ಹಣಕಾಸಿನ ವ್ಯವಹಾರ ಹಾಗೂ ತಾಯಿಯನ್ನು ಕೊಲೆಗೈದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅಣ್ಣನನ್ನೇ ಸಹೋದರ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ.
ಕುರಿ ಶಿವಪ್ಪ (40) ಹತ್ಯೆಯಾದ ವ್ಯಕ್ತಿ. ಕುರಿ ಪಕ್ಕೀರಸ್ವಾಮಿ(35) ಕೊಲೆ ಮಾಡಿದ ಆರೋಪಿ.
ಘಟನೆಯ ವಿವರ
ಕೊಲೆಯಾದ ಶಿವಪ್ಪ 8 ವರ್ಷಗಳ ಹಿಂದೆ ತಾಯಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಜೈಲಿಗೆ ಹೋಗಿ ಹೊರಬಂದಿದ್ದ. ಜೈಲಿನಿಂದ ಬಂದಾಗಿನಿಂದ ತಮ್ಮ ಪಕ್ಕೀರಸ್ವಾಮಿ ಜೊತೆಗೆ ಹಣಕಾಸಿನ ವಿಚಾರಕ್ಕೆ ಪದೇ ಪದೆ ಜಗಳ ತೆಗೆಯುತ್ತಿದ್ದನಲ್ಲದೆ, ಕೊಲೆ ಬೆದರಿಕೆ ಹಾಕುತ್ತಿದ್ದ.
ಇದರಿಂದ ತೀವ್ರವಾಗಿ ನೊಂದಿದ್ದ ಫಕೀರಸ್ವಾಮಿ ಗುರುವಾರ ಬೆಳಿಗ್ಗೆ ಅಣ್ಣನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದು, ತಲೆ, ಕೈಗೆ ಬಿದ್ದ ಬಲವಾದ ಏಟಿಗೆ ಶಿವಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ರಮೇಶ್ ಕುಲಕರ್ಣಿ, ಹಿರೇಹಡಗಲಿ ಪಿಎಸ್ಐ ದಾದಾವಲಿ ಕೆ.ಎಚ್, ಸಿಬ್ಬಂದಿ ಅಂಜಿನಪ್ಪ ಮಾಗಳ, ಕಲ್ಲೇಶ್ ಗೌಡ, ಹಾಲೇಶ, ಮಾಬು ಸ್ಥಳ ಮಹಜರು ನಡೆಸಿ, ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಎಂದು ಕರೆ ಮಾಡಿದ ಖದೀಮನೊಬ್ಬ ಶಿಕ್ಷಕಿಯೊಬ್ಬರ ಸುಮಾರು 1 ಲಕ್ಷ ರೂ. ಹಣವನ್ನು ಖಾತೆಯಿಂದ ಎಗರಿಸಿದ್ದಾನೆ.
ಗದಗ ತಾಲೂಕಿನ ಹುಲಕೋಟಿಯ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಮಹಿಳೆಗೆ ಈ ರೀತಿಯ ವಂಚನೆ ಆಗಿದೆ. ಸೆ. 1ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಸರಿಪಡಿಸಲು ಅದರ ಸಂಖ್ಯೆ, ಪಿವಿವಿ ನಂಬರ್ ಹಾಗೂ ಸದ್ಯ ಬಳಸುತ್ತಿರುವ ಎಟಿಎಂ ಪಿನ್ ನೀಡುವಂತೆ ಕೇಳಿದ್ದಾನೆ.
ಶಿಕ್ಷಕಿಗೆ ಅನುಮಾನ ಬಂದಿದೆ. ನಿಮ್ಮ ಅಕೌಂಟ್ ಹುಲಕೋಟಿ ಶಾಖೆಯಲ್ಲಿಯೇ ಇರುವುದು ಎಂದು ಆ ವ್ಯಕ್ತಿ ಕನ್ನಡದಲ್ಲಿ ಹೇಳಿದಾಗ ಒಂದಿಷ್ಟು ವಿಶ್ವಾಸ ಮೂಡಿದೆ. ಎಟಿಎಂ ಕಾರ್ಡ್ ಮೇಲಿರುವ ನಂಬರ್ ಹೇಳಿದ ಮೇಲೆ, ಒಟಿಪಿ ನಂಬರ್ ಕೇಳಿದ ಆ ವ್ಯಕ್ತಿ ಒಡನೆಯೇ ತಲಾ 49,999 ರೂ.ಗಳಂತೆ ಎರಡು ಬಾರಿ ಹಣ ಡ್ರಾ ಮಾಡಿಕೊಂಡಿದ್ದಾನೆ.
ಹಣ ಖಾತೆಯಿಂದ ಹಿಂಪಡೆದಿರುವ ಬಗ್ಗೆ ಮೊಬೈಲ್‌ಗೆ ಎಸ್ಸೆಮ್ಮೆಸ್ ಬಂದಾಗ ಟೀಚರಮ್ಮನಿಗೆ ತಾವು ಮೋಸ ಹೋಗಿದ್ದು ಅರಿವಾಗಿದೆ. ಕುಟುಂಬಸ್ಥರೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡಿದ್ದಾರೆ. ಈ ಕುರಿತು ಗದಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್‌ಸ್ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.
ತಾಲೂಕಿನ ಕೊಣ್ಣೂರು ಬಳಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೃದ್ಧನೋರ್ವ ಮಲಪ್ರಭಾ ನದಿಯಲ್ಲಿ ಸಿಲುಕಿಕೊಂಡು, ಸುಮಾರು ಮೂರು ಗಂಟೆಗಳ ಕಾಲ ಪರದಾಡಿದ ಘಟನೆ ಜರುಗಿದೆ.
ಕೊಣ್ಣೂರು ನಿವಾಸಿ ಬಸಪ್ಪ ತಳವಾರ (60) ನದಿಯಲ್ಲಿ ಸಿಲುಕಿಕೊಂಡಿದ್ದ ವೃದ್ಧ. ಗ್ರಾಮದ ಹೊರವಲಯದಲ್ಲಿರುವ ಮಲಪ್ರಭಾ ನದಿಗೆ ಸ್ನಾನಕ್ಕೆಂದು ತೆರಳಿದ್ದು, ನದಿಯ ದಂಡೆಯಲ್ಲಿ ಕುಳಿತು ಸ್ನಾನ ಮಾಡುತ್ತಿದ್ದಾಗ ಏಕಾಏಕಿ ನದಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ.
ಸ್ನಾನ ಮಾಡಲೆಂದು ಕುಳಿತ ಸ್ಥಳ ನಡುಗಡ್ಡೆಯಾಗಿ ಮಾರ್ಪಟ್ಟು ಎರಡೂ ಬದಿಗೆ ನೀರು ರಭಸವಾಗಿ ಹರಿಯಲಾರಂಭಿಸಿದ್ದು, ಗಿಡದ ಪೊದೆಯಲ್ಲಿ ಕುಳಿತು ಸಹಾಯಕ್ಕೆ ಅಂಗಲಾಚಿದ್ದಾನೆ. ನದಿಯ ನೀರಿನ ಮಟ್ಟ ಹೆಚ್ಚಾಗಿ ವೃದ್ಧ ಕುಳಿತ ಪೊದೆಯೂ ನೀರಲ್ಲಿ ಕೊಚ್ಚಿಹೋಗುವ ಭೀತಿ ಆವರಿಸಿ ಕೆಲಹೊತ್ತು ಆಘಾತಕ್ಕೊಳಗಾಗಿದ್ದ.
ಸುದ್ದಿ ತಿಳಿದು ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಅಗ್ನಿಶಾಮಕ ದಳದ ಸಿಬ್ಬಂದಿ, ಗ್ರಾಮಸ್ಥರ ನೆರವಿನೊಂದಿಗೆ ರಕ್ಷಣೆ ಮಾಡಿದ್ದಾರೆ ಎಂದು ಗ್ರಾಮದ ಮುಖಂಡ ಚಂದ್ರಗೌಡ ಪಾಟೀಲ ಮಾಹಿತಿ ನೀಡಿದ್ದಾರೆ.
ಅತ್ಯಾಚಾರ ಆರೋಪಿಯನ್ನು ಬಂಧಿಸಿ ಮೆಡಿಕಲ್ ಟೆಸ್ಟ್ ಗೆಂದು ಜಿಲ್ಲಾಸ್ಪತ್ರೆಗೆ ಕರೆತಂದಿದ್ದ ವೇಳೆ ಆರೋಪಿ ಪರಾರಿಯಾದ ಘಟನೆ ಬೆಳಗಾವಿಯಲ್ಲಿ ಗುರುವಾರ ನಡೆದಿದೆ.
ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸಿದ್ದ ಕಾಕತಿ ಪೋಲೀಸರು, ಮೆಡಿಕಲ್ ಟೆಸ್ಟ್ ಮಾಡಿಸಲು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಆರೋಪಿ ಪೋಲೀಸರ ಕಣ್ಣುತಪ್ಪಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರದ ದೊಡ್ಡೂರು ರಸ್ತೆಯ ಬದಿ ಗಾಂಜಾದ ಚೀಟು ಕಟ್ಟುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮುಧೋಳ ಮೂಲದ ಕಟ್ಟಡ ಕಾರ್ಮಿಕ ಸಲೀಂ ಅಲಿಯಾಸ್ ಸಲ್ಮಾನ್ ದಾದಾಪೀರ್ ಶಿಲ್ಲೆದಾರ ಬಂಧಿತ ಆರೋಪಿ.
ಬಂಧಿತನಿಂದ 650 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸೆ.13ರಂದು ಲಕ್ಷ್ಮೇಶ್ವರದ ಹುಡ್ಕೋ ಹತ್ತಿರ ದೊಡ್ಡೂರ ರಸ್ತೆಯ ಪೂಲ್ ಕಟ್ಟೆಯ ಬಳಿ ಗಾಂಜಾ ಚೀಟು ಕಟ್ಟುತ್ತಿದ್ದಾಗ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದಾಗ ಆರೋಪಿ ಸಿಕ್ಕಿಬಿದ್ದಾನೆ. ಲಕ್ಷ್ಮೇಶ್ವರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಸ್ನೇಹಿತನೊಂದಿಗೆ ಗಣೇಶ ಮೂರ್ತಿ ವಿಸರ್ಜನೆಗೆ ಭೀಮಾ ನದಿಗೆ ತೆರಳಿದ್ದ ಯುವಕ ನೀರು ಪಾಲಾದ ಘಟನೆ ಜೀವರ್ಗಿ ತಾಲೂಕಿನ ಅಂಕಲಗಾ ತಾಂಡಾದಲ್ಲಿ ಸಂಭವಿಸಿದೆ. ತಾಂಡಾ ನಿವಾಸಿ ಗಿರೀಶ್ ಜಯರಾಮ ಚವ್ಹಾಣ (21) ಮೃತ ಯುವಕ.
ತಾಂಡಾದಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಯನ್ನು ವಿಸರ್ಜನೆಗೆಂದು ಐವರು ಸ್ನೇಹಿತರೊಂದಿಗೆ ಭೀಮಾ ತೀರಕ್ಕೆ ಹೋಗಿದ್ದು, ಮೂರ್ತಿಯನ್ನು ನದಿಯಲ್ಲಿ ವಿಸರ್ಜನೆ ಮಾಡುವಾಗ ಕಾಲುಜಾರಿ ನದಿಗೆ ಬಿದ್ದಿದ್ದಾನೆ. ಯುವಕನ ಶವಕ್ಕಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಜೀವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕಾಗಿ ಕುಂದಾಪುರ ಮೂಲದ ಪಾನ್ ಶಾಪ್ ಅಂಗಡಿ ವ್ಯಾಪಾರಿಯನ್ನು ಕೊಲೆ ಮಾಡಿದ ಘಟನೆ ನಗರದ ವಡಗಾವಿ ಪ್ರದೇಶದ ಲಕ್ಷ್ಮೀ ನಗರದಲ್ಲಿ ನಡೆದಿದೆ.
ಮೂಲತಃ ಕುಂದಾಪುರದ ಬಾಳಕೃಷ್ಣ ಶೆಟ್ಟಿ ಮೃತ ವ್ಯಕ್ತಿ. ಈತ ಕಳೆದ 25 ವರ್ಷಗಳಿಂದ ಬೆಳಗಾವಿಯ ಲಕ್ಷ್ಮೀ ನಗರದಲ್ಲಿ ಪಾನ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ.
ವಡಗಾವಿಯ ದತ್ತಾ ಜತ್ತಿನಕಟ್ಟಿ ಎಂಬಾತ ದಿನನಿತ್ಯ ರಾತ್ರಿ ಬಾಳಕೃಷ್ಣನ ಅಂಗಡಿಗೆ ಬಂದು ಗುಟಖಾ, ಸಿಗರೇಟ್ ಉದ್ರಿ ಕೊಡುವಂತೆ ಪೀಡಿಸುತ್ತಿದ್ದ, ಉದ್ರಿ ಕೊಡದ ಕಾರಣ ಬಾಳಕೃಷ್ಣ ಶೆಟ್ಟಿಯ ಜೊತೆ ಜಗಳಾಡುತ್ತಿದ್ದ. ಆದರೆ, ನಿನ್ನೆ ರಾತ್ರಿ ಹೊಸ ಕ್ಯಾತೆ ತೆಗೆದ ದತ್ತಾ ನನ್ನ ಮೊಬೈಲ್ ಕಳುವಾಗಿದೆ. ಅದನ್ನು ನೀನೇ ತೆಗೆದುಕೊಡಿದ್ದಿ ಎಂದು ಜಗಳ ತೆಗದಿದ್ದಾನೆ. ಈತನ ಜೊತೆ ಜಗಳವೇ ಬೇಡ ಎಂದು ಬಾಳಕೃಷ್ಣ ಶೆಟ್ಟಿ ಪಾನ್ ಅಂಗಡಿ ಬಂದ್ ಮಾಡಿಕೊಂಡು ಮನೆಗೆ ಹೋಗಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ದತ್ತಾ ಬಾಳಕೃಷ್ಣನ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಬಾಳಕೃಷ್ಣನ ಆಪ್ತರು ತಿಳಿಸಿದ್ದಾರೆ.
ಆರೋಪಿ ದತ್ತಾ ಜತ್ತಿನಕಟ್ಟಿಯನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕಾರಟಗಿ: ಸಾಮಾಜಿಕವಾಗಿ ರಾಜ್ಯದಲ್ಲಿ ದೊಡ್ಡ ಸಮುದಾಯವನ್ನೇ ಹೊಂದಿರುವ ಲಿಂಗಾಯತ ಪಂಚಮಸಾಲಿ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಪಂಚಮಸಾಲಿ ಸಮುದಾಯದವರನ್ನು 2A ವರ್ಗಕ್ಕೆ ಸೇರಿಸಲು ರಾಜ್ಯ ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದಿದೆ. ತಕ್ಷಣವೇ ಪಂಚಮಸಾಲಿ ಸಮಾಜವನ್ನು ಸರಕಾರ 2ಎ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಬುಧವಾರ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಚನ್ನಬಸಪ್ಪ ಸುಂಕದ್ ಮಾಜಿ ಸಿಎಂ ಬಿಎಸ್ವೈ ಮಾತು ಕೊಟ್ಟು ತಪ್ಪಿದ್ದಾರೆ. ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ಮಾತು ತಪ್ಪಿದರೆ ಮುಂದಿನ ದಿನಮಾನಗಳಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು.
ಮುಖಂಡ ಪರಮೇಶಗೌಡ ಕೊಂತನೂರ್ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮುದಾಯಗಳ ಮತಗಳನ್ನು ಪಡೆದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬರುವ ಮುಂಚೆ ಬಿಜೆಪಿ ಮಾತು ಕೊಟ್ಟಿತ್ತು. ಆದರೆ ಇದೀಗ ಮಾತು ಉಳಿಸಿಕೊಳ್ಳುತ್ತಿಲ್ಲ. ಇದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡ ಕೊತ್ವಾಲ್ ಶರಣಪ್ಪ ಸೇರಿದಂತೆ ಮತ್ತಿತರರು ಇದ್ದರು.
ಕೋವಿಡ್ ದಿನಗಳು ಬಂದು ಹಲವರ ಬದುಕು, ಉದ್ಯೋಗವನ್ನೇ ಕಸಿದಿವೆ. ಕೋವಿಡ್‌ನಿಂದಾಗಿ ಅಲ್ಲದೇ ನಂತರದ ದಿನಗಳಲ್ಲಿ ದುಡಿಮೆ ಇಲ್ಲದೇ ಜೀವನ ಹೇಗೆ ಎಂದು ಆತಂಕಕ್ಕೊಳಗಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಗೇನು ಕಡಿಮೆ ಇಲ್ಲ. ಇಂಥ ಆತಂಕದ ಮಡುವಿನಲ್ಲೇ ಇನ್ನೂ ಉಸಿರು ಬಿಗಿ ಹಿಡಿದಿರುವ ಸ್ಥಿತಿ ಚಿತ್ರರಂಗದ್ದು.
ಸರಿ ಸುಮಾರು 19 ತಿಂಗಳಿನಿಂದ ಭಾರತದ ಚಿತ್ರಮಂದಿರಗಳಿಗೆ ಬೀಗ ಬಿದ್ದಿದೆ. 2021ರ ಜನೇವರಿಯಲ್ಲಿ ಪುನಾರಂಭಗೊಂಡಿದ್ದ ಚಿತ್ರರಂಗ ಇನ್ನೇನು ಚೇತರಿಕೆ ಕಾಣಬೇಕೆನ್ನುವಷ್ಟರಲ್ಲಿ ಮತ್ತೇ ಸ್ಥಗಿತವಾಯಿತು. ಅದು ಅನಿವಾರ್ಯವೂ ಆಗಿತ್ತು.
ಆದರೆ ಈಗ ಕೋವಿಡ್ ಚಿತ್ರಣ ಬದಲಾಗಿದೆ. ವಿಶೇಷವಾಗಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿದ್ದರಿಂದ ಹಂತ ಹಂತವಾಗಿ ವಿವಿಧ ಚಟುವಟಿಕೆಗಳು ಕಾರ್ಯಾರಂಭ ಮಾಡಿವೆ.
ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಅಂಗಡಿ-ಮುಂಗಟ್ಟುಗಳು, ಬಾರ್-ರೆಸ್ಟೋರೆಂಟ್‌ಗಳು ಬಾಗಿಲು ತೆರೆದಿವೆ. ಬಸ್ ಸಂಚಾರ ಮತ್ತೇ ಎಂದಿನ ಲಯಕ್ಕೆ ಮರಳಿದೆ. ಗಣೇಶೋತ್ಸವವೂ ಕೋವಿಡ್‌ಗೂ ಹಿಂದಿನ ವರ್ಷಗಳಿಗೆ ಸವಾಲೊಡ್ಡುವ ರೀತಿಯಲ್ಲಿ ನಡೆಯುತ್ತಿದೆ. ಆದರೆ ಚಿತ್ರೋದ್ಯಮ ಮಾತ್ರ ಕಸುವು ಕಳೆದುಕೊಂಡಂತಾಗಿದೆ.
ಬಸ್‌ನಲ್ಲಿ ಆಸನ ಭರ್ತಿಗೆ ಅವಕಾಶ ಇದೆ, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಜನರಿಂದ ಭರ್ತಿಯಾಗಿ ಭರ್ಜರಿ ವ್ಯಾಪಾರ ಮಾಡುತ್ತಿವೆ. ಸಿನಿಮಾ ಥೇಟರ್ ವಿಷಯಕ್ಕೆ ಬಂದರೆ ಮಾತ್ರ ಸರಕಾರ ಕೋವಿಡ್ ಕಾರಣವನ್ನು ಮುಂದೊಡ್ಡುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಚಿತ್ರರಂಗಗ ನಾನಾ ಶಾಖೆಗಳಲ್ಲಿ ಕೆಲಸ ಮಾಡುತ್ತಿರುವವರ ಅಭಿಪ್ರಾಯ.
ಸರಕಾರದ ಈ ತಾರತಮ್ಯ ನೀತಿಯಿಂದ ಬರೀ ಸಿನಿಮಾ ಕಾರ್ಮಿಕರ ಬದುಕಿಗೆ ಪೆಟ್ಟು ಬಿದ್ದಿಲ್ಲ. ಚಿತ್ರಮಂದಿರಗಳ ಮಾಲಕರು, ಪ್ರದರ್ಶಕರು, ವಿತರಕರು, ನಿರ್ಮಾಪಕರು.. ಹೀಗೆ ಚಿತ್ರರಂಗದ ಎಲ್ಲ ವಿಭಾಗದವರಿಗೂ ಹೊಡೆತ ಬಿದ್ದಿದೆ.
ಪರಿಹಾರ ಪಡೆಯಲು ನಿಯಮಗಳದ್ದೇ ಸವಾಲು!
ಸರಕಾರ ಎಲ್ಲ ಕಾರ್ಮಿಕರಿಗೂ ಕೋವಿಡ್ ಪರಿಹಾರ ಒದಗಿಸಲು ಮುಂದಾಗಿದ್ದು ಶ್ಲಾಘನೀಯವೇ. ಇದರಲ್ಲಿ ಚಿತ್ರರಂಗದ ಕಾರ್ಮಿಕರನ್ನು ಸೇರ್ಪಡೆ ಮಾಡಿದ್ದು ಸ್ವಾಗತಾರ್ಹ ಸಂಗತಿ. ಆದರೆ ಪರಿಹಾರ ಪಡೆಯಲು ಸರಕಾರ ವಿಧಿಸಿರುವ ನಿಯಮಗಳನ್ನು ಗಮನಿಸಿದರೆ ನೂರು ಜನರಲ್ಲಿ ಐದಾರು ಜನ ಮಾತ್ರ ಈ ಪರಿಹಾರದ ಫಲ ಪಡೆಯುತ್ತಾರೆ. ಇನ್ನುಳಿದವರು ಸರಕಾರ ಕೊಡುವ ಪರಿಹಾರ ಧನದ ಅರ್ಧಭಾಗವನ್ನು ನಿಯಮಗಳ ಪಾಲನೆಗೆ ಸುರಿಯಬೇಕಾಗುತ್ತದೆ ಎಂದು ಚಿತ್ರಮಂದಿರದ ದ್ವಾರಪಾಲಕ ವಿಜಯಸಾಕ್ಷಿ ಎದುರು ಅಳಲು ತೋಡಿಕೊಂಡರು.
“ರಾಜ್ಯದಲ್ಲಿ ಬಸ್, ಟೆಂಪೋ, ಟ್ರಕ್ ಭರ್ತಿಯಾಗಿ ಓಡಾಡುತ್ತಿವೆ. ಅಲ್ಲಿ ಉಲ್ಲಂಘನೆಯಾಗದ ಕೋವಿಡ್ ನಿಯಮ ಚಿತ್ರಮಂದಿರಗಳ ಆಸನ ಭರ್ತಿಗೆ ಅವಕಾಶ ಕೊಟ್ಟರೆ ಆಗುತ್ತಾ? ಎಲ್ಲರಿಗೂ ಅವಕಾಶ ಕೊಟ್ಟಿರುವಂತೆ ಚಿತ್ರಮಂದಿರಗಳ ಭರ್ತಿಗೆ ಅವಕಾಶ ಕೊಡಿ. ಈಗ ಕೊರೊನಾ ನಿಯಂತ್ರಣದಲ್ಲಿದೆ. ಚಿತ್ರೋದ್ಯಮದ ಚಟುವಟಿಕೆ ನಂಬಿಕೊಂಡು ಸಾವಿರಾರು ಕುಟುಂಬಗಳು ಬದುಕುತ್ತಿವೆ. ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಲು ತುದಿಗಾಲಲ್ಲಿವೆ. ಸರಕಾರದ ವಿರುದ್ಧ ಹೋಗಬಾರದು ಎನ್ನುವ ಕಾರಣಕ್ಕೆ ಬಿಗ್ ಸಿನಿಮಾಗಳು ತೆರೆಗೆ ಬಂದಿಲ್ಲ. ಸರಕಾರ ಚಿತ್ರಮಂದಿರಗಳಲ್ಲಿ ಶೇಕಡಾ 100 ಆಸನ ಭರ್ತಿಗೆ ಅವಕಾಶ ಕೊಡಲಿ. ಒಂದೊಮ್ಮೆ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬಂದರೆ ಎಲ್ಲವನ್ನು ಬಂದ್ ಮಾಡುವಂತೆ ಚಿತ್ರಮಂದಿರಗಳನ್ನು ಬಂದ್ ಮಾಡಲು ಸೂಚಿಸಲಿ. ಯಾರು ಬೇಡ ಅಂತಾರೆ?”
ಆರ್ ಆರ್ ಓದುಗೌಡರ್, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ
“ಸರಕಾರದ ಈ ತಾರತಮ್ಯ ನೀತಿಯಿಂದ ಚಿತ್ರಮಂದಿರಗಳ ಮಾಲಕರು ಚಿಂತಾಕ್ರಾಂತರಾಗಿದ್ದಾರೆ. ಸರಕಾರ ಕೆಲವು ತೆರಿಗೆ ಶುಲ್ಕ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಕೆಲ ವಿನಾಯಿತಿಗಳನ್ನು ಕೊಟ್ಟದ್ದು ನಿಜ. ಆದರೆ ಈಗಲೂ ಚಿತ್ರಮಂದಿರಗಳ ಭರ್ತಿಗೆ ಅವಕಾಶ ಕೊಡದಿದ್ದರೆ ಥೇಟರ್ ನಡೆಸೋದಾದರೂ ಹೇಗೆ?”
ವಿಶ್ವನಾಥ್ ಮಹಾಂತಯ್ಯನಮಠ, ಮಾಲಕರು, ಶ್ರೀ ಲಕ್ಷ್ಮೀ ಹಾಗೂ ಶಿವ ಚಿತ್ರಮಂದಿರ, ಕೊಪ್ಪಳ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ, ವಿರೂಪಾಪುರ ತಾಂಡಾ ಸುತ್ತ ಮುತ್ತ ಮಂಗಳವಾರ ರಾತ್ರಿ ಲಘು ಭೂಕಂಪ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ವಿಜಯಸಾಕ್ಷಿಗೆ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 8-24ರ ಸುಮಾರಿಗೆ 2-3 ಸೆಕೆಂಡ್‌ಗಳಷ್ಟು ಕಾಲ ಭೂಮಿ ಕಂಪಿಸಿದ ಅನುಭವ ತಾಂಡಾ ಹಾಗೂ ಕಲಕೇರಿ ಗ್ರಾಮದ ಜನರಿಗೆ ಉಂಟಾಗಿದ್ದು, ಮನೆಯ ಗೃಹಪಯೋಗಿ ವಸ್ತುಗಳು ಅಲುಗಾಡಿವೆ. ಘಟನೆಯಿಂದ ಗಾಬರಿಗೊಂಡ ಜನ ಮನೆಯಿಂದ ಹೊರ ಓಡಿ ಬಂದು ಗುಂಪು ಸೇರಿ ಚರ್ಚಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಈ ಕುರಿತು ವಿಜಯಸಾಕ್ಷಿಗೆ ಮಾಹಿತಿ ನೀಡಿರುವ ಕಲಕೇರಿ ಗ್ರಾಮ ಪಂಚಾಯತಿ ಸದಸ್ಯ ಜಹೀರುದ್ದೀನ್ ಮುಲ್ಲಾ ಅವರು, ಕಂಪನದ ಅನುಭವ ಬಿಚ್ಚಿಟ್ಟರು.