಧೈರ್ಯದಿಂದ ಗುಂಡು ಹಾರಿಸಿ ಅತ್ಯಾಚಾರಿಗಳ ಸಂಹಾರ ಮಾಡಿದ್ದು, ಇವರೆ. ಈ ಪ್ರಕರಣದಿಂದಾಗಿ ಸಜ್ಜನರ್ ಅವರನ್ನು ಇಡೀ ರಾಷ್ಟ್ರದ ಮಹಿಳೆಯರು ಅಭಿನಂದಿಸಿ, ಆನಂದ ಭಾಷ್ಪ ಸುರಿಸಿದ್ದರು. ಸದ್ಯ ಈ ಖಡಕ್ ಆಫೀಸರ್, ತಾವು ಹುಟ್ಟಿ- ಬೆಳೆದ, ತಮ್ಮ ಜಿಲ್ಲೆಯ ಜನರ ಕಷ್ಟಕ್ಕೆ ಸ್ಪಂದಿಸುವ ಮಾನವೀಯ ಕಾರ್ಯ ಮಾಡಿದ್ದಾರೆ.
ಈ ವೈದ್ಯಕೀಯ ಸಾಮಾಗ್ರಿಗಳನ್ನು ಐಪಿಎಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರ ಸಹೋದರ, ಹುಬ್ಬಳ್ಳಿಯ ಸಾಯಿ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನ ಡಾ. ಎಂ.ಸಿ. ಸಜ್ಜನರ ಅವರು ಜಿಲ್ಲಾಡಳಿತದ ಭವನದ ಆವರಣದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿ.ಇ.ಓ ಭರತ್, ಡಿ.ಎಚ್.ಓ ಸತೀಶ್ ಬಸರಿಗಿಡದ್ ಸೇರಿದಂತೆ ಹಲವರು ಇದ್ದರು.
ಇಂದು ರಾಜ್ಯದಲ್ಲಿ 22,823 ಜನರಲ್ಲಿ ಸೋಂಕು ಕಾಣಿಸಿಕೊಡಿದೆ. ಅಲ್ಲದೇ, ಇಂದು 401 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಅಲ್ಲದೇ, ಇಂದು ರಾಜ್ಯದಲ್ಲಿ 52,253 ಜನ ವಿವಿಧ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಕೊರೊನಾಗೆ 401 ಜನ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಇಲ್ಲಿಯವರೆಗೆ 27,806 ಜನ ಸಾವನ್ನಪ್ಪಿದಂತಾಗಿದೆ.
ಇಂದು ಬೆಂಗಳೂರಿನಲ್ಲಿ 5,763 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ, ಇನ್ನೂ 2,80,697 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಇಂದು ಮಹಾಮಾರಿಗೆ 192 ಜನ ಬಲಿಯಾಗಿದ್ದಾರೆ. ಇಂದು ಬೆಂಗಳೂರು 5,736, ಬೆಳಗಾವಿ 1.147, ಹಾಸನ 1,505, ಮೈಸೂರು 2,240, ತುಮಕೂರಿನಲ್ಲಿ 1,219 ಪ್ರಕರಣಗಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.
ಮಹಾಮಾರಿ ಎರಡನೇ ಅಲೆ ತಡೆಯುವಲ್ಲಿ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಜಿಲ್ಲೆಯ ಬಾದಾಮಿ ಪಟ್ಟಣಕ್ಕೆ ಆಗಮಿಸಿ ಕೊರೊನಾ ನಿಯಂತ್ರಣ ಕುರಿತಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ನೇ ಅಲೆಯ ಬಗ್ಗೆ ಮಾಹಿತಿ ಇದ್ದರೂ ಸರ್ಕಾರ ಜಾಗೃತಿ ವಹಿಸಲಿಲ್ಲ. ಆಕ್ಸಿಜನ್, ರೆಮ್ ಡಿಸಿವರ್, ವೆಂಟಿಲೇಟರ್ ಬೆಡ್ಗಾಳ ಸಿದ್ದತೆ ನಡೆಸಲಿಲ್ಲ. ರೋಗಿಗಳಿಗೆ ಆಕ್ಸಿಜನ್, ರೆಮ್ ಡಿಸಿವರ್ ಇಂಜೆಕ್ಷನ್ ಪೂರೈಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಬದಲಾವಣೆ ಆಗಬಹುದು ಎಂಬ ಮಾಹಿತಿ ನನಗಿದೆ. ಆದರೆ, ಕೊರೊನಾದಿಂದಾಗಿ ಈ ವಿಷಯ ಮುಂದಕ್ಕೆ ಹೋಗಿರಬಹುದು. ನಾನೊಬ್ಬ ವಿರೋಧ ಪಕ್ಷದ ನಾಯಕ. ಶ್ಯಾಡೋ ಆಫ್ ಚೀಫ್ ಮಿನಿಸ್ಟರ್ ಇದ್ದಾಂಗೆ ನಾನು ಮಾಹಿತಿ ತಿಳಿದುಕೊಳ್ಳುವಂತಿಲ್ಲ ಎಂದರೆ ಇದು ಪ್ರಜಾಪ್ರಭುತ್ವದ ವ್ಯವಸ್ಥೆ ನಾ? ಎಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಅತಿಕ್ರಮವಾಗಿ ಪ್ರವೇಶಕ್ಕೆ ಪ್ರಯತ್ನ ಮಾಡಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಪುತ್ರನ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಜಿಪಂ ಸದಸ್ಯ ಅಮಿತ್ ದೇವರಹಟ್ಟಿ ವಿರುದ್ದ ಎಫ್ ಐಆರ್ ದಾಖಲಾಗಿದೆ. ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಹಿನಕಲ್ ಬಳಿಯ ಖಾಲಿ ನಿವೇಶನಕ್ಕೆ ಅವರು ಅತಿಕ್ರಮವಾಗಿ ಪ್ರವೇಶ ಮಾಡಿದ್ದರು. ಅಲ್ಲದೇ, ಕಂಪೌಂಡ್ ನಿರ್ಮಾಣ ಮಾಡಲು ಮುಂದಾಗಿದ್ದರು.
ಇದನ್ನು ತಡೆಯಲು ಬಂದ ಮೂಲ ವಾರಸುದಾರ ಯೋಗೀಶ್ ಎಂಬುವವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದರು. ಹೀಗಾಗಿ ನಿವೇಶನದ ಮೂಲ ಮಾಲೀಕ ಯೋಗೀಶ್ ನೀಡಿದ ದೂರಿನನಂತೆ ಪೊಲೀಸರು ಐಪಿಸಿ ಸೆಕ್ಷನ್ 504 , 506 ರ ಅಡಿ ಎಫ್ ಐಆರ್ ದಾಖಲಿಸಲಾಗಿದೆ. ಪಟೇಲ್ , ಅನೂಪ್, ವೈಕುಂಠಾಚಾರ್ ಸೇರಿದಂತೆ ಎಂಟು ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ಮೂರನೇ ಆರೋಪಿಯಾಗಿದ್ದಾರೆ.
ಸದ್ಯ ದೇಶವನ್ನು ಕೊರೊನಾ ಕಾಡುತ್ತಿದೆ. ಹೀಗಾಗಿ ಎಲ್ಲೆಡೆ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರ ನಡುವೆ ಹಲವರು ದೇವರ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಸುಕ್ಷೇತ್ರ ಗಾಣಗಾಪೂರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗಿದೆ. ಮೂರು ದಿನಗಳ ಕಾಲ ರುದ್ರಾಭಿಷೇಕ ಕೈಗೊಳ್ಳಲಾಗಿತ್ತು. ಅದು ಇಂದು ಮುಕ್ತಾಯವಾಗಿದೆ.ಕೊರೊನಾ ತೊಲಗಲಿ ಎಂಬ ಕಾರಣಕ್ಕೆ ಗಾಣಗಾಪುರ ದತ್ತನ ಸನ್ನಿಧಿಯಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ಧಾರ ರುದ್ರಾಭೀಷೇಕ ನಡೆದಿದೆ. ಅಲ್ಲದೇ, ಮೂರು ದಿನಗಳ ಕಾಲ ನಿರಂತರವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆದಿವೆ.
ಜಗತ್ತಿಗೆ ಎದುರಾದ ದೊಡ್ಡ ಕಂಟಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಿ ಪೂಜೆ, ಹೋಮ ಹವನ, ರುದ್ರಾಭೀಷೇಕ, ಪಾರಾಯಣ ಮಾಡಲಾಗಿದೆ. ದೇವಸ್ಥಾನದಲ್ಲಿನ 10ಕ್ಕೂ ಹೆಚ್ಚು ಅರ್ಚಕರಿಂದ ಪೂಜಾ ಕೈಂಕರ್ಯಗಳು ನಡೆದಿವೆ.
ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಅವರು ಏಕ ವಚನದಲ್ಲಿಯೇ ಗುಡುಗಿದ್ದಾರೆ. ನಿನಗೆ ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿಸು. ರೋಹಿಣಿ ಸಿಂಧೂರಿ ವಿರುದ್ದ ಪ್ರತಾಪ್ ಸಿಂಹ ಹೇಳಿಕೆ ಬೇಕಿತ್ತಾ? ಸುಖಾ ಸುಮ್ಮನೆ ಹಾದಿ ಬೀದಿಲಿ ನಿಂತು ಮಾತನಾಡಬೇಡ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಪೇಪರ್ ಟೈಗರ್ ಆಗುವುದು ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡಿ. ಜಿಲ್ಲೆಯ ಶಾಸಕರು ನಿನಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದನಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿರುವ ಲೆಕ್ಕ ಕೊಡು. ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು. ಆಡಳಿತ ಪಕ್ಷದವರಲ್ಲ ಎಂದು ಗುಡುಗಿದ್ದಾರೆ.
ನೀನು ಪವರ್ ಫುಲ್ ಎಂಪಿ, ಪಿಎಂ, ಸಿಎಂ ನೀನು ಹೇಳಿದಂತೆ ಕೇಳುತ್ತಾರೆ. ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿ ತೋರಿಸು. ಅದನ್ನು ಬಿಟ್ಟು ಪೇಪರ್ ಸ್ಟೇಟ್ ಮೆಂಟ್ ಕೊಟ್ಟು ಗೊಂದಲ ಏಕೆ ಮಾಡಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯುಕ್ತಿಕ ಸಮಸ್ಯೆ ಇದೆ ಎನಿಸುತ್ತಿದೆ. ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ ಎಂದು ಹೇಳಿದ್ದಾರೆ.
ಕೊರೊನಾ ಸೋಂಕಿತ ವ್ಯಕ್ತಿ ದರ್ಪ ಮೆರೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ನಾನು ಸತ್ತರೆ ಸಾಯುತ್ತೇನೆ. ನಿಮಗೇನು ಕಷ್ಟ? ನನ್ನ ತೋಟಕ್ಕೆ ನೀವು ಗೊಬ್ಬರ ಹಾಕಲು ನೀವು ಬರುತ್ತೀರಾ? ಎಂದು ಸೋಂಕಿತ ವ್ಯಕ್ತಿ ದರ್ಪ ಮೆರೆದು ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದಾನೆ.
ಈ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೋಂ ಐಸೋಲೇಷನ್ ನಲ್ಲಿ ಇದ್ದರು. ಆದರೂ ಹೊರಗಡೆ ತಿರುಗಾಟ ನಡೆಸಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಆತನನ್ನು ಪ್ರಶ್ನಿಸಿದ್ದಾರೆ. ಆದರೆ, ಆ ವ್ಯಕ್ತಿ ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದಾನೆ. ಅಲ್ಲದೇ, ಪ್ರಶ್ನೆ ಮಾಡಿದ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಘಟನೆ ತಾಲೂಕಿನ ನೆರಡಿ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿರುವುದು ಬಿಟ್ಟು ಹೊರಗೆ ಏಕೆ ಹೋಗಿದ್ದೀರಾ? ಎಂದು ಅಧಿಕಾರಗಳು ಪ್ರಶ್ನಿಸಿದ್ದರು. ಆಗ ನನ್ನಿಂದ ಯಾರಿಗೆ ತೊಂದರೆಯಾಗಿದೆ ಹೇಳಿ? ನಾನು ಹೊರಗಡೆ ಓಡಾಡುತ್ತೇನೆ ಅದನ್ನು ನೀವು ಕೇಳಬಾರದು ಎಂದು ಅಧಿಕಾರಿಗಳನ್ನೇ ಪ್ರಶ್ನಿಸಿದ್ದಾನೆ. ಸದ್ಯ ಸೋಂಕಿತ ವ್ಯಕ್ತಿಯ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.