Home Blog Page 32

ಜ. 25ರಂದು ಶ್ರೀ ಚನ್ನವೀರ ಶರಣರ ಜಾತ್ರಾ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಮೌನಯೋಗಿ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ಜ. 25ರಂದು ಸಂಜೆ 5 ಗಂಟೆಗೆ ಜರುಗುವದು. ಜಾತ್ರಾ ಮಹೋತ್ಸವದ ಅಂಗವಾಗಿ ಮಹಾತ್ಮರ ಜೀವನ ದರ್ಶನ ಪ್ರವಚನ, ಮಹಾರಥೋತ್ಸವ, ಲಘು ರಥೋತ್ಸವ, ಜಾನಪದ ಕಲಾಮೇಳ, ಸಾಮೂಹಿಕ ವಿವಾಹಗಳು, ಸುಮಂಗಲೆಯರಿಗೆ ಉಡಿ ತುಂಬುವದು, ತುಲಾಭಾರ, ಧಾರ್ಮಿಕ ಚಿಂತನಗೋಷ್ಠಿ ಹಾಗೂ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು ಹೇಳಿದರು.

ಅವರು ನಗರದ ಪತ್ರಿಕಾಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ. 24ರಂದು ಬೆಳಿಗ್ಗೆ 8 ಗಂಟೆಗೆ ಕುಷ್ಟಗಿಯ ಮದ್ದಾನಿ ಹಿರೇಮಠದ ಪೂಜ್ಯಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹಿರೇವಡ್ಡಟ್ಟಿ ಹಿರೇಮಠದ ಪೂಜ್ಯಶ್ರೀ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 5 ಗಂಟೆಗೆ ಪ್ರಕಾಶ ಜಗದೀಶಪ್ಪ ಹುಗ್ಗಿ ಹಾಗೂ ಶರಣರ ಬಳಗ ರೋಣ ಅವರ ಮಹಾಮನೆಯಿಂದ ರಥದ ಕಳಸ ಆಗಮಿಸುವದು. ಸಂಜೆ 6 ಗಂಟೆಗೆ ಲಘು ರಥೋತ್ಸವ ಜರುಗುವದು.

ಸಂಜೆ 7 ಗಂಟೆಗೆ ಮಹಾತ್ಮರ ಜೀವನ ದರ್ಶನ ಪ್ರವಚನ ಮಂಗಲೋತ್ಸವ ಜರುಗುವದು. ಹೂವಿನ ಹಡಗಲಿ ಗವಿಮಠದ ಪೂಜ್ಯಶ್ರೀ ಡಾ. ಹಿರಿಯ ಶಾಂತವೀರ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯ ವಹಿಸುವರು. ಅಣದೂರ ನೀಲಕಂಠೇಶ್ವರ ಮಠದ ಪೂಜ್ಯಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ರಬಕವಿ ಬ್ರಹ್ಮಾನಂದ ಶ್ರೀಮಠದ ಪೂಜ್ಯಶ್ರೀ ಗುರುಸಿದ್ದೇಶ್ವರ ಸ್ವಾಮಿಗಳು ಸಮ್ಮುಖ ವಹಿಸುವರು. ಬಳೂಟಗಿಯ ಹಿರೇಮಠದ ಪೂಜ್ಯಶ್ರೀ ಶಿವಕುಮಾರ ಸ್ವಾಮಿಗಳು ಪ್ರವಚನ ಮಂಗಲದ ನುಡಿ ಆಡುವರು. ಸೋಮನಾಳದ ಶರಣು ಕೆ. ಹಿರೇಮಠ ಸಂಗೀತ ಸೇವೆ ನೀಡುವರು. ಗದುಗಿನ ಪಂಚಾಕ್ಷರಿ ಹೂಗಾರ ತಬಲಾ ಸಾಥ್ ನೀಡುವರು. ಇದೇ ಸಂದರ್ಭದಲ್ಲಿ ಶ್ರೀಮಠದ ಪೂಜ್ಯರಿಗೆ ದಾನಿಗಳಿಂದ ತುಲಾಭಾರದ ಭಕ್ತಿಸೇವೆ ಜರುಗಲಿದೆ ಎಂದರು.

ಜ. 25ರಂದು ಬೆಳಿಗ್ಗೆ 5 ಗಂಟೆಗೆ ಶ್ರೀ ಚನ್ನವೀರ ಶರಣರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಲಿಂಗದೀಕ್ಷೆ, ಅಯ್ಯಾಚಾರ ಜರುಗಲಿದೆ. ಮೈನಳ್ಳಿ ಹಾಗೂ ಬಿಕನಳ್ಳಿ ಹಿರೇಮಠದ ಪೂಜ್ಯಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿಯ ವಿಶ್ವನಾಥ ಮಂದಿರದ ವೇ.ಮೂ. ಬಸಯ್ಯ ಶಾಸ್ತ್ರಿಗಳು, ಅಮರಾಪೂರದ ವೇ.ಮೂ. ಶ್ರೀ ಚನ್ನವೀರಯ್ಯ ಶಾಸ್ತ್ರಿಗಳು ಹಾಗೂ ಶ್ರೀಮಠದ ವೈದಿಕ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೈದಿಕ ಕಾರ್ಯಕ್ರಮಗಳು ಜರುಗುವವು.

ಬೆಳಿಗ್ಗೆ 10 ಗಂಟೆಗೆ ಪೂಜ್ಯಶ್ರೀ ಚನ್ನವೀರ ಶರಣರ ಹರಕೆಯ ತೇರನ್ನು ಪೂಜ್ಯರು ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸುವರು. 10.30 ಗಂಟೆಗೆ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಕಲ್ಯಾಣ ಮಹೋತ್ಸವ ಜರುಗುವದು. ಈ ಕಾರ್ಯಕ್ರಮದಲ್ಲಿ ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಪೂಜ್ಯಶ್ರೀ ಜ. ಬೂದೀಶ್ವರ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯ ವಹಿಸುವರು. ಅಗಡಿ-ಅಕ್ಕಿಮಠದ ಪೂಜ್ಯಶ್ರೀ ಗುರುಲಿಂಗ ಮಹಾಸ್ವಾಮಿಗಳು, ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರು ಸಮ್ಮುಖ ವಹಿಸುವರು. ಗದುಗಿನ ವೆಂಕಟೇಶ ಆಲ್ಕೋಡ ಹಾಗೂ ತಂಡದವರಿಂದ ಭಕ್ತಿಸಂಗೀತ ಕಾರ್ಯಕ್ರಮ ಜರುಗುವುದು.

ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೌತಾಳದ ಪ್ರಗತಿಪರ ಕೃಷಿ ಮಹಿಳೆ ಡಾ. ಕವಿತಾ ಮಿಶ್ರಾ, ಬಾಗಲಕೋಟೆಯ ಅನ್ನಪೂರ್ಣ ಬಸಯ್ಯ ಬಳೂಲಮಠ ಹಾಗೂ ಬೆಂಗಳೂರಿನ ಕಡಬಗೆರೆ ಮುನಿರಾಜ ಮತ್ತು ತಂಡ ಇವರಿಗೆ ಸಿದ್ದಲಿಂಗನಗೌಡ ಎಸ್. ಜಂಗ್ಲೆಪ್ಪಗೌಡ್ರ ಮೆಮೋರಿಯಲ್ ಉಮಾ ವಿದ್ಯಾಶ್ರೀ ಟ್ರಸ್ಟ್ ನವಲಗುಂದ ಇವರ ಸಂಯುಕ್ತಾಶ್ರಯದಲ್ಲಿ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ನಂತರ ಬೆಂಗಳೂರಿನ ಕಡಬಗೆರೆ ಮುನಿರಾಜ ಮತ್ತು ತಂಡದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗುವದು. ಸಂಜೆ 4 ಗಂಟೆಗೆ ಬಳಗಾನೂರಿನ ಶರಣರ ಬಳಗ ಹಾಗೂ ಡಾ. ಶಿವಕುಮಾರಯ್ಯ ಶಂಕ್ರಯ್ಯ ಹಿರೇಮಠ ಅವರ ಮಹಾಮನೆಯಿಂದ ರಥದ ಹಗ್ಗವನ್ನು ತರಲಾಗುವದು. ಸಂಜೆ 5 ಗಂಟೆಗೆ ಪೂಜ್ಯಶ್ರೀ ಜಗದ್ಗುರುಗಳು, ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಮಹಾರಥೋತ್ಸವ ಜರುಗುವದು.

ಸಂಜೆ 6 ಗಂಟೆಗೆ ಧಾರ್ಮಿಕ ಚಿಂತನಗೋಷ್ಠಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಜಗದ್ಗುರು ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯ ವಹಿಸುವರು. ಹೂವಿನಶಿಗ್ಲಿ ವಿರಕ್ತಮಠದ ಪೂಜ್ಯಶ್ರೀ ಚನ್ನವೀರ ಮಹಾಸ್ವಾಮಿಗಳು ಹಾಗೂ ಕನಕಗಿರಿ ಸುವರ್ಣಗಿರಿ ವಿರಕ್ತಮಠದ ಪೂಜ್ಯಶ್ರೀ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಉಪದೇಶಾಮೃತ ನೀಡುವರು.

ಹೆಬ್ಬಾಳ ಬ್ರಹ್ಮಮಠದ ಪೂಜ್ಯಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಸುಕ್ಷೇತ್ರ ಗುಡದೂರಿನ ಪೂಜ್ಯಶ್ರೀ ನೀಲಕಂಠ ತಾತನವರು, ಖಜ್ಜಿಡೋಣಿಯ ಪೂಜ್ಯಶ್ರೀ ಕೃಷ್ಣಾನಂದ ಶಾಸ್ತ್ರಿಗಳು ಸಮ್ಮುಖ ವಹಿಸುವರು. ದಿಯಾ ಪೀರಸಾಬ ಕೌತಾಳ ಅವರಿಂದ ಸಂಗೀತ ಕಾರ್ಯಕ್ರಮ ನಡೆಯುವದು. ಬೆಂಗಳೂರು ಆಕಾಶವಾಣಿಯ ನಿರೂಪಕಿ ಸವಿತಾ ಶಿವಕುಮಾರ ಕಾರ್ಯಕ್ರಮ ನಿರೂಪಿಸುವರು.

ಜ. 26ರಂದು ಸಂಜೆ 5 ಗಂಟೆಗೆ ಕಡುಬಿನ ಕಾಳಗ ಹಾಗೂ ಶ್ರೀ ಶರಣರ ಬೆಳ್ಳಿಮೂರ್ತಿ ಉತ್ಸವ ಜರುಗುವದು. ಸುಕ್ಷೇತ್ರ ಬಳಗಾನೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಚನ್ನವೀರ ಶರಣರ ಬೆಳ್ಳಿಮೂರ್ತಿ ಉತ್ಸವ ಜರುಗುವದು. ನಂತರ ಶ್ರೀಮಠದಲ್ಲಿ ಕಡುಬಿನ ಕಾಳಗ ಜರುಗುವದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎ.ಎನ್. ನಾಗರಳ್ಳಿ, ವಿ.ಬಿ. ಪೊಲೀಸಪಾಟೀಲ, ಎಂ.ಬಿ. ಸಿಕ್ಕೆದೇಸಾಯಿ, ವಿ.ಎಸ್. ಹಿರೇಮಠ, ಎಸ್.ಬಿ. ಪಾಟೀಲ, ಎಸ್.ಎಸ್. ಪಾಟೀಲ, ಶಿವಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಸಿದ್ದಾಪೂರ, ವಸಂತಮೇಟಿ, ಶೇಖಣ್ಣ ಗದ್ದಿಕೇರಿ, ಮನ್ನಾಪೂರ, ಗೌರಿಪೂರ, ವೈ.ಬಿ. ಡೊಳ್ಳಿನ, ಎಚ್.ಎಸ್. ವೆಂಕಟಾಪೂರ ಮುಂತಾದವರು ಉಪಸ್ಥಿತರಿದ್ದರು.

ಜ. 26ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಗಾಯಕರಾದ ಡಾ. ಶ್ರೀರಾಮ ಕಾಸರ್ ಮತ್ತು ತಂಡದವರಿಂದ ರಸಮಂಜರಿ ಹಾಗೂ ಚಲನಚಿತ್ರ ನಟ ಪ್ರವೀಣ ಗಸ್ತಿ ಮತ್ತು ಕಾಮಿಡಿ ಕಿಲಾಡಿಗಳಿಂದ ಹಾಸ್ಯ ಸಂಜೆ ಜರುಗುವದು. ರಾತ್ರಿ 9 ಗಂಟೆಗೆ ಸಿಡಿಮದ್ದು ಸುಡುವ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಬಳ್ಳಾರಿಯ ಅಭಿನಯ ಕಲಾಕೇಂದ್ರ ಅವರಿಂದ ಅಲ್ಲಿಪುರದ ಮಹಾದೇವ ತಾತನವರ ಭಕ್ತಿ ಪ್ರಧಾನ ನಾಟಕ ಪ್ರದರ್ಶನವಾಗಲಿದೆ ಎಂದು ಪೂಜ್ಯ ಶ್ರೀಗಳು ಹೇಳಿದರು.

ನುಡಿದಂತೆ ನಡೆದ ಶರಣ ಅಂಬಿಗರ ಚೌಡಯ್ಯ: ಅಶೋಕ ಹುಬ್ಬಳ್ಳಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಬುಧವಾರ ಶಿರಹಟ್ಟಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿಯ ಅಂಗವಾಗಿ ಪಟ್ಟಣದ ಮ್ಯಾಗೇರಿ ಓಣಿಯಿಂದ ಬೃಹತ್ ಭಾವಚಿತ್ರ ಮೆರವಣಿಗೆಯ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ ಕಚೇರಿಯಲ್ಲಿ ತಾಲೂಕಾ ಆಡಳಿತದ ವತಿಯಿಂದ ಜಯಂತಿ ಆಚರಿಸಲಾಯಿತು.

ಅಂಬಿಗರ ಚೌಡಯ್ಯ ಸಮಾಜದ ತಾಲೂಕಾಧ್ಯಕ್ಷ ಅಶೋಕ ಹುಬ್ಬಳ್ಳಿ ಮಾತನಾಡಿ, ಚೌಡಯ್ಯನವರು ಕಲ್ಯಾಣದಲ್ಲಿ ತ್ರಿಪುರಾಂತಕ ಕೆರೆಯಲ್ಲಿ ದೋಣಿ ನಡೆಸುವ ಕಾಯಕ ಕೈಗೊಂಡು ಕಾಯಕ, ದಾಸೋಹ, ಶಿವಯೋಗ ಸಾಧನೆಯ ಮೂಲಕ ಅನೇಕ ವಚನಗಳನ್ನು ಬರೆದಿದ್ದಾರೆ. ಬೆನ್ನಿಗೆ ವಚನ ಸಾಹಿತ್ಯ ಕಟ್ಟುಗಳನ್ನು ಕಟ್ಟಿಕೊಂಡು ಖಡ್ಗ ಹಿಡಿದು ಹೋರಾಡಿದ ವೀರ ಗಣಾಚಾರಿ ಶರಣರಾಗಿದ್ದಾರೆ. ತುಂಬಿದ ನದಿಯಲ್ಲಿ ದೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರನಲ್ಲದೇ, ಭವಸಾಗರವೆಂಬ ಈ ಸಂಸಾರದ ವಾರಿಧಿಯನ್ನು ಅರಿವೆಂಬ ಹುಟ್ಟು ಹಾಕಿ ದಾಟಿಸುವ ಕೌಶಲ್ಯವುಳ್ಳವರಾಗಿದ್ದರು. ಅಪಾರ ಅನುಭವದ ಅಮೃತವನ್ನು ಚಾಟಿ ಏಟಿನೊಂದಿಗೆ ಕೊಟ್ಟು ಹೊಡೆದೆಬ್ಬಿಸಿ ಚುಚ್ಚು ಮಾತಿನ ಬಿಚ್ಚು ಹೃದಯದ ಕೆಚ್ಚಿನ ಅಮರ ವಚನಗಳು, ನುಡಿದಂತೆ ನಡೆದ, ನಡೆದಂತೆ ನುಡಿದ ಧೀರ-ವೀರ ಶರಣರಾಗಿದ್ದರು ಇವರ ಆದರ್ಶ ಇಂದಿನ ಸಮಾಜಕ್ಕೆ ಸ್ಫೂರ್ತಿಯಾಗಿದೆ ಎಂದರು.

ತಾಲೂಕಾ ಆಡಳಿತದ ವತಿಯಿಂದ ತಹಸೀಲ್ದಾರ ಕಚೇರಿಯಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಪಾಲ್ಗೊಂಡು ಮಾತನಾಡಿದರು.

ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಸಬ್ ರಜಿಸ್ಟ್ರಾರ್ ಶರಣಪ್ಪ ಪವಾರ, ಎಚ್.ಎಂ. ದೇವಗಿರಿ, ಹೊನ್ನಪ್ಪ ಶಿರಹಟ್ಟಿ, ರವಿ ಗುಡಿಮನಿ, ಪ್ರವೀಣ ಹುಬ್ಬಳ್ಳಿ, ಆನಂದ ಕೋಳಿ, ಬಾಬಾಜಾನ ಕೋಳಿವಾಡ, ಶಫಿ ಹೆಸರೂರ, ಪ್ರಕಾಶ ಸುಣಗಾರ, ಮಂಜು ಹುಬ್ಬಳ್ಳಿ, ಪ್ರಶಾಂತ ಹುಬ್ಬಳ್ಳಿ, ಕೃಷ್ಣಪ್ಪ ಹುಬ್ಬಳ್ಳಿ, ಕಾರ್ತಿಕ ಸುಣಗಾರ, ಉಮ್ಮಣ್ಣ ಸುಣಗಾರ, ನಿಂಗಪ್ಪ ಹುಬ್ಬಳ್ಳಿ, ಸಂಜು ಹುಬ್ಬಳ್ಳಿ, ಪ್ರದೀಪ ಹುಬ್ಬಳ್ಳಿ, ಚಂದ್ರಶೇಖರ ಹುಬ್ಬಳ್ಳಿ, ಶಂಕರಪ್ಪ ಬಾರ್ಕಿ, ನಿಂಗಪ್ಪ ವಡವಿ, ಶರಣಪ್ಪ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ರಾಘವೇಂದ್ರ ರಾವ್, 12ನೇ ಶತಮಾನದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಆ ಕಾಲದ ಅಸಂಖ್ಯಾತ ಶರಣ ಸಂಕುಲದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ವೀರಗಣಾಚಾರಿ, ತತ್ವನಿಷ್ಠೆ, ಶ್ರೇಷ್ಠ ತತ್ವಜ್ಞಾನಿಯಾಗಿ, ವಚನಕಾರರಾಗಿ ಅನೇಕ ಬಿರುದುಗಳನ್ನು ಪಡೆದು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದರು ಎಂದರು.

ಶಿಸ್ತು, ಪರಿಶ್ರಮದಿಂದ ಸಾಧನೆ ಸಾಧ್ಯ: ಸಿದ್ದಲಿಂಗ ಬಂಡು ಮಸನಾಯಕ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮಕ್ಕಳು ಸಾಧನೆ ಮಾಡುವ ಆಸಕ್ತಿ ಹಾಗೂ ಇಚ್ಛಾಶಕ್ತಿಯಿಂದ ಕಲಿತರೆ ಎಲ್ಲಾ ಪಾಠಗಳನ್ನು ಸರಳವಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಶಿಸ್ತು ಮತ್ತು ಪರಿಶ್ರಮದಿಂದ ಸಾಧನೆ ಮಾಡಬಹುದಾಗಿದೆ ಎಂದು ಗದಗ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗ ಬಂಡು ಮಸನಾಯಕ ಹೇಳಿದರು.

ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ನೂತನ ಪ್ರಾಯೋಗಿಕ ಪರೀಕ್ಷಾ ಕೇಂದ್ರದ ಉದ್ಘಾಟನೆ, ವಿವಿಧ ಸಾಂಘಿಕ ಚಟುವಟಿಕೆಗಳ ಸಮಾರೋಪ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು. ವೈಯಕ್ತಿಕ ಬೆಳವಣಿಗೆ ಮಾತ್ರವಲ್ಲದೆ ಸಮಾಜ ಮತ್ತು ದೇಶದ ಪ್ರಗತಿ ಬಗ್ಗೆಯೂ ವಿದ್ಯಾರ್ಥಿ, ಯುವಜನರಿಗೆ ಜವಾಬ್ದಾರಿ ಇರಬೇಕು. ಓದುವ ಸಮಯದಲ್ಲಿ ಕಾಲಹರಣ ಮಾಡಿದರೆ ಕಷ್ಟ, ನೋವು ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬಾರದು. ನೈತಿಕ ಮಾರ್ಗದಲ್ಲಿ ನಡೆದು ಗುರಿ ಸಾಧನೆ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಚೇರಮನ್ ವೀರಯ್ಯ ವಿ.ವಸ್ತ್ರದ, ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಂಯಮ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅಭ್ಯಾಸದ ಜೊತೆಗೆ ಮಕ್ಕಳ ಆರೋಗ್ಯಕ್ಕೆ ಹಾಗೂ ನೈತಿಕತೆಗೆ ಪಾಲಕರು, ಶಿಕ್ಷಕರು ಕಾಳಜಿ ವಹಿಸಬೇಕು. ಮಾನವನ ಬದುಕಿನಲ್ಲಿ ಸಮಯ ಕೋಟಿ ಕೊಟ್ಟರೂ ಸಿಗದು. ಹೀಗಾಗಿ ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅಂದಾಗ ಮಾತ್ರ ದೇಶ ಮೆಚ್ಚುವಂತಹ ಸಾಧನೆಗೈಲು ಸಾಧ್ಯ. ಜೀವನದಲ್ಲಿ ಎಲ್ಲರೂ ಯಶಸ್ಸಿನ ಕನಸು ಕಾಣುತ್ತಾರೆ. ಅದಕ್ಕೆ ತಕ್ಕುದಾದ ತಯಾರಿ ಮಾಡುವುದಿಲ್ಲ. ಅದನ್ನು ನೀವು ಮಾಡಬೇಕು ಎಂದು ಸಲಹೆ ನೀಡಿದರು.

ಆರಂಭದಲ್ಲಿ ನೂತನ ಪ್ರಾಯೋಗಿಕ ಕೇಂದ್ರದ ಉದ್ಘಾಟನೆ ನೆರವೇರಿತು. ನಂತರ ದಾನಿಗಳ, ಗಣ್ಯರ ಸನ್ಮಾನ ಜರುಗಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಎಸ್‌ಎವಿವಿಪಿಯ ಶೈಕ್ಷಣಿಕ ಸಲಹೆಗಾರ ಬಿ.ಎಸ್. ಗೌಡರ, ಗಜೇಂದ್ರಗಡ ಅಂಗಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಶಿವಾನಂದ ಮಠದ, ಎಸ್‌ಎಪಿಯು ಕಾಲೇಜ್ ನರೇಗಲ್‌ನ ಚೇರಮನ್ ಎಂ.ಜಿ. ಸೋಮನಕಟ್ಟಿ, ಆಡಳಿತ ಮಂಡಳಿ ಸದಸ್ಯ ಎಂ.ಪಿ. ಪಾಟೀಲ, ಅನ್ನದಾನೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಚೇರಮನ್ ಪಿ.ಎನ್. ಚವಡಿ, ಕುಮಾರೇಶ್ವರ ಪದವಿ ಕಾಲೇಜಿನ ಚೇರಮನ್ ವೀರಣ್ಣ ಶೆಟ್ಟರ, ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ, ಸಮಾಜ ಸೇವಕ ರಾಜು ಸಾಂಗ್ಲಿಕರ, ವಕೀಲ ರಫೀಕ ತೋರಗಲ್ಲ, ಗಜೇಂದ್ರಗಡ ತಾಲೂಕು ಕಾನಿಪ ಅಧ್ಯಕ್ಷ ಮಂಜುನಾಥ ಎಸ್.ರಾಠೋಡ, ಗದಗ ಜಿಲ್ಲಾ ಕಾನಿಪ ಕಾರ್ಯಕಾರಿಣಿ ಸದಸ್ಯ ಶಿವಕುಮಾರ ಶಶಿಮಠ, ಎ.ಕೆ. ಒಂಟಿ, ಪ್ರಾಚಾರ್ಯರಾದ ವಸಂತರಾವ್ ಗಾರಗಿ, ಬಸಯ್ಯ ಹಿರೇಮಠ, ಎ.ಪಿ. ಗಾಣಗೇರ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಂಜುನಾಥ ಕಾಡದ ಇದ್ದರು.

ಪ್ರಸ್ತುತ ಸಮಾಜಕ್ಕೆ ವಿಜ್ಞಾನದ ಕೊಡುಗೆ ಕುರಿತು ಉಪನ್ಯಾಸ ನೀಡಿದ ಶಿವಾನಂದ ಕಲ್ಲೂರ ಮಾತನಾಡಿ, ವಿಜ್ಞಾನ ಕಠಿಣವಾಗಿದ್ದು, ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಆದರೆ ವಿಜ್ಞಾನವನ್ನು ಎಲ್ಲರೂ ಓದಬಹುದಾಗಿದ್ದು, ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ನನ್ನಿಂದ ಕಷ್ಟ ಎನ್ನುವ ಭಾವನೆಯಿಂದ ಹೊರಬಂದು ಇಷ್ಟಪಟ್ಟಾಗ ಮನನ ಸಾಧ್ಯವಿದೆ. ಯಾವುದೇ ವಿಷಯಗಳ ಮೂಲ ಪರಿಕಲ್ಪನೆ ಅರ್ಥವಾಗದಿದ್ದಾಗ ಅದು ಕಠಿಣ ಅನ್ನಿಸುತ್ತದೆ. ಹೀಗಾಗಿ ಮೂಲ ಪರಿಕಲ್ಪನೆ ಮೊದಲಿಗೆ ಅರ್ಥೈಸಿಕೊಳ್ಳಬೇಕಿದೆ. ಜಗತ್ತಿನಲ್ಲಿಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕಾದರೆ ವಿಜ್ಞಾನವನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಮೆಣಸಿನಕಾಯಿ ನೇಮಕ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಭಾರತೀಯ ಜನತಾ ಪಾರ್ಟಿಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಿರಹಟ್ಟಿ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಪಕ್ಷದ ಯುವ ಮುಖಂಡ ಗಂಗಾಧರ ಮೆಣಸಿನಕಾಯಿ ನೇಮಕಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶದಂತೆ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರಡಗಿ ನೇಮಕ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಡಾ. ಚಂದ್ರು ಲಮಾಣಿ, ಗಂಗಾಧರ ಮೆಣಸಿನಕಾಯಿ ಅವರು ಕಳೆದ ಹತ್ತಾರು ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ, ನಗರ, ತಾಲೂಕಾ ಘಟಕಗಳ ಪದಾಧಿಕಾರಿಯಾಗಿ ಪಕ್ಷದ ಸಂಘಟನೆಯ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷದ ಕಾರ್ಯ ಚಟುವಟಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಎಲ್ಲರ ವಿಶ್ವಾಸ ಗಳಿಸಿದ್ದಾರೆ. ಮಂಡಲದ ಪ್ರ. ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಕಲಿ ದಾಖಲೆ ಸೃಷ್ಟಿಸಿ ರಾಚೋಟೇಶ್ವರ ನಗರದ ನಿವಾಸಿಗಳಿಗೆ ತೊಂದರೆ ನೀಡುತ್ತ ಸರ್ಕಾರಿ ಕಾಮಗಾರಿಗಳಿಗೆ ವಿನಾಕಾರಣ ಅಡ್ಡಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಚೋಟೇಶ್ವರ ನಗರದ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಚೋಟೇಶ್ವರ ನಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷರಾದ ರವಿ ಗುಂಜೀಕರ ಮಾತನಾಡಿ, ಲೇಔಟ್ ಮಾಲಿಕರು ಎಂದು ಹೇಳಿಕೊಂಡು ಒಟ್ಟು ಮೊಕ್ತಿಯಾರ್ ಪತ್ರ ಹೊಂದಿದ್ದೇವೆ ಎಂದು ಅಬ್ರಾರ್ ಮಹ್ಮದ ಅಲಿ ಬಿಜಾಪೂರ, ಶಾರುಖ್ ಫರಹಾದ್ ಬಿಜಾಪೂರ, ಸುಹೇಲ್ ಇಮಾಮಸಾಬ ಬಿಜಾಪೂರ ಹಾಗೂ ಉಮರ್ ಫಾರುಖ್ ಸಿರಾಜ್ ಅಹ್ಮದ್ ಬಿಜಾಪೂರ ಎನ್ನುವ ವ್ಯಕ್ತಿಗಳು ಪದೇ ಪದೇ ರಾಚೋಟೇಶ್ವರ ನಗರದ ಉದ್ಯಾನವನಕ್ಕೆ ಬಂದು ಈ ಉದ್ಯಾನವನದ ಸ್ಥಳದಲ್ಲಿ ತಮ್ಮ ನಿವೇಶನಗಳು ಇವೆ ಎಂದು ಸುಳ್ಳು ಹೇಳಿ ಶುದ್ಧ ನೀರಿನ ಘಟಕದ ಸರ್ಕಾರಿ ಕಾಮಗಾರಿ ನಡೆಸಲು ತೊಂದರೆ ಕೊಡುತ್ತಿದ್ದಾರೆ. ಗುತ್ತಿಗೆದಾರರಿಗೆ, ಕಾರ್ಮಿಕರಿಗೆ ಬೆದರಿಕೆ ಹಾಕಿ, ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿ ಗೂಂಡಾ ವರ್ತನೆ ಮಾಡುತ್ತಿದ್ದಾರೆ.

ಈ ವ್ಯಕ್ತಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪಾರ್ಕ್‌ನ ಪ್ಲಾಟ್ ನಂ. 48ರಲ್ಲಿ ವಿಭಜನೆ ತೋರಿಸಿ ಕ್ರ.ಸಂ. 49, 50, 51 ಹಾಗೂ 52ನೇ ನಿವೇಶನಗಳು ತಮ್ಮವು ಎಂದು ಹೇಳುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಸಹ ಶಾಮೀಲು ಇದ್ದಾರೆಂದು ಆರೋಪಿಸಿದರು.

ಈ ಸಂದರ್ಭದಲ್ಲಿ ರಾಚೋಟೇಶ್ವರ ನಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಗೌರವಾಧ್ಯಕ್ಷ ಸುಧೀರಸಿಂಹ ಘೋರ್ಪಡೆ, ಉಪಾಧ್ಯಕ್ಷರಾದ ಡಾ. ಎಸ್.ಆರ್. ಹಿರೇಮಠ, ಸದಸ್ಯರಾದ ಬಸವರಾಜ ಹಡಪದ, ಅಂಬರೀಶ ಇಟಗಿ, ಎಸ್.ಪಿ. ಪಾವನ, ನಂದಾ ಶಾಸ್ತ್ರಿ, ಈರಣ್ಣ ನವಲಿ, ನೀಲಮ್ಮ ಬೋಳನವರ, ಶರಣಪ್ಪ ಬೋಳನವರ, ಎಂ.ಬಿ. ತುಪ್ಪದ, ಮಂಜುನಾಥ ಮಾನೆ, ತೋಟಪ್ಪ ಕರಮುಡಿ ಮುಂತಾದವರು ಉಪಸ್ಥಿತರಿದ್ದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ ಅಧಿಕಾರಿಗಳ ಮೇಲೆ ಹಾಗೂ ಕಾನೂನುಬಾಹಿರವಾಗಿ ವರ್ತಿಸಿದ ಎಲ್ಲರ ಮೇಲೆ ಕ್ರಮ ಕೈಗೊಂಡು ಅಲ್ಲಿ ಸಾರ್ವಜನಿಕರಿಗೆ ತುರ್ತಾಗಿ ಬೇಕಾಗಿರುವ ಶುದ್ಧ ನೀರಿನ ಘಟಕದ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಿ ಅನುಕೂಲ ಮಾಡಿಕೊಡಬೇಕೆಂದು ರವಿ ಗುಂಜೀಕರ ಹೇಳಿದರು.

ಶಿವಣ್ಣ ಆಶೀರ್ವಾದ ಪಡೆದ ಬಿಗ್‌ಬಾಸ್ ಚಾಂಪಿಯನ್: ಗಿಲ್ಲಿಗೆ ಅಭಿಮಾನಿಗಳ ಪ್ರೀತಿ, 40 ಕೋಟಿಗೂ ಹೆಚ್ಚು ವೋಟ್!

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿಗೆ ದೊರೆತ ಜನಪ್ರಿಯತೆಯ ಹಿಂದೆ ಅಭಿಮಾನಿಗಳ ಪ್ರೀತಿ ಮಾತ್ರವಲ್ಲ, ಹಿರಿಯ ನಟ ಶಿವರಾಜ್‌ಕುಮಾರ್ ಅವರ ಆಶೀರ್ವಾದವೂ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಬಿಗ್‌ಬಾಸ್ ಟ್ರೋಫಿ ಗೆದ್ದ ನಂತರ ಗಿಲ್ಲಿ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವಣ್ಣ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ದಂಪತಿ ಆತ್ಮೀಯವಾಗಿ ಸಿಹಿ ತಿನಿಸಿ, ಮುಂದಿನ ಬದುಕಿಗೆ ಶುಭ ಹಾರೈಸಿದರು.

ಗಮನಾರ್ಹ ಸಂಗತಿ ಎಂದರೆ, ಫಿನಾಲೆಗೆ ಮುನ್ನವೇ ಶಿವಣ್ಣ ಗಿಲ್ಲಿಯೇ ಗೆಲ್ಲೋದು ಎಂದು ಹೇಳಿದ್ದರು. ಇದೀಗ ಆ ಮಾತು ನಿಜವಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆಮಾಡಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ 40 ಕೋಟಿಗೂ ಅಧಿಕ ಮತಗಳನ್ನು ಪಡೆದು ಮೊದಲ ಸ್ಥಾನ ಪಡೆದರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ.

ತಾಯಿಯ ಕೈಯಲ್ಲಿ ಅರಳಬೇಕಿದ್ದ ಜೀವ, ಕುಟುಂಬದ ಕೈಯಲ್ಲಿ ಅಂತ್ಯ

0

ಚಿಕ್ಕಮಗಳೂರು: ಒಬ್ಬ ತಾಯಿಯ ಕೈಗಳಲ್ಲಿ ಆರಂಭವಾಗಬೇಕಿದ್ದ ಜೀವಯಾತ್ರೆ, ಹುಟ್ಟಿದ ಕ್ಷಣದಲ್ಲೇ ಅಂತ್ಯಗೊಂಡ ಹೃದಯವಿದ್ರಾವಕ ಘಟನೆ ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದ ಸ್ಟಾಫ್ ನರ್ಸ್ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿ, ಕುಟುಂಬದವರ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಕೊಂಡಿದ್ದಾಳೆ. ತಂದೆ, ತಾಯಿ, ಅಜ್ಜಿ ಹಾಗೂ ಇನ್ನೂ ಮೂವರು ಮಹಿಳೆಯರ ಸಹಕಾರದಲ್ಲಿ ಹೆರಿಗೆ ನಡೆದಿದ್ದು, ಗಂಡು ಮಗು ಜನಿಸುತ್ತಿದ್ದಂತೆಯೇ ಕುಟುಂಬದ ಸದಸ್ಯರೇ ಶಿಶುವನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶಿಶುವಿನ ಮೃತದೇಹವನ್ನು ತಿಪ್ಪೆಯಲ್ಲಿ ಹೂತು ಪ್ರಕರಣವನ್ನು ಮರೆಮಾಚಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ಸುಮಾರು 15 ದಿನಗಳ ಬಳಿಕ ಈ ಘಟನೆ ಪಕ್ಕದ ಮನೆಯ ಯುವಕನಿಂದ ಬೆಳಕಿಗೆ ಬಂದಿದೆ.

ಈ ಪ್ರಕರಣ ಇದೀಗ ಸಮುದಾಯದಲ್ಲಿ ಭಾರೀ ಆಘಾತ ಉಂಟುಮಾಡಿದ್ದು, ಲಕ್ಕವಳ್ಳಿ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿ, ಎಲ್ಲ ಆರೋಪಿಗಳ ಪಾತ್ರದ ಕುರಿತು ಗಂಭೀರ ತನಿಖೆ ನಡೆಸುತ್ತಿದ್ದಾರೆ.

ಲೈಂಗಿಕ ಕಿರುಕುಳ ಆರೋಪಕ್ಕೆ ಮನನೊಂದು ದೀಪಕ್ ದುರಂತ ಸಾವು: ಕೊನೆಗೂ ಶಿಂಜಿತಾ ಮುಸ್ತಫಾ ಬಂಧನ

0

ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ವ್ಯೂವ್ಸ್ ಮತ್ತು ಪ್ರಚಾರದ ಹಂಬಲ ಒಂದು ಅಮಾಯಕ ಜೀವದ ಅಂತ್ಯಕ್ಕೆ ಕಾರಣವಾಗಿದೆಯೇ? ಎಂಬ ಪ್ರಶ್ನೆಯನ್ನು ಎಬ್ಬಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಿಂಜಿತಾ ಮುಸ್ತಫಾಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಬಸ್ಸಿನಲ್ಲಿ ದೀಪಕ್ ಎಂಬ ಯುವಕ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿ ಶಿಂಜಿತಾ ಬಿಡುಗಡೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಈ ಘಟನೆ ಬಳಿಕ ದೀಪಕ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು.

ಈ ಘಟನೆ ನಂತರ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ದೀಪಕ್ ಯಾವುದೇ ತಪ್ಪು ಮಾಡದೇ ಇದ್ದರೂ ಆತನ ಬಳಿಗೆ ಹೋಗಿ ಉದ್ದೇಶಪೂರ್ವಕವಾಗಿ ವಿಡಿಯೋ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಶಿಂಜಿತಾಳನ್ನು ಬಂಧಿಸಬೇಕೆಂದು ಜನರು ಒತ್ತಾಯಿಸಿದರು.

ದೀಪಕ್ ಅವರ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಜಾಮೀನುರಹಿತ ಕಲಂಗಳ ಅಡಿ ಪ್ರಕರಣ ದಾಖಲಿಸಿದರು. ತನಿಖೆ ಆರಂಭವಾಗುತ್ತಿದ್ದಂತೆಯೇ ಶಿಂಜಿತಾ ಮೊಬೈಲ್ ಆಫ್ ಮಾಡಿ ಕಾಣೆಯಾಗಿದ್ದಳು. ಇದೀಗ ಕೋಯಿಕ್ಕೋಡ್‌ನ ಬಡಗರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿದ್ದು, ನ್ಯಾಯಾಲಯ ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸರು ಬಸ್ ಚಾಲಕ, ಕಂಡಕ್ಟರ್ ಮತ್ತು ಪ್ರಯಾಣಿಕರ ಹೇಳಿಕೆಗಳನ್ನು ದಾಖಲಿಸಿದ್ದು, ಯಾರೂ ಕೂಡ ಪ್ರಯಾಣದ ವೇಳೆ ಯಾವುದೇ ಗಲಾಟೆ ಅಥವಾ ಕಿರುಕುಳ ನಡೆದಿಲ್ಲ ಎಂದು ತಿಳಿಸಿದ್ದಾರೆ. ಕಂಡಕ್ಟರ್ ಕೂಡ ಶಿಂಜಿತಾ ಯಾವುದೇ ಸಹಾಯ ಕೇಳಿರಲಿಲ್ಲ ಎಂದು ಹೇಳಿದ್ದಾರೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮಿ​​ಗೆ ಅಶ್ಲೀಲ ಮೆಸೇಜ್: ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

ಬೆಂಗಳೂರು: ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳು ಹಾಗೂ ಅವಮಾನಕಾರಿ ಕಮೆಂಟ್‌ಗಳನ್ನು ಕಳುಹಿಸಿದ ಪ್ರಕರಣದಲ್ಲಿ ಪೊಲೀಸರು ಇನ್ನೂ ಮೂವರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಚಾರ್ಜ್‌ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ವಿಜಯಲಕ್ಷ್ಮಿ ಅವರು ಡಿಸೆಂಬರ್ ತಿಂಗಳಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಟ್ರೋಲಿಂಗ್, ಅವಾಚ್ಯ ಭಾಷೆಯ ಕಮೆಂಟ್‌ಗಳು ಹಾಗೂ ಅಶ್ಲೀಲ ಸಂದೇಶಗಳು ಬರುತ್ತಿರುವ ಬಗ್ಗೆ ದೂರು ನೀಡಿದ್ದರು. ಪೊಲೀಸ್ ಆಯುಕ್ತ ಸೀಮಂತ್ ಸಿಂಗ್ ಅವರನ್ನು ಭೇಟಿ ಮಾಡಿ ಮೌಖಿಕವಾಗಿಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ 15 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಅಧಿಕೃತ ದೂರು ದಾಖಲಿಸಿ, 150ಕ್ಕೂ ಹೆಚ್ಚು ಸ್ಕ್ರೀನ್‌ಶಾಟ್‌ಗಳನ್ನು ಪೊಲೀಸರಿಗೆ ಒದಗಿಸಿದ್ದರು.

ಈ ಪ್ರಕರಣದಲ್ಲಿ ಈಗಾಗಲೇ ದಾವಣಗೆರೆಯ ಇಂಜಿನಿಯರ್ ನಿತಿನ್, ಚಿಕ್ಕಬಾಣಾವರದ ಆಟೋ ಚಾಲಕ ಚಂದ್ರು, ಹುಬ್ಬಳ್ಳಿಯ ಪೆಟ್ರೋಲ್ ಬಂಕ್ ಮ್ಯಾನೇಜರ್ ನಾಗರಾಜ್ ತಳವಾರ್, ಧಾರವಾಡದ ಆಡಿಟರ್ ಪ್ರಶಾಂತ್ ತಳವಾರ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಇನ್ನೂ ಮೂವರು ಆರೋಪಿಗಳು ಬಂಧನಕ್ಕೊಳಗಾಗಿದ್ದು, ಟೆಕ್ನಿಕಲ್ ಸಾಕ್ಷ್ಯ ಹಾಗೂ ಡಿಜಿಟಲ್ ಟ್ರೇಸ್ ಆಧಾರದ ಮೇಲೆ ತನಿಖೆ ಮುಂದುವರೆದಿದೆ.

ಪ್ರಾರಂಭದಲ್ಲಿ ಪೊಲೀಸರ ತನಿಖೆ ಕುರಿತು ವಿಜಯಲಕ್ಷ್ಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ ಎಂದು ಆರೋಪಿಸಿದ್ದರು. ನಂತರ ಪೊಲೀಸರು ಸ್ಪಷ್ಟನೆ ನೀಡಿ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಅದರ ಫಲವಾಗಿ ಈವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ.

ಸಾಕ್ಷ್ಯಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಎಲ್ಲಾ ಆರೋಪಿಗಳ ವಿರುದ್ಧ ಶೀಘ್ರದಲ್ಲೇ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಲಕಲ್ಲ ಡೀಪೋಗೆ ಹೆಮ್ಮೆ: ಕುಮಾರಸ್ವಾಮಿ ವಿರಕ್ತಮಠರಿಗೆ ಸರ್ವೋತ್ತಮ ಪ್ರಶಂಸನಾ ಗೌರವ

ಇಲಕಲ್ಲ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಯ ಇಲಕಲ್ಲ ಡೀಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಲೆಕ್ಕಿಗ ಶ್ರೀ ಕುಮಾರಸ್ವಾಮಿ ವಿರಕ್ತಮಠ ಅವರು 2025–26ನೇ ಸಾಲಿನ ಸರ್ವೋತ್ತಮ ಪ್ರಶಂಸನಾ ಗೌರವಕ್ಕೆ ಭಾಜನರಾಗಿದ್ದಾರೆ.2025ನೇ ಸಾಲಿನಲ್ಲಿ ಗರಿಷ್ಠ ಹಾಜರಾತಿ ಹಾಗೂ ಯಾವುದೇ ಅಪರಾಧ ದಾಖಲೆಗಳಿಲ್ಲದೇ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಿದ್ದ ಹಿನ್ನೆಲೆ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಬಾಗಲಕೋಟೆ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ.ಜನವರಿ 26ರಂದು ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ಐದು ಸಿಬ್ಬಂದಿಗಳ ಪೈಕಿ ಕುಮಾರಸ್ವಾಮಿ ವಿರಕ್ತಮಠ ಕೂಡ ಸೇರಿದ್ದಾರೆ.ಈ ಸಾಧನೆಗೆ ಇಲಕಲ್ಲ ಡೀಪೋದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದು, ಇದು ಡೀಪೋಗೆ ಸಂದ ಗೌರವ ಎಂದು ಶ್ಲಾಘಿಸಿದ್ದಾರೆ.

error: Content is protected !!