Home Blog Page 3210

ಈ ಸಲ ಪರಿಸರಸ್ನೇಹಿ, ಪರಿಸ್ಥಿತಿಸ್ನೇಹಿ ಜಾತ್ರೆ

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2021 ಸರಳತೆಗೆ ಸಜ್ಜು

-ಪ್ರತಿ ವರ್ಷ ಗವಿಸಿದ್ಧನ ಬಳಿ ಭಕ್ತರು, ಈ ವರ್ಷ ಭಕ್ತರ ಬಳಿಯೇ ಗವಿಸಿದ್ಧೇಶ.

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಶತಮಾನಗಳಿಂದ ನಡೆದುಕೊಂಡು ಬಂದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯನ್ನು ಕೋವಿಡ್-19 ಇರುವದರಿಂದ ಸರ್ಕಾರದ ಆದೇಶ ಮೀರದಂತೆ, ಸಂಪ್ರದಾಯ ಮುರಿಯದಂತೆ ಸರಳವಾಗಿ ಆಚರಿಸಲು ನಿಶ್ಚಯಿಸಿ ಶ್ರೀಮಠದ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಿ, ಉಳಿದ ಕಾರ್ಯಕ್ರಮಗಳನ್ನು ಮಾಡದಿರಲು ನಿಶ್ಚಯಿಸಲಾಗಿದೆ.

ಶ್ರೀ ಗವಿವಠದ ಸದ್ಭಕ್ತರು, ಜಿಲ್ಲಾಡಳಿತ ಜನಪ್ರತಿನಿಧಿಗಳು ಚರ್ಚಿಸಿ ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

  1. ಪ್ರತಿ ವರ್ಷ ಜಾತ್ರೆಯ ಅಂಗವಾಗಿ ಸಾಮಾಜಿಕ ಕಳಕಳಿಯಡಿ ನಡೆಯುವ ವಿದ್ಯಾರ್ಥಿ ಜಾಥಾ ಇರುವುದಿಲ್ಲ
  2. ಗುಡ್ಡದಲ್ಲಿ ಹಾಗೂ ಕೆರೆಯ ದಡದಲ್ಲಿ ಬಹಳ ಜನ ಒಂದೆ ಕಡೆ ಸೇರುವುದರಿಂದ ತೆಪ್ಪೋತ್ಸವ ಕಾರ್ಯಕ್ರಮವೂ ಸಹ ಇರುವುದಿಲ್ಲ.
  3. ದಿನಾಂಕ 30 ಶನಿವಾರ ಜರುಗುವ ಮಹಾರಥೋತ್ಸವ ಪ್ರತಿ ವರ್ಷದಂತೆ ಲಕ್ಷಾಂತರ ಭಕ್ತ ಜನರ ಮಧ್ಯದಲ್ಲಿ ಜರುಗುವದಿಲ್ಲ. ಜಾತ್ರಾ ಮೈದಾನದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ, ಪುರಿ ಜಗನ್ನಾಥ ರಥೋತ್ಸವ, ಮೈಸೂರ ದಸರಾ ಜಂಬೂಸವಾರಿ ರೀತಿಯಲ್ಲಿ ಕೇವಲ ಸಾಂಪ್ರದಾಯಿಕವಾಗಿ ರಥೋತ್ಸವವನ್ನು ಸರಳವಾಗಿ ಆಚರಿಸಲಾಗುವುದು.
  4. ಕೈಲಾಸ ಮಂಟಪದ ವೇದಿಕೆಯಲ್ಲಿ ಜರುಗುವ ಧಾರ್ಮಿಕ ಗೋಷ್ಠಿ, ಭಕ್ತ ಹಿತ ಚಿಂತನಾ ಸಭೆ, ಅನುಭಾವಿಗಳ ಅಮೃತಗೋಷ್ಠಿ, ಸಂಗೀತ, ಸಾಹಿತ್ಯ, ಹಾಸ್ಯ, ಸಾಧಕರ ಸನ್ಮಾನ ಈ ಯಾವ ಕಾರ್ಯಕ್ರಮಗಳೂ ನಡೆಯುವುದಿಲ್ಲ.
  5. ದಿನಾಂಕ 31 ರವಿವಾರದಂದು ಶರಣರ ದೀರ್ಘದಂಡ ನಮಸ್ಕಾರ ಇರುತ್ತದೆ. ಆದರೆ ಭಕ್ತರಿಗೆ ದೀರ್ಘದಂಡ ನಮಸ್ಕಾರ ಹಾಕಲು ಅನುಮತಿ ಇರುವುದಿಲ್ಲ. ಅವರ ಹಿಂದೆ ದೀರ್ಘದಂಡ ನಮಸ್ಕಾರ ಹಾಕದಂತೆ ಭಕ್ತರಲ್ಲಿ ಕೇಳಿಕೊಳ್ಳುತ್ತೇವೆ. ಶರಣರು ಧೀರ್ಘದಂಡ ನಮಸ್ಕಾರ ಹಾಕುವ ದಿನ ಹೊರತು ಪಡಿಸಿ ತಮಗೆ ಅನುಕೂಲವಾದ ಸಮಯ ಅಥವಾ ದಿನದಂದು ತಮ್ಮ ಹರಕೆ ಅಥವಾ ಸಂಕಲ್ಪಗಳನ್ನು ಪೂರೈಸಿಸಬಹುದು.
  6. ದಿನಾಂಕ 31 ರಂದು ಸಿದ್ಧೇಶ್ವರ ಮೂರ್ತಿಯ ಮೆರವಣಿಗೆ ನಂತರ ನಡೆಯುವ ಮದ್ದು ಸುಡುವ ಕಾರ್ಯಕ್ರಮ ನಡೆಯುವುದಿಲ್ಲ.
  7. ಪ್ರತಿ ವರ್ಷದಂತೆ 15-20 ದಿವಸ ನಡೆಯುವ ಮಹಾದಾಸೋಹ ಶ್ರೀಮಠಕ್ಕೆ ಬರುವ ಭಕ್ತಾಧಿಗಳಿಗೆ ಅನಾನುಕೂಲವಾಗದಿರಲೆಂದು ಈ ವರ್ಷ ಕೇವಲ ಜನೇವರಿ 30, 31 ಮತ್ತು ಫೆಬ್ರುವರಿ 1ರವರೆಗೆ ಸೀಮಿತಗೊಳಿಸಲಾಗಿದೆ. ಭಕ್ತರು ಯಾರು ರೊಟ್ಟಿಗಳನ್ನು ಹಾಗೂ ಸಿಹಿ ಪದಾರ್ಥಗಳನ್ನು ತರಬಾರದು, ಅವುಗಳನ್ನು ಮಹಾದಾಸೋಹದಲ್ಲಿ ಸ್ವೀಕರಿಸುವುದಿಲ್ಲ.
  8. ದಾಸೋಹದಲ್ಲಿ ಕೇವಲ ದವಸ-ಧಾನ್ಯ, ಕಾಯಿಪಲ್ಲೆಯನ್ನು ಮಾತ್ರ ಸ್ವೀಕರಿಸಲಾಗುವುದು.
  9. ಜಾತ್ರಾ ಮಹೋತ್ಸವದಲ್ಲಿ ಅಂಗಡಿಗಳನ್ನು, ಅಮ್ಯುಜ್‍ಮೆಂಟ್ ಪಾರ್ಕ, ಮಿಠಾಯಿ, ಹೋಟಲ್, ಸ್ಟೇಷನರಿ ಅಂಗಡಿಗಳನ್ನಗೊಂಡಂತೆ ಸಂಪೂರ್ಣವಾಗಿ ಆವರಣದಲ್ಲಿ ಜಾತ್ರಾ ಅಂಗಡಿಗಳು ಇರುವುದಿಲ್ಲ.
  10. ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಪಾನಿಪುರಿ, ಗೋಬಿ, ಕಡ್ಲೆ, ಕಬ್ಬಿನಹಾಲು ಐಸ್‍ಕ್ರೀಮ್, ಇತರೆ ತಿನಿಸಿನ ಮಾರಾಟದ ಅಂಗಡಿಗಳನ್ನು ನಿಷೇಧಿಸಿದೆ.
  11. ಕೃಷಿ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕ್ರೀಡಾಕೂಟ, ನಾಟಕ, ವಿವಿಧ ಸಾಂಸ್ಕೃತಿಕ, ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಿದೆ.
  12. ಪ್ರತಿ ವರ್ಷದಂತೆ ಶ್ರೀ ಗವಿಸಿದ್ಧೇಶ್ವರ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಜರುಗುವ ರಕ್ತದಾನ ಶಿಬಿರವನ್ನು ನಡೆಸಲಾಗುತ್ತದೆ.
  13. ಪ್ರತಿ ವರ್ಷ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತಿತ್ತು ಆದರೆ ಈ ವರ್ಷ ರಥೋತ್ಸವಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ.
  14. ಶ್ರೀ ಗವಿಸಿದ್ಧೇಶ್ವರ ಗದ್ದುಗೆ ದರ್ಶನಕ್ಕೆ ಅವಕಾಶವಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತರು ದರ್ಶನ ಪಡೆಯಬಹುದು. ಆದರೆ ಎಲ್ಲಿ ಗುಂಪುಗೂಡಿ ಕೂಡುವಂತಿಲ್ಲ. ಶ್ರೀಮಠದ ಸಮಸ್ತ ಸದ್ಭಕ್ತರಲ್ಲಿ ಅರಿಕೆ ಮಾಡಿಕೊಳ್ಳುವದೇನೆಂದರೆ ಶ್ರೀಮಠ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಭಕ್ತರು ಸೇರಿ ತೆಗೆದುಕೊಂಡ ನಿರ್ಣಯವನ್ನು ಪ್ರೀತಿಯಿಂದ ಒಪ್ಪಿಕೊಂಡು ಈ ವರ್ಷ ಸರಕಾರದ ಆದೇಶ ಪಾಲಿಸುತ್ತ ಗವಿಸಿದ್ಧೇಶನ ಜಾತ್ರೆಯನ್ನು ಸರಳವಾಗಿ ಆಚರಿಸೋಣ ತಮಗೆಲ್ಲಾ ಗವಿಸಿದ್ಧೇಶನ ಕೃಪೆ ಸದಾ ಇರಲೆಂದು ಪ್ರಾರ್ಥಿಸುತ್ತೇವೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.

ಶ್ರೀ ಗವಿಸಿದ್ಧೇಶ್ವರ ಮಹಾ ರಥೋತ್ಸವದ ದೃಶ್ಯವನ್ನು ಸಾಮಾಜಿಕ, ಜಾಲತಾಣದಲ್ಲಿ ಹಾಗೂ ಸ್ಥಳೀಯ ಚಾನಲ್‍ಗಳಲ್ಲಿ ಪ್ರಸಾರ ಮಾಡಲಾಗುವದು.
ಭಕ್ತರು ಶ್ರೀಮಠದ ಆವರಣಕ್ಕೆ ಬರದೆ ತಾವಿರುವ ಸ್ಥಳದಲ್ಲಿಯೇ ರಥ ದರ್ಶನ ಮಾಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೆವೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.

ನಾಡಿನ ಭಕ್ತಗಣಕ್ಕೆ ಶ್ರೀ ಗವಿಸಿದ್ಧೇಶನ ಜಾತ್ರೆಯ ಬಗ್ಗೆ ಅತ್ಯಂತ ಕುತೂಹಲ. ಜಾತ್ರೆ ಹೇಗೆ ನಡೆಯುತ್ತದೆ? ಅಜ್ಜನವರ ನಿರ್ಣಯವೇನು? ಜಾತ್ರೆ ನಡೆಯುವುದೋ ಇಲ್ಲವೋ? ಹೀಗೆ ಹತ್ತು ಹಲವು ಸಂಗತಿಗಳು. ಜಾತ್ರೆ ನಡೆಸುತ್ತೇನೆ ಎನ್ನಲು, ಜಾತ್ರೆ ನಡೆಸುವುದಿಲ್ಲವೆನ್ನಲು ನಾನಾರು? ಒಂದೆಡೆ ದೈವಿಶಕ್ತಿ ಇನ್ನೊಂದೆಡೆ ಭಕ್ತರ ಭಕ್ತಿಯ ಶಕ್ತಿ. ಈ ಎರಡೂ ದಿವ್ಯ ಶಕ್ತಿಯ ಸಂಗಮವನ್ನು ನಾನು ಕೂಡಿಸುವೆನೆಂದಾಗಲಿ ಅಥವಾ ನಿಲ್ಲಿಸುವೆನೆಂದಾಗಲಿ ಹೇಳಿದರೆ ಅಹಂಕಾರದ ಮಾತಾದೀತು. ಬಸವಣ್ಣನವರು ಹೇಳುವಂತೆ “ಆನು ದೇವಾ ಹೊರಗಣವನು ಕೂಡಲ ಸಂಗಮದೇವಾ, ನಿಮ್ಮ ನಾಮವಿಡಿದ ಅನಾಮಿಕ ನಾನು”
ಇಂದು ದೈವೇಚ್ಛೆ, ಭಕ್ತರ ನಿರೀಕ್ಷೆ ಇವರೆಡರ ಪರೀಕ್ಷೆಯ ಸಂಧಿಕಾಲ. ಜಾತ್ರೆಯನ್ನೂ ನಡೆಸಬೇಕು, ಸರ್ಕಾರದ ಆದೇಶವನ್ನೂ ಪಾಲಿಸಬೇಕು. ಕಾನೂನನ್ನು ಮೀರಿರಬಾರದು, ಸಂಪ್ರದಾಯವನ್ನು ಮುರಿದಿರಬಾರದು. ಪರಿಸರ ಸ್ನೇಹಿ ಜಾತ್ರೆಯ ಜೊತೆಗೆ, ಪರಿಸ್ಥಿತಿ ಸ್ನೇಹಿ ಜಾತ್ರೆಯನ್ನು ಮಾಡುವ ಮಧ್ಯಮ ಮಾರ್ಗವನ್ನು ಅನುಸರಿಸಬೇಕಾಗಿದೆ. ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮ ಒಳಿತಿಗಾಗಿ ಎನ್ನುವ ಉನ್ನತ ಭಾವದೊಂದಿಗೆ ಈ ವರ್ಷದ ಜಾತ್ರೆ ಸರಳ ಮತ್ತು ವೈಶಿಷ್ಟ್ಯಪೂರ್ಣವಾಗಿ ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಸೀಮಿತಗೊಳಿಸೋಣ.
ಇಷ್ಟು ವರ್ಷ ಮಠದ ಅಂಗಳದಲ್ಲಿ ಗವಿಸಿದ್ಧೇಶ್ವರನ ರಥ ಎಳೆಯುತ್ತಿತ್ತು . ಭಕ್ತರು ಅದನ್ನು ನೋಡಲು ಬರುತ್ತಿದ್ದರು. ಈ ವರ್ಷ ನಿಮ್ಮ ಹೃದಯಂಗಳದಲ್ಲಿ ಆತನ ದಿವ್ಯ ಸ್ಮರಣೆಯ ರಥ ಎಳೆಯಲಿ ಅದನ್ನು ನೋಡಲು ಗವಿಸಿದ್ಧೇಶ್ವರನೇ ನಿಮ್ಮ ಮನೆಗೆ ಬರುತ್ತಾನೆಂದು ನನ್ನ ಭಾವನೆ.

-ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ, ಸಂಸ್ಥಾನ ಗವಿಮಠ, ಕೊಪ್ಪಳ.

ಕೊಪ್ಪಳಕ್ಕೂ ಬಂತು ಕೊರೊನಾ ವ್ಯಾಕ್ಸಿನ್

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೋವಿಡ್‍ ಸೋಂಕು ನಿವಾರಿಸುವ ಸಂಜೀವಿನಿ ಗುರುವಾರ ಸಂಜೆ 7 ಗಂಟೆಗೆ ಕೊಪ್ಪಳ ನಗರದ ಹಳೆ ಜಿಲ್ಲಾಸ್ಪತ್ರೆಗೆ ಬಾಗಲಕೋಟೆಯಿಂದ ಬಂದು ತಲುಪಿದೆ.

6,500 ಡೋಸ್ ಹಾಗೂ 37,800 ಸಿರೇಂಜ್ ಹೊತ್ತ ವ್ಯಾಕ್ಸಿನ್ ವ್ಯಾನ್ ಈಗಾಗಲೇ ಬಂದು ತಲುಪಿದೆ. ವ್ಯಾಕ್ಸಿನ್‌ನ್ನು ಆರೋಗ್ಯ ಅಧಿಕಾರಿಗಳು ಸಿಬ್ಬಂದಿ ಸ್ಟೋರ್ ರೂಮ್‌ನಲ್ಲಿ ಸಂಗ್ರಹಿಸಿದ್ರು.

ಆರ್ ಸಿಎಚ್ ಅಧಿಕಾರಿ ಡಾ. ಜಂಬಯ್ಯ ಈ ಸಂದರ್ಭದಲ್ಲಿ ಮಾತನಾಡಿ, ಜನವರಿ 16 ರಂದು 4 ಸೆಂಟರ್‌ನಲ್ಲಿ ಪ್ರಯೋಗ ಮಾಡಲಾಗುವುದು. ನಂತರ ಇನ್ನು 10 ಸೆಂಟರ್‌ಗಳನ್ನು ಗುರುತಿಸಿ ವ್ಯಾಕ್ಸಿನ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಅಜ್ಜನ ತೋಟದಲ್ಲಿ ಜೇನು ಜಾತ್ರೆ! ಜೇನು ಸಾಕಣೆಯತ್ತ, ರೈತರ ಚಿತ್ತ

0

ಜೇನು ಬಿಡಿಸಿ ಸಂಕ್ರಾಂತಿ ಆಚರಣೆ

ವರ್ಷಕ್ಕೆ ಜಿಲ್ಲೆಯಿಂದ ಸಂಗ್ರಹವಾಗ್ತಿದೆ ಸುಮಾರು ಕ್ವಿಂಟಲ್ ಜೇನು

ಬಸವರಾಜ ಕರುಗಲ್
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಪುಟ್ಟ ಮಕ್ಕಳ ಕೈಯಲ್ಲಿ ಜೇನು, ಮಂದಹಾಸ ಬೀರುತ್ತಿರುವ ಮಕ್ಕಳು ಜೊತೆಗೆ ಖುಷಿ ಪಡುತ್ತಿರುವ ಪಾಲಕರು, ಜೇನು ಸಾಕಾಣಿಕೆದಾರರು ಗುರುವಾರ ಶ್ರೀ ಗವಿಸಿದ್ಧೇಶ್ವರ ಮಠದ ತೋಟದಲ್ಲಿ ಕಂಡು ಬಂದರು.

ಮಕ್ಕಳು ಕೈಯಲ್ಲಿ ಜೇನು ಪೆಟ್ಟಿಗೆ ಹಿಡಿದಿರುವುದನ್ನು ಕಂಡು ಅಚ್ಚರಿಯಾಯಿತು. ಸಾಕಿರುವ ಜೇನು ಯಾರಿಗೂ, ಏನು ಮಾಡಲ್ಲ ಎಂದು ಜೇನು ಸಾಕಾಣಿಕೆ ಮಾಡುವವರು ತಿಳಿಸಿದರು.

ಕೋವಿಡ್ 19 ಹಿನ್ನೆಲೆ ಪ್ರತಿ ವರ್ಷದಂತೆ ಈ ಬಾರಿಯೂ ಗವಿಮಠ ಜಾತ್ರೆ ಅದ್ದೂರಿಯಾಗಿ ನಡೆಯೋದು ಅನುಮಾನವೇ. ಆದ್ರೆ, ಜಾತ್ರೆಗೂ ಮೊದಲೇ ಶ್ರೀಮಠದ ಕೈ ತೋಟದಲ್ಲಿ ಸಂಕ್ರಾಂತಿ ಪ್ರಯುಕ್ತ ಜೇನು ಜಾತ್ರೆ ನಡೆಯಿತು.

ಸಂಕ್ರಾಂತಿ ಹಿನ್ನೆಲೆಯಲ್ಲಿ ಶ್ರೀಮಠದ ಕೈ ತೋಟದಲ್ಲಿನ ಜೇನು ಪೆಟ್ಟಿಗೆಯಿಂದ ಜೇನು ಬಿಡಿಸುವ ಕಾರ್ಯಕ್ರಮ ನಡೆಯಿತು. ‌ತೋಟದಲ್ಲಿನ 14 ಜೇನು ಪೆಟ್ಟಿಗೆಯಿಂದ ಸುಮಾರು 25 ಕೆಜಿ ಜೇನು ಸಂಗ್ರಹಿಸಲಾಯಿತು. ಹೆಚ್ಚು ಬಿಸಿಲಿರುವ ಹೈದ್ರಾಬಾದ್- ಕರ್ನಾಟಕ ಭಾಗದಲ್ಲೂ ಜೇನು ಕೃಷಿಗೆ ಹೆಚ್ಚು ಅವಕಾಶ ಇವೆ ಎಂಬುದನ್ನು ಈ ಭಾಗದ‌ ರೈತರಿಗೆ ತೋರಿಸಿ ಕೊಡುವ ಉದ್ದೇಶದಿಂದ ಶ್ರೀಮಠ ಜೇನು ಸಾಕಣೆಗೆ ಮುಂದಾಗಿದೆ.

ಹೆಚ್ಚು ಬಿಸಿಲು ದಾಖಲಾಗುವ ಕೊಪ್ಪಳ ಜಿಲ್ಲೆಯಲ್ಲಿಯೂ ಸದ್ಯ 80ಕ್ಕೂ ಹೆಚ್ಚು ರೈತರು ಜೇನು ಕೃಷಿ ಮಾಡುತ್ತಿದ್ದಾರೆ. ಈ ಪೈಕಿ ಸುಮಾರು 40 ಕೃಷಿಕರು‌ ಜೇನು ಬಿಡಿಸಿ, ಮಾರಾಟ ಮಾಡುತ್ತಿರೋದು ವಿಶೇಷ.‌ ಒಬ್ಬ ರೈತ ಪ್ರತಿ‌ ವರ್ಷಕ್ಕೆ ಒಂದು ಪೆಟ್ಟಿಗೆಯಿಂದ ಕನಿಷ್ಠ 5 ರಿಂದ 8 ಕೆಜಿ ಜೇನು ಬಿಡಿಸುತ್ತಿದ್ದಾರೆ. ಎಂದರೆ ಪ್ರತಿ ವರ್ಷ ಕೊಪ್ಪಳ ಜಿಲ್ಲೆಯಿಂದ 1 ಕ್ವಿಂಟಾಲ್ ಗೂ ಹೆಚ್ಚು ಜೇನು ಸಂಗ್ರಹ ಆಗ್ತಿದೆ. ಇನ್ನು ಜೇನು ಸಾಕಣೆಯಿಂದ ಪರಾಗ ಸ್ಪರ್ಶ ಹೆಚ್ಚಾಗಿ ರೈತರು ತಮ್ಮ ಬೆಳೆಯ ಇಳುವರಿ ಹೆಚ್ಚಿಸಬಹುದು. ಈ ಹಿನ್ನೆಲೆಯಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ರೈತರು ಜೇನು ಕೃಷಿ ಕಡೆಗೆ ಬರುವಂತೆ ಪ್ರೇರಣೆ‌ ನೀಡಲು ಶ್ರೀಮಠದ ಕೈ ತೋಟದಲ್ಲೇ ಜೇನು ಸಾಕಣೆ ಮಾಡಿದ್ದಾರೆ.

ಕಳೆದ‌ 3 ತಿಂಗಳಿನಿಂದ ಗವಿಮಠದ‌ಲ್ಲಿ ಜೇನು ಸಾಕಣೆ‌ ಆರಂಭಿಸಲಾಗಿದೆ. ಇಂದು ಸಂಕ್ರಾಂತಿ ಹಿನ್ನೆಲೆ ಮೊದಲ ಬಾರಿಗೆ ಜೇನು ಬಿಡಿಸಿದ್ದು, ಗವಿಮಠ ಜಾತ್ರೆಗೂ ಮೊದಲೇ ಜೇನು ಜಾತ್ರೆ ನಡೆಯಿತು ಎನ್ನಬಹುದು.

ಕೊಪ್ಪಳ ಜಿಲ್ಲೆಯ ವಾತಾವರಣ ಜೇನು ಸಾಕಾಣಿಕೆಗೆ ಹೇಳಿ ಮಾಡಿಸಿದಂತಿದೆ. ಅಂತೆಯೇ ಗವಿಮಠದ ಶ್ರೀಗಳು ಜೇನು ಸಾಕಾಣಿಕೆದಾರರಿಗೆ ಪ್ರೇರಣೆ ನೀಡಲು ಮಠದ ತೋಟದಲ್ಲೇ ಜೇನು ಕೃಷಿ ಆರಂಭಿಸುವ ಮೂಲಕ ಸ್ಫೂರ್ತಿ ತುಂಬಿದ್ದಾರೆ. ಮೂರು ತಿಂಗಳ ಹಿಂದೆ ಇಟ್ಟ ಜೇನು ಪೆಟ್ಟಿಗೆಯಿಂದ ಸುಮಾರು 25 ಕೆಜಿಯಷ್ಟು ಜೇನು ಬಿಡಿಸಲಾಯಿತು.
-ಬದ್ರಿಪ್ರಸಾದ, ಕೃಷಿ ವಿಜ್ಞಾನಿ, ಕೆವಿಕೆ, ಕೊಪ್ಪಳ.

ಸಂಕ್ರಾಂತಿ ಪ್ರಯುಕ್ತ ಗುರುವಾರ ಜೇನು ಬಿಡಿಸಲು ಪೂಜ್ಯರು ಅಪ್ಪಣೆ ನೀಡಿದ್ದರಿಂದ ಮಠದ ತೋಟದಲ್ಲಿ ಜೇನು ಬಿಡಿಸುವ ಕಾರ್ಯ ನಡೆಯಿತು. ಒಂದರ್ಥದಲ್ಲಿ ಇದು ಅಜ್ಜನ ಜಾತ್ರೆಗೂ ಮುನ್ನ ನಡೆದ ಜೇನು ಜಾತ್ರೆ ಎಂಬಂತಿತ್ತು.
-ನಿಂಗಪ್ಪ, ಜೇನು ಕೃಷಿಕ.

ಬೈಕ್‌ನಲ್ಲಿ ಸಿಟಿ ರೌಂಡ್ ಹಾಕಿದ ಎಸ್ಪಿ!.. ಯಾಕ್ ಗೊತ್ತಾ?

0

ವಿಜಯಸಾಕ್ಷಿ ವಿಶೇಷ, ಕೊಪ್ಪಳ

ಎಸ್ಪಿ ಅಂದ್ರೆ ಪೊಲೀಸ್ ವಾಹನದಲ್ಲಿ ಓಡಾಡ್ತಾರೆ‌. ಆದರೆ ಕೊಪ್ಪಳ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಗುರುವಾರ ಬೈಕ್‌ನಲ್ಲೇ ಸಿಟಿ ರೌಂಡ್ ಹಾಕಿದ್ರು.

ವಿಷಯ ಏನಂದ್ರೆ ಜನವರಿ 15ರಿಂದ ಕೊಪ್ಪಳ ಜಿಲ್ಲೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೇಟ್ ಹಾಗೂ ಕಾರು ಚಾಲಕರಿಗೆ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಬೈಕ್ ಜಾಥಾ ನಡೆಸಲಾಯಿತು. ಜಾಥಾದಲ್ಲಿ ಸ್ವತಃ ಎಸ್ಪಿಯವರೇ ಹೆಲ್ಮೇಟ್ ಧರಿಸಿ ಕೊಪ್ಪಳ ನಗರದಲ್ಲಿ ಜಾಥಾ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರು ಬೈಕ್ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. ಈ ನಿಯಮ ಸಾರ್ವಜನಿಕರನ್ನು ಪೀಡಿಸುವುದಕ್ಕಾಗಿ ಅಲ್ಲ, ಬದಲಾಗಿ ನಿಮ್ಮ ಜೀವ ಉಳಿಸುವುದಕ್ಕಾಗಿ ಕಳೆದ ವರ್ಷ ಜಿಲ್ಲೆಯಲ್ಲಿ ನಡೆದ ಬೈಕ್ ಅಪಘಾತಗಳಲ್ಲಿ ಸಂಭವಿಸಿದ ಸಾವು-ನೋವುಗಳಲ್ಲಿ ಹೆಲ್ಮೇಟ್ ಧರಿಸದಿರುವುದೇ ಪ್ರಮುಖ ಕಾರಣ ಎಂಬುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಹಾಗಾಗಿ ಈ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು, ನಿಯಮಗಳನ್ನು ಪಾಲಿಸಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ವೆಂಕಟಪ್ಪ ನಾಯಕ್, ನಗರ ಠಾಣೆಯ ಪಿಐ ಮಾರುತಿ ಗುಳ್ಳಾರಿ, ಕೊಪ್ಪಳ ಗ್ರಾಮೀಣ ವೃತ್ತದ ಸಿಪಿಐ ವಿಶ್ವನಾಥ ಹಿರೇಗೌಡರ್ ಇತರರು ಇದ್ದರು.

2A ಮೀಸಲಾತಿ ನೀಡುವಂತೆ ಆಗ್ರಹಿಸಿ ಪಾದಯಾತ್ರೆ: ಕೂಡಲ ಸಂಗಮಕ್ಕೆ ನೂರಾರು ಜನರು

0

ವಿಜಯಸಾಕ್ಷಿ ಸುದ್ದಿ, ಗದಗ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ
ಕೂಡಲ ಸಂಗಮದಿಂದ ಬೆಂಗಳೂರು ವಿಧಾನಸೌಧದವರಿಗೆ ಪಾದಯಾತ್ರೆ ಹಿನ್ನಲೆಯಲ್ಲಿ ನಗರದ ತೋಂಟದಾರ್ಯ ಮಠದದಿಂದ ಕೂಡಲ ಸಂಗಮಕ್ಕೆ ಪಂಚಮಸಾಲಿ ಸಮಾಜದ ನೂರಾರು ಜನರು ಪ್ರಯಾಣ ಬೆಳೆಸಿದರು.

ಜಿಲ್ಲೆಯಿಂದ ಪಂಚಮಸಾಲಿ ಸಮಾಜದ ಮಹಿಳೆಯರು, ಯುವಕರು, ಹಿರಿಯರು ಪಾದಾಯಾತ್ರೆಯಲ್ಲಿ ಭಾಗವಹಿಸಿಸಲು
ಕ್ರಷರ್, ಮಿನಿ ಬಸ್ ಮೂಲಕ ಕೂಡಲ ಸಂಗಮಕ್ಕೆ ತೆರಳಿದರು.

ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.

ಅಸಮಾಧಾನ ಏನೇ ಇದ್ದರೂ ಪಕ್ಷದ ಒಳಗೇ ಮಾತನಾಡಿ: ಯತ್ನಾಳ್ ಗೆ ಸಿಎಂ ಪರೋಕ್ಷ ಎಚ್ಚರಿಕೆ

ವಿಜಯಸಾಕ್ಷಿ ಸುದ್ದಿ, ದಾವಣಗೆರೆ: ಪದೇ ಪದೇ ಪಕ್ಷಕ್ಕೆ ಮುಜುಗರವಾಗುವ ರೀತಿಯ ಹೇಳಿಕೆ ನೀಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಿಎಂ ಬಿಎಸ್ವೈ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಿಎಸ್ವೈ, ಹತ್ತರಿಂದ ಹನ್ನೆರಡು ಜನ ಮಂತ್ರಿ ಮಾಡಲಿಲ್ಲ ಎಂದು ಬೇಸರವಾಗಿದ್ದಾರೆ.
ನನ್ನ ಇತಿಮಿತಿಯಲ್ಲಿ ನಾನು ಮಾಡಿದ್ದೇನೆ. ಕೇಂದ್ರದ ನಾಯಕರ ಆಶೀರ್ವಾದವೂ ಇದಕ್ಕಿದೆ. ಇನ್ನು ಮುಂದೆ ರಾಜ್ಯದ ಅಭಿವೃದ್ಧಿಗೆ ಗಮನ ಹರಿಸುವೆ, ಮಂತ್ರಿ ಸ್ಥಾನ ಸಿಗದ ಹಿನ್ನೆಲೆ ಇಲ್ಲ ಸಲ್ಲದ ಹೇಳಿಕೆ ನೀಡುವುದನ್ನು ಬಿಟ್ಟು ನನ್ನ ಜೊತೆ ಚರ್ಚೆ ಮಾಡಲಿ. ಸಚಿವ ಸ್ಥಾನ ವಂಚಿತರು ಹೇಳಿಕೆ ನೀಡಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಇದು ಬೇಡ ಎಂದು ಯತ್ನಾಳ್ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಮಾರ್ಚ್ ನಲ್ಲಿ ಬಜೆಟ್ ಇದೆ. ಬಜೆಟ್ ರೈತರ ಪರವಾಗಿರಲಿದೆ. ನಮಗೆ ಕೇಂದ್ರದ ನಾಯಕರ ಆಶೀರ್ವಾದ ಇದೆ ಎಂದ ಅವರು, ಸಿಡಿ ವಿಚಾರವಾಗಿ ಮಾತನಾಡಿ, ಯಾರಿಗೂ ಹೆದರುವ ಅಗತ್ಯವಿಲ್ಲ ಎಂದರು.

ಐಆರ್‌ಬಿ ಕೇಂದ್ರಕ್ಕೆ ಭೇಟಿ ನೀಡಿ ಸಸಿ ನೆಟ್ಟ ಸಚಿವರು

ಪ್ರವಾಸಿ ತಾಣವನ್ನಾಗಿಸಲು ಶೆಟ್ಟರ್ ಭರವಸೆ

-ಅಂಗನವಾಡಿ ಕೇಂದ್ರ ಆರಂಭಿಸಲು ಸಚಿವೆ ಜೊಲ್ಲೆ ಒಲವು

-ಮೀಸಲು ಪಡೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಇಂಡಿಯನ್ ರಿಜರ್ಸ್ ಬಟಾಲಿಯನ್‌ಗೆ (ಐಆರ್‌ಬಿ) ಬುಧವಾರ ಸಚಿವರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ ಹಾಗೂ ಪ್ರಭು ಚಹ್ವಾಣ್ ಭೇಟಿ ನೀಡಿ, ಅಲ್ಲಿನ ಪ್ರಗತಿ ಕಾರ್ಯಗಳ ಕುರಿತು ಮೆಚ್ಚುಗೆ ಸೂಚಿಸಿದರು.

ಹೊಸಪೇಟೆಯಿಂದ ಕೊಪ್ಪಳಕ್ಕೆ ಹೋಗುವಾಗ ಸಂಸದ ಕರಡಿ ಸಂಗಣ್ಣ ಅವರ ಒತ್ತಾಸೆಗೆ ಮಣಿದು ಸಚಿವರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ, ಪ್ರಭು ಚವಾಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಡಾ.ಸಂದೀಪ್, ನೇಮಿರಾಜ್ ನಾಯಕ್ ಸೇರಿದಂತೆ ಇತರ ಮುಖಂಡರು ಐ ಆರ್ ಬಿ ಕೇಂದ್ರ‌ ಮುನಿರಾಬಾದ್ ಗೆ ಭೇಟಿ ನೀಡಿದರು.

ಭೇಟಿ ನೀಡಿದ ಸವಿ ನೆನಪಿಗಾಗಿ ಐಆರ್‌ಬಿ ಸಿಬ್ಬಂದಿ ಸಸಿ ನೆಡುವಂತೆ ಮನವಿ ಮಾಡಿದ್ದರಿಂದ ಆಗಮಿಸಿದ ಗಣ್ಯರು ಐಆರ್‌ಬಿ ಆವರಣದಲ್ಲಿ ಸಸಿ ನೆಟ್ಟರು.

ಬಟಾಲಿಯನ್‌ನ ಆವರಣದೊಳಗೆ ನಡೆದ ಹಲವು ಅಭಿವೃದ್ಧಿ ಕೆಲಸಗಳ ಸ್ಥಳಗಳಿಗೆ ಭೇಟಿ ನೀಡಿ ಇದೊಂದು ಮಾದರಿ ಬಟಾಲಿಯನ್ ಎಂದು ಶೆಟ್ಟರ್ ಸೇರಿದಂತೆ ವಿವಿಧ ಗಣ್ಯರು ಶ್ಲಾಘಿಸಿದರು.

ಈ ವೇಳೆ ಮಾತನಾಡಿದ ಐಆರ್‌ಬಿಯ ಸಹಾಯಕ ಕಮಾಂಡೆಂಟ್ ಸತೀಶ್.ಇ. ಅವರು, ಹಲವು ದಾನಿಗಳ ಸಹಾಯ, ಸಹಕಾರದಿಂದ ಬಟಾಲಿಯನ್‌ನ ಸಿಬ್ಬಂದಿಯ ದೈಹಿಕ ಶ್ರಮದಿಂದ 5 ಎಕರೆ ಜಾಗದಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಐಆರ್‌ಬಿ ಯಲ್ಲಿ ರಸ್ತೆ ಸಮಸ್ಯೆ ಇದ್ದು, ಸರಕಾರದ ಸಹಕಾರ ಸಿಕ್ಕರೆ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.

ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಈ ರೀತಿ ಪೊಲೀಸರೇ ಸೇರಿ ಕೆರೆ ನಿರ್ಮಿಸಿರುವುದು ರಾಜ್ಯದಲ್ಲೇ ಮೊದಲು. ಸುತ್ತ ಮುತ್ತ ಗಿಡ-ಮರ ಬೆಳೆಸಿ, ಇಲ್ಲಿನ ಸಿಬ್ಬಂದಿಯೇ ವಿನ್ಯಾಸ ಮಾಡಿದ ಅಶೋಕ ಸ್ತಂಭ ಮನಮೋಹಕ. ರಸ್ತೆ ಅಭಿವೃದ್ಧಿ ಕುರಿತು ಅಂದಾಜು ಪಟ್ಟಿಸಮೇತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಐಆರ್‌ಬಿ ಕೇಂದ್ರದಲ್ಲಿ ಅಂಗನವಾಡಿ ಕೇಂದ್ರ ಸ್ಥಾಪಿಸುವ ಅಗತ್ಯವಿದೆ. ಈ‌ ನಿಟ್ಟಿನಲ್ಲಿ ಶೀಘ್ರದಲ್ಲೇ ಕಾರ್ಯ ಆರಂಭಿಸಲಾಗುವುದು ಎಂದರು.

ಕಮಾಂಡೆಂಟ್ ಬಾ.ರಾಮಕೃಷ್ಣ ಸ್ವಾಗತಿಸಿದರು. ಡಿ ಜಿ ಮತ್ತು ಐ.ಜಿಯವರು ಈ ಕೇಂದ್ರಕ್ಕೆ ಭೇಟಿ ನೀಡಿದಾಗ ಭಾರತದಲ್ಲಿರುವ ರಿಸರ್ವ್ ಕೇಂದ್ರಗಳಲ್ಲೇ ಒಂದು ಮಾದರಿ ಎಂದು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದನ್ನು ಐಆರ್‌ಬಿ ಸಿಬ್ಬಂದಿ ಸ್ಮರಿಸಿದರು.

ಯಡಿಯೂರಪ್ಪ ಕುಟುಂಬಕ್ಕೆ ಬಿಡಿಎ ಹಗರಣದಲ್ಲಿ 7 ಕೋಟಿ 40 ಲಕ್ಷ ಹಣ ಹೋಗಿದೆ: ಸಿದ್ರಾಮಯ್ಯ ಆರೋಪ

ವಿಜಯಸಾಕ್ಷಿ ಸುದ್ದಿ, ಮೈಸೂರು

ಎಲ್ಲರಿಗೂ ಹಾಗೆ ಬ್ಲಾಕ್ ಮೇಲ್ ಮಾಡೋಕೆ ಆಗಲ್ಲ. ವೀಕ್ ಚೀಫ್ ಮಿನಿಸ್ಟರ್ ಗೆ ಮಾತ್ರ ಬ್ಲಾಕ್ ಮೇಲ್ ಮಾಡ್ತಾರೆ. ಸಿಡಿ ಬ್ಲಾಕ್ ಮೇಲ್ ಬಗ್ಗೆ ಸಿಎಂ ಕ್ರಿಮಿನಲ್ ಕೇಸ್ ದಾಖಲು ಮಾಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಮಾತನಾಡಿರುವ ಅವರು, ನಾವೇನೂ ಆರೋಪ ಮಾಡ್ತಿಲ್ಲ. ಅವರ ಪಕ್ಷದವರೇ ಆರೋಪ ಮಾಡಿರೋದು. ಅದರಲ್ಲಿ ಸತ್ಯ ಇದೆ ಅಲ್ವಾ. ನಾವ್ ಮಾಡಿದ್ರೆ ವಿರೋಧ ಪಕ್ಷದವರು ಅಂತಾರೆ. ಹಾಗಾಗಿ ಅವರು ಬ್ಲಾಕ್ ಮೇಲ್ ಗೆ ಒಳಗಾಗಿದ್ದಾರೋ ಅಥವಾ ಒತ್ತಡಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ಅದಕ್ಕೆಲ್ಲಾ ತನಿಖೆ ಮಾಡಿ ಅಂತ ಹೇಳಲ್ಲ, ಕ್ರಿಮಿನಲ್ ಕೇಸ್ ಕೊಡಲಿ ಎಂದು ಹೇಳ್ತೀನಿ ಎಂದರು.

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಬಗ್ಗೆ ಬಹಳ ಹಿಂದೆಯೇ ನಾನು ಹೇಳಿದ್ದೇನೆ. ಬಿಡಿಎ ಹಗರಣದಲ್ಲಿ 7 ಕೋಟಿ 40 ಲಕ್ಷ ಹಣ ಅವರ ಕುಟುಂಬದವರ ಖಾತೆಗೆ ಹೋಗಿದೆ. ಅದರ ಅರ್ಥ ಕುಟುಂಬ ರಾಜಕಾರಣ ಇದೆ ಅಂತ ಅಲ್ವಾ ಎಂದು ಪ್ರಶ್ನಿಸಿದರು.

ಈ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ, ಜನರೇ ಉತ್ತರ ಕೊಡುತ್ತಾರೆ. ನನ್ನ ಕಾಲದಲ್ಲಿ ಉಂಟಾಗಿದ್ದ ಎಲ್ಲ ಜನಪರ ಕೆಲಸಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಾಯಕತ್ವ ಬದಲಾವಣೆಗೆ ಸಿದ್ದರಾಮಯ್ಯ ದಿನಾಂಕ ನಿಗದಿ ಮಾಡಲಿ ಎಂಬ ಬಿಎಸ್ವೈ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಇಷ್ಟು ದಿನಗಳ ಕಾಲ ಮಂತ್ರಿ ಮಂಡಲ ವಿಸ್ತರಣೆ ಯಾಕೆ ಮಾಡಿರಲಿಲ್ಲ. ಮಂತ್ರಿ ಮಂಡಲ ವಿಸ್ತರಣೆಗೆ ಯಾಕೆ ತಡವಾಯಿತು, ಗೋಗರೆದು ಕೈಕಾಲು ಕಟ್ಟಿ ಮಂತ್ರಿ ಮಂಡಲ ವಿಸ್ತರಣೆ ಮಾಡಿಸಿಕೊಂಡಿರೋದು ಎಂದು ವ್ಯಂಗ್ಯವಾಡಿದರು.

ಸಚಿವ ಸಂಪುಟದಿಂದ ಪಕ್ಷೇತರನಾಗಿ ಕಾಂಗ್ರೆಸ್ ಪಕ್ಷದ ಸಹಾಯದೊಂದಿಗೆ ಗೆದ್ದಿದ್ದ ಶಾಸಕ ನಾಗೇಶ್ ರನ್ನ ಕೈಬಿಟ್ಟಿದ್ದಾರೆ. ಯಾವ ಕಾರಣಕ್ಕೆ ಬಿಟ್ಟಿದ್ದಾರೆ ಎಂದು ಕಾರಣ ಕೊಟ್ಟಿಲ್ಲ.
ಅವರೂ ಆಪರೇಷನ್ ಕಮಲಕ್ಕೆ ಒಳಪಟ್ಟವರು. ಈಗ ಮುನಿರತ್ನನನ್ನು ಕೈ ಬಿಟ್ಟಿದ್ದಾರೆ. ಕಾನೂನು ತೊಡಕಿದೆ ಎಂದು ಗೊತ್ತಿದ್ದರೂ ಯಾಕೆ ಕರೆದುಕೊಂಡರು. ಅವನನ್ನು ಮಿನಿಸ್ಟರ್ ಮಾಡಲು ಆಗಲಿಲ್ಲ ಎಂದ ಮೇಲೆ ಯಾಕೆ ತಗೆದುಕೊಂಡ್ರು.?
ವಿಶ್ವನಾಥ್ ಪಾಪ ಬಾಯಿ ಬಡ್ಕೊತ್ತಿದ್ದಾನೆ ಎಂದು
ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಕಡೆಗೂ ಮೌನ ಮುರಿದ ಮುನಿರತ್ನ: ಹಣೆಬರಹದಲ್ಲಿ ಬರೆದಿದ್ದರೆ ಸಚಿವನಾಗುವುದನ್ನ ತಪ್ಪಿಸಲು ಆಗುವುದಿಲ್ಲ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಏಳು ಜನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ಬಳಿಕ ಶಾಸಕ ಮುನಿರತ್ನ ಅವರು ಕಡೆಗೂ ಮೌನ ಮುರಿದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣೆ ಬರಹದಲ್ಲಿ ಬರೆದಿದ್ದರೆ ಸಚಿವನಾಗುವುದನ್ನ ತಪ್ಪಿಸಲು ಆಗುವುದಿಲ್ಲ ಎಂದಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಅವರು ಮಂತ್ರಿಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ನಾನು ಪಕ್ಷದ ಕಾರ್ಯಕರ್ತನಾಗಿದ್ದೇನೆ. ಮೂರು ಬಾರಿ ಶಾಸಕನಾಗಿರುವುದು ದೈವ ಕೃಪೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಪಕ್ಷ, ವರಿಷ್ಠರು, ಮುಖ್ಯಮಂತ್ರಿಗಳ ಬಗ್ಗೆ ತಪ್ಪಾಗಿ ಮಾತನಾಡುವುದಿಲ್ಲ. ಹಾಗೆ ಯಾರು ಮಾತನಾಡಬಾರದು ಎಂದರು.

ಅವರೆಲ್ಲಾ ಬಹಳಷ್ಟು ಜನ ಬ್ಯೂಸಿ ಇದ್ದಾರೆ. ಎಲ್ಲಾ ಸಚಿವರು ಬ್ಯೂಸಿ ಇದ್ದಾರೆ. ಒಬ್ಬರು ದಾವಣಗೆರೆ ಅಂತಾರೆ, ಇನ್ನೊಬ್ಬರು ಮತ್ತೊಂದು ಅಂತಾರೆ. ಅವರನ್ನ ನೋಡಿದರೆ ಬಿಜೆಪಿ ಪಕ್ಷಕ್ಕೆ ಪ್ರಮಾಣಿಕವಾಗಿ ಮತ್ತು ದಿನದ ಇಪ್ಪತ್ನಾಲ್ಕು ತಾಸು ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ
ಮಿತ್ರ ಮಂಡಳಿಯ ಸದಸ್ಯ ಹಾಗೂ ಸಚಿವ ಬೈರತಿ ಬಸವರಾಜ್ ವಿರುದ್ಧ ಕಿಡಿಕಾರಿದರು.

ಯತ್ನಾಳ್ ಅವರ ಸಿಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಬಳಿ ಸಿಡಿ ಇದೆಯಾ, ಇದ್ರೆ ತೋರಿಸಿ. ಸುಮ್ಮನೆ ಗೊಂದಲ ಸೃಷ್ಟಿಸುವ ಅನಗತ್ಯ ಹೇಳಿಕೆ ನೀಡಬಾರದು. ರಾಜ್ಯದ ಮುಖ್ಯಮಂತ್ರಿಯವರ ಬಗ್ಗೆ ಆಧಾರ ರಹಿತ ಆರೋಪ ಮಾಡಬಾರದು ಎಂದು ಶಾಸಕ ಮುನಿರತ್ನ ಹೇಳಿದರು.

ಶಿಕ್ಷಕರು ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡಿ: ಸೋಮಶೇಖರಗೌಡ

0

ವಿಜಯಸಾಕ್ಷಿ ಸುದ್ದಿ, ಕನಕಗಿರಿ

ಅಧಿಕಾರಿ ಹಾಗೂ ಶಿಕ್ಷಕರ ನಡುವಿನ ಕೊಂಡಿಯಾಗಿ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಕೆಲಸ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ ತಿಳಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಶಿಕ್ಷಕರ ಶೈಕ್ಷಣಿಕ ಸಮಸ್ಯೆ, ಕುಂದು ಕೊರತೆಗಳಿಗೆ ಸ್ಪಂದಿಸಲಾಗುವುದು, ಶಿಕ್ಷಕರು ತಮ್ಮ ಕೆಲಸಗಳಿಗೆ ಬಿಇಓ ಕಚೇರಿಗೆ ವಿನಾಃ ಕಾರಣ ಅಲೆದಾಡದಂತೆ ಸಂಘಟನೆಗಳ ಪದಾಧಿಕಾರಿಗಳು ನೋಡಿಕೊಳ್ಳಬೇಕು ಜನರ ಕೆಂಗೆಣ್ಣಿಗೆ ಯಾವ ಶಿಕ್ಷಕರು ಗುರಿಯಾಗಬಾರದು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ವಿ. ವಿ. ಗೊಂಡಬಾಳ ಮಾತನಾಡಿ, ಶಿಕ್ಷಕರ ಆತ್ಮ ವಿಶ್ವಾಸ ಹೆಚ್ಚಿಸುವ ಹಾಗೂ ಧನಾತ್ಮಕ ಚಿಂತನೆ ಮೂಡಿಸುವ ಕಾರ್ಯಕ್ರಮಗಳನ್ನು ಶಿಕ್ಷಕರ ಸಂಘಟನೆಗಳು ಮಾಡಬೇಕು, ಶಿಕ್ಷಕರು ವೃತ್ತಿಯಲ್ಲಿ ಬದ್ದತೆ, ಪ್ರಾಮಾಣಿಕತೆ ರೂಢಿಸಿಕೊಂಡು ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕೆಂದು ತಿಳಿಸಿದರು.

ಎನ್.ಪಿ.ಎಸ್ ಶಿಕ್ಷಕರ ಪಾನ್ ಖಾತೆಯ ವಿವರಗಳನ್ನು ಸರಿ ಪಡಿಸುವುದು, ಎಜಿಟಿ ಹಾಗೂ ಕೃಪಾಂಕದಡಿಯಲ್ಲಿ ನೇಮಕಗೊಂಡಿರುವ ಮತ್ತು 10, 15 ಮತ್ತು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಟೈಪ್ ಬಾಂಡ್ ನ ಬಾಕಿ ವೇತನ ಪಾವತಿಸುವುದು, ಮುಖ್ಯಶಿಕ್ಷಕರ ಬಡ್ತಿ ವೇತನ, ಮುಖ್ಯಶಿಕ್ಷಕರ ಹುದ್ದೆಗೆ ಪದೋನ್ನತಿ ಪಡೆದ ಶಿಕ್ಷಕರಿಗೆ ಚಾಲನಾ ಆದೇಶ ನೀಡುವುದು ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಜತೆಗೆ ಚರ್ಚಿಸಲಾಯಿತು.

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಅವರನ್ನು ಬುಧವಾರ ಸನ್ಮಾನಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗಂಗಾವತಿ ಘಟಕದ ಅಧ್ಯಕ್ಷ ಚಾಂದಪಾಷ, ಕನಕಗಿರಿ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಡಿ. ಜಿ. ಸಂಗಮ್ಮನವರ್, ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುಳಾ ಶಾವಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ರಾಮಚಂದ್ರ ಮಾಕಣ್ಣವರ್ (ಕನಕಗಿರಿ) , ರುದ್ರಗೌಡ ಪಾಟೀಲ( ಗಂಗಾವತಿ) ಖಜಾಂಚಿ ಎಚ್. ಎಸ್. ಚೇತನಕುಮಾರ, ಶಿಕ್ಷಕರಾದ ಶೇಖರಯ್ಯ ಹಿರೇಮಠ, ಉಮೇಶ, ಪರಶುರಾಮ ಇದ್ದರು.

error: Content is protected !!