Home Blog Page 3164

ಯುವ ಪೀಳಿಗೆಗೆ ಲಸಿಕೆ ಹಾಕುವಲ್ಲಿ ಈ ರಾಜ್ಯವೇ ನಂಬರ್ ಒನ್!

ವಿಜಯಸಾಕ್ಷಿ ಸುದ್ದಿ, ಪಾಟ್ನಾ

ದೇಶದಲ್ಲಿ 18 ರಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ಲಸಿಕೆ ಹಾಕುವಲ್ಲಿ ಬಿಹಾರ್ ರಾಜ್ಯ ಮೊದಲ ಸ್ಥಾನದಲ್ಲಿದೆ. ಈ ವಯಸ್ಸಿನವರ 15,27,000 ಜನರಿಗೆ ಬಿಹಾರ ಈಗಾಗಲೇ ಲಸಿಕೆ ಹಾಕಿದೆ. ಇನ್ನುಳಿದಂತೆ ಉತ್ತರ ಪ್ರದೇಶದಲ್ಲಿ 15,14,761 ಮತ್ತು ರಾಜಸ್ಥಾನದಲ್ಲಿ 14,91,581 ಜನರಿಗೆ ಲಸಿಕೆ ಹಾಕಲಾಗಿದೆ.

ಬರೋಬ್ಬರಿ ಒಂದು ಮಿಲಿಯನ್ ಜನರಿಗೆ ಲಸಿಕೆ ಹಾಕುವ ಮೂಲಕ ಗುಜರಾತ್ ನಾಲ್ಕನೇ ಸ್ಥಾನದಲ್ಲಿದೆ. ಲಸಿಕೆ ನೀಡಲು ಆರಂಭಿಸಿದ ಕೇವಲ 16 ದಿನಗಳಲ್ಲಿಯೇ ಬಿಹಾರ ರಾಜ್ಯ ಇಷ್ಟೊಂದು ಜನರಿಗೆ ಲಸಿಕೆ ನೀಡಿ, ಮೊದಲ ಸ್ಥಾನಕ್ಕೆ ಏರಿದೆ. ಕೇಂದ್ರ ಸರ್ಕಾರದಿಂದ 3.50 ಲಕ್ಷ ಡೋಸ್ ಲಸಿಕೆ ಬರುತ್ತಿದ್ದಂತೆ, ಮೇ. 9 ರಂದು ಲಸಿಕೆ ನೀಡಲು ಆರಂಭಿಸಲಾಗಿತ್ತು. ಬಿಹಾರದಲ್ಲಿ 18 ರಿಂದ 44 ವರ್ಷದೊಳಗಿನವರಿಗೆ ಮೊದಲ ಆದ್ಯತೆ ನೀಡಲಾಗಿತ್ತು.

ರಾಜ್ಯದಾದ್ಯಂತ ಸುಮಾರು 624 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಲಸಿಕೆ ಹಾಕುವ ಬಗ್ಗೆ ಅರೆವೈದ್ಯಕೀಯ ಮತ್ತಿತರ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿತ್ತು ಎಂದು ಬಿಹಾರ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತ್ಯಯ್ ಅಮೃತ್ ಹೇಳಿದ್ದಾರೆ.

ರಾಜ್ಯಾದಾದ್ಯಂತ ಜಾಗೃತಿ ಮೂಡಿಸುವ ಮೂಲಕ ಲಸಿಕೆ ಪಡೆಯುವಂತೆ ಯುಜ ಜನತೆಯನ್ನು ಪ್ರೇರಿಪಿಸಲಾಗಿತ್ತು. 28 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಜುಲೈ 10ರೊಳಗೆ ಈ ಗುಂಪಿನ ಎಲ್ಲರಿಗೂ ಲಸಿಕೆ ಹಾಕಲಾಗುವುದು. ಎಲ್ಲ ವಯಸ್ಸಿನ ಜನರಿಂದ ಲಸಿಕೆ ಪಡೆಯಲು ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಪ್ರತ್ಯಯ್ ಅಮೃತ್ ತಿಳಿಸಿದ್ದಾರೆ.

ಸಿಎಂ ಬದಲಾವಣೆ ವಿಷಯಕ್ಕೆ ಸಿ.ಪಿ. ಯಗೇಶ್ವರ್ ಹೇಳಿದ್ದೇನು?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದ ಬಿಜೆಪಿ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟು ಸಿಎಂ ಬದಲಾವಣೆಗೆ ತೆರೆಮರೆ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಅದರಲ್ಲಿ ಸಿ.ಪಿ. ಯೋಗೇಶ್ವರ್ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಹಾಗಾಗಿ ಈ ವಿಚಾರದ ಬಗ್ಗೆ ಸ್ವತಃ ಸಿ.ಪಿ ಯೋಗೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ‘ನಾನು ದೆಹಲಿಗೆ ಹೋಗಿಬರೋದು ಸಾಮಾನ್ಯವಾದ ವಿಚಾರ. ಆದರೆ ನಾಯಕತ್ವ ಬದಲಾವಣೆ ವಿಚಾರ ಯಾಕೆ ಚರ್ಚೆಗೆ ಬಂತು ಎನ್ನುವುದು ನನಗೆ ಗೊತ್ತಿಲ್ಲ. ನನಗೆ ನನ್ನದೇ ಆದ ಸಮಸ್ಯೆಗಳಿವೆ. ಮುಂದಿನ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕಿದೆ. ನನ್ನ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ. ಯಾವ ವಿಚಾರಕ್ಕೆ ಹೋಗಿದ್ದೆ? ಏನು? ಎಂಬುದಕ್ಕೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ನನಗೆ ವಹಿಸಿರುವ ಇಲಾಖೆಯಲ್ಲಿ ಬೇರೊಬ್ಬರು ಬಂದು ಹಸ್ತಕ್ಷೇಪ ಮಾಡುವುದನ್ನು ನಾನು ಸಹಿಸುವುದಿಲ್ಲ. ಇದನ್ನು ಎಲ್ಲರೂ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು. ಪಕ್ಷದ ಚೌಕಟ್ಟಿನಲ್ಲಿಯೇ ಕೆಲ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿದೆ. ಮುಂದಿನ ಅವಧಿಯಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಹಾಗಾಗಿ ನಾನು ಕೆಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಬಾಬಾ ರಾಮದೇವ್ ನನ್ನು ಬಂಧಿಸುವ ತಾಕತ್ತು ಯಾರಿಗೂ ಇಲ್ಲವಂತೆ!

ವಿಜಯಸಾಕ್ಷಿ ಸುದ್ದಿ, ಡೆಹ್ರಾಡೂನ್

ನನ್ನನ್ನು ಬಂಧಿಸುವ ತಾಕತ್ತು ಯಾರಿಗೂ ಇಲ್ಲ ಎಂದು ಬಾಬಾ ರಾಮದೇವ್ ಉಡಾಫೆ ಉತ್ತರ ನೀಡಿದ್ದಾರೆ.

ಆಲೋಪತಿ ಮೂರ್ಖತನದ ಪದ್ಧತಿ ಎಂದು ಟೀಕಿಸಿದ್ದ ಬಾಬಾ ರಾಮದೇವ್ ವಿರುದ್ಧ ಡೆಹ್ರಾಡೂನ್ ವೈದ್ಯರ ಸಂಘ ಆಕ್ರೋಶ ವ್ಯಕ್ತಪಡಿಸಿ, ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದರು. ಇದಕ್ಕೆ ಬಾಬಾರಾಮದೇವ್ ಈ ರೀತಿ ಹೇಳಿದ್ದಾರೆ.

ಸನ್ಯಾಸಿ ರಾಮದೇವ್ ಬಂಧಿಸಲು ಯಾರಿಗೂ ಸಾಧ್ಯವಿಲ್ಲ. ಅವರು ಕೇವಲ ಶಬ್ದ ಮಾಡುತ್ತಾರೆ ಅಷ್ಟೇ, ಏನಾದರೂ ಮಾಡಿಕೊಳ್ಳಲಿ ಎಂದು ರಾಮದೇವ್ ವಿಡಿಯೋದಲ್ಲಿ ಹೇಳಿದ್ದಾರೆ.

ಆಲೋಪತಿ ಚಿಕಿತ್ಸೆ ವಿರುದ್ಧದ ರಾಮದೇವ್ ಹೇಳಿಕೆಗೆ ವಿರುದ್ಧವಾಗಿ ರೂ. 1 ಸಾವಿರ ಕೋಟಿ ಮಾನನಷ್ಟ ಮೊಕದ್ದಮೆ ಹೂಡಿರುವ ಐಎಂಎ, ಪ್ರಧಾನಿ ಮೋದಿಗೆ ಪತ್ರ ಬರೆದು ಬಾಬಾ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆಯೂ ಒತ್ತಾಯಿಸಿದೆ.

ಕೊರೋನಾ ಚಿಕಿತ್ಸೆಗೆ ಅಲೋಪತಿ ಚಿಕಿತ್ಸೆ ಮತ್ತು ಔಷಧಿ ಬಳಕೆಯಿಂದಾಗಿ ದೇಶದಲ್ಲಿ ಲಕ್ಷಾಂತರ ಜನ ಸಾವು ಕಂಡರು ಮತ್ತು ಕೊರೊನಾ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಂಡ ಬಳಿಕವೂ ದೇಶದಲ್ಲಿ 10 ಸಾವಿರ ಜನ ಸಾವು ಕಂಡಿದ್ದಾರೆ ಎಂದು ಬಾಬಾ ಹೇಳಿದ್ದರು.

ಜಿಂದಾಲ್ ಗೆ ನೀಡಿದ್ದ ಭೂಮಿ ಹಿಂಪಡೆಯಲು ನಿರ್ಧರಿಸಿದ ಸರ್ಕಾರ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಜಿಂದಾಲ್ ಕಂಪನಿಗೆ ಸರ್ಕಾರ ಹಸ್ತಾಂತರಿಸಿದ್ದ ಭೂಮಿಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರವು ಬಳ್ಳಾರಿಯ ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ಮಾರಾಟ ಮಾಡಿತ್ತು. ಆದರೆ, ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕರು ಅಷ್ಟೇ ಅಲ್ಲದೆ, ಸ್ವ ಪಕ್ಷದ ಶಾಸಕರು, ಸಚಿವರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಸರ್ಕಾರ, ಭೂಮಿ ಹಿಂಪಡೆಯಲು ನಿರ್ಧಾರ ಕೈಗೊಂಡಿದೆ.

ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ, ಕೆಲವು ತಿಂಗಳುಗಳ ಹಿಂದೆಯಷ್ಟೇ ನೀಡಿತ್ತು. ಸರ್ಕಾರಿ, ಜಮೀನನ್ನು ಖಾಸಗಿ ಕಂಪನಿಗೆ ನೀಡಿರುವ ಕುರಿತು ಸಾಕಷ್ಟು ವಿರೋಧಗಳು ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. ಸದ್ಯ ಈ ಕುರಿತು ಚರ್ಚೆ ನಡೆಸಿರುವ ಸರ್ಕಾರ, ತನ್ನ ತೀರ್ಮಾನದಿಂದ ಹಿಂದೆ ಸರಿದಿದೆ.

ಮಳೆಯಿಂದಾಗಿ ಕೆರೆಯಂತಾದ ಮೆಣಸಿನಕಾಯಿ ಬೆಳೆದ ಭೂಮಿ

ವಿಜಯಸಾಕ್ಷಿ ಸುದ್ದಿ, ಹಾವೇರಿ

ಕೊರೊನಾದಿಂದಾಗಿ ಸದ್ಯ ರಾಜ್ಯದಲ್ಲಿ ರೈತರ ಬದುಕು ಬೀದಿಗೆ. ಇದರ ಮಧ್ಯೆ ಸದ್ಯ ಮಳೆ ಕೂಡ ರೈತರನ್ನು ಬೀದಿಗೆ ತಂದು ನಿಲ್ಲಿಸಿದೆ.
ಜಿಲ್ಲೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಮೆಣಸಿನಕಾಯಿ ಬೆಳೆದ ರೈತರನ್ನು ಚಿಂತೆಗೆ ದೂಡಿದೆ. ಈ ಮಳೆಯಿಂದಾಗಿ ಜಿಲ್ಲೆಯ ಹಾನಗಲ್ ತಾಲೂಕಿನ ಹೆರೂರು ಗ್ರಾಮದ ರೈತನ ಸ್ಥಿತಿ ಬೀದಿಗೆ ಬಂದಿದೆ.

ಹೆರೂರು ಗ್ರಾಮದ ರೈತ ಮಲ್ಲಪ್ಪ ಬಡಿಗೇರ ಎಂಬುವವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ನಿನ್ನೆ ಸುರಿದ ಮಳೆಯಿಂದಾಗಿ ಜಮೀನು ಅಕ್ಷರಶಃ ಕೆರೆಯಂತೆ ಆಗಿದೆ. ಜಮೀನಿನ ತುಂಬ ನೀರು ತುಂಬಿಕೊಂಡಿದೆ. ಈ ಭೂಮಿಯಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ನೀರಿನಲ್ಲಿ ಮುಳುಗಿ ಹೋಗಿದೆ. ಒಂದೂವರೆ ಎಕರೆಯಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು. ಇದಕ್ಕಾಗಿ ಸುಮಾರು ರೂ. 60 ಸಾವಿರ ಖರ್ಚು ಮಾಡಿದ್ದರು.

ಈ ಬೆಳೆಯನ್ನು ರೈತ ಜೋಪಾನವಾಗಿ ನೋಡಿಕೊಂಡಿದ್ದರು. ಸಮಯಕ್ಕೆ ಸರಿಯಾಗಿ ಕ್ರಿಮಿನಾಶಕ ಹಾಗೂ ಗೊಬ್ಬರ ಹಾಕಿ ಬೆಳೆಸಿದ್ದರು. ಸದ್ಯ ಮೆಣಸಿನಕಾಯಿ ಬೆಳೆದು ನಿಂತಿತ್ತು. ಈಗಾಗಲೇ ಮೆಣಸಿನಕಾಯಿ ಕಟಾವು ಮಾಡಬೇಕಿತ್ತು. ಆದರೆ, ಲಾಕ್ ಡೌನಿಂದಾಗಿ ಖರೀದಿದಾರರು ಇಲ್ಲದ್ದಕ್ಕೆ ಕಟಾವು ಮಾಡುವುದು ತಡವಾಗಿತ್ತು. ಆದರೆ, ಕೈಗೆ ಬಂದಷ್ಟು ಬರಲಿ ಎಂದು ರೈತರ ಕಟಾವು ಮಾಡಲು ನಿರ್ಧರಿಸಿದ್ದರು. ಅಷ್ಟರೊಳಗೆ ಮಳೆ ಎಲ್ಲವನ್ನೂ ಆಹುತಿ ಮಾಡಿಕೊಂಡಿದೆ.

ಜಮೀನಿನಲ್ಲಿ ನಿಂತಿರುವ ನೀರು ಕಡಿಮೆಯಾಗಲು ಕನಿಷ್ಟ ನಾಲ್ಕೈದು ದಿನಗಳಾದರೂ ಬೇಕು. ಅಷ್ಟರಲ್ಲಿ ಬೆಳೆ ಸಂಪೂರ್ಣವಾಗಿ ಕೊಳೆತು ಹೋಗುತ್ತದೆ. ಅವರಿವರ ಬಳಿ ಸಾಲ ಮಾಡಿಕೊಂಡು ಮೆಣಸಿನಕಾಯಿ ಬೆಳೆ ಬೆಳೆದಿದ್ದ ರೈತ, ಚಿಂತೆಯಲ್ಲಿ ಮುಳುಗಿದ್ದಾನೆ.

ಒಂದೂವರೆ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದೆ. ಒಮ್ಮೆಯೂ ಕಟಾವು ಮಾಡಿರಲಿಲ್ಲ. ಮಾರುಕಟ್ಟೆಯಲ್ಲಿ ಈಗಿರುವ ದರ ನೋಡಿದರೆ ಆಳಿನ ಖರ್ಚು ಆಗುವುದಿಲ್ಲ. ಹೀಗಾಗಿ ಬೆಲೆ ಸಿಕ್ಕ ಮೇಲೆ ಮೆಣಸಿನಕಾಯಿ ಕಟಾವು ಮಾಡಿದರಾಯಿತು ಎಂದು ಬಿಟ್ಟಿದ್ದೆ. ಆದರೆ, ಮಳೆ ಬಂದು ಬೆಳೆಯೊಂದಿಗೆ ಬದುಕನ್ನೂ ಕಿತ್ತುಕೊಂಡಿದೆ ಎಂದು ರೈತ ಕಂಗಾಲಾಗಿದ್ದಾನೆ.

ಕೇವಲ ಮೂರೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವಕನ ಬಲಿ ಪಡೆದ ಹೆಮ್ಮಾರಿ!

ವಿಜಯಸಾಕ್ಷಿ ಸುದ್ದಿ, ಬೀದರ

ಮದುವೆಗೆ ಸಿದ್ಧತೆ ನಡೆಸಿದ್ದ ಯುವಕನನ್ನು ಮಹಾಮಾರಿ ಬಲಿ ಪಡೆದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಈ ಘಟನೆ ಹುಲಸೂರು ಪಟ್ಟಣದಲ್ಲಿ ನಡೆದಿದೆ. ರಾಘವೇಂದ್ರ ವೈಜನಾಥ ಕಮಠಾಣೆ (27) ಸೋಂಕಿಗೆ ಬಲಿಯಾದ ದುರ್ದೈವಿ. ಮೃತ ಯುವಕನ ಮದುವೆ ಇದೇ ಮೇ. 31ರಂದು ನಿಶ್ಚಯವಾಗಿತ್ತು. ಹೀಗಾಗಿ ಮದುವೆ ಆಮಂತ್ರಣ ಪತ್ರಿಕೆಗಳು ಸಿದ್ಧಗೊಂಡಿದ್ದವು. ಹೀಗೆ ದಾಂಪತ್ಯ ಜೀವನದ ಕನಸು ಕಂಡು, ಸಿದ್ಧತೆಯಲ್ಲಿದ್ದ ಯುವಕನಿಗೆ ಕೊರೊನಾ ತಗುಲಿತ್ತು.

ಕೆಲವು ದಿನಗಳ ನಂತರ ಯುವಕನ ಆರೋಗ್ಯದಲ್ಲಿ ಹದಗೆಟ್ಟಿತ್ತು. ಪಕ್ಕದ ಮಹಾರಾಷ್ಟ್ರದ ಲಾತೂರ್ ನ ಖಾಸಗಿ ಆಸ್ಪತ್ರೆಯಲ್ಲಿ ಯುವಕನನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಮೃತ ಯುವಕನ ತಂದೆ ನಿವೃತ್ತ ಶಿಕ್ಷಕರಾಗಿದ್ದರು. ಅವರು ತಮಗೆ ಇದ್ದ ಏಕೈಕ ಪುತ್ರನ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ಕನಸು ಕಂಡಿದ್ದರು. ಆದರೆ, ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ನಿಗದಿ ಪಡಿಸಿದ್ದ ಸಮಯದಲ್ಲಿಯೇ ಸರಳವಾಗಿ ಆಚರಿಸಲು ನಿರ್ಧರಿಸಿದ್ದರು. ಆದರೆ, ಮಹಾಮಾರಿ ಸಂಭ್ರಮದ ಮನೆಯಲ್ಲಿ ಸೂತಕ ವಾತಾವರಣ ನಿರ್ಮಿಸಿದೆ. ಸದ್ಯ ಏಕೈಕ ಪುತ್ರನ ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಅಪಘಾತದಲ್ಲಿ ಸಾವು; ನೋವಿನಲ್ಲಿ ವೈದ್ಯ ಒದ್ದಾಡುತ್ತಿದ್ದರೂ ಸಹಾಯ ಮಾಡದ ಶಾಸಕ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಅಪಘಾತವಾಗಿ ಸಾವು, ನೋವಿನಲ್ಲಿ ಕೊರೊನಾ ವಾರಿಯರ್ಸ್ ಸಹಾಯಕ್ಕೆ ಅಂಗಲಾಚುತ್ತಿದ್ದರೂ ಶಾಸಕರು ಅಮಾನವೀಯತೆ ತೋರಿಸಿರುವ ಘಟನೆ ನಡೆದಿದೆ. ಕೊರೊನಾ ಕಾರ್ಯ ಮುಗಿಸಿ ಮರಳಿ ಮನೆಗೆ ಹೊರಟಿದ್ದ ಲಕ್ಕವಳ್ಳಿ ಹಿರಿಯ ಆರೋಗ್ಯಾಧಿಕಾರಿ ರಮೇಶ್ ಕುಮಾರ್ ಅವರ ಕಾರು ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತವಾಗಿತ್ತು.

ಅವರು ಸಾವು – ನೋವಿನಲ್ಲಿ ಓದಾಡುತ್ತಿದ್ದರು. ಆದರೆ, ಇದನ್ನು ಕಂಡ ತರೀಕೆರಿ ಶಾಸಕರು ಮಾತ್ರ ತಮ್ಮ ಕಾರು ಬಿಟ್ಟು ಕೆಳಗೆ ಇಲಿಯಲಿಲ್ಲ. ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಆ ರಸ್ತೆಯಲ್ಲಿ ಬೇರೆ ಇನ್ನಾವುದೇ ವಾಹನಗಳು ಸಂಚರಿಸಲಿಲ್ಲ. ಹೀಗಾಗಿ ಕಾರಿನಲ್ಲಿಯೇ ಒದ್ದಾಡಿದ ವೈದ್ಯ ರಮೇಶ್ ಕುಮಾರ್ ಸಾವನ್ನಪ್ಪಿದ್ದಾರೆ. ಶಾಸಕ ಸುರೇಶ್ ಅವರ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಲಕ್ಕವಳ್ಳಿ ಕ್ರಾಸ್ ನಲ್ಲಿ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ಕೂಡಲೇ ವೈದ್ಯರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಅವರು ಸಾವನ್ನಪ್ಪಿದ್ದಾರೆ.

ಸಿಎಂ ಬದಲಾವಣೆ ಕೂಗಿಗೆ ಬಿಎಸ್ ವೈ ಹೇಳಿದ್ದೇನು?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಿ ಕೇಳಿ ಬರುತ್ತಿದೆ. ಬಿಜೆಪಿಯ ಕೆಲ ನಾಯಕರು ಸಿಎಂ ಬದಲಾವಣೆಗೆ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೇ, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮಣಿಸುತ್ತಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ವಿರೋಧಿ ಬಣದ ನಾಯಕರಿಗೆ ಒಂದೇ ಮಾತಿನಲ್ಲಿ ಬಿಸಿ ಮುಟ್ಟಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಸಭೆ ವಿಚಾರದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ನನ್ನ ಮುಂದೆ ಇರುವುದು ಕೋವಿಡ್ ನಿಯಂತ್ರಣ ಮಾತ್ರ. ಜನರ ಹಿತ ಕಾಯುವುದು ನನ್ನ ಮೊದಲ ಆದ್ಯತೆ. ಯಾರು ದೆಹಲಿಗೆ ಹೋಗಿ ಬಂದಿದ್ದಾರೋ ಅವರಿಗೆ ಅಲ್ಲಿಯೇ ಉತ್ತರ ಕೊಟ್ಟು ಕಳುಹಿಸಿದ್ದಾರೆ ಎಂದು ಹೇಳುವ ಮೂಲಕ ವಿರೋಧಿ ಬಣಗಳಿಗೆ ಟಾಂಗ್ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಕ್ಕೆ ಜನರು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಸಾಕಷ್ಟು ಸಾವುನೋವುಗಳು ಸಂಭವಿಸುತ್ತಿರುವ ಈ ಹೊತ್ತಲ್ಲಿ ನಾವು ಅವರ ಪರವಾಗಿ ಕೆಲಸ ಮಾಡಬೇಕು. ಇಂತಹ ಸಂದರ್ಭದಲ್ಲಿ ಸಚಿವರು, ಶಾಸಕರು ಎಲ್ಲರೂ ಒಗ್ಗಟ್ಟಾಗಿ ಜನರ ಸಂಕಷ್ಟ ನಿವಾರಿಸುವತ್ತ ಗಮನಕೊಡಬೇಕೇ ಹೊರತು ಬೇರೆ ವಿಚಾರಗಳ ಬಗ್ಗೆ ಅಲ್ಲ ಎಂದು ಸಿಎಂ ಬದಲಾವಣೆಯ ಕಸರತ್ತು ನಡೆಸುತ್ತಿರುವ ವಿರೋಧಿ ಬಣಕ್ಕೆ ಬಿಎಸ್ ವೈ ತಿರುಗೇಟು ನೀಡಿದ್ದಾರೆ.

ಲಾಕ್ ಡೌನ್ ಎಲ್ಲಿಯವರೆಗೆ ಮುಂದುವರೆಯುವುದು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿಯ ಬಲಿ ಎಗ್ಗಿಲ್ಲದೆ ನಡೆಯುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾದರೂ ಸಾವಿನ ಸಂಖ್ಯೆ ಮಾತ್ರ ಇಳಿಯುತ್ತಿಲ್ಲ. ಹೀಗಾಗಿ ಲಾಕ್ ಡೌನ್ ಜೂ. 7ರ ನಂತರವೂ ಮುಂದುವರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸದ್ಯದ ಸ್ಥಿತಿ ಕಂಡರೆ ಜೂ. 7ಕ್ಕೆ ಲಾಕ್ ಡೌನ್ ತೆರೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಈ ಹಿಂದೆ ಮೊದಲ ಅಲೆಯಲ್ಲಿ ಇಡೀ ಭಾರತ ಬರೋಬ್ಬರಿ 75 ದಿನಗಲ ಕಾಲ ಲಾಕ್ ಆಗಿತ್ತು. ಆದರೆ, ಸದ್ಯ ಒಂದು ವರ್ಷದ ಕೇಸ್ ಗಳು ಕೇವಲ 2 ತಿಂಗಳಲ್ಲಿಯೇ ಕಾಡಲು ಶುರು ಮಾಡಿವೆ. ಇಂತಹ ಪರಿಸ್ಥಿತಿಯಲ್ಲಿ ಇಷ್ಟು ದಿನಗಳಲ್ಲಿಯೇ ಲಾಕ್ ಮಾಡಲು ಆಗುವುದಿಲ್ಲ. ಒಂದು ವೇಳೆ ರಾಜ್ಯವನ್ನು ಅನ್ ಲಾಕ್ ಮಾಡಿದರೆ, ಮತ್ತಷ್ಟು ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಇನ್ನೊಂದೆಡೆ ಸರ್ಕಾರದ ಮುಂದೆಯೂ ಜೂ. 7ರ ನಂತರ ಲಾಕ್ ಡೌನ್ ಮುಂದುವರೆಸುವ ಚಿಂತನೆ ಇದೆ ಎನ್ನಲಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಕ್ಷೀಣವಾಗುತ್ತಿದ್ದರೂ ಸಾವಿನ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳ ಕಂಡು ಬರುತ್ತಿದೆ.

ಬೆಂಗಳೂರು ಒಂದರಲ್ಲಿಯೇ ಆಸ್ಪತ್ರೆಗೆ ದಾಖಲಾಗಿರುವ ಶೇ. 70ರಷ್ಟು ಜನ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖರಾಗುವ ಪರಿಸ್ಥಿತಿ ತುಂಬಾ ಕಡಿಮೆ ಇದೆ. ಇದನ್ನೆಲ್ಲ ಗಮನಿಸಿಯೇ ತಜ್ಞರು ಲಾಕ್ ಡೌನ್ ಯಾವಾಗ ತೆರುವುಗೊಳಿಸಬೇಕು ಎಂಬುವುದರ ಕುರಿತು ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ.

ಸೋಂಕಿನ ಪ್ರಮಾಣ ಶೇ. 5ಕ್ಕೆ ಇಳಿಯದ ಹೊರತು ಲಾಕ್ ಡೌನ್ ತೆರೆಯಬಾರದು ಎಂದು ಐಸಿಎಂಆರ್ ಹೇಳಿದೆ. ಸೋಂಕಿನ ಪ್ರಮಾಣ ಶೇ. 10ರಷ್ಟಿದ್ದರೆ ಸರ್ಕಾರ, ಲಾಕ್ ಡೌನ್ ಮುಂದುವರೆಸಬಹುದು. ಸೋಂಕಿನ ಪ್ರಮಾಣ ಶೇ. 8ಕ್ಕೆ ಇಳಿದರೆ ಲಾಕ್‍ ಡೌನ್ ನಿಂದ ಸ್ವಲ್ಪ ಸಡಿಲಿಕೆ ಸಾಧ್ಯವಾಗುತ್ತದೆ. ಸದ್ಯ ಹಳ್ಳಿ – ಹಳ್ಳಿಗಳಲ್ಲಿಯೂ ಸೋಂಕು ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಜ್ಞರ ಸಲಹೆಯಂತೆ ಸಚಿವರು ಕೂಡ ಲಾಕ್ ಡೌನ್ ತೆರೆಯದಂತೆ ಸಲಹೆ ನೀಡುತ್ತಿದ್ದಾರೆ.

ಒಂದು ವೇಳೆ ಸರ್ಕಾರ ಆರ್ಥಿಕ ಸ್ಥಿತಿಯಿಂದ ಚೇತರಿಸಿಕೊಳ್ಳಲು ಲಾಕ್ ಡೌನ್ ತೆರೆಯಲು ಮುಂದಾದರೆ, ಒಮ್ಮೆಲೆ ತೆರೆಯದಂತೆ ತಜ್ಞರು ಮನವಿ ಮಾಡಿದ್ದಾರೆ. ಜೂ. 7ರ ನಂತರ 14 ದಿನ ಅರ್ಧ ದಿನ ಲಾಕ್ ಡೌನ್ ಜಾರಿಗೆ ತನ್ನಿ. ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನದವರೆಗೆ ವಿನಾಯ್ತಿ ಕೊಡಿ. ನೈಟ್ ಕರ್ಫ್ಯೂ ಜಾರಿ ತನ್ನಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಹೀಗಾಗಿಯೇ ಸದ್ಯ ಸರ್ಕಾರ ಲಾಕ್ ಡೌನ್ ಮುಂದುವರೆಸಬೇಕೆ? ಅಥವಾ ಹಂತ ಹಂತವಾಗಿ ತೆರವುಗೊಳಿಸಬೇಕೆ? ಎಂಬ ಚರ್ಚೆಯಲ್ಲಿದೆ. ಆದರೆ, ಸದ್ಯದ ಪರಿಸ್ಥಿತಿ ಕಂಡರೆ ಜೂನ್ ಅಂತ್ಯದವರೆಗೂ ರಾಜ್ಯ ಲಾಕ್ ಆಗಬಹುದು ಎನ್ನಲಾಗುತ್ತಿದೆ.

ಎಲ್ಲಿಯಾದರೂ ಸಿಕ್ಕಾನೆಯೇ ಬುದ್ದ……

ವಿಜಯಸಾಕ್ಷಿ ವಿಶೇಷ

ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ…….

ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ…

ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ. ಆದರೆ ಬುದ್ದನನ್ನು ಹುಡುಕುವುದೆಲ್ಲಿ, ಒಳಗೋ ಹೊರಗೋ…….

ಕ್ರಿಸ್ತ ಪೂರ್ವದ ಬುದ್ಧನೆಲ್ಲಿ,
2021 ರ ಬುದ್ದು ( ದಡ್ಡ )ವೆಲ್ಲಿ,

ಸ್ವಂತ ಮನೆಯಲ್ಲಿ ಕುಳಿತು ಆಹಾರ ಸೇವಿಸುತ್ತಾ ಟಿವಿ ನೋಡುತ್ತಾ ಬುದ್ದನನ್ನು ಹುಡುಕಿದನೊಬ್ಬ….

ಲೈಬ್ರರಿಯಲ್ಲಿ ಕುಳಿತು ಪುಸ್ತಕ ಓದುತ್ತಾ, ಬರೆಯುತ್ತಾ ಹುಡುಕಿದ ಬುದ್ದನನ್ನು ಇನ್ನೊಬ್ಬ…..

ಅಧ್ಯಯನ ಮಾಡುತ್ತಾ, ಚಿಂತಿಸುತ್ತಾ ಉಪನ್ಯಾಸ ನೀಡುತ್ತಾ ಬುದ್ದನನ್ನು ಹುಡುಕಿದ ಮಗದೊಬ್ಬ….

ಪ್ರಶಸ್ತಿಗಾಗಿ, ಪ್ರಚಾರಕ್ಕಾಗಿ, ಪ್ರಖ್ಯಾತಿಗಾಗಿ, ಬುದ್ದಿಯ ಪ್ರದರ್ಶನಕ್ಕಾಗಿ ಹುಡುಕುತ್ತಲೇ ಇದ್ದಾರೆ ಅನೇಕ ಸಿದ್ದಾರ್ಥರು ಬುದ್ದನನ್ನು…….

ಸಿಕ್ಕಾನೆಯೇ ಬುದ್ದ……

ಕಾಡು ಮೇಡುಗಳಲ್ಲಿ ಅಲೆದು, ದೇಹ ಮನಸ್ಸುಗಳನ್ನು ದಂಡಿಸಿ, ಚರ್ಚೆ ಸಂವಾದ ಮಂಥನಗಳನ್ನು ಮಾಡಿ, ಧ್ಯಾನದ ಉತ್ತುಂಗ ತಲುಪಿ ಬುದ್ದನಾದವನನ್ನು ಹುಡುಕುವುದು ಸುಲಭವೇ……

ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಉಪಹಾರ, ರಾತ್ರಿಯ ಭೋಜನ ಮಾಡಿ, ಬೆಚ್ಚಗಿನ ಮನೆಯಲ್ಲಿ, ಕುಟುಂಬದೊಂದಿಗೆ, ನಾಳಿನ ಯೋಚನೆಗಳೊಂದಿಗೆ, ಸ್ನಾನ ಶೌಚಗಳ ಅನುಕೂಲದೊಂದಿಗೆ, ಮೈಥುನದ ಸುಖದೊಳಗೆ, ಮೊಬೈಲ್ ಮಾಯೆಯೊಳಗೆ ಸಿಕ್ಕಾನೆಯೇ ಬುದ್ದ…..

ದೇಹದಲ್ಲಿ ಅಡಗಿದ್ದಾನೆಯೇ ಬುದ್ದ,
ಮನಸ್ಸಿನಲ್ಲಿ ಅಡಗಿದ್ದಾನೆಯೇ ಬುದ್ದ,
ಹೃದಯದಲ್ಲಿ ಅಡಗಿದ್ದಾನೆಯೇ ಬುದ್ದ,…

ಜ್ಞಾನದಿಂದ ಸಿಗುವನೇ ಬುದ್ದ,
ಭಕ್ತಿಯಿಂದ ಸಿಗುವನೇ ಬುದ್ದ,
ಕರ್ಮದಿಂದ ಸಿಗುವನೇ ಬುದ್ದ,
ಯೋಗ ಧ್ಯಾನಗಳಿಂದ ಸಿಗುವನೇ ಬುದ್ದ……

ಇವುಗಳಿಂದ ದೇವರನ್ನು ಹುಡುಕಬಹುದು,
ಆದರೆ ಬುದ್ದನನ್ನು ಹುಡುಕಬಹುದೆ….

ಹೌದು, ಬುದ್ದನನ್ನು ಹುಡುಕಬಹುದು, ಎಲ್ಲಿ ? ಹೇಗೆ ?….

ಮಾನವೀಯ ಮೌಲ್ಯಗಳಲ್ಲಿ ಬುದ್ದನನ್ನು ಹುಡುಕಬಹುದು…..

ಪ್ರೀತಿಯಲ್ಲಿ,
ತ್ಯಾಗದಲ್ಲಿ,
ಕರುಣೆಯಲ್ಲಿ,
ವಿನಯದಲ್ಲಿ,
ಸಭ್ಯತೆಯಲ್ಲಿ,
ಕ್ಷಮಾಗುಣದಲ್ಲಿ,
ಸ್ನೇಹದಲ್ಲಿ,
ಸಂಬಂಧಗಳಲ್ಲಿ,
ತಾಳ್ಮೆಯಲ್ಲಿ,
ಸಂಯಮದಲ್ಲಿ,
ಧೈರ್ಯದಲ್ಲಿ,
ನಿರಂತರ ಪ್ರಯತ್ನದಲ್ಲಿ,……

ಬುದ್ದ ಸಿಕ್ಕರೂ ಸಿಗಬಹುದು…

ವೈರಸ್ಸಿನ ಭಯದಲ್ಲಿ,
ಸಾವಿನ ಆತಂಕದಲ್ಲಿ,
ಸೋಲುವ ಭೀತಿಯಲ್ಲಿ,
ಕುಟುಂಬದ ಮೋಹದಲ್ಲಿ,
ಹಣದ ದಾಹದಲ್ಲಿ,
ಅಧಿಕಾರದ ಗುಂಗಿನಲ್ಲಿ,
ಪ್ರಚಾರದ ಅಮಲಿನಲ್ಲಿ,
ಸಾಧನೆಯ ಅಹಂಕಾರದಲ್ಲಿ….

ಬುದ್ದನನ್ನು ಹುಡುಕುವ ನಾಟಕವೇಕೆ……

ನಾನು ಸಹ ಹುಡುಕುತ್ತಲೇ ಇದ್ದೇನೆ ಬುದ್ದನನ್ನು,
ನನ್ನೊಳಗಿನ ಬೆಳಕನ್ನು ಬೆಳಗಿಸುವಾ ಬುದ್ದನನ್ನು….

ಸಿಕಿಲ್ಲ ಆತ ಇನ್ನೂ……


ಯಾರೋ ನೀನು ಸಿದ್ಧಾರ್ಥ,

ಒಂದು ರಾಜ್ಯದ ರಾಜಕುಮಾರನಂತೆ,
ಕಷ್ಟ, ನೋವು, ಬೇಸರ ಏನೂ ಗೊತ್ತಿಲ್ಲದೆ ಬೆಳೆದ ಯುವರಾಜನಂತೆ,

ಹೆಂಡತಿ – ಮಕ್ಕಳೊಂದಿಗೆ ಹಾಯಾಗಿದ್ದ ಸುಖಪುರುಷನಂತೆ,

ಆದರೆ ಅದೇನಾಯಿತೋ ಸಿದ್ಧಾರ್ಥ ನಿನಗೆ,

ಒಮ್ಮೆ ರಾಜ್ಯವನ್ನೆಲ್ಲಾ ಸುತ್ತಾಡುವಾಗ ಜನರ ಬದುಕು ನೋಡಿ ಗಾಬರಿಯಾದೆಯಂತೆ,

ಕಷ್ಟ, ನೋವು, ರೋಗ, ಸಾವುಗಳು ನಿನ್ನನ್ನು ಕಾಡಲಾರಂಬಿಸಿದವಂತೆ,

ಅದಕ್ಕೆ ಕಾರಣಗಳೇನು, ಪರಿಹಾರಗಳೇನು ಎಂದು ಮನಸ್ಸು ನಿನ್ನನ್ನು ಗಲಿಬಿಲಿಗೊಳಿಸಿತಂತೆ,

ಆಗ ಒಂದು ದಿನ ಇದ್ದಕ್ಕಿದ್ದಂತೆ ರಾಜ್ಯ, ಸಂಸಾರ, ಸುಖ ಭೋಗ ಎಲ್ಲಾ ತೊರೆದು ರಾತ್ರೋರಾತ್ರಿ ಹೊರಟೆಯಂತೆ,

ಬೀದಿಬೀದಿಗಳನ್ನ, ರಾಜ್ಯ ಪ್ರದೇಶಗಳನ್ನ, ಅಲೆಮಾರಿಯಂತೆ ಸುತ್ತಾಡಿದೆಯಂತೆ,

ಮಹಾನ್ ಪಂಡಿತ, ಪಾಮರ, ಜ್ಞಾನಿಗಳನ್ನು ಭೇಟಿ ಮಾಡಿ ಚರ್ಚಿಸಿದೆಯಂತೆ,

ಭಿಕ್ಷುಕನಂತೆ ಭಿಕ್ಷೆ ಬೇಡಿ ತಿಂದು ಬದುಕಿದೆಯಂತೆ,

ಉಪವಾಸವಿದ್ದು ತಿಂಗಳುಗಟ್ಟಲೆ ದೇಹ ದಂಡಿಸಿದೆಯಂತೆ,

ವರ್ಷಾನುಗಟ್ಟಲೆ ಕಾಡು ಮೇಡುಗಳಲ್ಲಿ ಅಲೆದು ಧ್ಯಾನ, ತಪಸ್ಸು ಮಾಡಿದೆಯಂತೆ,

ಒಂದು ದಿನ ನಿನಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾಯಿತಂತೆ…….

ಅಬ್ಬಾ,….

ಅದೇನು ಜ್ಞಾನೋದಯವಾಯಿತೋ ಅಥವಾ ನೀನೇ ಜ್ಞಾನವಾದೆಯೋ,
ಅಲ್ಲಿಂದ ಆದೆ ನೋಡು ನೀನು ಗೌತಮ ಬುದ್ದ,

ಯಪ್ಪಾ,
ಅದೇನು ಚಿಂತನೆ, ಅದೇನು ಜ್ಞಾನ, ಅದೇನು ಅರಿವು,

ಯಾವ ಡಾಕ್ಟರುಗಳು, ಯಾವ ಮನಶಾಸ್ತ್ರಜ್ಞರು, ಯಾವ ಜೀವ ವಿಜ್ಞಾನಿಗಳಿಗೂ,
ಸಾಧ್ಯವಾಗದ ಮನುಷ್ಯನ ಆತ್ಮ, ಮೆದುಳು, ಮನಸ್ಸು, ಭಾವನೆ, ಜೀವನಕ್ರಮವನ್ನು
ಅರೆದು ಕುಡಿದು ಅದರ ಎಲ್ಲವನ್ನೂ ತೆರೆದಿಟ್ಟ ಮಹಾನ್ ವ್ಯಕ್ತಿಯಾದೆ,

ಜನರ ಬದುಕು ಇಷ್ಟೊಂದು ಸಂಕೀರ್ಣವಾಗಿರದ, ನಾಗರಿಕತೆಯ ಮೊದಲ ಮೆಟ್ಟಿಲು ಏರುತ್ತಿದ್ದ,
ಆ ದಿನಗಳಲ್ಲೇ ಮನುಷ್ಯ ಜನಾಂಗದ ಇಡೀ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ವ್ಯಕ್ತಿಯಾದೆ,

ನಿನ್ನ ಒಂದೊಂದು ಮಾತುಗಳು ಅರಗಿಸಿಕೊಳ್ಳುವುದೇ ಕಷ್ಟ,

ಕಲ್ಲಿನ ಕೆತ್ತನೆಯಿಂದ ಹಿಡಿದು ಫೇಸ್ ಬುಕ್ – ವಾಟ್ಸ್ ಆ್ಯಪ್ – ಟ್ವಿಟರುಗಳ ತನಕ ಎಲ್ಲಾ ಸ್ಥಳಗಳಲ್ಲಿ ನಿನ್ನ
ಮಾತುಗಳಿಗೇ ಪ್ರಥಮ ಸ್ಥಾನ.

ಅಷ್ಟೇ ಏಕೆ, ಪಾಶ್ಚಾತ್ಯ, ಪೌರಾತ್ಯ ಸಂಸ್ಕೃತಿಗಳನ್ನ,
ವಿಶ್ವದ ಬಹುತೇಕ ಧರ್ಮಗಳನ್ನ, ಅಸಾಮಾನ್ಯ ಗ್ರಂಥಗಳನ್ನ, ಅನೇಕ ದೇಶಗಳ ಸಂವಿಧಾನಗಳನ್ನ,
ಓದಿ ಅರ್ಥ್ಯೆಸಿಕೊಂಡಿದ್ದ ಅಂಬೇಡ್ಕರ್ ಅವರೇ ನಿನಗೆ ಶರಣಾದರೆಂದರೆ ನೀನೇನು ಮನುಷ್ಯನೇ,

ಪ್ರಕೃತಿಯ ಅದ್ಭುತ, ಆಶ್ಚರ್ಯಕರ, ಸೃಷ್ಟಿಯಾದ ಗೌತಮ ಬುದ್ದನೇ,
ನಿನ್ನನ್ನು ಒಂದೇ ಒಂದು ಬಾರಿ ನೋಡಬೇಕೆನಿಸಿದೆ, ಮಾತನಾಡಬೇಕಿನಿಸಿದೆ,

ಈ ಹುಚ್ಚರ ಸಂತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆ,

ಮನುಷ್ಯರೆಂದರೆ ಏನೆಂದು ಈ ಅನಾಗರಿಕರಿಗೆ,

ಬಾರೋ ಗೌತಮ ಬುದ್ದನಾದ ಸಿದ್ಧಾರ್ಥನೇ, ಮತ್ತೊಮ್ಮೆ ಹುಟ್ಟಿ ಬಾ,

ನನಗೆ ಯೋಗ್ಯತೆ ಇಲ್ಲದಿದ್ದರೂ ಹೇಳುತ್ತಿದ್ದೇನೆ,
ಎಲ್ಲರಿಗೂ ಬುದ್ದ ಪೂರ್ಣಿಮೆಯ ನೆನಪಲ್ಲಿ,

ಸುಂದರ ಚಂದ್ರ ದರ್ಶನದ ಶುಭಾಶಯಗಳು….

      ವಿವೇಕಾನಂದ ಹೆಚ್.ಕೆ.

error: Content is protected !!