Home Blog Page 3163

ಒಂದೇ ದಿನ 105 ವಾಹನ ಸೀಜ್, 71 ಕೇಸ್; ಎಸ್ಪಿ ಯತೀಶ್

ವಿಜಯಸಾಕ್ಷಿ ಸುದ್ದಿ, ಗದಗ

ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದಿದ್ದ ವಾಹನ ಸವಾರರಿಗೆ ನಿನ್ನೆ ಗದಗ ಜಿಲ್ಲಾ ಪೊಲೀಸರು ಪಾಠ ಕಲಿಸಿದ್ದಾರೆ. ನಿನ್ನೆ ಒಂದೇ ದಿನ ಲಾಕ್‌ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ 105 ವಾಹನಗಳನ್ನು ಸೀಜ್ ಮಾಡಲಾಗಿದೆ.

ಗುರುವಾರದಂದು ರೋಣ, ಗದಗ, ಲಕ್ಷ್ಮೇಶ್ವರ, ಗಜೇಂದ್ರಗಡ ಸೇರಿದಂತೆ ಜಿಲ್ಲೆಯ ವಿವಿದೆಡೆ ಆಟೋ, ಬೈಕ್ ಸೇರಿದಂತೆ 105 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 71 ಕೇಸ್ ದಾಖಲಾಗಿವೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಹೇಳಿದ್ದಾರೆ.

ಈ ಕುರಿತು ವಿಜಯಸಾಕ್ಷಿ ಗೆ ಮಾಹಿತಿ ‌ನೀಡಿರುವ ಅವರು, ಸೋಂಕು ತಡೆಗಟ್ಟಲು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಬರದೇ, ವಾಹನಗಳಲ್ಲಿ ಬೇಕಾಬಿಟ್ಟಿ ಓಡಾಡದೆ ಸೋಂಕು ತಡೆಗಟ್ಟಲು ಸಹಕರಿಸಲು ಸಾರ್ವಜನಿಕರಲ್ಲಿ ಕೋರಿದ್ದಾರೆ.

ಲಾಠಿ ಬೀಸಿ ಬೈಕ್ ‌ಕೆಡವಿದ ಪೊಲೀಸರು; ಸಾರ್ವಜನಿಕರ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ತಪ್ಪಿಸಿಕೊಳ್ಳಲು ಹೋಗಿದ್ದ ಬೈಕ್ ಸವಾರನ ಮೇಲೆ ಲಾಠಿ ಬೀಸಿದ ಪರಿಣಾಮ ಬೈಕ್ ಸವಾರ‌ ಬಿದ್ದು ಗಾಯಗೊಂಡ ಘಟನೆ ಹಳೆಹುಬ್ಬಳ್ಳಿಯ ದೇವರ ಗುಡಿಹಾಳ‌ ಬಳಿ ನಡೆದಿದೆ.

ಬೈಕ್ ಸವಾರ ರಹಮತ್‌ ಕಾಗದಗಾರ ಎಂಬಾತ ಗಾಯಗೊಂಡಾತ. ಈತ ದೇವರ ಗುಡಿಹಾಳ ಬಳಿ ಬೈಕ್ ನಲ್ಲಿ ಬರುತ್ತಿದ್ದಾಗ ಪಿಎಸ್ಐ ಸುಖಾನಂದ ಶಿಂದೆ ಎಂಬುವವರು ಬೈಕ್ ನಿಲ್ಲಿಸಿಲು ಸೂಚಿಸಿದ್ದಾರೆ. ಆದ್ರೆ ಬೈಕ್ ಸವಾರ ಬೈಕ್ ನಿಲ್ಲಸದೇ ಸ್ಪೀಡ್ ಜಾಸ್ತಿ ಮಾಡಿದ್ದಾನೆ. ಇದರಿಂದ ಸಿಟ್ಟಾದ ಪಿಎಸ್ಐ ಶಿಂದೆ ಲಾಠಿ ಬೀಸಿದ್ದಾರೆ. ಬೀಸಿದ ಲಾಠಿ ವೇಗವಾಗಿ ಹೊರಟಿದ್ದ ಬೈಕ್ ಬೀಳುವಂತೆ ಮಾಡಿದೆ. ಇದರಿಂದಾಗಿ ಬೈಕ್ ಸವಾರ ಬಿದ್ದು ಗಾಯಗೊಂಡಿದ್ದಾನೆ ಎನ್ನಲಾಗಿದೆ. ಆದರೆ ಕೆಲ ಮೂಲಗಳು ಹೇಳೋದೆ ಬೇರೆ. ಪಿಎಸ್ಐ ಬೀಸಿದ ಲಾಠಿ ಮುಖಕ್ಕೆ ಬಿದ್ದಿದೆ, ಹೀಗಾಗಿ ಸವಾರ‌ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ ಅಂತ.

ಪೊಲೀಸರ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜನಸ್ನೇಹಿಯಾಗಿ ವರ್ತಿಸಬೇಕಾದ ಪೊಲೀಸರೇ ಈ ರೀತಿ ವರ್ತಿಸಿದರೆ ಹೇಗೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಾ ಇದೆ.

ಗಾಯಗೊಂಡ ರಹಮತ್ ಕಿಮ್ಸ್ ಆಸ್ಪತ್ರೆಗೆ ದಾಖಾಲಾಗಿದ್ದಾನೆ.

ಎರಡು ಬಾರಿ ಕೊರೊನಾ ಗೆದ್ದ 90ರ ಅಜ್ಜಿ

ವಿಜಯಸಾಕ್ಷಿ ಸುದ್ದಿ, ರಾಯಚೂರು

90 ವಯಸ್ಸಿನ ಅಜ್ಜಿಯೊಬ್ಬರು 2ನೇ ಬಾರಿಗೆ ಕೊರೊನಾ ಮಹಾಮಾರಿ ಗೆದ್ದಿದ್ದಾರೆ.
ಜಿಲ್ಲೆಯ ಲಿಂಗಸುಗೂರಿನ 90 ವರ್ಷದ ಅಜ್ಜಿ ಎರಡನೇ ಬಾರಿ ಕೊರೊನಾ ಗೆದ್ದಿದ್ದಾರೆ. ಸೋಂಕು ತಗುಲಿದರೂ ಎದೆ ಗುಂದದೆ ಆತ್ಮವಿಶ್ವಾಸದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ.

ಕೊರೊನಾ ಹೆದರಿಕೊಳ್ಳುವ ರೋಗವೇ ಅಲ್ಲ ಎಂದು ಹೇಳುತ್ತಿರುವ ಅಜ್ಜಿ ಈಶ್ವರಮ್ಮ, ಕೊರೊನಾ ಗೆಲ್ಲಲು ಔಷಧಿಯಷ್ಟೇ ಅಲ್ಲ ಆತ್ಮವಿಶ್ವಾಸ ಬೇಕು ಎಂದು ಇತರರಿಗೆ ಧೈರ್ಯ ತುಂಬುತ್ತಿದ್ದಾರೆ. ಗುಣಮುಖರಾಗಿ ಮನೆಗೆ ಮರಳಿರುವ ಅಜ್ಜಿ, ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ. ವೈದ್ಯರು ಹೇಳಿದಂತೆ ಕೇಳಬೇಕು, ವ್ಯಾಯಾಮ ಮಾಡಬೇಕು ರೋಗ ತಾನೇ ಹೋಗುತ್ತದೆ ಎಂದು ಯುವ ಪೀಳಿಗೆಗೆ ಹೇಳುತ್ತಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಮೊದಲ ಬಾರಿ ಸೋಂಕು ತಗುಲಿತ್ತು. ಲಿಂಗಸುಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬಳಿಕ 10 ದಿನಗಳ ಕೆಳಗೆ ಪುನಃ ಸೋಂಕು ಧೃಡವಾಗಿತ್ತು. ಹೀಗಾಗಿ ಇಲ್ಲಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಗುಣಮುಖರಾಗಿ ಅಜ್ಜಿ ಮನೆಗೆ ಬಂದಿದ್ದಾರೆ. ಆಸ್ಪತ್ರೆಯಲ್ಲಿದ್ದಾಗ ಹೆದರಿದ್ದ ಮಕ್ಕಳು, ಮೊಮ್ಮಕ್ಕಳಿಗೆ ಅಜ್ಜಿಯೇ ಧೈರ್ಯ ತುಂಬಿ ಗುಣಮುಖರಾಗಿ ಬಂದಿದ್ದಾರೆ.

ರಾಜ್ಯದಲ್ಲಿ ತಪ್ಪುತ್ತಿಲ್ಲ ಸಾವಿನ ಆತಂಕ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದು ಕೂಡ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಸಾವಿನಲ್ಲಿ ಆತಂಕ ಮನೆ ಮಾಡಿದೆ. ಇಂದು ರಾಜ್ಯದಲ್ಲಿ 24,214 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 31,459 ಜನರು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೇ, ಇಂದು 476 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸತ್ತವರ ಸಂಖ್ಯೆ 27,405ಕ್ಕೆ ತಲುಪಿದೆ.

ಇಂದು ರಾಜಧಾನಿಯಲ್ಲಿ 5,949 ಪ್ರಕರಣಗಳು ವರದಿಯಾಗಿದ್ದು, ಅಲ್ಲದೇ, 273 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 6,643 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ರಾಜ್ಯದ ಬಾಗಲಕೋಟೆ 214, ಬಳ್ಳಾರಿಯ 725, ಬೆಳಗಾವಿ 1,147, ಬೆಂಗಳೂರು ಗ್ರಾಮಾಂತರ 623, ಬೆಂಗಳೂರು ನಗರ 5,949, ಬೀದರ್ 60, ಚಾಮರಾಜನಗರ 380, ಚಿಕ್ಕಬಳ್ಳಾಪುರ 238, ಚಿಕ್ಕಮಗಳೂರು 715, ಚಿತ್ರದುರ್ಗ 710, ದಕ್ಷಿಣ ಕನ್ನಡ 555, ದಾವಣಗೆರೆ 806, ಧಾರವಾಡ 678, ಗದಗ 370, ಹಾಸನ 1,505, ಹಾವೇರಿ 159, ಕಲಬುರಗಿ 153, ಕೊಡಗು 337, ಕೋಲಾರ 591, ಕೊಪ್ಪಳ 495, ಮಂಡ್ಯ 755, ಮೈಸೂರು 2,240, ರಾಯಚೂರು 445, ರಾಮನಗರ 263, ಶಿವಮೊಗ್ಗ 822, ತುಮಕೂರು 1,219, ಉಡುಪಿ 905, ಉತ್ತರ ಕನ್ನಡ 659, ವಿಜಯಪುರ 306 ಹಾಗೂ ಯಾದಗಿರಿಯಲ್ಲಿ 190 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಎರಡೂ ಅಲೆ ಬೀಸಿದರೂ ಈ ಗ್ರಾಮದಲ್ಲಿ ಒಂದೇ ಒಂದು ಸೋಂಕಿನ ಕೇಸ್ ಇಲ್ಲ

ವಿಜಯಸಾಕ್ಷಿ ಸುದ್ದಿ, ಧಾರವಾಡ

ದೇಶದಲ್ಲಿ ಕೊರೊನಾ ಎರಡು ಅಲೆ ಬೀಸಿದೆ. ಮೊದಲ ಅಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಹೆಚ್ಚಿನ ಹಾನಿ ಮಾಡಿರಲಿಲ್ಲ. ಆದರೆ, ಎರಡನೇ ಅಲೆ ಕೊರೊನಾ ಹೊಕ್ಕ ನಂತರ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದಾಗಿ ಸಾವು – ನೋವು ಸಂಭವಿಸುವಂತಾಗಿತ್ತು. ಆದರೆ, ಎರಡೂ ಅಲೆಗಳಲ್ಲಿಯೂ ಈ ಗ್ರಾಮದವರು ಕೊರೊನಾಗೆ ನೋ ಎಂಟ್ರಿ ಎಂದು ಹೇಳಿದೆ.

ಜಿಲ್ಲಾ ಕೇಂದ್ರದಿಂದ ಸ್ವಲ್ಪ ದೂರದಲ್ಲಿರುವ ಹುಣಶಿಕುಮರಿ ಹಾಗೂ ಶಿವನಗರ ಗ್ರಾಮಗಳಲ್ಲಿ ಎರಡೂ ಅಲೆಯಿಂದ ಒಂದೇ ಒಂದು ಕೊರೊನಾ ಕೇಸ್ ದಾಖಲಾಗಿಲ್ಲ. ಈ ಎರಡೂ ಗ್ರಾಮಗಳಲ್ಲಿ 100 ರಿಂದ 150 ಮನೆಗಳಿವೆ. ಅಲ್ಲದೇ, ಸುಮಾರು ಸಾವಿರದಷ್ಟು ಜನಸಂಖ್ಯೆ ಇವೆ. ಈ ಗ್ರಾಮಗಳಲ್ಲಿನ ಜನರು ಕೊರೊನಾ ಪ್ರಾರಂಭವಾಗುತ್ತಿದ್ದಂತೆ ನಗರಕ್ಕೆ ಬರುವುದನ್ನೇ ಬಿಟ್ಟು ಬಿಡುತ್ತಾರೆ. ಏನಾದರೂ ಬೇಕಾದರೆ ಅಕ್ಕಪಕ್ಕದ ಗ್ರಾಮಗಳಿಗೆ ಹೋಗಿ ದಿನಸಿ ಹಾಗೂ ತರಕಾರಿ ತರುತ್ತಿದ್ದಾರೆ. ಹೀಗಾಗಿ ಈ ಗ್ರಾಮಗಳಲ್ಲಿ ಕೊರೊನಾ ಹೊಕ್ಕಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ನಗರಕ್ಕೆ ಯಾರೂ ಹೋಗದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ, ನಗರದಿಂದ ಇಲ್ಲಿಗೆ ಯಾರಿಗೂ ಪ್ರವೇಶ ನೀಡಿಲ್ಲ. ಜಾನುವಾರು ಸಾಕಿ ಜೀವನ ನಡೆಸುವ ಇವರು, ಸದ್ಯ ಹೊಲ ಗದ್ದೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ, ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸುತ್ತಿಲ್ಲ. ಹೊರ ಗ್ರಾಮಗಳ ಕಾರ್ಯಕ್ರಮಗಳಿಗೆ ಯಾರೂ ಹೋಗುತ್ತಿಲ್ಲ. ಹಾಲು ಸರಬರಾಜು ಮಾಡುವುದಕ್ಕಾಗಿ ಬೇರೆ ಗ್ರಾಮಕ್ಕೆ ತೆರಳಲು ಗ್ರಾಮದ ಇಬ್ಬರನ್ನು ನೇಮಕ ಮಾಡಲಾಗಿದೆ. ಅವರಿಬ್ಬರೇ ದಿನಸಿ ಕೂಡ ತಂದು ಕೊಡಬೇಕು. ಈ ರೀತಿ ಶಿಸ್ತು ಬದ್ಧ ಜೀವನ ನಡೆಸುತ್ತಿರುವ ಇವರು ಕೊರೊನಾ ಬರದಂತೆ ಎಚ್ಚರಿಕೆ ವಹಿಸಿದ್ದಾರೆ.

ಪತ್ರಕರ್ತರಿಗೂ ವಿಶೇಷ ಪ್ಯಾಕೇಜ್ ಘೋಷಿಸಿ: ಡಾ| ಶಿವಕುಮಾರ್ ಶ್ರೀ

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯ ಸರ್ಕಾರವು ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ವಿವಿಧ ಶ್ರಮಿಕ ವರ್ಗದವರಿಗೆ ಹಾಗೂ ಕೊರೊನಾ ವಾರಿಯರ್ಸ್‌ಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ಜನರಿಗೆ ಹಗಲಿರುಳು ದುಡಿದು ಸುದ್ದಿ ಮುಟ್ಟಿಸುತ್ತಿರುವ ಮಾಧ್ಯಮದವರಿಗೆ ಪ್ಯಾಕೇಜ್‌ನಲ್ಲಿ ಏನೂ ಘೋಷಿಸಿಲ್ಲ. ಹೀಗಾಗಿ ಅವರಿಗೆ ಪ್ಯಾಕೇಜ್ ಘೋಷಿಸಬೇಕು ಎಂದು ಸಿದ್ದನಕೊಳ್ಳ ನಿರತಂರ ದಾಸೋಹ ಮಠದ ಡಾ| ಶಿವಕುಮಾರ ಸ್ವಾಮೀಜಿ ಆಗ್ರಹಿಸಿದ್ದಾರೆ.

ಮಾಧ್ಯಮ ಸಿಬ್ಬಂದಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ಈ ಕೋವಿಡ್ ಕಾರ್ಯದಲ್ಲಿ ಜಾಗೃತಿ ಮೂಡಿಸುತ್ತ ಹಗಲಿರುಳು  ಮುಂಚೂಣಿ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಇಂತಹ ಮಾಧ್ಯಮದ ಪತ್ರಕರ್ತರ ಬಗ್ಗೆ ಸರ್ಕಾರ ನಿಷ್ಕಾಳಜಿ ವಹಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವದ ಒಂದು ಅಂಗವಾಗಿರುವ ಮಾಧ್ಯಮದ ಸಿಬ್ಬಂದಿಯನ್ನು ಪ್ಯಾಕೇಜ್ ಘೋಷಿಸುವಲ್ಲಿ ಸರ್ಕಾರ ಮರೆತಿದ್ದು, ಕೂಡಲೇ ರಾಜ್ಯದ ಮುಖ್ಯಮಂತ್ರಿ, ಅವರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಿಲ್ಲುತ್ತಿಲ್ಲ ಸಾವಿನ ಸರಣಿ; ಮತ್ತೆ ಐವರ ಸಾವು, 370 ಜನರಿಗೆ ಸೋಂಕು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸೋಂಕಿನ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದೆ. ಇವತ್ತು 370 ಜನರಿಗೆ ಸೋಂಕು ತಗುಲಿದೆ.

ಇಂದಿನ 370 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 22428 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -158, ಮುಂಡರಗಿ-73, ನರಗುಂದ-25, ರೋಣ-65, ಶಿರಹಟ್ಟಿ-41, ಹೊರಜಿಲ್ಲೆಯ-08 ಸೇರಿದಂತೆ 370 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 231 ಕ್ಕೇರಿದೆ.

ಗದಗ ಶಹರದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿಯ ನಿವಾಸಿ 65 ವರ್ಷದ ಮಹಿಳೆ ಮೇ-16 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 20 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಬೆಟಗೇರಿಯ ನಿವಾಸಿ 62 ವರ್ಷದ ವ್ಯಕ್ತಿ ಮೇ -23 ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 23 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ನಿವಾಸಿ 54 ವರ್ಷದ ವ್ಯಕ್ತಿ ಮೇ 23 ರಂದು ನರಗುಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 26 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ಒಕ್ಕಲಗೇರಿ ಓಣಿಯ ನಿವಾಸಿ 64 ವರ್ಷದ ಮಹಿಳೆ ಮೇ 16 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ 26 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಅಂತೂರ-ಬೆಂತೂರ‌ ನಿವಾಸಿ 60 ವರ್ಷದ ವ್ಯಕ್ತಿ ಮೇ 22 ರಂದು ದಾಖಲಾಗಿದ್ದರು. ಅವರು ಮೇ 26 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 401 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 19193 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3004 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 185 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸಿಬಿಎಸ್ ಇ ಪರೀಕ್ಷೆಯ ನಿಯಮ ಬದಲಾಯಿಸಲಿದೆಯೇ ಸರ್ಕಾರ?

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೊರೊನಾ ಹಾವಳಿಯಿಂದಾಗಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮುಹೂರ್ತ ಕೂಡಿ ಬರುತ್ತಿಲ್ಲ. ಸದ್ಯ ಸಿಬಿಎಸ್ ಇ 12ನೇ ತರಗತಿಯ ಪರೀಕ್ಷೆಯನ್ನು ಎರಡೂವರೆ ಗಂಟೆ ಬದಲಾಗಿ ಕೇವಲ 20 ನಿಮಿಷಕ್ಕೆ ನಿಗದಿಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೊರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಕೇವಲ 30 ನಿಮಿಷಗಳ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗುತ್ತಿದ್ದು, ಜೂ. 1ರಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲಾ ಪರೀಕ್ಷೆಯ ದಿನಾಂಕ ಹಾಗೂ ಸಮಯ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.
ಪಿಯುಸಿ ವಿದ್ಯಾರ್ಥಿಗಳು ಈ ಹಿಂದೆ ಎರಡೂವರೆ ಗಂಟೆಗಳ ಕಾಲ ಪರೀಕ್ಷೆ ಬರೆಯುತ್ತಿದ್ದರು. ಆದರೆ, ಶಿಕ್ಷಣ ತಜ್ಞರ ಸಲಹೆ ಮೇರೆಗೆ ಪರೀಕ್ಷಾ ಅವಧಿಯನ್ನು 30 ನಿಮಿಷಕ್ಕೆ ಇಳಿಸಲು ಮುಂದಾಗಿದ್ದು, ಎಲ್ಲವೂ ವಸ್ತುನಿಷ್ಠ (ಬಹುಆಯ್ಕೆ) ಪ್ರಶ್ನೆಗಳಿರಲಿವೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಶಿಕ್ಷಣ ಸಚಿವಾಲಯ ಇತ್ತೀಚೆಗೆ ಪರೀಕ್ಷೆಯ ಕುರಿತು ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿತ್ತು. ಬಹುತೇಕ ರಾಜ್ಯಗಳು ಸಿಬಿಎಸ್ಇ್ 12ನೇ ತರಗತಿ ಪರೀಕ್ಷೆ ನಡೆಸುವ ಸಲಹೆ ನೀಡಿದ್ದವು.
ದೆಹಲಿ, ಮಹಾರಾಷ್ಟ್ರ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ಮಾತ್ರ ಪರೀಕ್ಷೆ ಇಲ್ಲದೇ ಮಕ್ಕಳನ್ನು ಪಾಸ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಟ್ಟಿದ್ದವು. ಆದರೆ, 32 ರಾಜ್ಯಗಳ ಪೈಕಿ 29 ರಾಜ್ಯಗಳು ಕಡಿಮೆ ಅವಧಿಯ ಪರೀಕ್ಷೆ ನಡೆಸುವಂತೆ ಸಲಹೆ ನೀಡಿದ್ದವು. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ರಾಜಸ್ಥಾನ, ತ್ರಿಪುರ ಮತ್ತು ತೆಲಂಗಾಣ ಮಾತ್ರ ಮೊದಲಿನ ಪದ್ಧತಿಯಂತೆ ಪರೀಕ್ಷೆ ನಡೆಸಲು ಸಲಹೆ ನೀಡಿದ್ದವು.

ಮಕ್ಕಳಿಗೆ ಲಸಿಕೆ ನೀಡುವ ಕುರಿತು ಚಿಂತನೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸದ್ಯ ದೇಶದಲ್ಲಿ ಕೊರೊನಾ ಎರಡನೇ ಅಲೆ ತಾಂಡವಾಡುತ್ತಿದೆ. ಇನ್ನೂ ಮೂರನೇ ಅಲೆಯ ಆತಂಕ ಇದ್ದು, ಅದು ಮಕ್ಕಳ ಮೇಲೆಯೇ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಮಕ್ಕಳಿಗೆ ಲಸಿಕೆ ನೀಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಜಗತ್ತಿನ ಯಾವುದೇ ರಾಷ್ಟ್ರಗಳು ಮಕ್ಕಳಿಗೆ ಲಸಿಕೆ ನೀಡುತ್ತಿಲ್ಲ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕೂಡ ಯಾವುದೇ ಶಿಫಾರಸು ಮಾಡಿಲ್ಲ. ಮಕ್ಕಳಲ್ಲಿ ಲಸಿಕೆಗಳ ಸುರಕ್ಷತೆಯ ಬಗ್ಗೆ ಅಧ್ಯಯನಗಳು ನಡೆದಿವೆ ಎಂದು ತಿಳಿಸಿದೆ.

ದೇಶದಲ್ಲಿ ಮಕ್ಕಳ ಮೇಲೆ ಶೀಘ್ರವೇ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ. ಈ ಪ್ರಯೋಗಗಳ ಆಧಾರದ ಮೇಲೆ ವಿಜ್ಞಾನಿಗಳು ಮುಂದಿನ ನಿರ್ಧಾರ ಕೈಗೊಳ್ಳಬೇಕೆ ಹೊರತು, ಭಯ ಹಾಗೂ ರಾಜಕಾರಣಿಗಳ ರಾಜಕೀಯ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದು ತಿಳಿಸಿದೆ.

ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ.ವಿ.ಕೆ.ಪೌಲ್, ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ ಇನ್ನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಕೊವಾಕ್ಸಿನ್ ಲಸಿಕೆಯನ್ನು 2 ರಿಂದ 18 ವರ್ಷದವರ ಮೇಲೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದೆ ಎಂದು ಹೇಳಿದ್ದಾರೆ.

ಬಾಲಾಜಿ ಆಸ್ಪತ್ರೆಯಲ್ಲಿ ರೋಗಿಗೆ ಲೈಂಗಿಕ ಕಿರುಕುಳ: ದೂರು

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ರಾಜ್ ದಖನಿ

`ವೈದ್ಯೋ ನಾರಾಯಣೋ ಹರಿಃ’ ಎಂದು ಕರೆಯುತ್ತಾರೆ. ವೈದ್ಯರು ನಾರಾಯಣನಾದರೆ, ಆಸ್ಪತ್ರೆ ದೇವಾಲಯವಾಗುತ್ತದೆ. ಆದರೆ, ಇದರ ತದ್ವಿರುದ್ಧವಾಗಿ ವರ್ತಿಸಿದರೆ?
ಹೌದು! ಇಲ್ಲೊಂದು ಇಂತಹ ಘಟನೆ ನಡೆದಿದೆ. ಈ ಆರೋಪದಿಂದಾಗಿ ಜನರು ಅವಳಿ ನಗರದಲ್ಲಿ ವೈದ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ.

ನಗರದ ಖ್ಯಾತ ನರರೋಗ ತಜ್ಞ ಡಾ| ಕ್ರಾಂತಿಕಿರಣ ಅವರ ಒಡೆತನದ ಬಾಲಾಜಿ ನರರೋಗ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ 52 ವರ್ಷದ ಮಹಿಳೆಯೊಬ್ಬರು ಮಿದುಳಿನ ಪಾರ್ಶ್ವವಾಯು ಚಿಕಿತ್ಸೆಗೆ ಸಂಬಂಧಿಸಿದಂತೆ ದಾಖಲಾಗಿದ್ದರು. ಕೂಡಲೇ ವೈದ್ಯರ ಸಲಹೆಯಂತೆ ಮಹಿಳೆಗೆ ಸಿಟಿ ಸ್ಕ್ಯಾನ್ ಮಾಡಲಾಗಿತ್ತು.

ಘಟನೆ ನಡೆದಿಲ್ಲ ಎಂದರು!

ಇತ್ತ ಮಹಿಳೆ ತನ್ನ ಮಗನಿಗೆ ದೂರವಾಣಿ ಕರೆ ಮಾಡಿ, ತನ್ನೊಂದಿಗೆ ನಡೆದ ವಿಚಿತ್ರ ಘಟನೆಯನ್ನು ವಿವರಿಸಿದ್ದಳು. ಗಾಬರಿಗೊಂಡ ಮಗ ಕೂಡಲೇ, ಬೆಂಗಳೂರಿನಿಂದ ಹುಬ್ಬಳ್ಳಿಯ ಅಸ್ಪತ್ರೆಗೆ ಭೇಟಿ ನೀಡಿ. ತನ್ನ ತಾಯಿಯೊಂದಿಗೆ ಮಾತನಾಡಿ ಘಟನೆಯ ವಿವರ ಪಡೆದಿದ್ದಾರೆ. ಅನಂತರ ಆಕೆಯ ಮಗ ಆಸ್ಪತ್ರೆಯ ಆಡಳಿತ ವಿಭಾಗದ ಗಮನಕ್ಕೂ ತಂದಿದ್ದಾರೆ. ಆದರೆ, ಆಸ್ಪತ್ರೆಯವರು ಆ ರೀತಿ ಯಾವ ಘಟನೆಯೂ ಇಲ್ಲಿ ನಡೆದಿಲ್ಲ ಎಂದು ಹೇಳಿದ್ದಾರೆ.

ಇಷ್ಟಕ್ಕೇ ಸುಮ್ಮನಾಗಿ ತನ್ನ ತಾಯಿಯ ಆರೈಕೆ, ಚಿಕಿತ್ಸೆಯತ್ತ ಗಮನ ಹರಿಸಲು ತಿಳಿಸಿದ್ದಾರೆ. ಆದರೆ, ಅಮ್ಮನ ಮಾತು ಸತ್ಯವಾಗಿದೆ. ದಯವಿಟ್ಟು ಮತ್ತೊಮ್ಮೆ ನಿಮ್ಮ ಸಿಬ್ಬಂದಿಯನ್ನು ವಿಚಾರಿಸಿ ಎಂದು ಬೇಡಿಕೊಂಡಿದ್ದಾರೆ. ಆದರೆ, ಇದಕ್ಕೆ ಆಸ್ಪತ್ರೆಯ ಆಡಳಿತ ವಿಭಾಗ ತಲೆ ಕೆಡಿಸಿಕೊಳ್ಳದೆ, ಚಿಕಿತ್ಸೆ ಮುಂದುವರೆಸಿದ್ದಾರೆ.

ಪೊಲೀಸರಿಗೆ ಮಾಹಿತಿ, ದೂರು

ಆದರೆ, ಮಗ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾನಗರದ ಪೊಲಿಸ್ ಇನ್‌ಸ್ಪೆಕ್ಟರ್ ಮಹಾಂತೇಶ ಹೂಲಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಮಹೀಳಾ ರೋಗಿಯ ಮಗ ವಿದ್ಯಾನಗರದ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಷ್ಟಕ್ಕೂ ಬಾಲಾಜಿ ಆಸ್ಪತ್ರೆಯಲ್ಲಿ ಆ ರೀತಿ ನಡೆದುಕೊಂಡ ವ್ಯಕ್ತಿ ಯಾರು? ನಿಜಕ್ಕೂ ಆ ದಿನ ನಡೆದ ಸತ್ಯ ಸಂಗತಿ ಏನು? ಎಂಬುವುದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಅಲ್ಲದೆ, ಆರೋಪಿಯ ವಿರುದ್ಧ ಡಾ| ಕ್ರಾಂತಿ ಕಿರಣ್ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಿದೆ.

ಆಸ್ಪತ್ರೆಯವರು ತಲೆ ಕೆಡಿಸಿಕೊಂಡಿಲ್ಲ

ನನ್ನ ತಾಯಿಗೆ ಕೊರೊನಾ ಸೋಂಕು ತಗುಲಿತ್ತು. ಆನಂತರ ಅವರು ಹೋಂ ಐಸೋಲೇಷನ್‌ನಲ್ಲಿದ್ದು, ಚಿಕಿತ್ಸೆ ಪಡೆದಿದ್ದಾರೆ. ನಾನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದು ಊರಿಗೆ ಬಂದಿದ್ದೆ. ಅಷ್ಟರಲ್ಲಿ ಅವರಿಗೆ ಬ್ರೇನ್ ಸ್ಟ್ರೋಕ್ ಆಯಿತು. ಕೂಡಲೇ ಅವರನ್ನು ಇಲ್ಲಿಯ ಬಾಲಾಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮೂಗಿನಲ್ಲಿ ನಳಿಕೆ ಹಾಕಲಾಗಿತ್ತು. ಅದನ್ನು ಅವರು ಕಿತ್ತುಕೊಳ್ಳುತ್ತಿದ್ದರು. ಹೀಗಾಗಿ ಅವರಿಗೆ ತಿಳಿಹೇಳುವಂತೆ ನನ್ನನ್ನು ಅವರಿದ್ದ ಕೋಣೆಗೆ ಕಳುಹಿಸಿದರು. ಆದ ನನ್ನ ತಾಯಿ, ನನ್ನ ಕೈ ಹಿಡಿದುಕೊಂಡು ಇಲ್ಲಿ ನನಗೆ ದೈಹಿಕ ಕಿರುಕುಳ ನೀಡಲಾಗಿದೆ ಎಂದು ಹೇಳಿದರು. ಈ ಕುರಿತು ನಾನು ಆಡಳಿತ ಮಂಡಳಿಯ ಗಮನಕ್ಕೆ ತಂದೆ. ಆದರೆ, ಅವರು ತಲೆ ಕೆಡಿಸಿಕೊಳ್ಳಲಿಲ್ಲ.

  • ತೇಜ, ಆಸ್ಪತ್ರೆಗೆ ದಾಖಲಾದ ಮಹಿಳೆಯ ಪುತ್ರ
error: Content is protected !!