Home Blog Page 3186

ರೈತರಿಗೆ ಜಮೀನು ಬಾಡಿಗೆ ನೀಡಲು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ಧರಣಿ

ವಿಜಯಸಾಕ್ಷಿ ಸುದ್ದಿ, ರಾಯಚೂರು

ಜಿಲ್ಲೆಯ ಸಿಂಧನೂರು ರೈತರಿಗೆ ಜಮೀನು ಬಾಡಿಗೆ ನೀಡಲು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಕುರಿ ಮತ್ತು ಜಾನುವಾರಗಳ ಸಂತೆ ಬಳಕೆದಾರರ ವೇದಿಕೆ ವತಿಯಿಂದ ತಹಸೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಆರಂಭಿಸಿಲಾಗಿದೆ.

ರೈತರು ತಮ್ಮ ಅಡಚಣೆ ಸಲುವಾಗಿ ತಾವು ಸಾಕಿ ಬೆಳೆಸಿದ ಜಾನುವಾರುಗಳನ್ನು ಕೃಷಿಕ ಇತರ ರೈತರಿಗೆ ಮಾರಾಟ ಮಾಡಿ ತಾವು ಮಾಡಿರುವ ಸಾಲಗಳನ್ನು ಕೃಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ ಇತರ ಸಾಲಗಳನ್ನು ತೀರಿಸಲು ಸಿಂಧನೂರು ನಗರದಲ್ಲಿ ಎಪಿಎಂಸಿಯವರು ಸರ್ವೆ ನಂಬರ್ 995/p8 ಎಕರೆ 3.ಗುಂಟೆ 20 ಜಾಗವನ್ನು ಬಾಡಿಗೆ ರೂಪದಲ್ಲಿ ತೆಗೆದುಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಧರಣಿ ಆರಂಭಿಸಲಾಗಿದೆ.

ಈಗಾಗಲೇ 2008ರಿಂದ 2018ವರೆಗೆ ಎಪಿಎಂಸಿ ಬಾಡಿಗೆ ಕೊಡುತ್ತಾ ಬಂದಿದ್ದು ಇದನ್ನು ಮುಂದುವರಿಸಿಕೊಂಡು ಹೋಗಬೇಕು.

ಯಾವುದೇ ಕಾರಣಕ್ಕೂ ಪ್ರಭಾವಿಗಳ ಪ್ರಭಾವಕ್ಕೆ ಮಣಿದು ಬೇರೆಯವರಿಗೆ ಬಿಟ್ಟುಕೊಡಬಾರದು, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಇದೇ ಜಾಗದಲ್ಲಿ ಜಾನುವಾರುಗಳನ್ನು ಮಾರಲು ಅನುಕೂಲ ಮಾಡಿಕೊಡಬೇಕು.

ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ದಂಡಾಧಿಕಾರಿಗಳು ಮಧ್ಯಸ್ಥಿಕೆಯನ್ನು ವಹಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಹಸೀಲ್ದಾರ್ ಕಾರ್ಯಾಲಯದ ಮುಂದೆ ನೂರಾರು ರೈತರು ಧರಣಿ ಕುಳಿತಿದ್ದಾರೆ.

D H ಪೂಜಾರ್, ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮೋಯಿನ್ ಪಾಶಾ, ಕು.ಜಾ.ಸಂ ಬ.ವೆ ತಾಲ್ಲೂಕು ಅಧ್ಯಕ್ಷ, ಸಿಂಧನೂರು ಚಿಟ್ಟಿಬಾಬು, ಬಿ ಎನ್ ಯರದಿಹಾಳ, ಮುಸ್ತಫಾ ಅಮೀನ್ ಸಾಬ್ ನದಾಫ್ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ವರದಿ.ಡಾ.ಅಬ್ದುಲ್ ರಜಾಕ್

ಹೆತ್ತ ಮಗುವನ್ನೇ ಕೊಂದ ಪಾಪಿಗೆ ಮರಣದಂಡನೆ!

ವಿಜಯಸಾಕ್ಷಿ ಸುದ್ದಿ, ಗದಗ: ಹೆತ್ತ ಮಗುವನ್ನೇ ಕೊಂದ ಪಾಪಿ ತಂದೆಗೆ ಮರಣದಂಡನೆ ಶಿಕ್ಷೆ ವಿಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜಶೇಖರ ವಿ ಪಾಟೀಲರು ಈ ಆದೇಶ ನೀಡಿದ್ದಾರೆ.

ಅಪರಾಧಿ ಪ್ರಶಾಂತಗೌಡ ಪಾಟೀಲ್ ನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಈತ ತನ್ನ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದು ಸುಟ್ಟು ಹಾಕಿ ವಿಕೃತಿ ತೋರಿದ್ದ. ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರ ಗ್ರಾಮದ ಪ್ರಶಾಂತಗೌಡ ಪಾಟೀಲ್, ಮಹಿಳೆಯೊಬ್ಬಳನ್ನು ಪ್ರೀತಿ ಮಾಡಿ ಮದುವೆಯಾಗಿ ದೋಖಾ ಮಾಡಿದ್ದ. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿದ್ದ ಈ ಮಗುವನ್ನು ಕೊಲೆ ಮಾಡಿದ್ದ.

ಈತನಿಂದ ನೊಂದ ಮಹಿಳೆ ಜೀವನಾಂಶ ಬೇಡಿ‌ ಕೋರ್ಟ್ ಮೊರೆ ಹೋಗಿದ್ದ ಕಾರಣದಿಂದ ಕುಪಿತಗೊಂಡ ಪ್ರಶಾಂತಗೌಡ ಪಾಟೀಲ್ ತನ್ನ ಒಂದೂವರೆ ವರ್ಷದ ಮಗುವನ್ನು ಕಿಡ್ನಾಪ್ ಮಾಡಿ ಕೊಂದು ಹಾಕಿದ್ದ. ಪ್ರಶಾಂತಗೌಡ ಪಾಟೀಲ್ ಏಪ್ರಿಲ್ 6, 2015 ರಂದು ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡದಲ್ಲಿ ಕೊಲೆ ಮಾಡಿದ್ದ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಮೂವರು ಸದಸ್ಯರ ಆಯ್ಕೆ

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಮಹಿಳೆಯರಿಗಾಗಿ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರೆಡ್ಡಿ ಚಾಲನೆ ನೀಡಿದರು.

ರತ್ನವ್ವ ಸರ್ವಮಾನೇದ,
ಬಸಮ್ಮ ಯರಗಟ್ಟಿ ಹಾಗೂ ವಿಜಯಲಕ್ಷ್ಮಿ ಕಳಸದ ಇವರನ್ನು ಮಹಿಳಾ ಕಾಯಕೋತ್ಸವದ ಅಭಿಯಾನದ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಈ ಮೂವರು ಸದಸ್ಯರು, ಗ್ರಾಮದಲ್ಲಿ ಸಮನ್ವಯತೆ ಕಾಪಾಡುವುದು, ಮಹಿಳೆಯರಿಗೆ ಕೂಲಿ ಕೆಲಸ, ಪುರುಷ ಹಾಗೂ ಮಹಿಳೆಯರಿಗೆ ಸಮಾನ ಕೂಲಿ ಸೇರಿದಂತೆ ಗ್ರಾಮದ ಸರ್ವೇ ನಡೆಸಲು ಸಭೆಯಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಬಾಪುಗೌಡ ಹಿರೇಗೌಡ್ರ, ಶರಣಪ್ಪ ಹಳೇಮನಿ, ಲಕ್ಮಣ ಕಂಬಳಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈನಾಜ್ ಮುಜಾವರ, ಕಾರ್ಯದರ್ಶಿ ಕೆಂಚಪ್ಪ ಮಾದರ, ಸಿಬ್ಬಂದಿ ಶಿವು ಯಲಿಗಾರ ಇದ್ದರು.

ಮೀಸಲಾತಿ ಕಲ್ಪಿಸಿ ಸಮಾಜಕ್ಕೆ ಶಕ್ತಿ ನೀಡಿ: ಮೋಹನ್ ಮಾಳಶೆಟ್ಟಿ

ಫೆ.21ರಂದು ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾವೇಶ:
ಜಿಲ್ಲೆಯಿಂದ ಸುಮಾರು 30,000 ಜನರು ಭಾಗಿ

ವಿಜಯಸಾಕ್ಷಿ ಸುದ್ದಿ, ಗದಗ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಈಗಾಗಲೇ ಪಾದಯಾತ್ರೆ ನಡೆಯುತ್ತಿದ್ದು, ಫೆ.21ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಜಿಲ್ಲೆಯಿಂದ ಸುಮಾರು 30 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೂಡಲಸಂಗಮದಿಂದ ಬಸವಜಯ ಮೃತ್ಯುಂಜಯ ಶ್ರೀಗಳು ಪಾದಯಾತ್ರೆ ಹಮ್ಮಿಕೊಂಡಿದ್ದು, ಅದಕ್ಕೆ ಹರಿಹರ ಗುರುಪೀಠದ ವಚನಾನಂದ ಶ್ರೀಗಳು ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಪಾದಯಾತ್ರೆ ಬೆಂಗಳೂರು ಸಮೀಪಿಸಿದ್ದು, ಫೆ.21 ರಂದು 2ಎ ಮೀಸಲಾತಿ ಕಲ್ಪಿಸಿ ಪಂಚಮಸಾಲಿ ಸಮಾಜಕ್ಕೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಶಕ್ತಿ ತುಂಬುವಂತೆ ಆಗ್ರಹಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಉಭಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾವೇಶಕ್ಕೆ ರಾಜ್ಯಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಪಂಚಮಸಾಲಿ ಸಮಾಜದ ಜನರು ಆಗಮಿಸಲಿದ್ದು, ಜಿಲ್ಲೆಯಿಂದ ಜನರನ್ನು ಕರೆದುಕೊಂಡು ಹೋಗಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದಿಂದ ಬೆಟಗೇರಿಯಿಂದ 5 ಬಸ್, 25 ಕ್ರಶರ್‌ಗಳ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಡ, ಶಿರಹಟ್ಟಿ, ರೋಣ ಸೇರಿದಂತೆ ವಿವಿಧ ಭಾಗಗಳಿಂದ ಜನರು ಸಮಾವೇಶಕ್ಕೆ ಹೋಗಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮೋಹನ್ ಮಾಳಶೆಟ್ಟಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅನೀಲ್ ಪಾಟೀಲ್, ಸಿದ್ದು ಪಲ್ಲೇದ, ಅಯ್ಯಪ್ಪ ಅಂಗಡಿ, ಮಲ್ಲಿಕಾರ್ಜುನ ಹಿರೇಕೊಪ್ಪ, ಮಹೇಶ್, ಶಿವನಗೌಡ ಇದ್ದರು.

ಭಾವೈಕ್ಯತೆ ದಿನವೆಂದು ಆಚರಿಸಿ, ಭವನ ನಿರ್ಮಿಸಿ: ಮಲ್ಲಿಕಾರ್ಜುನ ಐಲಿ ಆಗ್ರಹ

ಫೆ.21ರಂದು ಲಿಂ.ಡಾ.ತೋಂಟದ ಸಿದ್ಧಲಿಂಗಶ್ರೀಗಳ ಜನ್ಮದಿನ
ಅಂದು ಬಾವೈಕ್ಯತೆ ಯಾತ್ರೆ, ಹಲವು ಪುಸ್ತಕಗಳ ಬಿಡುಗಡೆ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಭಾವೈಕ್ಯತೆಗಾಗಿ ಸಲ್ಲಿಸಿದ ಸೇವೆ ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಹಲವು ಪ್ರಶಸ್ತಿಗಳು ದೊರೆತಿದ್ದು, ಶ್ರೀಗಳ ಹೆಸರಿನಲ್ಲಿ ಫೆ.21ರಂದು ರಾಜ್ಯ ಸರಕಾರ ಭಾವೈಕ್ಯತೆ ದಿನವೆಂದು ಆಚರಿಸಬೇಕು ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಒತ್ತಾಯಿಸಿದರು.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ಪ್ರತಿವರ್ಷ ಡಾ.ತೋಂಟದ ಸ್ವಾಮೀಜಿಗಳ ಹೆಸರಿನಲ್ಲಿ ಭಾವೈಕ್ಯತೆ ಪ್ರಶಸ್ತಿ ನೀಡಬೇಕು. ಅಲ್ಲದೇ, ನಗರದಲ್ಲಿ ಭಾವೈಕ್ಯತೆ ಭವನ ನಿರ್ಮಿಸಬೇಕೆಂದು ಆಗ್ರಹಿಸಿದ ಅವರು, ಶ್ರೀಗಳ ಆಶಯದಂತೆ ಭವನ ಕಟ್ಟಲು ನಗರದ ಹೃದಯ ಭಾಗದಲ್ಲಿರುವ ಜಾತ್ರೆಯ ಬಯಲು ಜಾಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಪುಸ್ತಕ ಬಿಡುಗಡೆ ಸಮಾರಂಭದ ಸಾನಿಧ್ಯವನ್ನು ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಅದರಂತೆ ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಾನಂದಪ್ರಭು, ಶಿರೋಳದ ಗುರುಬಸವ, ಭೈರನಟ್ಟಿಯ ಶಾಂತಲಿಂಗ, ಸಂಡೂರಿನ ಪ್ರಭು, ಅರಸಿಕೆರೆಯ ಶಾಂತಲಿಂಗ, ಆಳಂದದ ಕೋರಣೇಶ್ವರ, ಯಶವಂತನಗರದ ಗಂಗಾಧರ ಮಹಾಸ್ವಾಮಿಗಳು ಹಾಗೂ ತೋಂಟದಾರ್ಯ ಮಠದ ಮಹಾಂತದೇವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಈ ಸಂದರ್ಭದಲ್ಲಿ ಲಿಂ.ಡಾ.ತೋಂಟದ ಶ್ರೀಗಳ ಕುರಿತು ಡಾ.ಜಗದೀಶ ಕೊಪ್ಪ ಹಾಗೂ ಪ್ರೊ.ಶಶಿಧರ ತೋಡಕರ ಸಂಪಾದಿಸಿದ ’ಸಮಾಜಮುಖಿ’,
ಪ್ರೊ.ಮಲ್ಲಿಕಾರ್ಜುನ ಹುಲಗಬಾಳಿ ರಚಿಸಿದ ‘ಸನ್ನಿಧಾನ’, ವೀರನಗೌಡ ಮರಿಗೌಡರ ರಚಿಸಿದ ‘ವಿಶ್ವ ಮಾನವ’, ಜಿ.ವಿ ಹಿರೇಮಠ ರಚಿಸಿದ ‘ಡಂಬಳದ ತೋಂಟದ ಅರ್ಧನಾರೀಶ್ವರ ಶಿವಯೋಗಿಗಳು’ ಎಂಬ ಕೃತಿಗಳನ್ನು ನಿವೃತ್ತ ಗೃಹ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಬಿಡುಗಡೆಗೊಳಿಸುವರು ಎಂದು ಮಲ್ಲಿಕಾರ್ಜುನ ಐಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ದಾನಯ್ಯ ಗಣಾಚಾರಿ, ಚಂದ್ರು ಚವ್ಹಾಣ, ಗಂಗಾಧರ ಹಿರೇಮಠ, ಕೊಟ್ರೇಶ ಮೆಣಸಿನಕಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫೆ.21ರಂದು ಭಾವೈಕ್ಯತೆ ಯಾತ್ರೆ
ತ್ರಿವಿಧ ದಾಸೋಹಿ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 72ನೇ ಜಯಂತಿ ಅಂಗವಾಗಿ ಭಾವೈಕ್ಯತಾ ದಿನಾಚರಣೆ ಹಾಗೂ ಶ್ರೀಗಳ ಕುರಿತ ಗ್ರಂಥಗಳ ಬಿಡುಗಡೆ ಸಮಾರಂಭವು ಫೆ.21 ರಂದು ಭಾನುವಾರ ಬೆ.11 ಗಂಟೆಗೆ ನಗರದ ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಜರುಗಲಿದೆ. ಇದರ ಅಂಗವಾಗಿ ಅಂದು ಬೆ. 9 ಗಂಟೆಗೆ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದವರೆಗೆ ಭಾವೈಕ್ಯತಾ ಯಾತ್ರೆ ನಡೆಯಲಿದೆ ಎಂದು ಮಲ್ಲಿಕಾರ್ಜುನ ಐಲಿ ಮಾಹಿತಿ ನೀಡಿದರು.

17ನೇ ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಕೂಟ: ಸೈಕಲ್ ಜಾಥಾಗೆ ಚಾಲನೆ

ವಿಜಯಸಾಕ್ಷಿ ಸುದ್ದಿ, ಗದಗ

17ನೇ ರಾಷ್ಟ್ರೀಯ ಸಿನಿಯರ್, ಜ್ಯೂನಿಯರ್ ಹಾಗೂ ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಕ್ರೀಡಾಕೂಟವು ಇಂದಿನಿಂದ ಫೆ.೨೧ ರವರೆಗೆ ಗದಗ ತಾಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಇಂದು ನಗರದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೈಕಲ್ ಜಾಥಾಗೆ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರು ಸೈಕಲ್ ಜಾಥಾಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಸೈಕಲ್ ಜಾಥಾದಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಡಿಎಫ್ಒ ಸೂರ್ಯಸೇನ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಬಿ.ವಿಶ್ವನಾಥ್, ಸೈಕ್ಲಿಂಗ್ ತರಬೇತುದಾರ ಅನಂತ ದೇಸಾಯಿ ಸೇರಿದಂತೆ ನೂರಾರು ಸೈಕ್ಲಿಸ್ಟ್ ಗಳು ಭಾಗಿಯಾಗಿದ್ದರು.

ಜಿಲ್ಲಾ ಕ್ರೀಡಾಂಗಣದಿಂದ ಅಸುಂಡಿ ಗ್ರಾಮದ ಕುವೆಂಪು ಶಾಲೆಯವರೆಗೆ ಸೈಕಲ್ ಜಾಥಾ ನಡೆಯಿತು.

ಕಾರ್ ಲಾರಿ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಇಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ
ಲಾರಿ ಕಾರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮೂವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಹುಲಕೋಟಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಪ್ರೇಮ ಈಶ್ವರಗೌಡ ಪಾಟೀಲ್(55) ಹಾಗೂ ಕಾರ್ ಚಾಲಕ ಅನ್ವರ್ ಎಂದು ತಿಳಿದುಬಂದಿದೆ. ಈಶ್ವರಗೌಡ ರುದ್ರಗೌಡ ಪಾಟೀಲ್, ಶಿವಾಬಾಯಿ ಮೇಲಗಿರಿಗೌಡ ಪಾಟೀಲ್, ಮಹಾರಾಜ ಮೇಲಗಿರಿಗೌಡ ಪಾಟೀಲ್ ಎಂದು ಗಾಯಾಳುಗಳಾಗಿದ್ದು , ಇವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕೊತ್ಸೆ ನೀಡಲಾಗುತ್ತಿದೆ.
ಮೂಲತಃ ರೋಣ ತಾಲೂಕಿನ ಮಾಳವಾಡ ಗ್ರಾಮದವರಾದ ಇವರು ಹಲವು ವರ್ಷಗಳಿಂದ ಧಾರವಾಡದಲ್ಲಿ ನೆಲೆಸಿದ್ದರು. ಇಂದು ಸ್ವಗ್ರಾಮ ಮಾಳವಾಡದಲ್ಲಿ ತಮ್ಮ ಜಮೀನಿಗೆ ಭೇಟಿ ನೀಡಿ ವಾಪಾಸು ತೆರಳುವಾಗ, ಹುಲಕೋಟಿ ಗ್ರಾಮದ ಬಳಿಯಿರುವ ರೂರಲ್ ಇಂಜಿನಿಯರಿಂಗ್ ಕಾಲೇಜು ಸಮೀಪ ಈ ದುರ್ಘಟನೆ ನಡೆದಿದೆ. ಗದಗ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ: ಗಂಗಾವತಿ ರೈತರ ವಿನೂತನ ಆವಿಷ್ಕಾರ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳುತ್ತಿದ್ದು ಕೂಲಿಕಾರರ ಕೊರತೆಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ಭಾಗದಲ್ಲಿ ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆಯ ಮೂಲಕ ಶೇ.50 ರಷ್ಟು ಖರ್ಚು ಉಳಿತಾಯ ಮಾಡಲಾಗುತ್ತಿದೆ.
ಒಂದು ಎಕರೆ ಭತ್ತದ
ಗದ್ದೆಗೆ ಕ್ರಿಮಿನಾಶಕ ಸಿಂಪರಣೆಗೆ ನಾಲ್ಕು ಕೂಲಿ ಕಾರ್ಮಿಕರು ಬೇಕಾಗುತ್ತದೆ. ಸಹಜವಾಗಿ ಒಂದು ಲೀಟರ್ ಕ್ರಿಮಿನಾಶಕ ಒಂದು ಎಕರೆಗೆ ಸಿಂಪರಣೆ ಮಾಡಲಾಗುತ್ತದೆ.‌ ಆದರೆ ಡ್ರೋಣ್ ಮೂಲಕ ಒಂದು ಲೀಟರ್ ನಲ್ಲಿ ಎರಡು ಎಕರೆ ಸಿಂಪರಣೆ ಸಾಧ್ಯವಿದೆ‌. ಇದರಿಂದ ಹಣ, ಸಮಯ, ಮಾನವ ಸಂಪನ್ಮೂಲ ಉಳಿಸಲು ಸಾಧ್ಯವಿದೆ.
ಈಗಾಗಲೇ ತಮಿಳುನಾಡು ಆಂಧ್ರ ಪ್ರದೇಶ ರಾಜ್ಯದ ರೈತರು ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದ್ದಾರೆ. ಡ್ರೋಣ್ ನಲ್ಲಿ 11 ಲೀಟರ್ ಕ್ರಿಮಿನಾಶಕ ಹಾಕಿ ಮೊದಲು ಜಿಪಿಎಸ್ ಮಾಡಿ ರಿಮೋಟ್ ಮೂಲಕ ಚಾಲನೆ ಮಾಡುತ್ತ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತದೆ. ಒಂದು ಎಕರೆಗೆ 600 ರೂ.ಬಾಡಿಗೆ ಇದ್ದು 7 ನಿಮಿಷಗಳಲ್ಲಿ ಒಂದು ಎಕರೆ ಸಿಂಪರಣೆ ಮಾಡಬಹುದಾಗಿದೆ. ಇದರಿಂದ ಹಣ ಮತ್ತು ಸಮಯ ಉಳಿತಾಯವಾಗುತ್ತದೆ.
ರೈತರಿಗೆ ಉಪಯುಕ್ತ: ಡ್ರೋಣ್ ಮೂಲಕ ಭತ್ತ ಸೇರಿ ವಿವಿಧ ಬೆಳೆಗಳಿಗೆ ಕ್ರಿಮಿನಾಶಕ ಸಿಂಪರಣೆ ವೆಚ್ಚದಾಯಕವಾಗಿದ್ದು ಬೇರೆ ರಾಜ್ಯಗಳಲ್ಲಿ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತಿದೆ. ಈ ಬಾರಿ ಬಾಡಿಗೆ ಆಧಾರದಲ್ಲಿ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತಿದೆ ಇದರಿಂದ ಕೂಲಿ ಆಳಿನ ಕೊರತೆಯಿಂದ ಬೇಸತ್ತ ರೈತರಿಗೆ ಹಣ ಸಮಯ‌ ಉಳಿತಾಯವಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ

ಲಾರಿ-ಟ್ರ್ಯಾಕ್ಟರ್ ಅಪಘಾತ; ಲಾರಿ ಚಾಲಕ ಸಾವು

0

ವಿಜಯಸಾಕ್ಷಿ ಸುದ್ದಿ, ಕುಕನೂರು:
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೀರಾಪುರ ಕ್ರಾಸ್ ಬಳಿ ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದ ವೇಳೆ ಚಲಿಸುತ್ತಿರುವ ಲಾರಿಯಿಂದ ಹೊರಗೆ ಹಾರಿದ ಚಾಲಕ ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಮೃತ ಚಾಲಕನನ್ನು ಮಣಿಕಂಠ (34) ಎಂದು ಗುರುತಿಸಲಾಗಿದೆ.

ಲಾರಿಯಿಂದ ಸುಮಾರು ‌ಅರ್ಧ ಕಿ.ಮೀ. ಹೊರಗೆ ಹಾರಿ ಹೋಗಿರೋ ಚಾಲಕ ಮಣಿಕಂಠ, ಲಾರಿ‌ಯಿಂದ ಸಿಡಿದು ಸುಮಾರು 300 ಮೀ. ದೂರಕ್ಕೆ ಬಿದ್ದಿದ್ದಾನೆ.

ಕಲ್ಲು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ‌ ಹೊಡೆದಿದೆ.
ಟ್ರ್ಯಾಕ್ಟರ್ ರಸ್ತೆ ಕ್ರಾಸ್ ಮಾಡುವಾಗ ಅಪಘಾತ ಸಂಭವಿಸಿದ್ದು, ಕುಕನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ನಿಧನ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಇಲ್ಲಿನ ನಿವೃತ್ತ ವಾರ್ತಾಧಿಕಾರಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಭೀ.ಆಕಳವಾಡಿ (70) ಫೆ.15 ಸೋಮವಾರ ನಸುಕಿನ ಪೂರ್ವದಲ್ಲಿ ರಾತ್ರಿ 1.30 ಕ್ಕೆ ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಸ್ವಗ್ರಾಮ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಬೇನಾಳ ( ಆರ್.ಎಸ್ ) ಗ್ರಾಮದಲ್ಲಿ ಸೋಮವಾರ ಫೆ.15 ರಂದು ಮಧ್ಯಾಹ್ನ ಜರುಗಲಿದೆ.
ಕುಟುಂಬ ಸದಸ್ಯರ ಸಂಪರ್ಕ ಸಂಖ್ಯೆ : ಸಂಪತ್ ಕುಮಾರ್ ಆಕಳವಾಡಿ- 7795520282

error: Content is protected !!