ಇಲ್ಲಿನ ಪುರಸಭೆ ಮುಂಭಾಗದಲ್ಲಿರುವ ವೀರಕೇಸರಿ ಬಾಬಾಸಾಹೇಬ್ ಪುತ್ಥಳಿ ಬಳಿ ಕನ್ನಡಪರ ಹೋರಾಟಗಾರರ ಒಕ್ಕೂಟದಿಂದ 66ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸೋಮವಾರ 30 ಅಡಿ ಉದ್ದ 9 ಅಡಿ ಅಗಲ ವಿಸ್ತೀರ್ಣದ ಬೃಹತ್ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣವನ್ನು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚನ್ನು ನಂದಿ, ಕರ್ನಾಟಕ ನವ ನಿರ್ಮಾಣ ಸೇನೆ ತಾಲ್ಲೂಕ ಅಧ್ಯಕ್ಷ ಮುತ್ತು ರಾಯರಡ್ಡಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ತಾಲ್ಲೂಕು ಅಧ್ಯಕ್ಷ ಬಸವರಾಜ ತಾವರೆ. ಸ್ವಾಭಿಮಾನಿ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಚಿಂತಾಲ, ಕರ್ನಾಟಕ ರಣಧೀರ ಪಡೆ ಅಧ್ಯಕ್ಷ ಪಾರುಖ್ ಮಜಿದಮನಿ, ಪುರಸಭೆ ಮುಖ್ಯಾಧಿಕಾರಿ ಅಮಿತ್ ತೇರದಾಳ, ವಿ.ಎಚ್.ಕೆಂಚನಗೌಡ್ರ, ಮಾರುತಿ ಅಬ್ಬಿಗೇರಿ, ಬಸವರಾಜ ನೇಸರಗಿ, ಮಂಜುನಾಥ್ ಮೆಣಸಗಿ, ಸಂಗಮೇಶ ಬ್ಯಾಳಿ, ರಾಜು ಹೂಲಿ, ಸಿದ್ದಪ್ಪ ಆಯಟ್ಟಿ ಉಪಸ್ಥಿತರಿದ್ದರು.
ಕನ್ನಡವೆಂಬುದು ಈ ರಾಜ್ಯದ ಮಾತೃಭಾಷೆಯಾಗಿದ್ದು, ಅನ್ಯ ಭಾಷಿಗರ ಹಾವಳಿಯಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆಯಾ ಎಂಬ ಆತಂಕ ಕಾಡುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಬಳಸುವ ಮೂಲಕ ಉಳಿಸಬೇಕಾಗಿರುವ ಅನಿವಾರ್ಯತೆ ನಮ್ಮೆದುರಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರೆಡ್ಡಿ ಬೇಸರ ವ್ಯಕ್ತಪಡಿಸಿದರು.
66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಐತಿಹ್ಯವಿದೆ. ಅದರದ್ದೇ ಆದ ಶಕ್ತಿ ಸಾಮರ್ಥ್ಯವಿದೆ. ಕುವೆಂಪು ಸೇರಿದಂತೆ ಅನೇಕ ಕವಿಗಳು, ಸಾಹಿತಿಗಳು ಕನ್ನಡ ನಾಡು ನುಡಿಯ ಬಗ್ಗೆ ಹಾಡಿಹೊಗಳಿರುವ ನಿದರ್ಶನಗಳಿದ್ದು, ಕನ್ನಡದ ಕಂಪನ್ನು ಪಸರಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ದೇಶದಲ್ಲಿ 1951 ನವೆಂಬರ್ 1 ರಂದು ಭಾಷಾವಾರು ಪ್ರಾಂತಗಳ ರಚನೆಯಾಯಿತು. ಆಗ ಕನ್ನಡ ಭಾಷೆ ಮಾತನಾಡುವ ಜನರು ಇರುವ ಭಾಗವನ್ನು ಸೇರಿಸಿ ಮೈಸೂರು ರಾಜ್ಯ ನಿರ್ಮಾಣವಾಯಿತು. ಇದಕ್ಕಾಗಿ ಅನೇಕ ಕನ್ನಡದ ಅಭಿಮಾನಿಗಳು ಹೋರಾಟ ಮಾಡಿದ್ದರು.
ಈ ಹಿಂದೆ ಆಡಳಿತದ ಅನುಕೂಲಕ್ಕಾಗಿ ಹೈದ್ರಾಬಾದ್, ಮುಂಬೈ ಕರ್ನಾಟಕವೆಂದು ಹರಿದು ಹಂಚಿಹೋಗಿತ್ತು. ಆಲೂರ ವೆಂಕಟರಾಯರು ಸೇರಿದತೆ ಅನೇಕರ ಹೋರಾಟದ ಫಲವಾಗಿ ಮೈಸೂರು ರಾಜ್ಯವೆಂಬುವುದು ಕರ್ನಾಟಕವೆಂದು ಮರುನಾಮಕರಣವಾಯಿತು ಎಂದು ಕನ್ನಡ ಏಕೀಕರಣದ ಹೋರಾಟವನ್ನು ಮುತ್ತು ರಾಯರಡ್ಡಿ ಸ್ಮರಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಯಿತು. ಈ ವೇಳೆ ಶಾಲಾ ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ ಕಳ್ಳತನ, ಮೋಸ, ವಂಚನೆ ಪ್ರಕರಣಗಳಲ್ಲಿ 74 ಪ್ರಕರಣಗಳನ್ನು ಬೇಧಿಸಿ 80 ಜನರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿತರಿಂದ ಒಂದು ಕೆ.ಜಿ. 38 ಗ್ರಾಂ ಚಿನ್ನಾಭರಣಗಳು, ಸುಮಾರು ಐದು ಕೆ.ಜಿ.ಯಷ್ಟು ಬೆಳ್ಳಿಯ ಆಭರಣಗಳು ಸೇರಿ ಒಟ್ಟು 64,55,099 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದು, ಮಾಲೀಕರಿಗೆ ಸ್ವತ್ತುಗಳನ್ನು ಹಿಂದಿರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು.
ಸೋಮವಾರ ಪೊಲೀಸ್ ಭವನದಲ್ಲಿ ನಡೆದ ಕಳುವು ಪ್ರಕರಣಗಳಲ್ಲಿ ಪತ್ತೆಯಾದ ಸ್ವತ್ತುಗಳನ್ನು ಮಾಲೀಕರಿಗೆ ಹಿಂದುರಿಗಿಸುವ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2020 ನವೆಂಬರ್ 21 ರಿಂದ 2021 ಅಕ್ಟೋಬರ್ 25ರವರೆಗೆ ಒಟ್ಟು 81,28,590 ರೂ. ಕಳ್ಳತನವಾಗಿದ್ದು, 64,55,099 ರೂ. ಮೊತ್ತವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಸಂಬಂಧಿಸಿದ ಮಾಲೀಕರಿಗೆ ಸ್ವತ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ಸುಮಾರು 33,65,685 ರೂ ಮೌಲ್ಯದ 1ಕೆ.ಜಿ.38 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿದ್ದು, ಈವರೆಗೆ ಒಟ್ಟು 29,78,795 ರೂ. ಮೌಲ್ಯದ 887 ಗ್ರಾಂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 2,65,854 ರೂ. ಮೌಲ್ಯದ 5 ಕೆ.ಜಿ. 274 ಗ್ರಾಂ ಬೆಳ್ಳಿಯ ಆಭರಣಗಳು ಕಳ್ಳತನವಾಗಿದ್ದು, ಅದರಲ್ಲಿ 2,63,664 ರೂ ಮೌಲ್ಯದ 5 ಕೆ.ಜಿ.253 ಗ್ರಾಂ ಬೆಳ್ಳಿಯ ಒಡವೆಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದರು.
ಅದರಂತೆ, ಒಟ್ಟು 18,16,000 ರೂ. ಮೌಲ್ಯದ 35 ವಾಹನಗಳು ಕಳ್ಳತನವಾಗಿದ್ದು, ಅದರಲ್ಲಿ ಒಟ್ಟು 16,16,೦೦೦ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಸಿಲೆಂಡರ್, ತಾಮ್ರದ ತಂತಿ, ಮೊಬೈಲ್, ಬ್ಯಾಟರಿ, ವೆಲ್ಡಿಂಗ್ ಹಾಗೂ ಇನ್ನಿತರ ವಸ್ತುಗಳು ಸೇರಿ ಒಟ್ಟು 5,49,125 ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದು, ಅದರಲ್ಲಿ ಒಟ್ಟು 3,89,950 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಕಳ್ಳತನವಾಗಿದ್ದು ಒಟ್ಟು 8,79,200 ನಗದು ಹಣದಲ್ಲಿ 2,27,200 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಅ.25 ರವರೆಗೆ ಮೂರು ಮೋಸ, ವಂಚನೆ ಪ್ರಕರಣ ದಾಖಲಾಗಿದ್ದು, ಒಂಬತ್ತು ಜನರನ್ನು ಬಂಧಿಸಿ ಒಟ್ಟು 9,79,500 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದ ಅವರು, ಪೊಲೀಸರ ಮೇಲೆ ಸಾರ್ವಜನಿಕರು ಇಟ್ಟಿರುವ ಭರವಸೆಯನ್ನು ಉತ್ತೇಜಿಸಲು ‘ಪ್ರಾಪರ್ಟಿ ಪರೇಡ್ ನಡೆಸಲಾಗುತ್ತದೆ ಎಂದರು. ಇದೇ ವೇಳೆ ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರ ಮಾರ್ಗದರ್ಶನದಲ್ಲಿ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ನರಗುಂದ ಡಿಎಸ್‌ಪಿ ಶಂಕರ್ ರಾಗಿ, ವಿವಿಧ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳಾದ ರವಿ ಕಪ್ಪತ್ತನವರ, ಪಿ.ವಿ.ಸಾಲಿಮಠ, ಬಿ.ಜಿ.ಸುಬ್ಬಾಪುರಮಠ, ಸುಧೀರ್‌ಕುಮಾರ್ ಬೆಂಕಿ, ವಿಕಾಸ್ ಲಮಾಣಿ, ಸುನೀಲ್ ಸವದಿ, ಪಿಎಸ್‌ಐಗಳಾದ ಭಾರತಿ ತಳವಾರ, ಜಿ.ಟಿ.ಜಕ್ಕಲಿ, ರಾಜೇಶ್ ಬಟಕುರ್ಕಿ, ರೇಣುಕಾ ಮುಂಡೆವಾಡಗಿ, ಶರಣಮ್ಮ ಕವಲೂರ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮುಂದಿನ ಚುನಾವಣೆಗೆ ಬೊಮ್ಮಾಯಿಯವರ ನೇತೃತ್ವದಲ್ಲೇ ಬಿಜೆಪಿ ಅಣಿಯಾಗುತ್ತೆ. ಬಿಜೆಪಿಯಿಂದ ಅವರೇ ಮುಂದಿನ ಸಿಎಂ ಅಭ್ಯರ್ಥಿ. ಅದರಲ್ಲಿ ತಪ್ಪೇನಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೊಮ್ಮಾಯಿಯವರು ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸಿದ್ದು ಸಿಂದಗಿಯಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧ. ಹಾನಗಲ್‌ನಲ್ಲೂ ಬಿಜೆಪಿ ಅಭ್ಯರ್ಥಿ ಪರ ಉತ್ತಮ ಅಭಿಪ್ರಾಯ ಇದೆ ಎಂದರು.
ಬೆಲೆ ಏರಿಕೆ ಕುರಿತು ಡಿಕೆಶಿ ಸೇರಿದಂತೆ ಪ್ರತಿಪಕ್ಷಗಳ ಮುಖಂಡರ ಆರೋಪ ಕುರಿತಾಗಿ ಮಾತನಾಡಿದ ಅವರು ಡಿಕೆಶಿ ಮತ್ತು ಪ್ರತಿಪಕ್ಷಗಳ ಮುಖಂಡರು ಮೊದಲಿನಿಂದಲೂ ಬಿಜೆಪಿ ಬಗ್ಗೆ ಭ್ರಮೆ ಹೊಂದಿದ್ದಾರೆ. ರಾಜ್ಯದ ಮತದಾರರು ಬುದ್ಧಿವಂತರಿದ್ದಾರೆ. ಅವರೇ ತಕ್ಕ ಉತ್ತರ ನೀಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.
ಪೆಟ್ರೋಲ್, ಡೀಸೆಲ್ ಸೇರಿಸಂತೆ ಇತರ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದನ್ನು ಒಪ್ಪಿಕೊಳ್ಳುತ್ತೇವೆ. ಜನಸಾಮಾನ್ಯರಿಗೆ ತೊಂದರೆ ಆಗುತ್ತಿರುವುದಕ್ಕೆ ವಿಷಾದಿಸುತ್ತೇವೆ. ಆದರೆ ಇದನ್ನು ನಮ್ಮ ಸರಕಾರ ಜನರಿಗೆ ಹೊರೆ ಆಗಲಿ ಎಂದು ಮಾಡುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆ ಅನುಸರಿಸಿ ಇಂಥ ತೀರ್ಮಾನಗಳನ್ನು ತೆಗೆದುಕೊಳ್ಳುವ ಅನಿವಾರ್ಯ ಸ್ಥಿತಿ ಬಂದೊದಗಿದೆ. ಶೀಘ್ರವೇ ಎಲ್ಲ ಸರಿ ಹೋಗುವ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು ರಾಜ್ಯದೆಲ್ಲೆಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದ ಅವರು, ಪುನೀತ್ ಸಾವು ರಾಜ್ಯಕ್ಕೆ ದಿಗ್ಭ್ರಮೆ ಮೂಡಿಸಿದೆ. ಆದರೂ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ ಇದೆ. ಕೋವಿಡ್ ಕಾರಣದಿಂದ ಸರಳವಾಗಿ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಪುನೀತ್ ನೋಡಿಕೊಳ್ಳುತ್ತಿದ್ದ ಅನಾಥಾಶ್ರಮಗಳ ದತ್ತು ತೆಗೆದುಕೊಳ್ಳುವ ಕುರಿತು ಪರಿಪೂರ್ಣ ಮಾಹಿತಿ ಪಡೆದು ನಂತರ ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಓ ಬಿ.ಫೌಜಿಯಾ ತರುನ್ನೀಮ್ ಇತರರು ಇದ್ದರು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರಟ್ಟಿನ ಬಾಕ್ಸ್‌ನಲ್ಲಿ ಶಿಶುವಿನ ಶವ ಇರುವುದನ್ನು ಕೆಲ ಸ್ಥಳೀಯರು ಪತ್ತೆ ಮಾಡಿ ಸಿಬ್ಬಂದಿ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ.
ಜನರ ಕಣ್ಣಿಗೆ ಬಿದ್ದಂತೆ ಶಿಶುವಿನ ಶವ ರಟ್ಟಿನ ಬಾಕ್ಸ್‌ನಲ್ಲಿ ಇದ್ದದ್ದು ನಿಜವಾದರೂ ಇದಕ್ಕೆ ಕಾರಣ ಆಸ್ಪತ್ರೆಯ ಸಿಬ್ಬಂದಿಯಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಕುರಿತು ವಿಜಯಸಾಕ್ಷಿಯೊಂದಿಗೆ ಮಾತನಾಡಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಶಾಂತ್ ಬಾಬು ಅವರು, ಕುಷ್ಟಗಿಯಿಂದ ಶನಿವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಕೇಸ್ ದಾಖಲಾಗಿತ್ತು. ಸಹಜ ಹೆರಿಗೆ ಮೂಲಕ ಶಿಶು ತೆಗೆಯಿತಾದರೂ ಅದು ಹೊಟ್ಟೆಯಲ್ಲಿ ಅಸು ನೀಗಿತ್ತು. ಹೆತ್ತವರ ಸುಪರ್ದಿಗೆ ಶಿಶುವನ್ನು ಒಪ್ಪಿಸಲಾಗಿದ್ದು, ವಾಹನ ತರಲು ಹೋಗುವ ವೇಳೆ ಶಿಶುವನ್ನು ರಟ್ಟಿನ ಬಾಕ್ಸ್‌ನಲ್ಲಿಟ್ಟು ತೆರಳಿದ್ದಾರೆ. ಕೆಲ ನಿಮಿಷಗಳ ಬಳಿಕ ಹೆತ್ತವರೇ ಶಿಶುವಿನ ಶವವನ್ನ ಒಯ್ದಿದ್ದಾರೆ. ಅಷ್ಟರಲ್ಲಿಯೇ ಕೆಲವರು ರಟ್ಟಿನ ಬಾಕ್ಸ್‌ನಲ್ಲಿ ಶಿಶುವಿನ ಶವ ಕಂಡು ಫೋಟೋ, ವಿಡಿಯೋ ತೆಗೆದು ಆಸ್ಪತ್ರೆ ಹಾಗೂ ಇಲ್ಲಿನ ಸಿಬ್ಬಂದಿ ವಿರುದ್ಧ ಅನಗತ್ಯ ಆರೋಪ ಮಾಡಿದ್ದಾರೆ ಎಂದರು.
ಅಕ್ಟೋಬರ್ 29ರಂದು ಕರುನಾಡಲ್ಲಿ “ಪುನೀತ್ ಸಾವು” ಎಂಬ ಬರಸಿಡಿಲು ಶುಕ್ರವಾರವೇ ಹಲವು ಜೀವಗಳನ್ನ ಕಸಿದಿತ್ತು. ಆ ಬರಸಿಡಿಲಿನ ಕರಾಳ ಛಾಯೆ ಇಂದೂ ಸಹ ಮುಂದಯವರಿದಿದ್ದು ನಾಡಿನ ವಿವಿಧ ಭಾಗಗಳಲ್ಲಿ ಅಪ್ಪು ಸಾವನ್ನಪ್ಪಿದ ಸುದ್ದಿ ಅರಗಿಸಿಕೊಳ್ಳದ ಹಲವು ಅಭಿಮಾನಿ ದೇವರುಗಳು ಪ್ರಾಣ ತೆತ್ತಿದ್ದಾರೆ.
ಅಗಲಿದ ಅಪ್ಪುವಿನ ಅಂತಿಮ ದರ್ಶನಕ್ಕೆ ಇಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಜನಸಾಗರವೇ ಸೇರಿತ್ತು. ಇನ್ನೆಂದು ಬಾರದ ಮಗುವಿನ ಹೃದಯದ ಪುನೀತ್‌ನನ್ನು ನೆನೆದು ಕೂಗುತ್ತಿದ್ದ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರಿಗೆ ಮುಂದೇನು? ಎಂಬುದೇ ತೋಚದಂತಾಗಿ ದಿಗ್ಭ್ರಾಂತರಾಗಿದ್ದರು.
ಭಾರತೀಯ ಚಿತ್ರರಂಗದ ದಂಡು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆಯಲು ಭಾರತದ ವಿವಿಧ ಚಿತ್ರರಂಗಗಳ ಗಣ್ಯರ ದಂಡು ಹರಿದು ಬಂದಿತ್ತು.
ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ, ಜ್ಯೂನಿಯರ್ ಎನ್‌ಟಿಆರ್, ಶ್ರೀಕಾಂತ್, ಅಲ್ಲು ಅರ್ಜುನ್, ಪ್ರಭುದೇವ ಸೇರಿದಂತೆ ಹಲವು ಸ್ಟಾರ್‌ಗಳು, ರಾಜಕಾರಣಿಗಳು, ಉದ್ಯಮಿಗಳು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಹಾಡಿನ ಮೂಲಕ ಪಾಕ್ ಅಭಿಮಾನಿ ಶ್ರದ್ಧಾಂಜಲಿ? ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿಕೆ ಕರುನಾಡು ಮಾತ್ರವಲ್ಲ, ವಿಶ್ವದ ಹಲವು ರಾಷ್ಟ್ರಗಳಲ್ಲಿ ನೋವನ್ನುಂಟು ಮಾಡಿದೆ. ಜಾಗತಿಕ ಸುದ್ದಿ ವಾಹಿನಿಗಳಲ್ಲೂ ಇವತ್ತು ಪುನೀತ್ ನಿಧನದ ಸುದ್ದಿ ಪ್ರಸಾರವಾಗಿದೆ.
ಪಾಕಿಸ್ತಾನ ಮೂಲದ ಲಾಹೋರ್‌ನ ಪುನೀತ್ ಅಭಿಮಾನಿಯೊಬ್ಬರು ಬೊಂಬೆ ಹೇಳುತೈತೆ ಹಾಗೂ ನಿನ್ನಿಂದಲೇ… ನಿನ್ನಿಂದಲೇ ಹಾಡು ಹಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ ಇದು 2018ರ ವಿಡಿಯೊ ಎಂದು ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ-ಧೃತಿ
ಪುನೀತ್ ಅವರ ಮೊದಲ ಮಗಳು ಧೃತಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು ತಂದೆಯ ಸಾವಿನ ವಿಷಯವನ್ನು ತಡವಾಗಿ ತಿಳಿಸಿದ್ದರಿಂದ ಧೃತಿ ವಿಮಾನದ ಮೂಲಕ ಶನಿವಾರ ಸಂಜೆ ಬೆಂಗಳೂರು ತಲುಪಿ ಸದಾಶಿವನಗರದ ಮನೆಗೆ ಹೋಗಿ ಅಪ್ಪನನ್ನ ಹುಡುಕಾಡಿ, ಆನಂತರ ಪಾರ್ಥಿವ ಶರೀರ ಇರುವ ಸ್ಟೇಡಿಯಂಗೆ ಬಂದು ಅಪ್ಪನ ಅಂತಿಮ ದರ್ಶನ ಪಡೆದು ಬಿಕ್ಕಿಬಿಕ್ಕಿ ಅತ್ತರು. ದೊಡ್ಡಪ್ಪ ಶಿವಣ್ಣ ಧೃತಿಯನ್ನು ಸಂತೈಸಲು ಹರಸಾಹಸ ಪಟ್ಟರು. ತಮ್ಮನ ಅಗಲಿಕೆ ನೆನೆದು ಇಡೀ ದಿನ ಶಿವಣ್ಣ ಸಹ ಕಣ್ಣೀರು ಸುರಿಸಿದರು.
ಪುನೀತ್ ಕಣ್ಮರೆಯ ಕಣ್ಣೀರಧಾರೆ ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಜ್ಯದ ಬಹುತೇಕ ಮನೆಗಳಲ್ಲಿ ಪುನೀತ್ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಾ ವೃದ್ಧರಾದಿಯಾಗಿ ಚಿಣ್ಣರು ಸಹ ಬಿಕ್ಕಳಿಸಿ ಸತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬರೆದುಕೊಂಡಿದ್ದಾರೆ. ಪುನೀತ್ ಕೇವಲ ಯುವಕರ ಕಣ್ಮಣಿ ಮಾತ್ರವಲ್ಲ, ಪುಟ್ಟ ಕಂದಮ್ಮಗಳ ನೆಚ್ಚಿನ ತಾರೆಯೂ ಆಗಿದ್ದರು ಎನ್ನುವುದಕ್ಕೆ ಇದು ಉತ್ತಮ ನಿದರ್ಶನ.
ಪ್ರಾಣತ್ಯಾಗ ಮಾಡಿದ ಅಭಿಮಾನಿಗಳು ಪುನೀತ್ ಅಗಲಿಕೆಯನ್ನು ಸಹಿಸಿಕೊಳ್ಳದೇ ಹಲವರು ಆತ್ಮಹತ್ಯೆಗೆ ಯತ್ನಿಸಿದ್ದರು. ಹೊಸಪೇಟೆಯ ಅಭಿಮಾನಿಯೊಬ್ಬ ಕಾಲುವೆಗೆ ಹಾರಿ ಪ್ರಾಣ ತ್ಯಾಗ ಮಾಡಿರುವ ಬಗ್ಗೆ ವರದಿಯಾಗಿದೆ. ಕೊಪ್ಪಳ ಜಿಲ್ಲೆಯ ನಿಂಗಾಪುರದ ಅಭಿಮಾನಿ ಜ್ಞಾನಮೂರ್ತಿ ಪುನೀತ್ ಸಾವಿನ ಸುದ್ದಿ ಕೇಳಿ ಶುಕ್ರವಾರವೇ ಅಸ್ವಸ್ಥರಾಗಿದ್ದರು. ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಜ್ಞಾನಮೂರ್ತಿ ಶನಿವಾರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು.
ಹೆತ್ತವರ ಪಕ್ಕವೇ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ನಡೆಸುವ ಸಂಬಂಧ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಸಮಾಧಿ ನಡುವೆ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಪುನೀತ್ ರಾಜಕುಮಾರ್ ಅವರ ಅಪ್ಪ ಅಮ್ಮನ ಬಳಿ ಪುನೀತ್ ರಾಜಕುಮಾರ್ ಅವರು ಮಲಗಿದ್ದಾರೆ. ಅಂತ್ಯಸಂಸ್ಕಾರಕ್ಕೆ ಬೇಕಾಗುವ ಅಗತ್ಯ ಜಾಗವನ್ನು ಪಡೆದು ಎಲ್ಲ ವ್ಯವಸ್ಥೆ ನೋಡಿಕೊಳ್ಳುವಂತೆ ವಾರ್ತಾ ಇಲಾಖೆಗೆ ಸರ್ಕಾರ ಸೂಚಿಸಿದೆ.
ಸರ್ಕಾರಿ ಗೌರವ: ಪುನೀತ್ ರಾಜಕುಮಾರ್ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದಲ್ಲಿ ನಡೆಸಲೂ ಕೂಡ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶುಕ್ರವಾರ ತೆರೆ ಕಂಡಿದ್ದ ಭಜರಂಗಿ-2 ಪ್ರದರ್ಶನವು ಪುನೀತ್ ಅಗಲಿಕೆಯಿಂದ ರದ್ದಾಗಿದೆ.
ಭಜರಂಗಿ-2 ನೋಡಲು ಗುರುವಾರ ರಾತ್ರಿಯಿಂದಲೇ ಚಿತ್ರಮಂದಿರವನ್ನು ಶೃಂಗರಿಸಿದ್ದ ಶಿವಣ್ಣ ಹಾಗೂ ಪುನೀತ್ ಅಭಿಮಾನಿಗಳು ಬೆಳಗಿನ ಪ್ರದರ್ಶನವನ್ನು ಬೇಗನೇ ಆರಂಭಿಸುವಂತೆ ಮಾಲಕರಿಗೆ ಮನವಿ ಮಾಡಿದ್ದರು. ಕ್ರೌಡ್ ಹೆಚ್ಚಾಗಿದ್ದರಿಂದ ಬೆಳಗ್ಗೆ 10 ಗಂಟೆ ಸುಮಾರಿಗೆ ಭಜರಂಗಿ ಪ್ರದರ್ಶನ ಆರಂಭಗೊಂಡಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೊದಲ ಪ್ರದರ್ಶನ ಯಶಸ್ವಿಯಾಗಿದ್ದೇನೊ ನಿಜ, ಆದರೆ ಅಷ್ಟೊತ್ತಿಗೆ ಪುನೀತ್ ರಾಜ್‌ಕುಮಾರ್ ಸ್ಥಿತಿ ಗಂಭೀರ ಎನ್ನುವ ಸುದ್ದಿ ಆತಂಕ ಸೃಷ್ಟಿಸಿತ್ತು. ಆತಂಕದ ನಡುವೆಯೇ ಎರಡು ಪ್ರದರ್ಶನ ಕಂಡ ಭಜರಂಗಿ ಮೂರನೇ ಪ್ರದರ್ಶನದ ವೇಳೆಗೆ ಆಘಾತದ ಸುದ್ದಿ ಅಧಿಕೃತವಾಗಿ ಹೊರಬಿತ್ತು. ಪರಿಣಾಮ ಭಜರಂಗಿ ತನ್ನ ಓಟ ನಿಲ್ಲಿಸಿದ. ಚಿತ್ರಮಂದಿರದ ಮಾಲಕರು ರಾಜ್ಯಾದ್ಯಂತ ಪ್ರದರ್ಶನ ಸ್ಥಗಿತಗೊಳಿಸುವ ಮೂಲಕ ಪುನೀತ್ ನೆನೆದು ಭಾವುಕರಾದರು.
–ಸಿನಿಮಾ ಮಾತ್ರವಲ್ಲ, ಶಿಕ್ಷಣ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದ ಅಪ್ಪು
–ಥೇಟ್ ಅಪ್ಪನಂತೆ ಬಡವರ ಬಂಧುವಾಗಿದ್ದ ಲೋಹಿತ್
–ಬಸವರಾಜ ಕರುಗಲ್. ವಿಜಯಸಾಕ್ಷಿ ಸುದ್ದಿ, ಬೆಂಗಳೂರು: 2021ರ ಅಕ್ಟೋಬರ್ 29 ಕರುನಾಡಿಗೆ ದಿಗ್ಭ್ರಮೆ ಮೂಡಿಸಿದ ಮತ್ತೊಂದು ದಿನ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಠಾತ್ ಪಯಣ ಬೆಳೆಸಿದ ಕೆಟ್ಟ ದಿನ.
ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದರೂ ಸದಾ ಬಡವರ ಬಗ್ಗೆ ಕಾಳಜಿ ಹೊಂದಿದ ಚಿನ್ನದ ಹೃದಯ ಹೊಂದಿದ್ದ ಅಪ್ಪಟ ಅಪರಂಜಿ ಅಪ್ಪು. 1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನ್ಮ ತಾಳಿದ ಪುನೀತ್, ಆರು ತಿಂಗಳಿದ್ದಾಗಲೇ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಕಾಣಿಸಿಕೊಂಡರು.
ರಾಜ್ ದಂಪತಿಯ ಕಿರಿ ಮಗುನಾಗಿದ್ದರಿಂದ ಹೆಚ್ಚು ಪ್ರೀತಿಯಲ್ಲೇ ಬೆಳೆದರೂ ಅಮ್ಮ ಮಾತ್ರ ಕಟ್ಟು ನಿಟ್ಟು, ಶಿಸ್ತನ್ನು ಮಕ್ಕಳಲ್ಲಿ ಬೆಳೆಸಿದರು. ರಾಜ್ ತಮ್ಮ ಸಿನಿಮಾಗಳ ಶೂಟಿಂಗ್‌ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದುದರಿಂದ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಯಿತು.
ಇದುವರೆಗೂ ಸುಮಾರು 39ಕ್ಕೂ ಅಧಿಕ ಸಿನಿಮಾಗಳಲ್ಲಿ ( ಅತಿಥಿ ಪಾತ್ರಗಳನ್ನೂ ಸೇರಿಸಿ) ಅಭಿನಯಿಸಿದ್ದಾರೆ. ಇತ್ತಿಚೆಗೆ ತಮ್ಮದೇ ಪ್ರೋಡಕ್ಷನ್ ಹೌಸ್ ಆರಂಭಿಸಿ ಮಾಯಾಬಜಾರ್ ಹಾಗೂ ಫ್ರೆಂಚ್ ಬಿರಿಯಾನಿ ಎಂಬ ಎರಡು ಸಿನಿಮಾಗಳನ್ನು ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿದ್ದಾರೆ. ಇನ್ನು ಎರಡು ಸಿನಿಮಾಗಳು ನಿರ್ಮಾಣವಾಗುವ ಹಂತದಲ್ಲಿದ್ದು, ಒಂದರಲ್ಲಿ ಅವರೇ ಅಭಿನಯಿಸಬೇಕಿತ್ತು. ಆದರೆ ವಿಧಿಯಾಟ ಅದಕ್ಕೆ ಅವಕಾಶ ನೀಡಲಿಲ್ಲ.
ಬರೀ ನಟನೆ, ನಿರ್ಮಾಣ ಮಾತ್ರವಲ್ಲದೇ, ಹಾಡುವಿಕೆಯಲ್ಲೂ ಪುನೀತ್ ಮೇಲುಗೈ ಸಾಧಿಸಿದ್ದರು. ರಾಜ್ ಹಾಗೂ ಶಿವಣ್ಣ, ರಾಘಣ್ಣ ಜೊತೆ ದೇವರ ಹಾಡುಗಳು ಸೇರಿದಂತೆ 150ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇತ್ತಿಚೆಗೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ರತ್ನನ್ ಪ್ರಪಂಚ ಸಿನಿಮಾದಲ್ಲೂ ಉತ್ತರ ಕರ್ನಾಟಕ ಭಾಷೆಯ ಗಿಚ್ ಗಿಲಿಗಿಲಿ ಹಾಡು ಅವರ ಕಂಠಸಿರಿಯಲ್ಲಿ ಮೂಡಿ ಬಂದಿದೆ.
ಬಾಲ್ಯದಲ್ಲೇ ರಾಜ್ಯ ಪ್ರಶಸ್ತಿ (ಚಲಿಸುವ ಮೋಡಗಳು) ಹಾಗೂ ರಾಷ್ಟ್ರ ಪ್ರಶಸ್ತಿ (ಬೆಟ್ಟದ ಹೂವು) ಗಳನ್ನು ಮುಡಿಗೇರಿಸಿಕೊಂಡ ರಾಜರತ್ನ ಅಪ್ಪು ಜನಪ್ರಿಯತೆಯನ್ನು ನೆತ್ತಿಗೇರಿಸಿಕೊಂಡವರಲ್ಲ. 2002ರಲ್ಲಿ ಅಪ್ಪು ಸಿನಿಮಾ ಮೂಲಕ ನಾಯಕನಟರಾಗಿ ಮತ್ತೇ ಬಣ್ಣದ ಲೋಕ ಯಾನ ಆರಂಭಿಸಿದ ಪುನೀತ್ ಹಿಂತಿರುಗಿ ನೋಡಲೇ ಇಲ್ಲ. ಪುನೀತ್ ಸಿನಿಮಾಗಳ ಸಕ್ಸಸ್ ರೇಟ್ 80%.
ಡಾ.ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ ಪಟ್ಟಣದ ಜನ ಕೃಷಿ ಕಡೆ ಮುಖ ಮಾಡಿದ್ದನ್ನ ಕೇಳಿದ್ದೇವೆ. ಅದೇ ರೀತಿ ಪೃಥ್ವಿ ಸಿನಿಮಾದಲ್ಲಿ ಜಿಲ್ಲಾಧಿಕಾರಿಯಾಗಿ ನಟಿಸಿದ್ದ ಪುನೀತ್ ಅನೇಕ ಆಕಾಂಕ್ಷಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಅನೇಕರು ಪೃಥ್ವಿ ಸಿನಿಮಾ ಪುನೀತ್‌ರಂತೆ ಜಿಲ್ಕಾಧಿಕಾರಿಯಾಗಬೇಕು ಎಂದು ಹೇಳಿಕೊಂಡದ್ದು ಉಂಟು.
ಪುನೀತ್ ಸಿನಿಮಾಗಳೆಂದರೆ ಫ್ಯಾಮಿಲಿ ಆಡಿಯನ್ಸ್ ಮೂವಿ ಅನ್ನೋದರಲ್ಲಿ ಅನುಮಾನಾನೇ ಇಲ್ಲ. ಬಾಲ್ಯದಲ್ಲೇ ಐತಿಹಾಸಿಕ ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿದ್ದ ಮಾಸ್ಟರ್ ಲೋಹಿತ್ ಬೆಟ್ಟದ ಹೂವು ಸಿನಿಮಾ ಮೂಲಕ ಪುನೀತ್ ಆದರು. ಅಪ್ಪು ಸಿನಿಮಾ ಮೂಲಕ ನಾಯಕನಾಗಿ ಸಾಮಾಜಿಕ, ಆ್ಯಕ್ಷನ್, ಮೆಲೋಡ್ರಾಮಾ, ಸಸ್ಪೆನ್ಸ್ ಹೀಗೆ ವಿಭಿನ್ನ ಬಗೆಯ ಸಿನಿಮಾ ಜಾನರ್‌ಗಳಲ್ಲಿ ನಟಿಸಿರುವ ಪುನೀತ್ ಸದಾ ನಿರ್ಮಾಪಕರ ಹಿತ ಕಾಯುವ ನಟರಲ್ಲೊಬ್ಬರಾಗಿದ್ದರು.
ತ್ರಿಮೂರ್ತಿಗಳ ಸಂಗಮ: ರಾಜ್ ಬದುಕಿದ್ದಾಗಲೇ ರಾಜ್ ಹಾಗೂ ಪುತ್ರರು ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಬಯಕೆ ಮೊದಲಿನಿಂದಲೂ ಇತ್ತಾದರೂ ಅದು ನನಸಾಗಲಿಲ್ಲ. ಇತ್ತಿಚೆಗೆ ಶಿವಣ್ಣ ಹಾಗೂ ಪುನೀತ್ ಅಭಿನಯದ ಸಿನಿಮಾ ಫೈನಲ್ ಆಗಿತ್ತಾದರೂ ಸೆಟ್ಟೇರಲೇ ಇಲ್ಲ. ರಾಜಣ್ಣ-ಶಿವಣ್ಣ-ಪುನೀತ್ ಒಟ್ಟಿಗೆ ಅಭಿನಯಿಸಿದ್ದ ಸಿನಿಮಾ ಅಂದ್ರೆ ಅದು 1988ರಲ್ಲಿ ತೆರೆಕಂಡ ‘ಶಿವ ಮೆಚ್ಚಿದ ಕಣ್ಣಪ್ಪ’.
ಶಿಕ್ಷಣ ಕ್ಷೇತ್ರದಲ್ಲೂ ಸಾಧನೆ: ಪುನೀತ್ ಓದಿದ್ದು 10ನೇ ತರಗತಿಯಾದರೂ ನಾಯಕರಾಗಿ ಪರಿಚಯವಾದ ನಂತರ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳನ್ನು ಕಲಿತರು. ಇಂದು ಐಎಎಸ್/ಕೆಎಎಸ್ ಮಾಡಲು ಸಾಕಷ್ಟು ಸ್ಪರ್ಧೆ ಇರುವುದರಿಂದ ತಂದೆಯ ಹೆಸರು, ನೆನಪಿನಲ್ಲಿ ತರಬೇತಿ ಸಂಸ್ಥೆಯನ್ನು ಪುನೀತ್ ಆರಂಭಿಸಿದ್ದರು. ಇತ್ತಿಚೆಗೆ ಶೈಕ್ಷಣಿಕ ಆ್ಯಪ್‌ವೊಂದನ್ನ ಕನ್ನಡಿಗರಿಗೆ ಪರಿಚಯಿಸಿದ್ದ ಪುನೀತ್ ಸಿಎಂ ಬಸವರಾಜ ಬೊಮ್ಮಾಯಿ ಅದನ್ನ ಲೋಕಾರ್ಪಣೆ ಮಾಡಿದ್ದರು.
ತಮಿಳು ಸಿನಿಮಾ ಮೇಕಿಂಗ್‌ನ್ನ ಬಹುವಾಗಿ ಮೆಚ್ಚುತ್ತಿದ್ದ ಪುನೀತ್ ಹುಡುಗ್ರು ಸಿನಿಮಾ ಆ ರೇಂಜ್‌ನಲ್ಲಿತ್ತು ಎಂದು ಹಲವು ಕಡೆ ಹೇಳಿಕೊಂಡಿದ್ದರು. ಆ್ಯಕ್ಷನ್ ಬಗ್ಗೆ ಒಲವಿದ್ದ ಅವರು ಇಂಗ್ಲಿಷ್ ಸಿನಿಮಾಗಳನ್ನು ಜಾಸ್ತಿ ನೋಡುತ್ತಿದ್ದರು. ತಮಿಳು, ಇಂಗ್ಲಿಷ್ ಸಿನಿಮಾಗಳನ್ನು ತಮ್ಮದೇ ಪ್ರೋಡಕ್ಷನ್ ಹೌಸ್‌ನಲ್ಲಿ ನಿರ್ಮಾಣ ಮಾಡುವ ಇಂಗಿತ ಅವರಲ್ಲಿತ್ತು.
ಬಡವರ ಬಂಧುವಾಗಿದ್ದ ರಾಜಕುಮಾರ: ಪುನೀತ್ ಸಿರಿತನವನ್ನು ಅನುಭವಿಸಿದ್ದರೂ ತಂದೆಯಿಂದ ಬಡತನದ ಬೇಗುದಿ ಎಂಥದ್ದು ಎಂಬುದನ್ನು ಅರಿತವರು. ಹಾಗಾಗಿ ಅವರು ಯಾವುದೇ ಭಾಗಕ್ಕೆ ಚಿತ್ರೀಕರಣಕ್ಕೆ ಹೋದರೂ ಅಲ್ಲಿನ ಜನರ ಜೊತೆ ಬೆರೆಯುತ್ತಿದ್ದರು. ಬಡವ-ಬಲ್ಲಿದ ಎಂಬ ಬೇಧವಿಲ್ಲದೇ ಅವರೊಟ್ಟಿಗೆ ಊಟ ಮಾಡುತ್ತಿದ್ದರು. ಅಲ್ಲಿನ ಜನಜೀವನ ಅರಿತು, ಅಲ್ಲಿರುವ ಸಮಸ್ಯೆಗಳನ್ನು ಆಲಿಸಿ ಸಹಾಯ ಹಸ್ತ ಚಾಚುವ ನಿಷ್ಕಲ್ಮಶ ಮನಸಿನ ಯುವರತ್ನ.
ಕೊಪ್ಪಳ ಜಿಲ್ಲೆಯ ಗಂಗಾವತಿ ಸುತ್ತಮುತ್ತ ಅವರ ಅಭಿನಯದ ಜೇಮ್ಸ್ ಸಿನಿಮಾ ಶೂಟಿಂಗ್ ನಡೆಯುತ್ತಿದ್ದಾಗ ಪೊಲೀಸರ ಮನವಿ ಮೇರೆಗೆ ಏನನ್ನೂ ನಿರೀಕ್ಷೆ ಮಾಡದೇ ಕೊರೊಬಾ ಕುರಿತು ಜಾಗೃತಿ ಮೂಡಿಸಿದ್ದರು. ಗಂಗಾವತಿ ತಾಲೂಕಿನ ಮಲ್ಲಾಪುರ ಸರಕಾರಿ ಪ್ರೌಢಶಾಲೆಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಇಷ್ಟು ಮಾತ್ರವಲ್ಲದೇ ನಾಡಿನ ಅನೇಕ ವೃದ್ಧಾಶ್ರಮ, ಅನಾಥಾಶ್ರಮ, ಗೋಶಾಲೆಗಳಿಗೆ ಅವರ ಕೊಡುಗೆ ಅನನ್ಯ. ಆದರೆ ಎಲ್ಲೂ ಈ ಬಗ್ಗೆ ಅವರು ಹೇಳಿಕೊಂಡಿಲ್ಲ.
ಬಾರದೂರಿಗೆ ಪಯಣ ಬೆಳೆಸಿದ ಪುನೀತ್ ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರಗಳಲ್ಲಿ ಒಂದಾಗಿದ್ದಾರೆ. ಅವರ ಅಗಲಿಕೆ ನಿಜಕ್ಕೂ ಅರಗಿಸಿಕೊಳ್ಳುವಂಥಲ್ಲ. ಮತ್ತೊಂದು ಜನ್ಮವಿದ್ದರೆ ನೀವು ಮತ್ತೇ ಕರುನಾಡಿನ ಪವರ್ ಸ್ಟಾರ್ ಆಗಿಯೇ ಹುಟ್ಟಿ ಬನ್ನಿ ಪುನೀತ್..