Home Blog Page 3176

ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಪ್ರತಿಭಟನೆ ಮುಂದೂಡಿಕೆ: ಟಿ ಕೃಷ್ಣಪ್ಪ

0

ಬೆಂಗಳೂರು;- ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಕರೆ ನೀಡಿದ್ದ ಪ್ರತಿಭಟನೆ ದಿಡೀರ್ ಮುಂದೂಡಿಕೆ ಆಗಿದೆ.

ಈ ಸಂಬಂಧ ಸಂಘದ ರಾಜ್ಯಾಧ್ಯಕ್ಷ ಟಿ ಕೃಷ್ಣಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ವೈಫಲ್ಯದ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನ. 7ಕ್ಕೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು.

10 ಕೆಜಿ ಅಕ್ಕಿ ಮತ್ತು ಪಡಿತರ ಅಂಗಡಿ ಮಾಲಿಕರಿಗೆ ಕಮಿಷನ್ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ ಇದೀಗ ಪ್ರತಿಭಟನೆ ಮುಂದೂಡಲಾಗಿದ್ದು, ನ. 9 ಕ್ಕೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದರು.

ಇದೇ ವೇಳೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ. ಟಿ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಡಿತರ ವಿತರಕರಿಗೆ ಎತ್ತುವಳಿ ಮಾಡದಂತೆ ಕರೆ ನೀಡಲಾಗಿದ್ದು, ಪ್ರತಿಭಟನೆ ಸ್ಥಳಕ್ಕೆ ಸಚಿವರೆ ಆಗಮಿಸಿ ಸರ್ಕಾರದ ನಿರ್ಧಾರ ಪ್ರಕಟಿಸಲಿ ಎಂದು ಸಂಘದ ರಾಜ್ಯಾಧ್ಯಕ್ಷ ಟಿ ಕೃಷ್ಣಪ್ಪ. ಆಗ್ರಹಿಸಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಅನ್ನದ ಬೆಲೆಯನ್ನು ಅರಿತೆ; ಜಿಯೋ ಸಿನಿಮಾ ಸಂದರ್ಶನದಲ್ಲಿ ರಕ್ಷಕ್‌!

0

ಬುಲೆಟ್‌ನಂಥ ಡೈಲಾಗ್‌ಗಳಿಂದಲೇ ಗಮನಸೆಳೆದಿದ್ದ ಬುಲೆಟ್‌ ರಕ್ಷಕ್‌ ಬಿಗ್‌ಬಾಸ್‌ ಮನೆಯಿಂದ ಈ ವಾರ ಹೊರಬಿದ್ದಿದ್ದಾರೆ.

ಮನೆಯಿಂದ ಹೊರಗೆ ಹೋಗುತ್ತಿರುವುದಕ್ಕೆ ಅವರಲ್ಲಿ ಯಾವ ಬೇಸರವೂ ಇಲ್ಲವಂತೆ. ಹಾಗೆ ನೋಡಿದರೆ, ಪರಿಸ್ಥಿತಿ ಇನ್ನಷ್ಟು ಕೆಡುವ ಮೊದಲೇ ಹೊರಬಂದಿದ್ದಕ್ಕೆ ಖುಷಿಯೇ ಇದೆಯಂತೆ!

ಮನೆಯಿಂದ ಹೊರಬಿದ್ದಿದ್ದೇ JioCinemaಕ್ಕೆ ಎಕ್ಸ್‌ಕ್ಲೂಸೀವ್ ಸಂದರ್ಶನ ನೀಡಿರುವ ರಕ್ಷಕ್‌, ಬಿಗ್‌ಬಾಸ್ ಮನೆಯೊಳಗಿನ ಅನುಭವ, ಸ್ಪರ್ಧಿಗಳ ಕುರಿತಾದ ಒಪಿನಿಯನ್‌ಗಳನ್ನು ಹಂಚಿಕೊಂಡಿದ್ದಾರೆ.

ಅವರ ಅನುಭವಕಥನವನ್ನು ಅವರ ಮಾತುಗಳಲ್ಲೇ ಕೇಳಿ,

‘ಎಲ್ಲರಿಗೂ ನಮಸ್ಕಾರ. ನಾನು ರಕ್ಷಕ್‌. ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ನಾನೇನೂ ಇಲ್ಲಿ ಕೇಳಿಕೊಂಡು ಬಂದವನಲ್ಲ. ಅವರಾಗೇ ನನ್ನ ಅಪ್ರೋಚ್ ಮಾಡಿದರು. ಒಪ್ಪಿಗೆ ಆಯ್ತು. ಒಳಗಡೆ ಬಂದೆ. ಒಂದು ತಿಂಗಳ ಇರಬೇಕು ಎಂಬ ಆಸೆ ಇತ್ತು. ಆ ದೇವ್ರು ಮುಂಚೆನೇ ಬರ್ದಿದ್ದ ಅನ್ಸತ್ತ. ನನ್ನ ಬೆಸ್ಟ್ ನಾನು ಕೊಟ್ಟಿದ್ದೀನಿ. ಒಳಗಡೆ ಇದ್ದಾಗ ಮನೆಯ ಕ್ಯಾಪ್ಟನ್ ಆದೆ. ‘ಉತ್ತಮ’ ತಗೊಂಡೆ. ಎಲ್ಲರ ಜೊತೆ ತುಂಬ ಒಳ್ಳೆಯ ಬಾಂಡಿಂಗ್ ಇಟ್ಕೊಂಡಿದ್ದೆ. ಈ ಎಲ್ಲವೂ ಇನ್ನೂ ಸ್ಟ್ರಾಂಗ್ ಆಗುವ ಮೊದಲೇ ಆಚೆ ಬಂದೆ ಅಂತ ಖುಷಿ ಇದೆ.

ಹೋಗ್ತಾ ಹೋಗ್ತಾ ಇವೆಲ್ಲವೂ ಇನ್ನೂ ವರ್ಸ್ಟೇ ಆಗಿರೋದು. ನಾನು ಹಬ್ಬದ ಟೈಮಲ್ಲಿ ಕುಟುಂಬದವರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದೆ. ನಮ್ಮಮ್ಮ, ‘ನೀನಿಲ್ಲಾ ಅಂದ್ರೆ ಮನೇಲಿ ಕಳೆ ಇರಲ್ವೋ’ ಅಂತಿದ್ರು. ಯಾಕಂದ್ರೆ ನಮ್ಮನೇಲಿ ನಾನೊಬ್ನೇ ಸೌಂಡು ಮಾಡೋನು. ಅದು ಸಡನ್ನಾಗಿ ನೆನಪಾಗೋಯ್ತು. ‘ಓ ಈವತ್ತು ಹಬ್ಬ. ಮನೇಲಿ ಚಿತ್ರನ್ನ, ವಡೆ, ಪಲ್ಯ ಎಲ್ಲ ಮಾಡಿರ್ತಾರೆ. ಇದ್ದಾಗ ನಾವೆಷ್ಟು ದುರಹಂಕಾರದಿಂದ ಇದ್ವಿ. ಈವತ್ತು ಇಲ್ಲಿ ಏನೂ ಇಲ್ದೆ, ಏನಾದ್ರೂ ಕೊಡ್ರಪ್ಪಾ ಅಂತ ಅಲಿತಿದೀವಿ. ಬೀನ್ಸ್ ಕೊಡ್ರಪ್ಪಾ, ಬೀನ್ಸ್ ಪಲ್ಯ ಮಾಡೋಣ. ಅನ್ನ ಕೊಡ್ರಪ್ಪಾ, ಫಲಾವ್ ಮಾಡೋಣ ಅಂತ ಅನಿಸ್ತಿತ್ತು. ಅಷ್ಟ್ ಬೇಜಾರಾಗಿಬಿಟ್ಟಿತ್ತು. ಅನ್ನದ ಬೆಲೆ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡೆ.

ಈ ಜರ್ನಿಯನ್ನು ಇನ್ನೂ ಕಂಟಿನ್ಯೂ ಮಾಡಬೇಕಿತ್ತು ನಾನು. ನನಗೆ ನಾನು ಯಾವತ್ತೂ ಮೋಸ ಮಾಡಿಕೊಂಡಿಲ್ಲ. ನಾಮಿನೇಷನ್‌ ಆಗಿರೋರ ಪಟ್ಟಿಯಲ್ಲಿ ನಾನು ಇರ್ತೀನಿ ಅಂತ್ಲೇ ಅಂದುಕೊಂಡಿರಲಿಲ್ಲ. ಸೆಕೆಂಡೋ ಥರ್ಡೋ ಸೇಫ್ ಆಗಿಬಿಡ್ತೀನಿ ಅಂದ್ಕೊಂಡಿದ್ದೆ. ರಕ್ಷಕ್ ಜಾಸ್ತಿ ಮಾತಾಡ್ತಾನೆ. ಕೋಪ ಬರತ್ತೆ ಅಂತೆಲ್ಲ ಇತ್ತು. ಅದೆಲ್ಲ ಯಾವ್ದೂ ಇಲ್ಲ. ಆಚೆ ಇರೋ ಜನಕ್ಕೆ ಒರಿಜಿನಲ್ ರಕ್ಷಕ್ ಕಾಣಿಸ್ಲಿಲ್ವೇನೋ. ನಾನು ಇರೋದೇ ಹಾಗೆ. ಮನೆಲೂ ಹಾಗೇ ಇರ್ತೀನಿ. ಇರುವಷ್ಟು ದಿನ ಚೆನ್ನಾಗಿದ್ದೇನೆ.

ಈ ವರ್ಷದ ಬಿಗ್‌ಬಾಸ್ ತುಂಬ ಕನ್‌ಫ್ಯೂಷನ್ನು, ತುಂಬ ಡಿಫರೆಂಟು ಆಗಿತ್ತು. ತುಂಬ ಯೂನಿಕ್ ಆಗಿದೆ. ಯಾರಿಗೂ ಊಹೆ ಮಾಡಕ್ಕಾಗಲ್ಲ.
ಸ್ಟೇಜ್‌ ಹತ್ತಾವಾಗಲೇ ಒಂದು ಖುಷಿ ಇತ್ತು. ಸ್ಟೇಜ್ ಹತ್ತಾದ್ಮೇಲೆ ಒಂದು ಟಾಸ್ಕ್ ಕೊಟ್ರು. ಪೊಲಿಂಗ್ ಇತ್ತು. ನಾವು ಅಸಮರ್ಥರಾಗಿ ಒಳಗಡೆ ಹೋದ್ವಿ. ಎಲ್ಲರೂ ಕಷ್ಟಪಟ್ಟು, ಗುರ್ತಿಸಿಕೊಂಡು ಅಸಮರ್ಥರಿಂದ ಸಮರ್ಥನಾದೆ. ಕ್ಯಾಪ್ಟನ್ ಆದೆ. ಉತ್ತಮ ತಗೊಂಡೆ.

ಹಗ್ಗ ಎಳೆದು ಹಿಡಿದುಕೊಳ್ಳುವ ಟಾಸ್ಕ್‌ ನನಗೆ ನೆನಪಿರುವಂಥದ್ದು. ನನ್ನ ತುಂಬ ಟ್ರಿಗರ್ ಮಾಡಿದ್ರು. ತುಕಾಲಿ ಸಂತೋಷ್ ಸೇವ್ ಮಾಡಬೇಕಿತ್ತು. ಆಗಲ್ವೇನೋ ಅನಿಸಿತ್ತು. ಆದ್ರೆ ಪೋಲ್ ಹಿಡ್ದೆ. ನೀರು ಹಾಕಿದ್ರು. ಆಗ ಇನ್ನೂ ಕಂಫರ್ಟಬಲ್ ಆಗಿತ್ತು. ನಾನೊಬ್ಬ ಕಾಂಪಿಟೇಟರ್ ಅಂತ ತೋರಿಸ್ಬೇಕು ಅನಿಸಿತ್ತು. ಆಡಿದೆ.

ನನ್ನ ಕ್ಯಾಪ್ಟನ್‌ಷಿಪ್‌ನಲ್ಲಿ ಅನ್ನಕ್ಕೆ ಕೊರತೆ ಇರಲಿಲ್ಲ. ಅದೇ ವಾರದಲ್ಲಿ ತಾರಮ್ಮ ಬಂದಿದ್ದು. ಅದೇ ವಾರದಲ್ಲಿ ಬೃಂದಾವನ ಟೀಮ್ ಬಂದಿದ್ದು. ಅದೇ ವಾರದಲ್ಲಿ ನಮಗೆ ಏನೇನು ಬೇಕೋ ಎಲ್ಲ ಆಹಾರವನ್ನೂ ಕೊಟ್ಟಿದ್ರು.

ಎಲ್ಲ ಸೌಕರ್ಯ ನನ್ನ ಕ್ಯಾಪ್ಟನ್‌ಷಿಪ್‌ನಲ್ಲಿ ಬಂತು.
ಜಿಯೋ ಸಿನಿಮಾದ ಫನ್‌ ಫ್ರೈಡೆಯಲ್ಲಿನ ಮ್ಯೂಸಿಕಲ್ ಪಾಟ್‌ ಟಾಸ್ಕ್‌ ಸಖತ್ ಮಜಾ ಕೊಟ್ಟಿತ್ತು. ಫನ್‌ ಫ್ರೈಡೆ ಅಂದ್ರೇ ಮಜವಾಗಿರೋ ಟಾಸ್ಕ್‌. ಅದನ್ನೂ ಕೆಲವರು ಸಿಕ್ಕಾಪಟ್ಟೆ ಗಂಭೀರವಾಗೇ ಆಡ್ತಾರೆ. ಫನ್ ಅನ್ನೋ ಶಬ್ದಕ್ಕೆ ಹಾಳುಮಾಡಬಾರದು. ಬೇರೆ ಟ್ರಿಗರ್ ಆಗುವ ಟಾಸ್ಕ್ ಇರುತ್ತದೆ. ಅದಕ್ಕೆ ಟ್ರಿಗರ್ ಆಗಲಿ. ಆದ್ರೆ ಮಜವಾಗಿ ಆಡುವ ಆಟವನ್ನು ಮಜವಾಗಿಯೇ ಆಡಿ. ಎಂಜಾಯ್ ಮಾಡಿಕೊಂಡು ಆಡಬೇಕು.

ಮನೆಯೊಳಗಿನ ಸ್ಪರ್ಧಿಗಳಲ್ಲಿ ಜೆನ್ಯೂನ್ ಅಂದ್ರೆ ನಮ್ರತಾ. ಸ್ಟ್ರಾಟಜಿ ಅಂತ ಬಂದ್ರೆ ವಿನಯ್. ಫೇಕ್‌ ಅಂತ ಹೇಳಕ್ಕಾಗಲ್ಲ. ಆದರೆ ಬೇಡದಿರೋ ವಿಷಯಕ್ಕೆ ನಾಟಕ ಮಾಡಿದಾರೆ ಭಾಗ್ಯಶ್ರೀ. ಅಳೋದು ಒಂದೇ ಅಲ್ಲ ಲೈಫ್‌ನಲ್ಲಿ. ಅದನ್ನು ಸ್ಟ್ರಾಂಗಾಗಿ ಫೇಸ್ ಮಾಡಬೇಕು. ಸತ್ಯವನ್ನು ಮುಖಕ್ಕೆ ಹೊಡೆದ ಹಾಗೆ ಹೇಳೋರು ವಿನಯ್. ಮತ್ತೆ ಫೈನಲ್‌ನಲ್ಲಿ ನಮ್ರತಾ ಇರಲೇಬೇಕು. ಕಾರ್ತಿಕ್ ಬರಬಹುದೇನೋ. ನಮ್ರತಾ ವಿನ್ನರ್ ಆಗಬೇಕು. ಈ ವಾರ ಕಡಿಮೆ ಪರ್ಫಾರ್ಮೆನ್ಸ್ ಕೊಟ್ಟಿದ್ದು ಪ್ರತಾಪ್‌. ಮೋಸ್ಟ್ಲಿ ಮುಂದಿನ ವಾರ ನನ್ನ ಜಾಗದಲ್ಲಿ ಅವನು ಇರ್ತಾನೆ ಅಂದ್ಕೊಂಡಿದೀನಿ.

ನಾನು, ತುಕಾಲಿ ಮತ್ತು ವರ್ತೂರ್ ಸಂತೋಷ್‌ ತ್ರಿಮೂರ್ತಿ ಸಂಘ ಯಾವಾಗ ಹುಟ್ಕೊಂತೋ, ಅದು ಶನಿವಾರ ಹುಟ್ಕೊಂಡ್ತು. ಸೋಮವಾರ ಮಧ್ಯಾಹ್ನವೇ ವರ್ತೂರ ಸಂತೋಷ್ ಕಾಣೆಯಾಗಿಬಿಟ್ರು. ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಮೂರು ಜನ ಇದ್ದೋರು ಇಬ್ಬರಾಗಿಬಿಟ್ವಿ. ನಾನು ಒಬ್ರು ಜೊತೆ ಬಾಂಡಿಂಗ್ ಶುರುಮಾಡಿದ್ರೆ ಅದನ್ನು ಬ್ರೇಕ್ ಮಾಡಲ್ಲ. ನನ್ನ ತಪ್ಪಾಗಿದ್ರೆ ಸಾರಿ ಕೇಳ್ತೀನಿ. ತಪ್ಪಾಗಿಲ್ಲದಿದ್ರೆ ತಲೆಕೆಡಿಸಿಕೊಳ್ಳಲ್ಲ. ಇಲ್ಲಿ ನನಗೆ ತುಕಾಲಿ ಸಂತೋಷ್ ಬೇಗ ಕ್ಲೋಸ್ ಆದ್ರು. ನಮ್ಮು ಕೂಡ ಕ್ಲೋಸ್ ಆದ್ರು. ಆ ಫ್ರೆಂಡ್‌ಷಿಪ್‌ ನೆನಪಿಸಿಕೊಂಡ್ರೆ ಈ ಜರ್ನಿ ಇಲ್ಲೇ ಸ್ಟಾಪ್ ಆಗಿದ್ದರ ಬಗ್ಗೆ ಬೇಜಾರಾಗುತ್ತದೆ ಅಷ್ಟೆ.

ರೈತರ ಪಂಪ್‌ಸೆಟ್‌ಗಳಿಗೆ 7 ತಾಸು ವಿದ್ಯುತ್ ನೀಡಲು ಸಿಎಂ ಸಿದ್ದರಾಮಯ್ಯ ಆದೇಶ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಈ ಸಭೆಯಲ್ಲಿ ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಕೃಷಿ ಪಂಪ್ ಸೆಟ್ಗಳಿಗೆ ಪ್ರತಿದಿನ 7 ತಾಸು ವಿದ್ಯುತ್ ನೀಡಲು ನಿರ್ಧರಿಸಲಾಗಿತು.

ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಮಳೆ ಅಭಾವದಿಂದ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
2022ಕ್ಕೆ ಹೋಲಿಸಿದ್ರೆ 2023 ರಲ್ಲಿ ವಿದ್ಯುತ್ ಬೇಡಿಕೆ ಸರಾಸರಿ ಶೇ.43 ರಷ್ಟು ಹೆಚ್ಚಿದೆ.
ಅಕ್ಟೋಬರ್ ತಿಂಗಳಲ್ಲಿ 15,978 ಮೆಗಾವ್ಯಾಟ್ ಬೇಡಿಕೆ ದಾಖಲಾಗಿದೆ. ವಿದ್ಯುತ್ ಬಳಕೆಯಲ್ಲಿ ಕಳೆದ ವರ್ಷಕ್ಕಿಂತ ಶೇ. 45 ರಷ್ಟು ಹೆಚ್ಚಿದೆ. ಕೃಷಿ ಬಳಕೆಯಲ್ಲಿ ಶೇ. 55ರಿಂದ 119 ರಷ್ಟು ಹೆಚ್ಚಳವಾಗಿದೆ.

ಇತರ ವಿಭಾಗಗಳಲ್ಲಿ ಶೇ.9 ರಿಂದ 14 ರಷ್ಟು ಹೆಚ್ಚಳವಾಗಿದೆ. ಮಳೆ ಕೊರತೆ, ವಾಡಿಕೆಗಿಂತ ಮೊದಲೇ ಐಪಿ ಸೆಟ್ ಗಳ ಬಳಕೆ ಪ್ರಾರಂಭವಾಗಿರುವುದು ಹಾಗೂ ಕೋವಿಡ್ 19ರ ನಂತರದ ಆರ್ಥಿಕ ಪುನಶ್ಚೇತನ ಇದಕ್ಕೆ ಕಾರಣವಾಗಿದೆ.

ಮೊಬೈಲ್ ಚಟ ಬಿಟ್ಟು ಚೆನ್ನಾಗಿ ಓದು ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!

0

ಚಿಕ್ಕಬಳ್ಳಾಪುರ: ಮೊಬೈಲ್ ಚಟ ಬಿಟ್ಟು ಚೆನ್ನಾಗಿ ಓದು ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಟ್ಟಾವಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ 15 ವರ್ಷದ ಲೋಕೇಶ್ ಎಂದು ತಿಳಿದು ಬಂದಿದೆ.

ಚಿಟ್ಟಾವಲಹಳ್ಳಿ ಗ್ರಾಮದ ಚಾಲಕ ರಾಮಾಂಜಿನಪ್ಪ ಅವರ ಪುತ್ರ ಲೋಕೇಶ್ ಗೌರಿಬಿದನೂರು ನಗರದ ಎಸ್ ಇ ಎಸ್ ಸರ್ಕಾರಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ ಲೋಕೇಶ್ ಶಾಲೆ ಬಿಟ್ಟ ನಂತರ ಹೆಚ್ಚಾಗಿ ಮೊಬೈಲ್ ನೋಡುತ್ತಿದ್ದು ಮೊಬೈಲ್ ಗೇಮ್ ನಲ್ಲಿ ಬ್ಯೂಸಿಯಾಗಿರುತ್ತಿದ್ದನು.

ಇದರಿಂದ ಕೋಪಗೊಂಡ ಪೋಷಕರು ಮಗನಿಗೆ ಸಾಕಷ್ಟು ಬಾರೀ ಬುದ್ದಿವಾದ ಹೇಳಿದ್ರು. ಸದ್ಯ ನಿನ್ನೆ ಭಾನುವಾರ ಹಿನ್ನಲೇ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ಇದನ್ನು ಕಂಡ ಪೋಷಕರು ಮೊಬೈಲ್ ಬಿಟ್ಟು ಚೆನ್ನಾಗಿ‌ ಓದು ಮುಂದೆ ಎಸ್ಎಸ್ಎಲ್ ಸಿ ಹೋಗಬೇಕೆಂದು ಒಳ್ಳೆಯ ಉದ್ಯೋಗಕ್ಕೆ ಹೋಗಬೇಕೆಂದು ರೇಗಾಡಿದ್ದಾರೆ.

ಇದರಿಂದ ಮನನೊಂದ ಲೋಕೇಶ್ ಮನೆಯಿಂದ ಹೊಲದ ಕಡೆ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ಮೃತನ ಶವ ಗೌರಿಬಿದನೂರು ಶವಾಗಾರಕ್ಕೆ ರವಾನಿಸಿದ್ದಾರೆ.

ತಾಯಿಗೆ ಕಿರುಕುಳ ನೀಡುತ್ತಿದ್ದ ತಂದೆಯನ್ನ ಕೊಂದ ಹೆತ್ತ ಮಗ..!

0

ರಾಯಚೂರು: ಗಾಂಜಾ, ಮದ್ಯ ಸೇವಿಸಿ ನಿತ್ಯ ತಾಯಿಗೆ ಕಿರುಕುಳ ನೀಡುತ್ತಿದ್ದ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ಹತ್ಯೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ದೇವರಭೂಪೂರು ಗ್ರಾಮದಲ್ಲಿ ನಡೆದಿದೆ.

ಬಂಡಿ ತಿಮ್ಮಣ್ಣ (55) ಕೊಲೆಯಾದ ವ್ಯಕ್ತಿಯಾದರೆ, ಶೀಲವಂತ ತಂದೆಯನ್ನು ಕೊಲೆ ಮಾಡಿದ ಆರೋಪಿ. ತಂದೆ ಪ್ರತಿನಿತ್ಯ ಗಾಂಜಾ, ಮದ್ಯ ಸೇವಿಸಿ ತಾಯಿಗೆ ಕಿರುಕುಳ ನೀಡುತ್ತಿದ್ದ ಎಂದು ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.  ಮಗ ಕುಟುಂಬಸ್ಥರ ಎದುರೇ ತಂದೆಯನ್ನು ಕೊಂದು ತಪ್ಪಿಸಿಕೊಳ್ಳಲು ದಾರಿಯಿಲ್ಲದ ಹಿನ್ನೆಲೆ ತಾನೇ ಪೊಲೀಸರಿಗೆ ಕರೆ ಮಾಡಿ, ಈ ಬಗ್ಗೆ ಮಾಹಿತಿ ನೀಡಿದ್ದಾನೆ.

ಸ್ಥಳಕ್ಕೆ ಲಿಂಗಸುಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ತಾನಾಗೇ ಪೊಲೀಸರಿಗೆ ಶರಣಾಗಿದ್ದು, ಈ ಬಗ್ಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೂ ವಿಜ್ಞಾನ ಇಲಾಖೆ ಪ್ರತಿಮಾ ಹತ್ಯೆ ಪ್ರಕರಣ; ಮಾಜಿ ಕಾರು ಚಾಲಕನ ಬಂಧನ

0

ಬೆಂಗಳೂರಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೊಲೆ ಕೇಸ್​ಗೆ ಸಂಬಂಧಿಸಿ ಪ್ರತಿಮಾ ಕೊಲೆ ಕೇಸ್​ನಲ್ಲಿ ಓರ್ವ ಆರೋಪಿ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಡಿಸಿಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗ್ತಿದೆ. ನಾಲ್ಕು ವರ್ಷದಿಂದ ಪ್ರತಿಮಾ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ. 10 ದಿನದ ಹಿಂದೆ ಕಿರಣ್​​ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.

ಆರೋಪಿ ಕಿರಣ್​ನನ್ನ ಮಹದೇಶ್ವರಬೆಟ್ಟದಲ್ಲಿ ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಪ್ರಕರಣದ ತನಿಖೆ ಮುಂದುವರಿದಿದೆ ಎಂದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತುಡ್ಕಿ ಮೂಲದ ಪ್ರತಿಮಾಗೆ 18 ವರ್ಷಗಳ ಹಿಂದೆ ವಿವಾಹವಾಗಿತ್ತು. ನಂತರ ಭೂ ವಿಜ್ಞಾನ ಇಲಾಖೆಯಲ್ಲಿ ನೌಕರಿ ದೊರೆತಿದ್ದರಿಂದ ಪ್ರತಿಮಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಗಂಡ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು. ಹಲವು ವರ್ಷ ರಾಮನಗರ ಜಿಲ್ಲೆಯಲ್ಲಿ ಕೆಲಸ ಮಾಡಿದ್ದ ಪ್ರತಿಮಾ ನಂತರ ರೆಡು ವರ್ಷಗಳ ಹಿಂದೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು.

ಎಂದಿನಂತೆ ಕಚೇರಿ ಕೆಲಸ ಮುಗಿದ ಮೇಲೆ ಶನಿವಾರ ರಾತ್ರಿ 8 ಗಂಟೆಗೆ ಕಚೇರಿಯಿಂದ ಕಾರು ಚಾಲಕ ಮನೆಗೆ ಡ್ರಾಪ್‌ ಮಾಡಿ ತೆರಳಿದ್ದ.‌ಬಳಿಕ ಹಂತಕರು ಬಂದು ಕೊಲೆ ಮಾಡಿ ಹೋಗಿದ್ದಾರೆ. ಮನೆಯ ಒಳಗೆ ಬಂದು ಕೊಲೆ ಮಾಡಿ ಹೋಗಿರುವುದರಿಂದ ಇದು ಪ್ರೀ ಪ್ಲಾನ್ ಮರ್ಡರ್ ಎಂದು ಶಂಕಿಸಲಾಗಿತ್ತು

ಭಾನುವಾರ ಕಾರ್ಯಕ್ರಮ ಒಂದಕ್ಕೆ ಹೋಗಬೇಕಿದ್ದರಿಂದ ರಾತ್ರಿ ಪ್ರತಿಮಾರಿಗೆ ಅವರ ಸಹೋದರ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆಯೂ ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡು ಕೆಳಗಿನ ಮನೆಯವರಿಗೆ ಫೋನ್ ಮಾಡಿ‌ನೋಡಲು ತಿಳಿಸಿದ್ದಾರೆ.

ಗ್ರೌಂಡ್ ಫ್ಲೋರ್ ನಲ್ಲಿ ವಾಸವಿದ್ದ ಮನೆಯವರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ. ಪರಿಚಿತರಿಂದಲೇ ಕೊಲೆಯಾಗಿರುವ ಅನುಮಾನ ಇರುವ ಹಿನ್ನೆಲೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಾಡಿನಿಂದ ಹೊರಬಂದು ಗ್ರಾಮಗಳಲ್ಲಿ ಅಡ್ಡಾಡುತ್ತಿರುವ ಹುಲಿರಾಯ

0

ಚಾಮರಾಜನಗರ: ಕಾಡಿನಿಂದ ಹೊರಬಂದು ಗ್ರಾಮಗಳಲ್ಲಿ ಅಡ್ಡಾಡುತ್ತಿರುವ ಹುಲಿರಾಯ ಹೌದು ಭಾರೀ ಗಾತ್ರದ ಹುಲಿಯೊಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಸುತ್ತಾಮುತ್ತಾ ಬೀಡುಬಿಟ್ಟಿದೆ.

ಬಂಡೀಪುರ ಹುಲಿ ಸುರಕ್ಷಿತ ಅರಣ್ಯ ಪ್ರದೇಶದಿಂದ ಹೊರಬಂದಿರುವ ವ್ಯಾಘ್ರ ಆಗಿದ್ದು, ಪಡಗೂರು ಮೂಡುಗೂರು ಕೊಡಸೋಗೆ ಬೊಮ್ಮಲಾಪುರ ಅಡ್ಡಾಡಿಕೊಂಡಿದೆ.

ರೈತರ ಜಾನುವಾರುಗಳನ್ನು ಕೊಂದು ಹೊಟ್ಟೆತುಂಬಿಸಿಕೊಳ್ಳುತ್ತಿದ್ದು, ಪಡಗೂರು,ಮೂಡಗೂರು, ಮಲ್ಲಮ್ಮನಹುಂಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹುಲಿಯ ಉಪಟಳ ಹೆಚ್ಚಾಗಿದೆ.

ಇನ್ನೂ ರೈತರ ಜಮೀನುಗಳಲ್ಲಿ ಅರಾಮವಾಗಿ ಅಡ್ಡಾಡುತ್ತಾ ಜಾನುವಾರುಗಳನ್ನು ಕೊಲ್ಲುತ್ತಿದ್ರೂ ಹುಲಿ ಸೆರೆಗೆ ಅರಣ್ಯ ಇಲಾಖೆ ಮುಂದಾಗುತ್ತಿಲ್ಲ.

ಪಡಗೂರು ಸುತ್ತಾಮುತ್ತಾ ಮುಂಜಾನೆ ಯುವ ರೈತರ ಕಣ್ಣಿಗೆ ಕಾಣಿಸುತ್ತಿದೆ. ಆದ್ರೆ ಅರಣ್ಯ ಇಲಾಖೆ ಕಣ್ಣಿಗೆ ಕಾಣದೆ ಆಟ ಆಡಿಸುತ್ತಿದೆ.

ಕಾಡು ಬಿಟ್ಟು ನಾಡಿಗೆ ಬಂದು ವೆಲ್ ಸೆಟಲ್ ಆಗಿರುವ ಹುಲಿ ದಾಳಿಗೆ  ಪ್ರತಿನಿತ್ಯ ಆತಂಕ ಪಡುತ್ತಿರುವ ರೈತರು, ಮನುಷ್ಯರ ಮೇಲ ಎರಗಿ ಅನಾಹುತ ಸೃಷ್ಟಿಸುವ ಮೊದಲು ಹುಲಿ ಸೆರೆಗೆ ಮುಂದಾಗುವಂತೆ ಒತ್ತಾಯ ಮಾಡಿದ್ದಾರೆ.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್

0

ಬೆಂಗಳೂರು;- ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಇನ್ನು ಮುಂದೆ ನಿಗದಿತ ಅವಧಿಯೊಳಗೆ ಯೋಜನೆಯ ಹಣ ಖಾತೆಗೆ ಜಮಾ ಆಗಲಿದೆ.

ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ಮಾಸಿಕವಾಗಿ ಪಾವತಿ ಮಾಡುವ ಗೃಹ ಲಕ್ಷ್ಮಿ, ಅನ್ನ ಭಾಗ್ಯ ಮತ್ತ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಹಂತ ಹಂತವಾಗಿ ಪಾವತಿ ಮಾಡಲು ವೇಳಾಪಟ್ಟಿ ಸಿದ್ದ ಪಡಿಸಿ ನಿಗದಿತ ಸಮಯಕ್ಕೆ ತಲುಪಿಸುವ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.

ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಪಾವತಿ ಮಾಡುವ ಸಲುವಾಗಿ ಡಿ.ಡಿ.ಓ, ಡಿ.ಬಿ.ಟಿ ಸಲ್ ಮತ್ತು ಖಜಾನೆಗಳಿಗೆ ಯಾವುದೇ ರೀತಿಯ ತಾಂತ್ರಿಕ /ಆಡಳಿತಾತ್ಮಕ ಸಮಸ್ಯೆ ಎದುರಾದರೆ ಬಗೆಹರಿಸಲು ಸೂಚಿಸಲಾಗಿದೆ.ಅದೇ ರೀತಿ, ಪ್ರತಿ ಹಂತದಲ್ಲೂ ಸಮನ್ವಯೀಕರಣ ಸುಲಭಗೊಳಿಸಲು ತಿಳಿಸಲಾಗಿದೆ.

ಈ ಕುರಿತು ಖಜಾನೆ ಆಯುಕ್ತರ ಪ್ರಸ್ತಾವನೆ ಮಾಡಲಾಗಿದ್ದು, ಸರ್ಕಾರದ ಎಲ್ಲಾ ಇಲಾಖೆಗಳ ಫಲಾನುಭವಿ ಆಧಾರಿತ ಕಲ್ಯಾಣ ಹಾಗೂ ಸಬ್ಸಿಡಿ ಸ್ಟ್ರೀಂಗಳ ಪಾವತಿಗಳನ್ನು ನೇರ ವರ್ಗಾವಣೆ ಮಾಡುವ ವ್ಯವಸ್ಥೆ ಮೂಲಕ ಫಲಾನುಭವಿಗಳ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡಲಾಗುತ್ತಿದೆ.

ಈ ನಿಟ್ಟಿನಲ್ಲಿ ಡಿ.ಬಿ.ಟಿ ಮತ್ತು ಖಜಾನೆ-2 ರ ಮೂಲಕ ಹಣವನ್ನು ನೇರವಾಗಿ ವರ್ಗಾವಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಪ್ರತಿಮಾ ಕೊಲೆ ಪ್ರಕರಣ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು..?

0

ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಪ್ರತಿಮಾ ಕೊಲೆ ಪ್ರಕರಣದಲ್ಲಿ ಪೊಲೀಸರು ಆಕ್ಟೀವ್ ಆಗಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.

ಅದರ ಆಧಾರದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮಾಡಿದ ಬಳಿಕ ಕೊಲೆಗೆ ಕಾರಣ ಏನು?. ಹಿಂದೆ ಮುಂದೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

ಈಗಲೇ ಏನು ಹೇಳೋಕೆ ಆಗೋದಿಲ್ಲ. ಘಟನೆ ಸಂಬಂಧ ಸಿಕ್ಕಿರೋ ಲೀಡ್ ಪ್ರಕಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ಬಾರಿ ಆರೋಪಿಯನ್ನ ಬಂಧನ ಮಾಡಿದ ಮೇಲೆ ಎಲ್ಲವೂ ಹೊರಗೆ ಬರಲಿದೆ ಅಂತ ತಿಳಿಸಿದರು.

ಧಾರಾಕಾರ ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ: ದಂಪತಿ ಪ್ರಾಣಾಪಾಯದಿಂದ ಪಾರು

0

ರಿಪ್ಪನ್‌ಪೇಟೆ : ತಡರಾತ್ರಿ ಎಡೆಬಿಡದೆ ಸುರಿದ ಧಾರಾಕಾರ ಮಳೆಗೆ ಮನೆಯೊಂದರ ಮೇಲೆ ಬೃಹತ್ ಆಕಾರದ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡು ದಂಪತಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಕೋಡೂರು ಗ್ರಾಪಂ ವ್ಯಾಪ್ತಿಯ ಹೆಚ್. ಕುನ್ನೂರು ಗ್ರಾಮದಲ್ಲಿ ನಡೆದಿದೆ.

ನಿನ್ನೆ ರಾತ್ರಿ 8:00 ಗಂಟೆಯಿಂದ ಸುರಿದ ಬಿರುಗಾಳಿ ಸಹಿತ ಗುಡುಗು ಸಿಡಿಲಬ್ಬರದ ಧಾರಾಕಾರ ಮಳೆಗೆ ಹೆಚ್. ಕುನ್ನೂರು ಗ್ರಾಮದ ತಿಮ್ಮಪ್ಪ ಎಂಬುವವರ ಮನೆ ಮೇಲೆ ರಾತ್ರಿ 11 ರ ಸುಮಾರಿಗೆ ಮನೆ ಪಕ್ಕದಲ್ಲಿದ್ದ ಬೃಹತ್ ಆಕಾರದ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದ್ದು ಈ ಘಟನೆಯಲ್ಲಿ ಆಶಾ ಕಾರ್ಯಕರ್ತೆ ವಿನೂತ, ತಿಮ್ಮಪ್ಪ ದಂಪತಿಗಳು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಯಲ್ಲಿ ಮನೆಯಲ್ಲಿದ್ದ ಟಿವಿ ಸೇರಿದಂತೆ ದವಸ, ಧಾನ್ಯಗಳು, ಆಹಾರ ಪದಾರ್ಥಗಳು ಸೇರಿದಂತೆ ಇನ್ನಿತರ ವಸ್ತುಗಳು ನೀರುಪಾಲಾಗಿದ್ದು ಮನೆಗೆ ಹಾಕಿದ್ದ ಶೀಟ್, ಹೆಂಚುಗಳು ಸೇರಿದಂತೆ ಭಾಗಶಃ ಮನೆ ಜಖಂಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಕೋಡೂರು ಗ್ರಾಪಂ ಅಧ್ಯಕ್ಷ ಉಮೇಶ್, ಸದಸ್ಯ ಮಂಜಪ್ಪ, ಪಿಡಿಒ ನಾಗರಾಜ್, ತಾಪಂ ಮಾಜಿ ಸದಸ್ಯ ಚಂದ್ರಮೌಳಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರದ ಕೊಡಿಸುವ ಭರವಸೆ ನೀಡಿದ್ದಾರೆ.

error: Content is protected !!