Home Blog Page 3214

ಬಸ್ ನಿಲ್ದಾಣ ಸಂಪೂರ್ಣ ಸ್ಥಬ್ದ; ರೋಗಿ, ಪ್ರಯಾಣಿಕರ ಪರದಾಟ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಸಾರಿಗೆ ನೌಕರರ ಮುಷ್ಕರದ ಬಿಸಿ ಗದಗಗೂ ತಟ್ಟಿದೆ. ಇದರಿಂದ ಗದಗನಲ್ಲಿ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ.

ಗದಗ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಎಲ್ಲ ಬಸ್ ಸಂಚಾರ ಸ್ಥಗಿತವಾಗಿದ್ದು, ಬಸ್ ನಿಲ್ದಾಣ, ಡಿಪೋದಲ್ಲಿ ಬಸ್ ಸಾಲುಗಟ್ಟಿ ನಿಂತಿವೆ. ಅಲ್ಲದೇ, ಬಸ್ ನಿಲ್ದಾಣದ ಫ್ಲಾಟ್ ಫರ್ಮ್ ಗೆ ಬಂದ್ ಬಸ್ ಗಳನ್ನು ಸಾರಿಗೆ ನೌಕರರು ವಾಪಸ್ ಕಳಿಸುತ್ತಿದ್ದಾರೆ. ಯಾವುದೇ ಬಸ್ ಸಂಚಾರ ಮಾಡದಂತೆ ಸಿಬ್ಬಂದಿ ತಾಕೀತು ಮಾಡುತ್ತಿದ್ದಾರೆ.

ಗದಗ-ಮುಂಬಯಿ ಬಸ್ ಪ್ರಶ್ನೆ ಮಾಡಿದ ನಿರ್ವಾಹಕನಿಗೆ ಕೆಲ ನೌಕರರಿಂದ ತರಾಟೆ ತೆಗೆದುಕೊಂಡ ಘಟನೆಯೂ‌ ನಡೆಯಿತು.

ಮುಂಬಯಿ, ಬಾಗಲಕೋಟ ಸೇರಿದಂತೆ ವಿವಿಧೆಡೆ ಸಂಚಾರ ಮಾಡುವ ಬಸ್ ತಡೆದು ಪ್ಲಾಟ್ ಫಾರ್ಮ್ ನಿಂದ ಬಸ್ ಗಳನ್ನು ತೆಗೆದು ಡಿಪೋ ಒಳಗೆ ನಿಲ್ಲಿಸಿದ್ದಾರೆ.‌ ಇದರಿಂದ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಕೊಪ್ಪಳದ ಖಾಸಗಿ ಕಣ್ಣಿನ ಆಸ್ಪತ್ರೆಗೆ ಹೊರಟಿದ್ದ ಮಹಿಳೆಗೂ ಸಾರಿಗೆ ನೌಕರರ ಬಂದ್ ಬಿಸಿ ತಟ್ಟಿದೆ. ಗದಗ ತಾಲ್ಲೂಕಿನ ಲಲಿತಾ ರೆವಣಸಿದ್ದಪ್ಪ ಗೊಡಚಪ್ಪನವರ್ ಎಂಬ ಮಹಿಳೆ ಬಸ್ ಇಲ್ಲದೆ ಮಹಿಳೆ ಪರದಾಡಿದರು.

ಬಸ್ ಪ್ರಯಾಣವಿಲ್ಲದೇ ನಗರದ ಕೇಂದ್ರಿಯ ಬಸ್ ನಿಲ್ದಾಣ ಮತ್ತು ನಿಲ್ದಾಣ ಹೊರಗೆ ಸೇರಿದಂತೆ ನಗರದ ಮುಳಗುಂದ ನಾಕಾ, ಹಳೆ ಡಿಸಿ ಆಫೀಸ್ ಸರ್ಕಲ್, ಅಂಬೇಡ್ಕರ ವೃತ್ತದಲ್ಲಿ ಪ್ರಯಾಣಿಕರು ಬಸ್ ಗಾಗಿ ಕಾದು ನಿಂತಿದ್ದಾರೆ. ಕೆಲವರು ಖಾಸಗಿ ವಾಹನ ಹತ್ತಿ ಹೊರಟರೇ, ಇನ್ನೂ ಕೆಲವರು ಬಾಡಿಗೆ ವಾಹನ ಮಾಡಿಕೊಂಡು ಹೊರಟಿದ್ದಾರೆ.

ಡೆಡ್ಲಿ ಮುತ್ತಪ್ಪ ರೈ ಕಮ್ ಬ್ಯಾಕ್!

ವಿಜಯಸಾಕ್ಷಿ ಸಿನಿಮಾ ಸುದ್ದಿ, ಬೆಂಗಳೂರು:
ಭೂಗತಲೋಕದ ದೊರೆ ಡಾನ್ ಮುತ್ತಪ್ಪ ರೈ, 1960-80 ದಶಕದ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರೈ ಆಳಿದ ಅಂಡರ್‌ವರ್ಲ್ಡ್‌ನ್ನು ತೆರೆಗೆ‌ ತರುತ್ತಿದ್ದಾರೆ ಡೆಡ್ಲಿ ಡೈರೆಕ್ಟರ್.

ಎಂಆರ್ ಹೆಸರಿನ ಚಿತ್ರಕ್ಕೆ ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿನಗರದ ಶೃಂಗಗಿರಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತ ಜರುಗಿತು. ನಿರ್ದೇಶಕ ರವಿಶ್ರೀವತ್ಸ ನಿರ್ದೇಶನದಲ್ಲಿ ಮೂಡಿ ಬರುತ್ತಿರೊ ಈ ಚಿತ್ರದಲ್ಲಿ ಹೊಸ ಹುಡುಗ ದೀಕ್ಷಿತ್ ಎಂಆರ್ ಆಗಿ ಕಾಣಿಸಿಕೊಳ್ಳಲಿಸದ್ದಾರೆ.

ಈಗಾಗಲೇ ಎಂಆರ್ ಚಿತ್ರದ ಪೊಸ್ಟರ್ ಲಾಂಚ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನತ್ತ ಸಾಗಿವೆ.

ಡೆಡ್ಲಿ ಸೋಮ, ಮಾದೇಶ ಚಿತ್ರದ ಮೂಲಕ ಭೂಗತ ಲೋಕದ ಕಥೆ ಹೇಳಿದ್ದ ರವಿ ಶ್ರೀ ವತ್ಸ ಬಹಳ ವರ್ಷಗಳ ನಂತರ ಮತ್ತೊಮ್ಮೆ ಅಂಡರ್‌‌ವರ್ಲ್ಡ್ ಕಥೆ ಹೇಳಲು ಬರುತ್ತಿದ್ದಾರೆ.

ಈಗಾಗಲೇ ಚಿತ್ರದ ಶೂಟಿಂಗ್ ಷೆಡ್ಯೂಲ್ ರೆಡಿಯಾಗಿದ್ದು ಸದ್ಯದ ಮಾಹಿತಿ ಪ್ರಕಾರ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು ಸುತ್ತಮುತ್ತ ಬಹುತೇಕ ಶೂಟಿಂಗ್ ನಡೆಯಲಿದೆ. ಕೆಲ ದೃಶ್ಯಗಳಿಗೆ ವಿದೇಶದ ಲೋಕೇಷನ್ ಅಗತ್ಯ ಇದರ. ಆದರೆ ಈಗ ಪರವಾನಗಿ ಸಿಗೋದು ಅನುಮಾನ ಇರೋದ್ರಿಂದ ಕೊನೆ ಷೆಡ್ಯೂಲ್‌ತನಕ ಕಾದು ನೋಡಬೇಕು ಅನ್ನುತ್ತೆ ಚಿತ್ರತಂಡ.

ಶಾಸಕ ಮುನಿರತ್ನ, ಡಿಸಿಪಿ ಅಶೋಕ್‌ಕುಮಾರ್, ನಿರ್ಮಾಪಕ ರಾಮು ಹಾಗೂ ನಿರ್ದೇಶಕ ಕೆ.ವಿ.ರಾಜು ಚಿತ್ರದ ಮುಹೂರ್ತದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮುತ್ತಪ್ಪ ರೈ ಕುರಿತ ಸಿನಿಮಾ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

ಕೊವಿಡ್-19: ಗದಗ ಜಿಲ್ಲೆಯ ಗುರುವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಡಿಸೆಂಬರ್‌ 10 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 141715 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 146758 ಮಾದರಿಗಳಲ್ಲಿ 134564 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 1376 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 03 ಪ್ರಕರಣಗಳು ಸೇರಿದಂತೆ ಒಟ್ಟು 10818 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 6 ಜನ ಸೇರಿದಂತೆ ಒಟ್ಟು 10613 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 64 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಬೆಂಗಳೂರಿನಲ್ಲಿ ರೈತರಿಂದ ಪ್ರತಿಭಟನೆ; ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಒತ್ತಾಯ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕರ್ನಾಟಕದಲ್ಲಿ ರೈತರ ಹೋರಾಟ ಮುಂದುವರೆದಿದೆ.

ಭೂ ಸುಧಾರಣಾ ಮಸೂದೆಯನ್ನು ವಿಧಾನಪರಿಷತ್‌ನಲ್ಲಿ ಅಂಗೀಕರಿಸಿದ್ದನ್ನು ವಿರೋಧಿಸಿ, ರಾಜ್ಯಪಾಲರು ಮಸೂದೆಗೆ ಸಹಿ ಹಾಕಬಾರದು ಎಂದು ಒತ್ತಾಯಿಸಿ ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯಹೋರಾಟ ಸಮಿತಿಯಿಂದ ಗುರುವಾರ ರಾಜಭವನ ಚಲೋ ಹೋರಾಟ ಆರಂಭವಾಗಿದೆ.

ಗುರುವಾರ ಮುಂಜಾನೆಯೇ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬಳಿ ಜಮಾಯಿಸಿದ ಸಾವಿರಾರು ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲು ನಿಲ್ದಾಣದಿಂದ ಕೆ.ಆರ್.ಸರ್ಕಲ್ ಮತ್ತು ವಿಧಾನಸೌಧದ ಮುಂಭಾಗದಿಂದ ರಾಜಭವನ ತಲುಪಲು ಯೋಜಿಸಿದ್ದ ರೈತರನ್ನು ಸದ್ಯಕ್ಕೆ ಫ್ರೀಡಂಪಾರ್ಕ್‌ಬಳಿ ಪೊಲೀಸರು ತಡೆದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಫ್ರೀಡಂಪಾರ್ಕ್ ರಸ್ತೆಯಲ್ಲಿ ವಾಹನ ಸಂಚಾರ ಸ್ತಭ್ದವಾಗಿದೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ `ಸರ್ಕಾರ ಕಾಯ್ದೆಯನ್ನು ಅಂಗೀಕರಿಸಿ ನಮ್ಮನ್ನು ಮಾತುಕತೆಗೆ ಕರೆದಿದೆ. ಇದು ಸರ್ಕಾರದ ಪೂರ್ವಯೋಜಿತ ನಾಟಕ. ಹಾಗಾಗಿ ನಾವು ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಹೋರಾಟ ಮುಂದುವರೆಸುತ್ತೇವೆ’ ಎಂದಿದ್ದಾರೆ.

ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್ ಮಾತನಾಡಿ `ಈ ಜನವಿರೋಧಿ ಕಾಯ್ದೆಗೆ ರಾಜ್ಯಪಾಲರು ಸಹಿ ಹಾಕಬಾರದು. ಒಂದು ವೇಳೆ ಸಹಿ ಹಾಕಿದ್ದೆ ಆದಲ್ಲಿ ದೆಹಲಿ ರೈತರ ಮಾದರಿಯಲ್ಲಿ ಬೆಂಗಳೂರನ್ನೂ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ. ಮಾಜಿ ಸಿಎಂ ಕುಮಾರಸ್ವಾಮಿಯವರು ನಾಟಕ ನಿಲ್ಲಿಸಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ಆರೋಪಿಸಿದರು.

ಭೂ ಒಡೆತನ ಯೋಜನೆ, ಜಮೀನಿನ ಜಂಟಿ ಪರಿಶೀಲನೆಗೆ ಕ್ರಮ ಕೈಗೊಳ್ಳಿ : ಸುರಳ್ಕರ್

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ:
ಭೂ ಒಡೆತನ ಯೋಜನೆಯಡಿ ಖಾಸಗಿ ಜಮೀನು ಖರೀದಿಸಿದಾಗ ಜಮೀನಿನ ಮಣ್ಣಿನ ವಿಧ, ನೀರಿನ ಲಭ್ಯತೆ ಇತ್ಯಾದಿಗಳ ಬಗ್ಗೆ ಕಂದಾಯ ಇಲಾಖೆಯವರೊಂದಿಗೆ ಜಂಟಿ ಪರಿಶೀಲಿಸಿ, ಭೂ ಮಾಲೀಕರಿಂದ ಭೂಮಿ ಖರೀದಿಸಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ದೌರ್ಜನ್ಯ ತಡೆ ಹಾಗೂ ನಿಯಂತ್ರಣ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿವಿಧ ಅಭಿವೃದ್ಧಿ ನಿಗಮಗಳಿಂದ ಭೂ ಒಡೆತನ ಯೋಜನೆಯಡಿ ಹಂಚಿಕೆಯಾದ ಜಮೀನುಗಳನ್ನು ಫಲಾನುಭವಿಗಳು ಪರಭಾರೆ ಮಾಡಿದ್ದಲ್ಲಿ ಅವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಿ. ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧ ನಿರ್ಣಯ ಪ್ರಮಾಣ ಅತ್ಯಂತ ಕಡಿಮೆಯಿದ್ದು, ಕಳೆದ 3 ವರ್ಷಗಳ ದೌರ್ಜನ್ಯ ಪ್ರಕರಣದ ಅಪರಾಧ ನಿರ್ಣಯ ಮತ್ತು ಖುಲಾಸೆಗೆ ಸಂಬಂಧಿಸಿದಂತೆ ಅಂಕಿ ಅಂಶಗಳ ವಿಶ್ಲೇಷನಾತ್ಮಕ ವರದಿ ಸಿದ್ದಪಡಿಸಿ ಸಲ್ಲಿಸುವಂತೆ ಅವರು ತಿಳಿಸಿದರು.

ತಪ್ಪು ಮಾಹಿತಿ ನೀಡಿ ಪಡೆದ ಸುಳ್ಳು ಜಾತಿ ಪ್ರಮಾಣ ಪತ್ರಗಳ ಆಧಾರದ ಮೇಲೆ ವಿತರಿಸಿದ ಸರ್ಕಾರದ ಸಹಾಯಧನ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಸ್ಥಿರ/ಚರ ಆಸ್ತಿಗಳನ್ನು ಜಪ್ತಿ ಮಾಡಿ ಹಣವನ್ನು ಸರ್ಕಾರಕ್ಕೆ ಭರಣ ಮಾಡಲು ಕ್ರಮ ಕೈಗೊಳ್ಳಿ. ಭವನ, ಕಾಲೋನಿ ಕಾಮಗಾರಿಗಳನ್ನು ನಿಗಧಿತ ಕಾಲಮಿತಿಯಲ್ಲಿ ಮುಕ್ತಾಯಗೊಳಿಸಿ ಎಂದು ಅವರು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಟಿ.ಶ್ರೀಧರ ಮಾತನಾಡಿ, ಒಟ್ಟು 26 ಪ್ರಕರಣಗಳಿಗೆ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, 3 ಪ್ರಕರಣಗಳು ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯ ಬಾಕಿ ಪ್ರಕರಣಗಳು, 1 ಬಿ ಫಾಲ್ಸ್ ಹಾಗೂ 3 ಇತರೆ ಪ್ರಕರಣಗಳಾಗಿವೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನವೀನ್ ಶಿಂತ್ರೆ ಮಾತನಾಡಿ, 2020 ರ ಕ್ಯಾಲೆಂಡರ್ ವರ್ಷದಲ್ಲಿ ನವ್ಹಂಬರ್ ಅಂತ್ಯದವರೆಗೆ ದಾಖಲಾಗಿರುವ 34 ಪ್ರಕರಣಗಳಲ್ಲಿ 23 ಪ್ರಕರಣಗಳಿಗೆ ರೂ.33 ಲಕ್ಷ ಪರಿಹಾರ ಮಂಜೂರಿಸಿದ್ದು, ಬಾಕಿ ಪ್ರಕರಣಗಳಿಗೆ ಅನುದಾನ ಕೊರತೆಯ ಕಾರಣ ಪರಿಹಾರ ಪಾವತಿ ಮಾಡಲಾಗಿಲ್ಲ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿಇಒ ರಘುನಂದನ್ ಮೂರ್ತಿ, ಸಹಾಯಕ ಆಯುಕ್ತರಾದ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವ ಬಿ.ಸಿ.ಪಾಟೀಲರಿಗೆ ಪರ್ಸಂಟೇಜ್ ಕೊಟ್ರೇನೇ ಕೆಲಸ ಆಗುತ್ತಂತೆ!!

ಇದನ್ನ ಹೇಳ್ತಿರೋದು ನಾವಲ್ಲ, ಸಂಸದರ ಪತ್ರದಲ್ಲಿದೆ ಶಾಕಿಂಗ್ ನ್ಯೂಸ್

ವಿಜಯಸಾಕ್ಷಿ ಸುದ್ದಿ ಕೊಪ್ಪಳ:
ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ‌.ಪಾಟೀಲ ಒಂದಿಲ್ಲೊಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿ ಇರ್ತಾರೆ ಅನ್ನೋದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ.

ಕೃಷಿ ಇಲಾಖೆ ಅಧಿಕಾರಿಗಳು ಅವರ ವಿರುದ್ಧ ಸಿಎಂಗೆ ಪತ್ರ ಬರೆದದ್ದು, ಈಚೆಗೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರನ್ನು ಹೇಡಿಗಳು ಎಂದು ಹೇಳಿಕೆ ನೀಡಿದ್ದು ಸಚಿವ ಬಿ‌.ಸಿ.ಪಾಟೀಲ ಹೆಸರು ಬಿಸಿ ಬಿಸಿ ಸುದ್ದಿಯಲ್ಲಿ ಕಾಣಿಸಿಕೊಂಡಿತ್ತು.

ಈಗ ಸಚಿವರ ಕಚೇರಿಯ ಒಳ ವಿಷಯವೊಂದು ಹೊರ ಬಿದ್ದಿದೆ. ನವೆಂಬರ್ 24ರಂದು ಸಚಿವ ಬಿ.ಸಿ.ಪಾಟೀಲರಿಗೆ ಸಂಸದ ಕರಡಿ ಸಂಗಣ್ಣನವರು ಬರೆದ ಪತ್ರ ಇದೀಗ ವೈರಲ್ ಆಗಿದೆ.

ಡಿಸೆಂಬರ್ 5ರಂದು ಸಚಿವರ ಕಚೇರಿ ತಲುಪಿರುವ ಪತ್ರದಲ್ಲಿ ಸಚಿವರ ಆಪ್ತ ಸಹಾಯಕ ರಮೇಶ್ ಜ್ಯೋತಿ ಎಂಬುವವರ ಬಗ್ಗೆ ಸಂಸದರು ವಿವರಿಸಿದ್ದಾರೆ.

ಸಂಸದರು ಪತ್ರ ಬರೆಯುವ ಅಗತ್ಯ ಇರಲಿಲ್ಲ
ಸಂಸದರು ಇದನ್ನು ಸರಿಪಡಿಸುವ ಹಾಗಿದ್ದರೆ ಮುಖತಃ ಇಲ್ಲವೇ ಫೋನ್ ಮಾಡಿ ವಿಷಯ ತಿಳಿಸಬಹುದಿತ್ತು. ಅದನ್ನು ಬಿಟ್ಟು ಪತ್ರ ಬರೆದು, ಅದನ್ನು ಪತ್ರಿಕೆಗಳಿಗೆ ಬಿಡುಗಡೆ‌ ಮಾಡುವ ಅಗತ್ಯ ಇರಲಿಲ್ಲ. ವ್ಯವಸ್ಥೆ ಸರಿ ಇಲ್ಲ. ಕ್ಲರ್ಕ್ ಇಟ್ಟುಕೊಂಡು ಸಚಿವಗಿರಿ ಮಾಡ್ಲಾ?
-ಬಿ.ಸಿ.ಪಾಟೀಲ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ, ಕೊಪ್ಪಳ.

ರಮೇಶ್ ಜ್ಯೋತಿ ಸಚಿವರ ಕಚೇರಿಯನ್ನು ಮಕ್ಕಳ ದರ್ಬಾರ್‌ಗೆ ಬಳಸಿಕೊಂಡಿದ್ದಾರೆ. ಅಪರೂಪಕ್ಕೆ ಕಚೇರಿಯಲ್ಲಿ ಕಾಣಿಸುವ ಅವರು ಮಲಗಿರುತ್ತಾರೆ. ಸಾರ್ವಜನಿಕರು, ರೈತರು ಕೆಲಸ ಕಾರ್ಯಗಳ ಕುರಿತು ಹೇಳಿದರೆ ಸಚಿವರಿಗೆ ಪರ್ಸಂಟೇಜ್ ಕೊಟ್ಟರೆ ಮಾತ್ರ ಕೆಲಸ ಮಾಡುತ್ತಾರೆ ಎಂದು ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.

ಆದ್ದರಿಂದ ತಕ್ಷಣವೇ ರಮೇಶ್ ಜ್ಯೋತಿ ಎಂಬಾತನನ್ನು ಆಪ್ತ ಸಹಾಯಕ ಹುದ್ದೆಯಿಂದ ತೆಗೆದು ಹಾಕಿ ಎಂದು ಕರಡಿ ಸಂಗಣ್ಣನವರು ಸಚಿವ ಬಿ.ಸಿ.ಪಾಟೀಲ ಅವರನ್ನು ಕೋರಿದ್ದಾರೆ.

ಈ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮತ್ತೊಮ್ಮೆ ಸಚಿವ ಬಿ.ಸಿ.ಪಾಟೀಲ ಸುದ್ದಿಯಲ್ಲಿದ್ದಾರೆ.

ಗ್ರಾಮ ಪಂಚಾಯತ ಚುನಾವಣೆ; ಬುಧವಾರ 135 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಜಿಲ್ಲೆಯ ಮೊದಲ ಹಂತದ 53 ಗ್ರಾಮ ಪಂಚಾಯತಗಳ 801 ಸ್ಥಾನಗಳ ಚುನಾವಣೆಯು ಡಿ.22 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಯ ಮೂರನೆಯ ದಿನವಾದ ಬುಧವಾರ 135 ನಾಮಪತ್ರಗಳು ಸಲ್ಲಿಕೆಯಾಗಿವೆ. ಬುಧವಾರದ ವರೆಗೆ (ಡಿ.9) ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಒಟ್ಟು 158 ನಾಮಪತ್ರಗಳು ಸಲ್ಲಿಕೆಯಾಗಿವೆ.

ಗದಗ ತಾಲ್ಲೂಕಿನ 26 ಗ್ರಾಮ ಪಂಚಾಯತಿಯ 438 ಸ್ಥಾನಗಳಿಗೆ 77 ನಾಮಪತ್ರ, , ಲಕ್ಷ್ಮೇಶ್ವರ ತಾಲ್ಲೂಕಿನ 13 ಗ್ರಾಮ ಪಂಚಾಯತಿಯ 174 ಸ್ಥಾನಗಳಿಗೆ 43, ಹಾಗೂ ಶಿರಹಟ್ಟಿ ತಾಲ್ಲೂಕಿನ 14 ಗ್ರಾಮ ಪಂಚಾಯತಿಯ 189 ಸ್ಥಾನಗಳಿಗೆ 38 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಚುನಾವಣಾ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಅಧೀಕ್ಷಕರಾಗಿ ಮುಂಬಡ್ತಿ ಹೊಂದಿದ ಎಂ.ನೂರುದ್ದೀನ್ಗೆ ಬೀಳ್ಕೊಡುಗೆ

0

ವಿಜಯಸಾಕ್ಷಿ ಸುದ್ದಿ, ಕಂಪ್ಲಿ

ಪಟ್ಟಣದ ತಹಶೀಲ್ದಾರ್ ಕಛೇರಿ ಆವರಣದ ಭೂಮಾಪನ ಇಲಾಖೆಯಲ್ಲಿ ಸಿರುಗುಪ್ಪ ಭೂಮಾಪನ ಇಲಾಖೆಯ ಅಧೀಕ್ಷಕರಾಗಿ ಮುಂಬಡ್ತಿ ಹೊಂದಿದ ಎಂ.ನೂರುದ್ದೀನ್ ಅವರಿಗೆ ಕಂಪ್ಲಿ ತಾಲ್ಲೂಕು ಆಡಳಿತ ಹಾಗೂ ಸರ್ವೆ ಇಲಾಖೆ ನೇತೃತ್ವದಲ್ಲಿ ಮಂಗಳವಾರ ಸನ್ಮಾನಿಸುವ ಮೂಲಕ ಬೀಳ್ಕೊಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ನೂರುದ್ದೀನ್ ಕಂಪ್ಲಿಯ ಸರ್ವೆ ಇಲಾಖೆಯಲ್ಲಿ ಸರ್ವೆ ಇಲಾಖೆಯ ತಪಾಸಕರಾಗಿ(ಸರ್ವೆ ಸೂಪರ್ವೈಸರ್) ಎಲ್ಲರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲಾಯಿತು. ಕಂಪ್ಲಿ ಜನತೆಯ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿರುವೆ. ಇಲ್ಲಿನ ಸರ್ವೆ ಇಲಾಖೆ ಸಿಬ್ಬಂದಿಗಳ ಸಹಕಾರವು ಹೆಚ್ಚಿನ ಮಟ್ಟದಲ್ಲಿ ದೊರೆಯಿತು. ಈಗ ಸಿರುಗುಪ್ಪ ಸರ್ವೆ ಇಲಾಖೆಯಲ್ಲಿ ಅಧೀಕ್ಷಕರಾಗಿ ಮುಂಬಡ್ತಿ ಸಿಕ್ಕ ಹಿನ್ನಲೆ ಅನಿವಾರ್ಯವಾಗಿ ಇಲ್ಲಿಂದ ವರ್ಗಾವಣೆಯಾಗಬೇಕಾಯಿತು. ಮುಂದಿನ ದಿನದಲ್ಲಿ ಕಂಪ್ಲಿಯಲ್ಲಿ ಸೇವೆ ಮಾಡಲು ಅವಕಾಶ ದೊರೆತರೆ, ಮತ್ತೇ ಬರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗೌಸಿಯಾಬೇಗಂ, ಉಪ ತಹಶೀಲ್ದಾರ್ ಬಿ.ರವೀಂದ್ರಕುಮಾರ್, ಶಿರಸ್ತೇದಾರರಾದ ಪಂಪಾಪತಿ, ಎಸ್.ರೇಖಾಮಠ್, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಮಹ್ಮದ್ ಶರೀಫ್, ಸರ್ವೆ ಅಧಿಕಾರಿಗಳಾದ ಎಂ.ಟಿ.ಮಹಾಂತೇಶ್, ನಿರಂಜನ್, ಮಚ್ಚೇಂದ್ರಪ್ಪ, ಅನೀಲ್, ಅಂಥೋನಿ, ಅಜ್ಜಣಾಚಾರ್, ಹೆಚ್.ಕರಿಬಸಪ್ಪ, ವಿರೇಶಪ್ಪ, ಆನಂದ, ಕರುಣಾಕರ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಶಿಕ್ಷಣ ಸಚಿವ ಸುರೇಶ್ ಕುಮಾರ ಮಲತಾಯಿ ಧೋರಣೆ ಖಂಡಿಸಿ ಗುರುವಾರ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕೊರೋನಾ ಸೋಂಕಿನಿಂದ ಸಾಕಷ್ಟು ಆರ್ಥಿಕ ಸಂಕಷ್ಟ ಹೊರತಾಗಿ ಶಾಲೆಗಳು ಓಪನ್ ಇಲ್ಲದೆ ಮಕ್ಕಳಿಗೆ ಮಾನಸಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳು ಎದುರಾಗಿವೆ. ಆದ್ರೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೊಂದಲಮಯ ಹೇಳಿಕೆಯನ್ನು ನೀಡುವ ಮುಲಕ ಮಲತಾಯಿ ಧೋರಣೆಯನ್ನು ತೋರಿದ್ದಾರೆ ಎಂದು ಕೊಪ್ಪಳ ಜಿಲ್ಲೆಯ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಮಾತನಾಡಿ, ಖಾಸಗಿ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಚಿಂತನೆ ಇಲ್ಲ. ಅವರ ಸಮಸ್ಯೆಗಳಿ ಪರಿಹಾರವಾಗಲಿ ಅಥವಾ ನೆರವಿಗೆ ಬಾರದೇ ಇರುವುದು ಶೋಚನೀಯ, ಹಾಗಾಗಿ ಡಿಸೆಂಬರ್ 11 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ವಿವಿಧ ಬೇಡಿಕೆಗೆ ಒತ್ತಾಯಿಸಲಿದ್ದೇವೆ ಎಂದರು.

ಶಾಲಾ ನವೀಕರಣವನ್ನು ನಿರ್ಬಂಧವಿಲ್ಲದೆ ಮುಂದಿನ ಐದು ವರ್ಷಗಳಿಗೆ ವಿಸ್ತರಣೆ ಮಾಡುವುದು, ಕಟ್ಟಡ ಹಾಗೂ ವಾಹನಗಳ ಸಾಲ ಮರುಪಾವತಿಗೆ ಒಂದು ವರ್ಷ ವಿನಾಯಿತ ನೀಡುವುದು, ಖಾಸಗಿ ಶಿಕ್ಷಕರಿಗೆ ಸಿಬ್ಬಂದಿಗೆ 10000 ರೂ ಸಂಕಷ್ಟ ಪರಿಹಾರ, ಆರ್ ಟಿ ಇ ಶುಲ್ಕ ಮರುಪಾವತಿ, 25 ವರ್ಷಗಳಿಂದ ನಡೆಯುತ್ತಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು, ಕಲ್ಯಾಣ ಕರ್ನಾಟಕಕ್ಕೆ ಒಳಪಡುವ ಎಲ್ಲಾ ಶಾಲೆಗಳಿಗೆ 371 ಜೆ ಅಡಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ರಾಜ್ಯದಲ್ಲಿ ಅಧಿಕೃತ ಶಾಲೆ ಆರಂಭವಾಗುವವರೆಗೆ ಸಾಲದ ಕಂತುಗಳು, ವಾಹನ ತೆರೆಗೆ, ಇನ್ಷುರೆನ್ಸ್ ಪಾವತಿಗೆ ವಿನಾಯಿತಿ ಇನ್ನಿತರ ಹಲವು ಬೇಡಿಕೆಗಳ ಈಡೇರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಲಾಗುವುದು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಖಾಸಗಿ ಶಾಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಪ್ರಹ್ಲಾದ್ ಅಗಳಿ, ತಾಲೂಕ ಅಧ್ಯಕ್ಷ ಶಾಹೀದ್ ತಹಶೀಲ್ದಾರ್, ನಿರ್ದೇಶಕ ಎ ಹೆಚ್ ಆತನೂರು, ದಾನಪ್ಪ ಕವಲೂರು ಸೇರಿದಂತೆ ಇನ್ನಿತರರು ಇದ್ದರು.

ಗ್ರಾಮ ಪಂಚಾಯತ ಚುನಾವಣೆ-2020-
ಮದ್ಯ ಅಕ್ರಮ ಸಾಗಣೆ ಮಾಡಿದರೆ ಹುಷಾರ್! ಸುರಳ್ಕರ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಅಬಕಾರಿ ಇಲಾಖೆ ಹಾಗೂ ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರೊಂದಿಗೆ ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯತ ಚುನಾವಣೆ-2020 ರ ಪ್ರಯುಕ್ತ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಬಕಾರಿ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸನ್ನದುದಾರರಿಗೆ ನಿರ್ದೇಶನಗಳನ್ನು ನೀಡುವುದರ ಜೊತೆಗೆ ಕೆಲ ಎಚ್ಚರಿಕೆ ನೀಡಿದರು.

ಅದರಂತೆ ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರು ಗ್ರಾಮ ಪಂಚಾಯತ್ ಚುನಾವಣೆ-2020ರ ಪ್ರಯುಕ್ತ ಚುನಾವಣಾ ಆಯೋಗವು ಘೋಷಿಸುವ ಮದ್ಯ ಮುಕ್ತ ದಿನ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಈ ಅವಧಿಯಲ್ಲಿ ಯಾವುದೇ ರೀತಿಯ ಅಕ್ರಮ ಮದ್ಯ ಮಾರಾಟಕ್ಕೆ ಆಸ್ಪದ ನೀಡಬಾರದು. ಹಾಗೊಂದು ವೇಳೆ ಮಾಡಿದರೆ ಪರವಾನಗಿ ರದ್ದುಪಡಿಸಲಾಗುವುದು ಹುಷಾರಾಗಿರಿ ಎಂದು ಸೂಚನೆ ನೀಡಿದರು.

ಮದ್ಯ ಮಾರಾಟ ಮಳಿಗೆಗಳಿಂದ ಮದ್ಯವು ಚುನಾವಣಾ ಸಂಬಂಧ ಬಳಕೆಯಾಗದಂತೆ ಕ್ರಮ ವಹಿಸಬೇಕು. ಸನ್ನದು ಸ್ಥಳದಲ್ಲಿ ಯಾವುದೇ ಅಕ್ರಮಕ್ಕೆ ಆಸ್ಪದ ನೀಡಬಾರದು. ಮದ್ಯದ ಅಂಗಡಿಗಳಲ್ಲಿ ಮದ್ಯ ಎತ್ತುವಳಿಯು ಅಸಹಜ ಅಥವಾ ಅಸಾಧಾರಣವೆನಿಸಿದ್ದಲ್ಲಿ ಸದರಿ ಮದ್ಯದ ಅಂಡಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ನ್ಯೂನ್ಯತೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು. ಸನ್ನದು ಸ್ಥಳ ಹೊರತುಪಡಿಸಿ ಅನಧಿಕೃತವಾಗಿ ಬೇರೆ ಸ್ಥಳಗಳಲ್ಲಿ ಮದ್ಯ ಸಂಗ್ರಹಿಸದಂತೆ ಮುನ್ನೆಚ್ಚರಿಕೆ ಕ್ರಮವನ್ನು ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರು ವಹಿಸಬೇಕು ಎಂದು ತಿಳಿಸಿದರು.

ಮದ್ಯ ಮಾರಾಟ ಸನ್ನದುಗಳಿಗೆ ನಿಗದಿಪಡಿಸಿದ ಸಮಯಪಾಲನೆ ಮಾಡಬೇಕು. ಸಮಯ ಪಾಲನೆ ಮಾಡದೇ ಇರುವಂತಹ ಸನ್ನದುದಾರರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು. ಸನ್ನದು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಮಾಜ ಘಾತುಕ ವ್ಯಕ್ತಿಗಳು ಮದ್ಯ ಮಾರಾಟ ಮಳಿಗೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕೃತ್ಯಗಳನ್ನು ಎಸಗದಂತೆ ಕ್ರಮ ವಹಿಸಬೇಕು. ನಿಯಮನುಸಾರ ಒಬ್ಬ ವ್ಯಕ್ತಿ ಮದ್ಯ ಖರೀದಿಸಬಹುದಾದ ಪ್ರಮಾಣಕ್ಕಿಂತಲೂ ಹೆಚ್ಚು ಮದ್ಯವನ್ನು ನೀಡಬಾರದು ಹಾಗೂ ಪದೇ ಪದೇ ಮದ್ಯವನ್ನು ಒಬ್ಬ ವ್ಯಕ್ತಿ ತೆಗೆದುಕೊಳ್ಳುತ್ತಿರುವುದನ್ನು ಗಮನಿಸಿ ಅಂತಹ ವ್ಯಕ್ತಿಗಳಿಗೆ ಮದ್ಯ ನೀಡದಂತೆ ಹಾಗೂ ಸದರಿ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸನ್ನದುದಾರರು ಇಲಾಖೆ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.

ಕೋವಿಡ್-19 ಕೊರೋನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ವಿವಿಧ ಸನ್ನದುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದರೊಂದಿಗೆ ಹೆಚ್ಚು ಹೆಚ್ಚು ಜನರು ಸೇರುವಿಕೆಯನ್ನು ತಡೆಗಟ್ಟಬೇಕು. ಮಾಸ್ಕ್ನ್ನು ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳಬೇಕು. ಅಬಕಾರಿ ಉಪ ಅಧೀಕ್ಷಕರು ಹಾಗೂ ಜಿಲ್ಲೆಯ ಎಲ್ಲಾ ಅಧೀನ ಅಬಕಾರಿ ಅಧಿಕಾರಿಗಳು ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಅಬಕಾರಿ ಉಪ ಆಯುಕ್ತರು ಮಾತನಾಡಿ, ಅನಧಿಕೃತ ಮದ್ಯ ಮಾರಾಟ ಮತ್ತು ಚುನಾವಣಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಅಬಕಾರಿ ಇಲಾಖೆಯ ಇ-ಮೇಲ್ ವಿಳಾಸ : dckpl-ex-ka@nic.in & dcekoppal@gmail.com ಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರು ಉಪಸ್ಥಿತರಿದ್ದರು ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!