ವಿಜಯಸಾಕ್ಷಿ ಸುದ್ದಿ, ಗದಗ: ಸಾರಿಗೆ ನೌಕರರ ಸತತ 6 ದಿನದ ಮುಷ್ಕರದ ನಡುವೆ ಇಂದು ಗದಗನಿಂದ ಕೆಲ ಬಸ್ ಗಳ ಸಂಚಾರ ಆರಂಭವಾಗಿದೆ. ಗದಗನ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣದಿಂದ 20 ಬಸ್ ಗಳ ಸಂಚಾರ ಆರಂಭಗೊಂಡಿದೆ.
ಗದಗ- ಹುಬ್ಬಳ್ಳಿ ಹಾಗೂ ಗದಗ- ಮುಂಡರಗಿ ಮಾರ್ಗವಾಗಿ ಮಾತ್ರ ಈ ಬಸ್ ಗಳು ಸಂಚಾರ ಆರಂಭಿಸಿದ್ದು, ಗ್ರಾಮೀಣ ಭಾಗಕ್ಕಿನ್ನೂ ಬಸ್ ವ್ಯವಸ್ಥೆ ಆಗಿಲ್ಲ. ಹೀಗಾಗಿ ಗದಗ ಜಿಲ್ಲಾ ಕೇಂದ್ರದಿಂದ ಗ್ರಾಮೀಣ ಭಾಗಕ್ಕೆ ಹೋಗಲು ಪ್ರಯಾಣಿಕರು ಪರದಾಡುತ್ತಿದ್ದಾರೆ.
ಅನಿವಾರ್ಯವಾಗಿ ಖಾಸಗಿ ವಾಹನಗಳ ಮೂಲಕವೇ ಪ್ರಯಾಣ ಮಾಡುತ್ತಿದ್ದು, ಗ್ರಾಮೀಣ ಭಾಗಕ್ಕೂ ಸಹ ಬಸ್ ಸಂಚಾರ ಆರಂಭವಾಗಲಿ ಎಂದು ಒತ್ತಾಯಿಸುತ್ತಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತನ್ನ ಅಬ್ಬರ ಮುಂದುವರೆಸಿರುವ ಈ ಸಂದರ್ಭದಲ್ಲಿ ಜನ ಮೈಮರೆತು ಹಬ್ಬದ ಶಾಪಿಂಗ್ ಮೂಡ್ ನಲ್ಲಿರುವ ದೃಶ್ಯಗಳು ಕಂಡುಬಂದಿದೆ.
ಯುಗಾದಿ ಹಬ್ಬದ ಸಂಭ್ರಮದಲ್ಲಿ ಜನ ಕೊರೊನಾ ಇರುವುದನ್ನೂ ಮರೆತು, ನಗರದ ಗ್ರೇನ್ ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ಸೇರಿ ತರಕಾರಿ, ಹಣ್ಣು, ಹೂವು ಖರೀದಿ ಮಾಡಿದ್ದಾರೆ. ಹೀಗಾಗಿ ಗ್ರೇನ್ ಮಾರುಕಟ್ಟೆಯಲ್ಲಿ ಜನಜಂಗುಳಿ ಉಂಟಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧಾರಣೆಯನ್ನೂ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ.
ಕೆಲವರು ಮಾಸ್ಕ್ ಹಾಕಿದ್ರೆ ಇನ್ನು ಕೆಲವರು ಮಾಸ್ಕ್ ಹಾಕಬೇಕೆನ್ನುವ ಗೋಜಿಗೆ ಹೋಗದ ದೃಶ್ಯಗಳು ಕಂಡುಬಂತು. ಜಿಲ್ಲಾಡಳಿತ ಕೊರೊನಾ ಕುರಿತು ಜಾಗೃತರಾಗಿರುವಂತೆ ಮನವಿ ಮಾಡಿದ್ರೂ, ಜಿಲ್ಲಾಡಳಿತದ ಮನವಿಗೂ ಜನ್ರು ಡೋಂಟ್ ಕೇರ್ ಎಂದಿದ್ದಾರೆ.
ಮಾರಾಕಾಸ್ತ್ರದಿಂದ ಯುವಕನೊಬ್ಬನನ್ನು ಕೊಲೆ ಮಾಡಿ ಜಮೀನಿನಲ್ಲಿ ಎಸೆದಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಮರಿಯಪ್ಪ ತಳಗೇರಿ (೩೦) ಎಂಬಾತನೇ ಕೊಲೆಯಾದ ಯುವಕನಾಗಿದ್ದು, ಮದ್ಯರಾತ್ರಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಎಸ್.ಪಿ ಯತೀಶ್ ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೀಡಾದ ಯುವಕನಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಕುಟುಂಬ ಕಲಹದಿಂದಾಗಿ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೊಲೆ ಪ್ರಕರಣದಿಂದ ಸೂರಣಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯಾಸ್ಪದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯಲ್ಲಿನ ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಆದೇಶ ಪ್ರತಿತುಂಗಭದ್ರಾ ಎಡದಂಡೆ ನಾಲೆಗೆ ಏಪ್ರಿಲ್ 11 ರಿಂದ ಏಪ್ರಿಲ್ 20 ರವರೆಗೆ ಜನ ಜಾನುವಾರುಗಳಿಗೆ ಕುಡಿಯುವ ಸುಮಾರು 2 ಟಿಎಂಸಿ ನೀರನ್ನು ಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ನೀರು ನಿರ್ವಹಣೆಯ ಉದ್ದೇಶದಿಂದ ನಾಲೆಯ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಕಲುಬುರಗಿ ವಿಭಾಗದ ಪ್ರದೇಶಿಕ ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿನ ತುಂಗಭದ್ರಾ ಎಡದಂಡೆ ನಾಲೆ 0 ಮೈಲ್‍ನಿಂದ 47 ನೇ ಮೈಲ್ ವರೆಗೆ ಎಡ ಮತ್ತು ಬಲ ದಡಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ನಿಷೇಧಾಜ್ಞೆಯನ್ವಯ ತುಂಗಭದ್ರಾ ಎಡದಂಡೆ ನಾಲೆಯ ಮೇಲ್ಕಾಣಿಸಿದ ಪ್ರದೇಶದ 100 ಮೀಟರ್ ಅಂತರದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಓಡಾಡುವಂತಿಲ್ಲ, ಹಾಗೂ ಮಾರಕಾಸ್ತ್ರ ಹಿಡಿದು ಓಡಾಡುವಂತಿಲ್ಲ.
ಈ ಆದೇಶವು ಮದುವೆ ಮತ್ತು ಶವ ಸಂಸ್ಕಾರ ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಸಮೀಪದ ನೀಲಗುಂದ ಗ್ರಾಮದ ದ್ಯಾಮವ್ವನ ದೇವಸ್ಥಾನದ ಮುಂದಿರುವ ಸಾರ್ವಜನಿಕ ಬಯಲು ಜಾಗೆಯಲ್ಲಿ ಇಸ್ಟೀಟು ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಮುಳಗುಂದ ಠಾಣೆಯ ಪೊಲೀಸರು ದಾಳಿ ನಡೆಸಿ, 4,200 ರೂ. ನಗದು ಸೇರಿದಂತೆ ಎಂಟು ಜನರನ್ನು ಬಂಧಸಿ ಬಿಡುಗಡೆ ಮಾಡಿದ್ದಾರೆ.
ಗದಗನ ಹೆಸ್ಕಾಂ ಜಾಗೃತದಳದಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ದಲ್ಲಿದ್ದ ಸಿದ್ದಲಿಂಗಪ್ಪಗೌಡ ಪಾಟೀಲ್ ಅವರು ಡಿವೈಎಸ್ಪಿ ಆಗಿ ಬಡ್ತಿ ಹೊಂದಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯ ಸಿಪಿ(ಸಿವಿಲ್) ವೃಂದದ ಅಧಿಕಾರಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ವೇತನ ಡಿವೈಎಸ್ಪಿ ವೃಂದಕ್ಕೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಧಾರವಾಡ ಜಿಲ್ಲಾ ಸಿಇಎನ್ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ವಿಜಯ ಬಿರಾದರ್ ಅವರಿಗೂ ಡಿವೈಎಸ್ಪಿ ಹುದ್ದೆಗೆ ಬಡ್ತಿ ಆಗಿದೆ. ಇವರಲ್ಲದೇ ಇನ್ನೂ 27 ಜನ ಇನ್ಸ್‌ಪೆಕ್ಟರ್ ಗಳನ್ನು ರಾಜ್ಯ ಸರ್ಕಾರ ಡಿವೈಎಸ್ಪಿ ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಸದ್ಯ ಡಿಜಿ ಹಾಗೂ ಐಜಿಪಿ ಅವರಲ್ಲಿ ವರದಿ ಮಾಡಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.
ಡಿವೈಎಸ್ಪಿಯಾಗಿ ಬಡ್ತಿ ಹೊಂದಿದ ಸಿದ್ದಲಿಂಗಪ್ಪಗೌಡ ಪಾಟೀಲ್ ಹಾಗೂ ವಿಜಯ ಬಿರಾದಾರ ಅವರನ್ನು ಸಿಬ್ಬಂದಿ ವರ್ಗ, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದಿಸಿದ್ದಾರೆ.
ಮಹಿಳೆ ಮನೆ ಅಡವಿಟ್ಟಿದ್ದನ್ನೇ ನೆಪ ಮಾಡಿಕೊಂಡ ಶಹಪೂರ ಪೇಟೆಯ ನಿವಾಸಿಯಾಗಿರುವ ಆರೋಪಿ ನಾಗರಾಜ್ ಅಂಬಸಾ ಪೂಜಾರಿ ಎಂಬ ವ್ಯಕ್ತಿ ಮಹಿಳೆಯೋರ್ವರಿಂದ ಕೊಟ್ಟ ಅಸಲು, ಅಸಲಿನ ಜೊತೆಗೆ ಬಡ್ಡಿ ಹಣ ಪಡೆದರೂ ಬಡ್ಡಿ ಹಣ ನೀಡುವಂತೆ ಮಹಿಳೆಗೆ ನಿತ್ಯ ಕಿರುಕುಳ ನೀಡುತ್ತಿರುವ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಖಾನತೋಟದ ನಿವಾಸಿ ಶಾರದಾ ಶಿವಪ್ಪ ನಾಯಕ ಎಂಬ ಮಹಿಳೆ ತನ್ನ ಮನೆಯನ್ನು ಆರೋಪಿ ನಾಗರಾಜ ಅಂಬಸಾ ಪೂಜಾರಿಗೆ 2008 ಜೂನ್ 23ರಲ್ಲಿ 60 ಸಾವಿರ ರೂ.ಗಳಿಗೆ ಅಡವಿಟ್ಟಿದ್ದಾರೆ. ಅಲ್ಲದೇ, ಆರೋಪಿ ನಾಗರಾಜನಿಗೆ 2010ರಲ್ಲಿ ಕಬ್ಜಾ ರಹಿತ ಖರೀದಿ ಕರಾರು ನೋಂದಣಿ ಮಾಡಿಸಿಕೊಟ್ಟಿದ್ದಾರೆ. ಆದರೆ, ಆರೋಪಿಯು ಮಹಿಳೆ ಮನೆ ನೋಂದಣಿ ಮಾಡಿಕೊಟ್ಟ ಬಳಿಕ ಬಡ್ಡಿ ಹಣ ನೀಡುವಂತೆ ಕಿರುಕುಳ ನೀಡುತ್ತಾ ಬರುತ್ತಿದ್ದಾನೆ.
2013-14 ರವರೆಗಿನ ಅಸಲು, ಬಡ್ಡಿ ಹಣ, ಮೂರು ಜೊತೆ ಬಂಗಾರದ ಕಿವಿಯೋಲೆ ಹಾಗೂ 2,90,000 ರೂ.ಗಳನ್ನು ನಾಗರಾಜ್ ಇನ್ನೂ ಬಡ್ಡಿ ಹಣ ಕೊಡಬೇಕು ಎಂದು ಪೀಡಿಸುತ್ತಿದ್ದಾನೆ. ಅಲ್ಲದೇ, ಮನೆ ನೋಂದಣಿ ರದ್ಧತಿಯ ಬಾಂಡ್ ಪೇಪರ್, ಒಡವೆಗಳನ್ನು ಕೊಡದೇ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ನೊಂದ ಮಹಿಳೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರನೇ ವೇತನ ಆಯೋಗ ಜಾರಿ ಮಾಡುವಂತೆ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಕಳೆದೆರಡು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೇ ಬಸ್ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದಾರೆ.
ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳಿಗೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ, ಕೆಲವು ಕಡೆ ಕೆಲವರಿಗೆ ನೊಟಿಸ್ ಸಹಿತ ನೀಡಿದೆ.
ಈ ಮಧ್ಯೆ ಸಾರಿಗೆ ಸಂಸ್ಥೆಯ ನೌಕರನೊಬ್ಬನಿಗೆ ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾಗುವಂತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಒತ್ತಡ ಹಾಕಿದ್ದಕ್ಕೆ ಮನನೊಂದು ಚಾಲಕ/ನಿರ್ವಾಹಕ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ(ಏ.೮) ಗದಗನಲ್ಲಿ ನಡೆದಿದೆ.
ಜಿಲ್ಲೆಯ ಕದಡಿ ಗ್ರಾಮದ 48 ವರ್ಷದ ವಸಂತ ರಾಮದುರ್ಗ ಎಂಬ ಚಾಲಕ/ ನಿರ್ವಾಹಕ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಗದಗ ಘಟಕ ಸಿಬ್ಬಂದಿ ಜೊತೆಗೆ ಜಿಲ್ಲೆ ಸಾರಿಗೆ ನೌಕರರ ಸಂಘದ ಮುಖ್ಯಸ್ಥರಾಗಿದ್ದು, ನಗರದ ಹುಡ್ಕೋ ಕಾಲನಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ.
ಮುಷ್ಕರ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ವಸಂತ ಅವರಿಗೆ ಹಿರಿಯ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಿಂದ ಮೇಲೆ ಒತ್ತಡ ಹೇರಿದ್ದಾರೆ. ಇಷ್ಟಕ್ಕೆ ಮನನೊಂದ ಸಿಬ್ಬಂದಿ ಡಿಪೋ ಬಳಿಯೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ವಸಂತ ಸದ್ಯ ಮಾತನಾಡದ ಸ್ಥಿತಿಯಲ್ಲಿರುವ ಅವರು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಮುಷ್ಕರದ ಎರಡನೇ ದಿನವಾದ ಗುರುವಾರದಂದು ಕೆಲವು ಬಸ್’ಗಳು ಸಂಚಾರ ನಡೆಸಿವೆ. ಇದರಿಂದ ಆರನೇ ವೇತನ ಆಯೋಗ ಜಾರಿಯಾಗುವುದಿಲ್ಲ. ನಮ್ಮ ಬೇಡಿಕೆಗಳು ಇಡೇರುವುದಿಲ್ಲ. ಪುನಃ ಸಾಲದ ಸುಳಿಗೆ ಸಿಲುಕುವುದು ತಪ್ಪುವುದಿಲ್ಲ. ಹೀಗಾಗಿ ಹೋರಾಟ ಮಾಡಿಯೂ ವ್ಯರ್ಥವಾಯಿತಲ್ಲ ಅಂತಾ ಮನನೊಂದಿದ್ದಾರೆ ಎಂದು ವಸಂತ ಅವರ ಮಗ ಬಸವರಾಜ್ ತಿಳಿಸಿದ್ದಾರೆ.
ಇನ್ನು ಜೀವನದಲ್ಲಿ ಜಿಗುಪ್ಸೆಗೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಸಹದ್ಯೋಗಿಗಳಿಗೆ ಹೇಳಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ.
ವಿಜಯಸಾಕ್ಷಿ ಸುದ್ದಿ ಗದಗ
ಯುಗಾದಿ ಹಬ್ಬದ ಅಂಗವಾಗಿ ನೈರುತ್ಯ ರೈಲ್ವೆ ವಿಭಾಗ ಒಟ್ಟು 18 ವಿಶೇಷ ರೈಲ್ವೆ ಗಳ ಓಡಾಟವನ್ನು ಪ್ರಕಟಿಸಿದೆ.
ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದಾಗಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಗದಗ
ಅಜಾಗರೂಕತೆಯಿಂದ ಮೊಬೈಲ್ ಫೋನ್ ಗಳನ್ನು ಕಳೆದುಕೊಂಡಿದ್ದವರಿಗೆ, ಗದಗ ನಗರ ಠಾಣೆ ಪೊಲೀಸರು ಅವರ ಫೋನ್ ಗಳನ್ನು ಹುಡುಕಿ ಮರಳಿಸಿದ್ದಾರೆ.
ಗದಗ ಶಹರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಅಂದಾಜು 3 ಲಕ್ಷ 25 ಸಾವಿರ ಮೌಲ್ಯದ, ಒಟ್ಟು 23 ವಿವಿಧ ಕಂಪನಿಗಳ ಮೊಬೈಲ್ ಗಳನ್ನು ಶ್ರಮ ವಹಿಸಿ ಪತ್ತೆ ಹಚ್ಚಿ ಮಾಲಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರದಿದ್ದಾರೆ.
ತಮ್ಮ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಮೊಬೈಲ್ ಕಳವು ಮತ್ತು ಕಳೆದುಕೊಂಡಿದ್ದ ಪ್ರಕರಣಗಳ ಬೆನ್ನತ್ತಿದ ಪೊಲೀಸರು, ಇಂದು ಅವುಗಳ ಮಾಲೀಕರಿಗೆ ಕಳೆದುಕೊಂಡಿದ್ದ ಮೊಬೈಲ್ ಗಳನ್ನು ಮರಳಿಸಿದ್ದಾರೆ.
ಗದಗ ಉಪ-ವಿಭಾಗದ ಡಿವೈಎಸ್ಪಿ ಶಿವಾನಂದ ಅವರ ನೇತೃತ್ವದಲ್ಲಿ, ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿ ವಿ ಸಾಲಿಮಠ ಹಾಗೂ ಅಪರಾಧ ವಿಭಾಗದ ಪಿಎಸ್ ಐ ಶ್ರೀಮತಿ ಜಿ ಟಿ ಜಕ್ಕಲಿ ಇವರ ಮಾರ್ಗದರ್ಶನ ದಲ್ಲಿ ಸಿಬ್ಬಂದಿಗಳಾದ ವಿ ಎಸ್ ಶೆಟ್ಟಣ್ಣವರ, ಬಿ ಜಿ ಹೊರಕೇರಿ, ಎಸ್ ಎ ಗುಡ್ಡಿಮಠ, ಪಿ ಎಸ್ ಕಲ್ಲೂರ, ಹನುಮಂತ ಯಡಿಯಾಪೂರ, ಐ ಟಿ ರವಳೋಜಿ, ಡಿಪಿಓ ಗದಗ ಎಆರ್ ಎಸ್ಐ ಗುರು ಬೂದಿಹಾಳ ಇವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಗರ ಠಾಣೆ ಪೊಲೀಸರ ಈ ಕಾರ್ಯಕ್ಕೆ ಮೊಬೈಲ್ ಗಳನ್ನು ಮರಳಿ ಪಡೆದವರೂ ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.