Home Blog Page 3166

ಕೊರೊನಾ ಸಮಯದಲ್ಲಿ ಮಾರಿ ಹಬ್ಬ – ಪ್ರಶ್ನಿಸಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆ ಮನೆಗೆ ನುಗ್ಗಿ ಹಲ್ಲೆ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೊರೊನಾ ಲಾಕ್ ಡೌನ್ ನಡುವೆ ಮಾರಿ ಹಬ್ಬ ಆಚ್ಚರಿಸುತ್ತಿರುವುದನ್ನು ತಡೆಯಲು ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆಯ ಮೇಲೆಯೇ ಹಲ್ಲೆ ನಡೆದಿರುವ ಘಟನೆ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಈ ಗ್ರಾಮದಲ್ಲಿ ಕೊರೊನಾ ಲಾಕ್ ಡೌನ್ ಜಾರಿಯಲ್ಲಿದ್ದರೂ ಜನರು ಮಾರಿ ಹಬ್ಬ ಆಚರಿಸುತ್ತಿದ್ದರು. ಇದನ್ನು ಅಂಗನವಾಡಿ ಕಾರ್ಯಕರ್ತೆ ಮಂಗಳಗೌರಿ ತಡೆಯಲು ಪ್ರಯತ್ನಿಸಿದ್ದರು. ಹೀಗಾಗಿ ಇದರಿಂದ ಕೋಪಗೊಂಡ ಗ್ರಾಮಸ್ಥರು, ಕಾರ್ಯಕರ್ತೆಯ ಮನೆಗೆ ನುಗ್ಗಿ ಮಂಗಳಗೌರಿ ಸೇರಿದಂತೆ ಅವರ ಸಹೋದರಿ ಸರೋಜಮ್ಮ, ಪುತ್ರ ಶರತ್ ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಇದರಿಂದ ಅವರಿಗೆ ಗಾಯವಾಗಿವೆ.

ಹೊಸೂರು ಗ್ರಾಮದಲ್ಲಿ ನಿನ್ನೆ ಗ್ರಾಮ ದೇವತೆಯ ಹಬ್ಬವಿತ್ತು. ಹೀಗಾಗಿ ದೇವಾಲಯದ ಮುಂಭಾಗದಲ್ಲಿ ಮೇಕೆ ಬಲಿ ಕೊಡುವ ಮೂಲಕ ಹಬ್ಬ ಆಚರಿಸಲಾಗಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆ ಮಂಗಳಗೌರಿ, ಸದ್ಯ ರಾಜ್ಯದಲ್ಲಿ ಕೊರೊನಾ ಹರಡುತ್ತಿದೆ. ಗುಂಪುಗೂಡಬೇಡಿ ಎಂದು ಮನವಿ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಜನ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೋವಿಡ್ ನಿಯಮ ಉಲ್ಲಂಘನೆ; ಮೂವರು ಅರ್ಚಕರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ಸೇರಿದಂತೆ ಹತ್ತು ಹಲವು ನಿರ್ಬಂಧಗಳನ್ನು ಹೇರಿದೆ. ಜಿಲ್ಲಾಧಿಕಾರಿಗಳು ಕೂಡ ದೇವಸ್ಥಾನ, ಪ್ರಾರ್ಥನಾ ಮಂದಿರಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.‌ ದೇವಸ್ಥಾನಗಳಲ್ಲಿ ಕೇವಲ ಅರ್ಚಕರು ಮಾತ್ರ ಪೂಜೆ-ಪುನಸ್ಕಾರ ಮಾಡಬೇಕು, ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅವಕಾಶ ಕೊಡಬಾರದು ಎಂದು ಆದೇಶ ಹೊರಡಿಸಲಾಗಿದೆ.

ಹೀಗೆ ಭಕ್ತರ ಕೋರಿಕೆಯ ಮೇರೆಗೆ ದೇವಸ್ಥಾನದ ಬಾಗಿಲು ತಗೆದು ದರ್ಶನಕ್ಕೆ ಅವಕಾಶ ಕಲ್ಪಿಸಿದ ಆರೋಪದ ಮೇಲೆ ಮೂವರು ಅರ್ಚಕರನ್ನು ಬಂಧಿಸಲಾಗಿದೆ.

ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನಿನ್ನೆ ಗ್ರಾಮದಲ್ಲಿ ಆಚರಿಸುವ ಕೊನೆ ಮಂಗಳವಾರದ ಹಿನ್ನೆಲೆಯಲ್ಲಿ ಯಲ್ಲಮ್ಮದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ಗಮನಿಸಿದ ಪೊಲೀಸರು ಪ್ರಕರಣ ದಾಖಲಿಸಿ ಮೂರು ‌ಜನ ಅರ್ಚಕರನ್ನು ಬಂಧಿಸಿದ್ದಾರೆ.

ಫಕ್ಕೀರಪ್ಪ ಚನ್ನಪ್ಪ ಬಾರಕೇರ, ಚನ್ನಪ್ಪ ಫಕ್ಕೀರಪ್ಪ ಬಾರಕೇರ ಹಾಗೂ ಸಂತೋಷ ಫಕ್ಕೀರಪ್ಪ ಬಾರಕೇರ ಎಂಬುವವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಈ ಕುರಿತು ನಾಗಾವಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗಣೇಶ ಹನಮಪ್ಪ ಪೂಜಾರ ಎಂಬುವವರು ದೂರು ದಾಖಲು ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯ ಪಿಎಸ್ಐ ಅಜಿತಕುಮಾರ್ ಹೊಸಮನಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನದಾಫ್ ಸಂಘದ ಅಧ್ಯಕ್ಷರ ಪತ್ನಿ ಹಬೀದಾ ಬೇಗಂ ನಿಧನ; ಅಬ್ದುಲ್ ರಜಾಕ್ ಸಂತಾಪ

ವಿಜಯಸಾಕ್ಷಿ ಸುದ್ದಿ, ನವಲಗುಂದ

ಕರ್ನಾಟಕ ರಾಜ್ಯ ನದಾಫ್/ಪಿಂಜಾರ್ ಸಂಘದ ಅಧ್ಯಕ್ಷ ಜನಾಬ್ ಜಲೀಲ್ ಸಾಹೇಬ್ ಅವರ ಧರ್ಮಪತ್ನಿ ಹಬೀದಾ ಬೇಗಂ ಅವರ ನಿಧನಕ್ಕೆ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ತೀವ್ರ ಸಂತಾಪ ಸೂಚಿಸಿದೆ.

ಮರ್ಹೂಮಾ ಹಬೀದಾ ಬೇಗಂ ರವರಿಗೆ ಆ ಅಲ್ಹಾನು ಮೃತರ ಅತ್ಮಕ್ಕೆ ಶಾಂತಿ (ಮಘ್ಪಿರತ್) ದಯಪಾಲಿಸಲಿ ಎಂದ ಅಬ್ದುಲ್ ರಜಾಕ್ ನದಾಫ್, ಹುಜೂರ್ ಮೋಹ್ಮದ್ ಮುಸ್ತಫಾ (ಸ್ವ) ಇವರ ನೆರವಾಗಲಿ ಎಂದು ಆಶಿಸಿದ್ದಾರೆ.

ಪಿಂಜಾರ್ ನದಾಫ್ ಸಮಾಜ ಮುಂಚೂಣಿಯಲ್ಲಿ ನಿಂತು ಜನ ಪರ ಧ್ವನಿಯಾಗಿ ಹೋರಾಡುತ್ತಿದ್ದ ಇವರ ನಿಧನವು ಸಮುದಾಯದಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಹಬೀದಾ ಬೇಗಂ ಅವರಿಗೆ ಸ್ವರ್ಗಪ್ರಾಪ್ತಿ ಮತ್ತು ಅವರ ಕುಟುಂಬದರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಅಲ್ಲ್ಹಾತಾಲ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಶಾಸಕರಿಗೆಲ್ಲ ಕೊರೊನಾ ನಿಯಮ ಅನ್ವಯಿಸುವುದಿಲ್ಲವೇ?

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ರಾಜ್ಯದಲ್ಲಿ ಮಹಾಮಾರಿಯ ಅಬ್ಬರ ಜೋರಾಗಿದೆ. ನಿಯಂತ್ರಣಕ್ಕಾಗಿ ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದ ಜನರಿಗೆ ತಕ್ಕ ಪಾಠ ಕಲಿಸಲಾಗುತ್ತಿದೆ. ಆದರೆ, ಇಲ್ಲೊಬ್ಬ ಬಿಜೆಪಿ ಶಾಸಕ ಮಾತ್ರ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಜಗಳೂರು ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರೇ ನಿಯಮ ಗಾಳಿಗೆ ತೂರಿರುವ ವ್ಯಕ್ತಿ. ಇವರು ಲಾಕ್ ಡೌನ್ ನಿಂದಾಗಿ ದೇವಸ್ಥಾನಗಳು ಬಂದ್ ಆಗಿದ್ದರೂ ಬಾಗಿಲು ತೆಗೆಯಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಕುಟುಂಬಸ್ಥರೊಂದಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇವರ ವರ್ತನೆ ಕಂಡು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯ ಜಗಳೂರು ತಾಲೂಕಿನ ಮಾಡ್ರಳ್ಳಿ ಗ್ರಾಮದ ಚೌಡೇಶ್ವರಿ ದೇವಿಯ ದೇವಸ್ಥಾನದ ಬಾಗಿಲು ತೆರೆಯಿಸಿ ಶಾಸಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಇಂದಿರಾ ರಾಮಚಂದ್ರಪ್ಪ, ಪುತ್ರ ಅಜಯೇಂದ್ರ ಸಿಂಹ ಇದ್ದರು.

ನಿಮ್ಮ ತೆವಲಿಗೆ ಜನರ ಹೆಣ ಕೆಡವಬೇಡಿ – ಸರ್ಕಾರದ ವಿರುದ್ಧ ಗುಡುಗಿದ ವಿಶ್ವನಾಥ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಹೆಣದ ಮೇಲೆ ಹಣ ಮಾಡುವ ಕೆಲಸ ಮಾಡಬೇಡಿ ಎಂದು ತಮ್ಮದೆ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಗುಡುಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಮುಂದುವರಿಸುವುದು ಸರಿಯಲ್ಲ. ಬಡವರಿಗೆ ಸರ್ಕಾರ ಸರಿಯಾದ ಪ್ಯಾಕೇಜ್ ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ಸದ್ಯ ಕೊರೊನಾದಿಂದ ಜನ ಸಾಯುತ್ತಿದ್ದಾರೆ. ಇದೇ ರೀತಿ ಸರ್ಕಾರದ ದುರ್ವರ್ತನೆ ಮುಂದುವರೆದರೆ ಜನ ಮುಂದೆಯೂ ಸಾಯುತ್ತಾರೆ ಎಂದು ಗುಡುಗಿದ್ದಾರೆ.

ನಾಯಕತ್ವದ ಬದಲಾವಣೆ ಹೈಕಮಾಂಡ್‍ ಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿನ ಗೊಂದಲ ಮುಂದುವರೆಸಲು ಲಾಕ್ ಡೌನ್ ಅನ್ನು ರಕ್ಷಣೆಯಾಗಿ ಪಡೆಯುವುದು ಬೇಡ. ಸದ್ಯ ರಾಜ್ಯದಲ್ಲಿ ಕೊರೊನಾದಿಂದಾಗಿ ಜನ ಕಂಗಾಲಾಗುತ್ತಿದ್ದಾರೆ. ಆರೋಗ್ಯ ಇಲಾಖೆಯನ್ನು 5 ಭಾಗ ಮಾಡಿದ್ದಾರೆ. ಇಬ್ಬರನ್ನು ಹಾಸಿಗೆ ಮಂತ್ರಿ ಮಾಡಿದ್ದಾರೆ. ಒಬ್ಬರನ್ನು ಆಕ್ಸಿಜನ್ ಮಂತ್ರಿ ಮಾಡಿದ್ದಾರೆ. ಆದರೆ, ಇವರಿಂದಲೂ ಜನರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಹೆಣದ ಮೇಲೆ ಹಣ ಎತ್ತಬೇಡಿ ಎಂದು ಸರ್ಕಾರಕ್ಕೆ ಮತ್ತೆ ಚಾಟಿ ಬೀಸಿದ್ದಾರೆ.

ತಜ್ಞರ ಮಾತನ್ನು ಸರ್ಕಾರ ಎಂದಿಗೂ ಕೇಳಿಲ್ಲ. ಸಚಿವ ಸಂಪುಟದಲ್ಲಿ ತಮಗೆ ಇಷ್ಟಬಂದಂತೆ ನಿರ್ಧಾರ ಕೈಗೊಂಡಿದ್ದಾರೆ. ಈಗ ತಜ್ಞರ ಸಲಹೆ ಎಂದು ಹೇಳಿ ಲಾಕ್ ಡೌನ್ ಮುಂದುವರಿಸಬೇಡಿ. ಮತ್ತೊಮ್ಮೆ ಲಾಕ್ ಡೌನ್ ಮಾಡುವುದಾದರೆ ಪ್ರತಿಯೊಬ್ಬರಿಗೂ ರೂ. 10 ಸಾವಿರ ಕೊಟ್ಟು ನಂತರ ಮಾಡಿ. ನಿಮ್ಮ ತೆವಲಿಗಾಗಿ ಅಧಿಕಾರ ಉಳಿಸಿಕೊಳ್ಳಲು ಜನರನ್ನು ಬಲಿ ಕೊಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದ ಬಗ್ಗೆಯೂ ವಿಶ್ವನಾಥ್ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಇದೆ. ಭೂಮಿ ಪರಭಾರೆ ತೀರ್ಮಾನ ಧೃಡಿಕರಣಕ್ಕೆ ಬರುತ್ತದೆ. ಅದನ್ನು ಧೃಡಿಕರಣ ಮಾಡಬಾರದು. ಯಡಿಯೂರಪ್ಪ ಇದೇ ವಿಚಾರದಲ್ಲಿ ಅಹೋರಾತ್ರಿ ಹೋರಾಟ ಮಾಡಿದ್ದರು. ಈಗ ಅವರೆ ಭೂಮಿ ಕೊಡಲು ಹೊರಟ್ಟಿದ್ದಾರೆ. ಇಂತಹ ಸರ್ಕಾರ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇನ್ನಿಲ್ಲ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ(103) ಇಂದು ಇಹಲೋಕ ತ್ಯಜಿಸಿದ್ದಾರೆ. ಅವರು ಹೃದಯ ಸಂಬಂಧಿ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ದೊರೆಸ್ವಾಮಿ ಅವರಲ್ಲಿ ಮೇ. 6ರಂದು ಕೊರೊನಾ ದೃಢಪಟ್ಟಿತ್ತು. ಆದರೆ, ಅವರು ಅದರಿಂದ ಚೇತರಿಸಿಕೊಂಡಿದ್ದರು.
ಹೀಗಾಗಿ ಮೇ. 13ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆ ನಂತರ ಮತ್ತೆ ನಾಲ್ಕು ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ) ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಕೊರೊನಾದಿಂದ ಗುಣಮುಖರಾಗಿದ್ದ ನಾಲ್ಕು ದಿನಗಳ ನಂತರ ಅವರಲ್ಲಿ ಉಸಿರಾಟದ ತೊಂದರೆ ಪ್ರಾರಂಭವಾಯಿತು. ಹೀಗಾಗಿ ಅವರನ್ನು ಇಲ್ಲಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಅವರು ನನಗೆ ವಯಸ್ಸಾಗಿದೆ. ನನಗೆ ಬೆಡ್ ಬೇಡ. ಅದು ಯುವಕರಿಗೆ ಉಪಯೋಗವಾಗಲಿ ಎಂಬ ಮಾತುಗಳನ್ನು ದೊರೆಸ್ವಾಮಿ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಜಯದೇವ ಆಸ್ಪತ್ರೆಯ ವೈದ್ಯ ಡಾ. ಮಂಜುನಾಥ್ ಅವರು, ಬೆಡ್ ಕೊರತೆ ಇಲ್ಲ ಎಂದು ಮನವೊಲಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಪ್ರೇಮ ವೈಫಲ್ಯ – ಉಪನ್ಯಾಸಕ ಆತ್ಮಹತ್ಯೆಗೆ ಶರಣು!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಪ್ರೇಮ ವೈಫಲ್ಯದಿಂದಾಗಿ ಅತಿಥಿ ಉಪನ್ಯಾಸಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಈ ಅತಿಥಿ ಉಪನ್ಯಾಸಕರು ಕಲಬುರಗಿ ಅಪ್ಪನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇವರು ನಗರದ ಲಾಲ್ ಗೇರಿ ಕ್ರಾಸ್ ನಿವಾಸಿ ಅಂಬರೀಷ್(35) ಎಂದು ಗುರುತಿಸಲಾಗಿದೆ.

ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮನೆಗೆ ಕರೆ ಮಾಡಿ ಹೇಳಿ ಕೆರೆಗೆ ಹಾರಿದ್ದಾರೆ. ಅವರ ಶವ ಇಂದು ಕೆರೆಯಲ್ಲಿ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬ್ರಹ್ಮಪೂರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯಾಸ್ ಚಂಡಮಾರುತದ ಹಾವಳಿ – ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಯಾಸ್ ಚಂಡಮಾರುತದ ಅಬ್ಬರ ಜೋರಾಗಿದ್ದರಿಂದಾಗಿ ರಾಜ್ಯದ ಹಲವೆಡೆ ಭರ್ಜರಿ ಮಳೆ ಸುರಿಯುತ್ತಿದೆ. ಅಲ್ಲದೇ, ಈ ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರೆಯಲಿದೆ. ಈಗಾಗಲೇ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ.

ಹಲವೆಡೆ ಜನ – ಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೇ, ಮೇ. 29ರ ವರೆಗೂ ಮಳೆಯಾಗುವ ಸಾಧ್ಯತೆ ಇದೆ. ಚಂಡಮಾರುತದ ಪ್ರಭಾವದಿಂದಾಗಿ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹೀಗಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 3 ದಿನಗಳ ಕಾಲ ಮಳೆಯಾಗುತ್ತಿರುವುದರಿಂದಾಗಿ ಕರಾವಳಿ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮೇ. 26ರಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಇಂದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಪಿಎಂ ಕೇರ್ಸ್ ಗೆ ಸಾಕಷ್ಟು ದಾನ ಮಾಡಿದ್ದ ವ್ಯಕ್ತಿಯ ತಾಯಿಗೆ ಬೆಡ್ ಸಿಗದೆ ಸಾವು- ಎಲ್ಲೆಡೆ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಪಿಎಂ ಕೇರ್ಸ್‍ ಗೆ ರೂ. ಲಕ್ಷಾಂತರ ದೇಣಿಗೆ ನೀಡಿದ್ದ ಉದಾರ ವ್ಯಕ್ತಿಯ ತಾಯಿಗೆ ಬೆಡ್ ಸಿಗದೆ ಸಾವನ್ನಪ್ಪಿದ ಮನ ಕಲಕುವ ಘಟನೆ ಅಹಮದಾಬಾದ್‍ ನಲ್ಲಿ ನಡೆದಿದೆ.
ಅಹ್ಮದಾಬಾದ್ ನ ವಿಜಯ್ ಪರಿಕ್ ಎಂಬುವವರು ಪಿಎಂ ಕೇರ್ಸ್‍ ಗೆ ರೂ. 2.51 ಲಕ್ಷ ದೇಣಿಗೆ ನೀಡಿದ್ದರು. ಆದರೂ, ಸಾಯುತ್ತಿರುವ ನನ್ನ ತಾಯಿಗೆ ಆಕ್ಸಿಜನ್ ಬೆಡ್ ದೊರಕಲಿಲ್ಲ. ಮುಂದೆ ಬರುತ್ತಿರುವ 3ನೇ ಕೊರೊನಾ ಅಲೆಯಲ್ಲಿ ಬೆಡ್ ಕಾಯ್ದಿರಿಸಲು ನಾನು ಇನ್ನೆಷ್ಟು ಹಣ ದೇಣಿಗೆ ನೀಡಬೇಕು ಎಂಬುವುದನ್ನು ದಯವಿಟ್ಟು ತಿಳಿಸಿ ಎಂದು ಆ ವ್ಯಕ್ತಿ ನೊಂದು ಕಣ್ಣೀರು ಸುರಿಸಿದ್ದಾರೆ.

ಪಿಎಂ ಕೇರ್ಸ್‍ ಗೆ ರೂ. 2.51 ಲಕ್ಷ ದೇಣಿಗೆ ನೀಡಿದ್ದೇನೆ. ಆದರೂ ನನ್ನ ತಾಯಿಗೆ ಆಕ್ಸಿಜನ್ ಬೆಡ್ ಸಿಗಲಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಅದಕ್ಕೆ ಎಷ್ಟು ದೇಣಿಗೆ ನೀಡಬೇಕು ಹೇಳಿ, ನೀಡುತ್ತೇನೆ. ಸೋಂಕಿನಿಂದ ನಾನು ಮತ್ತಷ್ಟು ಕುಟುಂಬ ಸದಸ್ಯರನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಸದ್ಯ ಈ ವ್ಯಕ್ತಿಯ ತಾಯಿಗೆ ಬೆಡ್ ಸಿಗದ ಕಾರಣ ಸಾವನ್ನಪ್ಪಿದ್ದಾರೆ. ಈ ಕುರಿತು ಸ್ವತಃ ಆ ವ್ಯಕ್ತಿಯೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಸದ್ಯ ಈ ಟ್ವೀಟ್ ಭಾರಿ ವೈರಲ್ ಆಗುತ್ತಿದೆ. ಟ್ವೀಟ್‍ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ರಾಷ್ಟ್ರಪತಿ ಭವನವನ್ನು ಟ್ಯಾಗ್ ಮಾಡಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಂದು ದೇಶಾದ್ಯಂತ ಕರಾಳ ದಿನ ಆಚರಣೆ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂದು ರೈತರು ದೇಶಾದ್ಯಂತ ಕರಾಳ ದಿನ ಆಚರಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರೋದಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಇಂದು 6 ತಿಂಗಳು ಪೂರ್ಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ರೈತರು ಇಂದು ಕರಾಳ ದಿನ ಆಚರಣೆ ಮಾಡಿದ್ದಾರೆ.

ರೈತರು ತಮ್ಮ ಮನೆ, ವಾಹನಗಳಲ್ಲಿ ಹಾಗೂ ಬೇರೆ ಸ್ಥಳಗಳಲ್ಲಿ ಕಪ್ಪು ಬಾವುಟ ಹಾರಿಸುತ್ತಿದ್ದಾರೆ. ಅಲ್ಲದೇ, ಇಂದು ಪಂಜಾಬ್ ನ ರೈತರು ಕಪ್ಪು ಬಣ್ಣದ ಟರ್ಬನ್‍ ಗಳನ್ನು ಧರಿಸುವುದರ ಮೂಲಕ ಕರಾಳ ದಿನ ಆಚರಿಸುತ್ತಿದ್ದಾರೆ.

ಈ ಹೋರಾಟ 2020ರ ನವೆಂಬರ್ 26ರಂದು ದೆಹಲಿ ಚಲೋ ಹೆಸರಿನಲ್ಲಿ ಪ್ರಾರಂಭವಾಯಿತು. ದೆಹಲಿ ಪ್ರವೇಶಕ್ಕೆ ಅನುಮತಿ ಸಿಗದ ಹಿನ್ನಲೆಯಲ್ಲಿ ಗಡಿಗಳಲ್ಲಿಯೇ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ರೈತರು, ಅಂದಿನಿಂದ ಇಲ್ಲಿಯವರೆಗೂ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಕೃಷಿ ಮಸೂದೆಗಳನ್ನು ಹಿಂಪಡೆಯುವವರೆಗೂ ಹೋರಾಟ ನಡೆಯಲಿದೆ ಎಂದು ರೈತರು ಎಚ್ಚರಿಸಿದ್ದಾರೆ.

error: Content is protected !!