Home Blog Page 3217

ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ; ಜಿಲ್ಲೆಯಲ್ಲಿ ರಂಗೇರಿದ ಚುನಾವಣಾ ಕಣ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಜಿಲ್ಲೆಯಲ್ಲಿ ಗ್ರಾ‌.ಪಂ. ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ಪ್ರಯತ್ನ ನಡೆಸಿವೆ. ಎರಡೂ ಪಕ್ಷಗಳ ನಾಯಕರು ಮೇಲಿಂದ ಮೇಲೆ ಸಭೆ ಏರ್ಪಡಿಸಿ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸುತ್ತಿವೆ. ಈ ನಿಟ್ಟಿನಲ್ಲಿ ಬಿಜೆಪಿ ನಗರದ ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ಚುನಾವಣಾ ಪೂರ್ವಭಾವಿ ಸಭೆ ನಡೆಸಿತು.

ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಡಿ.7 ರಿಂದ ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಪ್ರಾರಂಭವಾಗಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರಲಿದ್ದು, ಪ್ರಚಾರದ ಭರಾಟೆ ಶುರುವಾಗಲಿದೆ.

ಪಕ್ಷದ ಚಿಹ್ನೆಯಲ್ಲಿ ಚುನಾವಣೆ ‌ನಡೆಯದಿದ್ದರೂ, ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿ ಭವಿಷ್ಯದ ಮುಂದಿನ ನಾಯಕರನ್ನಾಗಿಸಲು ರಾಜಕೀಯ ಪಕ್ಷಗಳು ತಂತ್ರ ಪ್ರತಿತಂತ್ರ ರೂಪಿಸುತ್ತಿವೆ. ಈ ಮೂಲಕ ತಳಮಟ್ಟದಲ್ಲಿ ಪಕ್ಷ ಸಂಘಟಿಸಿ ಬಲಪಡಿಸಲು ಯತ್ನಸುತ್ತಿವೆ.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದರೆ, ಮುಂದಿನ ವರ್ಷ ನಡೆಯುವ ತಾಲ್ಲೂಕು ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಸುಲಭವಾಗಿ ಜಯಭೇರಿ ಬಾರಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಇದರಿಂದಾಗಿ ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸಲೀಸಾಗಿ ಗೆಲ್ಲಬಹುದು ಎಂಬ ಚಿಂತನೆಯಲ್ಲಿದ್ದಾರೆ.
ಬಾಜಪ ಮುಖಂಡರು ಗ್ರಾ.ಪಂ.ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿ ಜಿಲ್ಲೆಯಲ್ಲಿ ಪಾರುಪತ್ಯ ಮೆರೆಯಲು ಹವಣಿಸುತ್ತಿದ್ದಾರೆ. ಇದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದೆ.

ಇದರ ಭಾಗವಾಗಿ ಜಿಲ್ಲಾ ಬಿಜೆಪಿ ನಗರದ ಡಿಸಿ ಕಚೇರಿ ಮುಂದಿರುವ ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಗ್ರಾ.ಪಂ.ಚುನಾವಣೆಯ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಹಾಗೂ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಸಭೆ ಜರುಗಿತು. ಇದರಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ವಿವಿಧ ಬಿಜೆಪಿ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

ಸಭೆಯಲ್ಲಿ ಚುನಾವಣಾ ಗೆಲುವಿಗಾಗಿ ರಣತಂತ್ರ ರೂಪಿಸಿದ್ದು, ಅಭ್ಯರ್ಥಿಗಳ ಆಯ್ಕೆ, ಪಕ್ಷ ಸಂಘಟನೆ, ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಯಿತು. ಚುನಾವಣೆ ಹೊತ್ತಿನಲ್ಲಿ ಗ್ರಾಮೀಣ ಭಾಗದಲ್ಲಾಗುತ್ತಿರುವ ಸ್ಥಳೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಅಲ್ಲದೇ, ಗೆಲುವಿಗಾಗಿ ಯಾವೆಲ್ಲಾ ತಂತ್ರ ರೂಪಿಸಬಹುದು ಎಂಬುದರ ಬಗ್ಗೆ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಯಿತು.

ಮತ್ತೊಂದೆಡೆ ಕಾಂಗ್ರೆಸ್ ಕೂಡಾ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎಂದು ಪಣ ತೊಟ್ಟಿದೆ. ಮೊನ್ನೆಯಷ್ಟೇ ಶಾಸಕ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿತ್ತು. ಅಲ್ಲದೇ, ಗ್ರಾ.ಪಂ.ಚುನಾವಣೆಯ ಜವಾಬ್ದಾರಿಯನ್ನು ಮಾಜಿ ಶಾಸಕ ಡಿ.ಆರ್.ಪಾಟೀಲ್ ಅವರಿಗೆ ವಹಿಸಲಾಗಿದೆ ಎಂದು ಹೇಳಲಾಗಿದೆ.

ಸದ್ಯ ಜಿಲ್ಲೆಯಲ್ಲಿ ಚುನಾವಣಾ ಚಟುವಟಿಕೆಗಳು ಬಲು ಜೋರಾಗಿದ್ದು, ಗೆಲುವಿನ ಕುದುರೆ ಯಾರಾಗುತ್ತಾರೆ ಎಂಬುದನ್ನ ಕಾದು ನೋಡಬೇಕು.

ರೈತರ ಹೋರಾಟಕ್ಕೆ ಎಸ್‌.ಆರ್.ಹಿರೇಮಠ ಬೆಂಬಲ; ಗಣಿಧಣಿಗಳ ವಿರುದ್ಧ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ದೆಹಲಿಯಲ್ಲಿ ನಡೆಯುತ್ತಿರುವ ರೈತ ವಿರೋಧಿ ಕಾಯ್ದೆ ವಿರುದ್ಧದ ಹೋರಾಟಕ್ಕೆ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಬೆಂಬಲ ಸೂಚಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ಕಾಯ್ದೆಯನ್ನು ವಿರೋಧದ ಮಧ್ಯೆ ಅಂಗೀಕರಿಸಿದ್ದು ರೈತರಿಗೆ ‌ಮಾಡಿದ ಅನ್ಯಾಯವಾಗಿದೆ. ಡಿಸೆಂಬರ್ 8ರ ಭಾರತ್ ಬಂದ್ ಗೆ ಬೆಂಬಲ ನೀಡಿ ರಾಜ್ಯದಲ್ಲಿ ಬಂದ್ ಮಾಡುತ್ತೇವೆ ಎಂದರು.

ಅದಾನಿ, ಅಂಬಾನಿ ಮತ್ತು ಟಾಟಾ ಬಿರ್ಲಾಗಳೇ ದೇಶದ ಪ್ರಧಾನಿಯಾಗಿದ್ದಾರೆ ಎಂದು ರೈತ ವಿರೋಧಿ ಕಾನೂನು ತರುತ್ತಿರುವ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದೆ ಇಂದಿರಾ ಗಾಂಧಿಗೆ ಪಾಠ ಕಲಿಸಿದಂತೆ 2024ರಲ್ಲಿ ಜನರು ತಕ್ಕಪಾಠ ಕಲಿಸುತ್ತಾರೆ. ಆರ್ ಎಸ್ ಎಸ್ & ಸಂಘ ಪರಿವಾರದಿಂದಲೇ ಕೇಂದ್ರ ಸರ್ಕಾರ ನಡೆಯುತ್ತಿದೆ ಎಂದರು.

ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರ ಗಣಿಭಾಧಿತ ಪ್ರದೇಶದ ಜನರಿಗೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ. ಹದಿನೈದು ಸಾವಿರ ಕೋಟಿ ಗಣಿಭಾದಿತ ಹಣ ಇದ್ದು, ಅದನ್ನು ಸಮರ್ಪಕ ಬಳಸುವಂತಹ ಕೆಲಸವಾಗಬೇಕು. ಎಂದು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅದಕ್ಕೆ ರಾಜ್ಯ ಸರ್ಕಾರ ಕೆಲ ಕಳ್ಳರನ್ನು ನೇಮಕ ಮಾಡಿದೆ. ಗಣಿ ಲೂಟಿ ಹೊಡೆದು ನೂರು ಕೋಟಿ ಮನೆ ಕಟ್ಟಿಸಿದ್ದಾರೆ. ಇಂತವರನ್ನು ಸಂಪುಟದಿಂದ ಕೈಬಿಡಬೇಕು‌. ಹಗಲು ದರೋಡೆ ಮಾಡಿ ಜನಾರ್ದನ ರೆಡ್ಡಿ ಜೈಲಿಗೆ ಹೋದರು. NMDC ಮೈನಿಂಗ್ ಕಂಪನಿಗೆ ಕಡಿಮೆ ಪ್ರೀಮಿಯಂನಲ್ಲಿ ಪ್ರೋಡೆಕ್ಷನ್ ಮಾಡಲು ಅನುಮತಿ ನೀಡಿರುವುದು ತಪ್ಪು ಎಂದು
ಸಚಿವ ಆನಂದ ಸಿಂಗ್, ಶ್ರೀರಾಮುಲು ಸೇರಿದಂತೆ ಜನಾರ್ದನ ರೆಡ್ಡಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನಿಗೆ ನಾಯಕತ್ವ ಕೈ ತಪ್ಪುವ ಭುಗಿಲು ಇರಬಹುದು: ಕೆ.ವಿರೂಪಾಕ್ಷಪ್ಪ

-ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಹೋರಾಟದ ನೇತೃತ್ವ ಆತನೇ ವಹಿಸಲಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ಹೋರಾಟ ಹೊಸತೇನಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸಮಾಜದ ಪ್ರಶ್ನಾತೀತ ನಾಯಕ. ಸಮಾಜದ ಏಳ್ಗೆಗಿನ ಈ ಹೋರಾಟದಲ್ಲಿ ಅವರು ತೊಡಗಿಕೊಳ್ಳದಿರುವುದಕ್ಕೆ ನಾಯಕತ್ವ ಕೈ ತಪ್ಪುವ ಭೀತಿಯೇ ಕಾರಣ ಇರಬಹುದು ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಕೆ.ವಿರೂಪಾಕ್ಷಪ್ಪ ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಹೋರಾಟಕ್ಕೆ ಆರ್‌ಎಸ್‌ಎಸ್ ಸೇರಿದಂತೆ ಯಾರೇ ಬೆಂಬಲ ನೀಡಿದರೂ ಸ್ವಾಗತಿಸುತ್ತೇವೆ. ಇದು ಪಕ್ಷಾತೀತ ಹೋರಾಟ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಕುರುಬರ ಸಂಘದ ನೇತೃತ್ವದಲ್ಲಿ ಹೋರಾಟ ಚುರುಕುಗೊಂಡಿದ್ದು,
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಆಗ್ರಹಿಸಿ

2021ರ ಜನವರಿ 4ನೇ ತಾರೀಖು ಸಿಂಧನೂರಿನಲ್ಲಿ ಸಮಾವೇಶ, ಜನವರಿ 5ರಂದು ಕಲಬುರಗಿ, ಯಾದಗಿರಿಯಲ್ಲಿ ಸಮಾವೇಶ ನಡೆಸಿ, ಜನೇವರಿ 15ರಿಂದ ಫೆಬ್ರವರಿ 7ರವರೆಗೆ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ.
ಆನಂತರ ಕೇಂದ್ರ ಮತ್ತು ರಾಜ್ಯ ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತವೆ ಎಂಬುದನ್ನು ನೋಡುತ್ತೇವೆ ಎಂದು ತಿಳಿಸಿದರು.

ಈ ಬೇಡಿಕೆ ಇಂದು-ನಿನ್ನೆಯದಲ್ಲ. 1868ರಲ್ಲಿಯೇ ಭಾರತದಲ್ಲಿದ್ದ ಬ್ರಿಟಿಷ್ ಸರಕಾರ ಹೊರತಂದಿರುವ the people of India ಎನ್ನುವ ಪುಸ್ತಕದಲ್ಲಿ ಕರುಬರ್, ಅಥವಾ ಕುರುಂಬರ್ ಮೂಲ ನಿವಾಸಿ ಬುಡಕಟ್ಟು ಜನಾಂಗ ಎಂಬ ಉಲ್ಲೇಖ ಇದೆ. 1976ರಲ್ಲಿ ಸಂಸತ್ ಕಡತದಿಂದ ಈ ಪದವನ್ನು ಯಾಕೆ ಕೈ ಬಿಡಲಾಗಿದೆ ಎಂಬುದು ಗೊತ್ತಾಗಿಲ್ಲ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಸಿಗುತ್ತಿಲ್ಲ‌.

ಈಗಾಗಲೇ ಸಚಿವ ಜೆ.ಎಸ್.ಈಶ್ವರಪ್ಪ ಹಾಗೂ ಸಮಾಜದ ಶ್ರೀಗಳ ನೇತೃತ್ವದ ನಿಯೋಗ ಕೇಂದ್ರದ ಬುಡಕಟ್ಟು ಸಚಿವೆ ರೇಣುಕಾ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.

ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲಲ್ಲ.
ಸಿದ್ದರಾಮಯ್ಯ ಕುರುಬ ಸಮಾಜದ ಪ್ರಶ್ನಾತೀತ ನಾಯಕ. ಆತನ ಹೇಳಿಕೆ ಆತನಿಗೆ ಗೌರವ ತರುವಂಥದ್ದಲ್ಲ. ನಮ್ಮಲ್ಲಿ ಒಡಕಿಲ್ಲ. ಜನಸ್ಪಂದನೆ ಇದೆ. ಯಾರೊ ಕೆಲವು ಲೀಡರ್‌ಗಳು ತಮ್ಮ ಸ್ವಾರ್ಥಕ್ಕಾಗಿ ಏನೇನೋ ಮಾಡ್ತಾರೆ. ಇದು ಸಮುದಾಯದ ಜನರಿಗೆ ಬೇಕಾಗಿದೆ. ಕಾಂಗ್ರೆಸ್, ಬಿಜೆಪಿ ಸಂಬಂಧ ಇಲ್ಲ.
ಸಿದ್ದರಾಮಯ್ಯ ಅವರೇ ಬಂದು ನೇತೃತ್ವ ವಹಿಸಲಿ, ಆರ್‌ಎಸ್‌ಎಸ್ ಹೋಗುತ್ತೆ ಈಶ್ವರಪ್ಪನೂ ಹೋಗತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಕುರುಬ ಸಮುದಾಯದ ಮುಖಂಡರಾದ ವೀರನಗೌಡ ಬಳೂಟಗಿ, ಮಲ್ಲಣ್ಣ ಪಲ್ಲೇದ್, ಯಮನಪ್ಪ, ಫಕೀರಪ್ಪ ವಕೀಲರು,
ಭೀಮಪ್ಪ ಗಂಗಾವತಿ,
ಕೆ.ವಿರೂಪಾಕ್ಷಪ್ಪ
ವಿರೂಪಾಕ್ಷಪ್ಪ ಮೋರನಾಳ ಮತ್ತಿತರರು ಇದ್ದರು.

ಬಿಜೆಪಿ ಸರಕಾರ ಅಲ್ಪಸಂಖ್ಯಾತರ ವಿರೋಧಿ: ಸಿರಾಜ್ ಸಿದ್ದಾಪುರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಮೂಲಭೂತ ಆಶಯಗಳ ವಿರುದ್ದ ಕೆಲಸ ಮಾಡುತ್ತಿರುವದು ಅತ್ಯಂತ ವಿಷಾದನೀಯವಾಗಿದೆ. ರಾಜಕೀಯ ಕಾರಣಕ್ಕೆ ಎಲ್ಲ ಪಕ್ಷಗಳು ತಮ್ಮದೇ ಆದ ಆದ್ಯತೆಯ ಕೆಲಸ ಮಾಡುತ್ತ ಆರೋಪ, ಪ್ರತ್ಯಾರೋಪ ಮಾಡುವುದು ಸಾಮಾನ್ಯವಾದರೂ ಯಾವ ಸರಕಾರವೂ ಒಂದು ಸಮುದಾಯವನ್ನು ಇಷ್ಟೊಂದು ಅನ್ಯಾಯ ಮಾಡಿರುವದು ಇತಿಹಾಸದಲ್ಲಿ ಕಂಡು ಬರುವುದಿಲ್ಲ ಎಂದು ಮುಸ್ಲಿಂ ಚಿಂತಕರ ಚಾವಡಿಯ ಪಿಎಂ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಸದಸ್ಯ ಸಿರಾಜ್ ಸಿದ್ದಾಪುರ ದೂರಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಅದರ ಮೂಲಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬುದ್ಧ, ಪಾರ್ಸಿ ಮತ್ತು ಜೈನ ಸಮುದಾಯದ ಮೇಲೆ ತೋರಿಸಿದಷ್ಟು ತಾತ್ಸಾರ, ದ್ವೇಷ, ಅಸೂಯೆ ಅನ್ಯಾಯಗಳನ್ನು ದೇಶದ ಯಾವ ರಾಜ್ಯ ಸರಕಾರಗಳು ಕೂಡ ಮಾಡಿರುವ ಉದಾಹರಣೆ ಇಲ್ಲ. ಅವರದ್ದೇ ಪಕ್ಷದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೂಡ ಒಂದು ಸಮುದಾಯ ಕುರಿತ ಸರಕಾರದ ಜನಪರ, ಕಲ್ಯಾಣ ಯೋಜನೆಯ ಅನುಷ್ಠಾನದಲ್ಲಿ ಇಷ್ಟೊಂದು ದ್ವೇಷಯುತವಾಗಿ ನಡೆದುಕೊಂಡಿಲ್ಲ ಎಂದರು.

ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಬಂದ ಮೇಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಈ ಹಿಂದೆ ನಿಗದಿಗೊಳಿಸುತ್ತ ಬಂದಿರುವ ಅನುದಾನ ಕಡಿತಗೊಳಿಸಿದ್ದಲ್ಲದೇ ಹಲವು ಯೋಜನೆಗಳನ್ನು ನಿಲ್ಲಿಸಿದೆ. ೨೦೧೯-೨೦ನೇ ಸಾಲಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು ೧೮೯೭.೦೦ ಕೋ.ರೂ. ಯಿಂದ ೧೫೭೧.೦೦ ಕೋ.ರೂ.ಗೆ ಕಡಿಮೆಗೊಳಿಸಿತು. ೨೦೨೦-೨೧ನೇ ಸಾಲಿನಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ೧೧೭೭.೦೦ಕೋ.ರೂ.ಗಳಷ್ಟಿದ್ದ ಅನುದಾನವನ್ನು ಮತ್ತೆ ಕಡಿತಗೊಳಿಸಿ ೧೦೫೫.೦೦ಕೋ.ರೂ.ಗಳಿಗೆ ನಿಗದಿಗೊಳಿಸಿದೆ. ಇತ್ತೀಚಿಗೆ ಮತ್ತೆ ೧೦೫೫.೦೦ ಕೋ.ರೂ.ಗಳಷ್ಟಿದ್ದ ಅನುದಾನದಲ್ಲಿ ೫೦.೦೦ ಕೋ.ರೂ. ಅನುದಾನ ಕಡಿತಗೊಳಿಸಿದೆ.
ಈಗ ಕಡಿತಗೊಳಿಸಿದ ಅನುದಾನದಲ್ಲಿ ಕಳೆದ ೫ ವರ್ಷಗಳಿಂದ ಅನುಷ್ಠಾನ ಮಾಡಲಾಗುತ್ತಿದ್ದ ಹಲವು ಜನಪರ ಕಲ್ಯಾಣ ಯೋಜನೆಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅನುಷ್ಠಾನ ಮಾಡುವುದನ್ನು ನಿಲ್ಲಿಸಿದೆ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಜಾರಿಗೊಳಿಸಿದ ಕಾಲೋನಿ ಅಭಿವೃದ್ದಿ ಯೋಜನೆ ಈಗಿನ ಸರಕಾರ ರದ್ದುಗೊಳಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಶಾದಿಭಾಗ್ಯ ಯೋಜನೆಯನ್ನು ಕೂಡ ರದ್ದುಗೊಳಿಸಿದೆ. ಈ ವರ್ಷ ಇವೆಲ್ಲಕ್ಕಿಂತ ಪ್ರಮುಖ ಯೋಜನೆಗಳಾದ ವಿದೇಶದಲ್ಲಿ ಉನ್ನತ ವ್ಯಾಸಂಗದ ಯೋಜನೆ, ನಾಗರೀಕ ಪರೀಕ್ಷೆ ತರಬೇತಿ ಯೋಜನೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ, ವಿದ್ಯಾಸಿರಿಯಂತಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದಂತಹ ಯೋಜನೆಗಳ ೨೦೧೯-೨೦ನೇ ಸಾಲಿನ ಅನುದಾನವನ್ನು ಸರಕಾರ ಇಲ್ಲಿಯವರೆಗೆ ಬಿಡುಗಡೆಗೊಳಿಸದೇ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವಂತಹ ಕೆಲಸ ಮಾಡುತ್ತಿರುವದು ಅಕ್ಷಮ್ಯ ಅಪರಾಧವಾಗುತ್ತದೆ ಎಂದರು.

ಈ ವೇಳೆ ಬಿ.ಪೀರ್‌ಬಾಷಾ
ಮುಸ್ಲಿಂ ಚಿಂತಕರ ಚಾವಡಿ, ರಾಜ್ಯ ಮಾರ್ಗದರ್ಶಕ ಮಂಡಳಿ ಸದಸ್ಯರು, ರಾಜಾಬಕ್ಷಿ ಎಚ್.ವಿ.
ರಾಜ್ಯ ಸಮಿತಿ ಉಪಾಧ್ಯಕ್ಷರು ಹಾಗೂ ಮುಖಂಡ ಎಸ್.ಬಿ.ಖಾದ್ರಿ ಇದ್ದರು.

ಶಿಕ್ಷಕ ದಂಪತಿಗಳ ಮನೆಗೆ ಕನ್ನ: ಲಕ್ಷಾಂತರ ರೂ ಮೌಲ್ಯದ ಚಿನಾಭರಣ ದೋಚಿ ಪರಾರಿ

ವಿಜಯಸಾಕ್ಷಿ ಸುದ್ದಿ, ರೋಣ

ಶಿಕ್ಷಕ ದಂಪತಿಗಳ ಮನೆಯ ಬಾಗಿಲಿನ ಚಿಲಕದ ಕೊಂಡಿ ಮುರಿದು ಅಪಾರ ಪ್ರಮಾಣದ ಚಿನ್ನಾಭರಣ, ನಗದು ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಹೊಳೆಆಲೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಗದೀಶ್ ಹೂಗಾರ ಎಂಬುವವರ ಮನೆಯಲ್ಲಿ ಅಸೂಟಿ ಗ್ರಾಮದ ಮುತ್ತಪ್ಪ ಕೊಣ್ಣೂರ ಎಂಬ ಶಿಕ್ಷಕ ದಂಪತಿಗಳು ಬಾಡಿಗೆಗೆ ಇದ್ದರು. ಇಬ್ಬರೂ ಶಿಕ್ಷಕರಾಗಿರುವುದರಿಂದ ಡಿ.4 ರಂದು ಶಾಲೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಯಾರೋ ಖದೀಮರು ಮನೆಗೆ ಕನ್ನ ಹಾಕಿದ್ದಾರೆ.

ಬಾಗಿಲು ಚಿಲಕದ ಕೊಂಡಿ ಮುರಿದು ಒಳಗೆ ಪ್ರವೇಶಿಸಿರುವ ಕಳ್ಳರು ಮನೆಯ ಬೆಡ್ ರೂಮ್ ನ ಟ್ರೆಜುರಿಯಲ್ಲಿಟ್ಟಿದ್ದ ಅಂದಾಜು 1,21,500 ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದಾರೆ.

ಖದೀಮರು ಅರ್ಧ ತೊಲೆ ಬಂಗಾರದ ಉಂಗುರ, ಅರ್ಧ ತೊಲೆ ಕೊರಳ ಚೈನು, 2 ಗ್ರಾಂ ತೂಕದ ಎರಡು ಮಾಟಲ್ ಗಳು, ನಾಲ್ಕು ಜತೆ ಬೆಂಡಾಲಿ(ಕಿವಿಯೋಲೆ), ಡೈಮಂಡ್ ಹಳ್ಳಿನ ಬೆಂಡಾಲಿ ಸೇರಿದಂತೆ 45,000 ರೂ.ನಗದು, ಒಂದು ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಅಂದರ್ ಬಾಹರ್: ತಹಶೀಲ್ದಾರ್ ಕಚೇರಿ ನೌಕರ ಸೇರಿ ಒಂಬತ್ತು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮುಂಡರಗಿ ತಹಶೀಲ್ದಾರ ಕಚೇರಿಯ ನೌಕರ, ವರ್ತಕರು ಹಾಗೂ ಮೆಕ್ಯಾನಿಕ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿರುವ ಮುಂಡರಗಿ ಪೊಲೀಸರು, 9500 ರೂ. ವಶ ಪಡಿಸಿಕೊಂಡಿರುವ ಘಟನೆ ಸಮೀಪದ ಘಟರಡ್ಡಿಹಾಳ ರಸ್ತೆಯ ಅಣ್ಣಪ್ಪ ಡಂಬಳ ಅವರ ಜಮೀನಿ ಬಳಿ ನಡೆದಿದೆ.

ಅಣ್ಣಪ್ಪ ರಾಜೇಂದ್ರಪ್ಪ ಡಂಬಳ, ಮೃತ್ಯುಂಜಯ ಮಲ್ಲಯ್ಯ ವಿಭೂತಿ, ಅಜಯ್ ವೀರಣ್ಣ ಘಟ್ಟಿ, ಜಲಾಲ್ ಭಾಷಾಸಾಬ್ ಕೊಪ್ಪಳ, ರಮೇಶ್ ಸೋಮಣ್ಣ ನವಲಗುಂದ, ಮಂಜುನಾಥ್ ರಾಮಚಂದ್ರಪ್ಪ ಲಿಂಗನಾಯ್ಕರ, ಶಿವಾಜಿ ಯಂಕಪ್ಪ ರಾಸಲ್ಕರ್, ಅಂದಪ್ಪ ಈರಪ್ಪ ಸೊತಾರಿ, ಬಸವರಾಜ್ ರಮೇಶ್ ಅಂಕದ ಬಂಧಿತರು. ಇವರೆಲ್ಲಾ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಸುಧೀರ್ ಕುಮಾರ್ ಬೆಂಕಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.

ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಟ್ಟ ಮೇಲೆ ಒಲೆ ಉರಿತು, ಕೆಟ್ಟ ಮೇಲೆ ಬುದ್ದಿ ಬಂತು; ಹೆಚ್ಡಿಕೆಗೆ ಸಿಟಿ ರವಿ ಟಾಂಗ್

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ರೈತ ಚಳುವಳಿ ಬಗ್ಗೆ ಮಾತನಾಡಲ್ಲ, ರೈತರಿಗೆ ನಮ್ಮ ಸರ್ಕಾರ ಸಹಕಾರ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ರೈತರಿಗೆ ಕಿಸಾನ್ ಸಮ್ಮಾನ್, ಫಸಲ್ ಭೀಮಾ ಯೋಜನೆ ಜಾರಿಗೆ ತರಲಾಗಿದೆ. ಸಾಯಿಲ್ ಹೆಲ್ತ್ ಕಾರ್ಡ್ ಮೂಲಕ ರೈತನ ಆದಾಯ ಡಬಲ್ ಮಾಡಿದ್ದೇವೆ.
ರೈತರು ಸತ್ಯ ಅರಿತುಕೊಳ್ಳಬೇಕು. ಅಲ್ಲದೇ, ಹಿಂದಿನ ಸರ್ಕಾರ ಮಾಡಿರುವ ಕೆಲಸ ನೋಡಿ ಎಂದರು.

ರೈತರಿಗೆ ಅತ್ಯಂತ ಹೆಚ್ಚು ಸಹಕಾರ ನೀಡಿದ್ದು ಬಿಜೆಪಿ, ದಲ್ಲಾಳಿಗಳ ಹಾವಳಿ ತಡೆಯಲು ರಾಜ್ಯ ಸರ್ಕಾರ ಕ್ರಮವಹಿಸಿದೆ. ರೈತರ ಸಂಕಷ್ಟ ನಿವಾರಿಸುವುದೇ ನಮ್ಮ‌ಕೆಲಸ ಎಂದರು.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಟ್ಟ ಮೇಲೆ ಒಲೆ ಉರಿತು, ಕೆಟ್ಟ ಮೇಲೆ ಬುದ್ದಿ ಬಂತು ಎಂಬ ಗಾದೆ ಮಾತಿನ ಮೂಲಕ ಕುಮಾರಸ್ವಾಮಿ ಅವರಿಗೆ ಸಿಟಿ ರವಿ ಟಾಂಗ್ ಕೊಟ್ಟರು.

ಕಾಂಗ್ರೆಸ್ ಸಹವಾಸ ಮಾಡಬೇಡಿ, ಅದು ಉರಿಯುವ ಮನೆಯಾಗಿದೆ. ಬಿಜೆಪಿ ರಾಷ್ಟ್ರವಾದಿ ಪಕ್ಷ ದೇಶದ ಪರವಾಗಿದೆ ಎಂದ ಅವರು, ಸಿದ್ದರಾಮಯ್ಯ ಚಿತ್ರ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ಗೋ ಹತ್ಯೆ ಸಂಬಂಧಿಸಿದಂತೆ ಕೆಟ್ಟ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ಬಿಜೆಪಿಗೆ ಚುನಾವಣೆಯೇ ಮುಖ್ಯವಾಗಿದೆ. ಗ್ರಾಮ ಸ್ವರಾಜ್ ಕಾರ್ಯಕ್ರಮ ಬಗ್ಗೆ ಹೆಚ್ಡಿಕೆ ವ್ಯಂಗ್ಯ

ವಿಜಯಸಾಕ್ಷಿ ಸುದ್ದಿ, ಮೈಸೂರು

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮಂತ್ರಿಗಳು ಗ್ರಾಮಗಳಿಗೆ‌ ಹೋಗುತ್ತಿದ್ದಾರೆ.
ಅವರಿಗೆ ಹಳ್ಳಿ ನೆನಪಾಗುತ್ತಿಲ್ಲ. ಚುನಾವಣೆಗಾಗಿ ಬಾಜಪ ಮುಖಂಡರು ಗ್ರಾಮ ಸ್ವರಾಜ್ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು

ಮೈಸೂರಿನಲ್ಲಿ ಮಾತನಾಡಿದ ಅವರು,
ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನು ತಾಲೂಕು ಕೇಂದ್ರಗಳಲ್ಲಿ ಮಾಡಬೇಡಿ. ಕಾಳಜಿಯಿದ್ದರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡಿ ಎಂದು ಸಲಹೆ ನೀಡಿದರು.

ಸಚಿವರು ನೆರೆ ಸಂತ್ರಸ್ತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಯಾವ ಇಲಾಖೆಗೆ ಯಾವ ಮಂತ್ರಿ ಇದ್ದಾರೆಂಬುವುದೇ ಗೊತ್ತಾಗುತ್ತಿಲ್ಲ. ಅದಕ್ಕಾಗಿ ಕನಿಷ್ಠ ಅರ್ಧ ಗಂಟೆಯಾದರೂ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು.

ಮಂತ್ರಿಗಳು ಗ್ರಾಮಗಳಲ್ಲಿನ‌ ಸಮಸ್ಯೆ ಬಗ್ಗೆ ಮಾತನಾಡುವುದನ್ನು ನಾನು ಎಲ್ಲೂ ಕಂಡಿಲ್ಲ. ಇವರಿಗೆ ಚುನಾವಣೆಯೇ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಬೆಳಗಾವಿ ಪ್ರವಾಸ ಮಾಡುತ್ತಿದ್ದು,
ಕೇವಲ ಕೋರ್ ಕಮಿಟಿ ಸಭೆಗಾಗಿ ಹೋಗಿ ವಾಪಸ್ ಆಗುತ್ತಿದ್ದಾರೆ. ಬೆಳಗಾವಿಯಲ್ಲಿ ನೆರೆಯಿಂದಾಗಿರುವ ನಷ್ಟಕ್ಕೆ ಇನ್ನೂವರೆಗೂ ಪರಿಹಾರ ನೀಡಿಲ್ಲ. ಎಲ್ಲ‌ ಮಂತ್ರಿಗಳು ಅಲ್ಲಿಯೇ ಇದ್ದಾರೆ. ಆದರೂ ಅಲ್ಲಿನ ಸಮಸ್ಯೆ ಕೇಳುತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಮಂತ್ರಿಗಳು ಅರ್ಧರಾತ್ರಿಯಲ್ಲಿ ಐಶ್ವರ್ಯ ಸಿಕ್ಕಂತೆ ವರ್ತಿಸುತ್ತಿದ್ದಾರೆ; ಹೆಚ್ ಡಿಕೆ ಕಿಡಿ

ವಿಜಯಸಾಕ್ಷಿ ಸುದ್ದಿ, ಮೈಸೂರು

ಜನರ ಕಷ್ಟಗಳಿಗೆ ಸ್ಪಂದಿಸಿ ಎಂದು ಉಸ್ತುವಾರಿ ಕೊಟ್ಟಿದ್ದರೆ, ಕೆಲ ಮಂತ್ರಿಗಳಿಗೆ ಅರ್ಧರಾತ್ರಿಯಲ್ಲಿಯೇ ಐಶ್ವರ್ಯ ಸಿಕ್ಕವರಂತೆ ಆಡುತ್ತಿದ್ದಾರೆ.
ಆಕಾಶನೇ ಕೈಗೆ ಸಿಕ್ಕಿದೆ ಎಂದು ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ತರವಲ್ಲದ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ನಗೆಪಾಟಲಿಗೆ ಇಡಾಗಬೇಡಿ. ದುಂದುವೆಚ್ಚದ ಮೂಲಕ ಸರ್ಕಾರದ ಹೊರೆಯನ್ನ ಯಾಕೆ ಹೆಚ್ಚಿಸುತ್ತೀರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ
2006 ರಲ್ಲಿ ಕಷ್ಟಪಟ್ಟು ಕೆಲಸ ಮಾಡಿದೆ, ಅದರ ಫಲವನ್ನು ಯಾರೋ ಉಂಡರು ಎಂದು ಅಸಮಾಧಾನ ಹೊರ ಹಾಕಿದರು.

ಕೇಂದ್ರ ಸರ್ಕಾರ‌ ಕರ್ನಾಟಕವನ್ನು ಲೆಕ್ಕಕ್ಕಿಟ್ಟಿಲ್ಲ. ಅವರು ರಾಜ್ಯದಲ್ಲಿ ‌ಬಿಜೆಪಿ ಮುಖ್ಯಮಂತ್ರಿ‌ ಇದ್ದಾರೆಂಬುವುದನ್ನು ಅನ್ನೋದನ್ನ ಮರೆತಿದ್ದಾರೆ.
ರಾಜ್ಯ ಸರ್ಕಾರ ಮಾಡಿರುವ ನಿಗಮ ಹಾಗೂ ಪ್ರಾಧಿಕಾರದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಲ್ಲಿ ಏನಿದೆ? ಕೆಲವು ನಿಗಮ ಮಂಡಳಿಗಲ್ಲಿ 50 ಲಕ್ಷ ರೂ.ಕೂಡಾ ಇಲ್ಲ. ಆದರೂ ಅವುಗಳ ಅಭಿವೃದ್ಧಿಗೆ ಕೋಟಿ ಕೋಟಿ ಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಸರ್ಕಾರ ತೆಗೆದುಕೊಳ್ಳುವ ತೀರ್ಮಾನ ರಾಜ್ಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ ಎಂದರು.

ಸಿದ್ದರಾಮಯ್ಯ ಕದ್ದುಮುಚ್ಚಿ ಭೇಟಿ ಮಾಡೋದು ನನಗೆ ಗೊತ್ತಿಲ್ಲವೇ?; ಎಚ್ ಡಿಕೆ ಹೊಸ ಬಾಂಬ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಿದ್ದರಾಮಯ್ಯ ಕದ್ದುಮುಚ್ಚಿ ಯಾರನ್ನೊ ಭೇಟಿ ಮಾಡಿದ್ದಾರೆ. ಅವರು ಯಾರನ್ನ ಭೇಟಿ ಮಾಡಿದ್ದಾರೆ? ಯಾವಾಗ ಭೇಟಿ ಮಾಡಿದ್ದಾರೆಂಬುವುದು ನನಗೆ ಗೊತ್ತಿಲ್ಲವೇ? ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸ್ಪೋಟಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಥರ ನಾನು ಕದ್ದುಮುಚ್ಚಿ ಭೇಟಿ ಮಾಡುವುದಿಲ್ಲ ಎಂದರು.

ನಾನು ಎಲ್ಲರನ್ನು ನೇರವಾಗಿ ಮತ್ತು ಮುಂಜಾನೆ ವೇಳೆಯಲ್ಲೇ ಎಲ್ಲರ ಮುಂದೆ ಭೇಟಿ ಮಾಡುತ್ತೇನೆ. ಸಿದ್ದರಾಮಯ್ಯನವರ ರೀತಿ ಕದ್ದುಮುಚ್ಚಿ ಭೇಟಿ ಮಾಡುವುದಿಲ್ಲ ಎಂದು ಹೇಳಿರುವ ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್ ಸಿಡಿಸಿದರು.

ಇದರೊಂದಿಗೆ ಸಿದ್ದರಾಮಯ್ಯನವರು ಯಾರನ್ನ ಭೇಟಿ ಮಾಡುತ್ತಾರೆ? ಅವರು ಯಾರಿರಬಹುದು ಎಂಬ ಗುಸು ಗುಸು ಚರ್ಚೆಗಳಿಗೆ ಹೆಚ್ ಡಿಕೆ ಅವರ ಹೇಳಿಕೆ ನಾಂದಿ ಹಾಡಿದಂತಾಗಿದೆ.

error: Content is protected !!