Home Blog Page 3195

ಶಿರಹಟ್ಟಿ ತಾಲ್ಲೂಕಿನ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ: ಯಾವ ಪಂಚಾಯತಿಗೆ ಯಾವ ಕೆಟಗರಿ? ಇಲ್ಲಿದೆ ಮಾಹಿತಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ 14 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ರವಿವಾರ ಪ್ರಕಟವಾಗಿದೆ.

ಗ್ರಾಮ ಪಂಚಾಯತಿಯ ಮೀಸಲಾತಿ ವಿವರ ಈ ಕೆಳಗಿನಂತಿವೆ.

ಗದಗ ಜಿಲ್ಲೆಯ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಗೆ ಡೆಡ್ ಲೈನ್ ಫಿಕ್ಸ್: ಯಾವಾಗ, ಎಲ್ಲಿ?

ಬೆಳ್ಳಟ್ಟಿ ಹಾಗೂ ಮಾಗಡಿ ಗ್ರಾಮ ಪಂಚಾಯತಿ- ಅಧ್ಯಕ್ಷ- ಹಿಂದುಳಿದ ‘ಅ’ ವರ್ಗ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ

ಬನ್ನಿಕೊಪ್ಪ ಗ್ರಾ.ಪಂ- ಅಧ್ಯಕ್ಷ – ಹಿಂದುಳಿದ ‘ಬ’ ವರ್ಗ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

ಛಬ್ಬಿ ಗ್ರಾ.ಪಂ- ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

ಕೋಗನೂರು ಗ್ರಾ.ಪಂ. ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ

ಮಾಚೇನಹಳ್ಳಿ ಗ್ರಾ.ಪಂ- ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ

ರಣತೂರು ಗ್ರಾ.ಪಂ- ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ

ತಾರಿಕೊಪ್ಪ ಗ್ರಾ.ಪಂ- ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ

ಹೆಬ್ಬಾಳ ಗ್ರಾ.ಪಂ- ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಪರಿಶಿಷ್ಟ ಜಾತಿ

ಹೊಳೆಇಟಗಿ ಗ್ರಾ.ಪಂ- ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ

ವಡವಿ ಗ್ರಾ.ಪಂ ಅಧ್ಯಕ್ಷ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ- ಸಾಮಾನ್ಯ

ಕಡಕೋಳ ಹಾಗೂ ಮಜ್ಜೂರು ಗ್ರಾ.ಪಂ- ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ

ಕೊಂಚಿಗೇರಿ ಗ್ರಾ.ಪಂ- ಅಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ‘ಬ’ ವರ್ಗ

ಕಪ್ಪತಗುಡ್ಡಕ್ಕೆ ಹಾನಿ‌ ಆಗುವಂತಿದ್ದರೆ ಗಣಿಗಾರಿಕೆಗೆ ಅನುಮತಿ ಕೊಡಲ್ಲ: ಸಚಿವ ಸಿ ಸಿ ಪಾಟೀಲ್

ವಿಜಯಸಾಕ್ಷಿ ಸುದ್ದಿ, ಗದಗ

ಶಿವಮೊಗ್ಗದಲ್ಲಿ ನಡೆದ ಘಟನೆ ದುರಾದೃಷ್ಟಕರ. ಘಟನೆ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಉತ್ತರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳುತ್ತದೆ. ಜಿಲೆಟಿನ್ ಬಳಸಲು ಪರವಾನಗಿ ಕೊಡುವ ಅಧಿಕಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಿಲ್ಲ ಎಂದು ಸಣ್ಣ ಕೈಗಾರಿಕೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ಕಪ್ಪತ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಜಿಲ್ಲೆಯ ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಗುಡ್ಡಕ್ಕೆ ಹಾನಿ ಮಾಡುವ ಯಾವುದೇ ಗಣಿಗಾರಿಕೆ ಮಾಡಲು ಅನುಮತಿ ಕೊಡುವುದಿಲ್ಲ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿದ್ದೇವೆ. ಅಂತವರಿಗೆ ಈಗಾಗಲೇ ನೋಟಿಸ್ ನೀಡಿ ಬಂದ್ ಮಾಡಿಸಿದ್ದೇವೆ. ಅಲ್ಲದೇ, ಕ್ರಷರ್ ಘಟಕಗಳನ್ನು ಬಂದ್ ಮಾಡಲಾಗಿದೆ. ಒಂದು ವೇಳೆ ನಡೆಯುತ್ತಿದ್ದರೆ, ಗಮನಕ್ಕೆ ತಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ನಾನು‌ ಪಕ್ಷದ ಶಿಸ್ತಿನ‌ ಸಿಪಾಯಿ, ಖಾತೆ ಬದಲಾವಣೆ ವಿಷಯದಲ್ಲಿ ಯಾವುದೇ ಅಸಮಾಧಾನವಿಲ್ಲ.
ಸಿಎಂ ನೀಡಿರುವ ಹೊಸ ಖಾತೆಯನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ನನ್ನನ್ನು ರೆಸಾರ್ಟ್ ರಾಜಕಾರಣಕ್ಕೆ ಹೋಲಿಸಬೇಡಿ. ಮೊದಲು ಶಾಸಕನಾಗಬೇಕು ಅಂತಾ ಬಡದಾಡುತ್ತೇವೆ. ಶಾಸಕನಾದ ಮೇಲೆ ಪಕ್ಷ ಅಧಿಕಾರಕ್ಕೆ ಬರಬೇಕು ಅಂತಾ ಚಿಂತೆ ಮಾಡುತ್ತೇವೆ.
ಅಧಿಕಾರಕ್ಕೆ ಬಂದ ಮೇಲೆ ಮಂತ್ರಿಯಾಗಬೇಕೆಂದು ಬಯಸುತ್ತೇವೆ. ಸಚಿವನಾದ ಮೇಲೆ ಖಾತೆಗಾಗಿ ಪ್ರಯತ್ನಿಸುತ್ತೇವೆ. ಇದು ಮನುಷ್ಯನ ಮಾನಸಿಕ ದೌರ್ಬಲ್ಯ. ಇಂತಹ ದೌರ್ಬಲ್ಯದಿಂದ ನಾನು ದೂರ ಇದ್ದೇನೆ ಎಂದು ಹೇಳಿದರು.

ರೆಸಾರ್ಟ್ ರಾಜಕಾರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,
ರೆಸಾರ್ಟ್ ರಾಜಕಾರಣ ಅಂತಾ ನಾನು ಒಪ್ಪುವುದಿಲ್ಲ. ಸಚಿವ ರಮೇಶ ಜಾರಕಿಹೊಳಿಗೆ ಕರೆ ಮಾಡಿದಾಗ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳ ಸಲುವಾಗಿ ನಾನು ರೆಸಾರ್ಟ್ ನಲ್ಲಿದ್ದೇನೆ ಅಂತಾ ಹೇಳಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡಾರಾದ ಪ್ರಶಾಂತ ನಾಯ್ಕರ್, ಶಿವರಾಜ್ ಹಿರೇಮನಿಪಾಟೀಲ ಸೇರಿದಂತೆ ಹಲವರು ಇದ್ದರು.

ಖಾತೆ ಬದಲಾವಣೆ ನೋವುಂಟು ಮಾಡಿದೆ: ಸಂಕನೂರ ಹೇಳಿಕೆಗೆ ಸಚಿವ ಸಿ.ಸಿ.ಪಾಟೀಲ್ ತಿರುಗೇಟು

ವಿಜಯಸಾಕ್ಷಿ ಸುದ್ದಿ, ಗದಗ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಸಚಿವರಾಗಿದ್ದ ಸಿ.ಸಿ.ಪಾಟೀಲ್ ಅವರಿಂದ ಖಾತೆ ಬದಲಾವಣೆ ಮಾಡಿದ್ದು ಬಹಳ ನೋವನ್ನುಂಟು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಬೇಸರ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕಪ್ಪತ ಉತ್ಸವ-2021 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಈ ವಿಷಯ ಹೇಳಿದರು.

ಸಚಿವ ಸಿ.ಸಿ.ಪಾಟೀಲ್ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಇದ್ದಕ್ಕಿದ್ದ ಹಾಗೆ ಖಾತೆ ಬದಲಾವಣೆ ಮಾಡಿ ಸಿಸಿ ಪಾಟೀಲ್ ಅವರಿಗೆ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ ಖಾತೆ ನೀಡಿದ್ದಾರೆ. ಆದರೆ, ಖಾತೆ ಬದಲಾವಣೆ ಯಾಕೆ ಮಾಡಿದರು ಎಂಬುವುದು ಮುಖ್ಯಮಂತ್ರಿಗಳಿಗೆ ಗೊತ್ತು. ಇದರಿಂದ ತುಂಬಾ ನೋವಾಗಿದೆ ಎಂದು ವಿಧಾ‌ನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ವಿಷಾದ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿ ಸಿ.ಸಿ.ಪಾಟೀಲ ಅವರು, ನನ್ನ ಬಗ್ಗೆ ಎಸ್.ವಿ.ಸಂಕನೂರ ಅವರು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅವರಿಗೆ ನಾನು ಅಭಾರಿಯಾಗಿದ್ದೇನೆ. ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ, ಖಾತೆ ಬದಲಾವಣೆ ಬಗ್ಗೆ ನಾನು ಕೂದಲೆಳೆಯಷ್ಟು ಅಸಮಧಾನವಾಗಿಲ್ಲ, ಬೇಸರವೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿದ್ದರು. ಆಗ ಭಾಗ್ಯಲಕ್ಷ್ಮೀ ಮತ್ತು ಬಾಲ ಸಂಜೀವಿನಿ ಯೋಜನೆಗಳನ್ನು ಜಾರಿಗೊಳಿಸಿರುವ ಕೀರ್ತಿ ಇದೆ. ಅದನ್ನು ಅಳಿಸಿ ಹಾಕಲು ಸಾಧ್ಯವಿಲ್ಲ ಎಂದರು.

ಈ ಬಾರಿ ಗಣಿ‌ ಮತ್ತು ಭೂ ವಿಜ್ಞಾನ ಇಲಾಖೆ ಕೊಟ್ಟಿದ್ದರು. ಅವ್ಯವಸ್ಥೆಯ ಆಗರವಾಗಿತ್ತು. ಅಕ್ರಮ ಗಣಿಗಾರಿಕೆ ಚಟುವಟಿಕೆ ತಡೆಯಲು ಪ್ರಾಮಾಣಿಕವಾಗಿ ಪ್ರಯತ್ನಸಿದ್ದೇನೆ. ಖಾತೆ ಬದಲಾವಣೆ ಸಿಎಂ ಪರಾಮಾಧಿಕಾರ. ಪ್ರತಿ ಜಿಲ್ಲೆಗೂ ಅವಶ್ಯವಾಗುವ ಸಣ್ಣ ಕೈಗಾರಿಕೆ ಕೊಟ್ಟಿದ್ದಾರೆ. ಅದರ ಜೊತೆಗೆ ಸಿಎಂ ಬಳಿಯೇ ಇರಬೇಕಾದ ಖಾತೆಯನ್ನು ನನ್ನ ಮೇಲೆ ವಿಶ್ವಾಸವಿಟ್ಟು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಟ್ಟಿದ್ದಕ್ಕೆ ಯಡಿಯೂರಪ್ಪ ಅವರಿಗೆ ಅಭಾರಿಯಾಗಿದ್ದೇನೆ ಎಂದು ಅಭಿಪ್ರಾಯಪಟ್ಟರು.

ಗಣಿ ಮತ್ತು ಅರಣ್ಯ ಇಲಾಖೆಗಳೆರಡು ಎಣ್ಣೆ ಸೀಗೆಕಾಯಿ ಸಂಬಂಧವಿದ್ದಂತೆ. ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಗಣಿಗಾರಿಕೆ ಬೇಕು. ನಾಳಿನ ಪರಿಸರ ಬೇಕಾದರೆ ಅರಣ್ಯ ಉಳಿಯಲೇಬೇಕು. ಅವೆರಡೂ ಇಲಾಖೆಗಳನ್ನೂ ಸಮರ್ಥವಾಗಿ ನಿಭಾಯಿಸಿದ ತೃಪ್ತಿ ನನಗೆ ಇದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಬಿಜೆಪಿ ಮಂತ್ರಿಗಳ ಮುಖಂಡತ್ವದಲ್ಲಿ ಮೂಜಗಂ ಮಠದ 500 ಕೋಟಿ ರೂ. ಆಸ್ತಿ‌ ನಾಶ, ಹಿಂದೂಗಳು ಎಷ್ಟೋ ಮಂದಿರ ದ್ವಂಸಗೊಳಿಸಿರುವ ಉದಾಹರಣೆಗಳಿವೆ: ದಿಂಗಾಲೇಶ್ವರಶ್ರೀ

ವಿಜಯಸಾಕ್ಷಿ ಸುದ್ದಿ, ಗದಗ

ಹಿಂದೂ ದೇವಾಸ್ಥಾನ ನಾಶ ಮಾಡಿದ ಮುಸ್ಲಿಂ ದೊರೆಗಳ ಬಗ್ಗೆ ನಾವು ಭಾಷಣ ಮಾಡುತ್ತೇವೆ. ಆದರೆ, ಹಿಂದೂಗಳೇ ಎಷ್ಟೋ ದೇವಾಲಯಗಳನ್ನು ನಾಶ ಮಾಡಿರುವ ಉದಾಹರಣೆಗಳು ನಮ್ಮ ಕಣ್ಣರದುರಿಗೆ ಇವೆ.
ಕೇವಲ ಪರ ಧರ್ಮಿಯರು ಮಂದಿರ ನಾಶಗೊಳಿಸಿದರಷ್ಟೇ ತಪ್ಪಲ್ಲ, ಸ್ವಧರ್ಮಿಯರು ನಾಶಗೊಳಿಸಿದರೂ ಅಷ್ಟೇ ತಪ್ಪು ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟರು.

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಪ್ರಯುಕ್ತವಾಗಿ ಲಕ್ಷ್ಮೇಶ್ವರದಲ್ಲಿ ಶನಿವಾರ ಸಂಜೆ ನಡೆದ ನಿಧಿ ಸಮರ್ಪಣಾ ಅಭಿಯಾನದ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ಶಕ್ತಿ, ಸಂಸ್ಕೃತಿ ನಾಶವಾದ ಹಾಗೆ, ನಮ್ಮ ದೇವಾಲಯಗಳು ಮಠಗಳು ನಾಶವಾಗಬಾರದು ಎಂಬುವುದಕ್ಕೆ ನೀವು ಒಂದು ಸಾರಿ ಬ್ರಿಟಿಷ್ ಮತ್ತು ಮುಸ್ಲಿಂ ದೊರೆಗಳ ಕುತಂತ್ರ ಓದಿಕೊಂಡಾಗ, ಯಾಕೆ ದೇವಾಲಯಗಳನ್ನು ರಕ್ಷಣೆ ಮಾಡಬೇಕು ಎಂಬುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.

ಸದ್ಯಕ್ಕೆ ಹುಬ್ಬಳ್ಳಿ ಮೂರು ಸಾವಿರ ಮಠದ ಆಸ್ತಿ 500 ಕೋಟಿ ರೂ. ಹೋಗಿದೆ. ಅದು ಬಿಜೆಪಿ ಮಂತ್ರಿಗಳ ಮುಖಂಡತ್ವದಲ್ಲಿ ಹೋಗಿದ್ದು, ಅದಕ್ಕೆ ಓರ್ವ ಕಾಂಗ್ರೆಸ್ ಹಾಗೂ ಇನ್ನೋರ್ವ ಜೆಡಿಎಸ್ ಮುಖಂಡ ಸಾಥ್ ನೀಡಿದ್ದಾರೆ. ನಾವು ದೊಡ್ಡ ಪ್ರಮಾಣದಲ್ಲಿ ದೇವಾಲಯ, ಮಠಗಳನ್ನು ಉಳಿಸಬೇಕೆಂದು ಹೋರಾಟ ಮಾಡುತ್ತಿದ್ದೇವಲ್ಲಾ. ಮಕ್ಕಳಿಗೆ ಅನ್ನ ಹಾಕಿ, ವಿದ್ಯೆ ಕೊಟ್ಟ ಮಠದ 500 ಕೋಟಿ ರೂ. ನಾಶವಾಗಿದೆ. ನನ್ನ ಸಲುವಾಗಿ ನೂರು ತರಹದ ತಪ್ಪು ಕಲ್ಪನೆ ಬಿತ್ತರಿಸುತ್ತಿದ್ದಾರೆ. ಯಾರು ಈ ದೇಶದ ಇತಿಹಾಸದಲ್ಲಿ ಸಾರ್ವಜನಿಕ ಮಠ, ಮಂದಿರ, ಆಶ್ರಮಗಳನ್ನು ಉಳಿಸಬೇಕೆಂದು ಹೋಗುತ್ತಾರೆಯೋ ಅವರ ವಿರುದ್ಧ ಅಪಪ್ರಚಾರ ನಡೆಯುತ್ತದೆ ಎಂದರು.

ಈಗಾಗಲೇ ಸಾವಿರಾರು ದೇವಸ್ಥಾನಗಳು ನಾಶವಾಗಿವೆ. ಇನ್ನುಳಿದವುಗಳನ್ನು ಉಳಿಸಬೇಕೆಂದರೆ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಸ್ಥೆ ಪರಾಧೀನವಾಗದಂತೆ ಸರ್ಕಾರ ಕಾನೂನು ರೂಪಿಸಬೇಕು.
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಸರ್ಕಾರವಾಗಿರಲಿ ನಮ್ಮ ದೇವಸ್ಥಾನದ ಆಸ್ತಿ ಮುಟ್ಟುವವರ ವಿರುದ್ಧ ಹೋರಾಟ ಆಗಲೇಬೇಕು ಎಂದು ದಿಂಗಾಲೇಶ್ವರ ಶ್ರೀಗಳು ಒತ್ತಾಯಿಸಿದರು.

ಬಸ್ ನಿಲ್ದಾಣ ಉದ್ಘಾಟನೆ, ತೋಂಟದ ಶ್ರೀ, ಕಲ್ಲಯ್ಯಜ್ಜನವರಿಗಿಲ್ಲ ಆಹ್ವಾನ: ಭಕ್ತರ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಹೃದಯ ಭಾಗದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನವೀಕೃತ ಬಸ್ ನಿಲ್ದಾಣವನ್ನು ಭಾನುವಾರ ಸಂಜೆ 4 ಗಂಟೆಗೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಲಿದ್ದಾರೆ.

ಜಿಲ್ಲೆಯ ಜನರ ಬೇಡಿಕೆಯಂತೆ ನವೀಕರಣಗೊಂಡಿರುವ ಹಳೇ ಬಸ್ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಕಡೆಗೂ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಹೆಸಯ ನಾಮಕರಣ ಮಾಡಿದೆ.

ಆದರೆ, ಇಂದು ನಡೆಯುತ್ತಿರುವ ಬಸ್ ನಿಲ್ದಾಣದ ಲೋಕಾರ್ಪಣೆಗೆ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಾಗೂ ತೋಂಟದಾರ್ಯ ಮಠದ ಸಿದ್ದರಾಮ ಮಹಾಸ್ವಾಮೀಜಿ ಅವರನ್ನು ಆಹ್ವಾನ ಮಾಡದೇ ಜಿಲ್ಲಾಡಳಿತ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಪಮಾನವೆಸಗಿದೆ ಎಂದು ಉಭಯ ಮಠಗಳ
ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪೋಸ್ಟ್ ಗಳು ಹರಿದಾಡುತ್ತಿವೆ. ಪುಟ್ಟಯ್ಯಜ್ಜನವರ ಬಸ್ ನಿಲ್ದಾಣದ ಲೋಕಾರ್ಪಣೆಗೆ ಅದೇ ಮಠದ ಪೀಠಾಧಿಪತಿಗಳನ್ನು ಆಹ್ವಾನಿಸದಿರುವುದು ಎಷ್ಟು ಸರಿ ಎಂದು ಜಿಲ್ಲೆಯ ಜನತೆ ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಾಮಾಚಾರ:ನಿಧಿಯಾಸೆಗೆ ನೆಲ ಅಗೆದ ಖದೀಮರು

ವಿಜಯಸಾಕ್ಷಿ ಸುದ್ದಿ, ಮುಳಗುಂದ

ಇಲ್ಲಿನ ಗದಗ-ಲಕ್ಷ್ಮೇಶ್ವರ ರಸ್ತೆಯ ಹುಣಸಿಮರದ ಕೆರೆ ಹತ್ತಿರವಿರುವ ಬಸವಣ್ಣನ ಗುಡಿ ಮುಂದೆ ನಿಧಿ ಆಸೆಗಾಗಿ ವಾಮಾಚಾರ ನಡೆಸಿ ನೆಲ ಅಗೆದಿರುವ ಘಟನೆ ಬೆಳಕಿಗೆ ಬಂದಿದೆ.

ಕೆರೆ ದಂಡೆಯಲ್ಲಿರುವ ಗುಡಿಯಲ್ಲಿ ಲಿಂಬೆ ಹಣ್ಣು, ಕುಂಕುಮ ಲೇಪಿತ ಅಕ್ಷತೆ, ತಾಮ್ರದ ತಗಡಿನ ತುಂಡು ಇಟ್ಟು ವಾಮಾಚಾರ ಮಾಡಿದ್ದಾರೆ. ಬಳಿಕ ಗುಡಿ ಮುಂದಿನ ಭರಮ ದೇವರ ಕಟ್ಟಿ ಕಲ್ಲು ಕಿತ್ತು ಜೆಸಿಬಿ ಬಳಸಿ ಸುಮಾರು ಹತ್ತು ಅಡಿ ಆಳದವರೆಗೆ ತಗ್ಗು ತೆಗೆದಿದ್ದಾರೆ. ಹೊಲಕ್ಕೆ ಬಂದ ಅಶೋಕ ಹುಣಸಿಮರದ ಇದನ್ನು ನೋಡಿ ಆಶ್ಚರ್ಯ ಚಕಿತರಾಗಿ ಗ್ರಾಮಸ್ಥರನ್ನು ಕರೆದು ಪರಿಶೀಲಿಸಿದಾಗ ಇದು ನಿಧಿ ಕಳ್ಳರ ಕೃತ್ಯ ಎಂದು ತಿಳಿದು ಬಂದಿದೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ, ರಸ್ತೆ ಪಕ್ಕ ಕೆರೆ ಇರುವುದರಿಂದ ವಾಹನ ಸವಾರು ಗುಡಿ ಹತ್ತಿರ ಕುಳಿತು ನೀರು ಕುಡಿದು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ. ರೈತರು ಸಹ ಕುಡಿಯಲು ಇದೇ ನೀರು ಬಳಸುತ್ತಾರೆ. ಈ ಜಾಗದಲ್ಲಿ ನಿಧಿಗಾಗಿ ದುರುಳರು ನೆಲ ಅಗೆದಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಸ್ಥಳಕ್ಕೆ ಮುಳಗುಂದ ಪೋಲಿಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಅಂದರ್-ಬಾಹರ್ : 12 ಜನರ ಬಂಧನ, 6 ಜನ ಪರಾರಿ

0

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ವಡವಿ ಹೊಸೂರು ಹಾಗೂ ಹರಿಪುರ ಗ್ರಾಮದಲ್ಲಿ ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದ 12 ಜನರನ್ನು ಬಂಧಿಸಲಾಗಿದ್ದು, 6 ಜನ ಪರಾರಿಯಾಗಿದ್ದಾರೆ. ಬಂಧಿತರಿಂದ ಸುಮಾರು 9300 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ.

ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ನಾಯಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಹರಿಪುರ ಗ್ರಾಮದ ಗುರುಪಾದಯ್ಯ ಸಿದ್ದರಾಮಯ್ಯ ಹಡಗಲಿಮಠ, ಶಂಕ್ರಪ್ಪ ಅಮರಪ್ಪ ಶಿವಶಿಂಪರ್, ಮಾಬುಸಾಬ ರಾಜೇಸಾಬ್ ಒಂಟಿ, ಶರಣಯ್ಯ ಸಿದ್ದರಾಮಯ್ಯ ಹಡಗಲಿಮಠ, ವೀರಭದ್ರಪ್ಪ ವೀರಪ್ಪ ಮುರಶಿಲ್ಲಿ, ಶಂಕ್ರಪ್ಪ ಗಂಗಪ್ಪ ಸೋಂಟಪುರ, ಶಿರಹಟ್ಟಿ ಪಟ್ಟಣದ ಫಕ್ಕೀರೇಶ್ ಮಾಯಪ್ಪ ವಾಲಿಕಾರ, ಮಂಜಪ್ಪ ಶೆಟ್ಟೆಪ್ಪ ಕುರಿ ಹಾಗೂ ನಿತೀಶ್ ವೀರನಗೌಡ ಮಣಕವಾಡ ಎಂಬುವವರನ್ನು ಬಂಧಿಸಲಾಗಿದೆ.

ಅದರಂತೆ ವಡವಿ ಹೊಸೂರು ಗ್ರಾಮದಲ್ಲಿ ಜಿಲ್ಲಾ ಅಪರಾಧ ವಿಭಾಗದ ಟಿ.ಮಹಾಂತೇಶ ನೇತೃತ್ವದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಆರು ಜನ ಪರಾರಿಯಾಗಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣದ ಸೈಯದ್ ಬಾಬುಸಾಬ ದರೇಖಾನ್, ಬಾಲೇಹೊಸೂರು ಗ್ರಾಮದ ಶೇಖಪ್ಪ ಬಸಪ್ಪ ಒಂಟಿಪಡೆಪ್ಪನವರ, ಕೊಗಾನೂರಿನ ಶರಣಬಸಪ್ಪ ಬಸವರಾಜ್ ಚೆನ್ನೂರು ಬಂಧಿತರಾಗಿದ್ದಾರೆ.

ವಡವಿ ಹೊಸೂರು ಗ್ರಾಮದ ಮೌನೇಶ್ ಬಡಿಗೇರ, ಹೇಮಂತ್, ಹಾಲಪ್ಪ ಭಾವಿಮನಿ, ಯಲ್ಲಪ್ಪ ನೀಲಪ್ಪ ಬೈರಮ್ಮನವರ, ಲಕ್ಷ್ಮೇಶ್ವರದ ನೌಶಾದ್ ಆಡೂರ ಹಾಗೂ ಮುರಡಿಯ ಕೃಷ್ಣಾ ಮುರಡಿ ಪರಾರಿಯಾಗಿರುವ ಆರೋಪಿಗಳಾಗಿದ್ದಾರೆ.

ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಕಪ್ಪತ’ಗಿರಿ ಬಿಟ್ಟು ನಗರದಲ್ಲೇಕೆ ಉತ್ಸವ?: ಉತ್ಸವದ ನೆಪದಲ್ಲಿ ಸರ್ಕಾರದ ಹಣ ಲೂಟಿ ಆರೋಪ?

0
  • ಕಾಡಂಚಿನ 32 ಹಳ್ಳಿ ಜನರಿಗಿಲ್ಲ ಜಾಗೃತಿ

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ

ಕಪ್ಪತಗುಡ್ಡ ಬಯಲು ಸೀಮೆಯ ಸಹ್ಯಾದ್ರಿ ಎಂದೇ ಪ್ರಖ್ಯಾತಿ ಪಡೆದಿದ್ದು, ತನ್ನೊಡಲೊಳಗೆ ಅಪಾರ ಪ್ರಮಾಣದ ಔಷಧೀಯ ಸಸ್ಯಗಳು, ವನ್ಯಜೀವಿ, ಖನಿಜ ಸಂಪತ್ತು ಶೇಖರಿಸಿಕೊಂಡಿದೆ. ಸಂಪತ್ಭರಿತ ಪ್ರದೇಶದೊಂದಿಗೆ ಜಿಲ್ಲೆಯನ್ನು ಶ್ರೀಮಂತಗೊಳಿಸಿ ಪ್ರಾಕೃತಿಕ ಸೌಂದರ್ಯ ಹೆಚ್ಚಿಸಿದೆ.

ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪ್ರತಿವರ್ಷ ಕಪ್ಪತ ಉತ್ಸವ ಹಮ್ಮಿಕೊಳ್ಳುತ್ತಿದ್ದು, ಅಧಿಕಾರಿಗಳು ಕಪ್ಪತಗುಡ್ಡದ ಸೆರಗಿನ ಹಳ್ಳಿಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹರಡಿರುವ ಕಪ್ಪತ್ತಗುಡ್ಡದ ಉತ್ಸವ ಗದಗನಲ್ಲಿ ಆಚರಣೆ ಮಾಡುವುದು ಬಿಟ್ಟು ಕಪ್ಪತ್ತಗುಡ್ಡದಲ್ಲಿಯೇ ಆಚರಿಸಬೇಕು ಎಂದು ಗುಡ್ಡದಂಚಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಮಾರು 80 ಕಿ.ಮೀ. ವಿಸ್ತೀರ್ಣದ ಕಪ್ಪತಗುಡ್ಡ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕು ವ್ಯಾಪ್ತಿಯುದ್ದಕ್ಕೂ ಚಾಚಿಕೊಂಡಿದ್ದು, 32 ಹಳ್ಳಿಗಳನ್ನು ಒಳಗೊಂಡಿದೆ. ಹೇರಳ ಔಷಧ ಸಸ್ಯಗಳನ್ನೊಳಗೊಂಡಿರುವ ಕಪ್ಪತಗುಡ್ಡ ಹಚ್ಚ ಹಸಿರಿನಿಂದ ಕಂಗೊಳಿಸುತ್ತ ಮನಸ್ಸಿಗೆ ಮುದ ನೀಡುತ್ತಿದೆ. ವನ್ಯಜೀವಿಗಳು, ವಿವಿಧ ಸಸ್ಯ ಪ್ರಭೇದಗಳು, ವನಸ್ಪತಿ ಹಾಗೂ ಹಳ್ಳಕೊಳ್ಳಗಳನ್ನು ಹೊಂದಿರುವ ಕಪ್ಪತಗುಡ್ಡ ಸದ್ಯ ಮಾನವನ ದುರಾಸೆಯಿಂದಾಗಿ ನಶಿಸಿ ಹೋಗುತ್ತಿದೆ.

ಬೇಸಗೆಯಲ್ಲಿ ಗುಡ್ಡಕ್ಕೆ ಬೆಂಕಿ

ಬೇಸಗೆಯಲ್ಲಿ ಕಾಡಂಚಿನ ಪ್ರದೇಶದಲ್ಲಿ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಹಾಗೂ ವಿಂಡ್ ಮಿಲ್‌ಗಳಿಂದ ಉಂಟಾಗುವ ಕಿಡಿಯಿಂದ ಅನೇಕ ಜೀವ, ಸಸ್ಯ ಸಂಪತ್ತು ಸುಟ್ಟು ಕರಕಲಾಗುತ್ತಿದೆ. ಮಲ್ಲಯ್ಯನ ನೆತ್ತಿ ಸುಟ್ಟರೆ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂಬ ಮೂಢನಂಬಿಕೆ ಹೋಗಲಾಡಿಸಿ ಕಾಡಂಚಿನ ಜನರಲ್ಲಿ ಜಾಗೃತಿ ಮೂಡಿಸಬೇಕು.

ಗಣಿ ಕುಳಗಳ ಕಣ್ಣು

ಜಿಲ್ಲೆಯ ಪ್ರಕೃತಿ ಸೌಂದರ್ಯ ಹೆಚ್ಚಿಸಿದ ರಮಣೀಯ ಸಂಪತ್ಭರಿತ ಗುಡ್ಡದ ಮೇಲೆ ಗಣಿ ಕುಳಗಳ ಕಣ್ಣು ಬಿದ್ದಿದೆ. ಕಪೋತಗಿರಿಯನ್ನು ನಾಶಗೊಳಿಸಲು ಅವರೆಲ್ಲ ಹೊಂಚು ಹಾಕಿ ಕುಳಿತಿರುವುದು ದುರದೃಷ್ಟಕರ. ಹಾಗಾಗಿ ಪ್ರಾಣಿ ಪಕ್ಷಿಗಳನ್ನು ಒಕ್ಕಲೆಬ್ಬಿಸುವ ಜನರನ್ನ ಮಟ್ಟ ಹಾಕಬೇಕಿದೆ.

ಗುಡ್ಡದೊಂದಿಗೆ ಭಾವನಾತ್ಮಕ ಸಂಬಂಧ

ಕಪ್ಪತ್ತಗುಡ್ಡದ ಸುತ್ತಲಿನಲ್ಲಿ 32 ಹಳ್ಳಿಗಳು ಬರುತ್ತವೆ. ಈ ಹಳ್ಳಿಗಳ ಜನರು ಕಪ್ಪತ್ತಗುಡ್ಡದ ಜೊತೆಯಲ್ಲಿ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಕಪ್ಪತ್ತಗುಡ್ಡದ ಸಂರಕ್ಷಣೆ ಮಾಡುವ ಹೊಣೆಗಾರಿಕೆಯೂ ಇಲ್ಲಿನ ಜನರ ಮೇಲಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಪ್ಪತ್ತಗುಡ್ಡದ ಉತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಲು ಹೊರಟಿರುವುದು ಅಕ್ಷಮ್ಯವಾಗಿದೆ.

ಜನರ ಭಾವನೆಗೆ ಸ್ಪಂದಿಸಿ

ಕಪ್ಪತ್ತಗುಡ್ಡದ ಸುತ್ತಮುತ್ತಲಿನ ಜನರ ಜೊತೆಗೆ ಕಪ್ಪತ್ತಗುಡ್ಡದ ರಕ್ಷಣೆ ಕುರಿತು ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕಿದೆ. ಉತ್ಸವದಲ್ಲಿ ಈ ಭಾಗದ ಜನರು ಪಾಲ್ಗೊಳ್ಳಲು ಭಾಗೀದಾರರಾಗಬೇಕು. ಕಪ್ಪತ್ತಗುಡ್ಡದ ಉತ್ತರದಾಯಿತ್ವವು ಬರೀ ಅರಣ್ಯ ಇಲಾಖೆಗೆ ಸಂಬಂಧಿಸಿದ್ದಲ್ಲ. ಈ ಭಾಗದ ಜನರು, ರೈತರು, ಪರಿಸರವಾದಿಗಳಿಗೂ ಸಂಬಂಧಿಸಿದೆ. ಕಪ್ಪತ್ತಗುಡ್ಡದ ಉತ್ಸವವನ್ನು ಕಪ್ಪತ್ತಗುಡ್ಡದ ಪರಿಸರದಲ್ಲೇ ಆಚರಿಸುವ ಮೂಲಕ ಈ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಬೇಕು.

ಉತ್ಸವ ಯಾವ ಪುರುಷಾರ್ಥಕ್ಕೆ?

ಕಳೆದ ಫೆಬ್ರವರಿಯಲ್ಲಿಯೂ ಇದೆ ರೀತಿ ನಗರದಲ್ಲಿ ಕಪ್ಪತ ಉತ್ಸವ ನಡೆದಾಗಲೂ ಕಪ್ಪತಗುಡ್ಡದಂಚಿನ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಕಪ್ಪತಗುಡ್ಡದಲ್ಲಿಯೇ ಉತ್ಸವ ಹಮ್ಮಿಕೊಳ್ಳುವಂತೆ ಮನವಿ ಸಲ್ಲಿಸಿದ್ದರಂತೆ. ಆದರೆ, ಕೋಟ್ಯಂತರ ಹಣ ಖರ್ಚು ಮಾಡಿ ’ವನದೇವಿ’ ನರ್ಸರಿ ನಿರ್ಮಿಸಿದ್ದೇಕೆ? ಮತ್ತು ನಗರದಲ್ಲಿ ಕಪ್ಪತ ಉತ್ಸವ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಎದ್ದಿದೆ.

ಉತ್ಸವದ ಹೆಸರಲ್ಲಿ ಹಣ ಲೂಟಿ?

ಪ್ರತಿವರ್ಷ ನಗರದಲ್ಲಿ ನಡೆಯುವ ಕಪ್ಪತ ಉತ್ಸವಕ್ಕೆ ಹಳ್ಳಿ ಜನಕ್ಕೆ ದಿನಗೂಲಿಯಂತೆ ದುಡ್ಡು ಕೊಟ್ಟು
ಕಾರ್ಯಕ್ರಮಕ್ಕೆ ಕರೆ ತರುತ್ತಿದ್ದಾರೆ. ಕಾಟಾಚಾರಕ್ಕೆ ಕಪ್ಪತ ಉತ್ಸವ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ. ಕೋಟಿಗಟ್ಟಲೇ ಹಣ ವ್ಯಯಿಸಿದ್ದು, ಬೋರ್ಗಲ್ಲು ಮೇಲೆ ನೀರು ಸುರಿದಂತೆ ಎಂದು ಡೋಣಿ ಗ್ರಾಮದ ಶಂಕರಗೌಡ ಜಾಯಿನಗೌಡರ ಆರೋಪಿಸಿದ್ದಾರೆ.

ನಮ್ಮದು ಇಷ್ಟೇ!

ಸರ್ಕಾರದಿಂದ ಕಾರ್ಯಕ್ರಮಕ್ಕೆ ಅನುದಾನ ಕೊಟ್ಟಿಲ್ಲ. ಕಳೆದ ವರ್ಷ ಪ್ರಾರಂಭಿಸಿದ ಕಪ್ಪತ ಉತ್ಸವ ಮುಂದುವರಿಸುತ್ತಿದ್ದೇವೆ. ಆರೋಪ ಏನು ಬೇಕಾದರೂ ಮಾಡಬಹುದು. ಕಾರ್ಯಕ್ರಮ ನಡೆಸಲು ಅನುದಾನ, ಸೌಲಭ್ಯ ಇರಬೇಕು. ಕಪ್ಪತಗುಡ್ಡದಲ್ಲಿ ಎಲ್ಲೂ ಸೌಲಭ್ಯಗಳಿಲ್ಲ. ಜನರನ್ನು ಕರೆದುಕೊಂಡು ಹೋಗಿ ಎಲ್ಲಿ ಕೂರಿಸುತ್ತೀರಿ? ಯಾವ ಊರಲ್ಲಿ ಮಾಡುತ್ತೀರಿ? ಯಾವ ಹಳ್ಳಿಯಲ್ಲಿ ಮಾಡಬೇಕು? ಡಂಬಳದಲ್ಲಿ ಮಾಡಿದರೆ ಡೋಣಿಯವರು, ಡೋಣಿಯಲ್ಲಿ ಮಾಡಿದರೆ ಕಡಕೋಳದವರು ಗಲಾಟೆ ಮಾಡ್ತಾರೆ. ಕಪ್ಪತಗುಡ್ಡ ಅಂದರೆ 58 ಊರು ಇವೆ. ನೀವು ಬರೀತೀರಿ ಅವರು ಹೇಳುತ್ತಾರೆ. ಈ ರೀತಿ ಮಾಡಿದರೆ ನಾವು ಕೆಲಸ ಮಾಡಲು ಆಗುವುದಿಲ್ಲ. ನಮ್ಮದು ಇಷ್ಟೇ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಖಾರವಾಗಿ ಪ್ರತಿಕ್ರಿಯಿಸಿದರು.

ಕೆಎಸ್‌ಆರ್ಟಿಸಿ ನೌಕರ ದಂಪತಿ ಥಳಿತ: ಕೊಲೆ ಬೆದರಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ರೋಣ ಕೆಎಸ್‌ಆರ್ ಟಿಸಿ ಡಿಪೋದ ನೌಕರ ದಂಪತಿ ಮೇಲೆ ಇಬ್ಬರು ಆರೋಪಿಗಳು ಥಳಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಜೇಂದ್ರಗಡ ತಾಲ್ಲೂಕಿನ ಅಶೋಕ ಚನ್ನಬಸಪ್ಪ ಡುಮ್ಮನವರ ಹಾಗೂ ರೋಣ ತಾಲ್ಲೂಕಿನ ಮೆಣಸಿಗಿ ಗ್ರಾಮದ ಫಕೀರಗೌಡ ನಾಗನಗೌಡ ಹಿರೇಗೌಡ್ರ ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದಾರೆ.

ರೋಣ ಕೆಎಸ್‌ಆರ್ ಟಿಸಿ ಡಿಪೋದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ದಪ್ಪ ಮಲಕಾಜಪ್ಪ ಪಟ್ಟಣಶೆಟ್ಟಿ ಹಾಗೂ ಅವರ ಪತ್ನಿ ನಿರ್ವಾಹಕಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿ ನಡೆಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ.

ರೋಣ-ನರೇಗಲ್ ಮಾರ್ಗದಲ್ಲಿ ಕರ್ತವ್ಯ ಮಾಡುತ್ತಿದ್ದ ವೇಳೆ, ರೋಣದಿಂದ ನರೇಗಲ್ ಪಟ್ಟಣಕ್ಕೆ ಬಂದಿದ್ದಾರೆ. ಸಂಜೆ ಬಸ್ ನಿಲ್ದಾಣದ ಕ್ಯಾಂಟಿನ್ ನಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಬಸ್ ಚಾಲಕ ಸಿದ್ದಪ್ಪನ ಮೇಲೆ ಅಶೋಕ ಹಾಗೂ ಫಕೀರಗೌಡ ಏಕಾಏಕಿ ಜಗಳಕ್ಕೆ ಮುಂದಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಸಿದ್ದಪ್ಪನ ಹೆಂಡತಿಯಾಗಿರುವ ನಿರ್ವಾಹಕಿ ಮೇಲೋ ಆರೋಪಿಗಳು ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ: SDPI ಮುಖಂಡನ ಬಂಧನ

ವಿಜಯಸಾಕ್ಷಿ ಸುದ್ದಿ, ಮಂಗಳೂರು: ಹದಿನೈದು ವರ್ಷಗಳ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರವೆಸಗಿ ಆಕೆಯ ಇಬ್ಬರು ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಉಳ್ಳಾಲದ SDPI ಮುಖಂಡನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲದ SDPI ಮುಖಂಡ ಸಿದ್ದೀಕ್ ಉಳ್ಳಾಲ ಬಂಧಿತ ಆರೋಪಿ. ಸಂತ್ರಸ್ತ ಮಹಿಳೆ ಗಂಡನಿಂದ ದೂರವಾಗಿ ಉಳ್ಳಾಲದ ಒಂಭತ್ತುಕೆರೆಯಲ್ಲಿ ತನ್ನ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಈಕೆಗೆ ಸಹಾಯ ಮಾಡೋ ನೆಪದಲ್ಲಿ ಸ್ನೇಹ ಬೆಳೆಸಿಕೊಂಡ ಸಿದ್ದೀಕ್ ಆಕೆಯನ್ನು ಬಲಾತ್ಕರಿಸಿದಲ್ಲದೆ ಆಕೆಯ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡಿದ್ದ.

ಈ ಬೆಳವಣಿಗೆ ಕಳೆದ ಡಿಸೆಂಬರ್ ತಿಂಗಳಲ್ಲೇ ನಡೆದಿದ್ದು ಮಹಿಳೆ ಸಿದ್ದೀಕ್ ವಿರುದ್ಧ ದೂರು ನೀಡಲು ಮುಂದಾದಾಗ ಆತನ ಸಹಚರರು ಎನ್ನಲಾದ ಪಕ್ಷದ ಮುಖಂಡರು ಜೀವ ಬೆದರಿಕೆ ಹಾಕಿದ್ದರೆನ್ನಲಾಗಿದೆ. ಆನಂತರವೂ ಸಿದ್ದೀಕ್ ಉಪಟಳ ಜಾಸ್ತಿಯಾದ ಹಿನ್ನೆಲೆಯಲ್ಲಿ ಕಳೆದ ಜ.16 ರಂದು ಸಂತ್ರಸ್ತ ಮಹಿಳೆ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಅತ್ಯಾಚಾರ, ಪೋಕ್ಸೊ ಪ್ರಕರಣ ದಾಖಲಾಗಿತ್ತು.

ಅಂದಿನಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೇರಳಕ್ಕೆ ಪರಾರಿಯಾಗಿದ್ದಾನೆಂಬ ಮಾಹಿತಿ ಇದ್ದುದರಿಂದ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಉಳ್ಳಾಲ ಠಾಣೆಗೆ ಕರೆತಂದಿದ್ದಾರೆ.‌

error: Content is protected !!