ತಾಲೂಕಿನ ನೀರಲಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನೀಲವ್ವ ಶಿವಪ್ಪ ಮಣ್ಣೂರ ಆಯ್ಕೆಯಾದರು.
ಈ ಸಂದರ್ಭದಲ್ಲಿ ಗದಗ ತಾ.ಪಂ. ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ವಿಶ್ವನಾಥ್ ದೇಸಾಯಿ, ಗ್ರಾ.ಪಂ. ಮಾಜಿ ಸದಸ್ಯರಾದ ಬಸವರಾಜ್ ಬಿಂಗಿ, ಅಂದಪ್ಪ ಬಿಂಗಿ ಇದ್ದರು
ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದ್ದ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದೆ. ಕಳೆದ ಸಾಲಿಗಿಂತಲೂ ಹೆಚ್ಚಿನ ಮತಗಳನ್ನು ಪಡೆದು ಜಯಭೇರಿ ಬಾರಿಸುವ ಮೂಲಕ ಅಶೋಕ ಮಂದಾಲಿ ದ್ವಿತೀಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಿರೀಕ್ಷೆಯಂತೆ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಾಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಮಂದಾಲಿ ಅವರು 1348 ಮತಗಳನ್ನು ಪಡೆದು ಅಧ್ಯಕ್ಷರಾಗಿ ಮರು ಆಯ್ಕೆಯಾದರು.
ಚುನಾವಣೆಗೆ ಸ್ಪರ್ಧಿಸಿದ್ದ ಮತ್ತೋರ್ವ ಅಭ್ಯರ್ಥಿ ಉದಯಗೌಡ ವೀರನಗೌಡ್ರ 409 ಮತ ಪಡೆದು ಉಪಾಧ್ಯಕ್ಷರಾಗಿ, ಪರಿಶಿಷ್ಟ ಜಾತಿ ಮೀಸಲಿನಲ್ಲಿ ವಿಜಯಕುಮಾರ ಚಲವಾದಿ 36 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪ್ರಾಮಾಣಿಕ ಕಾರ್ಯಕರ್ತರು ಪಕ್ಷದ ಪ್ರಮುಖ ಹುದ್ದೆಗಳನ್ನು ಅಲಂಕರಿಸುವುದಕ್ಕಾಗಿಯೇ ರೂಪಿಸಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಹುದ್ದೆಗಳಿಗೆ ಜ.11 ರಂದು ಆನ್‌ಲೈನ್ ಮೂಲಕ ಮತದಾನ ನಡೆದಿತ್ತು. ಹೆಚ್ಚು ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿರುವ ಯುವಕರೇ ಈ ಬಾರಿ ಆಯ್ಕೆಗೊಂಡಿರುವುದು ವಿಶೇಷವಾಗಿದೆ.
ಪಕ್ಷದ ಹಿರಿಯರ ಮಾರ್ಗದರ್ಶನ, ಯುವ ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧ್ಯವಾಗಿದೆ. ಹಿಂದಿನ ಅವಧಿಯಲ್ಲಿ ನನ್ನನ್ನು ಆಯ್ಕೆ ಮಾಡಿದ್ದ ಯುವಕರೊಂದಿಗೆ ನಿರಂತರ ಸಂಪರ್ಕ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದು, ಮತ್ತೊಂದು ಬಾರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿ ಎಲ್ಲರ ಸೇವೆ ಮಾಡಲು ಅವಕಾಶ ಸಿಕ್ಕಿದೆ, ಇದು ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರ ಗೆಲುವಾಗಿದೆ.
ಅಶೋಕ ಮಂದಾಲಿ, ಅಧ್ಯಕ್ಷರು, ಗದಗ ಜಿಲ್ಲಾ ಯುವ ಕಾಂಗ್ರೆಸ್ ಘಟಕ
ಯುವ ಕಾಂಗ್ರೆಸ್ ಅನ್ನುವುದು ಪಕ್ಷದ ದೊಡ್ಡ ಶಕ್ತಿಯಾಗಿದ್ದು, ಪಕ್ಷದಲ್ಲಿನ ಯುವಕರಲ್ಲಿ ಆಂತರಿಕ ಪ್ರಜಾಪ್ರಭುತ್ವದ ಕಲ್ಪನೆಯ ಸಾಕಾರದೊಂದಿಗೆ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ಶ್ರಮಿಸಿದವರನ್ನು ಆಯ್ಕೆ ಮಾಡುವ ಈ ಮಹತ್ವದ ಆನ್‌ಲೈನ್ ಮತದಾನದಲ್ಲಿ ಯುವಕ ಅಶೋಕ ಮಂದಾಲಿ ಎಲ್ಲಾ ಯುವ ಕಾಂಗ್ರೆಸ್ ಮನಸ್ಸುಗಳನ್ನು ಗೆದ್ದುಕೊಂಡು, ಆ ಮೂಲಕ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಹಾರ್ದಿಕ ಅಭಿನಂದನೆಗಳು.
ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮುತ್ತು ರಾಯರಡ್ಡಿ ಹಾಗೂ ಉಪಾಧ್ಯಕ್ಷರಾಗಿ ಮಲ್ಲವ್ವ ಮರಿಯಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಇಂದಿನಿಂದ ಆರಂಭವಾಗಿರುವ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಹವ್ಯಾಸಿ ಛಾಯಾಗ್ರಾಹ , ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಅಮರದೀಪ್ ಪಿ.ಎಸ್.ರಿಂದ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿದೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ. 4 ಮತ್ತು 5ರಂದು ಆಯೋಜನೆಯಾಗಿರುವ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕೋವಿಡ್ ನಂತರದ ಮೊದಲ ಚಿತ್ರ ಪ್ರದರ್ಶನ ಇದಾಗಿದೆ.
ಅಮರದೀಪ ಖ್ಯಾತ ಹವ್ಯಾಸಿ ಛಾಯಾಗ್ರಾಹಕರೂ ಹೌದು. ಈ ಹಿಂದೆಯೂ ಅವರು ಹಲವಾರು ಸಂದರ್ಭಗಳಲ್ಲಿ ವಿವಿಧ ವಿಷಯಗಳ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಈ ಹಿಂದಿನ ಛಾಯಾಚಿತ್ರಗಳ ಪ್ರದರ್ಶನಗಳಿಗೆ ನೋಡುಗರಿಂದ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಿತ್ತು. ಛಾಯಾಚಿತ್ರ ಪ್ರದರ್ಶನದಲ್ಲಿ 60 ವಿವಿಧ ಛಾಯಾಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಟ್ರಾವೆಲ್ ಫೋಟೋಗ್ರಾಫಿ ವಿಷಯದಡಿಯಲ್ಲಿ ತೆಗೆದ ಪೋಟೊಗಳ ಪ್ರದರ್ಶನ ಗಮನ ಸೆಳೆಯಿತು.
ವಿಜಯಸಾಕ್ಷಿ ಸುದ್ದಿ, ಉಡುಪಿ: ನಾರಾಯಣಗುರು ಮಂದಿರಕ್ಕೆ ಕಳ್ಳರು ನುಗ್ಗಿ ಹುಂಡಿ ಒಡೆದು ಹಣ ಕದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಾಪು ತಾಲೂಕು ಮೂಳೂರು ಬಿಲ್ಲವ ಸಂಘದ ನಾರಾಯಣಗುರು ಮಂದಿರದ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, ಕಾಣಿಕೆ ಡಬ್ಬಿಯನ್ನು ಒಡೆದು ನಗದು ದೋಚಿ ಪರಾರಿಯಾಗಿದ್ದಾರೆ. ಘಟನೆ ಇಂದು ಬೆಳಗ್ಗೆ ಗೋಚರಕ್ಕೆ ಬಂದಿದೆ.
ನಾರಾಯಣಗುರು ದೇವಸ್ಥಾನ
ಅರ್ಚಕರು ಬೆಳಗ್ಗೆ ಪೂಜೆಗಾಗಿ ಆಗಮಿಸಿದ ವೇಳೆ ಕೃತ್ಯ ಗೊತ್ತಾಗಿದೆ. ನಾರಾಯಣ ಗುರು ಸಂಘದ ಪ್ರಮುಖರು ಕಾಪು ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿದ್ದಾರೆ.
ಬೆರಳಚ್ಚು ತಜ್ಞರು ಕಳ್ಳರ ಜಾಡು ಹಿಡಿಯಲು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಂದಿರಕ್ಕೆ ಸಿಸಿಟಿವಿ ಅಳವಡಿಸದ ಕಾರಣ ಕಳ್ಳರ ಪತ್ತೆ ಜಠಿಲವಾಗಬಹುದು. ಸುತ್ತಮುತ್ತಲ ಸಿಸಿಟಿವಿಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.
ವಿಜಯಸಾಕ್ಷಿ ಸುದ್ದಿ, ರಾಯಚೂರು: ಆಕಸ್ಮಿಕ ಬೆಂಕಿ ತಗುಲಿ ಗುಜರಿ ಅಂಗಡಿ ಬೆಂಕಿಯಿಂದ ಹೊತ್ತು ಉರಿದ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೋಟೆ ಏರಿಯಾದಲ್ಲಿ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದ್ದು, ಬೆಂಕಿ ಜ್ವಾಲೆಗೆ ಗುಜರಿ ಅಂಗಡಿಯಲ್ಲಿನ ಸಾಮಾನುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದು, ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಸಿಂಧನೂರು ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇಸ್ಪೀಟು ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಗದಗ ನಗರ ಹಾಗೂ ಗಜೇಂದ್ರಗಡ ಪೊಲೀಸರು ದಾಳಿ ಮಾಡಿ ಉದ್ಯಮಿ ಸೇರಿದಂತೆ 12 ಜನರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಗಜೇಂದ್ರಗಡ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಗದಗನ ನಗರ ಠಾಣೆಯ ಸಮೀಪದಲ್ಲಿಯೇ ಇರುವ ಆನಂದ ಮಾಂಸಾಹಾರಿ ಹೊಟೇಲ್ ಬಳಿಯ ಬಟಾ ಬಯಲು ಜಾಗೆಯಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಮಲ್ಲಿಕಾರ್ಜುನ ಬಸಪ್ಪ ಕುರ್ತಕೋಟಿ, ಫಕ್ಕಿರೇಶ್ ಸಿದ್ದಪ್ಪ ನ್ಯಾವಳ್ಳಿ, ಮಲ್ಲೇಶ್ ಲಕ್ಷ್ಮಣ್ ಚವ್ಹಾಣ, ಮಲ್ಲಿಕಾರ್ಜುನ ಪ್ರಭುಲಿಂಗಪ್ಪ ಕುಸುಗಲ್, ಮಾಬುಸಾಬ ದಾವಲಸಾಬ ಡಂಬಳ, ಅಶೋಕ ಶಂಕ್ರಪ್ಪ ಕೋಳಿವಾಡ, ಯಲ್ಲಪ್ಪ ಗವಿಯಪ್ಪ ಕೆಂಚಣ್ಣವರ, ಸಿದ್ದಲಿಂಗಯ್ಯ ಪ್ರಭಯ್ಯ ಮರಿಯಣ್ಣವರ, ಈರಣ್ಣ ಬಸಪ್ಪ ಹವಳಣ್ಣವರ್, ಹಾಗೂ ಅಶೋಕ ಬಸವರಾಜ್ ಉಳವಿ ಪೊಲೀಸರ ಬಲೆಗೆ ಬಿದ್ದವರು. ಬಂಧಿತರಿಂದ 11200 ರೂ,ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಗಜೇಂದ್ರಗಡ ತಾಲೂಕಿನ ಚಿಲಝರಿ ಗ್ರಾಮದ ಸರಕಾರಿ ಹಳ್ಳದ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ಬೆನ್ನತ್ತಿದ್ದ ಪೊಲೀಸರ ಕೈಗೆ ಇಬ್ಬರು ಸಿಕ್ಕಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಟೇಲರ್ ರೇವಣಸಿದ್ದಯ್ಯ ಚನ್ನಬಸಯ್ಯ ಚೌಕಿಮಠ, ಕೆಂಪಜಂಬಣ್ಣ ಮಾರಿಯಪ್ಪ ರಾಹುಲ್ ಅವರಿಂದ 7100 ವಶಪಡಿಸಿಕೊಂಡಿದ್ದಾರೆ. ಪರಶಪ್ಪ ದುರಗಪ್ಪ ದಾರೋತ್ತರ ಹಾಗೂ ಕುಮಾರ್ ದಾರಪ್ಪ ರಾಠೋಡ ಪರಾರಿಯಾಗಿದ್ದಾರೆ.
ಸಹಾಯಕ/ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಮುಹೂರ್ತ ನಿಗದಿಪಡಿಸಿದೆ.
ಮುಂದೂಡಲಾಗಿದ್ದ ಪರೀಕ್ಷೆಗಳಿಗೆ ಮರು ದಿನಾಂಕ ನಿಗದಿ ಪಡಿಸಿದ್ದು, ಫೆಬ್ರುವರಿ 28 ರ ಭಾನುವಾರದಂದು ಪರೀಕ್ಷೆಗಳು ಜರುಗಲಿವೆ ಎಂದು ಕೆಪಿ ಎಸ್ ಸಿ ಪ್ರಕಟಣೆ ತಿಳಿಸಿದೆ.
ಜನವರಿ 24 ರಂದು ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಮುಂದೂಡಿತ್ತು. ಇದು ಪರೀಕ್ಷಾರ್ಥಿಗಳಲ್ಲಿ ನಿರಾಸೆಯನ್ನುಂಟು ಮಾಡಿತ್ತು.
ವಿಜಯಸಾಕ್ಷಿ ಸುದ್ದಿ, ಗದಗ: ಖಾತಾ ಬದಲಾವಣೆಗೆ ಲಂಚದ ಬೇಡಿಕೆ ಇಟ್ಟು ಲಂಚ ಪಡೆಯುವಾಗ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ.
ಶಿರಹಟ್ಟಿ ಪಟ್ಟಣದ ಮಹೇಶ್ ಡಿ ಆರ್ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಶಿರಹಟ್ಟಿ ಪಟ್ಟಣ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ಶರಣಪ್ಪ ಮಹದೇವಪ್ಪ ಗೌಳಿ ಎಂಬುವರನ್ನು ಲಂಚದ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿ ವಂಶಕ್ಕೆ ಪಡೆದಿದ್ದಾರೆ.
ಆರೋಪಿ ಶರಣಪ್ಪ ಗೌಳಿ ಖಾತಾ ಬದಲಾವಣೆ ಮಾಡಿ ಕಂಪ್ಯೂಟರ್ ಉತಾರ ನೀಡಲು ಮಹೇಶ್ ಅವರಿಗೆ 3500 ಲಂಚದ ಬೇಡಿಕೆ ಇಟ್ಟಿದ್ದ. ಈ ಕುರಿತು ಮಹೇಶ್ ಎಸಿಬಿಗೆ ದೂರು ನೀಡಿದ್ದರು. ಇಂದು ಲಂಚದ ಹಣ ನೀಡುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆರೋಪಿತ ಶರಣಪ್ಪನನ್ನು ವಶಕ್ಕೆ ಪಡೆದಿದ್ದಾರೆ.
ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ಎನ್ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಗಳಾದ ಆರ್ ಎಫ್ ದೇಸಾಯಿ, ವೈ ಎಸ್ ಧರಣಾ ನಾಯಕ್, ಸಿಬ್ಬಂದಿಗಳಾದ ಎಂ ಎಂ ಅಯ್ಯನಗೌಡರ್, ಆರ್ ಎಚ್ ಹೆಬಸೂರು, ಎನ್ ಎಸ್ ತಾಯಣ್ಣವರ್, ವೀರೇಶ್ ಜೋಳದ್, ಐ ಸಿ ಕರಿಗಾರ ಹಾಗೂ ತಾರಪ್ಪ ದಾಳಿಯಲ್ಲಿ ಭಾಗವಹಿಸಿದ್ದರು.
ಖೊಟ್ಟಿ ದಾಖಲೆ ಸಲ್ಲಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಇದರಿಂದ ಮೂಲ ದಲಿತರಿಗೆ ಅನ್ಯಾಯವಾಗಿದೆ ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ನೂರಾರು ಕಾರ್ಯಕರ್ತರು ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಪಂಚಾಯತಿಗೆ ಬೀಗ ಹಾಕಿ ಪ್ರತಿಭಟಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲು ಬಂದಿರುವ ಬಾಲೇಹೊಸೂರು ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಡಿಎಸ್ಎಸ್ ಮುಖಂಡ ಸುರೇಶ್ ನಂದೆಣ್ಣವರ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ಗ್ರಾಪಂಗೆ ಬೀಗ ಜಡಿದು ಧರಣಿ ನಡೆಸುತ್ತಿದ್ದಾರೆ.
ಖೊಟ್ಟಿ ದಾಖಲೆಗೆ ಸಂಬಂಧಿಸಿದಂತೆ ಧಾರವಾಡ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಪ್ರಕರಣ ಇತ್ಯರ್ಥವಾಗುವವರೆಗೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.
ಖೊಟ್ಟಿ ದಾಖಲೆ ಸಲ್ಲಿಸಿ ಸ್ಪರ್ಧಿಸುತ್ತಿರುವವರಿಗೆ ಈಗಾಗಲೇ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದ್ದು, ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ರದ್ದುಗೊಳಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.