Home Blog Page 3198

ಕತ್ತಿಯಿಂದ ಕಡಿದು ಯುವತಿಯ ಭೀಕರ ಹತ್ಯೆ; ಪೊಲೀಸರ ಭೇಟಿ, ಪರಿಶೀಲನೆ

0

ಮನೆಯ ಹತ್ತಿರವೇ ನಡೆದ ದುರಂತ….ಸ್ಥಳದಲ್ಲಿ ಹೆಲ್ಮೆಟ್ ಪತ್ತೆ….!

ವಿಜಯಸಾಕ್ಷಿ ಸುದ್ದಿ, ಕೊಡಗು

ಕತ್ತಿಯಿಂದ ಯುವತಿಯೊಬ್ಬಳನ್ನು ಬರ್ಭರವಾಗಿ ಕೊಲೆ ಮಾಡಿದ ಘಟನೆ ಜರುಗಿದೆ.

ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲ ಗ್ರಾಮದ ಆರತಿ ಎಂಬ (24) ಯುವತಿಯನ್ನು ಮನೆಯಿಂದ ಹೊರಗೆ ಕರೆದು ಹತ್ಯೆ ಮಾಡಲಾಗಿದೆ.

ಬುಟ್ಟಿಯಂಡ ಮಾದಪ್ಪ (ಸುನಂದ) ಅವರ ಪುತ್ರಿ ಆರತಿಯ ಹತ್ಯೆಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ.

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಆರತಿಯ ಕೊಲೆ ಆರೋಪಿ ಎನ್ನಲಾಗಿರುವ ತಮ್ಮಯ್ಯನ ಹೆಲ್ಮೆಟ್, ಹಾಗೂ ಸಮೀಪದಲ್ಲಿ ಬೈಕ್ ಕೂಡ ಪತ್ತೆಯಾಗಿದ್ದು, ತಮ್ಮಯ್ಯನೂ ಆರತಿಯ ಕೊಲೆಯ ನಂತರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಹುಡುಕಾಟ ನಡೆಸಿದ್ದಾರೆ.

ಕಳೆದ ಹಲವು ದಿನಗಳಿಂದ ಆರೋಪಿ ತಮ್ಮಯ್ಯ ಆರತಿಗೆ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದು, ಸ್ಥಳಕ್ಕೆ ವಿರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಆಕಸ್ಮಿಕ ಬೆಂಕಿ; ಮೇಕೆಗಳು ಸಜೀವ ದಹನ

ಕೃಷಿ ಸಲಕರಣೆಗಳು ಸುಟ್ಟು ಭಸ್ಮ…….

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದಾಗಿ‌ ಮೇಕೆಗಳ ಸಮೇತ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ.

ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಇಬ್ರಾಹಿಂಸಾಬ ತಾಡಪತ್ರಿ ಎಂಬುವವರಿಗೆ ಸೇರಿದ ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಈ ದುರಂತ ಸಂಭವಿಸಿದೆ.

ಕೃಷಿ ಸಲಕರಣೆಗಳು, ಪಂಪಸೆಟ್ಟು ಸೇರಿದಂತೆ ಅನೇಕ ಕೃಷಿ ಪರಿಕರಗಳು ಬೆಂಕಿಯಿಂದಾಗಿ‌ ಸುಟ್ಟಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗದಂತೆ ತಡೆದರು.

ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಬೈಕ್-ಕಾರು ಮಧ್ಯೆ ಡಿಕ್ಕಿ; ಸ್ಥಳದಲ್ಲೇ ತಾಯಿ, ಮಗ ಸಾವು

0

ಮತ್ತೀಬ್ಬರು ಗಾಯ…….ಸ್ಥಳಕ್ಕೆ ಪೊಲೀಸರ ಭೇಟಿ… ಪರಿಶೀಲನೆ

ವಿಜಯಸಾಕ್ಷಿ ಸುದ್ದಿ, ರಾಯಚೂರು

ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ತಾಯಿ ಹಾಗೂ ಮಗು ಸ್ಥಳದಲ್ಲಿಯೇ ಮೃತಪಟ್ಟು, ಮತ್ತೀಬ್ಬರು ಗಾಯಗೊಂಡ ದುರ್ಘಟನೆ ಮಧ್ಯರಾತ್ರಿ ನಡೆದಿದೆ.

ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ನಲ್ಲಿ ಈ ಘಟನೆ‌ ನಡೆದಿದ್ದು, ಅಪಘಾತದಲ್ಲಿ ತಾಯಿ ಭಾರತಿ ಉಮೇಶ್(39), ಮಗ ಉದಯಶಂಕರ್(8) ಮೃತಪಟ್ಟಿದ್ದಾರೆ.

ಮೃತರು ಲಿಂಗಸಗೂರು ತಾಲೂಕಿನ ಯರದೊಡ್ಡಿ ಗ್ರಾಮದ ನಿವಾಸಿಗಳಾಗಿದ್ದು,
ಯರದೊಡ್ಡಿಯಿಂದ ಮರಿಯಮ್ಮನಹಳ್ಳಿ ಕಡೆ ಬೈಕ್ ನಲ್ಲಿ ಹೊರಟಿದ್ದರು ಎನ್ನಲಾಗಿದೆ.
ಇಲಕಲ್ಲ ‌ಮಾರ್ಗವಾಗಿ ಮುದಗಲ್ ಪಟ್ಟಣದತ್ತ ಕಾರು ಬರುತ್ತಿತ್ತು ಎನ್ನಲಾಗಿದೆ.

ಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ, ತಾಯಿ-ಮಗನ ಮೃತದೇಹ ಮುದಗಲ್ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪುಲ್ ಕುಡಿ ಮೆಲ್ಲಕ ನಡಿ ರಚ್ಚು, ಊರಿಗೆ ಕಾಲಿಟ್ಟ ಉಡಾಳ ಭದ್ರಗೆ ರಾಜ್ಯ ಮಟ್ಟದ ಬಹುಮಾನ

0

ದುರ್ಗಾದೇವಿ ಯುವಕ ಮಂಡಳದಿಂದ ರಾಜ್ಯ ಮಟ್ಟದ ಟಗರಿನ ಕಾಳಗ ಸ್ಪರ್ಧೆ

ನರಗುಂದ: ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾ ದೇವಿ ಯುವಕ ಮಂಡಳದ ವತಿಯಿಂದ ರಾಜ್ಯ ಮಟ್ಟದ ಟಗರಿನ ಕಾಳಗ ಸ್ಪರ್ಧೆ ಏರ್ಪಡಿಸಲಾಗಿತ್ತು.

ಹಾಲು ಹಲ್ಲಿನ ಟಗರಿನ ಕಾಳಗ, ಪ್ರಥಮ ಬಹುಮಾನ : ಕೆಂಚಮ್ಮ ದೇವಿ ಬಲ್ಲ ಸಾ|| ಮಮಟಗೇರಿ, ದ್ವಿತೀಯ ಬಹುಮಾನ : ಪುಲ್ ಕುಡಿ ಮೆಲ್ಲಕ ನಡಿ ರಚ್ಚು ಸಾ|| ಗುಳಗಂದಿ, ತೃತೀಯ ಬಹುಮಾನ : ಊರಿಗೆ ಕಾಲಿಟ್ಟ ಉಡಾಳ ಭದ್ರ ಸಾ|| ಸುಳ್ಳ, ಹಾಗೂ ಎರಡು ಹಲ್ಲಿನ ಟಗರಿನ ಕಾಳಗ, ಪ್ರಥಮ ಬಹುಮಾನ : ಮಣಿಕಂಠ ಸಾ || ಶಿರೋಳ, ದ್ವಿತೀಯ ಬಹುಮಾನ : ಅಗಸ್ತ್ಯ ಸಾ|| ಕಾತರಕಿ, ತೃತೀಯ ಬಹುಮಾನ : ಭಜರಂಗಿ ಅಲಿಯಾಸ್ ನೀಲಕಂಠ ಸಾ|| ಕೊಣ್ಣೂರ, ಹಾಗೂ ನಾಲ್ಕು ಹಲ್ಲಿನ ಟಗರಿನ ಕಾಳಗ, ಪ್ರಥಮ ಬಹುಮಾನ : ಜಯಭೀಮ್ ನೀಲಗುಂದ ಗಿಡ್ಡ, ದ್ವಿತೀಯ ಬಹುಮಾನ : ಶ್ರೀ ಸಿದ್ದೇಶ್ವರ ಅಮಾಸಿ ಸಾ|| ಶಾಂತಗೇರಿ, ತೃತೀಯ ಬಹುಮಾನ : ಜೆ ಬಿ ಕಿಂಗ್ ಕಲ್ಲಾಪೂರ್ ಬಸವಣ್ಣ (ಕರಿಯ) ಹಾಗೂ ಓಪನ್ (ಮುಕ್ತ) ಟಗರಿನ ಕಾಳಗ, ಪ್ರಥಮ ಬಹುಮಾನ : ಭಜರಂಗಿ ಸಾಮ್ರಾಜ್ಯದ ಅಧಿಪತಿ ರಾಮ ಸಾ|| ಬೇಲೂರು, ದ್ವಿತೀಯ ಬಹುಮಾನ : ನರಗುಂದ ಮೈಲಾರಿ ಅಲಿಯಾಸ್ ಗಜ, ತೃತೀಯ ಬಹುಮಾನ : ಹುಲಿಗೆಮ್ಮದೇವಿ ಬಾದಾಮಿ ಡಾನ್ ಪಡೆಯಲಾಯಿತು.

ದಿ. 13 ಮತ್ತು 14 ರವರಿಗೆ ಸತತ ಎರಡು ದಿನಗಳವರೆಗೆ ಸುದೀರ್ಘ ಕಾರ್ಯಕ್ರಮ ಏರ್ಪಟ್ಟಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮನ್ನಿರಂಜನ ಗುರುಬಸವ ಮಹಾ ಸ್ವಾಮಿಗಳು ಶಿರೋಳ ಹಾಗೂ ನರಗುಂದ ಪತ್ರಿವನ ಮಠದ ಶ್ರೀಗಳು, ಸಮ್ಮುಖವನ್ನ ಅಭಿನವ ಯಚ್ಚರಸ್ವಾಮಿಗಳು ವಹಿಸಿದ್ದರು, ಹಾಗೂ ಮೈದಾನ ಉದ್ಘಾಟನೆಯನ್ನು ಶ್ರೀ ಮ.ನಿ. ಪ್ರ ಗುರುಬಸವ ಮಹಾಸ್ವಾಮಿಗಳು ಹಾಗೂ ಅಭಿನವ ಯಚ್ಚರಸ್ವಾಮಿಗಳು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಲಸಾಬ್ ಅರಗಂಜಿ, ಗೌರವಾಧ್ಯಕ್ಷತೆ ಶಿವನಗೌಡ ಪಾಟೀಲ, ಮುಖ್ಯ ಅತಿಥಿಗಳಾಗಿ ಡಿ ವೈ ಕಾಡಪ್ಪನವರ, ಪ್ರಕಾಶಗೌಡ ತಿರಕನಗೌಡ್ರ ಹಾಗೂ ರವಿ ಹಿರೇಮಠ, ಅತಿಥಿಗಳಾಗಿ ಈಶ್ವರಗೌಡ ತಿರಕನಗೌಡ್ರ, ಮುರುಗಯ್ಯಾ ವಸ್ತ್ರದ, ಬಸಯ್ಯ ಲಿಂ ಮಠದ, ಹಣಮಂತ ಕಾಡಪ್ಪನವರ, ಶರಣಪ್ಪ ಕಾಡಪ್ಪನವರ, ಬಸವರಾಜ ಹೂಗಾರ, ಶರಣಪ್ಪಗೌಡ ತಿರಕನಗೌಡ್ರ, ನಜೀರ್ ಚಳ್ಳಮರದ, ಸೋಮರೆಡ್ಡಿ ರಿತ್ತಿ, ಮೈಲಾರಪ್ಪ ಹಿರೇಮನಿ ಮತ್ತು ಗ್ರಾಮದ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ದೈಹಿಕ ಶಿಕ್ಷಕರಾದ ಶರಣಯ್ಯ ಹಿರೇಮಠ ಅವರು ನೆರವೇರಿಸಿದರು.
ಸ್ಪರ್ಧೆಗೆ ಬಹುಮಾನ ವಿತರಿಣೆ ಮಾಡಿದ, ಟ್ರೋಫಿ ಕೊಡುಗೆ ನೀಡಿದ ಎಲ್ಲ ಗಣ್ಯರಿಗೆ ಸನ್ಮಾನ ಮಾಡುವ ಮೂಲಕ ಹಾಗೂ ಪ್ರೋತ್ಸಾಹಿಸಿದ ಗ್ರಾಮದ ಎಲ್ಲಾ ಯುವಕ ಮಿತ್ರರಿಗೂ, ಕ್ರೀಡಾ ಪ್ರೇಮಿಗಳಿಗೂ ದುರ್ಗಾದೇವಿ ಯುವಕ ಮಂಡಳದವರು ಧನ್ಯವಾದ ಅರ್ಪಿಸಿದರು.

ಸಂಕ್ರಾಂತಿ ಹಬ್ಬದ ಸಂಭ್ರಮ; ತುಂಗಭದ್ರಾ‌ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತರು

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಸಿಂಗಟಾಲೂರ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ವಿವಿಧೆಡೆ `ಸಡಗರ-ಸಂಭ್ರಮದಿಂದ’ ಆಚರಿಸಲಾಯಿತು.

ನವಗ್ರಹ ಅಧಿಪತಿ ಸೂರ್ಯ ಆರಾಧನೆಯ ಹಬ್ಬದ ದಿನದಂದು, ಸೂರ್ಯ ರಥಸಪ್ತಮಿ ಏರಿ ಸಂಚರಿಸುತ್ತ ಉತ್ತರಾಯಣ ಪುಣ್ಯ ಕಾಲ ಪ್ರಾರಂಭದ ಈ ಹಬ್ಬವನ್ನು ಎಲ್ಲರೂ ಮಕರ ಸಂಕ್ರಾಂತಿ ಹಬ್ಬ ಎಂದು ಆಚರಿಸುತ್ತಾರೆ.

ಈ ಸಂದರ್ಭದಲ್ಲಿ ಪವಿತ್ರ ತುಂಗಭದ್ರಾ ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ ಪುನೀತರಾದರು, ನದಿ ತೀರದ ದೇವಸ್ಥಾನಗಳಾದ ಮದಲಘಟ್ಟ ಅಂಜನೇಯ ದೇವಸ್ಥಾನ, ಸಿಂಗಟಾಲೂರ ಶ್ರೀವೀರಭದ್ರೇಶ್ವರ ದೇವಸ್ಥಾನ, ಬಿದರಳ್ಳಿ ಶ್ರೀ ರೇಣುಕಾದೇವಿ ದೇವಸ್ಥಾನ, ಗುಮ್ಮಗೋಳ ಶ್ರೀಗೋಣಿಬಸವೇಶ್ವರ, ವಿಠಲಾಪೂರ ಗ್ರಾಮದ ನದಿ ದಂಡೆಯ ದೇವರಿಗೆ, ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಭಕ್ತರು ನೆರವೇರಿಸಿದರು.

ತುಂಗಭದ್ರಾ ನದಿ ದಂಡೆಯ ವಿವಿದಡೆ ನೂರಾರು ಭಕ್ತರು ಮಿಂದೆದ್ದ ದೃಶ್ಯ ಸಾಮಾನ್ಯವಾಗಿತ್ತು. ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿ ಮಕ್ಕಳಿಂದ ಮೊದಲುಗೊಂಡು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಲ್ಲ ವಯೋಮಾನದವರು ಎಳ್ಳು-ಬೆಲ್ಲ ಬೀರುವ ಮೂಲಕ ತಾಲೂಕಿನ ವಿವಿಧ ಜಲಮೂಲ ತಾಣಗಳಲ್ಲಿ ಸಂಭ್ರಮಿಸಿದರು.

ನಂತರ ತಮ್ಮ ಮನೆಗಳಿಂದ ತಂದಿದ್ದ ಜೋಳದ ರೊಟ್ಟಿ, ಬದನೆಕಾಯಿ ಪಲ್ಯ , ಮಡಿಕೆಕಾಳು ಪಲ್ಯ, ಹೋಳಿಗೆ ಸೇರಿದಂತೆ ವಿವಿಧ ತರಹದ ಸಿಹಿ ತಿಂಡಿ ತಿನಿಸುಗಳನ್ನು ಕುಟುಂಬದ ಸದಸ್ಯರು ಸೇರಿ ಸವಿದರು.

ಮಕ್ಕಳ ಮೇಲೆ ತೋಳ ದಾಳಿ; ಬೆನ್ನಟ್ಟಿದರೂ ಸಿಗದ ತೋಳ, ಅರಣ್ಯ ಇಲಾಖೆ ಅಧಿಕಾರಿಗಳಿಂದ ಶೋಧ

ಇಬ್ಬರು ‌ಮಕ್ಕಳು‌ ಮೇಲೆ ದಾಳಿ..‌ಆತಂಕದಲ್ಲಿ. ಅಂತೂರು-ಬೆಂತೂರು ಗ್ರಾಮಸ್ಥರು….

ವಿಜಯಸಾಕ್ಷಿ ಸುದ್ದಿ, ಗದಗ

ಏಕಾಏಕಿ ಗ್ರಾಮಕ್ಕೆ ನುಗ್ಗಿದ ತೋಳವೊಂದು ಎಂಟು ವರ್ಷದ ಬಾಲಕಿ‌, ಆಕಳು ಕರು ಹಾಗೂ ನಾಯಿ ಮೇಲೆ ದಾಳಿ ಮಾಡಿ ಪರಾರಿಯಾದ ಘಟನೆ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಮುಂದೆ ಹಾಯ್ದು ಹೊರಟಿದ್ದ ತೋಳ ನೋಡಿದ ಗ್ರಾಮಸ್ಥರು ತೀವ್ರ ಆತಂಕಗೊಂಡರು.

ಅಷ್ಟರಲ್ಲಾಗಲೇ ತೋಳವು ರಸ್ತೆ ಬದಿ ಕಟ್ಟಿದ್ದ ಆಕಳು ಕರು, ಒಂದು ನಾಯಿಯ ಮೇಲೆ ದಾಳಿ ಮಾಡಿ ಕಚ್ಚಿದೆ. ನಂತರ ಮನೆ ಮುಂದೆ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿಯ ಮೇಲೂ ದಾಳಿ ಮಾಡಿ ಕಚ್ಚಿದೆ. ತೋಳದ ಹುಚ್ಚಾಟ ನೋಡಿದ ಗ್ರಾಮಸ್ಥರು ಬೆನ್ನಟ್ಟಿದರೂ ಅವರ ಕೈಗೆ ಸಿಗದೇ ಪರಾರಿಯಾಗಿದೆ. ಸದ್ಯಕ್ಕೆ ಕುರ್ತಕೋಟಿ ಗ್ರಾಮದಿಂದ ನೀಲಗುಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದಾರಿಯ ಕಡೆ ಹೋಗಿ ಹಳ್ಳದಲ್ಲಿ ಕಣ್ಮರೆಯಾಗಿದ್ದು, ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರು ಪ್ರಯೋಜನವಾಗಿಲ್ಲ.

ತೋಳ ದಾಳಿಯಿಂದಾಗಿ ಬಾಲಕಿಯ ಬೆನ್ನಿನ ಮೇಲೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಜಿಮ್ಸ್ ಗೆ ದಾಖಲು ಮಾಡಲಾಗಿದೆ.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಪ್ಪಣ್ಣ ಇನಾಮತಿ, ಅಶೋಕ್ ಶಿರಹಟ್ಟಿ, ಅಶೋಕ್ ಬಡಿಗೇರ್, ಪ್ರಬಣ್ಣ ಗಾಣಿಗೇರ, ಪ್ರಬಣ್ಣ ಬೆಂತೂರ, ಬಸವರಾಜ್ ಶಿಸುವಿನಹಳ್ಳಿ ಹಾಗೂ ಶೇಖಣ್ಣ ಆಲೂರ‌ ಸೇರಿದಂತೆ ಗ್ರಾಮಸ್ಥರು ಇದ್ದರು.

ನೀಲಗುಂದ ಗ್ರಾಮದಲ್ಲಿ ತೋಳ ಪತ್ತೆ

ಕುರ್ತಕೋಟಿ ಗ್ರಾಮದಲ್ಲಿ ದಾಳಿ ಮಾಡಿದ್ದ ತೋಳ ಪಕ್ಕದ ನೀಲಗುಂದ ಗ್ರಾಮದಲ್ಲಿ ಜನರು ನೋಡಿದ್ದಾರೆ. ಕುರ್ತಕೋಟಿ ಗ್ರಾಮದಿಂದ ನೀಲಗುಂದ ಗ್ರಾಮಕ್ಕೆ ಹೊರಟಿದ್ದ ಬೈಕ್ ಸವಾರರ ಮುಂದೆ ಓಡೋಡಿ ಹೊರಟಿದ್ದ ತೋಳದ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ನಂತರ ಹೋಲದಿಂದ ಮನೆ ಕಡೆ ಹೊರಟಿದ್ದ ನಿತಿನ್ ಎಂಬ ಬಾಲಕನ ಮೇಲೂ ದಾಳಿ ಮಾಡಿ ಕಚ್ಚಿ ಬೆಂತೂರು ಗ್ರಾಮದ ಕಡೆ ತೆರಳಿದೆ ಎಂದು ಬಿಜೆಪಿ ಯುವ ಮುಖಂಡ ರವಿ ವಗ್ಗನವರು ಮಾಹಿತಿ ನೀಡಿದ್ದು, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು, ತೋಳ ಹಿಡಿದು ಜನರ ಆತಂಕ ನಿವಾರಣೆಗೆ ಮುಂದಾಗಬೇಕಂದು ಒತ್ತಾಯಿಸಿದ್ದಾರೆ.

ಬೀರಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ 1 ಲಕ್ಷ ರೂ. ನೆರವು

0

ನರಗುಂದ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಶಿರೋಳ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ರೂ. 1 ಲಕ್ಷ ರೂ ಡಿ ಡಿ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್ ಬಿ ಅಸೂಟಿ ಉದ್ಘಾಟಿಸಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಜಗದೀಶ ಭಂಡಾರಿ ಡಿಡಿ ವಿತರಿಸಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಕೈಗೊಂಡಿರುವ ಸಮಾಜಮುಖಿ ವಿವಿಧ ಕಾರ್ಯಕ್ರಮಗಳು ದೇವಾಲಯಗಳ ಸ್ವಚ್ಛತೆ ಜೀರ್ಣೋದ್ಧಾರ ಮಾಡುತ್ತಿರುವ ಮಹತ್ವದ ಕಾರ್ಯಕ್ರಮಗಳು ಕುರಿತು ಮಾಹಿತಿ ನೀಡಿದರು.

ದೇವಸ್ಥಾನ ಕಮಿಟಿ ಗೌರವಾಧ್ಯಕ್ಷರಾದ ಡಿ ವಾಯ್ ಕಾಡಪ್ಪನವರ, ತಾ.ಪಂ.ಮಾಜಿ ಅಧ್ಯಕ್ಷ ಪ್ರಕಾಶಗೌಡ್ರ ತಿರಕನಗೌಡ್ರ, ಸಮಾಜದ ಹಿರಿಯರಾದ ಡಿ ವೈ ಶಾಂತಗೇರಿ ಸಮಾಜದ ಹಿರಿಯರು ಭಾಗವಹಿಸಿದ್ದರು.

ದೇವಸ್ಥಾನದ ಕಮಿಟಿ ಅಧ್ಯಕ್ಷರು ಶರಣಪ್ಪ ಕಾಡಪ್ಪನವರ, ಕೊಣ್ಣೂರ ಮತ್ತು ಶಿರೋಳ ಗ್ರಾಮದ ಮೇಲ್ವಿಚಾರಕರಾದ ಗುರುರಾಜ ಬೆಳಗಲಿ, ನರೇಶ, ಸಂಗಪ್ಪ ಕಂಬಳಿ. ಬಸಯ್ಯ ಮಠದ. ನಜೀರ ಚಳ್ಳಮರದ. ಬಸವರಾಜ ಕಂಬಳಿ. ಶರಣಪ್ಪ ಸಂಗನಾಳ. ಸೇವಾ ಪ್ರತಿನಿದಿಗಳಾದ ಮಂಜುಳಾ. ಹೇಮಾ. ಒಕ್ಕೂಟದ ಪದಾಧಿಕಾರಿಗಳು ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು. ರಾಘವೇಂದ್ರ ಶಾಂತಗೇರಿ ಕಾರ್ಯಕ್ರಮ ನಿರ್ವಹಿಸಿದರು.

‘ಕತ್ತಲೆಯಲ್ಲಿ ಬಜೆಟ್ ಮಂಡಿಸಿದ ಕಾಂಗ್ರೆಸ್‌ನಿಂದ ಉಚಿತ ವಿದ್ಯುತ್ ಸಾಧ್ಯವೆ?

ಜನರಿಗೆ ಹಗಲಿನಲ್ಲಿ ಚುಕ್ಕೆ ತೋರಿಸುವ ಕೆಲಸವನ್ನು ಕಾಂಗ್ರೆಸ್ ಕೈಬಿಡಬೇಕು. ಇಂಥ ಹುಸಿ ಭರವಸೆಗಳಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ರಾಜು ಕುರಡಗಿ ಹೇಳಿದ್ದಾರೆ.

ವಿಜಯಸಾಕ್ಷಿ ಸುದ್ದಿ, ಗದಗ

ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಬುರುಡೆ ಬಿಡುತ್ತಿರುವ ಕಾಂಗ್ರೆಸ್ ಪಕ್ಷ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸದನದಲ್ಲಿ ಕತ್ತಲೆಯಲ್ಲೇ ಬಜೆಟ್ ಮಂಡನೆ ಮಾಡಿದ್ದನ್ನು ಮರೆತಿದೆ. ಆದರೆ ರಾಜ್ಯದ ಜನರಿಗೆ ಈ ಸಂಗತಿ ನೆನಪಿನಲ್ಲಿದ್ದು, ಅಧಿಕಾರದಾಸೆಗೆ ಇಲ್ಲಸಲ್ಲದ ಆಮಿಷ ತೋರಿಸುವುದರಿಂದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡರಾದ ರಾಜು ಕುರಡಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಆಡಳಿತದಲ್ಲೇ ಲೋಡ್ ಶೆಡ್ಡಿಂಗ್ ಎಂಬ ಭೂತ ಹುಟ್ಟಿಕೊಂಡಿದ್ದು. ರೈತ ಸಮೂಹ ಲೋಡ್ ಶೆಡ್ಡಿಂಗ್‌ನಿಂದ ನಾನಾ ಕಷ್ಟ ಅನುಭವಿಸಿತು. ರಾಜ್ಯದ ಎಲ್ಲಾ ಎಸ್ಕಾಂಗಳನ್ನು ವಿನಾಶದ ಅಂಚಿಗೆ ತಳ್ಳಿ ಇಡೀ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನೇ ಹದಗೆಡಿಸಿದ್ದ ಕಾಂಗ್ರೆಸ್‌ನಿಂದ ಇಂಥ ಕೊಡುಗೆ ಸಿಗಬಹುದು ಎಂದು ನಿರೀಕ್ಷಿಸುವಷ್ಟು ಜನರು ದಡ್ಡರಲ್ಲ.

ಬಿಜೆಪಿ ಸರ್ಕಾರ ಬಂದನಂತರ 6000 ಕೋಟಿ ರೂಪಾಯಿ ಖರ್ಚು ಮಾಡಿ ಎಸ್ಕಾಂಗಳನ್ನು ಬಲಪಡಿಸಿದೆ. ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ವಿದ್ಯುತ್ ಸಚಿವರಾಗಿದ್ದಾಗ ವಿದ್ಯುತ್ ಕೇಳಿದ ರೈತನನ್ನು ಬಂಧನಕ್ಕೆ ಒಳಪಡಿಸಿದ್ದನ್ನು ಜನರು ಮರೆತಿಲ್ಲ. ಹೀಗಿರುವಾಗ ಜನರಿಗೆ ಹಗಲಿನಲ್ಲಿ ಚುಕ್ಕೆ ತೋರಿಸುವ ಕೆಲಸವನ್ನು ಕಾಂಗ್ರೆಸ್ ಕೈಬಿಡಬೇಕು. ಇಂಥ ಹುಸಿ ಭರವಸೆಗಳಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಣ್ಣಿಗೇರಿ ಕೆರೆಗೆ ಸಿದ್ರಾಮಯ್ಯನವರ ಸರ್ಕಾರವಿದ್ದಾಗಲೆ ಹಣ ಬಿಡುಗಡೆ; ಕೋನರಡ್ಡಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣ ಬಿಡುಗಡೆ ಮಾಡಿದ್ದನ್ನು ಸ್ಮರಿಸಬೇಕು

ವಿಜಯಸಾಕ್ಷಿ ಸುದ್ದಿ, ನವಲಗುಂದ

ಅಣ್ಣಿಗೇರಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ರೂ.54 ಕೋಟಿ ವೆಚ್ಚದಲ್ಲಿ ಬಸಾಪೂರ ಗ್ರಾಮದ ಬಳಿ ನಿರ್ಮಾಣವಾಗಿರುವ ಬೃಹತ್ ಕೆರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಣ ಬಿಡುಗಡೆ ಮಾಡಿದ್ದನ್ನು ಸ್ಮರಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಅಣ್ಣಿಗೇರಿ ಜನತೆ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರು. 8 ರಿಂದ 10 ದಿನಕ್ಕೊಮ್ಮೆ ಮಲಪ್ರಭಾ ಕಾಲುವೆಯಿಂದ ಪೈಪ್‍ಲೈನ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಜಗದೀಶ ಶೆಟ್ಟರ್ ಸರ್ಕಾರದಲ್ಲಿ ಕ್ರಿಯಾ ಯೋಜನೆ ಮಾತ್ರ ಮಂಜೂರಾಗಿತ್ತು. ಆದರೆ ಕೆರೆ ನಿರ್ಮಾಣಕ್ಕೆ ಜಮೀನು ಖರೀದಿ ಮಾಡದೇ ಯೋಜನೆ ಜಾರಿ ಮಾಡುವುದು ಕಷ್ಟಸಾಧ್ಯವಾಗಿತ್ತು. ಸರ್ಕಾರಿ ಆದೇಶದಲ್ಲಿ ಅಣ್ಣಿಗೇರಿ ಪುರಸಭೆಯವರೇ ಜಮೀನು ಖರೀದಿಸಬೇಕೆಂದು ಕರಾರು ಹಾಕಲಾಗಿತ್ತು.

ನಾನು ಶಾಸಕನಾದ ಮೇಲೆ ಜಮೀನು ಖರೀದಿ ಪ್ರಕ್ರಿಯೆ ಪ್ರಾರಂಬಿಸಿದೆ. ಅಣ್ಣಿಗೇರಿ ಪುರಸಭೆಯಿಂದ ಜಮೀನು ಖರೀದಿ ಸಾಧ್ಯವಾಗಲಿಲ್ಲ. ಪುರಸಭೆಗೆ ಹೊರೆಯಾಗಬಾರದು, ಯೋಜನೆ ಕುಂಟಿತಗೊಳ್ಳಬಾರದೆಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಮನವೊಲಿಸಿದ ಫಲವಾಗಿ ಜಮೀನು ಖರೀದಿಗೆ ಬೇಕಾಗುವಷ್ಟು ಹಣವನ್ನು ಸರ್ಕಾರದಿಂದಲೇ ಬಿಡುಗಡೆ ಮಾಡಿದರು. ನಂತರ ಬಸಾಪೂರ ರೈತರ ಮನೆ ಮನೆಗೆ ತೆರಳಿ ಮನವೊಲಿಸಿ 76 ಎಕರೆ ಜಮೀನು ಖರೀದಿಸಲಾಯಿತು. ಹಣ ಬಿಡುಗಡೆ ಮಾಡಿದ ಸಿದ್ರಾಮಯ್ಯನವರಿಗೆ ನಾನು ಚಿರಋಣಿಯಾಗಿದ್ದೇನೆ ಎಂದಿದ್ದಾರೆ.

ಪರಿಷ್ಕೃತ ಕ್ರಿಯಾ ಯೋಜನೆಗೆ ಸಿದ್ದರಾಮಯ್ಯನವರೇ ಹಣ ಬಡುಗಡೆ

ಮೊದಲಿನ ಕ್ರಿಯಾ ಯೋಜನೆಯಲ್ಲಿ ಮಲಪ್ರಭಾ ಕಾಲುವೆಯಿಂದ ಪಂಪ್ ಮಾಡುವ ಮೂಲಕ ಕೆರೆಗೆ ನೀರು ಸಂಗ್ರಹ ಮಾಡುವುದು ನಂತರ ಕೆರೆಯಿಂದ ಮತ್ತೇ ಪಂಪ್ ಮಾಡಿ ಅಣ್ಣಿಗೇರಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವುದಾಗಿತ್ತು. ಆದರೆ ನಾನು ಈ ವಿಧಾನವನ್ನು ಬದಲಾವಣೆ ಮಾಡಿ ಮಲಪ್ರಭಾ ಕಾಲುವೆಯಿಂದ ಪಂಪ್ ಮಾಡುವ ಬದಲಾಗಿ ನಿಸರ್ಗದತ್ತವಾಗಿ (ಕಾಲುವೆಯಿಂದ ಗೇಟ್ ಓಪನ್ ಮಾಡಿ ನೀರು ಹರಿಸುವುದು) ಸರಳವಾಗಿ ನೀರು ಹರಿದು ಜಲಸಂಗ್ರಹಗಾರಕ್ಕೆ ಬರುವಂತೆ ಮಾಡುವ ಪರಿಷ್ಕೃತ ವಿನ್ಯಾಸ ಮತ್ತು ವೇರಿಯಷನ್‍ಗೆ (ಮಾರ್ಪಾಡು) ಬೇಕಾಗುವಷ್ಟು ಹೆಚ್ಚಿನ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿ ಹೊಸದಾಗಿ ಮಲಪ್ರಭಾ ಕಾಲುವೆಗಿಂತ ಕೆಳಮಟ್ಟದಲ್ಲಿ ಕೆರೆ ನಿರ್ಮಿಸಲು ಅಂದಿನ ಪುರಸಭೆ ಅಧ್ಯಕ್ಷರು,  ಸದಸ್ಯರು ಸರ್ವಾನುಮತದ ನಿರ್ಣಯ ತೆಗೆದುಕೊಂಡ ಫಲವಾಗಿಯೇ ಇಂದು ಬೃಹತ್ ಜಲಾಗಾರ ನಿರ್ಮಾಣವಾಗಲು ಸಾಧ್ಯವಾಗಿದೆ.

ಇದಕ್ಕೆಲ್ಲ ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯನವರು ಹಣ ಬಿಡುಗಡೆ ಮಾಡಿದ ಫಲ ಎಂಬುದನ್ನು ಯಾರು ಮರೆಯುವಂತಿಲ್ಲ.

ಆದರೆ ಯೋಜನೆಗೆ ಇಷ್ಟೆಲ್ಲ ಕಷ್ಟ ಪಟ್ಟಿರುವ ನಮ್ಮನ್ನೆ ಮರೆತಿರುವ ಬಿಜೆಪಿಯವರು ಎಲ್ಲವನ್ನು ನಾವೇ ಮಾಡಿದ್ದೇವೆಂದು ಸುಳ್ಳು ಪ್ರಚಾರ ಪಡೆದುಕೊಳ್ಳುತ್ತಿರುವುದನ್ನು ಜನ ಅರ್ಥಮಾಡಿಕೊಳ್ಳುತ್ತಾರೆಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಿಕರಿಸಿದ್ದಾರೆ. 

ಅಭಿವೃದ್ಧಿ ವಿಷಯದಲ್ಲಿ ಪಕ್ಷಪಾತವಿಲ್ಲ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ; ಸಚಿವ ಮುನೇನಕೊಪ್ಪ

ಅಣ್ಣಿಗೇರಿಗೆ ಶಾಶ್ವತ ನೀರು ಪೂರೈಕೆ ಯೋಜನೆ ಲೋಕಾರ್ಪಣೆ

ವಿಜಯಸಾಕ್ಷಿ ಸುದ್ದಿ, ನವಲಗುಂದ/ಅಣ್ಣಿಗೇರಿ

ಈ ನಾಡಿನ ಜನರ ಬಹುದಿನಗಳ ಕನಸಾದ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅವಧಿಗೆ ಮುಂಚಿತವಾಗಿಯೇ ಲೋಕಾರ್ಪಣೆ ಮಾಡಲಾಗುತ್ತಿದೆ. ಕೊಟ್ಟ ಮಾತಿನಂತೆಯೇ ರೂ.54 ಕೋಟಿ ವೆಚ್ಚದ ಈ ಕಾಮಗಾರಿಯನ್ನು ಅಣ್ಣಿಗೇರಿ ಮಹಾಜನತೆಗೆ ಸಮರ್ಪಿಸುತ್ತಿದ್ದೇನೆಂದು ಕೈಮಗ್ಗ, ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೃದಯಾಂತರಾಳದ ಧನ್ಯತಾಭಾವದ ಮಾತುಗಳನ್ನಾಡಿದರು.

ಶುಕ್ರವಾರ ಅಣ್ಣಿಗೇರಿ ಸಮೀಪದ ಬಸಾಪೂರ ಗ್ರಾಮದ ಬಳಿ ನಿರ್ಮಿಸಲಾಗಿರುವ 1750 ಮಿಲಿಯನ್ ಲೀಟರ್ ಸಾಮಾರ್ಥ್ಯದ  ಜಲಾಗಾರಕ್ಕೆ ಬಾಗಿನ ಅರ್ಪಣೆ ಮಾಡುವ ಮೂಲಕ  ಲೋಕಾರ್ಪಣೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಹುಬ್ಬಳ್ಳಿಗೆ ಆಗಮಿಸಿ ಜನಮನ ಸೆಳೆದ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಂಡ ಶುಭ ಸಂದರ್ಭದ ಸಂತೋಷದ ಸಮಯದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಮಾಡುತ್ತಿರುವುದು ಇನ್ನಿಲ್ಲದ ಸಂತೋಷ ತಂದಿದೆ.

ಅಷ್ಟೇ ಅಲ್ಲದೇ ರೈತರ ಬಹುದಿನಗಳ ಕನಸಾಗಿದ್ದ ಕಳಸಾ ಬಂಡೂರಿ ಯೋಜನೆಗೆ ಪ್ರಧಾನ ಮಂತ್ರಿಗಳ ಒಪ್ಪಿಗೆ ಪಡೆದು ಡಿ.ಪಿ.ಆರ್ ಅನುಮತಿ ನೀಡಿರುವುದು ರೈತರಿಗೂ ಕೂಡ ನಾವು ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಕೇಂದ್ರ ಸರ್ಕಾರದೊಂದಿಗೆ ನಿರಂತರವಾಗಿ ಶ್ರಮಿಸಿದ ಫಲ ಇದಾಗಿದೆ.

ಅಭಿವೃದ್ಧಿ ವಿಷಯದಲ್ಲಿ ನಾನೆಂದು ತಾರತಮ್ಯ, ಪಕ್ಷಪಾತ ಮಾಡಿಲ್ಲ. ಬಿಜೆಪಿ ಸರ್ಕಾರ ಏನು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ಕೆಲವರು ಈ ಯೋಜನೆಯಲ್ಲಿ ಬಿಜೆಪಿಯ ಕೊಡುಗೆ ಏನು ಇಲ್ಲ, ಎಲ್ಲವನ್ನು ನಾವೇ ಮಾಡಿದ್ದೇವೆಂದು ಊರೂರಲ್ಲಿ ಬ್ಯಾನರ್ ಹಾಕಿಕೊಂಡು ಪುಕ್ಕಟ್ಟೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ  ಈ ಶುಭ ಸಂದರ್ಭದಲ್ಲಿ ಉತ್ತರಿಸದೇ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡುತ್ತೇನೆಂದು ಖಾರವಾಗಿಯೆ ಹೇಳಿದರು.

ಇದೇ ಸಂದರ್ಭದಲ್ಲಿ ಅಣ್ಣಿಗೇರಿ ಪಟ್ಟಣದ ವಿವಿಧ ವಾರ್ಡಗಳಿಗೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿಯ ಕಾಮಗಾರಿಗಳಿಗೆ ಭೂಮಿ ಪೂಜೆ, ವಾಕಿಂಕ್ ಟ್ರ್ಯಾಕ್, ಓಪನ್ ಜಿಮ್, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಂಬ್ಯುಲೆನ್ಸ ಲೋಕಾರ್ಪಣೆ ಮಾಡುವುದರ ಜೊತೆಗೆ ರೂ.5 ಕೋಟಿ ವೆಚ್ಚದ ಅಣ್ಣಿಗೇರಿ-ನವಲಗುಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.  ಕೆರೆಗೆ ಜಮೀನು ನೀಡಿದ ರೈತರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ್, ಅಣ್ಣಿಗೇರಿ ದಾಸೋಹ ಮಠದ ಸದ್ಗುರು ಶಿವಕುಮಾರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಎ.ಸಿ.ವಾಲಿ ಗುರುಗಳು, ಮೃತ್ಯುಂಜಯ ಮಹಾಸ್ವಾಮೀಜಿ, ಪುರಸಭೆ ಅಧ್ಯಕ್ಷೆ ಗಂಗಾ ಕರೆಟ್ಟನವರ, ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಪ್ರಭಾವತಿ ಶಂಕರ ಪಾಟೀಲ ಮುನೇನಕೊಪ್ಪ, ಶಾಂತಾದೇವಿ ನಿಡವಣಿ, ಷಣ್ಮುಕ ಗುರಿಕಾರ,  ಪುರಸಭೆ ಸದಸ್ಯರು, ಕಳಸಾ ಬಂಡೂರಿ ಹೋರಾಟಗಾರರು, ನವಲಗುಂದ ಹಾಗೂ ಅಣ್ಣಿಗೇರಿ ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.

error: Content is protected !!