Home Blog Page 3201

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲಿಯೇ ಸಾವು, ಇನ್ನಿಬ್ಬರು ಗಂಭೀರ

ಯಲ್ಲಮ್ಮನಗುಡ್ಡಕ್ಕೆ ಹೊರಟಾಗ ನಡೆದ ಘಟನೆ

ವಿಜಯಸಾಕ್ಷಿ ಸುದ್ದಿ, ನರಗುಂದ

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, ಮತ್ತೀಬ್ಬರು ಗಾಯಗೊಂಡ ಘಟನೆ ಜರುಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮಾದಾಪೂರು ಗ್ರಾಮದ ಮರಿಯಪ್ಪ (30) ಮೃತಪಟ್ಟ ದುರ್ಧೈವಿ.

ತಾಲೂಕಿನ ಭೈರನಹಟ್ಟಿ ಗ್ರಾಮದ ರವಿ ಹಾಗೂ ಶರಣಪ್ಪ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನರಗುಂದದಿಂದ ಭೈರನಹಟ್ಟಿ ಕಡೆಗೆ ರವಿ ಹಾಗೂ ಶರಣಪ್ಪ ಹೊರಟಿದ್ದರು.

ಮೃತ ಮರಿಯಪ್ಪ ತನ್ನ ಗೆಳೆಯರಾದ ಅರ್ಜುನ ಹಾಗೂ ಕೃಷ್ಣ ಜೊತೆಗೆ ಯಲ್ಲಮ್ಮನಗುಡ್ಡಕ್ಕೆ ಹೊರಟಿದ್ದರು ಎಂದು ಮೂಲಗಳು ತಿಳಿಸಿವೆ.

ಅರ್ಜುನ ಹಾಗೂ ಕೃಷ್ಣ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶಿರಹಟ್ಟಿ ಕ್ಷೇತ್ರದ  ಜೆಡಿಎಸ್ ಅಭ್ಯರ್ಥಿಯಾಗಿ ಹನುಮಂತಪ್ಪ ಎಮ್ ನಾಯಕ; ‘ಬಡವರ ಕಲ್ಯಾಣಕ್ಕೆ ಜೆಡಿಎಸ್ ಶ್ರಮಿಸಲಿದೆ’

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ


ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಡವರ, ದಲಿತರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಲಾಗುವುದು ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಉತ್ತರ ಕರ್ನಾಟಕ ಪಕ್ಷದ ವೀಕ್ಷಕ ಬ್ಯಾರಿಸ್ಟರ್ ಪ್ರತಾಪಗೌಡ ಪಾಟೀಲ ಹೇಳಿದರು.

ಅವರು ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಸಲಹೆ ಮೇರೆಗೆ ಪಕ್ಷದ ಶಿರಹಟ್ಟಿ ಮತ ಕ್ಷೇತ್ರದ 
 ಜೆಡಿಎಸ್ ಅಭ್ಯರ್ಥಿಯನ್ನಾಗಿ ಹನುಮಂತಪ್ಪ ಎಮ್ ನಾಯಕ ಅವರನ್ನು ಘೋಷಿಸಿ ಪಕ್ಷದ ಅಭ್ಯರ್ಥಿಗೆ ಸಿಹಿ ತಿನ್ನಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಪಂಚರತ್ನ ಯೋಜನೆ ಪ್ರತಿ ಮನೆ ಮನೆಗೂ ತಲುಪಿಸುವುದು. ಈ ಯೋಜನೆ ಲಾಭವನ್ನು ಕ್ಷೇತ್ರದ ಜನರಿಗೆ ತಿಳಿಸುವುದು ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ಉದ್ದೇಶ ಹೊಂದಿದ್ದು ಜನರು ಜೆಡಿಎಸ್ ಪಕ್ಷದ ಪರ ಒಲವು ಹೊಂದಿದ್ದು ರಾಜ್ಯದಲ್ಲಿ ಪಕ್ಷ ಅಧಿಕಾರ ಬರೋದು ನಿಶ್ಚಿತ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಹನುಮಂತಪ್ಪ ಎಮ್ ನಾಯಕ, ಜಿಲ್ಲಾ ಉಪಾಧ್ಯಕ್ಷ ಅಶೋಕ ತ್ಯಾಮಣ್ಣನವರ, ಜಿಲ್ಲಾ ಕಾರ್ಯಾಧ್ಯಕ್ಷ ಎಮ್ ಆರ್ ಸೋಂಪುರ, ಪ್ರ ಕಾರ್ಯದರ್ಶಿ ನಜೀರ ಡಂಬಳ, ಜಿಲ್ಲಾ ವಕ್ತಾರ ರಮೇಶ ಕಲಬುರ್ಗಿ, ತಾಲೂಕ ಅಧ್ಯಕ್ಷ ಪದ್ಮರಾಜ ಪಾಟೀಲ್, ಶಿರಹಟ್ಟಿ ಅಧ್ಯಕ್ಷ ವಿಜಯಪ್ಪ ಸಾಳುಂಕಿ, ಮುಂಡರಗಿ ಅಧ್ಯಕ್ಷ ಜಿ ಕೆ ಕೊಳ್ಳಿಮಠ, ಕ್ಷೇತ್ರದ ವೀಕ್ಷಕ ಅಲಿಅಹ್ಮದ ಹಾದಿಮನಿ, ಯಲ್ಲಪ್ಪ ಹೂಗಾರ, ಈಶ್ವರ ಗೋಪಾಳಿ, ಮಂಜುನಾಥ ದೊಡ್ಡಮನಿ, ಯಲ್ಲನಗೌಡ ಪಾಟೀಲ, ರಮೇಶ್ ಅತ್ತಿಗೆರಿ, ಮಹಮ್ಮದ ಅಲಿ ಗಾಡಗೋಳಿ, ಪ್ರಶಾಂತ ರಾಳಿ, ಜೆ ಕುರಾಗೋಡಪ್ಪ, ಹನುಮಂತಪ್ಪ ಮರೀಗೌಡ್ರ, ಬಸವರಾಜ ಬಾವಿಕಟ್ಟಿ, ಶಶಿಧರ ಸಾಳುಂಕಿ, ಮರಿಯಪ್ಪ ಬಳ್ಳಾರಿ ಇದ್ದರು.

ಬಾರ್, ರೆಸ್ಟೋರೆಂಟ್‌ಗೆ ಅನುಮತಿ ನೀಡದಿರಲು ಒತ್ತಾಯ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆಯ ಪಕ್ಕದ ವಾರ್ಡ್ ನಂ-17 ರಲ್ಲಿ ಹೊಸದಾಗಿ ಬಾರ್ ಮತ್ತು ರೆಸ್ಟೊರೆಂಟ್ ಪ್ರಾರಂಭಿಸಲು ಅನುಮತಿ ನೀಡಬಾರದು. ಅಲ್ಲದೇ ಈ ಪ್ರದೇಶದಲ್ಲಿ ಈಗಾಗಲೇ ಇಲ್ಲಿರುವ ಡಾಬಾಗಳನ್ನು ತೆರವುಗೊಳಿಸಿ ಜನರು ನೆಮ್ಮದಿಯಿಂದ ಇರಲು ಅನುಕೂಲ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಪಟ್ಟಣದ ಸಂಘಟನೆಗಳು ಬುಧವಾರ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ಮನವಿ ಸಲ್ಲಿಸಿದರು.

ಮನವಿ ಪತ್ರದಲ್ಲಿ ಪಟ್ಟಣದ ಜನ ವಸತಿ ಪ್ರದೇಶದಲ್ಲಿ ಮೂರ‍್ನಾಲ್ಕು ಡಾಬಾಗಳು ಹಗಲೂ-ರಾತ್ರಿ ಕಾರ್ಯ ನಿರ್ವಹಿಸುತ್ತವೆ. ಇದರಿಂದ ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಅಲ್ಲದೇ ಇಲ್ಲಿ ದೇವಸ್ಥಾನ, ಶಾಲೆ, ಬಾಲಕ-ಬಾಲಕಿಯರ ಹಾಸ್ಟೆಲ್‌ಗಳಿವೆ. ಕಾರಣ ಇಲ್ಲಿ ಬಾರ್, ರೆಸ್ಟೋರೆಂಟ್ ಮತ್ತು ಲಾಡ್ಜ್ ಪ್ರಾರಂಭಿಸಲು ಅನುಮತಿ ನೀಡಬಾರದು. ಇರುವುದನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಅಧ್ಯಕ್ಷ ಸುರೇಶ ಹಟ್ಟಿ, ಎನ್.ವ್ಹಿ.ಪಡಗೇರಿ, ಎಲ್.ಎನ್.ಶರಸೂರಿ, ಭರಮಪ್ಪ ಶರಸೂರಿ, ಮಂಜುನಾಥ ಹವಳಣ್ಣವರ ಇದ್ದರು.

ದಾಖಲೆ ಬೆಲೆಗೆ ಮಾರಾಟವಾದ ಮೆಣಸಿನಕಾಯಿ; 1 ಕ್ವಿಂಟಲ್‌ಗೆ 70,199 ರೂಪಾಯಿಗೆ ಮಾರಾಟ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ತಾಲೂಕಿನಲ್ಲಿ ಕೋಟುಮಚಗಿಯ ರೈತ ಶರಣಪ್ಪ ಈರಪ್ಪ ಜಗ್ಗಲ್ ಎಂಬುವವರು ಮೆಣಸಿನಕಾಯನ್ನು ದಾಖಲೆ ಬೆಲೆಗೆ ಮಾರಾಟ ಮಾಡಿ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾರೆ. ಶರಣಪ್ಪ ಅವರು ಕ್ವಿಂಟಲ್ಗೆ 70,199 ರೂಪಾಯಿ ದಾಖಲೆ ಬೆಲೆಗೆ ಕೆಂಪು ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ.

ತಮ್ಮ 4 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿರುವ ರೈತ ಶರಣಪ್ಪ ಜಗ್ಗಲ್ ಈಗಾಗಲೇ ಸುಮಾರು 1 ಲಕ್ಷ ರೂಪಾಯಿಯ ಮೆಣಸಿನಕಾಯಿ ಮಾರಾಟ ಲಾಭ ಪಡೆದುಕೊಂಡಿದ್ದಾರೆ.

ಕಾಶ್ಮೀರ ಡಬ್ಬಿ ಎಂಬ ಹೊಸ ತಳಿ ಮೆಣಸಿನ ಬೀಜ ಬಿತ್ತನೆ ಮಾಡಿ ಶರಣಪ್ಪ ಅವರು ಈ ದಾಖಲೆ ಬೆಲೆ ಕಂಡಿದ್ದಾರೆ. ಬೆಳೆದ ಮೆಣಸಿನಕಾಯಿಯನ್ನು ಸ್ಟಾಕ್ ಇಟ್ಟಿರುವ ರೈತ ಶರಣಪ್ಪ ಅವರು, ಇನ್ನಷ್ಟು ಆದಾಯ ಗಳಿಸುವ ಉತ್ಸಾಹದಲ್ಲಿದ್ದಾರೆ.

ಸಾಮಾನ್ಯವಾಗಿ ಮೆಣಸಿನಕಾಯಿ ಬೆಲೆಯನ್ನು ಅದರ ಗುಣಮಟ್ಟವನ್ನು ಅವಲಂಬಿಸಿ ಕ್ವಿಂಟಲ್‌ಗೆ 35,000-50,000 ರೂ ನೀಡಲಾಗುತ್ತದೆ. ಆದರೆ, ಶರಣಪ್ಪ ಅವರು ಕ್ವಿಂಟಲ್‌ಗೆ ರೂ.70 ಸಾವಿರಕ್ಕೂ ಹೆಚ್ಚು ಹಣ ಗಳಿಕೆ ಮಾಡಿದ್ದಾರೆ.

ಈ ಹಿಂದೆ 2020ರಲ್ಲಿ ರೈತರೊಬ್ಬರು ಕ್ವಿಂಟಲ್ ಮೆಣಸಿನಕಾಯಿಗೆ 41,101ರೂ.ಗೆ ಮಾರಾಟ ಮಾಡಿದ್ದರು. ನವೆಂಬರ್ 2022ರಲ್ಲಿ ಮಾರುಕಟ್ಟೆ ಬೆಲೆ 45,000 ಆಗಿತ್ತು ಎಂದು ರೈತರು ತಿಳಿಸಿದ್ದಾರೆ.

ಶರಣಪ್ಪ ಅವರ ಮೆಣಸಿನಕಾಯಿಯನ್ನು ಅಂಗಡಿ ಮಾಲೀಕ ಅಶೋಕ ಗಡಾದ್ ಅವರು ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ಖರೀದಿಸಿದ್ದಾರೆ. ಕಳೆದ ವಾರ ಹುಬ್ಬಳ್ಳಿ ಎಪಿಎಂಸಿಯಲ್ಲಿ ಶರಣಪ್ಪ ಅವರು, ಇದೇ ಮೆಣಸಿನಕಾಯಿಯನ್ನು ಕ್ವಿಂಟಲ್‌ಗೆ 59 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಈ ಬೆಳವಣಿಗೆಯನ್ನು ಗಮನಿಸಿದ ಗಡಾದ್ ಅವರು ಮೆಣಸಿನಕಾಯಿ ನೋಡಿ ಉತ್ತಮ ಬೆಲೆ ನೀಡಿ ಖರೀದಿ ಮಾಡಿದ್ದಾರೆ.

ಕಳೆದ ವರ್ಷ ಎಡೆಬಿಡದೆ ಸುರಿದ ಮಳೆಯಿಂದಾಗಿ ಬಹುತೇಕ ಮೆಣಸಿನಕಾಯಿ ಬೆಳೆ ನಾಶವಾಗಿ ಬೆಲೆ ಏರಿಕೆಯಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಈ ಹಣವನ್ನು ನನ್ನ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲು ನಿರ್ಧರಿಸಿದ್ದೇನೆ. ಇದು ನಮ್ಮ ಕುಟುಂಬಕ್ಕೆ ಹೊಸ ವರ್ಷದ ಉಡುಗೊರೆಯಾಗಿದೆ. ಈ ವಿಶೇಷ ಮೆಣಸಿನಕಾಯಿಯನ್ನು ಬೆಳೆಯಲು ನಮಗೆ ಸಹಾಯ ಮಾಡಿದ ಮತ್ತು ನಮಗೆ ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಶರಣಪ್ಪ ಅವರು ಹೇಳಿದ್ದಾರೆ.

ಈ ವರ್ಷ ಅಕಾಲಿಕ ಮಳೆ ಸುರಿದು ಮೆಣಸಿನಕಾಯಿ ಬೆಳೆಯ ಇಳುವರಿ ಕಡಿಮೆಯಾಗಿದೆ. ಅಳಿದುಳಿದ ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದಿದ್ದು, ಇದೇ ರೀತಿ ಬೆಲೆ ಇದ್ದರೆ ರೈತರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯ.

-ಯಲ್ಲಪ್ಪ ಎಚ್ ಬಾಬರಿ, ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ

ಕಾಶ್ಮೀರ ಡಬ್ಬಿ ಮೆಣಸಿನಕಾಯಿಯು ದಪ್ಪ, ಉದ್ದ ಮತ್ತು ಎಣ್ಣೆಯ ಅಂಶವನ್ನು ಹೊಂದಿರುವ ತಳಿಯಾಗಿದೆ. ಮತ್ತು ಇದು ಹೆಚ್ಚಿನ ಬೆಲೆಯನ್ನು ಆಕರ್ಷಿಸುತ್ತದೆ. ಇದನ್ನು ಮುಖ್ಯವಾಗಿ ಮೆಣಸಿನ ಪುಡಿ ಮಾಡಲು ಬಳಸಲಾಗುತ್ತದೆ. ಗದಗ, ಹುಬ್ಬಳ್ಳಿ ಮತ್ತು ಹಾವೇರಿಯ ಏಜೆಂಟ್‌ಗಳು ಇದಕ್ಕೆ ಉತ್ತಮ ಬೆಲೆ ನೀಡಿ, ಇತರ ರಾಜ್ಯಗಳಿಂದ ಖರೀದಿ ಮಾಡುತ್ತಾರೆ.

ರೋಣ ಪೊಲೀಸರ ಕಾರ್ಯಾಚರಣೆ; ಜೂಜಾಟದಲ್ಲಿ ತೊಡಗಿದ್ದ ದೊಡ್ಡ ಕುಳಗಳ ಬಂಧನ

ಬಂಧಿತರಲ್ಲಿ ಉದ್ಯಮಿಗಳು, ರಾಜಕಾರಣಿಗಳು, ಚಾಲಕ, ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಹಲವು ಗಣ್ಯರು ಇದ್ದಾರೆ ಎನ್ನಲಾಗಿದೆ.

ವಿಜಯಸಾಕ್ಷಿ ಸುದ್ದಿ, ರೋಣ

ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದ ಜೂಜಾಟದ ಅಡ್ಡೆಯ ಮೇಲೆ ದಾಳಿ ಮಾಡಿದ ರೋಣ ಪೊಲೀಸರು ದೊಡ್ಡ ದೊಡ್ಡ ಕುಳಗಳನ್ನೆ ಬಲೆಗೆ ಕೆಡವಿದ್ದಾರೆ.

ತಾಲೂಕಿನ ಮಲ್ಲಾಪೂರ ಗ್ರಾಮದ ರೋಣ-ನರಗುಂದ ರಸ್ತೆಯ ಸಾಯಿ ದಾಬಾದ ಮುಂದೆ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ವಿಕ್ರಮ ಬಸವರಾಜ್ ಚನ್ನಪ್ಪಗೌಡರ, ಭೀಮಪ್ಪ ಬಸಪ್ಪ ವನ್ನೂರ, ಬಸವರಾಜ್ ಶಿವಪ್ಪ ಕುಂದರಗಿ, ಮುತ್ತಪ್ಪ ಶಿವಪ್ಪ ಗಾಜಿ, ಜಗದೀಶ್ ಶಿವಪ್ಪ ಗಾರವಾಡ, ಡೊಬಲೇಶ್ ದಾಸರ್, ಶರಣಪ್ಪ ಶೇಖರಪ್ಪ ಪರಡ್ಡಿ, ಶಂಕರಪ್ಪ ಬಸವರಾಜ್ ಗದಗಿ, ಆಂಜನೇಯ ಕಾಶಪ್ಪ ಪತ್ತಾರ, ಸುರೇಶ್ ಹನಮಂತ ಭಜಂತ್ರಿ, ಪಕ್ಕೀರಪ್ಪ ಅಲಿಯಾಸ್ ಪ್ರಕಾಶ್ ಪರಪ್ಪ ಹಾಲನ್ನವರ್, ಸುರೇಶ್ ವೀರಭದ್ರಪ್ಪ ಗುಡಿಸಾಗರ್, ಸಂತೋಷ ಯಲ್ಲಪ್ಪ ಚಕ್ರಸಾಲಿ, ಶಿವನಗೌಡ ಮಹಾಂತಗೌಡ ಹಾದಿಮನಿ, ವಸಂತ ತಿಪ್ಪಣ್ಣ ಚಲವಾದಿ, ಹನಮಂತ ದ್ಯಾಮಪ್ಪ ಚಲವಾದಿ, ಜಗದೀಶ್ವರಯ್ಯ ವೀರಭದ್ರಯ್ಯ ವಸ್ತ್ರದ, ಭೀಮಪ್ಪ ರಾಮಪ್ಪ ಡೊಳ್ಳಿನ, ಈಶ್ವರಗೌಡ ಬಾಪುಗೌಡ ಸೂರಪ್ಪಗೌಡ್ರ, ಹನಮಂತಪ್ಪ ಯಲ್ಲಪ್ಪ ಚಲವಾದಿ ಹಾಗೂ ಖಾದಿರಸಾಬ್ ಕಾಶೀಮಸಾಬ ಸಂಕನೂರು ಎಂಬುವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ನಗದು 50,200 ರೂ.ಗಳನ್ನು ಜಪ್ತಿ ಮಾಡಲಾಗಿದೆ.

ಖಚಿತ ಮಾಹಿತಿ ಪಡೆದ ರೋಣ ಠಾಣೆಯ ಪಿಎಸ್ಐ ಚಂದ್ರಶೇಖರ ಹೆರಕಲ್ ಹಾಗೂ ಸಿಬ್ಬಂದಿ ಈ ದಾಳಿ ಮಾಡಿದ್ದರು.

ಬಂಧಿತರಲ್ಲಿ ಉದ್ಯಮಿಗಳು, ರಾಜಕಾರಣಿಗಳು, ಚಾಲಕ, ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಹಲವು ಗಣ್ಯರು ಇದ್ದಾರೆ ಎನ್ನಲಾಗಿದೆ.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ-231/2022 ಕಲಂ 87 ಕೆ.ಪಿ ಯ್ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನ ಸಮೇತ ಸಿಕ್ಕಿಬಿದ್ದ ಆರೋಪಿ

ವಿಜಯಸಾಕ್ಷಿ ಸುದ್ದಿ, ನರೇಗಲ್

ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ವಾಹನದಲ್ಲಿ ಸಾಗಿಸಲು ಮುಂದಾದ ಆರೋಪಿ ಸಮೇತ ಸಾವಿರಾರು ರೂ. ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಜರುಗಿದೆ.

ಅಬ್ಬಿಗೇರಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ ಬಳಿ ಇರುವ ಆರೋಪಿ ಶಂಕ್ರಪ್ಪ ಮಲ್ಲಪ್ಪ ಹೊಂಬಾಳ್ಳಿ ಎಂಬಾತ ಗ್ರಾಮದ ಮನೆ ಮನೆಗಳಲ್ಲಿ ಸರಕಾರದಿಂದ ಕೊಡುವ ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ಟ್ರ್ಯಾಕರ್ ನಲ್ಲಿ(AP-04 TX-8946) ಹೇರಿಕೊಂಡು ಮತ್ತೊಂದು ವಾಹನ ಮಿನಿ ಗೂಡ್ಸ್ ವಾಹನದಲ್ಲಿ (KA-63-4465) ಲೋಡ ಮಾಡಿಕೊಂಡ ಸಂದರ್ಭದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಆರೋಪಿ ಶಂಕ್ರಪ್ಪ ಮಲ್ಲಪ್ಪ ಹೊಂಬಾಳ್ಳಿ ಎಂಬಾತನನ್ನು ವಶಕ್ಕೆ ಪಡೆದು, ಅಕ್ರಮವಾಗಿ ಇದ್ದ ಸುಮಾರು 75,900 ರೂ. ಮೌಲ್ಯದ 33 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಈ ಕುರಿತು ಆಹಾರ ಇಲಾಖೆಯ ಅಧಿಕಾರಿ ಪವಾಡಿಗೌಡ ಮಾಲಿಪಾಟೀಲ ಎಂಬುವರು ನೀಡಿದ ದೂರಿನ ಮೇರೆಗೆ 0093/2022 ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂದರ್-ಬಾಹರ್ ಜೂಜಾಟ-ಏಳು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಮುಂಡರಗಿ ಪಟ್ಟಣದ ‌ವ್ಯಾಪ್ತಿಯಲ್ಲಿ ಬರುವ ಎಸ್. ಎಫ್. ಎಸ್ ಸ್ಕೂಲ್ ಹಿಂದೆ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಏಳು ಜನರ ತಂಡವನ್ನು ಮುಂಡರಗಿ ಪೊಲೀಸರು ಬಂಧಿಸಿದ್ದಾರೆ.

ಎಎಸ್ಐ ಎಸ್ ಟಿ ಕಡಬಿನ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಈ ದಾಳಿ ಮಾಡಿತ್ತು.

ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮುಂಡರಗಿ ಪಟ್ಟಣದ ದುರ್ಗಾದೇವಿ ನಗರದ ದೇವರಾಜ ಯರಮಲ್ಲಪ್ಪ ಹಡಪದ, ಗರಡಿಮನೆ ಓಣಿಯ ಅಶೋಕ ಚಿದಾನಂದ ಈಳಿಗೇರ, ಎಸ್.ಎಸ್ ಪಾಟೀಲ ನಗರದ ಪಕ್ರುಸಾಬ ಅಬ್ದುಲ್ ಸಾಬ ಹಾರೋಗೇರಿ, ಎ.ಡಿ ನಗರದ ಸುರೇಶ್ ಲಿಂಗಪ್ಪ ಉಪ್ಪಾರ, ಎಸ್.ಎಸ್ ಪಾಟೀಲ ನಗರದ ನಿಂಗಪ್ಪ ಬಸನಗೌಡ ಕಾದ್ರಳ್ಳಿ, ಎ.ಡಿ ನಗರದ ಮಂಜಪ್ಪ ಭೀಮಪ್ಪ ಬಂಡಿವಡ್ಡರ್, ದುರ್ಗಾದೇವಿ ನಗರದ ಯಲ್ಲಪ್ಪ ಬಸಪ್ಪ ಕಲ್ಲೊಡ್ಡರ್ ಬಂಧಿತರು.

ಬಂಧಿತರಿಂದ ನಗದು 8900 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕರ್ನಾಟಕ ಪೊಲೀಸ್ ಆ್ಯಕ್ಟ್ 1963(U/s-87) 0229/2022 ರ ಅಡಿಯಲ್ಲಿ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದೇಶ್ವರ ಶ್ರೀ ಅಸ್ತಂಗತ; ನಡಿಗೆ ನಿಲ್ಲಿಸಿದ ನಡೆದಾಡುವ ದೇವರು

ವಿಜಯಸಾಕ್ಷಿ ಸುದ್ದಿ, ವಿಜಯಪುರ

ತಮ್ಮ ಪ್ರವಚನಗಳು, ಸರಳ ಜೀವನ, ಸರಳ ನಡೆನುಡಿಗಳಿಂದ ನಾಡಿನಾದ್ಯಂತ ಹಾಗೂ ದೇಶಾದ್ಯಂತ ಅಪಾರ ಭಕ್ತರನ್ನು ಹೊಂದಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು (81) ಸೋಮವಾರ ರಾತ್ರಿ ನಿಧನರಾದರು.

ಕಳೆದ ಹಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಆಸ್ಪತ್ರೆಗೆ ಹೋಗಲು ಒಪ್ಪದಿದ್ದುದರಿಂದ ಅವರ ಆಶ್ರಮದಲ್ಲೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶ್ರೀಗಳು ಕೊನೆಯುಸಿರೆಳೆದಿದ್ದಾರೆಂದು ವಿಜಯಪುರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಘೋಷಿಸಿದರು.

ಶ್ರೀಗಳ ಅಂತ್ಯಕ್ರಿಯೆ ಮಂಗಳವಾರ ಸಂಜೆ 5 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಮಂಗಳವಾರ ಬೆಳಿಗ್ಗೆ 4 ಗಂಟೆಯವರೆಗೆ ಆಶ್ರಮದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಂತರ ಸಂಜೆ 5 ಗಂಟೆಯವರೆಗೆ ಸೈನಿಕ ಶಾಲೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಸಂತಾಪ: ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಸಚಿವ ಸಿ.ಸಿ ಪಾಟೀಲ, ಶಾಸಕ ಎಚ್. ಕೆ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ. ಎಸ್ ಪಾಟೀಲ, ಮಾಜಿ ಸಂಸದ ಐ.ಜಿ ಸನದಿ, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಸೇರಿದಂತೆ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲು

ಮುಂದುವರೆದ ಶೋಧ ಕಾರ್ಯಾಚರಣೆ

ವಿಜಯಸಾಕ್ಷಿ ಸುದ್ದಿ, ರಾಣಿಬೆನ್ನೂರು

ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಜರುಗಿದೆ.

ರಾಣಿಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ.

ರಾಣಿಬೆನ್ನೂರು ನಗರ ನಿವಾಸಿಗಳಾದ ನವೀನ ಕೂರಗುಂದ( 21), ವಿಕಾಸ ಪಾಟೀಲ್ (20), ಪ್ರಮೋದ (25) ಎಂಬುವರು ಭಾನುವಾರ ಸಂಜೆ ಈಜಲು ತೆರಳಿದ್ದರು.

ನೀರುಪಾಲಾದ ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯಿಂದ ತುಂಗಭದ್ರಾ ನದಿಯಲ್ಲಿ ಮೂವರು ಯುವಕರಿಗಾಗಿ ಶೋದ ಕಾರ್ಯಾಚರಣೆ ನಡೆಸಲಾಗುತ್ತದೆ.

ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಟ್ರ್ಯಾಕರ್ ಟೇಲರ್‌ ಗೆ ಬೈಕ್ ಡಿಕ್ಕಿ; ಇಂಜಿನಿಯರ್ ಸೇರಿ ಇಬ್ಬರ ಸಾವು

ಮರಳು ತುಂಬಿಕೊಂಡು ಎಡಬದಿಯ ರಸ್ತೆಯಲ್ಲಿ ನಿಂತಿದ್ದ ಟ್ರ್ಯಾಕರ್

ವಿಜಯಸಾಕ್ಷಿ ಸುದ್ದಿ, ಗದಗ/ಮುಂಡರಗಿ

ಹೊಸ ವರ್ಷ ಆಚರಣೆಗೆ ಕೇಕ್ ತರಲು ಮುಂಡರಗಿ ಪಟ್ಟಣಕ್ಕೆ ಬಂದು ವಾಪಾಸು ಹೋಗುವಾಗ ಟ್ರ್ಯಾಕರ್ ಟೇಲರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಇಂಜಿನಿಯರ್ ಸೇರಿ ಇಬ್ಬರು ಮೃತಪಟ್ಟ ಘಟನೆ ಜರುಗಿದೆ.

ಮೃತರನ್ನು ಬಳ್ಳಾರಿ ಜಿಲ್ಲೆಯ ಶಿರಗುಪ್ಪದ ಇಂಜಿನಿಯರ್ ರವಿ ತಂದೆ ರಮೇಶ್ ಕೆ (25) ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳೊಗೇರಾದ ಶರಣಗೌಡ ಗುರುನಗೌಡ ಪಾಟೀಲ (42)ಎಂದು ಗುರುತಿಸಲಾಗಿದೆ.

ಮೃತರು ಇಬ್ಬರು ಬೈಕ್ ನಲ್ಲಿ ಶನಿವಾರ ರಾತ್ರಿ
ಮುಂಡರಗಿ ತಾಲೂಕಿನ ಬರದೂರು ದಾಟಿ ಮೇವುಂಡಿ ಕಡೆಗೆ ಹೊರಟಾಗ ಎಡಬದಿಯ ರಸ್ತೆಯ ಮೇಲೆ ಮರಳು ತುಂಬಿಕೊಂಡು ನಿಂತಿದ್ದ ಟ್ರ್ಯಾಕರ್ ಟೇಲರ್ ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಮುಂಡರಗಿಯಲ್ಲಿ ಪ್ರಥಮ ಚಿಕಿತ್ಸೆ ‌ನೀಡಿ, ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ.

ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!