Home Blog Page 32

ವಿಚ್ಛೇದನಕ್ಕೆ ಮುಂದಾಗಿದ್ದ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಆಸಿಡ್ ಹಾಕಿದ ಪತಿ: ವಿಡಿಯೋ ವೈರಲ್

ಚೆನ್ನೈ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ನಗರದ ಪಲ್ಲವರಂನ ಭಾರತಿ ನಗರದಲ್ಲಿ ನಡೆದಿದೆ. 29 ವರ್ಷದ ಸನಾ ಫಾತಿಮಾ ಸಂತ್ರಸ್ತೆಯಾಗಿದ್ದು, ಸದ್ಯ ಆರೋಪಿ ಪತಿ ಮೊಹಮ್ಮದ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸನಾ ಫಾತಿಮಾ ಮತ್ತು ಅನಾಕಪುತ್ತೂರು ನಿವಾಸಿ ಮೊಹಮ್ಮದ್ ಅಲಿ 2020ರಲ್ಲಿ ಪ್ರೀತಿಸಿ ವಿವಾಹವಾಗಿದ್ದು, ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ಆದರೆ ಪತಿ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಕುಡಿದು ಬಂದು ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದನೆಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಫಾತಿಮಾ ಪತಿಯಿಂದ ದೂರವಾಗಿ ತಾಯಿ ಮನೆಯಲ್ಲಿ ವಾಸವಿದ್ದು, ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರಿಂದ ಆಕ್ರೋಶಗೊಂಡ ಪತಿ, ಶೌಚಾಲಯ ಸ್ವಚ್ಛಗೊಳಿಸುವ ಆಸಿಡ್ ಬಳಸಿ ದಾಳಿ ನಡೆಸಿದ್ದಾನೆ.

ಮಾರ್ಚ್ 15ರಂದು ತಾಯಿ ಮನೆಯ ಬಳಿ ಒಬ್ಬರೇ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಫಾತಿಮಾ ಅವರ ಮುಖಕ್ಕೆ ಆಸಿಡ್ ಎರಚಿದ್ದಾನೆ. ತೀವ್ರವಾಗಿ ಗಾಯಗೊಂಡ ಫಾತಿಮಾ ಅವರನ್ನು ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ದಾಳಿಯಲ್ಲಿ ಅವರ ಎಡ ಕಣ್ಣಿಗೆ ಗಂಭೀರ ಹಾನಿಯಾಗಿದ್ದು, ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಕುರಿತು ಪಲ್ಲವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು| ಬೈಕ್‌ ಅಡ್ಡಗಟ್ಟಿ ದರೋಡೆ ಮಾಡಿದ್ದ ಗ್ಯಾಂಗ್‌ ಅರೆಸ್ಟ್, 10 ಲಕ್ಷ ಹಣ ಜಪ್ತಿ!

ಬೆಂಗಳೂರು:- ಬನ್ನೇರುಘಟ್ಟ ಪೋಲೀಸರು ಕಾರ್ಯಾಚರಣೆ ನಡೆಸಿ ಬೈಕ್‌ ಅಡ್ಡಗಟ್ಟಿ ದರೋಡೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ನಿಖಿಲ್, ಪ್ರಶಾಂತ್ ಅಲಿಯಾಸ್‌ ಪಿಂಕಿ, ಅರುಣ್ ಕುಮಾರ್, ಹರೀಶ್, ರಕ್ಷಿತ್ ಎಂದು ಗುರುತಿಸಲಾಗಿದೆ.

ಬಂಧಿತ ಗ್ಯಾಂಗ್, ಶ್ರೀ ಕೈಲಾಸ್ ಎಂಬಾತನನ್ನ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಗ್ಯಾಂಗ್‌ ದರೋಡೆ ಮಾಡಿ ಎಸ್ಕೇಪ್‌ ಆಗಿತ್ತು. ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೈಲಾಸ್‌ ಅವರು ಉಡಾನ್ ಕಂಪನಿಗೆ ಸೇರಿದ ಹಣವನ್ನ ಕಲೆಕ್ಷನ್ ಮಾಡುತ್ತಿದ್ದರು. ಕಳೆದ ಫೆ.1 ರಂದು ಹಣ ಕಲೆಕ್ಷನ್ ಮಾಡಿದ್ದರು. ಬೈಕ್‌ನಲ್ಲಿ ಬರುವಾಗ ಎರಡು ಬೈಕ್‌ಗಳಲ್ಲಿ ಗ್ಯಾಂಗ್ ಹಿಂಬಾಲಿಸಿತ್ತು. ಲಾಂಗ್‌ನಿಂದ ಹಲ್ಲೆ ನಡೆಸಿ ಹಣ, ಬೈಕ್ ರಾಬರಿ ಮಾಡಿ ಎಸ್ಕೇಪ್ ಆಗಿತ್ತು. ರಸ್ತೆಯಲ್ಲಿ ಬೈಕ್ ಬಿಟ್ಟು ಹಣ ಎಗರಿಸಿ ಪರಾರಿಯಾಗಿತ್ತು. 31,38,625 ರೂ. ಹಣವನ್ನ ರಾಬರಿ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದರು.

ಮೂರು ತಂಡಗಳ ರಚನೆ ಮಾಡಿ ಅರೋಪಿಗಳಿಗೆ ತಲಾಶ್ ನಡೆಸಿದ್ದರು. ಪರಿಚಿತರೇ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೈಲಾಸ್‌ಗೆ ಹಣ ನೀಡಿದ್ದ ಉಡಾನ್ ಕಂಪನಿಯ ಸಿಬ್ಬಂದಿ ವಿಚಾರಣೆಗೊಳಪಡಿಸಲಾಯಿತು. ವಿಚಾರಣೆ ವೇಳೆ ರಾಬರಿ ಪ್ಲ್ಯಾನ್ ಮಾಸ್ಟರ್ ಮೈಂಡ್‌ ಬಂಧಿಸಲಾಯಿತು. ಆರೋಪಿಗಳನ್ನು ಇದೀಗ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

LPG ಗ್ಯಾಸ್ ಸಿಲಿಂಡರ್ ಬಿಕ್ಕಟ್ಟು: ಕಾಳಸಂತೆ ದಂಧೆ ಬಯಲು, 15 ಸಾವಿರ ಸಿಲಿಂಡರ್ ಸೀಜ್!

ಬೆಂಗಳೂರು / ನವದೆಹಲಿ, ಮಾರ್ಚ್ 18:
ಮಧ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮವಾಗಿ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಇದರ ಪರಿಣಾಮವಾಗಿ ಕಮರ್ಷಿಯಲ್ ಸಿಲಿಂಡರ್‌ಗಳ ಪೂರೈಕೆ ವ್ಯತ್ಯಯಗೊಂಡಿದ್ದು, ಹೋಟೆಲ್ ಉದ್ಯಮ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ.

ಈ ಬಿಕ್ಕಟ್ಟನ್ನು ದುರುಪಯೋಗಪಡಿಸಿಕೊಂಡು ಕೆಲವು ಖದೀಮರು ಗೃಹಬಳಕೆ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಅಕ್ರಮ ತಡೆಗಾಗಿ ದೇಶಾದ್ಯಂತ ಪೊಲೀಸರು ವ್ಯಾಪಕ ದಾಳಿ ನಡೆಸಿದ್ದು, 12 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆದಿದೆ. ಈ ವೇಳೆ ಸುಮಾರು 15 ಸಾವಿರ ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ದೆಹಲಿಯಲ್ಲಿ 600 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದ್ದು, ಉತ್ತರ ಪ್ರದೇಶದಲ್ಲಿ 405 ತಪಾಸಣೆಗಳು ನಡೆದಿದ್ದು 10 ಮಂದಿಯನ್ನು ಬಂಧಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 504 ದಾಳಿ ನಡೆಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ಕರ್ನಾಟಕದಲ್ಲಿಯೂ ಕ್ರಮ ಮುಂದುವರಿದಿದ್ದು, ಬೀದರ್ನಲ್ಲಿ 105 ಸಿಲಿಂಡರ್‌ಗಳು, ದಾವಣಗೆರೆ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಲಾ 20 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ.

ಇದರ ಮಧ್ಯೆ, ಕಮರ್ಷಿಯಲ್ ಗ್ಯಾಸ್ ಕೊರತೆ ಹಿನ್ನೆಲೆಯಲ್ಲಿ ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರಿ ತೈಲ ಕಂಪನಿಗಳಿಗೆ ಸಮರ್ಪಕ ಪೂರೈಕೆ ಮಾಡಲು ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದೆ.

ಮೈಸೂರು: ಅರಮನೆ ಮುಂಭಾಗದ ರಾಜಮಾರ್ಗ ಒಡೆದು ಟಾಂಗಾ ಸ್ಟ್ಯಾಂಡ್​; ಸಾರ್ವಜನಿಕರ ಆಕ್ರೋಶ!

ಮೈಸೂರು: ಪಾರಂಪರಿಕ ಕಟ್ಟಡಗಳ ತವರಾಗಿರುವ ಮೈಸೂರಿನಲ್ಲಿ, ನಗರ ಪರಂಪರೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ಟಾಂಗಾ ಸ್ಟ್ಯಾಂಡ್ ನಿರ್ಮಾಣ ಕೆಲಸವು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

‘ಸ್ವದೇಶ ದರ್ಶನ 2.0’ ಯೋಜನೆಯಡಿ ನಗರದಲ್ಲಿ 10 ಸ್ಥಳಗಳಲ್ಲಿ ಟಾಂಗಾ ಸ್ಟ್ಯಾಂಡ್ ಸ್ಥಾಪಿಸಲು ಪಾಲಿಕೆ ಮುಂದಾಗಿದ್ದರೂ, ಅರಮನೆ ಮುಂಭಾಗದ ಚಾಮರಾಜೇಂದ್ರ ವೃತ್ತದ ಬಳಿ ಫುಟ್‌ಪಾತ್ ಮೇಲೆ ಸ್ಟ್ಯಾಂಡ್ ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಯನ್ನು ಗಾಳಿಗೆ ತೂರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರು, ಪಾಲಿಕೆ ಆಯುಕ್ತರಿಗೆ ಮೈಸೂರು ನಗರದ ವಾಸ್ತವವೇ ಗೊತ್ತಿಲ್ಲ. ಎಸಿ ಹಾಕಿಕೊಂಡು ಕಚೇರಿಯಲ್ಲಿ ಕೂತಿರುವ ಅವರಿಗೆ ಪಾದಚಾರಿ ಮಾರ್ಗ ಯಾವುದು, ಖಾಲಿ ಜಾಗ ಯಾವುದು ಎಂಬುದು ಹೇಗೆ ತಿಳಿಯುತ್ತದೆ? ಸಿಎಂ ಬಂದಾಗ ಹೂಗುಚ್ಚ ಕೊಡುವುದೇ ಅವರ ಕೆಲಸವಲ್ಲ. ಮೊದಲು ನಗರದಲ್ಲಿ ಓಡಾಡಿ ಸಮಸ್ಯೆ ಅರ್ಥ ಮಾಡಿಕೊಳ್ಳಲಿ. ಕೂಡಲೇ ಈ ಕಾಮಗಾರಿ ನಿಲ್ಲಿಸಿ, ಹಾಳಾದ ರಸ್ತೆ ಸರಿಪಡಿಸಲಿ’ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಪರಂಪರೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ಈ ಅವೈಜ್ಞಾನಿಕ ಕಾಮಗಾರಿ ಮೈಸೂರಿಗರ ನಿದ್ದೆಗೆಡಿಸಿದೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಪರ್ಯಾಯ ಜಾಗ ಹುಡುಕುತ್ತದೆಯೇ ಅಥವಾ ಸಾರ್ವಜನಿಕರ ಆಕ್ರೋಶಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

 

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್: ಖಾಸಗಿ ಬಸ್‌ ಟಿಕೆಟ್‌ ದರ ಮೂರು ಪಟ್ಟು ಹೆಚ್ಚಳ!

ಬೆಂಗಳೂರು: ಯುಗಾದಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಸಂಸ್ಥೆಗಳು ಟಿಕೆಟ್ ದರವನ್ನು 2–3 ಪಟ್ಟು ಹೆಚ್ಚಿಸಿರುವುದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ.

ಹಬ್ಬದ ಸಮಯವನ್ನು ಸದುಪಯೋಗ ಮಾಡಿಕೊಂಡು, ಬೆಂಗಳೂರಿನಿಂದ ವಿವಿಧ ನಗರಗಳಿಗೆ ಹೊರಡುವ ಬಸ್‌ಗಳಲ್ಲಿ ದರ ಏರಿಕೆ ತೀವ್ರವಾಗಿದೆ.

ಈಗ ದರ ಎಷ್ಟಿದೆ?
ಬೆಂಗಳೂರು – ಮಂಗಳೂರು:
600 ರೂ. – 2,999 ರೂ.

ಬೆಂಗಳೂರು – ಧಾರವಾಡ/ಹುಬ್ಬಳ್ಳಿ:
400-1,300 ರೂ. – 4,500 ರೂ.

ಬೆಂಗಳೂರು – ಶಿವಮೊಗ್ಗ:
400 ರೂ. – 2,799 ರೂ.

ಬೆಂಗಳೂರು – ಧರ್ಮಸ್ಥಳ:
500 ರೂ. – 3,600 ರೂ

ಬೆಂಗಳೂರು-ಮೈಸೂರು:
350 ರೂ. – 2,500 ರೂ.

ಹಬ್ಬಗಳು ಬಂದಾಗಲೆಲ್ಲ ಖಾಸಗಿ ಬಸ್‌ ಮಾಲೀಕರು ಬೇಕಾಬಿಟ್ಟಿಯಾಗಿ ಪ್ರಯಾಣ ದರ ನಿಗದಿ ಮಾಡುತ್ತಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಖಾಸಗಿ ಬಸ್‌ಗಳನ್ನು ನಿಯಂತ್ರಿಸಲು ಮುಂದಾಗದೆ ಕಣ್ಮುಚ್ಚಿ ಕೂತಿದ್ದಾರೆ. ಆರಂಭದಲ್ಲಿ ಕೆಲ ಕಡೆ ದಾಳಿ ನಡೆಸಿ ನಂತರ ಸುಮ್ಮನಾಗುತ್ತದೆ. ಇದೀಗ ಯುಗಾದಿ ಸಂದರ್ಭದಲ್ಲೂ ಖಾಸಗಿ ಬಸ್‌ಗಳು ದುಬಾರಿ ಪ್ರಯಾಣ ದರ ನಿಗದಿ ಮಾಡಿದ್ದರೂ, ಅದರ ನಿಯಂತ್ರಣಕ್ಕೆ ಸಾರಿಗೆ ಇಲಾಖೆ ಮುಂದಾಗಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

 

ಯುಗಾದಿಯಂದು ಬೇವು-ಬೆಲ್ಲ ಸೇವಿಸುವುದು ಯಾಕೆ? ಇದರ ವಿಶೇಷತೆ ತಿಳಿಯಿರಿ!

0

ಯುಗಾದಿ ಎಂದರೆ ಹೊಸ ವರ್ಷದ ಮೊದಲ ದಿನ. ಈ ದಿನವನ್ನು ಹಿಂದಿನ ವರ್ಷದ ಸಾಧನೆಗಳನ್ನು ಪರಿಶೀಲಿಸಿ, ಹೊಸ ವರ್ಷದಲ್ಲಿ ಯಾವ ಯೋಜನೆಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸುವ ದಿನವೆಂದು ಪರಿಗಣಿಸಲಾಗುತ್ತದೆ.

ವೇದಗಳಲ್ಲಿ ವರ್ಷವನ್ನು ರಥಕ್ಕೆ, ಅದರ ಚಕ್ರವನ್ನು ಉತ್ತರಾಯಣ ದಕ್ಷಿಣಾಯಣಗಳಿಗೆ ಹೋಲಿಸಲಾಗುತ್ತದೆ. ಈ ಕಾರಣದಿಂದಲೇ ವರ್ಷವನ್ನು ಯುಗ ಮತ್ತು ಅದರ ಮೊದಲ ದಿನವನ್ನು ಯುಗಾದಿ ಎಂದು ಕರೆಯಲಾಗಿದೆ.

ಹಬ್ಬದ ಪ್ರಮುಖ ಸಂಪ್ರದಾಯ ಬೇವು-ಬೆಲ್ಲ ಸೇವಿಸುವುದು. ಬೇವು- ಕಷ್ಟ, ನೋವು, ಸವಾಲುಗಳ ಸಂಕೇತವಾಗಿದ್ದು, ಬೆಲ್ಲವು ಸಂತೋಷ, ಯಶಸ್ಸು, ಸುಖದ ಸಂಕೇತವಾಗಿದೆ. ಜೀವನದಲ್ಲಿ ಕೇವಲ ಸುಖ ಅಥವಾ ಕಷ್ಟವಷ್ಟೇ ಇಲ್ಲ; ಇದು ಬೇವು-ಬೆಲ್ಲದ ಮಿಶ್ರಣದಂತೆ, ಸುಖ-ದುಃಖ, ಲಾಭ-ನಷ್ಟಗಳನ್ನೂ ಸಮಾನವಾಗಿ ಅನುಭವಿಸುತ್ತೇವೆ. ಈ ಆಚರಣೆ ನಮಗೆ ಜೀವನದಲ್ಲಿ ಸುಖ-ದುಃಖಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ತೋರಿಸುತ್ತದೆ.

ಬೇವು-ಬೆಲ್ಲ ಸೇವಿಸುವಾಗ “ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಮ್” ಎಂಬ ಶ್ಲೋಕವನ್ನು ಉಚ್ಚರಿಸುತ್ತಾರೆ. ಇದರ ಅರ್ಥ: ನೂರು ವರ್ಷಗಳ ಆಯುಷ್ಯ, ವಜ್ರದಂತೆ ದೃಢ ದೇಹ, ಸಂಪತ್ತು ಮತ್ತು ಎಲ್ಲ ಅನಿಷ್ಟಗಳ ನಿವಾರಣೆಗಾಗಿ ಈ ಬೇವನ್ನು ಸೇವಿಸುತ್ತೇನೆ. ಆಯುರ್ವೇದ ಪ್ರಕಾರ, ಬೇವಿನ ಎಲೆಗಳು ಅನಿಷ್ಟಗಳನ್ನು ನಾಶಮಾಡುತ್ತವೆ, ದೇಹವನ್ನು ಬಲಿಷ್ಠಗೊಳಿಸುತ್ತವೆ ಮತ್ತು ಆಯುಷ್ಯವನ್ನು ವೃದ್ಧಿಸುತ್ತವೆ.

ಹೀಗಾಗಿ ಯುಗಾದಿ ಹಬ್ಬವು ಹೊಸ ವರ್ಷಕ್ಕೆ ಶುಭಾರಂಭ ಮಾಡುವ ದಿನವಾಗಿದ್ದು, ಜೀವನದ ಸುಖ-ದುಃಖಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುವ ಪಾಠ ನೀಡುತ್ತದೆ.

 

ಗದಗ| ಮಲ್ಲಾಪೂರದಲ್ಲಿ ಭಾರೀ ಆಲಿಕಲ್ಲು ಮಳೆ, ಹಿಮಪಾತದಂತ ದೃಶ್ಯ – ಅಚ್ಚರಿಗೊಂಡ ಗ್ರಾಮಸ್ಥರು!

0

ಗದಗ: ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಆಗಿದ್ದು, ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

ಸರಿಸುಮಾರು ಒಂದೂವರೆ ಗಂಟೆಗಳ ಕಾಲ ನಿರಂತರವಾಗಿ ಸುರಿದ ಆಲಿಕಲ್ಲು ಮಳೆಯಿಂದ ಗ್ರಾಮದಲ್ಲಿ ಹಿಮಪಾತದಂತೆಯೇ ದೃಶ್ಯ ನಿರ್ಮಾಣವಾಗಿತ್ತು. ರಸ್ತೆಗಳು ಮತ್ತು ಮನೆಗಳ ಮುಂದೆ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದಿದ್ದು, ಪರಿಸರ ಸಂಪೂರ್ಣವಾಗಿ ಬಿಳಿಮಯವಾಗಿತ್ತು.

ಈ ಅಪರೂಪದ ದೃಶ್ಯಗಳನ್ನು ಗ್ರಾಮಸ್ಥರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ಗ್ರಾಮಸ್ಥರು ಒಂದೆಡೆ ಸಂತಸಗೊಂಡರೆ, ಮತ್ತೊಂದೆಡೆ ರೈತರು ಅಪಾರ ಪ್ರಮಾಣದ ಮೇವು, ಹೊಟ್ಟು ನೀರುಪಾಲಾಗಿ ಸಂಕಷ್ಟಕ್ಕೀಡಾಗಿದ್ದಾರೆ.

ಗದಗದಲ್ಲಿ ಕ್ರೂರ ಕೃತ್ಯ| ಅಣ್ಣನ ಮೋಹಕ್ಕೆ ತಮ್ಮ ಬಲಿ, ಹೆಣ್ಣಿನಾಸೆಗೆ ಒಡಹುಟ್ಟಿದವನನ್ನೇ ಕೊಂದ ಪಾಪಿ ಸಹೋದರ!

0

ಗದಗ:- ಒಂದು ಹುಡುಗಿಗಾಗಿ ಒಡ ಹುಟ್ಟಿದ ತಮ್ಮನನ್ನೆ ಅಣ್ಣನೋರ್ವ ಕೊಲೆಗೈದ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ಜರುಗಿದೆ.

ಅಶೋಕ ಕೊಲೆ ಮಾಡಿದ ಪಾಪಿ ಅಣ್ಣ. ಫಕ್ಕೀರಪ್ಪ ಕೊಲೆಗೀಡಾದ ದುರ್ಧೈವಿ. ಎಸ್, ಬೆಳೆದಿದ್ದ ಮಕ್ಕಳಿಗೆ ಪೋಷಕರು ಮದುವೆ ಪ್ಲ್ಯಾನ್ ಮಾಡಿದ್ದರು. ಅದರಂತೆ ಅಣ್ಣ-ತಮ್ಮ ಇಬ್ಬರು ಹುಡುಗಿ ನೋಡಿ ಬಂದಿದ್ದರು. ಆದ್ರೆ ಅಣ್ಣನಿಗೆ ತಮ್ಮ ನೋಡಿದ ಹುಡುಗಿ ಮೇಲೆ ಕಣ್ಣು ಬಿದ್ದಿದೆ. ಹೀಗಾಗಿ ಆ ಹುಡುಗಿ ಮದುವೆ ಆಗಲು ತಮ್ಮನೇ ಅಡ್ಡಿ ಎಂದು ತಿಳಿದು, ಪಾಪಿ ಸಹೋದರ ತಮ್ಮನನ್ನೇ ಕೊಲೆಗೈದಿದ್ದಾನೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಯಾರೋ ಕಿಡಿಗೇಡಿಗಳು ನನ್ನ ತಮ್ಮನನ್ನು ಹೊಡೆದು ಸಾಯಿಸಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ.

ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೋಲೀಸರು ಡಾಗ್ ಸ್ಕ್ವಾಡ್ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ನಾಯಿ ನೇರವಾಗಿ ಅಶೋಕನ ಬಳಿ ಬಂದು ನಿಲ್ಲುತ್ತೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಾಗ ಹುಡುಗಿ ವಿಚಾರವಾಗಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗದಗ ಎಸ್ಪಿ ರೋಹನ್ ಜಗದೀಶ್ ಹೇಳಿದ್ದೇನು?

ಘಟನೆ ಕುರಿತು ಗದಗ ಎಸ್ಪಿ ರೋಹನ್ ಜಗದೀಶ್ ಮಾತನಾಡಿ, ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕಮೂಲಂಗಿ ಗ್ರಾಮದ ನಿವಾಸಿಗಳಾದ ಇಬ್ಬರು ಸಹೋದರರು ಕುರಿಗಾಯಿಗಳಾಗಿದ್ದರು‌. ನಿತ್ಯ ಒಂದೊಂದು ಜಮೀನುಗಳಿಗೆ ಹೋಗಿ ಕುರಿಗಳನ್ನು ಮೇಯಿಸಿಕೊಂಡು ಹೋಗ್ತಾಯಿದ್ರು. ಹೀಗಾಗಿ ಮಕ್ಕಳ‌ ಮದುವೆ ಮಾಡಲು ಪೋಷಕರು ಪ್ಲಾನ್ ಮಾಡಿದ್ರು.

ಆದ್ರೆ ಒಂದು ಹುಡುಗಿ ವಿಚಾರವಾಗಿ ಇಬ್ಬರು ಗಲಾಟೆ ಮಾಡಿಕೊಂಡಿದ್ದು, ಸಾವಿನಲ್ಲಿ ಅಂತ್ಯವಾಗಿದೆ. ಪೊಲೀಸರು ಘಟನೆ ಸಂಬಂಧ ತನಿಖೆ ಚುರುಕುಗೊಳಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೃದಯದಿಂದ ಚರ್ಮದವರೆಗೆ…ದಾಳಿಂಬೆ ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಲಾಭಗಳು!

0

ದಾಳಿಂಬೆ ಹಣ್ಣು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಹಣ್ಣಾಗಿದೆ. ಸಣ್ಣ ಕೆಂಪು ಕಣಗಳಂತೆ ಕಾಣುವ ಬೀಜಗಳನ್ನು ಹೊಂದಿರುವ ಈ ಹಣ್ಣು ಪೋಷಕಾಂಶಗಳ ಭಂಡಾರವೆಂದೇ ಹೇಳಬಹುದು.

ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ನಾರಿನಾಂಶ, ಸಿ ಮತ್ತು ಕೆ ಜೀವಸತ್ವಗಳು, ಪೊಟ್ಯಾಸಿಯಂ ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ. ಪ್ರತಿದಿನ ದಾಳಿಂಬೆ ಸೇವನೆ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಜೀರ್ಣಾಂಗ ವ್ಯವಸ್ಥೆಯೂ ಉತ್ತಮವಾಗಿರುತ್ತದೆ.

ದಾಳಿಂಬೆ ಸೇವನೆಯಿಂದ ರಕ್ತಹೀನತೆ ನಿವಾರಣೆಯಾಗುತ್ತದೆ. ಇದರಲ್ಲಿ ಇರುವ ಕಬ್ಬಿಣಾಂಶ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ದೇಹದಲ್ಲಿ ರಕ್ತದ ಪ್ರಮಾಣವನ್ನು ಸುಧಾರಿಸುತ್ತದೆ. ಜೊತೆಗೆ ಮುಖದ ನೈಸರ್ಗಿಕ ಕಾಂತಿಯೂ ಹೆಚ್ಚುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತವೆ ಹಾಗೂ ಸಂಧಿವಾತದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತವೆ.

ಹೃದಯ ಆರೋಗ್ಯಕ್ಕೂ ದಾಳಿಂಬೆ ಬಹಳ ಉಪಯುಕ್ತವಾಗಿದೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು, ರಕ್ತನಾಳಗಳನ್ನು ಆರೋಗ್ಯಕರವಾಗಿಡಲು ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಹೃದಯಾಘಾತದ ಅಪಾಯವನ್ನೂ ಕಡಿಮೆ ಮಾಡುತ್ತದೆ. ದಾಳಿಂಬೆ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಶೀತ, ಕೆಮ್ಮು, ನೆಗಡಿ ಮುಂತಾದ ಸಾಮಾನ್ಯ ಸೋಂಕುಗಳನ್ನು ತಡೆಯಲು ನೆರವಾಗುತ್ತದೆ.

ಇದಲ್ಲದೆ ದಾಳಿಂಬೆ ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಮೆದುಳಿನ ಆರೋಗ್ಯಕ್ಕೂ ಇದು ಸಹಕಾರಿ ಆಗಿದ್ದು, ಸ್ಮರಣಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡಿ ಕಾಂತಿ ಹೆಚ್ಚಿಸುವುದಲ್ಲದೆ ವಯಸ್ಸಾಗುವ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ದಾಳಿಂಬೆ ಮಧುಮೇಹ ಇರುವವರಿಗೆ ಉಪಯುಕ್ತವಾಗಿದೆ. ಜೊತೆಗೆ ತ್ವರಿತ ಶಕ್ತಿಯನ್ನು ಒದಗಿಸುವ ಗುಣ ಹೊಂದಿರುವುದರಿಂದ ದಿನನಿತ್ಯದ ಆಹಾರದಲ್ಲಿ ಇದನ್ನು ಸೇರಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಗದಗದಲ್ಲಿ ವರುಣನ ಅಬ್ಬರ, ರೋಣದಲ್ಲಿ ಆಲಿಕಲ್ಲು ಮಳೆ: ಸಿಡಿಲು ಬಡಿದು ರೈತ ಸಾವು – ಹೊಟ್ಟು, ಮೇವು ನೀರು ಪಾಲು!

0

ಗದಗ: ಜಿಲ್ಲೆಯ ಹಲವೆಡೆ ಇಂದು ಸಂಜೆ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ರೋಣ ತಾಲೂಕಿನ ವಿವಿಧ ಭಾಗಗಳಲ್ಲಿ ಆಲಿಕಲ್ಲು ಮಳೆಯೂ ಸುರಿದಿದೆ.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯು ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪು ನೀಡಿದರೂ, ರೈತರಿಗೆ ಸಂಕಷ್ಟ ತಂದೊಡ್ಡಿದೆ.

ರೋಣ ಪಟ್ಟಣ ಸೇರಿದಂತೆ ಕುರಹಟ್ಟಿ, ಜಕ್ಕಲಿ, ಮಲ್ಲಾಪೂರ, ಸೂಡಿ, ಅಬ್ಬಿಗೇರಿ ಗ್ರಾಮಗಳಲ್ಲಿ ಮಳೆ ಜೋರಾಗಿ ಸುರಿದಿದೆ. ಸಂಜೆ ಸುಮಾರು 4 ಗಂಟೆ ವೇಳೆಗೆ ಗಾಳಿ, ಮಿಂಚು, ಗುಡುಗು-ಸಿಡಿಲಿನೊಂದಿಗೆ ವರುಣ ಆರ್ಭಟ ಮೆರೆದಿದ್ದು, ಪರಿಣಾಮ ಎರಡು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು.

ಭಾರೀ ಮಳೆಯಿಂದ ಚರಂಡಿ ನೀರು ರಸ್ತೆಗೆ ಹರಿದುಬಂದ ಪರಿಣಾಮ ವ್ಯಾಪಾರಸ್ಥರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಅಕಾಲಿಕ ಮಳೆಯಿಂದ ಜಾನುವಾರುಗಳಿಗೆ ಸಂಗ್ರಹಿಸಿದ್ದ ಹೊಟ್ಟು ಮೇವು ನೀರು ಪಾಲಾಗಿದ್ದು, ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಮಳೆ ಅವಾಂತರ: ಸಿಡಿಲು ಬಡಿದು ರೈತ ಸಾವು!

ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಇಂದು ಸುರಿದ ಧಾರಾಕಾರ ಮಳೆಗೆ ಸಿಡಿಲು ಬಡಿದು ರೈತನೋರ್ವ ಸಾವನ್ನಪ್ಪಿದ್ದಾನೆ.

ನಿಂಗಪ್ಪ ರಾಮಪ್ಪ ಅಮಾತಿ (58) ಮೃತ ರೈತ. ಇಂದು ಸಾಯಂಕಾಲ ಸರಿಸುಮಾರು 5.30ರ ಸುಮಾರಿಗೆ ಹೊಲದಿಂದ ಬರುವಾಗ ಬೆನ್ನಿ ಹಳ್ಳದ ಹತ್ತಿರ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ರೈತನ ಸಾವಿನಿಂದಾಗಿ ಕುಟುಂಬ ಕಂಗಾಲಾಗಿದ್ದು, ಘಟನೆ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!