Home Blog Page 3200

ಗಾಂಜಾ ಮಾರಾಟ; ಇಬ್ಬರ ಬಂಧನ, ಪ್ರಮುಖ ಆರೋಪಿ ಮುತಗಾರ ಪರಾರಿ

ಶಹರ್ ಪೊಲೀಸರ ಕಾರ್ಯಾಚರಣೆ……

ವಿಜಯಸಾಕ್ಷಿ ಸುದ್ದಿ, ಗದಗ

ಮಾರಾಟ ಮಾಡುವ ಉದ್ದೇಶದಿಂದ‌ ಗಾಂಜಾ ಸಂಗ್ರಹಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಶಹರ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

ಇಲ್ಲಿನ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಮಾರಾಟ ಮಾಡುತ್ತಿದ್ದಾಗ ಶಹರ ಠಾಣೆಯ ಪಿಎಸ್ಐ ರೇಣುಕಾ ಮುಂಡೆವಾಡಗಿ ಹಾಗೂ ಸಿಬ್ಬಂದಿ ದಾಳಿ ಮಾಡಿ ವೃತ್ತಿಯಲ್ಲಿ ಗೌಂಡಿ ಕೆಲಸ ಮಾಡುವ ಎಸ್ ಎಮ್ ಕೃಷ್ಣ ನಗರದ ರಾಜೇಸಾಬ ಇಬ್ರಾಹಿಂಸಾಬ್ ನದಾಫ್ ಹಾಗೂ ರಾಜೀವ ಗಾಂಧಿ ನಗರದ ಟೈಲ್ಸ್ ಕೆಲಸ ಮಾಡುವ ಸೋಹಿಲ್ ತಂದೆ ಶಬ್ಬೀರ ಇಂಗಳಗಿ ಎಂಬ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಿಂದ 5400 ರೂ. ಮೌಲ್ಯದ 54 ಗ್ರಾಮ ತೂಕದ ಗಾಂಜಾ ಹಾಗೂ ದ್ವಿಚಕ್ರ ವಾಹನ‌ ವಶಪಡಿಸಿಕೊಳ್ಳಲಾಗಿದೆ.

ಇವರಿಬ್ಬರಿಗೂ ಗಾಂಜಾ ಮಾರಾಟ ಮಾಡಲು ಕೊಟ್ಟಿದ್ದ ಪ್ರಮುಖ ಆರೋಪಿ ಸೆಟ್ಲಮೆಂಟ್ ಏರಿಯಾದ ನಾಗರಾಜ್ ತಂದೆ ದೊಡ್ಡಪ್ಪ ಮುತಗಾರ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಕರ ಅಪಘಾತ; ಸ್ಥಳದಲ್ಲಿಯೇ ತಂದೆ, ಮಗಳ ಸಾವು, ಇಬ್ಬರಿಗೆ ಗಾಯ

ಕೊಪ್ಪಳದ ಜಾತ್ರೆ ಮುಗಿಸಿ ಕಣಗಿನಹಾಳಕ್ಕೆ ಹೊರಟಿದ್ದ ಮೃತರು….

ವಿಜಯಸಾಕ್ಷಿ ಸುದ್ದಿ, ಗದಗ

ಎರಡು ಬೈಕ್ ಗಳ ಮಧ್ಯೆ ಡಿಕ್ಕಿ ಸಂಭವಿಸಿ ರಸ್ತೆಯಲ್ಲಿ ಬಿದ್ದಿದ್ದ ಇಬ್ಬರ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ರಾತ್ರಿ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ಜರುಗಿದೆ.

ಮೃತರನ್ನು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಅಲ್ಲಾಸಾಬ್ ನದಾಫ್ (60) ಹಾಗೂ ರಮಜಾನ ಬೇಗಂ(22) ಎಂದು ಗುರುತಿಸಲಾಗಿದೆ.

ಮೃತರು ಒಂದೇ ಬೈಕ್ ನಲ್ಲಿದ್ದರು. ಗಾಯಗೊಂಡ ಲಲಿತಾ ಹಂಚಿನಾಳ ಹಾಗೂ ಅಪ್ಪಣ್ಣ ಹಿರೇಮಠ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತ ಅಲ್ಲಾಸಾಬ ತನ್ನ ಸಣ್ಣ ಮಗಳಾದ ರಮಜಾನಬಿ ಅವಳನ್ನು ಕರೆದುಕೊಂಡು ಗದಗ ತಾಲೂಕಿನ ಕಣಗಿನಹಾಳ ಗ್ರಾಮದ ಮತ್ತೊಬ್ಬ ಮಗಳ ಮನೆಗೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲಾರಿ ಕೊಪ್ಪಳದಿಂದ ಗದಗ ಕಡೆ ಬರುತ್ತಿತ್ತು ಎನ್ನಲಾಗಿದ್ದು, ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಸುದ್ದಿ ತಿಳಿದು ಮುಂಡರಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವೀರಶೈವ ಧರ್ಮವನ್ನು ವಿಶ್ವಮಟ್ಟದಲ್ಲಿ ಪ್ರಕಾಶಗೊಳಿಸಿದವರು ರಂಭಾಪುರಿ ಜಗದ್ಗುರುಗಳು; ಆನಂದಯ್ಯ ಕಲ್ಮಠ

ವಿಜಯಸಾಕ್ಷಿ ಸುದ್ದಿ, ಹಾವೇರಿ/ಸವಣೂರು

ವೀರಶೈವ ಧರ್ಮವನ್ನು ವಿಶ್ವಮಟ್ಟದಲ್ಲಿ ಪ್ರಕಾಶಗೊಳಿಸಿ, ಸತ್ಯ ಸನಾತನತೆಯನ್ನು ಧರ್ಮದ ದಂಡಯಾತ್ರೆಯ ಮೂಲಕವಾಗಿ ಜನಮಾನಸಕ್ಕೆ ನೀಡಿದ ಮಹಾಪ್ರಭು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಭಗವತ್ಪಾದರು ಎಂದು ಗಣ್ಯ ವರ್ತಕರಾದ ಆನಂದಯ್ಯ ಕಲ್ಮಠ ಹೇಳಿದರು.

ಅವರು ನಗರದ ಶ್ರೀ ರಂಭಾಪುರೀಶ ನಿವಾಸದಲ್ಲಿ ಜರುಗಿದ ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 67ನೇ ವರ್ಷದ ಜನ್ಮ ಮಹೋತ್ಸವ ಪೂಜಾ ಸಮಾರಂಭದಲ್ಲಿ ಮಾತನಾಡಿದರು.

ಹುಬ್ಬಳ್ಳಿ ತಾಲೂಕಿನ ಹಳ್ಳಿಯಾಳ ಗ್ರಾಮದಲ್ಲಿ 1956 ರಲ್ಲಿ ಚನ್ನಬಸಯ್ಯ-ಚನ್ನಬಸಮ್ಮನವರ ಪುಣ್ಯ ಗರ್ಭದಲ್ಲಿ ಜನ್ಮ ತಳೆದು ಪುರದ ಪುಣ್ಯವೆಂದಂತೆ ಬಾಲ್ಯದಲ್ಲಿಯೇ ಸ್ವಾಮಿತ್ವದ ಮಹತ್ವ ತಿಳಿಸಿದ ಮಹಾಮೇರುಗಳು.

ನಿರಂತರ ಸಾಧನೆಯ ಮೂಲಕ ಧಾರ್ಮಿಕ ನೆಲೆಗಟ್ಟನ್ನು ಅತ್ಯಂತ ಶುದ್ಧಬದ್ಧತೆಯಲ್ಲಿ ಕರಗತಮಾಡಿಕೊಳ್ಳುವುದರ ಮೂಲಕ ಹಂತ ಹಂತವಾಗಿ ಬೆಳೆದವರು. 1992 ರಲ್ಲಿ ವೀರಶೈವ ಪಂಚಪೀಠಗಳಲ್ಲಿ ಪ್ರಥಮ ಪೀಠವಾದ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸ ಮಹಾಸಂಸ್ಥಾನ ಪೀಠವನ್ನು ಆರೋಹಣ ಮಾಡಿ ಸತ್ ಸಂಕಲ್ಪದ ಸರಿದಾರಿಯಲ್ಲಿ ಯೋಜನಾಷ್ಠಕಗಳನ್ನು ನಿರೂಪಿಸಿ ಅವೆಲ್ಲವುಗಳನ್ನೂ ಅನಾವರಣಗೊಳಿಸಿದ ಸಿದ್ಧ ಸಾಧಕರು.

ನಾಡಿನ ತುಂಬೆಲ್ಲ ಪ್ರವಾಸದ ಮೂಲಕ ಸಂಚರಿಸಿ ಧರ್ಮ-ಸಿದ್ಧಾಂತ-ತತ್ವಗಳನ್ನು ಬೋಧಿಸಿ ಪರಿವರ್ತನಾಶೀಲ ಸಮಾಜವನ್ನು ಕಟ್ಟಿ ಬೆಳೆಸಿದ ಧೀಮಂತರು. ಅವರು ಮಾಡಿದ ಸಾಧನೆಗಳು ಅನೇಕ.

ಸಾಹಿತ್ಯಿಕ, ಶೈಕ್ಷಣಿಕವಾಗಿ, ಸಾಂಸ್ಕೃತಿಕ, ಸಂಸ್ಕಾರಯುತ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಅಭಿವ್ಯಕ್ತಿಯ ಕಾರ್ಯಬಂಧುತ್ವವನ್ನು ಗಟ್ಟಿಗೊಳಿಸಿದವರು. ಅವರ ಬದುಕು ಇಂದಿನವರಿಗೆಲ್ಲ ಆದರ್ಶಮಯವಾಗಿದೆ. ಅವರ ಆಶೀರ್ವಾದ, ಮಾರ್ಗದರ್ಶನ ಸದಾ ಸಮಾಜದ ಮೇಲಿರಲೆಂದು ಪ್ರಾರ್ಥನೆಯ ನುಡಿಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿರಂತರ 35 ವರ್ಷಗಳಿಂದ ಧಾರ್ಮಿಕ ಸೇವೆ ಸಲ್ಲಿಸಿದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ವೀರಣ್ಣ ಹಾಲಪ್ಪ ಪವಾಡದವರಿಗೆ ಶ್ರೀ ರಂಭಾಪುರೀಶ್ವರ ಸಮಾಜೋಸಾಂಸ್ಕೃತಿಕ ಸೇವಾ ಸಂಸ್ಥೆಯು “ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಕಾರುಣ್ಯ ಸಿರಿ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು. ಗಂಗಾಧರಸ್ವಾಮಿ ಸಾಲಿಮಠ ಪ್ರಶಸ್ತಿ ವಿವರ ನೀಡಿದರು. ಹುರಳಿಕುಪ್ಪಿಯ ವೀರಯ್ಯ ಹಿರೇಮಠ ಪ್ರಶಸ್ತಿ ವಾಚನ ಮಾಡಿದರು.

ಕಾರ್ಯಕ್ರಮದನ್ವಯ ಗಣ್ಯ ವ್ಯಾಪಾರಸ್ಥರಾದ ರವತಪ್ಪ ಬಿಕ್ಕಣ್ಣನವರ ಶ್ರೀ ರಂಭಾಪುರಿ ಜಗದ್ಗುರುಗಳವರ ವೈಶಿಷ್ಠಪೂರ್ಣತೆಯುಳ್ಳ 2023 ನೇ ಮಾಹೆಯ ದಿನದರ್ಶಿಕೆ ಬಿಡುಗಡೆಗೊಳಿಸಿದರು.

ವೀರಯ್ಯ ಸಾಲಿಮಠ, ಈರಪ್ಪ ಕಾಶೆಟ್ಟಿ, ಸೋಮಯ್ಯ ಕಂಬಾಳಿಮಠ, ಗುರುಪಾದಪ್ಪ ಶಿಗ್ಗಾಂವಿ, ಶಿವಾನಂದ ಕುಲಕರ್ಣಿ, ಫಕ್ಕೀರಯ್ಯ ಹಿರೇಮಠ, ಶಂಭಣ್ಣ ಗುಂಡೂರ, ಚನ್ನಬಸಪ್ಪ ಗುಂಡೂರ, ರಾಜಶೇಖರಯ್ಯ ಗುರುಸ್ವಾಮಿಮಠ, ಮಂಜುನಾಥ ಪಿತಾಂಬ್ರಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು. ಡಾ. ಗುರುಪಾದಯ್ಯ ವೀ. ಸಾಲಿಮಠ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗಿಸಲಾಯಿತು.

ಇಂಡಿಗೋ ಏರ್ಲೈನ್ಸ್ ನಲ್ಲಿ ನೌಕರಿ ಆಮಿಷ; ಖಾಸಗಿ ಕಂಪನಿಯ ಮಹಿಳೆಗೆ ಲಕ್ಷಾಂತರ ರೂ. ಮೋಸ

3,76.610 ರೂ. ಗಳನ್ನು ಹಾಕಿಸಿಕೊಂಡು ಕೆಲಸ ನೀಡದೆ ಹಣವನ್ನು ಮರಳಿ ಕೊಡದೆ ಮೋಸ

ವಿಜಯಸಾಕ್ಷಿ ಸುದ್ದಿ, ಗದಗ‌

ಇಂಡಿಗೋ ಏರ್ಲೈನ್ಸ್ ಗ್ರೌಂಡ್ ಸ್ಟಾಫ್ ಜಾಬ್ ಆಫರ್ ಮಾಡಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ ಘಟನೆ ಜರುಗಿದೆ.

ಇಲ್ಲಿನ ಶಿವಾನಂದ ನಗರದ ನಿವಾಸಿಯಾಗಿರುವ ಖಾಸಗಿ ಕಂಪನಿಯ ಉದ್ಯೋಗಿ ಶ್ರುತಿ ಎಂಬುವವರಿಗೆ ನೇಹಾ ಶರ್ಮಾ ಎಂಬವರು ಕರೆ ಹಾಗೂ ಮೆಸೇಜ್ ಮಾಡಿ ಇಂಡಿಗೋ ಏರ್ಲೈನ್ಸ್ ಗ್ರೌಂಡ್ ಸ್ಟಾಫ್ ಜಾಬ್ ಆಫರ್ ಮಾಡಿ ದಿ.08-12-22ರಿಂದ 21-12-22ರ ನಡುವಿನ ಅವಧಿಯಲ್ಲಿ

ಹಂತ ಹಂತವಾಗಿ ರೂ. 3,76.610 ರೂ. ಗಳನ್ನು ಹಾಕಿಸಿಕೊಂಡು ಕೆಲಸ ನೀಡದೆ ಹಣವನ್ನು ಮರಳಿ ಕೊಡದೆ ಮೋಸ ಮಾಡಲಾಗಿದೆ. ಈ ಕುರಿತು ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಳೆತೋಟಕ್ಕೆ ಬೆಂಕಿ; ಲಕ್ಷಾಂತರ ರೂ. ಹಾನಿ

ತೋಟದಲ್ಲಿದ್ದ ತುಂತುರು ನೀರಾವರಿ ಮತ್ತು ವಿದ್ಯುತ್ ಉಪಕರಣಗಳು, 2500 ಸಾವಿರ ಬಾಳೆ ಸೇರಿ ಇತರೇ ಗಿಡಮರಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ಬಾಲೆಹೊಸೂರ ಗ್ರಾಮದ ರೈತ ದತ್ತಾತ್ರೆಯ ಕಟ್ಟಿಮನಿ ಎಂಬುವರಿಗೆ ಸೇರಿದ ಬಾಳೆತೋಟಕ್ಕೆ ಆಕಸ್ಮಿಕ ಬೆಂಕಿ ಹೊತ್ತಿ ಎರಡೂವರೆ ಎಕರೆ ಬಾಳೆ ತೋಟ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಘಟನೆ ಶುಕ್ರವಾರ ಸಂಭವಿಸಿದೆ.

ಬಾಳೆತೋಟದ ಪಕ್ಕದ ಜಮೀನಿನಲ್ಲಿನ ಹುಲ್ಲುಗಾವಲಿಗೆ ಯಾರೂ ಹೊತ್ತಿಸಿದ ಬೆಂಕಿ ಗಾಳಿಯ ರಭಸಕ್ಕೆ ಬಾಳೆತೋಟಕ್ಕೆ ಆವರಿಸಿ ಬಾಳೆತೋಟ ಸಂಪೂರ್ಣ ಹಾಳಾಗಿದೆ. ತೋಟದಲ್ಲಿದ್ದ ತುಂತುರು ನೀರಾವರಿ ಮತ್ತು ವಿದ್ಯುತ್ ಉಪಕರಣಗಳು, 2500 ಸಾವಿರ ಬಾಳೆ ಸೇರಿ ಇತರೇ ಗಿಡಮರಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.

ಸುದ್ದಿ ತಿಳಿದು 25ಕಿ.ಮೀ ದೂರದ ಲಕ್ಷ್ಮೇಶ್ವರದಿಂದ ಅಗ್ನಿಶಾಮಕ ವಾಹನ ಬರುವಷ್ಟರಲ್ಲಾಗಲೇ ಅಂದಾಜು ಐದಾರು ಲಕ್ಷ ರೂ ಮೌಲ್ಯದ ಬೆಳೆಹಾನಿಗೀಡಾಗಿದೆ. ಸೇರಿದ್ದ ರೈತರು ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಟಿ ನೀಡಿ ಹಾನಿಯ ಅಂದಾಜು ಪರಿಶೀಲಿಸಿದ್ದಾರೆ.

ಕರ್ತವ್ಯ ಲೋಪ; ಗದಗ ನಗರಸಭೆ ಪೌರಾಯುಕ್ತ ರಮೇಶ್ ಸುಣಗಾರ ಸಸ್ಪೆಂಡ್

ಅನಧಿಕೃತ ನಿವೇಶನಗಳಿಗೆ ಇ-ಸ್ವತ್ತು ನೀಡಿರುವ ಆರೋಪ

ವಿಜಯಸಾಕ್ಷಿ ಸುದ್ದಿ, ದೊಡ್ಡಬಳ್ಳಾಪುರ/ಗದಗ

ನಗರ ಯೋಜನಾ ಪ್ರಾಧಿಕಾರದ ಅನುಮೋದನೆ ಇಲ್ಲದೆ ನಿವೇಶನಗಳಿಗೆ ಇ-ಸ್ವತ್ತು ಮಾಡಿಕೊಟ್ಟಿರುವ ಪೌರಾಯುಕ್ತ ರಮೇಶ್ ಎಸ್. ಸುಣಗಾರ ಹಾಗೂ ಕಂದಾಯ ಅಧಿಕಾರಿ ರವೀಂದ್ರ ಬಿ. ಜಾಯಗೊಂಡೆ ಅಮಾನತ್ತಗೊಳಿಸಿ ಪೌರಾಡಳಿತ ಇಲಾಖೆ ಆದೇಶ ಹೊರಡಿಸಿದೆ.

ದೊಡ್ಡಬಳ್ಳಾಪುರ ನಗರಸಭೆ ವಾರ್ಡ್ ನಂ.11ರ ಕರೇನಹಳ್ಳಿ ವ್ಯಾಪ್ತಿಯ ಅನಧಿಕೃತ ನಿವೇಶನಗಳಿಗೆ ಅಕ್ರಮವಾಗಿ ಖಾತೆ ಮಾಡಿದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿ 39 ಅನಧಿಕೃತ ನಿವೇಶನಗಳಿಗೆ ಇ-ಸ್ವತ್ತು ನೀಡಿದ್ದು, ಇದನ್ನು ಕೆ.ಎಮ್. ಎಫ್.-24 ವಹಿಯಲ್ಲಿ ನಮೂದಿಸಿದೆ ನಗರ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯದೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ಹಾಗೂ ಸರಕಾರದ ಸುತ್ತೋಲೆಗಳ ಅನುಸಾರ ಖಾತೆಗಳನ್ನು ರದ್ದುಪಡಿಸಲು ಕ್ರಮ ವಹಿಸದೆ 39 ನಿವೇಶನಗಳ ಆಸ್ತಿಯ ಹಕ್ಕನ್ನು ಪೌವತಿ ವಾರಸ್ಸ ಶ್ರೀಮತಿ ಸುಜಾತರೆಡ್ಡಿ ಕೋಂ ಲೆ|| ಎನ್. ರಾಮರಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಬಿನ್ ಲೇ|| ರಾಮರಡ್ಡಿ ಹೆಸರಿಗೆ

ಜಂಟಿಯಾಗಿ ಆಸ್ತಿ ಹಕ್ಕನ್ನು ವರ್ಗಾಯಿಸಿ ಇ-ಸ್ವತ್ತು ಮಾಡಿಕೊಡಲು ಕಾರಣರಾಗಿ ಕರ್ತವ್ಯಲೋಪ ಎಸಗಿರುವ ಅಂದಿನ ಪೌರಾಯುಕ್ತ ರಮೇಶ್ ಎಸ್. ಸುಣಗಾರ ಹಾಗೂ ಕಂದಾಯ ಅಧಿಕಾರಿ ರವೀಂದ್ರ ಬಿ. ಜಾಯಗೊಂಡೆ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಪೌರಾಡಳಿತ ಇಲಾಖೆಗೆ ಪತ್ರ ಬರೆದಿದ್ದರು.

ಈ ಪತ್ರ ಗಮನಿಸಿದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಮಂಜುಶ್ರೀ ಎನ್. ಅವರು ಕರ್ತವ್ಯ ಲೋಪ ಎಸಗಿರುವ ಅಂದಿನ ದೊಡ್ಡಬಳ್ಳಾಪೂರ ನಗರಸಭೆ ಪೌರಾಯುಕ್ತರಾಗಿದ್ದ ಹಾಗೂ ಗದಗ -ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ್ ಎಸ್. ಸುಣಗಾರ ಹಾಗೂ ಕಂದಾಯ ಅಧಿಕಾರಿ ರವೀಂದ್ರ ಬಿ.ಜಾಯಗೊಂಡೆ ಮೇಲಿನ ಇಲಾಖಾ ವಿಚಾರಣೆ ಕಾಯ್ದಿರಿಸಿ ಕೆ. ಸಿ. ಎಸ್. (ಸಿಸಿಎ) ನಿಯಮಗಳು, 1957 ರ ನಿಯಮ 10(1)(ಡಿ) ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ದಿ-05-01-2023 ರಂದು ಆದೇಶ ಹೊರಡಿಸಿದ್ದಾರೆ.

ಟ್ರಾಕ್ಟರ್ ಹಾಯಿಸಿ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗಳಿಗೆ 10 ವರ್ಷ ಜೈಲು

2016ರಲ್ಲಿ ನಡೆದಿದ್ದ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ವೈಯಕ್ತಿಕ ಸಿಟ್ಟಿನಿಂದ ವ್ಯಕ್ತಿಯೊಬ್ಬರ ಮೇಲೆ ಟ್ರಾಕ್ಟರ್ ಹಾಯಿಸಿ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗಳಿಗೆ ನ್ಯಾಯಾಲಯವು ಶಿಕ್ಷೆ ಜಾರಿಗೊಳಿಸಿದೆ.

ಪ್ರಕರಣದ ಆರೋಪಿತರಾದ ಕೊಟ್ರಯ್ಯ ಶಿವಯ್ಯ ಹೇಮಗಿರಿಮಠ & ಇನ್ನೊಬ್ಬ ಶಿರಹಟ್ಟಿ ಪೋಲೀಸ್ ಠಾಣಾ ಹದ್ದಿ ಪೈಕಿ, ಹೊಳೆಇಟಗಿ ಗ್ರಾಮದಲ್ಲಿ ದಿ.25-5-2016ರಂದು ಮುಂಜಾನೆ 7 ಗಂಟೆಯ ಸುಮಾರಿಗೆ ಇದರಲ್ಲಿಯ ಪಿರ‍್ಯಾದಿ ಹೊಲದಿಂದ ಮನೆಗೆ ತೆಂಗಿನಕಾಯಿ ತೆಗೆದುಕೊಂಡು ಬರುತ್ತಿದ್ದಾಗ ತನ್ನ ಹಿಸ್ಸೆಗೆ ಬಂದ ಹಿತ್ತಲದಲ್ಲಿ ಆರೋಪಿ ಕೊಟ್ರಯ್ಯ ಮತ್ತು 2ನೆಯವರು ಕಟ್ಟಿಗೆ ಒಡೆಯುತ್ತಿದ್ದಾಗ,

ಪಿರ‍್ಯಾದಿಯು ನಮ್ಮ ಹಿತ್ತಿಲಿನಿಂದ ಏಕೆ ಹಾದು ಹೋದಿರಿ ಎಂದು ಕೇಳಿದಾಗ ಸಿಟ್ಟಿನಿಂದ ಹಾಗೂ ಆಸ್ತಿ ಹಂಚಿಕೆಯ ವಿಷಯವಾಗಿ ನ್ಯಾಯಾಲಯದ ಡಿಕ್ರಿ ಆದೇಶವಾಗಿದ್ದರ ಸಿಟ್ಟಿನಿಂದ ಪರ‍್ಯಾದಿಗೆ ಕೊಲೆ ಮಾಡಿದರೆ ಆಸ್ತಿ ನಮಗೆ ಸಿಗುತ್ತದೆ ಎಂಬ ದುರುದ್ದೇಶದಿಂದ ಪರ‍್ಯಾದಿಗೆ ಅವಾಚ್ಯವಾಗಿ ಬೈದಿದ್ದಲ್ಲದೇ ಆರೋಪಿ ಕೊಟ್ರಯ್ಯ ಪಿರ‍್ಯಾದಿಯ ಮೇಲೆ ಟ್ರಾಕ್ಟರ್ ಇಂಜಿನನ್ನು ಹಾಯಿಸಿ,

ಪಿರ‍್ಯಾದಿಯ ಎದೆಗೆ ಮಾರಣಾಂತಿಕ ಒಳಪೆಟ್ಟು ಪಡಿಸಿದ್ದಲ್ಲದೇ ಎಡಗಾಲಿಗೆ ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ ಅಪರಾಧ ಕುರಿತು ಆರೋಪಿತರ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಗುರುಶಾಂತ ದಾಶ್ಯಾಳ, ಇವರು ತನಿಖೆಯನ್ನು ಪೂರೈಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ಇವರು ಸದರ ಪ್ರಕರಣದಲ್ಲಿ ಆರೋಪ ರುಜುವಾತಾಗಿದ್ದರಿಂದ ಆರೋಪಿತರಾದ ಕೊಟ್ರಯ್ಯ ಶಿವಯ್ಯ ಹೇಮಗಿರಿಮಠ & ಇನ್ನೊಬ್ಬ ಇವರಿಗೆ ಜ.4, 2023ರಂದು ಕಲಂ:307 ಭಾದಂಸಂ ರಡಿ 10 ವರ್ಷ ಸಾದಾ ಕಾರವಾಸ ಶಿಕ್ಷೆ ಹಾಗೂ ತಲಾ ರೂ.12ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸವಿತಾ.ಎಂ. ಶಿಗ್ಲಿ ಸರಕಾರಿ ಅಭಿಯೋಜಕರು, ಗದಗ ಇವರು ವಾದವನ್ನು ಮಂಡಿಸಿದ್ದರು.

ಜನಾರ್ದನ ರೆಡ್ಡಿ ಪಕ್ಷ ಮಕಾಡೆ ಬೀಳಲಿದೆ: ಎಸ್.ಆರ್. ಹಿರೇಮಠ

ಪಾಪದ ಹಣ ಪ್ರಾಯಶ್ಚಿತ್ತಕ್ಕಲ್ಲದೇ ಸತ್ಪಾತ್ರಕ್ಕೆ ಸಲ್ಲದು

ವಿಜಯಸಾಕ್ಷಿ ಸುದ್ದಿ, ಗದಗ

ಚಪ್ಪಾಳೆ ಸದ್ದು ಕೇಳಿಸಬೇಕೆಂದರೆ ಎರಡೂ ಕೈಗಳು ಬೇಕು. ಭ್ರಷ್ಟ ರಾಜಕಾರಣಿಗಳನ್ನು ಎಂದೂ ಜನಪ್ರತಿನಿಧಿಗಳನ್ನಾಗಿ ಮಾಡಬಾರದು. ರಾಜಕಾರಣಿಗಳು ಅಧಿಕಾರಿಗಳ ಜೊತೆ ಶಾಮೀಲಾಗಿ ಮಾಡಬಾರದ ಮಹಾಪರಾಧಗಳನ್ನು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹೇಳಿಕೆ ನೀಡಿದರು.

ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ, ವಿಧಾನಸೌಧದ ಆವರಣದಲ್ಲಿ 10 ಲಕ್ಷ ರೂ. ಹಣ ಪತ್ತೆಯಾದ ವಿಷಯದ ಕುರಿತು ಪ್ರತಿಕ್ರಿಯಿಸಿದರು. ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುವ ಬದಲಾಗಿ ಸ್ವಾರ್ಥ, ದುರಾಸೆಯೇ ಕೆಲಸವಾಗುತ್ತಿವೆ. ಇಂಥವರಿಗೆ ಕಠಿಣ ಶಿಕ್ಷೆಯಾಗಬೇಕು. ಆ ಮೂಲಕ ಸಮಾಜಕ್ಕೆ ಸಂದೇಶ ಹೋಗಬೇಕು ಎಂದರು.

ಜನಾರ್ದನ ರೆಡ್ಡಿ ಹಾಗೂ ಅವರ ಪಕ್ಷ ಮಕಾಡೆ ಬೀಳಲಿದೆ. ಅವರಿಗೆ ಯಾವುದೇ ಭವಿಷ್ಯ ಇಲ್ಲ. ಪಾಪದ ಹಣ ಪ್ರಾಯಶ್ಚಿತ್ತಕ್ಕಲ್ಲದೇ ಸತ್ಪಾತ್ರಕ್ಕೆ ಸಲ್ಲದು. ರೆಡ್ಡಿ ಜನಹಿತ ಮರೆತು, ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

ದಿನಕ್ಕೆ 10 ಸಾವಿರ ಟ್ರಕ್‌ನಲ್ಲಿ ಅಕ್ರಮ ಅದಿರು ಕಳುಹಿಸಿದ್ದ ದರೋಡೆಕೋರನಿಗೆ ರಾಜ್ಯದ ಜನ ಏನೂ ಕೊಡಬಾರದು. ಮದ್ಯದ ದೊರೆ ವಿಜಯ ಮಲ್ಯ, ಬಿಎಸ್ ಆರ್ ಕಟ್ಟಿದ್ದ ರಾಮುಲು ಹಾಗೆಯೇ ರೆಡ್ಡಿ ಕೂಡ ಮಕಾಡೆ ಬೀಳಲಿದ್ದಾರೆ.

ಸಿಬಿಐನಿಂದ ರೆಡ್ಡಿ ಆಸ್ತಿ ಜಪ್ತಿ ವಿಷಯ ಬಹಳ ತಡವಾಗಿದೆ. ಅವರ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಬಿಎಸ್ ಯಡಿಯೂರಪ್ಪ ಅವರನ್ನ ರೆಡ್ಡಿ ತಮ್ಮ ಕಿಸೆಯಲ್ಲಿ ಇಟ್ಟುಕೊಂಡಿದ್ದರು. ಅವರ ಸಮಗ್ರ ಆಸ್ತಿ ಪೈಸೆಗೆ ಪೈಸಾ ವಾಪಾಸ್ ಬರುವಂತೆ ಮಾಡಬೇಕಿದೆ ಎಂದರು.

ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ; ದೂರು ನೀಡಿದ ವ್ಯಕ್ತಿ ನಾಪತ್ತೆ, ಹಲವರ ವಿರುದ್ಧ ದೂರು

ಜೀವ ಬೆದರಿಕೆ, ಅಪಹರಣದ ಆರೋಪ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ನರೇಗಾ ಕೆಲಸದಲ್ಲಿ ಅವ್ಯವಹಾರವಾಗಿದೆಯೆಂದು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದನೆಂದು ಆರೋಪಿಸಿ, ಆರೋಪಿತರೆಲ್ಲರೂ ಸೇರಿ ಜೀವ ಬೆದರಿಕೆ ಹಾಕಿದ್ದು, ಇದೇ ಕಾರಣಕ್ಕಾಗಿ ವ್ಯಕ್ತಿಯನ್ನು ಅಪಹರಿಸಿರುವ ಕುರಿತು ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ

ಡಿ.27ರಂದು ಮದ್ಯಾಹ್ನ 12 ಗಂಟೆಯ ಹೊತ್ತಿಗೆ ಸೂರಣಗಿ ಗ್ರಾ.ಪಂ.ನಲ್ಲಿ ನರೇಗಾ ಕೆಲಸದಲ್ಲಿ ಅವ್ಯವಹಾರ ಆಗಿದೆಯೆಂದು ಅದರ ಪರಿಶೀಲನೆಯ ಕುರಿತು ಸಂಬಂಧಿಸಿದ ಮೇಲಧಿಕಾರಿಗಳು ಗ್ರಾ.ಪಂ.ಗೆ ಬಂದು ಗ್ರಾಮದ ಮಾಸಿನಸರ ಕೆರೆಯ ಹತ್ತಿರ ಪರಿಶೀಲನೆಗಾಗಿ ಹೋದಾಗ, ಆರೋಪಿತರಾದ ಸೂರಣಗಿಯ ಚಂದ್ರಶೇಖರ ಪವಾಡೆಪ್ಪ ಮೂಲಿಮನಿ, ಶಂಕ್ರಪ್ಪ ಚಿನ್ನಪ್ಪ ಶೀರನಹಳ್ಳಿ, ನೀಲಪ್ಪ ಹಾಲಪ್ಪ ದೊಡ್ಡಣ್ಣವರ, ಶರಣಪ್ಪ ನೀಲಪ್ಪ ಇಚ್ಚಂಗಿ, ಹೆಗ್ಗಪ್ಪ ನೀಲಪ್ಪ ಪೂಜಾರ ಇವರೆಲ್ಲರೂ ಸೇರಿ, ದೂರುದಾರ ಅಶೋಕ ಸೂರಣಗಿಯ ಸಹೋದರ ಪ್ರವೀಣ ಸೂರಣಗಿ ಇವನಿಗೆ ನರೇಗಾ ಕೆಲಸದಲ್ಲಿ ಅವ್ಯವಹಾರವಾಗಿದೆಯೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನೀನೇ ಕರೆಸಿದ್ದೀಯಾ ಎಂದು ಅವಾಚ್ಯವಾಗಿ ಬೈದಾಡಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ನಂತರ ಡಿ.29ರಂದು ಬೆಳಿಗ್ಗೆಯಿಂದ ಹಲ್ಲೆಗೊಳಗಾದ ವ್ಯಕ್ತಿ ಪ್ರವೀಣ ಸೂರಣಗಿ ಮನೆಯಲ್ಲಿ ಕಾಣದಿದ್ದಾಗ, ಕುಟುಂಬಸ್ಥರು ಅಲ್ಲೆಲ್ಲ ಹುಡುಕಾಡಿಯೂ ಸಿಗದಿದ್ದಾಗ, ಎರಡು ದಿನಗಳ ಹಿಂದೆ ಆತನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳೇ ಪ್ರವೀಣನನ್ನು ಅಪಹರಣ ಮಾಡಿದ್ದಾರೆಂದು ಸಂದೇಹಿಸಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸರ್ಕಾರ ಜೀವಂತವಾಗಿದೆಯಾ..? ಶಾಸಕ ಎಚ್.ಕೆ. ಪಾಟೀಲ ಪ್ರಶ್ನೆ

ವಿಧಾನಸೌಧದ ಗೇಟ್ ಬಳಿ 10 ಲಕ್ಷ ರೂ.ಹಣ ಸೀಜ್ ಪ್ರಕರಣಕ್ಕೆ ಶಾಸಕ ಎಚ್ ಕೆ ಪಾಟೀಲ ಪ್ರತಿಕ್ರಿಯೆ

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸೌಧದ ಗೇಟ್ ಬಳಿ 10 ಲಕ್ಷ ರೂ. ಹಣ ಸೀಜ್ ಮಾಡಿರುವ ಪ್ರಕರಣ ನಡೆದಿದೆ. ಯಾವ ಸಚಿವರಿಗೆ ಕೊಡಬೇಕೆಂದು ಈ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರೋ, ಅವರನ್ನು ೨೪ ಗಂಟೆಯೊಳಗಾಗಿ ಅಧಿಕಾರದಿಂದ ಕೆಳಗಿಳಿಸಿ. ಆ ಅಧಿಕಾರಿಯನ್ನು ಅಮಾನತು ಮಾಡಿ, ಅವನ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡಿ. ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳದಿದ್ದರೆ, ಸರ್ಕಾರ ದಂಧೆ ಮಾಡಲು ಎಲ್ಲರನ್ನೂ ಮುಕ್ತವಾಗಿ ಬಿಟ್ಟಿದೆ ಎಂದು ತಿಳಿದುಕೊಳ್ಳುತ್ತೇವೆ ಎಂದು ಗದಗ ಶಾಸಕ ಎಚ್.ಕೆ. ಪಾಟೀಲ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೦ ಲಕ್ಷ ರೂಪಾಯಿ ಹಣ ಸೀಜ್ ಆಗಿರೋದು ನನಗೆ ಭಾರೀ ಐಶ್ವರ್ಯ ತಂದಿಲ್ಲ. ವಿಧಾನಸೌಧಕ್ಕೆ ಅಧಿಕಾರಿಗಳು ದೊಡ್ಡ ಮೊತ್ತದ ಹಣವನ್ನು ಹೊತ್ತುಕೊಂಡು ಹೋಗುತ್ತಾರೆ. ಇದನ್ನು ನೋಡಿದರೆ, ಸರ್ಕಾರ ಜೀವಂತವಾಗಿದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ.

ಕಾನೂನು ಬಾಹಿರವಾಗಿ ಕೆಲಸ ಮಾಡಲು ಹೆದರಿಕೆಯೇ ಇಲ್ಲದಂತಾಗಿದೆ. ಖಾಸಗಿ ವ್ಯಕ್ತಿಗಳು ೫೦ ಸಾವಿರ ರೂ. ಹಣ ಇಟ್ಟುಕೊಳ್ಳಲೂ ಭಯ ಪಡುವಂತಾಗಿದೆ. ಹೀಗಿರುವಾಗ ೧೦ ಲಕ್ಷ ರೂ. ಇಟ್ಟುಕೊಂಡು ವಿಧಾನಸೌಧಕ್ಕೆ ಹೋಗುವ ಅಧಿಕಾರಿಗಳೂ ಇದ್ದಾರೆಂದರೆ, ಇದಕ್ಕಿಂತ ನಾಚಿಕೆಗೇಡಿತನ ಇನ್ನೇನಿದೆ? ಎಂದು ಪ್ರಶ್ನಿಸಿದ ಪಾಟೀಲರು, ಕೂಡಲೇ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ  ನಗರಸಭೆ ಸದಸ್ಯ ಸುರೇಶ್ ಕಟ್ಟಿಮನಿ, ಮುಖಂಡರಾದ ರಮೇಶ್ ಹೊನ್ಬಿನಾಯ್ಕರ್, ಅಶೋಕ ಮಂದಾಲಿ, ಬಸವರಾಜ್ ಕಡೆಮನಿ, ಜಾಯಿನಗೌಡ್ರ ಸೇರಿದಂತೆ ಅನೇಕರಿದ್ದರು.

error: Content is protected !!