Home Blog Page 3215

ಕನಕಗಿರಿ ಶಾಸಕರ “ದಡ್ಡ” ನಡೆ! ರೈತರಿಗೆ ಸೌಲಭ್ಯ ನೀಡುವಲ್ಲೂ ದಢೇಸೂಗೂರು “ಹಸ್ತಾ” ಕ್ಷೇಪ?

-ಈರುಳ್ಳಿ ಸಂಸ್ಕರಣಾ ಘಟಕ ನಿರ್ಮಾಣ ಫಲಾನುಭವಿಗಳ ಪಟ್ಟಿಗೆ ಕೊಕ್ಕೆ
-ಅಧ್ಯಕ್ಷರಲ್ಲದಿದ್ದರೂ ನಾನೇ ಫೈನಲ್ ಮಾಡ್ತಿನಿ ಎಂದು ಅಧಿಕಾರಿಗಳ ಮೇಲೆ ದಬ್ಬಾಳಿಕೆ

ಭಾಗ-01

-ಬಿಯಸ್ಕೆ.
ವಿಜಯಸಾಕ್ಷಿ ವಿಶೇಷ ವರದಿ, ಕೊಪ್ಪಳ

ರೈತವಿರೋಧಿ ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ಇಂಥ ಸಂಕಷ್ಟದ ನಡುವೆಯೂ ರಾಜ್ಯ ಸರಕಾರ ರೈತರಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ಕೆಲವು ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಆದರೆ ದೇವರು ವರ ಕೊಟ್ಟರೂ ಪೂಜಾರಿ ಬಿಡ ಎನ್ನುವಂತಾಗಿದೆ ಜನರ ಸ್ಥಿತಿ, ಇದಕ್ಕೆ ತಾಜಾ ಉದಾಹರಣೆ ಈರುಳ್ಳಿ ಸಂಸ್ಕರಣಾ ಘಟಕ ನಿರ್ಮಾಣದ ಫಲಾನುಭವಿಗಳ ಪಟ್ಟಿ. ಎಲ್ಲದರಲ್ಲೂ ಮೂಗು ತೂರಿಸುವುದು ಚುನಾಯಿತ ಜನಪ್ರತಿನಿಧಿಗಳ ದೊಡ್ಡಸ್ತಿಕೆ. ಆದರೆ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ದೊಡ್ಡಸ್ತಿಕೆಯ ಜೊತೆಗೆ ತಮಗಿರುವ ದಡ್ಡತನವನ್ನು ಪ್ರದರ್ಶಿಸುತ್ತಿದ್ದಾರೆ.

ಈರುಳ್ಳಿ ಬೆಳೆಗಾರರ ಸಂಕಷ್ಟ ಅರಿತ ಸರಕಾರ ಈರುಳ್ಳಿ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ರೈತರಿಗೆ ಸಬ್ಸಿಡಿ ನೀಡುವ ಸೌಲಭ್ಯ ಆರಂಭಿಸಿದೆ. ಇದಕ್ಕಾಗಿ ತೋಟಗಾರಿಕಾ ಇಲಾಖೆಗೆ ಗುರಿಯನ್ನೂ ನೀಡಿ ರೈತರಿಗೆ ಅನುಕೂಲ ಕಲ್ಪಿಸಬೇಕೆನ್ನುವುದು ಸರಕಾರದ ಮಹಾತ್ವಾಕಾಂಕ್ಷೆ. ಸುಮಾರು 1.25 ಲಕ್ಷ ರೂ.ವೆಚ್ಚದಡಿ ನಿರ್ಮಾಣವಾಗುವ ಪ್ರತಿ ಘಟಕಕ್ಕೆ ಸರಕಾರ ಸುಮಾರು 85 ಸಾವಿರ ರೂಪಾಯಿ ಸಬ್ಸಿಡಿ ನೀಡುತ್ತದೆ. ಇದಕ್ಕೆ ಈರುಳ್ಳಿ ಬೆಳೆಗಾರರಿಂದ ಅರ್ಜಿ ಆಹ್ವಾನಿಸಿ ಅರ್ಹರನ್ನ ಫಲಾನುಭವಿಗಳನ್ನಾಗಿ ಮಾಡಲಾಗುತ್ತದೆ.

ಈರುಳ್ಳಿ ಸಂಸ್ಕರಣಾ ಘಟಕ ಏಕೆ ಬೇಕು?

ಈರುಳ್ಳಿ ಬೆಲೆ ಕುಸಿದು ಬೆಳೆಗಾರರು ಈರುಳ್ಳಿಯನ್ನು ಮಾರಾಟ ಮಾಡಲಾಗದೇ ರಸ್ತೆಗೆ ಚೆಲ್ಲಿ ನಷ್ಟ ಅನುಭಬಿಸುವುದನ್ನು ತಪ್ಪಿಸಲು ರಾಜ್ಯ ಸರಕಾರ ಈರುಳ್ಳಿಯನ್ನು ಸಂರಕ್ಷಿಸಲು ಅಗತ್ಯವಿರುವ ವಾತಾವರಣದ ಜೊತೆಗೆ ಜಮೀನಿನಲ್ಲೇ ಈರುಳ್ಳಿ ಸಂಸ್ಕರಿಸುವ ಕಟ್ಟಡ ನಿರ್ಮಿಸಲು ಸಹಾಯಧನ ನೀಡುತ್ತದೆ. ಇದರಿಂದ ರೈತರು ಹಾಳಾಗಬಹುದಾದ ಈರುಳ್ಳಿಯನ್ನು ಸಂರಕ್ಷಿಸಬಹುದು, ಜೊತೆಗೆ ಆ ಕಟ್ಟಡವನ್ನು ಕೃಷಿಪರ ವಿವಿಧೋದ್ದೇಶಗಳಿಗೂ ಬಳಸಬಹುದು ಎಂಬ ಆಲೋಚನೆಯಿಂದ ಸರಕಾರ ಇದನ್ನು ಆರಂಭಿಸಿದೆ. ಆದರೆ ಈ ಯೋಜನೆಯಲ್ಲೂ ಕೆಲ ಚುನಾಯಿತ ಜನಪ್ರತಿನಿಧಿಗಳು ಅನರ್ಹರ ಹೆಸರನ್ನು ಸೇರಿಸಲು, ಆ ಮೂಲಕ ಸರಕಾರದ ಸಬ್ಸಿಡಿಯಲ್ಲೂ ಪಾಲು ಪಡೆಯಲು ಹುನ್ನಾರ ನಡೆಸಿರುವುದು ಬೆಳಕಿಗೆ ಬಂದಂತಾಗಿದೆ.

ರೈತರನ್ನೇ ವಿಭಜನೆ ಮಾಡಿದ ಶಾಸಕ?

ತೋಟಗಾರಿಕಾ ಇಲಾಖೆ ಯೋಜನೆಯಡಿ ಅರ್ಜಿ ಆಹ್ವಾನಿಸಿದಾಗ ಕೊಪ್ಪಳ ಜಿಲ್ಲಾದ್ಯಂತ ಸಾವಿರಕ್ಕೂ ಅರ್ಜಿ ಬಂದಿವೆ. ಸರಕಾರ ಜಿಲ್ಲೆಗೆ ಕೊಟ್ಟಿರುವ ಗುರಿ 300. ಈಗಾಗಲೇ ಇಲಾಖೆ ಗುರಿ ತಲುಪಿದ್ದು, ಈಗ ಕನಕಗಿರಿ ಹಾಗೂ ಕುಷ್ಟಗಿ ಭಾಗಗಳಿಂದ ಬೇಡಿಕೆ ಬರುತ್ತಿದೆ. ಮೊದಲು ಕುಷ್ಟಗಿ, ಗಂಗಾವತಿಯಲ್ಲಿ ಅಷ್ಟಾಗಿ ಬೇಡಿಕೆ ಈರಲಿಲ್ಲ. 2020-21ನೇ ಸಾಲಿನಡಿ ಯೋಜನೆಯ ಪ್ರಯೋಜನ ಪಡೆಯಲು ಕೊಪ್ಪಳ ತಾಲೂಕಿನಿಂದ 600, ಕುಷ್ಟಗಿ ತಾಲೂಕಿನಿಂದ 150, ಗಂಗಾವತಿ ತಾಲೂಕಿನಿಂದ 60, ಯಲಬುರ್ಗಾ ತಾಲೂಕಿನಿಂದ 100 ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ 90 ಅರ್ಜಿಗಳು ಸಲ್ಲಿಕೆಯಾಗಿವೆ.

ಜಿಲ್ಲೆಯ ಯಾವುದೇ ತಾಲೂಕಿನಲ್ಲೂ ಇರದ ತಾರತಮ್ಯ ಕನಕಗಿರಿ ಕ್ಷೇತ್ರದಲ್ಲಿ ಕಂಡು ಬಂದಿದೆ. ಫಲಾನುಭವಿಗಳ ಆಯ್ಕೆಪಟ್ಟಿ ತಯಾರಿಸಬೇಕಾದವರು ಆಯಾ ಭಾಗದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು. ಆದರೆ ಕನಕಗಿರಿ ಕ್ಷೇತ್ರದಲ್ಲಿ ಅಧಿಕಾರಿಗಳ ಕರ್ತವ್ಯದಲ್ಲಿ ಮೂಗು ತೂರಿಸುವ ಶಾಸಕ ಬಸವರಾಜ ದಢೇಸೂಗೂರು ಫಲಾನುಭವಿ ರೈತರನ್ನೇ ಇವರು ಕಾಂಗ್ರೆಸ್ ನವರು, ಅವರು ಬಿಜೆಪಿ ಪರ ರೈತರು ಎಂದು ವಿಭಜನೆ ಮಾಡುತ್ತಿದ್ದು, ತಮಗೆ ಬೇಕಾದವರಿಗೆ, ಹಾಗೂ ತಾವು ಬಯಸಿದ್ದನ್ನು ಕೊಡುವವರ ಹೆಸರನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಈ ಕುರಿತು ಶಾಸಕ ಬಸವರಾಜ ದಢೇಸೂಗೂರು ಅವರ ಪ್ರತಿಕ್ರಿಯೆ ಪಡೆಯಲು ಅವರ ಮೊಬೈಲ್ ಸಂಖ್ಯೆಗೆ ಹಲವು ಬಾರಿ ಸಂಪರ್ಕ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ಅವರ ಆಪ್ತ ಸಹಾಯಕರೂ ಸಹ ಶಾಸಕರ ಹಾದಿಯನ್ನೇ ಅನುಸರಿಸಿದರು. ಭೀಮಶಿ ಎನ್ನುವ ಆಪ್ತ ಕರೆ ಸ್ವೀಕರಿಸಿದರೂ ಸಾಹೇಬ್ರು ಜನರ ಜೊತೆ ಬ್ಯೂಜಿ ಇದಾರೆ, ಹೇಳ್ತಿನಿ ಎನ್ನುತ್ತಾರೆಯೇ ಹೊರತು ಶಾಸಕರಿಂದ ಪ್ರತಿಕ್ರಿಯೆ ಮಾತ್ರ ಸಿಗಲಿಲ್ಲ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅನುದಾನ ಕಡಿತ: ಸರಕಾರದ ನೀತಿಗೆ ಸೈಯದ್ ಕೊಪ್ಪಳ ಆಕ್ರೋಶ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ:

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ಕಡಿತ ಮಾಡಿರುವುದು ಇಡೀ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬುದ್ಧ, ಪಾರ್ಸಿ ಮತ್ತು ಜೈನ ಸಮುದಾಯಗಳ ಅಭಿವೃದ್ದಿಗೆ ಹಿನ್ನಡೆಯಾಗಲಿದೆ ಎಂದು ಮುಸ್ಲಿಂ ಚಿಂತಕರ ಚಾವಡಿಯ ಮುಖಂಡ ಸೈಯದ್ ಖಾಲೀದ ಕೊಪ್ಪಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅನುದಾನ ಕಡಿತಗೊಳಿಸಿರುವದನ್ನು ಖಂಡಿಸಿ ಗದಗ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ವಿದೇಶದಲ್ಲಿ ಉನ್ನತ ವ್ಯಾಸಂಗದ ಯೋಜನೆ, ನಾಗರೀಕ ಪರೀಕ್ಷೆ ತರಬೇತಿ ಯೋಜನೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ, ವಿದ್ಯಾ ಸಿರಿಯಂತಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದಂತಹ ಯೋಜನೆಗಳ ೨೦೧೯-೨೦ನೇ ಸಾಲಿನ ಅನುದಾನ ಸರಕಾರ ಇಲ್ಲಿಯವರೆಗೆ ಬಿಡುಗಡೆಗೊಳಿಸದೇ ಇರುವದು ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

ರಾಜ್ಯದಲ್ಲಿ ೨೦೧೬-೧೭ರಿಂದ ಜಾರಿಯಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಸಂಶೋಧನೆ (ಪಿ.ಎಚ್.ಡಿ./ಎಂ.ಫೀಲ್) ಕೈಗೊಳ್ಳಲು ಪ್ರತಿ ತಿಂಗಳು ನೀಡಲಾಗುತ್ತಿದ್ದ ಪ್ರೋತ್ಸಾಹಧನ ೨೫೦೦೦.ರೂಗಳನ್ನು ೮೩೩೩.ರೂಗಳಿಗೆ ಕಡಿತಗೊಳಿಸಿ ಬಡ ವರ್ಗದ ಮಕ್ಕಳ ಶೈಕ್ಷಣಿಕ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ರಾಜ್ಯ ಬಿಜೆಪಿ ಸರಕಾರ ನಡೆಸಿದೆ ಎಂದು ಸೈಯದ್ ಆರೋಪಿಸಿದರು.

ಮುಸ್ಲಿಂ ಚಿಂತಕರ ಚಾವಡಿಯ ಜಿಲ್ಲಾ ಮುಖಂಡ ಆರ್.ಕೆ. ಬಾಗವಾನ ಮಾತನಾಡಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಈ ಹಿಂದೆ ನಿಗದಿಗೊಳಿಸುತ್ತ ಬಂದಿರುವ ಅನುದಾನ ಕಡಿತಗೊಳಿಸಿದ್ದಲ್ಲದೇ ಹಲವು ಯೋಜನೆಗಳನ್ನು ಕೈ ಬಿಡಲಾಗಿದ್ದು ೨೦೧೯-೨೦ನೇ ಸಾಲಿನಲ್ಲಿ ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು ೧೮೯೭.೦೦ಕೋ.ರೂ.ಗಳಿಂದ ಇದೀಗ ಮತ್ತೆ ೧೦೦೫. ಕೋಟಿ. ಅನುದಾನ ಕಡಿತಗೊಳಿಸಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಳೆದ ೫ ವ?ಗಳಿಂದ ಜಾರಿಯಲ್ಲಿಟ್ಟಿದ್ದ ಹಲವು ಜನಪರ ಕಲ್ಯಾಣ ಯೋಜನೆಗಳ ಅನುದಾನ ಕಡಿತಗೊಳಿಸಿರುವುದರಿಂದ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ದಿಗೆ ಹಿನ್ನಡಯಾಗಲಿದೆ. ಕೂಡಲೇ ಸರ್ಕಾರ ಇಲಾಖೆಗೆ ನೀಡುತ್ತಿದ್ದ ಅನುದಾನವನ್ನು ಯಥಾವತ್ತಾಗಿ ಮುಂದುವರೆಸಬೇಕೆಂದು ಒತ್ತಾಯಿಸಿದರು.

ಶೈಕ್ಷಣಿಕ ಸಾಲದ ಯೋಜನೆ ಸಹ ಈ ವ? ದಾರಿ ತಪ್ಪಿದೆ, ಈ ಯೋಜನೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತಗೊಳ್ಳುವಂತೆ ಮಾಡಿದೆ. ಅರಿವು ಯೋಜನೆಯ ಮೂಲಕ ಸರಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಿಗಮದಿಂದ ಶೈಕ್ಷಣಿಕ ಸಾಲ ನೀಡಲಾಗುತ್ತಿತ್ತು, ಈ ವ? ಸದರಿ ಸಾಲವನ್ನು ವಿದ್ಯಾರ್ಥಿಗಳು ಕೋರ್ಸುಗಳಿಗೆ ಪಾವತಿಸುವ ಮೊತ್ತದ ಅರ್ದ ಮೊತ್ತ ಮಾತ್ರ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಸಾಲದ ರೂಪದಲ್ಲಿ ನೀಡುತ್ತಿದೆ.

ಒಂದು ಕಡೆ ಪ್ರೋತ್ಸಾಹಧನ ಕಡಿತಗೊಳಿಸಿ, ಮತ್ತೊಂದು ಕಡೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನದ ಅನುದಾನ ಕಡಿತಗೊಳಿಸಿದ್ದಲ್ಲದೇ ಶುಲ್ಕವಿನಾಯತಿ, ವಿದ್ಯಾಸಿರಿ ಅನುದಾನವೂ ಸರಕಾರ ನೀಡುತ್ತಿಲ್ಲ, ಇದನ್ನು ಹೊರತುಪಡಿಸಿ ಇದ್ದಂತಹ ಅರಿವು ಶೈಕ್ಷಣಿಕ ಸಾಲದ ಯೋಜನೆಯನ್ನು ಮೊಟುಕುಗೊಳಿಸಲು ಹೊರಟಿರುವದು ಸರಕಾರ ಅಲ್ಪಸಂಖ್ಯಾತ ಸಮುದಾಯವನ್ನು ಸಂಪೂರ್ಣ ಮೂಲೆಗುಂಪು ಮಾಡುವ ಶಪಥ ಮಾಡಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ರಾಜ್ಯ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂದಿಸಿದ ಯಾವುದೇ ಹೊಸ ಯೋಜನೆ ಜಾರಿಗೊಳಿಸದೇ ಇದ್ದರೂ ಈಗಾಗಲೇ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ಮುಂದುವರೆಸಬೇಕು, ಸದರಿ ಯೋಜನೆಗಳನ್ನು ಮುಂದುವರೆಸಲು ಬೇಕಾಗುವ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಹ್ಮದ ಶಫಿ ನಾಗರಕಟ್ಟಿ, ಭಾಷಾಸಾಬ ಮಲಸಮುದ್ರ, ಎಂ.ಎ.ಕುರಹಟ್ಟಿ, ಶೌಕತ್ ಕಾತರಕಿ, ಅಕ್ಬರ ಅಲಿಬೇಗ, ದಾವುದ್ ಜಾಮಾಲ್, ಮುನ್ನಾ ಡಾಲಾಯತ್, ಖಾಸಿಂ ಧಾರವಾಡ, ತನ್ವೀರ ಹಾಜಿ., ಮೈನುದ್ದೀನ್ ನದಾಫ್, ದಾದು ಮುಂಡರಗಿ, ಎಂ.ಡಿ.ಇಸ್ಮಾಯಿಲ್, ಜಾಫರ ಡಾಲಾಯತ್ ಭಾಗವಹಿಸಿದ್ದರು.

ಅನುದಾನ ಕಡಿತಗೊಳಿಸಲು ಕೋವಿಡ್-೧೯ ಕಾರಣವಿದ್ದರೂ ಯಾವುದೇ ಸರಕಾರ ಜನಪರ ಕಲ್ಯಾಣ ಇಲಾಖೆಗಳ ಯೋಜನೆಗಳನ್ನು ಕಡಿತಗೊಳಿಸುವದು ಸಾಮಾಜಿಕ ಬದ್ದತೆಯ ದೃಷ್ಟಿಯಿಂದ ಒಳ್ಳೆಯ ಆಡಳಿತದ ಮಾದರಿಯಾಗಲಾರದು. ಸರಕಾರದಲ್ಲಿ ಯಾವುದೇ ಇಲಾಖೆಗೂ ಇರದ ಅನುದಾನ ಕಡಿತ ಕೇವಲ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮಾತ್ರ ಏಕೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.


-ದಾವಲಸಾಬ ತಾಳಿಕೋಟಿ

ಗ್ರಾಮ ಪಂಚಾಯತ ಚುನಾವಣೆ; ಎರಡನೇ ದಿನಕ್ಕೆ 23 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಮೊದಲ ಹಂತದ 53 ಗ್ರಾಮ ಪಂಚಾಯತಗಳ 801 ಸ್ಥಾನಗಳ ಚುನಾವಣೆಯು ಡಿ.22 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಮಂಗಳವಾರದವರೆಗೆ (ಡಿ.8) ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಒಟ್ಟು 23 ನಾಮಪತ್ರಗಳು ಸಲ್ಲಿಕೆಯಾಗಿವೆ.

ಗದಗ 07, ಲಕ್ಷ್ಮೇಶ್ವರ 10 ಹಾಗೂ ಶಿರಹಟ್ಟಿ ತಾಲ್ಲೂಕುಗಳಲ್ಲಿ 06 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಚುನಾವಣಾ ವಿಭಾಗ ತಿಳಿಸಿದೆ.

ಬೈಕ್‌ಗಳ ಢಿಕ್ಕಿ; ಮೂವರ ಸಾವು

0

ವಿಜಯಸಾಕ್ಷಿ ಸುದ್ದಿ, ಕನಕಗಿರಿ:
ಗಂಗಾವತಿ ತಾಲ್ಲೂಕಿನ ಕೆಸರಹಟ್ಟಿ ಅರಳಹಳ್ಳಿ ಮಧ್ಯದಲ್ಲಿ ಎರಡು ಬೈಕ್ ಗಳ ಮಧ್ಯ ಭೀಕರ ಅಪಘಾತ ಸೋಮವಾರ ರಾತ್ರಿ ನಡೆದಿದೆ,
ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.

ಒಬ್ಬರು ಸ್ಥಳದಲ್ಲೇ ಮಲಕನಮರಡಿ ಗ್ರಾಮದ ಶಂಕ್ರಪ್ಪ (30) ಮೃತಪಟ್ಟರೆ, ಇನ್ನೊಬ್ಬರು ಸಹ ಮಲಕನಮರಡಿ ಗ್ರಾಮದ ವೆಂಕಟೇಶ(40) ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಒಂದು ಬೈಕ್‌ನಲ್ಲಿ ಮೂವರು ಸಂಚರಿಸುತ್ತಿದ್ದರು ಎನ್ನಲಾಗುತ್ತಿದೆ.

ಇನ್ನೊಂದು ಬೈಕ್‌ನಲ್ಲಿ ಗಂಗಾವತಿ ನಗರದ ಗುಂಡಮ್ಮಕ್ಯಾಂಪ್ ನಿವಾಸಿ ಮೌಲಾಹುಸೇನ್ (25) ತನ್ನ ಸಹೋದರ ಮಾವನ ಮದುವೆಗಾಗಿ ಮುದ್ಗಲ್ ಪಟ್ಟಣಕ್ಕೆ ಒಬ್ಬನೇ ಸಂಚರಿಸುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.

ಮೌಲಾಹುಸೇನ್‌ನ ತಂದೆ ಕೆಲ ದಿನಗಳ ಹಿಂದ ಸಾವನ್ನಪ್ಪಿದ್ದರು. ಇರುವವನು ಒಬ್ಬನೇ ಮಗ ಟೈಲ್ಸ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಲಕನಮರಡಿ ಗ್ರಾಮದ ಇನ್ನೊರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಅಪಘಾತಕ್ಕೆ ಕಾರಣ..!

ಗಂಗಾವತಿ ಭಾಗದಲ್ಲಿ ಈಗ ಭತ್ತ ಕಟಾವು ನಡೆಯುತ್ತಿದೆ. ಅದರಿಂದ
ಗಂಗಾವತಿಯಿಂದ ಕನಕಗಿರಿ ರಸ್ತೆಯಲ್ಲಿ ಎಲ್ಲಾ ರೈತರು ರಾಜ್ಯ ಹೆದ್ದಾರಿ ಪಕ್ಕದಲ್ಲೇ ಭತ್ತದ ರಾಶಿ ಹಾಕಿರುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಅನೇಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಮತ್ತು ಗಾಯಗೊಂಡ ಉದಾಹರಣೆಗಳು ಸಾಕಷ್ಟು ಇವೆ.
ರೈತರು ಇದಕ್ಕೆ ಪರ್ಯಾಯವಾಗಿ ರಸ್ತೆ ಬಿಟ್ಟು ಬೇರಡೆ ವ್ಯವಸ್ಥೆ ಮಾಡಿದ್ದೆ ಆದಲ್ಲಿ ಅಪಘಾತ ತಡೆಯಬಹುದು ಎನ್ನಲಾಗುತ್ತಿದೆ. ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಕಳ್ಳತನದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಕಳ್ಳತನದ ಪ್ರಕರಣವೊಂದರ ವಿಚಾರಣೆಗೆ ಕರೆ ತಂದಿದ್ದ ಆರೋಪಿಯೊಬ್ಬ ಪೊಲೀಸರಿಬ್ಬರಿಗೆ ಚೆಳ್ಳೆಹಣ್ಣು ತಿನಿಸಿ ಠಾಣೆಯಿಂದಲೇ ಪರಾರಿಯಾದ ಘಟನೆ ಜಿಲ್ಲೆಯ ರೋಣದಲ್ಲಿ ನಡೆದಿದೆ.

ರೋಣ ತಾಲ್ಲೂಕಿನ
ಶಾಂತಗೇರಿ ಗ್ರಾಮದ ರಾಜೇಸಾಬ ಅಬ್ದುಲ್ ಸಾಬ ರಾಜೇಖಾನ್ ಎಂಬ ಆರೋಪಿಯೇ ರೋಣ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಾತ.

ಈತ ಈ ಹಿಂದೆ ಕಳ್ಳತನದ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಾಗ ಈ ಘಟನೆ ನಡೆದಿದೆ.

ಆರೋಪಿ ರಾಜೇಸಾಬ್ ಮೂತ್ರ ವಿಸರ್ಜನೆಯ ನೆಪ ಮಾಡಿ ಠಾಣೆಯಿಂದ ಹೊರಬಂದಾಗ ಕಾವಲಿಗಿದ್ದ ಇಬ್ಬರು ಪೊಲೀಸರನ್ನು ನೂಕಿ ಪರಾರಿಯಾಗಿದ್ದಾನೆ.

ಈ ಕುರಿತು ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ವಿನೋದ ಪೂಜಾರಿ ಪರಾರಿಯಾಗಿರುವ ಆರೋಪಿ ರಾಜೇಸಾಬ್ ನ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟು ಬಂದ್; ಅನ್ನದಾತರ ಹೋರಾಟಕ್ಕೆ ಬೆಂಬಲ

0

ವಿಜಯಸಾಕ್ಷಿ ಸುದ್ದಿ, ಗದಗ

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ವಿವಿಧ ರೈತ ಸಂಘ, ದಲಿತ ಸಂಘ ಹಾಗೂ ದಲಿತ ಪರ ಸಂಘಟನೆಗಳು ನಗರದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ನಗರದ ಗಾಂಧಿ ವೃತ್ತದಿಂದ ಟಾಂಗಾ ಕೂಟ ಮೂಲಕ ತೆರಳುತ್ತಿರುವ ಪ್ರತಿಭಟನಾ ರ್ಯಾಲಿ ಬರುತ್ತಿದ್ದಂತೆ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ ಮಾಡುವ ಮೂಲಕ ಬೆಂಬಲಿಸಿದ್ದಾರೆ.

ಅಗತ್ಯ ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ರೀತಿಯ ಅಂಗಡಿಗಳ ಮಾಲೀಕರು ಅಂಗಡಿಗಳ ಬಾಗಿಲು ಹಾಕಿ ಕೇಂದ್ರ ಸರ್ಕಾರದ ಕೃಷಿ ವಿರೋಧಿ ಕಾಯ್ದೆ ವಿರೋಧಿಸಿ ಅನ್ನದಾತರು ಆಚರಿಸುತ್ತಿರುವ ಭಾರತ್ ಬಂದ್ ಗೆ ಬೆಂಬಲ ನೀಡಿದರು.

ಹರಿಹರದಲ್ಲಿ ಕುಸ್ತಿ ಹಣಾಹಣಿ; ಗದಗ ಕುಸ್ತಿ ಕ್ಷೇತ್ರಕ್ಕೆ ಮತ್ತೊಂದು ಗರಿಮೆ

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಹಾವಳಿಯಿಂದಾಗಿ ಸ್ತಬ್ಧವಾಗಿದ್ದ ಕ್ರೀಡಾ ಚಟುವಟಿಕೆಗಳು ಎಂಟು ತಿಂಗಳ ಬಳಿಕ ಚುರುಕುಗೊಂಡಿದ್ದು, ಇದರಿಂದ ಮತ್ತೆ ಕುಸ್ತಿಯ ಸದ್ದು ಕೇಳ ತೊಡಗಿದಂತಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಕರ್ನಾಟಕ ರಾಜ್ಯ ಕುಸ್ತಿ ಅಸೋಶಿಯೆಶನ್ ಹಾಗೂ ನಾಡಮಂದ್ ಸಾವಲಿ ಗರಡಿ ಮನೆ ಸಹಯೋಗದಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಗದಗನ ಅಂತರಾಷ್ಟ್ರೀಯ ಕುಸ್ತಿಪಟು ಕುಮಾರಿ ಪ್ರೇಮಾ ಹುಚ್ಚಣ್ಣವರ ಬಂಗಾರದ ಪದಕ ಪಡೆದಿದ್ದಾರೆ.

ಕರ್ನಾಟಕ ಕಂಠೀರವ, ಕರ್ನಾಕ ಕೇಸರಿ, ಕರ್ನಾಟಕ ಕುಮಾರ, ಕರ್ನಾಟಕ ಕಿಶೋರ, ಒನಕೆ ಓಬವ್ವ, ವೀರರಾಣಿ ಕಿತ್ತೂರ ಚೆನ್ನಮ್ಮ ವಿಭಾಗದ ಹಿರಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಕುಮಾರಿ ಪ್ರೇಮಾ ಹುಚ್ಚಣ್ಣವರ ಬಂಗಾರದ ಪದಕದೊಂದಿಗೆ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆಯುವ ಮೂಲಕ ಗದಗ ಕುಸ್ತಿ ಕ್ಷೇತ್ರಕ್ಕೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ. ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಇದ್ದರು.

ಭಾರತ್ ಬಂದ್; ಬಣಗುಡುತ್ತಿರುವ ಎಪಿಎಂಸಿ

0

ವಿಜಯಸಾಕ್ಷಿ ಸುದ್ದಿ, ಗದಗ

ದೇಶದ ವಿವಿಧ ರೈತ ಸಂಘಟನೆಗಳು ಭಾರತ್ ಬಂದ್ ಕರೆ ನೀಡಿರುವ ಹಿನ್ನಲೆ ಗದಗನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ವ್ಯಾಪಾರ ವಹಿವಾಟು ಬಂದ್ ಮಾಡಿದೆ.

ನಗರದ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಎಪಿಎಂಸಿಯಲ್ಲಿ ವ್ಯಾಪಾರ, ವಹಿವಾಟು, ಸಂತೆ, ಖರೀದಿ ಮಾರುಕಟ್ಟೆ ಎಲ್ಲವನ್ನೂ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದೆ.

ಎಪಿಎಂಸಿಯ ಹಮಾಲರು, ದಲ್ಲಾಳಿ ವರ್ತಕರು, ಖರೀದಿ ವರ್ತಕರು, ಕಾರ್ಮಿಕರು ಬಂದ್ ಆಚರಿಸುತ್ತಿದ್ದು, ಬಂದ್ ನಿಂದಾಗಿ ಎಪಿಎಂಸಿ ಆವರಣ ಬಣಗುಡುತ್ತಿದೆ.

ಭಾರತ್ ಬಂದ್: ಗದಗನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್  ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಗರದ ವಿವಿಧೆಡೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ನಗರದ ಗಾಂಧಿ ವೃತ್ತ, ಮುಳಗುಂದ ನಾಕಾ, ಚೆನ್ನಮ್ಮ ವೃತ್ತದಲ್ಲಿ ಸೂಕ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಭಾರತ್ ಬಂದ್ ಗೆ ಜಿಲ್ಲೆಯಲ್ಲಿ ಹಲವು ರೈತ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಎಂಟು ಗಂಟೆಯವರೆಗೂ ನಗರದಲ್ಲಿ ಬಂದ್ ವಾತಾವರಣ ಕಂಡು ಬರುತ್ತಿಲ್ಲ. ಎಂದಿನಂತೆ ವಾಹನ ಸಂಚಾರ ಇದೆ.

ಗ್ರಾ.ಪಂ. ಚುನಾವಣೆ: ಮೊದಲ ದಿನ ಐವರಿಂದ ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಮೊದಲ ಹಂತದ 53 ಗ್ರಾಮ ಪಂಚಾಯತಿಗಳ 801 ಸ್ಥಾನಗಳ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಉಮೇದುವಾರಿಕೆ ಸಲ್ಲಿಕೆಯ ಮೊದಲ ದಿನವಾದ ಸೋಮವಾರದಂದು 5 ನಾಮಪತ್ರಗಳು ಸಲ್ಲಿಕೆಯಾಗಿವೆ.

ಗದಗ ತಾಲ್ಲೂಕಿನಲ್ಲಿ 04 ಮತ್ತು ಶಿರಹಟ್ಟಿ ತಾಲ್ಲೂಕಿನಲ್ಲಿ 01 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಚುನಾವಣಾ ವಿಭಾಗ ತಿಳಿಸಿದೆ.

error: Content is protected !!