ಪಟ್ಟಣದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸ್ವಲ್ಪ ದಿನಗಳ ಕಾಲ ಬಿಡುವು ನೀಡಿದ್ದ ಮಳೆಯು ಇದ್ದಕ್ಕಿದ್ದಂತೆ ಸುರಿದ ಪರಿಣಾಮ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿಯೇ ತೋಯಿಸಿಕೊಂಡು ಮನೆ ಸೇರಬೇಕಾಯಿತು.
ತಾಲೂಕಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗಿಯಾಗಲು ಆಗಮಿಸಿದ್ದ ಬಹುತೇಕ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ರಸ್ತೆಗಳು ವಿಪರೀತ ಹದಗೆಟ್ಟಿದ್ದು, ಇದರಿಂದ ಸಾರ್ವಜನಿಕರಿಗೆ ಸಂಚಾರ ತ್ರಾಸದಾಯಕವಾಗುತ್ತಿದೆ. ಶೀಘ್ರವಾಗಿ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಎಂದು ಗದಗ ಮತಕ್ಷೇತ್ರದ ಶಾಸಕ ಎಚ್.ಕೆ. ಪಾಟೀಲರು ಕೋರಿದ್ದಾರೆ.
ಈ ಕುರಿತು ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವ ಶಾಸಕರು, ಹದಗೆಟ್ಟಿರುವ ರಸ್ತೆಗಳಿಂದಾಗಿ ಸಾರ್ವಜನಿಕರು ಎಲ್ಲಿ, ಯಾವ ರೀತಿಯಲ್ಲಿ ಅಪಘಾತಗಳಾಗುತ್ತವೆಯೋ ಎಂಬ ಭಯದಿಂದಲೇ ರಸ್ತೆಗಿಳಿಯುವಂತಾಗಿದೆ. ಕೆಲವೆಡೆ ಸಂಚಾರವೇ ದುಸ್ತರವಾಗಿದೆ.
ಯುದ್ಧೋಪಾದಿಯಲ್ಲಿ ಅವಳಿ ನಗರದ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಿಗಳಿಗೆ, ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪತ್ರಮುಖೇನ ವಿನಂತಿಸಿದ್ದಾರೆ.
ಮೇ 15ರಂದು ಬೆಳಗಿನ ಜಾವ ಗದಗ ಬಾಪೂಜಿ ನಗರದಲ್ಲಿರುವ ಮನೆಯೊಂದರ ಬಾಗಿಲಿಗೆ ಹಾಕಿದ್ದ ಕೀಲಿಯನ್ನು ಮುರಿದು ಒಳನುಗ್ಗಿ, ಟ್ರೆಝರಿಯ ಬೀಗ ಮುರಿದು, ಅದರೊಳಗಿದ್ದ 1.05 ಲಕ್ಷ ರೂ. ಬೆಲೆಬಾಳುವ ಬಂಗಾರದ ತಾಳಿ ಸರವನ್ನು ಕಳ್ಳತನ ಮಾಡಿದ ಕಳ್ಳನನ್ನು ಶಹರ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ವಸಂತ ಎಂ.ಎಲ್ ಮೇ 16ರಂದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಕಲಂ 454, 457, 380ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಬೇಧಿಸುವ ಉದ್ದೇಶದಿಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾರ್ಗದರ್ಶನದಲ್ಲಿ ಡಿಸಿಆರ್ ಬಿ ಡಿಎಸ್‌ಪಿ ತಮ್ಮರಾಯ ಪಾಟೀಲ ನೇತೃತ್ವದಲ್ಲಿ ಪಿಐ ಜಯಂತ ಗೌಳಿ, ಮಹಿಳಾ ಪಿಎಸ್‌ಐ ಜಿ.ಟಿ. ಜಕ್ಕಲಿ, ಆರ್.ಆರ್. ಮುಂಡೆವಾಡಗಿ, ಯೂಸುಫ್ ಜ ಮುಲಾ, ಸಿಬ್ಬಂದಿಗಳಾದ ವೈ.ಬಿ.ಪಾಟೀಲ, ಎಸ್.ಎಸ್. ಮಾವಿನಕಾಯಿ, ಉಮೇಶ ಸುಣಗಾರ, ಕೆ.ಡಿ. ಜಮಾದಾರ, ಪಿ.ಎಸ್. ಕಲ್ಲೂರ, ಪಿ.ಎ.ಭರಮಗೌಡ್ರ, ಅಣ್ಣಪ್ಪ ಕವಲೂರ ಒಳಗೊಂಡು ವಿಶೇಷ ತಂಡವನ್ನು ರಚಿಸಿದ್ದರು.
ಸದರಿ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಾದ ಸುನೀಲ್ ಸಂಜೀವ ಮುಳಗುಂದ ಎಂಬುವವನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ವಸ್ತುಗಳು ಹಾಗೂ ಕಳುವಾಗಿದ್ದ ಬಂಗಾರದ ತಾಳಿ ಸರವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ಈ ವಿಶೇಷ ತಂಡದ ಕಾರ್ಯಾಚರಣೆಗೆ ಎಸ್‌ಪಿ ಶಿವಪ್ರಕಾಶ ದೇವರಾಜು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶ್ವಗುರು ಮೋದಿ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದ್ದರೆ, ಈಗ ಅವರ ಚೇಲಾ ಕಾಂಗ್ರೆಸ್ ಬ್ಯಾನ್ ಮಾಡಬೇಕು ಅಂತಿದ್ದಾರೆ. ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಿ. ಪಿಎಫ್‌ಐ, ಎಸ್‌ಡಿಪಿಐ ಜೊತೆಗೆ ಯಾರಿದ್ದಾರೆ ಎಂಬ ವಿಚಾರ ಗೊತ್ತಾಗುತ್ತದೆ. ತಕ್ಷಣವೇ ನಳೀನ್‌ಕುಮಾರ್ ಕಟೀಲ್ ಅವರ ಮಂಪರು ಪರೀಕ್ಷೆ ನಡೆಸಲಿ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಪಿಎಫ್‌ಐ-ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಬೇಕೆಂಬ ನಳಿನ್‌ಕುಮಾರ್ ಕಟೀಲ್ ಹೇಳಿಕೆಯ ವಿಚಾರವಾಗಿ ಸಿಟಿ. ರವಿಯವರ ಮಾತಿಗೆ ಹರಿಪ್ರಸಾದ್ ಮೈಸೂರಿನಲ್ಲಿಂದು ತಿರುಗೇಟು ನೀಡಿದರು.
8 ವರ್ಷದಿಂದ ಇವರು ಕೈಗೆ ಗೋರಂಟಿ ಹಾಕೊಂಡಿದ್ದರಾ? ಇದು ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಮಾಡುತ್ತಿರುವ ಗಿಮಿಕ್ ಅಷ್ಟೇ. ಯಾವಾಗ ಗುಜರಾತ್‌ನಲ್ಲಿ ಚುನಾವಣೆಯಿರುತ್ತದೆಯೋ, ಆಗೆಲ್ಲ ಮೋದಿಗೆ ಜೀವಭಯವಿದೆ ಎನ್ನುವಂತೆ ಬಿಂಬಿಸುತ್ತಾರೆ. ಆ ಮೂಲಕ ಅನುಕಂಪ ಗಿಟ್ಟಿಸಿ ಮತ ಪಡೆಯುತ್ತಾರೆ.
ನಾವು ಏನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ಲೂಟಿ ರವಿಯಿಂದ ಕಲಿಯಬೇಕಾದ ಅಗತ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ನಮಗೆ ಏನು ಬೇಕೋ ಅದನ್ನು ಮಾಡುತ್ತೇವೆ. ಇವರು ಮೊದಲು ಸಂವಿಧಾನಕ್ಕೆ ಗೌರವ ಕೊಡುವದನ್ನು ಕಲಿಯಲಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ರೋಣ ಮತಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಶ್ರೀ ಆನೇಕಲ್ ದೊಡ್ಡಯ್ಯನವರ ಅಭಿಮಾನಿ ಬಳಗದ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಡಂಬಳ ಗ್ರಾಮ ಪಂಚಾಯತಿಯ ಪೌರಕಾರ್ಮಿಕರಿಗೆ ಬಟ್ಟೆ ಹಾಗೂ ಸಿಹಿ ತಿನಿಸುಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮೈಲಾರಪ್ಪ ಗೊರವರ, ಯಲ್ಲಪ್ಪ ಉಪ್ಪಾರ, ಪ್ರಕಾಶ ಭಜಮ್ಮನವರ, ಗವಿ ಮಠದ, ಗವಿಶಿದಪ್ಪ ಗದಗಿನ, ಕಳಸಪ್ಪ ಗೊರವರ, ಮಾಜಿ ಸೈನಿಕರಾದ ಹನುಮಂತಪ್ಪ ಗಡಗಿ, ಕೃಷ್ಣ ಕಟ್ಟೆನವರ, ಕಾಶಿಮಲಿ ಬೆನಕೊಪ್ಪ, ಕರಿಯಪ್ಪ ಹೊಸಕೇರಿ ಸೇರಿದಂತೆ ಇನ್ನೂ ಅನೇಕ ಆಮ್ ಆದ್ಮಿ ಪಾರ್ಟಿಯ ಸದಸ್ಯರು, ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ಗದಗ ನಗರದ ವಕೀಲ ಚಾಳ ನಿವಾಸಿ ಕನಕಪ್ಪ ಎಂಬಾತ ಮನೆಯಲ್ಲಿಯೇ ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಅಬಕಾರಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಬಂಧಿತನಿಂದ ಹತ್ತು ಸಾವಿರ ರೂ. ಮೌಲ್ಯದ 600 ಗ್ರಾಮ ತೂಕದ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಡಿಸಿ ಭರತೇಶ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಈ ದಾಳಿ ಮಾಡಿದ್ದು, ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆಯ ಕಟ್ಟಡದ ಫಿಟ್ನೆಸ್ ಕುರಿತು ಸುರಕ್ಷತಾ ಸರ್ಟಿಫಿಕೇಟ್ ಕೊಡಲು ಲಂಚ ಕೇಳಿದ್ದ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಗದಗ ನಗರದ ಎಪಿಎಮ್ ಸಿ ಆವರಣದಲ್ಲಿ ಇರುವ ಅಗ್ನಿಶಾಮಕ ದಳ ಕಛೇರಿಯಲ್ಲಿ ನಡೆದಿದೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಎಸ್ ಎಸ್ ಕೂಡ್ಲಮಠ ಶಾಲೆಯ ಕಟ್ಟಡದ ಗುಣಮಟ್ಟದ ಸುರಕ್ಷತಾ ಪ್ರಮಾಣ ಪತ್ರ ಕೊಡಲು ಏಳು ಸಾವಿರ ಲಂಚ ಕೇಳಿದ ಆರೋಪದಲ್ಲಿ ಅಧಿಕಾರಿ ಎನ್ ಎಸ್ ಕಗ್ಗಲಗೌಡರ ಎಂಬುವವರು ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯ ಸಿ. ಬಿ ಮೊಗಲಿ ಎಂಬುವವರು ಲೋಕಾಯುಕ್ತರ ಕಚೇರಿಗೆ ದೂರು ನೀಡಿದ್ದರು.
ಅಗ್ನಿಶಾಮಕ ದಳದ ಜಿಲ್ಲಾ ಮಟ್ಟದ ಅಧಿಕಾರಿ ಎನ್ ಎಸ್ ಕಗ್ಗಲಗೌಡರ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ್ ಹಾಗೂ ಆಜೀಜ್ ಕಲಾದಗಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಸಿಬ್ಬಂದಿಗಳಾದ ವಿರೂಪಾಕ್ಷ ಅರಿಷಿಣದ, ಎಸ್ ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್, ಗುಬ್ಬಿ, ವಾಹನ ಚಾಲಕರಾದ ನೈನಾಪೂರ ಹಾಗೂ ಹೆಬ್ಬಳ್ಳಿ ಈ ಕಾರ್ಯಾಚರಣೆಯಲ್ಲಿ ಇದ್ದರು.
ಅಕ್ಕನ ಮಗಳ ಬರ್ಥ್ ಡೇ ಆಚರಣೆಗೆ ಬೈಕ್ ನಲ್ಲಿ ಹೊರಟಿದ್ದ ಇಬ್ಬರು ಯುವಕರು ಬೈಕ್ ಸಮೇತ ರಸ್ತೆಯ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ದುರ್ಘಟನೆ ನಿನ್ನೆ ರಾತ್ರಿ ಜರುಗಿದೆ.
ಗದಗ ತಾಲೂಕಿನ ನಾಗಾವಿ ಗ್ರಾಮದ ಬಳಿ ನಿನ್ನೆ ರಾತ್ರಿ ಈ ದುರಂತ ಸಂಭವಿಸಿದ್ದು, ಲಕ್ಕುಂಡಿ ಗ್ರಾಮದ ಮಂಜುನಾಥ್ ಹಾಗೂ ಬಸವರಾಜ್ ಎಂಬ ಇಬ್ಬರೂ ಗೆಳೆಯರು ಯಲಿಶಿರುಂದ ಗ್ರಾಮಕ್ಕೆ ಅಕ್ಕನ ಮಗಳ ಬರ್ಥಡೇ ಆಚರಣೆ ಮಾಡಲು ಗದಗನಿಂದ ಕೇಕ್ ಖರೀದಿಸಿ ಬೈಕ್ ನಲ್ಲಿ ಹೊರಟಿದ್ದರು ಎನ್ನಲಾಗಿದೆ.
ಕಳೆದ 20ದಿನಗಳ ಹಿಂದೆ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿತ್ತು. ಆ ಸಂದರ್ಭದಲ್ಲಿ ನಾಗಾವಿ ಬಳಿ ಕೆರೆ ಕೋಡಿ ಒಡೆದು ರಸ್ತೆ ಕೊಚ್ಚಿಕೊಂಡು ಹೋಗಿ ದೊಡ್ಡ ಕಂದಕ ನಿರ್ಮಾಣವಾಗಿತ್ತು.
ಸುಮಾರು 30 ಅಡಿಗೂ ಹೆಚ್ಚು ಕಂದಕ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಯಾವುದೇ ನಾಮಫಲಕ ಇದುವರೆಗೂ ಅಳವಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೈಕ್ ಸವಾರರಿಗೆ ಗೊತ್ತಾಗದೇ ಇರುವುದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತದೆ.
ಮೃತ ಯುವಕರ ಕುಟುಂಬದವರ ಆಕ್ರಂಧನ ಮುಗಿಲ ಮುಟ್ಟಿದೆ.ಘಟನೆಯ ಮಾಹಿತಿ ತಿಳಿದ ಗದಗ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಮನವಿ ಸಲ್ಲಿಸಿದರೂ ಯಾರೂ ಇತ್ತ ಗಮನ ಹರಿಸದೇ ಇರುವುರಿಂದ ಆಕ್ರೋಶಗೊಂಡ ಬೆಟಗೇರಿ ೫ನೇ ವಾರ್ಡ್‌ನ ಸದಸ್ಯೆ ಲಕ್ಷ್ಮೀ ಖಾಕಿ ಅವರ ವಿರುದ್ಧ ಅದೇ ವಾರ್ಡಿನ ಸಾರ್ವಜನಿಕರು ಮಂಗಳವಾರ ಖಾಲಿ ಕೊಡ ಹಿಡಿದು, ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟಿಸಿದರು.
ಹು-ಧಾ ನೀರು ಸರಬರಾಜು ವಿಭಾಗದ ಪಾಲಿಕೆಯ ಗುತ್ತಿಗೆ ಕಾರ್ಮಿಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಿಂದ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ವಾರಕ್ಕೊಮ್ಮೆ ಬರುತ್ತಿದ್ದ ನೀರು ಇಂದು ತಿಂಗಳಿಗೊಮ್ಮೆ ಬರುವಂತಾಗಿದೆ. ಸಮಸ್ಯೆಯ ಗಂಭೀರತೆ ಅರಿತು ಅದನ್ನು ನಿವಾರಿಸಬೇಕಾದ ನಗರಸಭೆ ಅಧಿಕಾರಿಗಳು ಹಾಗೂ ರಾಜ್ಯ ಸರಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ನೀರು ಸರಬರಾಜು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ, ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕುಡಿಯುವ ನೀರು ಪೂರೈಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದ್ದು, ಸರ್ಕಾರ ಆಡಳಿತ ಮಂಡಳಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ರಸ್ತೆ ತಡೆ ಮಾಡಲು ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ ನಗರಸಭೆ ಮಾಜಿ ಸದಸ್ಯ ಮಂಜುನಾಥ ಮುಳಗುಂದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಪೊಲೀಸರು ಸಚಿವರು ಹೇಳಿದಂತೆ ಕೇಳುವ ಕೈಗೊಂಬೆಗಳಾಗಿದ್ದಾರೆ ಎಂದು ಟೀಕಿಸಿದರು.
ವಾಹನ ಸಂಚಾರಕ್ಕೆ ಅಡಚಣೆ
ಲಕ್ಷ್ಮೀಸಿಂಗನಕೆರಿ ಹಾಗೂ ಜನ್ನತ್‌ನಗರಕ್ಕೆ ಕುಡಿಯಲು ನೀರು ಸರಬರಾಜು ಮಾಡುವವರೆಗೂ ರಸ್ತೆ ತಡೆ ನಡೆಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದರು. ಸಾರ್ವಜನಿಕರು ಗದಗ-ರೋಣ ರಸ್ತೆಯ ಮೇಲೆ ಕುಳಿತು ರಸ್ತೆ ತಡೆ ಮಾಡಿದ್ದರಿಂದ ರಸ್ತೆ ಸಂಚಾರಕ್ಕೆ ತಡೆ ಉಂಟಾಯಿತು. ಅದರಿಂದಾಗಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ನೂರಾರು ವಾಹನಗಳು ಕಾಯ್ದು ನಿಂತವು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರ ಹಾಗೂ ಬೆಟಗೇರಿ ಠಾಣೆಯ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಅದಕ್ಕೂ ಸ್ಪಂದಿಸದ ಪ್ರತಿಭಟನಾಕಾರರು, ನೀರು ಬಿಡುವವರೆಗೂ ರಸ್ತೆತಡೆ ಮುಂದುವರಿಸುವುದಾಗಿ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.
ಈ ಸಂದರ್ಭದಲ್ಲಿ ಕರ್ನಾಟಕದ ರಕ್ಷಣಾ ವೇದಿಕೆಯ ಹನಮಂತಪ್ಪ ಅಬ್ಬಿಗೇರಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷರಾದ ಪೀರಸಾಬ ಕೌತಾಳ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದರು.
ಕಳೆದ ೩ ತಿಂಗಳಿಂದ ಕುಡಿಯಲು ನೀರು ಸಿಗದೇ ಸಂಕಷ್ಟವಾಗಿದೆ. ಈ ಹಿಂದೆ ಸುರಿದ ಮಳೆಗೆ ಮನೆಯ ಕಾಳು, ದವಸ ಧಾನ್ಯ, ಮನೆ ವಸ್ತುಗಳು ಸಂಪೂರ್ಣ ನಾಶವಾಗಿವೆ. ಆದರೂ ಕೂಡ ಯಾವ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಇತ್ತ ತಲೆ ಹಾಕಿಲ್ಲ. ನಗರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಗರಸಭೆಯಲ್ಲಿ ಹಣವಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನಗರಸಭೆಯಲ್ಲಿ ಕಾಮಗಾರಿ ಹೆಸರಿನಲ್ಲಿ ಹಣ ಲೂಟಿಯಾಗುತ್ತದೆ. ಹೀಗಾಗಿ ನಾವು ಕುಡಿವ ನೀರಿಗಾಗಿ ಭಿಕ್ಷಾಟನೆ ಮಾಡುವ ಮೂಲಕ ನಗರಸಭೆಗೆ ಹಣ ಕೂಡಿಸಿ ಕೊಡುತ್ತಿದ್ದೇವೆ.
ಮಂಜುನಾಥ್ ಮುಳಗುಂದ, ನಗರಸಭೆ ಮಾಜಿ ಸದಸ್ಯ
ಕುಡಿಯುವ ನೀರಿಗಾಗಿ ನಗರಸಭೆಗೆ ಮುಂದೆ ಸಾಕಷ್ಟು ಬಾರಿ ಪ್ರತಿಭಟನೆ ಮಾಡಲಾಗಿದೆ. ಆದರೂ ನಗರಸಭೆ ಅಧಿಕಾರಿಗಳು ಜನಪ್ರತಿನಿಧಿಗಳು ಕ್ಯಾರೆ ಅಂದಿಲ್ಲ. ಕೂಡಲೇ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೆ ಪ್ರತಿಭಟನೆ ಮಾಡಲಾಗುವುದು.