ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಇದಕ್ಕಾಗಿಯೇ ಗೋ ಸಂತತಿ ಸಂರಕ್ಷಣೆಯ ಸಲುವಾಗಿ ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದೆ.
ಗೋ ಹತ್ಯೆ ನಿಷೇಧ ಕಾಯ್ದೆಯ ಬಳಿಕ ಇದೇ ಮೊದಲ ಬಾರಿಗೆ ದುರುಳರು ಗೋವುಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಗಾಯಗೊಳಿಸಿರುವ ಅಮಾನವೀಯ ಘಟನೆ ನಗರದ ರಾಧಾಕೃಷ್ಣನ್ ನಗರದ ಬಳಿ ನಡೆದಿದೆ.
ಮೂರು ಆಕಳುಗಳ ಬಾಲ ಕತ್ತರಿಸುವ ಮೂಲಕ ಕಿರಾತಕರು ವಿಕೃತಿ ಮೆರೆದಿದ್ದಾರೆ. ಇನ್ನು ಕೆಚ್ಚಲು (ಮೊಲೆ) ಜಾಗಕ್ಕೂ ಮಾರಕಾಸ್ತ್ರಗಳಿಂದ ಗಾಯಗೊಳಿಸಿದ್ದು, ಕಳೆದ ಮೂರು ದಿನಗಳಿಂದ ಕರು ತಾಯಿಯ ಹಾಲು ಕುಡಿಯಲಾಗದೇ ಪರದಾಡುತ್ತಿದೆ. ಇತ್ತ ಆಕಳು ಕೂಡಾ ನರಳಾಡುತ್ತಿದೆ.
ಆಕಳಿಗೆ ಹೆರಿಗೆ ಆಗಿ ಮೂರೇ ದಿನದಲ್ಲಿ ತಾಯಿ ಹಾಗೂ ಕರು ದೂರವಗಿದ್ದು, ಗೋವಿನ ಸ್ಥಿತಿ ಕಂಡು ಗೋಪಾಲಕಿ ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಅಮಾನವೀಯ ಘಟನೆಯು ಗೋ ರಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮೇಲ್ವರ್ಗದ ಐದಾರು ಸಮುದಾಯಗಳಿಗೆ ನಿಗಮ ಹಾಗೂ ಅನುದಾನ ಮಂಜೂರ ಮಾಡುವುದರ ಮೂಲಕ ಅತೀ ಹಿಂದುಳಿದ ಹಾಗೂ ಸಣ್ಣ ಸಮುದಾಯಕ್ಕೆ ಪ್ರಾಮುಖ್ಯತೆ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಕರ್ನಾಟಕ ಪಿಂಜಾರ ನದಾಫ ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯಾಧ್ಯಕ್ಷ ಡಾ.ಅಬ್ದುಲ್‌ರಝಾಕ್ ನದಾಫ ದೂರಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳ 102 ಸಮುದಾಯಗಳು ಹಾಗೂ ಪ್ರವರ್ಗ-1ರಲ್ಲಿ 95 ಸಮುದಾಯಗಳು ಸರಕಾರದ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಅದರಲ್ಲಿ ಪಿಂಜಾರ್ ನದಾಫ ಮನ್ಸೂರಿ ದುದೇಕುಲ ಸಮುದಾಯವು ಒಂದಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಹೊಂದಿದ ಸಮಾಜಕ್ಕೆ ನಿಗಮದ ಜೊತೆಗೆ ಅನುದಾನ ನೀಡಿದೆ ಎಂದರು.
ಮತ ಬ್ಯಾಂಕ್‌ಗೊಸ್ಕರ ದೊಡ್ಡ ಸಮುದಾಯಕ್ಕೊಂದು ನಿಗಮ ಸ್ಥಾಪಿಸಿದರೆ, ಬಡ ಸಮುದಾಯಗಳು ಬಡವರಾಗಿ ಉಳಿಯುತ್ತವೆ. ಈಗಾಗಲೇ ಅನೇಕ ಸಣ್ಣ ಜನಾಂಗದವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದು, ಬಜೆಟ್‌ನಲ್ಲಿ ಅಂತಹ ಜನಾಂಗಗಳಿಗೆ ಅಪಮಾನ ಮಾಡಿದಂತಾಗಿದೆ. ಪಿಂಜಾರ ನದಾಫ ಮನ್ಸೂರಿ ದುದೇಕುಲ ಸಮುದಾಯಗಳು ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಕಡೆಗಣಿಸಲಾಗಿದೆ. ಹೀಗಾಗಿ ಮಾ.31ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಪಿಂಜಾರ್ ಅಭಿವೃದ್ದಿ ನಿಗಮ ಸ್ಥಾಪಿಸುವ ಮೂಲಕ ಮುಸ್ಲಿಂರ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಬ್ದುಲ್‌ರಝಾಕ್ ನದಾಫ ಒತ್ತಾಯಿಸಿದರು.
ಕೊಪ್ಪಳ ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆ ಮಾರ್ಚ್ 13 ಮತ್ತು 14ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾತೃಶ್ರೀ (ಅವ್ವ) ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದೆ.
ಸಂಸ್ಥೆಯು ಪ್ರತಿ ಸಲ ವಿಭಿನ್ನ ಹೆಸರುಗಳ ಟೂರ್ನಮೆಂಟ್ ಆಯೋಜಿಸುತ್ತಾ ಬಂದಿದ್ದು, ಈ ಸಲ ಮಹಿಳೆಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಾತೃಶ್ರೀ (ಅವ್ವ) ಎಂಬ ಹೆಸರಿನಡಿ ವಿಜೇತ ತಂಡಗಳಿಗೆ ಕಪ್ ನೀಡಲಿದೆ.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ನೇತೃತ್ವದ ಜಿಲ್ಲಾಧಿಕಾರಿ ಕಚೇರಿ ನೌಕರರ ಜೀಜಾ ಮಾತಾ ತಂಡ, ಎಸ್‌ಪಿ ಟಿ.ಶ್ರೀಧರ್ ನೇತೃತ್ವದ ಪೊಲೀಸ್ ಇಲಾಖೆಯ ನೌಕರರ ಕಿರಣ್ ಬೇಡಿ ತಂಡ, ಜಿಪಂ ಸಿಇಓ ರಘುನಂದನ್ ಮೂರ್ತಿ ನೇತೃತ್ವದ ಜಿಪಂ ನೌಕರರ ಅಮ್ಮ ತಂಡ, ವಕೀಲರ ಜಸ್ಟೀಸ್ ಭಾನುಮತಿ ತಂಡ, ಬಾಗಲಕೋಟೆ ಅತಿಥಿಗಳ ಅಕ್ಕಮಹಾದೇವಿ ತಂಡ ಹಾಗೂ ಸಂಸ್ಥೆಯ ಶ್ರೀನಿವಾಸ್ ಗೋಂಧಳಿ ನೇತೃತ್ವದ ದಾನ ಚಿಂತಾಮಣಿ ಅತ್ತಿಮಬ್ಬೆ ತಂಡ, ಸಿದ್ದು ನೇತೃತ್ವದ ಮದರ್ ಥೇರೇಸಾ ತಂಡ, ಚಂದ್ರಕಾಂತ ದೇಶಪಾಂಡೆ ನೇತೃತ್ವದ ಕಿತ್ತೂರುರಾಣಿ ಚನ್ನಮ್ಮ ತಂಡ, ವಿನೋದ್‌ಕುಮಾರ್ ನೇತೃತ್ವದ ಒನಕೆ ಓಬವ್ವ ತಂಡ ಹಾಗೂ ಸಲೀಲ್ ನೇತೃತ್ವದ ಝಾನ್ಸಿರಾಣಿ ಲಕ್ಷ್ಮೀಬಾಯಿ ತಂಡಗಳು ಸೇರಿದಂತೆ ಒಟ್ಟು ಹತ್ತು ತಂಡಗಳು ಈ ಟೂರ್ನಮೆಂಟ್‌ನಲ್ಲಿ ಸೆಣಸಲಿವೆ.
ಮಾರ್ಚ್ 13ರಂದು ಬೆಳಗ್ಗೆ 7 ಗಂಟೆಗೆ ಟೂರ್ನಮೆಂಟ್‌ನ ಉದ್ಘಾಟನೆ ನಡೆಯಲಿದ್ದು, ಡಿಸಿ, ಎಸ್ಪಿ, ಕ್ಲಬ್‌ನ ಗೌರವಾಧ್ಯಕ್ಷ ಬಸವರಾಜ ಕರುಗಲ್, ಅಧ್ಯಕ್ಷ ವಿನೋದ್ ಚಿನ್ನಿನಾಯ್ಕರ್, ಮುಖ್ಯಸ್ಥ ಗಿರೀಶ್ ಮುಂಡಾದ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಟೂರ್ನಮೆಂಟ್‌ನ ಮೊದಲ ಪಂದ್ಯ ಬೆಳಗ್ಗೆ 7-30ಕ್ಕೆ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
**-ಪರವಾಗಿಲ್ಲ, ***-ಚೆನ್ನಾಗಿದೆ, ****ತುಂಬಾ ಚೆನ್ನಾಗಿದೆ, *****-ಮಿಸ್ ಮಾಡ್ದೆ ನೋಡಿ
-ಬಸವರಾಜ ಕರುಗಲ್. ‘ಮನುಷ್ಯ ಹುಟ್ತಾನೆ ಕೆಟ್ಟವನು. ಅದಕ್ಕೆ ಭಗವದ್ಗೀತೆ, ಖುರಾನ್, ಬೈಬಲ್‍ನಂಥ ಕೃತಿಗಳು ಹುಟ್ಟಿಕೊಂಡಿದ್ದು. ಕೆಟ್ಟ ಮನುಷ್ಯನಲ್ಲಿ ಒಳ್ಳೇತನ ತುಂಬುವುದೇ ಇವುಗಳ ಉದ್ದೇಶ’-ಇದು ರಾಬರ್ಟ್ ಸಿನಿಮಾದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹೇಳುವ ಡೈಲಾಗ್ ಹಾಗೂ ಚಿತ್ರದ ಒನ್ ಲೈನ್ ಸ್ಟೋರಿ ಸಹ ಎನ್ನಬಹುದು…
ದರ್ಶನ್ ಸಿನಿಮಾ ಎಂದಮೇಲೆ ಮಾಸ್ ಆಗಿರಬೇಕು ಎಂಬುದು ಅವರ ಸಿನಿಮಾ ನಿರ್ದೇಶನ ಮಾಡುವ ಬಹುತೇಕರ ಅಜೆಂಡಾ. ರಾಬರ್ಟ್ ಸಹ ಇದಕ್ಕೆ ಹೊರತಾಗಿಲ್ಲ. ದರ್ಶನ್ ಅಭಿಮಾನಿಗಳನ್ನ ಗಮನದಲ್ಲಿಟ್ಟುಕೊಂಡೇ ರಾಬರ್ಟ್ ತೆರೆಗೆ ಬಂದಿದ್ದಾನೆ. ಆದರೆ ಈ ಸಿನಿಮಾದಲ್ಲಿ ಹೊಡೆದಾಟ, ಬಡಿದಾಟಗಳಷ್ಟೇ ಮಹತ್ವವನ್ನು ಕಥೆಗೂ ನೀಡಲಾಗಿದೆ ಎಂಬುದನ್ನು ಹೇಳಬಹುದು. ಆದರೆ ಕಥೆ ಒಂದೇ ಗುಟುಕಿಗೆ ನಿಲುಕುವಂಥದ್ದಲ್ಲ. ವಿರಾಮದವರೆಗೂ ಸಿನಿಮಾದ ವೇಗ ಕ್ಲಾಸ್ ಮತ್ತು ಮಾಸ್ ವರ್ಗದವರನ್ನ ಹಿಡಿದಿಡುತ್ತದೆ. ವಿರಾಮದ ನಂತರ ಮಾಸ್ ದೃಶ್ಯಗಳಿಗೆ ಆದ್ಯತೆ ನೀಡಲಾಗಿದೆಯಾದರೂ ಸಾಗುವ ಕಥೆ, ಕ್ಲಾಸ್ ವರ್ಗದವರಿಗೂ ಇಷ್ಟವಾಗುತ್ತದೆ.
ಅವನೋ ತೊದಲು ಮಾತಿನವ. ಅವನ ಮಗನಿಗೂ ಅದೇ ಸಮಸ್ಯೆ. ತಾನಾಯಿತು ತನ್ನ ಕೆಲಸವಾಯಿತು. ಹಿಂಸೆ ಮಹಾಪಾಪ ಎಂಬ ಗಾಂಧಿ ತತ್ವವನ್ನು ನಂಬಿಕೊಂಡು ಬದುಕು ಸಾಗಿಸುವಾತ. ಮಗನೋ ತಮಗೆ ಯಾರಾದರೂ ಕೆಟ್ಟತನ ಬಗೆದರೆ ರಿವೇಂಜ್ ತಗೋಬೇಕು ಎಂಬ ಮನಸ್ಥಿತಿಯವ. ಯುದ್ಧ ಗೆಲ್ಲುವ ಶಕ್ತಿ ಇದ್ದರೂ ಬುದ್ಧನ ಬದುಕನ್ನು ರೂಢಿಸಿಕೊಂಡವ ರಾಘವ ಅಲಿಯಾಸ್ ರಾಬರ್ಟ್. ಅವನು ರಾಕ್ಷಸರನ್ನು ಸಂಹರಿಸುವ ಬ್ರಹ್ಮರಾಕ್ಷಸನಾಗಿದ್ದರೂ ಮಗನಿಗಾಗಿ ಬದಲಾವಣೆಗೊಂಡವ. ಮಗನ ಸಂತೋಷಕ್ಕಾಗಿ ಎಂಥ ಕಷ್ಟವನ್ನು ಸಹಿಸಿಕೊಳ್ಳಬಲ್ಲ, ಮಗನಿಗೆ ಗೊತ್ತಾಗದಿದ್ದರೆ ಎಂಥ ದೈತ್ಯರನ್ನೇ ಕ್ಷಣಾರ್ಧದಲ್ಲೇ ನೆಲಕ್ಕುರುಳಿಸಬಲ್ಲ ಚಾಣಾಕ್ಷ. ಅವನು ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ಟರೆ ದಶರಥ ರಾಮ, ಪ್ರೀತಿಯಿಂದ ಬಂದ್ರೆ ಜಾನಕಿ ರಾಮ, ತಿರುಗಿ ಬಿದ್ರೆ ಕೋದಂಡರಾಮ. ಖಳರ ಪಾಲಿಗೆ ಚತುದರ್ಶಕ ಭುವನ ಭಯಂಕರನಾದ ಪ್ರಚಂಡ ರಾವಣ. ಮಗನ ಮುಂದೆ ಮಾತ್ರ ರಾವಣಾವತಾರ ಗೊತ್ತಾಗದ ಹಾಗೆಯೇ ಬದುಕಿಕೊಂಡ ಬಂದವ. ಯಾಕೆ ಹೀಗೇ ಎಂಬುದನ್ನ ಥೇಟರ್‍ನಲ್ಲೇ ನೋಡಿದರೆ ಚೆಂದ.
ಒಟ್ಟಾರೆ ಸಿನಿಮಾದ ಆರಂಭ ಶಿವಣ್ಣನ ಶ್ರೀರಾಮ್ ನೆನಪಿಸುತ್ತೆ. ಅಂತ್ಯ ಕಿಚ್ಚ ಸುದೀಪ್‍ನ ವೀರ ಮದಕರಿ ನೆನಪಿಸುತ್ತೆ. ಉಳಿದಂತೆ ವಿಷ್ಣುದಾದಾ ಅಭಿನಯದ ಕೋಟಿಗೊಬ್ಬ ಸಿನಿಮಾವನ್ನ ನೆನಪಿಸುತ್ತೆ. ಆದರೂ ಸಿನಿಮಾ ಈಗಿನ ಟ್ರೆಂಡ್‍ಗೆ ತಕ್ಕಂತಿದ್ದು, ಕಾಸಿಗಂತೂ ಮೋಸ ಮಾಡಲ್ಲ. ಆರಂಭದಿಂದ ಅಂತ್ಯದವರೆಗೂ ಎಲ್ಲೂ ಬೋರ್ ಆಗದ ಹಾಗೆ ಸಿನಿಮಾ ಸಾಗುತ್ತದೆ. ಸಿನಿಮಾದಲ್ಲಿ ಗೆಳೆತನ, ತಂದೆ-ಮಗನ ಸೆಂಟಿಮೆಂಟ್ ಇದೆ. ಗ್ಯಾಂಗ್ ವಾರ್‍ಗಳಿವೆ. ಕಾಮಿಡಿ ಬೆರೆಸಿದ ಕ್ಲೈಮಾಕ್ಸ್ ಫೈಟ್ ಇದೆ. ಸಿಂಪಲ್ಲಾಗಿ ಹೇಳಬೇಕಂದ್ರೆ ಎಲ್ಲ ಥರದ ಮಸಾಲೆ ಬೆರೆಸಿ ರುಚಿಕಟ್ಟಾದ, ತಲೆ ಹಿಡಿಯದಂಥ, ನಾಲಿಗೆ ಮತ್ತೇ ಮತ್ತೇ ಬೇಡುವ ಬೆಸ್ಟ್ ಬಿರಿಯಾನಿಯಂತಿದ್ದಾನೆ ರಾಬರ್ಟ್. ಚಿಕನ್ ಬೇಕಾದವರು ಪ್ರತ್ಯೇಕವಾಗಿ ಚಿಕನ್ ತೆಗೆದುಕೊಳ್ಳಬಹುದು. ಅದನ್ನ ನಾಯಕನೇ ಬೇಕಾದರೂ ಮಾಡಿಕೊಡಬಲ್ಲ. ಯಾಕೆಂದರೆ ಚಿತ್ರದಲ್ಲಿ ನಾಯಕನದ್ದು ಅಡುಗೆ ಭಟ್ಟನ ಪಾತ್ರ. ತಿಥಿ ಊಟಕ್ಕೆ ಫೇಮಸ್ ಆಗಿರುವ ಆತನದ್ದೇ ಕ್ಯಾಟರಿಂಗ್ ಗ್ಯಾಂಗ್ ಇದೆ. ವೆಜ್ ಊಟಕ್ಕೆ ಇದು ಎಲ್ಲ ಕಡೆ ಪ್ರಸಿದ್ಧಿ. ದೃಶ್ಯವೊಂದರಲ್ಲಿ ಖಳರಿಗೆ ನಾನ್ ವೆಜ್ ಅಡುಗೆ ಸಹ ಮಾಡಿಕೊಡುತ್ತಾನೆ. ಕ್ಯಾಟರಿಂಗ್ ತಾತಾ ಇದನ್ನ ವಿರೋಧಿಸಿದರೆ ಮಡಿ-ಮೈಲಿಗೆಗಿಂತ ಮನುಷ್ಯತ್ವ ದೊಡ್ಡದು ಯಜಮಾನ್ರೆ ಎಂದು ಬುದ್ಧನಂತೆ ಮಾತನಾಡುತ್ತಾನೆ.
ಉಮಾಪತಿ ನಿರ್ಮಾಪಕನ ಜಾಗದಲ್ಲಿ ನಿಂತು ಚಿತ್ರ ನಿರ್ಮಾಣ ಮಾಡಿದ್ದಾರೆ. ಒಟಿಟಿ ಫ್ಲಾಟ್‍ಫಾರ್ಮ್‍ನಲ್ಲಿ ಸಿನಿಮಾ ಬಿಡುಗಡೆಗೆ ಭಾರಿ ಮೊತ್ತದ ಆಫರ್ ಬಂದ್ರೂ ಅದನ್ನ ತಿರಸ್ಕಾರ ಮಾಡಿ ಥೇಟರ್‍ನಲ್ಲಿ ರಿಲೀಜ್ ಮಾಡಿದ್ದಾರೆ. ಚಿತ್ರದ ಮೇಲೆ ಅವರಿಗಿದ್ದ ವಿಶ್ವಾಸ ನಿಜ ಎನ್ನುವಷ್ಟರ ಮಟ್ಟಿಗೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ರಾಬರ್ಟ್ ದೊಡ್ಡ ಕ್ಯಾನ್ವಾಸ್ ಆಗಿರೋದ್ರಿಂದ ಚಿತ್ರದಲ್ಲಿ ಕಲಾವಿದರ ದೊಡ್ಡ ಬಳಗವೇ ಇದೆ. ಅದರಲ್ಲೂ ಜಗಪತಿಬಾಬು ಹಾಗೂ ಕಣ್ ಹೊಡಿಯಾಕ.. ಅವತರಣಿಕೆಯ ತೆಲುಗು ಹಾಡು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿ ತೆಲುಗು ಚಿತ್ರರಂಗದಲ್ಲೂ ಸುಮಾರು 500 ಪರದೆಗಳ ಮೇಲೆ ತೆಲುಗಿನ ರಾಬರ್ಟ್ ಆರ್ಭಟ ಶುರುವಾಗಿದೆ. ಕಾಮಿಡಿಯಲ್ಲಿ ಚಿಕ್ಕಣ್ಣನಿಗೆ ಸ್ಕೋಪ್ ಕಡಿಮೆ ಇದ್ದರೂ ಚಿಕ್ಕಣ್ಣ ಮಾತ್ರ ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಮತ್ತೊಬ್ಬ ಕಾಮಿಡಿ ಆ್ಯಕ್ಟರ್ ಶಿವರಾಜ.ಕೆ.ಆರ್. ಪೇಟೆಗೆ ಒಳ್ಳೇ ರೋಲ್ ಸಿಕ್ಕಿದೆ. ಶಿವರಾಜ್ ಮತ್ತೊಮ್ಮೆ ಭರವಸೆ ಮೂಡಿಸಿದ್ದಾರೆ. ರವಿಕಿಶನ್, ರವಿಶಂಕರ್, ಅಶೋಕ, ಅವಿನಾಶ್, ದೇವರಾಜ್ ಮತ್ತಿತರರ ಅಭಿನಯದ ಬಗ್ಗೆ ಎರಡೂ ಮಾತಿಲ್ಲ.
ಮರಿಟೈಗರ್ ವಿನೋದ್ ಪ್ರಭಾಕರ್ ಪಾತ್ರ ಸಿನಿಮಾದ ಜೀವಾಳ ಎನ್ನಬಹುದು. ವಿನೋದ್ ತೆರೆಯ ಮೇಲೆ ಬಹಳ ಹೊತ್ತು ಕಾಣಿಸುವುದಿಲ್ಲವಾದರೂ ಸಿನಿಮಾದ ಕಥೆಯ ಮುಖ್ಯ ಸ್ತಂಭದಂತೆ ಪಾತ್ರ ರಚಿಸಲಾಗಿದೆ. ಅದಕ್ಕೆ ವಿನೋದ್ ನಿಸ್ಸಂಶಯವಾಗಿ ಜೀವ ತುಂಬಿದ್ದಾರೆ. ನಾಯಕಿಯರಾಗಿ ಆಶಾಭಟ್, ಸೋನಲ್ ನೋಡಲು, ಕುಣಿಯಲು ಚಂದವೋ ಚಂದ. ನಟನೆಯ ವಿಷಯದಲ್ಲೂ ನೋ ಕಾಮೆಂಟ್ಸ್. ಹಾಡುಗಳ ಬಗ್ಗೆ ಹೇಳೋದೇ ಬೇಡ. ಒಂದಕ್ಕಿಂತ ಒಂದು ಹಾಡುಗಳು ಸೂಪರ್ ಆಗಿವೆ. ಹರಿಕೃಷ್ಣ ರಾಗ ಸಂಯೋಜನೆ ಮತ್ತೊಮ್ಮೆ ಗೆದ್ದಿದೆ. ಚಿತ್ರದ ಡೈಲಾಗ್ಸ್ ಮಾಸ್ ಆಡಿಯನ್ಸ್‍ಗೆ ಹಬ್ಬ. ರಾಬರ್ಟ್‍ನ ಅಂದಗಾಣಿಸಲು ಸಿನಿಮಾಟೋಗ್ರಾಫರ್ ಸುಧಾಕರ ಶ್ರಮ ಇಡೀ ಸಿನಿಮಾದಲ್ಲಿ ಎದ್ದು ಕಾಣುತ್ತೆ. ಹಾಗಂತ ಸಿನಿಮಾದಲ್ಲಿ ನೆಗೆಟಿವ್ ಅಂಶಗಳೇ ಇಲ್ಲ ಅಂತಲ್ಲ. ಪಾಸಿಟಿವಿಟಿ ಮುಂದೆ ಲಾಜಿಕ್ ಇಲ್ಲದ ನೆಗೆಟಿವ್ ಥಾಟ್ಸ್ ಲೆಕ್ಕಕ್ಕೆ ಬರಲ್ಲ.
ಲಾಸ್ಟ್ ಪಂಚ್: ಇಬ್ಬರು ಗೆಳೆಯರ ನಡುವೆ ನಡೆಯುವ ವಾಗ್ಯುದ್ಧದಲ್ಲಿ ಬರುವ ಮನುಷ್ಯರನ್ನ ಸೈನೈಡ್‍ಗಿಂತ ಫಾಸ್ಟ್ ಆಗಿ ಸಾಯಿಸೋದು ನೆಗೆಟಿವ್ ಥಾಟ್ಸ್ ..
ಫೈನಲಿ ಈ ರಾಬರ್ಟ್ ಕೆಲವರ ಲೈಫ್‍ನಲ್ಲಿ ವಿಲನ್ ಆಗಿರೋ ಹಲವರ ಲೈಫ್‍ನ ಹೀರೋ ಎನ್ನಬಹುದು. ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ಪ್ಯಾಕೇಜ್ಡ್ ಮೂವಿ ರಾಬರ್ಟ್.
ರೇಟಿಂಗ್: **** ಚಿತ್ರ ಪ್ರದರ್ಶನ: ಶ್ರೀ ಶಿವ ಚಿತ್ರಮಂದಿರ, ಕೊಪ್ಪಳ.
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪ್ರಭು ನವಲಗುಂದಮಠ ಅವರ ನೇತೃತ್ವದಲ್ಲಿ ವಾರ್ಡ ನಂ.54 ರ ಮುಲ್ಲಾನ ಓಣಿ ಮುಖಂಡರಾದ ಅಬ್ದುಲ ಮುನಾಫ ಐನಾಪುರಿ ಎಂಬುವವರು ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಮುಸ್ಲಿಂ ಜಮಾತ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ.
ಹೌದು ಮುಸ್ಲಿಂ ಸಮುದಾಯದ ಮುಖಂಡರು ಬಿಜೆಪಿ ಸೇರಿದ್ದಕ್ಕೆ ವಕ್ಪ್ ಬೋರ್ಡ್‌ನಲ್ಲಿರುವ ಅಂಗಡಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಬ್ದುಲ್ ಮುನಾಫ್ ಐನಾಪುರಿ ವಿಜಯಸಾಕ್ಷಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ದೂರವಾಣಿ ಮೂಲಕ ಮಾತನಾಡಿದ ಅವರು, ಯಾವುದೇ ಬೈಲಾದಲ್ಲಿ ಕೂಡ ಮುಸ್ಲಿಂರು ಇದೇ ಪಕ್ಷದಲ್ಲಿ ಇರಬೇಕು ಎಂಬುದು ಕಡ್ಡಾಯವಲ್ಲ. ನಾನು ಸ್ವಯಂ ಪ್ರೇರಿತವಾಗಿ ಬಿಜೆಪಿ ಸೇರಿದ್ದಕ್ಕೆ ನನಗೆ ಅಂಗಡಿ ಖಾಲಿ ಮಾಡುವಂತೆ ಒತ್ತಡ ಹೇರಿದ್ದಾರೆ. ಅಲ್ಲದೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮುಲ್ಲಾನ ಓಣಿ, ಕೌಲಪೇಟ ಸುತ್ತಮುತ್ತಲಿನ ಮುಸಲ್ಮಾನ ಮುಖಂಡರು ಹಾಗೂ ಪೂರ್ವ ಕ್ಷೇತ್ರದ ಮುಸಲ್ಮಾನ ಮುಖಂಡರು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಅವರ ಸಮ್ಮುಖದಲ್ಲಿ, ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ದಾಂತ ಮೆಚ್ಚಿ ಅಭಿವೃದ್ಧಿ ಕಾರ್ಯಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಈಗ ಬಿಜೆಪಿ ಸೇರ್ಪಡೆಗೊಂಡಿದ್ದಕ್ಕೆ ಮುಸ್ಲಿಂ ಸಮಾಜದಲ್ಲಿ ಆಕ್ರೋಶ ಭುಗಿಲೆದ್ದಿದೆ.
ವಿಜಯಸಾಕ್ಷಿ ಸುದ್ದಿ ಗಂಗಾವತಿ
ಪ್ರತಿಷ್ಠಿತ ಮನೆತನಕ್ಕೆ ಸೇರಿದ ವೃದ್ಧೆಯೊಬ್ಬರು ಇತ್ತೀಚೆಗೆ ಸಾವನ್ನಪ್ಪಿದ್ದು, ಸಾವಿನ ಬಗ್ಗೆ ಅನುಮಾನಗೊಂಡ ಪೊಲೀಸರು ಕಳೇಬರ ಹೊರ ತೆಗೆದು ಮಹಜರು ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
ಗಂಗಾವತಿ ಪುರಸಭೆ ಮಾಜಿ ಅಧ್ಯಕ್ಷ ಅಮರಜ್ಯೋತಿ ದುರುಗಪ್ಪ ಎಂಬುವರ ಪತ್ನಿ ಶಿವಮ್ಮ, ಮಾರ್ಚ್ 5ರಂದು ಸಾವನ್ನಪ್ಪಿದ್ದರು. ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಿದ್ದ ಕುಟುಂಬಸ್ಥರು ವಿದ್ಯಾನಗರದ ರೈಲ್ವೆ ಸಿಬ್ಬಂದಿ ವಸತಿ ಗೃಹದ ತಮ್ಮ ಜಮೀನಿನ ಬಳಿ ಮೃತರ ಅಂತ್ಯಕ್ರಿಯೆ ನೆರವೇರಿಸಿದ್ದರು.ಆದರೆ ಮೃತರ ಮನೆಯಲ್ಲಿನ ಅರ್ಚಕ ಹಾಗೂ ಮನೆಯ ಸಹಾಯಕ ಸೇರಿ, ಮನೆಯಲ್ಲಿ ಕಳ್ಳತನ ಮಾಡುವ ಸಂದರ್ಭದಲ್ಲಿ ವೃದ್ಧೆ ಗಮನಿಸಿದ್ದಾರೆ. ಈ ವೇಳೆ ಆಕೆಗೆ ಬಾತ್ ರೂಂ ಕ್ಲೀನ್ ಮಾಡುವ ಬ್ರಷ್ ಹಿಡಿಕೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅನುಮಾನಗೊಂಡ ಮನೆಯವರು, ಅರ್ಚಕ ಸರ್ವಜ್ಞ ಹಾಗೂ ಮನೆಯ ಸಹಾಯಕ ಗಣೇಶ ಎಂಬುವವರ ಮೇಲೆ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣದ ವಾಸ್ತವ ಬಯಲಿಗೆ ಬಂದಿದೆ.ಆದರೆ ಪ್ರಕರಣ ದಾಖಲಾಗುವ ಹೊತ್ತಿಗೆ ಮೃತರ ಅಂತ್ಯಸಂಸ್ಕಾರ ನೆರವೇರಿದೆ. ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಹೂಳಲಾಗಿದ್ದ ಶವ ಹೊರ ತೆಗೆದು ವಿಧಿವಿಜ್ಞಾನದ ತಜ್ಞ ವಿನೋದ್ ಎಂಬುವವರ ನೇತೃತ್ವದಲ್ಲಿ ಶವಪರೀಕ್ಷೆ ನಡೆಸಿ ಸ್ಯಾಂಪಲ್ ಸಂಗ್ರಹಿಸಿದರು
‘ಒಂದು ದೇಶ ಒಂದು ಚುನಾವಣೆ’ ಎನ್ನುವುದು ದೇಶದ ಆಡಳಿತ ಹಾಗೂ ಅರ್ಥಿಕ ದೃಷ್ಟಿಯಿಂದ ಒಳ್ಳೆಯದ್ದು. ಇಂತಹದರ ಕುರಿತು ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಪ್ರತಿಭಟಿಸುವುದನ್ನು ಬಿಟ್ಟು ಸಾಧಕ ಬಾಧಕ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ರವಿವಾರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸದನದಲ್ಲಿ ಚರ್ಚಿಸಲು ಸ್ಪೀಕರ್ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಆದರೆ, ಚರ್ಚೆ ಮಾಡದೇ ಪ್ರತಿಭಟಿಸುತ್ತಿದ್ದಾರೆ. ಚರ್ಚೆ ಅಂದರೆ ಓಡಿ ಹೋಗುವವರು ಸದನ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.
‘ಒಂದು ದೇಶ ಒಂದು ಚುನಾವಣೆ’ ಇವತ್ತಿನ ಕಾನೂನಲ್ಲ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರೂ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಲಾ ಕಮಿಷನ್ ಕೂಡಾ ಉಲ್ಲೇಖಿಸಿ 2018 ರಲ್ಲಿ ಡ್ರಾಪ್ ರಿಪೋರ್ಟ್ ಸಲ್ಲಿಸಿದೆ ಎಂದು ತಿಳಿಸಿದ ಅವರು, ಗ್ರಾಮ ಪಂಚಾಯತಿಯಿಂದ ಸಂಸತ್ ವರೆಗೂ ಒಂದೇ ಚುನಾವಣೆ ಮಾಡಿದರೆ ಅದು ಆರ್ ಎಸ್ ಎಸ್ ಅಜೆಂಡಾ ಹೇಗಾಗುತ್ತೆ? ಎಂದರು.
ದೇಶದ ಯಾವ್ಯಾವ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುತ್ತದೆಯೋ, ಎಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿ ಇದೆಯೋ ಅಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಕಾಂಗ್ರೆಸ್ ತನ್ನ ಹಳೆಯ ಚಾಳಿ ಮುಂದುವರೆಸಿದೆ. ದೇಶದಲ್ಲಿ ಕಾಂಗ್ರೆಸ್ ಹೀನಾಯ ಪರಸ್ಥಿತಿಗೆ ತಲುಪಿದೆ. ಪ್ರತಿಭಟನೆ ಮಾಡಿ ಗೊಂದಲ ಸೃಷ್ಟಿಸುವ ಮೂಲಕ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದೆ. ಆದರೆ ಹಳೆ ಚಾಳಿ ಮುಂದುವರಿಸಿದರೆ ಜನರು ನಂಬುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಜಿ ಸಿಎಂ ಸಿದ್ರಾಮಯ್ಯ ಜೋಡೆತ್ತು ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಅವರು ಜೋಡೆತ್ತಲ್ಲ ಬಯಲಿನಲ್ಲಿ ಹೊಡೆದಾಡಲು ಬಿಟ್ಟಿರುವ ಹೋರಿಗಳು. ಇವನ್ನು ಎದುರಿಸುವ ಶಕ್ತಿ ಬಿಜೆಪಿಗಿದೆ ಎಂದು ಕಾಂಗ್ರೆಸ್ ನಾಯಕರಿಬ್ಬರಿಗೂ ಸಚಿವರು ತಿರುಗೇಟು ನೀಡಿದರು.
ಸಿಎಂ ಯಡಿಯೂರಪ್ಪ ಅವರು ೮ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ನಾಳೆಯ ಬಜೆಟ್ ಕೈಗಾರಿಕೆ, ಕೃಷಿ, ಆರೋಗ್ಯ, ಐಟಿಬಿಟಿ ಹಾಗೂ ಶಿಕ್ಷಣ ವಲಯಗಳಿಗೆ ಹೆಚ್ಚಿನ ಆದ್ಯತೆ ಇರಲಿದೆ. ಕೊರೊನಾ ಬಳಿಕ ಮಂಡಿಸುತ್ತಿರುವ ಆಯವ್ಯಯದ ಮೇಲೆ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಲ್ಲದೇ, ನಾಳೆಯ ಬಜೆಟ್ ನಲ್ಲಿ ಬಡವರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಹಾಗೂ ಯುವಕರಿಗೆ ಪೂರಕ ಬಜೆಟ್ ಮಂಡಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ಸುಮಾರು ವರ್ಷಗಳಿಂದ ಮಾರಾಟ ಮಾಡಿದ್ದ ಕೃಷಿ ಹುಟ್ಟುವಳಿಯ ಹಣವನ್ನು ಕೊಡು ಎಂದು ಕೇಳಲು ಹೋದ ರೈತನ ಮೇಲೆ ದಲಾಲಿ ಅಂಗಡಿಯ ಮಾಲೀಕರು ಮಚ್ಚಿನಿಂದ ಹಲ್ಲೆ ಮಾಡಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಎಪಿಎಂಸಿಯಲ್ಲಿ ನಡೆದಿದೆ.
ಗಜೇಂದ್ರಗಡ ಮೂಲದ ಚನ್ನಬಸಪ್ಪ ಶಿವಪ್ಪ ವಾಲಿ ಹಾಗೂ ಮಂಜು ಚನ್ನಬಸಪ್ಪ ವಾಲಿ ಎಂಬುವವರೇ ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದಾರೆ. ಹಲ್ಲೆ ನಡೆಸಿದ್ದರ ಪರಿಣಾಮವಾಗಿ ರೈತ ಯಂಕಪ್ಪ ನಿಂಗಪ್ಪ ಸೊನ್ನದ ಅವರ ಎಡಗಾಲಿನ ಮೂಳೆ ಮೂರಿದಿದೆ.
ಗಂಜಿಪೇಟೆ ನಿವಾಸಿ ಯಂಕಪ್ಪ ನಿಂಗಪ್ಪ ಸೊನ್ನದ ಎಂಬುವವರು ಪಟ್ಟಣದ ಶಿವಪ್ಪ ಸಂಗಪ್ಪ ವಾಲಿನಾಮೆಯ ಎಂಬ ದಲಾಲಿ ಅಂಗಡಿಯಲ್ಲಿ ತಮ್ಮ ಅಣ್ಣಂದಿರ ಹೊಲದಲ್ಲಿ ಬೆಳೆದ ಕೃಷಿ ಹುಟ್ಟುವಳಿಯನ್ನು (ಬೆಳೆ) ಹಲವು ವರ್ಷಗಳಿಂದ ಮಾರಾಟ ಮಾಡಿದ್ದು, ಸುಮಾರು 8 ಲಕ್ಷ ರೂ. ಬಿಲ್ ಆಗಿದೆ.
ಕೃಷಿ ಹುಟ್ಟುವಳಿ ಮಾರಿದ ರೈತ ರೈತ ಯಂಕಪ್ಪ ಹಣ ಕೊಡು ಎಂದು ಕೇಳಿದಾಗ ಇಂದು ನಾಳೆ ಕೊಡುವುದಾಗಿ ಆರೋಪಿಗಳಿಬ್ಬರೂ ಹೇಳುತ್ತಾ ದಿನಗಳನ್ನು ದೂಡುತ್ತಾ ಬಂದಿದ್ದಾರೆ. ಮಾ.2 ರಂದು ಯಂಕಪ್ಪ ಪುನಃ ಹಣ ಕೇಳಲು ಹೋದಾಗ ಮಾ.3ರಂದು ಬ್ಯಾಂಕ್ ಅವಧಿ ಮುಗಿದ ಮೇಲೆ ಕೊಡುವುದಾಗಿ ಆರೋಪಿಗಳು ಭರವಸೆ ನೀಡಿದ್ದಾರೆ. ಆದರೆ, ಆರೋಪಿತರು ಕೊಟ್ಟ ಮಾತಿಗೆ ತಪ್ಪಿದ್ದು, ಮಾ.3 ರಂದು ಇನ್ನೂ ಆರು ತಿಂಗಳು ಕಾಲಾವಕಾಶ ಕೊಡಿ. ಸದ್ಯ ನಮ್ಮಿಂದ ನಿಮಗೆ ಹಣ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪಿಗೆ ನೀಡದ ರೈತ ಯಂಕಪ್ಪ ಹಣ ಕೊಡುವಂತೆ ಪಟ್ಟು ಹಿಡಿದಿದ್ದಾನೆ. ಈ ವೇಳೆ ಆರೋಪಿಗಳಾದ ಚನ್ನಬಸಪ್ಪ ಹಾಗೂ ಮಂಜು ಎಂಬ ಆರೋಪಿಗಳು ರೈತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ,ಮಚ್ಚಿನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.
ಕೃಷಿ ಹುಟ್ಟುವಳಿ ಮಾರಾಟ ಮಾಡಿದ ಹಣ ಕೊಡುವ ವಿಷಯದಲ್ಲಿ ವಂಚಿಸಿರುವ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.