Home Blog Page 3204

ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರಳಿದ ಹಾಲಿನ ವಾಹನ; ಇಬ್ಬರು ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ಮುಂಡರಗಿ:

ಗದಗ-ಕೊಪ್ಪಳ ರಾಷ್ಟ್ರೀಯ ಹೆದ್ದಾರಿ ಹಳ್ಳಿಕೇರಿ ಗ್ರಾಮದ ಬಳಿ ಹಾಲಿನ ಗಾಡಿಯೊಂದು ಸೇತುವೆಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದ ಪರಿಣಾಮ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ಶಿದ್ಧಲಿಂಗಯ್ಯ ಪೂಜಾರ ಹಾಗೂ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಚಾಲಕ ಸಾಧಿಕ್ ಸೈಯ್ಯದ್‌ಸಾಬ ಮುಚ್ಚಾಲೆ( 27) ಮೃತ ದುರ್ದೈವಿಗಳಾಗಿದ್ದಾರೆ.

ಜೆಕೆ ಹಾಲಿನ ಪ್ಯಾಕೇಟ್ ಸರಬರಾಜು ಮಾಡುವ ವಾಹನ ಹಳ್ಳಿಕೇರಿ ಗ್ರಾಮದ ಬಳಿ ಫೂಲ್ ಕಟ್ಟಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ವಾಹನದಲ್ಲಿದ್ದ ಹಾಲಿನ ಪ್ಯಾಕೆಟ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮುಂಡರಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

KSRTC ಕಚೇರಿ ಮೇಲೆ ಎಸಿಬಿ ಪೊಲೀಸರ ದಾಳಿ: ಮಧ್ಯವರ್ತಿ, ಇಬ್ಬರು ಅಧಿಕಾರಿಗಳು ಬಲೆಗೆ

ವಿಜಯಸಾಕ್ಷಿ ಸುದ್ದಿ, ಗದಗ:

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗೀಯ ಕಚೇರಿ ಮೇಲೆ (ಎನ್ ಡಬ್ಲ್ಯೂಕೆಎಸ್ ಆರ್ ಟಿಸಿ) ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಗುರುವಾರ ದಾಳಿ‌ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು‌.

ಗದಗ ಸಾರಿಗೆ ಸಂಸ್ಥೆ ಕಚೇರಿಯ ಲೆಕ್ಕ ಅಧೀಕ್ಷಕ ಜಗದೀಶ್ ಹಲವಾಗಲಿ ಹಾಗೂ ಕಚೇರಿ ಸಹಾಯಕ ಈರಣ್ಣ ಎಲಿಬಳ್ಳಿ ಅವರ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿ ವಿಚಾರಣೆ ನಡೆಸಿದರು.

ಘಟನೆಯ ವಿವರ

ಗದಗ ಮೂಲದ ವಿನಾಯಕ ಹರವಿ ಅವರ ಸಹೋದರ ನಾಗರಾಜ ಹರವಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ಅನಾರೋಗ್ಯದಿಂದ ನಾಗರಾಜ ನಿಧ‌ನರಾಗಿದ್ದರು. ಸರ್ಕಾರದಿಂದ ಬರಬೇಕಿದ್ದ ಬಾಕಿ ಹಣವನ್ನು ಎರಡು ಕಂತ್‌ನಲ್ಲಿ ಬಿಡುಗಡೆ ಮಾಡಿದ್ದರು. ಸದ್ಯ 94,200 ರೂ. ಬಿಡುಗಡೆಯಾಗಿದ್ದು, ಈ ಗ್ರ್ಯಾಚುಟಿ ಹಣ ಬಿಡುಗಡೆಗೆ ಜಗದೀಶ ಹಲವಾಗಲಿ ಹಾಗೂ ಈರಣ್ಣ ಎಲಿಬಳ್ಳಿ 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ವಿನಾಯಕ ಹರವಿ ಎಸಿಬಿಗೆ ದೂರು‌ ನೀಡಿದ್ದರು. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬೇಡಿಕೆಯಿಟ್ಟಿದ್ದ ಲಂಚದ ಹಣವನ್ನು ಹುಡ್ಕೊ ಕಾಲನಿಯ ನಿವಾಸಿ ಅನಿಲ್ ಹರ್ತಿ ಅವರ ಬಳಿ ಕೊಡುವಂತೆ ಸೂಚಿಸಿದ್ದರು. ಅಲ್ಲದೆ, ಹಣ ಮುಟ್ಟಿದ ತಕ್ಷಣ ಬಂದು ಚೆಕ್ ತೆಗೆದುಕೊಂಡು ಹೋಗುವಂತೆ ಈರಣ್ಣ ಎಲೆಬಳ್ಳಿ ವಿನಾಯಕ ಅವರಿಗೆ ಹೇಳಿದ್ದರು. ಅದರಂತೆ, ವಿನಾಯಕ ಹರವಿ ಅಧಿಕಾರಿಗಳು ಬೇಡಿಕೆ ಇಟ್ಟಿದ್ದ ಹಣದ ಪೈಕಿ ಶುಕ್ರವಾರ ಮುಳಗುಂದ ರಸ್ತೆಯ ನಿಸರ್ಗದ ಬಳಿ ಏಜೆಂಟ (ಮಧ್ಯವರ್ತಿ) ಅನಿಲ್ ಗೆ 7 ಸಾವಿರ ರೂ. ನೀಡುತ್ತಿದ್ದಾಗ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಈ ವೇಳೆ ವಿನಾಯಕ ಹರವಿ ಎಂಬುವವರ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಎಸ್ ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ, ಡಿಎಸ್ಪಿ ಎಂ.ವಿ.ಮಲ್ಲಾಪುರ ನೇತೃತ್ವದಲ್ಲಿ ಸಿಪಿಐಗಳಾದ ಆರ್.ಎಫ್.ದೇಸಾಯಿ, ವಿ.ಎಂ.ಹಳ್ಳಿ, ಸಿಬ್ಬಂದಿಗಳಾದ ಎಂ.ಎಂ.ಅಯ್ಯನಗೌಡರ್, ವಿಶ್ವನಾಥ್, ವಿರೇಶ್ ಜೋಳದ, ಎನ್.ಎಸ್.ತಾಯಣ್ಣವರ, ಮಂಜು ಮುಳಗುಂದ, ಶರೀಫ್ ಮುಲ್ಲಾ, ನಾರಾಯಣ ರೆಡ್ಡಿ ಈ‌ ಕಾರ್ಯಚರಣೆಯಲ್ಲಿದ್ದರು.

ಜ.ಫಕೀರೇಶ್ವರ ಮಠಕ್ಕೆ ಉತ್ತರಾಧಿಕಾರಿ ಬೆನ್ನಲ್ಲೇ ಆಡಳಿತಾಧಿಕಾರಿ ನೇಮಕ

ಜ.ಫಕೀರೇಶ್ವರ ಮಠಕ್ಕೆ ನೂತ‌ನ ಉತ್ತರಾಧಿಕಾರಿ ನೇಮಕ ಬೆನ್ನಲ್ಲೇ: ಆಡಳಿತಾಧಿಕಾರಿಯಾಗಿ ನಿವೃತ್ತ ಕೆಎಎಸ್ ಅಧಿಕಾರಿ ವೀರಣ್ಣ ತುರುಮರಿ ಅಧಿಕಾರ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

ಕೋಮು ಸೌಹಾರ್ದತೆಯ ಹರಿಕಾರ ಶಿರಹಟ್ಟಿಯ ಕರ್ತೃ ಶ್ರೀ ಜ. ಫಕೀರೇಶ್ವರ ಮಠಕ್ಕೆ ಬಾಲೆಹೊಸೂರಿನ ಫ.ದಿಂಗಾಲೇಶ್ವರ ಸ್ವಾಮೀಜಿ ಉತ್ತರಾಧಿಕಾರಿಯಾಗಿ ನೇಮಕವಾದ ಬೆನ್ನಲ್ಲೇ ಶ್ರೀಮಠದ ಆಡಳಿತಾಧಿಕಾರಿಯಾಗಿ ನಿವೃತ್ತ ಕೆಎಎಸ್ ಅಧಿಕಾರಿ ವೀರಣ್ಣ ತುರುಮರಿ ನೇಮಕಗೊಂಡಿದ್ದಾರೆ.

ಗುರುವಾರ ಜ.ಫ.ಸಿದ್ದರಾಮ ಸ್ವಾಮೀಜಿಗಳು ಶ್ರೀಮಠದ ಪರಂಪರೆಯಂತೆ ನೇಮಕ ಪತ್ರವನ್ನು ಕರ್ತೃ ಗದ್ದುಗೆಗೆ ಮುಟ್ಟಿಸಿ ಬಳಿಕ ತುರುಮರಿ ಅವರಿಗೆ ನೀಡಿದರು.

ಈ ವೇಳೆ ಮಾತನಾಡಿದ ಜ.ಫ.ಸಿದ್ದರಾಮ ಸ್ವಾಮೀಜಿ, ‘ಶ್ರೀ ಮಠದ ಎಲ್ಲ ಕೆಲಸ ಕಾರ್ಯಗಳ ಜೊತೆಗೆ ಅಭಿವೃದ್ಧಿ ಮತ್ತು ಸುಧಾರಣೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ. ಸಮಾಧಾನ ಮತ್ತು ಶಾಂತಿಯಿಂದ ಎಲ್ಲರ ಸಹಕಾರದೊಂದಿಗೆ ಮಠದ ಅಭಿವೃದ್ಧಿಗೆ ಶ್ರಮವಹಿಸುವಂತೆ’ ಕಿವಿಮಾತು ಹೇಳಿದರು.

ಅಧಿಕಾರ ವಹಿಸಿಕೊಂಡು ಮಾತನಾಡಿದ ವೀರಣ್ಣ ತುರುಮರಿ, ‘ಉಭಯ ಶ್ರೀಗಳು ನನ್ನ ಮೇಲೆ ನಂಬಿಕೆ ಇಟ್ಟು ವಹಿಸಿರುವಂತಹ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ನಿಷ್ಪಕ್ಷಪಾತವಾಗಿ ಶ್ರೀ ಮಠದ ಶ್ರೇಷ್ಠತೆ ಹೆಚ್ಚಿಸುವುದಕ್ಕೆ ಉಭಯ ಶ್ರೀಗಳ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ’ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶಿವಪ್ರಕಾಶ್ ಮಹಾಜನಶೆಟ್ಟರ, ಯಲ್ಲಪ್ಪಗೌಡ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಚಂದ್ರಕಾಂತ್ ನೂರಶೆಟ್ಟರ ಸೇರಿ ಹಲವರು ಉಪಸ್ಥಿತರಿದ್ದರು.

ಈಜಲು ಹೋದ ಇಬ್ಬರು ವಿದ್ಯಾರ್ಥಿಗಳ ಸಾವು

ವಿಜಯಸಾಕ್ಷಿ ಸುದ್ದಿ, ಗದಗ:

ತುಂಗಭದ್ರಾ ನದಿಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಮಂಗಳವಾರ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದ ಬಳಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ‌ಮಾಡುತ್ತಿದ್ದ ರಾಯಚೂರು ಜಿಲ್ಲೆಯ ಗಬ್ಬೂರ ಗ್ರಾಮದ ಶರಣೇಗೌಡ ಬಸವನಗೌಡ ಗಬ್ಬೂರ,
ವಿಜಯನಗರದ ಅಖಿಲೇಶ್ ಎಂಬ ವಿದ್ಯಾರ್ಥಿಗಳು ಮೃತಪಟ್ಟ ದುರ್ಧೈವಿಗಳು.

ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಸೋಮವಾರ ರಾತ್ರಿ ಸಿಂಗಟಾಲೂರು ಗ್ರಾಮದಲ್ಲಿರುವ ವೀರಭದ್ರೇಶ್ವರ ಸ್ವಾಮಿಯ ದರ್ಶನಕ್ಕೆ ಬಂದಿದ್ದರು. ಸೋಮವಾರ ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಿದ್ದ ಶಿಕ್ಷಕರು, ವಿದ್ಯಾರ್ಥಿಗಳು, ಬೆಳಗ್ಗೆ ಸ್ನಾನಕ್ಕೆಂದು ತುಂಗಭದ್ರಾ ನದಿಗೆ ಹೋಗಿದ್ದರು. ಸ್ನಾನ ಮುಗಿಸಿ ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದಾರೆ. ಆದರೆ, ವಿಡಿಯೋ, ಫೋಟೋ ಹುಚ್ಚಿಗಾಗಿ ಶಿಕ್ಷಕರನ್ನು ಬಿಟ್ಟು ಈ ವಿದ್ಯಾರ್ಥಿಗಳು ನದಿ ಕಡೆಗೆ ಓಡಿ ಬಂದಿದ್ದು, ಈ ವೇಳೆ ದುರಂತ ಸಂಭವಿಸಿದೆ.

ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಧಾನಸಭೆಯಲ್ಲಿ ಮಲಗಿರುವ ಕಾಂಗ್ರೆಸ್ಸಿಗರು ಇನ್ನೂ ನಿದ್ರೆಯಿಂದ ಎದ್ದಿಲ್ಲ

• ಮೇಕೆದಾಟು ಪಾದಯಾತ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‌ತಾನೆಷ್ಟು ಬಲಿಷ್ಠ ಎಂದು ತೋರಿಸುವ ಶಕ್ತಿ‌ ಪ್ರದರ್ಶನ

ವಿಜಯಸಾಕ್ಷಿ ಸುದ್ದಿ, ಗದಗ:

ವಿಧಾನಸಭೆಯಲ್ಲಿ ಮಲಗಿರುವ ಕಾಂಗ್ರೆಸ್ಸಿಗರು ಇನ್ನೂ ನಿದ್ರೆಯಿಂದ ಎದ್ದಿಲ್ಲ. ಕಲಾಪ ಹಾಳು ಮಾಡಿದ್ದಕ್ಕೆ ಜನ ಛೀ, ತೂ ಅಂತಾ ಉಗೀತಿದ್ದಾರೆ. ಆರು ದಿನದ ಅಧಿವೇಶನವನ್ನು ಯಾವ ಪುರುಷಾರ್ಥಕ್ಕೆ ಹಾಳು ಮಾಡಿದರೋ ಗೊತ್ತಿಲ್ಲ ಎಂದು ಕೃಷಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದರು.

ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಅಧಿವೇಶನದಲ್ಲಿ ರಾಜ್ಯದ ಸಮಸ್ಯೆ ಚರ್ಚೆ ಮಾಡಲು ಬಿಡಲಿಲ್ಲ. ಸದನದಲ್ಲಿ ಪಲಾಯನ ಮಾಡಿದರು. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರದಿಂದ ನೋಡುತ್ತಿದ್ದಾರೆ’ ಕುಟುಕಿದರು.

‘ರಾಜ್ಯದ ಜನರ ಗಮನ ಸೆಳೆಯುವುದಕ್ಕೋಸ್ಕರ ಮೇಕೆದಾಟು 2.0 ಅಂತಾ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ, ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂಬುವುದು ಗೊತ್ತಾಗಬೇಕು. ಮೇಕೆದಾಟು ಯೋಜನೆಗೆ ಯಾರ ವಿರೋಧವೂ ಇಲ್ಲ. ಬಿಜೆಪಿ ಸರ್ಕಾರದ ವಿರೋಧವಂತು ಮೊದಲೇ ಇಲ್ಲ. ಕೇಂದ್ರದಿಂದ ಕ್ಲಿಯರನ್ಸ್ ಬಂದ ಕೂಡಲೇ ಕೆಲಸ ಆರಂಭವಾಗಲಿದೆ ಎಂದು ಭರವಸೆ ನೀಡಿದ ಅವರು, ನಮ್ಮ ನೀರು ನಮ್ಮ ಹಕ್ಕು ಅಂದರೆ ಕೇವಲ ಕಾಂಗ್ರೆಸ್ಸಿಗರಿಗಷ್ಟೆ ನೀರುನಾ..? ಉಳಿದವರಿಗೆ ಸಂಬಂಧವಿಲ್ವಾ..? ಮೇಕೆದಾಟು ಇವರ ಮನೆ ಪ್ರಾಪರ್ಟಿನಾ?’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಮರೆತು ಹೋಗುತ್ತಿದೆ, ಮುಳುಗಿದೆ. ಬದುಕಿದ್ದೇವೆಂದು ತೋರಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಮೇಕೆದಾಟು ಬಗ್ಗೆ ಇಷ್ಟು ವರ್ಷ ಯಾಕೆ ಚಿಂತಿಸಲಿಲ್ಲ. ಇದೆಲ್ಲಾ ರಾಜಕೀಯ ಗಿಮಿಕ್. ಮೇಕೆದಾಟು ಡಿ.ಕೆ.ಶಿವಕುಮಾರ್ ಅವರ ಸ್ವಪ್ರತಿಷ್ಠೆಯಾಗಿದೆ.

ಡಿಕೆಶಿ ಶಕ್ತಿ ಪ್ರದರ್ಶನ, ತಾನು ಎಷ್ಟು ಬಲಿಷ್ಠ ಎಂಬುದನ್ನು ತೋರಿಸುವ ಪ್ರದರ್ಶನ ಇದಾಗಿದೆ ಎಂದ ಅವರು, ಕಾಂಗ್ರೆಸ್ಸಿಗರಿಗೆ ಉತ್ತರ ಕರ್ನಾಟಕ, ಮಹದಾಯಿ ಬಗ್ಗೆ ಚಿಂತನೆ ಇಲ್ಲ. ಹೀಗಾಗಿ ಪಾದಯಾತ್ರೆಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂದು ಹರಿಹಾಯ್ದರು.

ಉಕ್ರೇನ್ ದೇಶದಲ್ಲಿ ಕನ್ನಡಿಗರು ಸಿಲುಕಿರುವ ವಿಚಾರ‌ದ ಬಗ್ಗೆ ಪ್ರತಿಕ್ರಿಯಿಸಿ, ‘ಉಕ್ರೇನ್ ದೇಶದಲ್ಲಿ ಸಿಲುಕಿದ ಪ್ರತಿಯೊಬ್ಬ ಭಾರತೀಯರನ್ನು ಕರೆತರುವ ವ್ಯವಸ್ಥೆ ಆಗುತ್ತಿದೆ. ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿದವರನ್ನು ರಕ್ಷಿಸಲು ರಾಜ್ಯದಿಂದಲೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಮಾಹಿತಿ ಪಡೆದು ಎಲ್ಲರನ್ನೂ ಸುರಕ್ಷಿತವಾಗಿ
ಕರೆತರುವ ಪ್ರಯತ್ನ ನಡೆದಿದ್ದು, ಇದಕ್ಕೆ ರಾಜ್ಯ, ಕೇಂದ್ರ ಸರ್ಕಾರ ಬದ್ಧವಾಗಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಬಜೆಟ್ ವಿಚಾರದ ಬಗ್ಗೆ ಮಾತನಾಡಿ, ‘ಬಸವರಾಜ್ ಬೊಮ್ಮಾಯಿಯವರು ಉತ್ತಮ ಬಜೆಟ್ ಮಂಡಿಸಲಿದ್ದಾರೆ. ರಾಜ್ಯದ ಎಲ್ಲ ಭಾಗಗಳಿಗೆ ಒಪ್ಪಿಗೆಯಾಗುವ ಬಜೆಟ್ ಬರಲಿದ್ದು, ಉತ್ತರ ಕರ್ನಾಟಕಕ್ಕೆ ಈ ಬಾರಿ ಉತ್ತಮ ಸೌಲಭ್ಯ ಸಿಗಲಿವೆ’ ಎಂದು ಸಚಿವ ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಪ ಸದಸ್ಯ ಎಸ್.ವ್ಹಿ.ಸಂಕನೂರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಇದ್ದರು.

ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ

0

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಕೇಂದ್ರ ಸಂಖ್ಯೆ 43 ರಲ್ಲಿ ಮಾಜಿ ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ, ಜ್ಯೋತಿ ಬೆಳಗಿಸಿ ಮಕ್ಕಳಿಗೆ ಪೋಲಿಯೊ ಹನಿ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೊದಲನೇ ದಿನ ಪೋಲಿಯೊ ಬೂತ್ ಗಳಲ್ಲಿ ಹಾಗೂ ನಂತರದ 2-3 ದಿನಗಳಲ್ಲಿ ಮನೆ-ಮನೆ ಭೇಟಿ ನೀಡುವುದರ ಮೂಲಕ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪೋಲಿಯ ಹನಿ ನೀಡಲಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಕೋರಿದರು.

ಚಿಕ್ಕನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ವೈದ್ಯಾಧಿಕಾರಿ ಡಾ.ಪ್ರಶಾಂತ ಮಲ್ಲಾಪೂರ ಮಾತನಾಡಿ, ಚಿಕ್ಕನರಗುಂದ ಗ್ರಾಮದಲ್ಲಿ ಈ ಬಾರಿಯೂ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಶೇ.100ರಷ್ಟು ಯಶಸ್ಸಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇಗಾಗಲೇ ಎರಡು ವರ್ಷಗಳಿಂದ ಕೋವಿಡ್ ಎಂಬ ಮಾಹಾಮರಿ ನಮ್ಮೆಲ್ಲರ ನೆಮ್ಮದಿ ಹಾಳು ಮಾಡಿದ್ದು, ಇದೀಗ ಒಮಿಕ್ರಾನ ಎಂಬ ಹೊಸ ವೈರಸ್ ಕಂಡು ಬಂದಿದೆ. ನೆಗಡಿ, ಕೆಮ್ಮು, ಹಾಗೂ ಜ್ವರದ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೇ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಲು ಸಲಹೆ ನೀಡಿದರು.

ಪ್ರಾಥಮಿಕ ಸುರಕ್ಷಾ ಅಧಿಕಾರಿ ಕುಮಾರಿ ಶರಾವತಿ ಹಿರೇಮಠ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಇದೇ 27 ರಿಂದ ಮಾ.2 ರವರೆಗೆ ಪಲ್ಸ ಪೋಲಿಯೊ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ನೂರರಷ್ಟು ಯಶಸ್ಸಿಗೆ ನಮ್ಮ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಸಿದ್ಧರಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ನಿರ್ಮಲಾ ತಳವಾರ ಹಾಗೂ ಪಿಡಿಓ ಶೈನಾಜ್ ಮುಜಾವರ್, ಆರೊಗ್ಯ ಇಲಾಖೆಯ ಸಂತೋಷ ಅಂಬಿಗೇರ, ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ ಕಾಡದೇವರಮಠ, ಮಂಜುಳಾ ಮೇಟಿ, ಸವಿತಾ ರಾಯರಡ್ಡಿ, ಆಶಾ ಕಾರ್ಯಕರ್ತೆ ಶೋಭಾ ಸುಳ್ಳದ, ಸುಮಾ ಮರಿಯಣ್ಣವರ, ಹಾಗೂ ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು.

ಬದಲಾಗಿರೊ‌ ಪ್ರೇಮ್, ಸಂದೇಶ ಇರೊ ಕಥೆ…

0

ಏಕ್ ಲವ್ ಯಾ ಸಿನಿಮಾ ವಿಮರ್ಶೆ (***)

-ಬಸವರಾಜ ಕರುಗಲ್.
“ಮೊದಲು ಅವಳನ್ನ‌ ಕೊಲೆ ಮಾಡ್ತಿನಿ, ಆಮೇಲೆ ನಿನ್ನನ್ನ ಸಾಯಿಸ್ತಿನಿ”- ಇದು ಚಿತ್ರದ ನಾಯಕ‌ ಹೇಳೋ ಮೊದಲ ಡೈಲಾಗ್…

ಅರೇ ಇದೇನಪಾ ಇದು? ಲವ್ ಸ್ಟೋರಿ ಅನ್ಕೊಂಡ್ ಬಂದರೆ ಸೈಕೋ ಒಬ್ಬನ ಸ್ಟೋರಿ ಇದ್ದಂತಿದೆಯಲ್ಲ? ಅನ್ಸುತ್ತೆ. ಬರೀ ಹದಿನೈದು ನಿಮಿಷದಲ್ಲಿ ಲವ್ ಸ್ಟೋರಿ, ಟ್ರ್ಯಾಕ್‌ಗೆ ಬರುತ್ತೆ. ಅಲ್ಲಲ್ಲಿ ಟ್ವಿಸ್ಟು, ಟರ್ನು ಬರ್ತವೆ.‌ ಹೈಸ್ಕೂಲಿನಲ್ಲೇ ಲವ್ವಲ್ಲಿ‌ ಬೀಳೋ ಹುಡುಗ, ಕಾಲೇಜಿಗೆ‌ ಬಂದರೂ ಅವಳನ್ನು ಬೇಜಾನ್ “ಓಡಾಡ್ತಾ”ನೇ ಲವ್ ಮಾಡ್ತಾನೆ.

ಒಂದಿನ ಪೊರ್ಕಿಯೊಬ್ಬ‌ ಕಾಲೇಜಿಗೆ ಬಂದು ಅವಳನ್ನ ಲವ್ ಮಾಡುವಂತೆ ಕಾಡುವಾಗ ಓಡೋಡಿ ಬರುವ ಹೀರೋ ಪೊರ್ಕಿ‌ ಗ್ಯಾಂಗ್‌ನ್ನ ಚಿತ್ರಾನ್ನ ಮಾಡ್ತಾನೆ. ಅದೇ ಕ್ಷಣ ಹುಡುಗಿ‌ ಎದುರು ಪ್ರೇಮ‌ ನಿವೇದನೆಗೆ ಮುಂದಾಗುತ್ತಿದ್ದಂತೆ ಕಥೆ, ಬೇರೊಂದು ಟ್ರ್ಯಾಕ್‌ಗೆ ಹೊರಳುತ್ತದೆ.

ಬ್ರಿಲಿಯಂಟ್ ಸ್ಟೂಡೆಂಟ್ ಎಣ್ಣೆದಾಸನಾಗ್ತಾನೆ. ಆದರೂ ಅವನು ರ‌್ಯಾಂಕ್ ಸ್ಟೂಡೆಂಟೇ. ಕುಡ್ಕೊಂಡೇ ಕಾಲೇಜಿಗೆ ಬರ‌್ತಾನೆ, ಕುಡ್ಕೊಂಡೇ ದಿ ಗ್ರೇಟ್ ಲಾಯರ್ ಘಟನೆಯೊಂದನ್ನ ವಿವರಿಸಿ, ಕೇಳೋ ಪ್ರಶ್ನೆಗೆ ಉತ್ತರ ಕೊಡ್ತಾನೆ, ವೇದಿಕೆಯಲ್ಲೇ ಪ್ರಮುಖ ಅತಿಥಿ, ಅದೇ ದಿ ಗ್ರೇಟ್ ಲಾಯರ್‌ನಿಂದ ಸಿಗರೇಟ್ ಪಡೀತಾನೆ. ಮದ್ಯದ ಅಮಲಿನ ಮಧ್ಯೆ ನಾಯಕನ ಗೆಳೆಯರ ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಪಡ್ಡೆಗಳಿಗೆ ಮಾತ್ರ ಇಷ್ಟವಾಗಬಹುದು.

ಮಗನಿಗಾಗಿ ಜೀವವನ್ನೇ ಕೊಡುವ ಅಪ್ಪ ಮಗನ ಈ ಸ್ಥಿತಿ ಕಂಡು ಮಮ್ಮಲ ಮರಗುತ್ತಾನೆ. ಮಗ ಹಾದಿ ತಪ್ಪಿದ್ದನ್ನ ಚಿಂತಿಸಿ ಹಾಸಿಗೆ ಹಿಡಿಯುತ್ತಾನೆ. ಕಾಯಿಲೆಯ ಅಪ್ಪನ ನೋಡಿ, ನಾಯಕ ಹುಡುಗಿ ಗುಂಗಿನಿಂದ ಹೊರ ಬಂದು, ಇನ್ನೇನು ದಿ ಗ್ರೇಟ್ ಲಾಯರ್ ಬಳಿ ಜ್ಯೂನಿಯರ್ ಆಗಿ ಸೇರಿ, ಮೊದಲ ಕೇಸ್ ಕೈಗೆತ್ತಿಕೊಳ್ಳುತ್ತಿದ್ದಂತೆ ನಿರೀಕ್ಷಿಸದ ತಿರುವು..!

ಸೆಕೆಂಡ್ ಹಾಫ್‌ನಲ್ಲಿ ಸಿನಿಮಾ ಬೇರೊಂದು ಆಯಾಮಕ್ಕೆ ಹೊರಳುತ್ತದೆ. ಅಲ್ಲಿಯವರೆಗೂ ಲವ್ ಸ್ಟೋರಿ ಎನಿಸಿದ್ದ ಸಿನಿಮಾ ಸಸ್ಪೆನ್ಸ್ ಸ್ಟೋರಿಯಾಗಿ ಮಾರ್ಪಡುತ್ತದೆ. ನಾಯಕಿಯ ಅತ್ಯಾಚಾರ ನಡೆದು, ಕೊಲೆಯತ್ನವೂ ಆಗುತ್ತದೆ. ಆದರೆ ನಾಯಕಿ ಕೋಮಾ ಸ್ಥಿತಿ ತಲುಪುತ್ತಾಳೆ. ನಾಯಕಿಯ ಈ ಸ್ಥಿತಿಗೆ ಸೈಕೋ ಕುಡುಕಾನೇ ಕಾರಣ ಅಂತ ನಾಯಕಿಯ ಹೆತ್ತವರಿಂದ ದೂರು. ಇಲ್ಲಿಂದ ಕಳ್ಳ-ಪೊಲೀಸ್ ಆಟ ಶುರು.

ನಾಯಕನಿಗೆ ಶಿಕ್ಷೆಯಾಗುತ್ತಾ? ಅಥವಾ ಬಚಾವ್ ಆಗ್ತಾನಾ? ನಾಯಕಿಯ ಕೋಮಾ ಸ್ಥಿತಿಗೆ ಯಾರು? ಹೇಗೆ? ಕಾರಣ ಎಂಬುದನ್ನ ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.

ಸಿನಿಮಾದ ಕ್ಲೈಮ್ಯಾಕ್ಸ್‌ನ ಎರಡೂವರೆ ನಿಮಿಷದಲ್ಲಿ ಅತ್ಯಾಚಾರಿಗಳಿಗೆ ಯಾವ ಶಿಕ್ಷೆಯಾಗಬೇಕು ಎಂಬ ಒಂದೊಳ್ಳೆ ಸಂದೇಶದ ಜೊತೆಗೆ ಊಹಿಸದ ಟ್ವಿಸ್ಟ್ ಸಹ ಇದೆ. ಪ್ರೇಕ್ಷಕರು ಇದನ್ನ ಮಿಸ್ ಮಾಡ್ಕೊಬಾರದು.

ನಿರ್ದೇಶಕ ಜೋಗಿ ಪ್ರೇಮ್ ತಮ್ಮ ಹಿಂದಿನ ಎಲ್ಲ ಸಿನಿಮಾಗಳಿಂದ ಹೊರ ಬಂದಿದ್ದಾರೆ. ಬದಲಾದ ಪ್ರೇಮ್, ಸೋಷಿಯಲ್ ಮೇಸೇಜ್ ಹೊತ್ತ ಕಥೆಯೊಂದಿಗೆ ಅಳಿಯ ರಾಣಾನನ್ನ ಈ ಚಿತ್ರದ ಮೂಲಕ ಹೀರೋ ಆಗಿ ಭರ್ಜರಿಯಾಗೇ ಲಾಂಚ್ ಮಾಡಿದ್ದಾರೆ. ಪ್ರೇಮ್ ಸಿನಿಮಾಗಳಲ್ಲಿ ಇರುವ ತಾಯಿ ಸೆಂಟಿಮೆಂಟ್ ಈ ಚಿತ್ರದಲ್ಲಿಲ್ಲ, ಫಾರ್ ಎ ಚೇಂಜ್ ಆ ಸೆಂಟಿಮೆಂಟ್ ತಂದೆ-ಮಗನಿಗೆ ಶಿಫ್ಟ್ ಆಗಿದೆ. ಮಹೇಂದ್ರ ಕ್ಯಾಮೆರಾ ವರ್ಕ್ ಈ ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್. ಸಾಂಗ್ಸ್, ಫೈಟ್ಸು ತುಂಬಾನೇ ರಿಚ್ ಆಗಿ ಬಂದಿವೆ.

ನಾಯಕ ರಾಣಾ ನೃತ್ಯ ಹೊಡೆದಾಟದಲ್ಲಿ ಬಹಳ ಇಷ್ಟವಾಗುತ್ತಾರೆ. ಮೂರು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿರೊ ರಾಣಾ ಕಥೆಗೆ, ಪಾತ್ರಕ್ಕೆ ಸರಿ ಹೊಂದಿದ್ದಾರೆ. ಅಭಿನಯದಲ್ಲಿ ಇನ್ನೊಂದಿಷ್ಟು ಸುಧಾರಣೆ ಬೇಕಿದೆ. ನಾಯಕಿ ರೀಷ್ಮಾ ನಾಣಯ್ಯ ಮುದ್ದು ಮುದ್ದಾಗಿ ಕಾಣಿಸಿಕೊಂಡು, ಆನಂತರ ಕೋಮಾದ ಗಂಭೀರ ಪಾತ್ರದಲ್ಲೂ ಇಷ್ಟವಾಗ್ತಾರೆ. ಮತ್ತೊಬ್ಬ ನಾಯಕಿ ರಚಿತಾರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಧಮ್, ಎಣ್ಣೆ ಹೊಡೆಯೊ ಹುಡುಗಿಯಾಗಿ ಸಿನಿಮಾದ ಮೊದಲ ಹಾಡಿನಲ್ಲೇ ಲಿಪ್ ಲಾಕ್‌ನಲ್ಲಿ ಕಾಣಿಸಿಕೊಂಡು ಹುಬ್ಬೇರುವಂತೆ ಮಾಡಿದ್ದಾರೆ. ಇದನ್ನ ಬಿಟ್ಟರೆ ಚಿತ್ರದಲ್ಲಿ ರಚಿತಾ ರಾಮ್ ಪಾತ್ರಕ್ಕೂ ಮಹತ್ವ ಇದೆ. ಅಫ್‌ಕೋರ್ಸ್ ಅದನ್ನ ಅವರು ಸರಿಯಾಗಿ ನಿಭಾಯಿಸಿದ್ದಾರೆ. ದಿ ಗ್ರೇಟ್ ಲಾಯರ್ ಆಗಿ ಚರಣ್‌ರಾಜ್, ಯುದ್ಧಕಾಂಡ ಸಿನಿಮಾದ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಪಾತ್ರವನ್ನ ಹೋಲುವಂತೆ ಕಾಣುತ್ತಾರೆ. ಶಿಷ್ಯ ದೀಪಕ್ ಪೊಲೀಸ್ ಅಧಿಕಾರಿಯಾಗಿ ಚೇಸಿಂಗ್ ದೃಶ್ಯದಲ್ಲಿ ಗಮನ ಸೆಳೀತಾರೆ. ಆದರೆ ಪೊಲೀಸ್ ಧಿರೀಸನಲ್ಲೂ ಅವರು “ಕೇಸರಿ” ಶಾಲು ಹಾಕಿದ್ಯಾಕೆ ಎಂಬ ಪ್ರಶ್ನೆಗೆ ಚಿತ್ರದಲ್ಲಿ ಎಲ್ಲೂ ಉತ್ತರ ಇಲ್ಲ. ಕಾಮಿಡಿ ಕಿಲಾಡಿಗಳ ಮೂರ್ನಾಲ್ಕು ಜನ ಏಕ್ ಲವ್ ಯಾದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನ ತಂದೆಯಾಗಿ ಸುಪ್ರೀಮ್ ಹೀರೋ ಶಶಿಕುಮಾರ್ ಇಷ್ಟವಾಗ್ತಾರೆ. ಸುಚೇಂದ್ರ ಪ್ರಸಾದ್ ಸಾಮಾಜಿಕ ಪಿಡುಗೊಂದಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ನಾಯಕಿಯ ತಂದೆಯಾಗಿ ಕೊನೆಯಲ್ಲಿ ಗಮನ ಸೆಳೆಯುತ್ತಾರೆ. ಕಾಮಿಡಿ ಅಲ್ಲಲ್ಲಿ, ಅಷ್ಟಕ್ಕಷ್ಟೇ ಇದೆ. ಚಿತ್ರದ ನಿಜವಾದ ನಾಯಕ ಎಂದರೆ ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಹಾಡುಗಳು. ಎಲ್ಲ ಹಾಡುಗಳಿಗೂ ಗುನುಗುನಿಸುವ ಗುಣವಿದೆ.

ಒಟ್ಟಾರೆ ಸಿನಿಮಾ ಪಡ್ಡೆಗಳಿಗೆ ಇಷ್ಟವಾಗುತ್ತೆ. ಫ್ಯಾಮಿಲಿ ಆಡಿಯನ್ಸ್‌ಗೆ ಒಂಚೂರು ಕಷ್ಟವಾಗುತ್ತೆ.
=====
ಪ್ರದರ್ಶನ: ಶಾರದಾ ಚಿತ್ರಮಂದಿರ, ಕೊಪ್ಪಳ.

Rating details:
*        -ಚನ್ನಾಗಿಲ್ಲ
**      -ಪರವಾಗಿಲ್ಲ
***     -ಚನ್ನಾಗಿದೆ
****   -ತುಂಬಾ ಚನ್ನಾಗಿದೆ
*****  -ಮಿಸ್ ಮಾಡ್ದೆ ನೋಡಿ

ಉಕ್ರೇನ್-ರಷ್ಯಾ ದೇಶಗಳ ಮಧ್ಯೆ ಯುದ್ಧ: ಉಕ್ರೇನ್‌ನಲ್ಲಿ ಸಿಲುಕಿಕೊಂಡ ಗದಗ ಜಿಲ್ಲೆಯ ವಿದ್ಯಾರ್ಥಿ

ವಿಜಯಸಾಕ್ಷಿ ಸುದ್ದಿ, ಗದಗ:

ರಷ್ಯಾ ಉಕ್ರೇನ್ ದೇಶಗಳ ಮಧ್ಯೆ ಯುದ್ಧ ಶುರುವಾಗಿದ್ದು, ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಯುವಕನೋರ್ವ ಸೇರಿದಂತೆ ಅನೇಕ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಇದರಿಂದ ಪಾಲಕರು ಆತಂಕಗೊಂಡಿದ್ದಾರೆ.

ಹೌದು, ಮುಂಡರಗಿ ಪಟ್ಟಣದ ಮಹಾಗಣಪತಿ ಬಿಳಿಮಗ್ಗದ ಎಂಬ ವಿದ್ಯಾರ್ಥಿ ಉಕ್ರೇನ್ ದೇಶದ ಕೀವ್ ರಾಜಧಾನಿಯ ಚೆರ್ನಿವೀಸ್ ನಗರದಲ್ಲಿ ಸಿಲುಕಿಕೊಂಡಿದ್ದು, ತಮ್ಮ ಮಗ ಸುರಕ್ಷಿತವಾಗಿದ್ದಾನೆ ಎಂದು ಪಾಲಕರು ಹೇಳುತ್ತಿದ್ದಾರೆ. ಮಹಾಗಣಪತಿ ಬಿಳಿಮಗ್ಗದ ಚೆರ್ನಿವೀಸ್ ನಗರದ ಬೋಕೋವಿನಿಯನ್ ಸ್ಟೇಟ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.

ರಷ್ಯಾ ಉಕ್ರೇನ್ ಮಧ್ಯೆ ಯುದ್ಧ ಆರಂಭವಾಗಿರುವುದರಿಂದ ವಿಮಾನಯಾನ ರದ್ದಾಗಿದ್ದು, ಉಕ್ರೇನ್‌ನಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಬಾಲ್ಯವಿವಾಹದಿಂದ ಬಾಲಕಿಯರ ರಕ್ಷಣೆ

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಜಿಲ್ಲೆಯ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕುಗಳಲ್ಲಿ ಬಾಲ್ಯವಿವಾಹದ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಸ್ಥಳಕ್ಕೆ ತೆರಳಿ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಫೆ. 09 ರಂದು ಕುಕನೂರು ತಾಲ್ಲೂಕಿನ ಬೆಣಕಲ್ ಗ್ರಾಮದ ಬಾಲಕಿಯೊಂದಿಗೆ ಗದಗ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಯುವಕನ ಮದುವೆ ನಿಶ್ಚಯವಾಗಿತ್ತು. ಫೆ.15 ರಂದು ಯಲಬುರ್ಗಾ ತಾಲ್ಲೂಕಿನ ಯಡ್ಡೋಣಿ ಗ್ರಾಮದಲ್ಲಿ ಯುವಕ ಹಾಗೂ ಅದೇ ಗ್ರಾಮದ ಬಾಲಕಿಯೊಂದಿಗೆ ವಿವಾಹ ನಿಶ್ಚಿತವಾಗಿತ್ತು. ಫೆ.16 ರಂದು ಕೊಪ್ಪಳ ತಾಲ್ಲೂಕಿನ ಇಂದರಗಿ ಗ್ರಾಮದ ಬಾಲಕಿಯೊಂದಿಗೆ ಅದೇ ಗ್ರಾಮದ ಯುವಕನ ವಿವಾಹ ನಿಶ್ಚಯವಾಗಿತ್ತು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಿಗದಿತ ದಿನಾಂಕಗಳಂದು ರಕ್ಷಣಾ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮದುವೆ ಸಿದ್ಧತೆಗಳು ನಡೆದಿರುವುದು ಕಂಡುಬಂದಿದೆ. ನಂತರ ಬಾಲಕಿಯರ ಶಾಲಾ ದಾಖಲಾತಿಗಳನ್ನು ಪರಿಶೀಲಿಸಿದಾಗ ಬಾಲಕಿಯರಿಗೆ 18 ವರ್ಷ ಪೂರ್ಣಗೊಳ್ಳದ ಕಾರಣ ವಿವಾಹಗಳು ಬಾಲ್ಯ ವಿವಾಹವೆಂದು ಖಚಿತಗೊಂಡಿದೆ.
ಆದ್ದರಿಂದ ಬಾಲಕಿಯರ ಪೋಷಕರಿಗೆ ತಿಳುವಳಿಕೆ ನೀಡಿ ಬಾಲಕಿಯರನ್ನು ವಶಕ್ಕೆ ಪಡೆದುಕೊಂಡು ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಯಾದ ಶಿವಲೀಲಾ ವನ್ನೂರು, ಆಪ್ತ ಸಮಾಲೋಚಕರಾದ ರವಿ ಬಡಿಗೇರ, ಔಟರೀಚ್ ವರ್ಕರ್ ದೇವರಾಜ ತಿಲಗರ, ಮೇಲ್ವಿಚಾರಕಿಯರಾದ ಮಾಧವಿ ವೈದ್ಯ, ಪುಷ್ಪಾ, ಪೊಲೀಸ್ ಇಲಾಖೆಯ ಶರಣಪ್ಪ, ಮಕ್ಕಳ ಸಹಾಯವಾಣಿಯ ಶಾಂತಕುಮಾರ ಅವರ ತಂಡವು ಬಾಲಕಿಯರ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಹಸೀಲ್ದಾರ ಕಚೇರಿ ಮೇಲೆ ಎಸಿಬಿ ದಾಳಿ: ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದ ಸಿಬ್ಬಂದಿ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ಮುಂಡರಗಿ ತಹಸೀಲ್ದಾರ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪೊಲೀಸರು ಬುಧವಾರ ದಾಳಿ ನಡೆಸಿ, ಲಂಚ ಪಡೆಯುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ‌ನ್ಯಾಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಂ.ವಿ.ಮಲ್ಲಾಪೂರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಕಂದಾಯ ಇಲಾಖೆಯ ಕಂಪ್ಯೂಟರ್ ಆಪರೇಟರ್ ಎಂ.ಐ.ಉಪ್ಪಾರಟ್ಟಿ ಹಣ ತೆಗೆದುಕೊಳ್ಳುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.

ಪ್ರಕರಣದ ವಿವರ

ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದ ಕರಿಯಪ್ಪ ಹನಮಪ್ಪ ಬಂಗಿ ಎಂಬುವವರು ತಮ್ಮ ತಂದೆಯ ಜಮೀನಿನ ಆರ್‌ಟಿಸಿಯಲ್ಲಿ ಕಾಲಂ ಸಂಖ್ಯೆ 11ರಲ್ಲಿ ಓರ್ವರ ಹೆಸರು ತೆಗೆದು ಹಾಕಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ತಹಸೀಲ್ದಾರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಎಂ.ಐ.ಉಪ್ಪಾರಟ್ಟಿ ಎಂಬ ವ್ಯಕ್ತಿ 12,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಕರಿಯಪ್ಪ ಎಸಿಬಿಗೆ ದೂರು ನೀಡಿದ್ದರು.

ಈ ಪೈಕಿ ಬುಧವಾರ 5,000 ರೂ. ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿದ ಎಸಿಬಿ ಪೊಲೀಸರು ಆರೋಪಿ ಉಪ್ಪಾರಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತು ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ಎಸಿಬಿ ಸಿಪಿಐ ಆರ್ ಎಫ್ ದೇಸಾಯಿ, ಸಿಬ್ಬಂದಿಗಳಾದ ಎಮ್ ಎಮ್ ಅಯ್ಯನಗೌಡ್ರ, ವೀರೇಶ್ ಜೋಳದ, ನಾರಾಯಣ ತಾಯಣ್ಣವರ್, ವೀರಣ್ಣ ಜಾಲಿಹಾಳ, ಶರೀಫ್ ಮುಲ್ಲಾ, ಮಂಜುನಾಥ್ ಮುಳಗುಂದ, ವೀರೇಶ್ ಬಿಸನಳ್ಳಿ, ನಾರಾಯಣರಡ್ಡಿ ವೆಂಕರಡ್ಡಿ ಹಾಗೂ ತಾರಪ್ಪ ಕಾರ್ಯಾಚರಣೆಯಲ್ಲಿದ್ದರು.

error: Content is protected !!