Home Blog Page 3242

ಮೆಕ್ಯಾನಿಕ್ ಮನೆಯನ್ನು ಬಿಡದ ಕಳ್ಳರು; ಬಂಗಾರದ ಆಭರಣಗಳ ಕದ್ದು ಪರಾರಿ…

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಯಾರೋ ಕಳ್ಳರು ಮನೆಗೆ ಹಾಕಿದ್ದ ಬೀಗವನ್ನು ಮೀಟಿ ಮನೆಯಲ್ಲಿದ್ದ ಸಾವಿರಾರು ರೂ.ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.

ಬೆಟಗೇರಿಯ ಮಂಜುನಾಥ್ ನಗರದ ವಾಂಬೆ ಬಡಾವಣೆಯ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಪರಶುರಾಮ ತಂದೆ ಸಂಗಪ್ಪ ಸೂರ್ಯವಂಶಿ ಇವರ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಈ ಕೃತ್ಯ ಮಾಡಿದ್ದಾರೆ.

ಮನೆಯಲ್ಲಿ ಬೆಡ್ ರೂಂನಲ್ಲಿದ್ದ ಟ್ರಝರಿಯ ಲಾಕರ್ ನ್ನು ಯಾವುದು ವಸ್ತುವಿನಿಂದ ಮೀಟಿ ತಗೆದು ಅದರಲ್ಲಿದ್ದ 89ಸಾವಿರದ 250ರೂ.ಗಳ ಮೌಲ್ಯದ 25.5 ಗ್ರಾಮ ತೂಕದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ 0068/2023 ಕಲಂ 454,380 ರ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಧಿ ಆಸೆಗಾಗಿ ದೇವಸ್ಥಾನದಲ್ಲಿ ಗುಂಡಿ ಅಗೆದ ಖದೀಮರು…..

ಬಸವಣ್ಣನ ಮೂರ್ತಿ ಕಿತ್ತು ಹಾಕಿ ದುಷ್ಕೃತ್ಯ….

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ


ಲಕ್ಕುಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಟೆಲ್ ಹಾಗೂ ಮನೆಗಳ ಕಳ್ಳತನವಾಗಿರುವ ಘಟನೆಗಳು ಇನ್ನೂ ಹಸಿಯಾಗಿರುವಾಗಲೇ, ಇಲ್ಲಿಯ ದೇವಸ್ಥಾನವೊಂದರಲ್ಲಿ ನಿಧಿ ಆಸೆಗಾಗಿ ಕಳ್ಳರು ಮೂರ್ತಿಯಿರುವ ಸ್ಥಳವನ್ನು ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದಿಂದ 3 ಕೀ.ಮೀ ದೂರದಲ್ಲಿರುವ ಕದಾಂಪೂರ ಗ್ರಾಮದ ರಸ್ತೆಗೆ ಹೊಂದಿಕೊಂಡಿರುವ ಜಮೀನೊಂದರಲ್ಲಿ ಈ ಘಟನೆ ನಡೆದಿದೆ.

ಐತಿಹಾಸಿಕ ಸೋಮೇಶ್ವರ ದೇವಾಲಯದ ಒಳಗೆ ಈಶ್ವರಲಿಂಗ ಮೂರ್ತಿಯ ಮುಂದೆ ಇದ್ದ ಬಸವಣ್ಣನ ಮೂರ್ತಿಯನ್ನು ಕಿತ್ತು ಹಾಕಿ, ಅದರ ಕೆಳಗೆ ಸುಮಾರು ಹತ್ತು ಅಡಿ ಆಳಕ್ಕೆ ಅಗೆಯಲಾಗಿದೆ.

ನೂಲು ಹುಣ್ಣಿಮೆ ದಿನ ರಾತ್ರಿ ಈ ಪ್ರಕರಣ ನಡೆದಿದ್ದು, ಅರ್ಚಕರು ಮುಂಜಾನೆ ಪೂಜೆ ನೆರವೇರಿಸಲು ತೆರಳಿದಾಗ ಕೃತ್ಯ ಗಮನಕ್ಕೆ ಬಂದಿದೆ. ನಿಧಿ ಆಸೆಗಾಗಿ ಕಳ್ಳರು ಇಂತಹ ಕೃತ್ಯವನ್ನು ಎಸಗಿರಬಹುದು ಎಂದು ದೇವಸ್ಥಾನದ ಅರ್ಚಕ ಶಿದ್ರಾಮಯ್ಯ ಮಾಯಾಕರಮಠ ಅಭಿಪ್ರಾಯಪಟ್ಟಿದ್ದಾರೆ.


ಕಳೆದ ಎರಡು ವರ್ಷಗಳ ಹಿಂದೆ ಇದೇ ದೇವಸ್ಥಾನದಲ್ಲಿ ಇಂತಹ ಪ್ರಕರಣ ನಡೆದಿತ್ತು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.


ಸೋಮನಕಟ್ಟಿ ಪ್ರದೇಶವೇಂದು ಹೇಳಲಾಗುತ್ತಿರುವ ಇಲ್ಲಿ, ನೂರಾರು ವರ್ಷಗಳ ಹಿಂದೆ ಜನ ವಸತಿಯಿತ್ತು. ಇಲ್ಲಿನ ಕಲಾತ್ಮಕ ಕೆತ್ತನೆಯ ಈ ಸೋಮೇಶ್ವರ ದೇವಸ್ಥಾನವು ಅಂದಿನಿಂದಲೇ ಪೂಜೆಗೊಳ್ಳುತ್ತಿದೆ.
ಇದರ ಕೂಗಳತೆಯ ದೂರದಲ್ಲಿ ಮಾರುತಿ ದೇವಸ್ಥಾನವೂ ಇದೆ. ದೇವಸ್ಥಾನಕ್ಕೆ ರಕ್ಷಣಾ ಕವಚ ಒದಗಿಸಬೇಕೆಂದು ಸಮಾಜ ಸೇವಕ ಮರಿಯಪ್ಪ ವಡ್ಡರ ಹಾಗೂ ಸಾರ್ವಜನಿಕರ ಒತ್ತಾಯಿಸಿದ್ದಾರೆ.

ನಕಲಿ ಸಹಿ ಮಾಡಿ ಗ್ರಾಹಕನಿಗೆ ವಂಚನೆ; ಮುತ್ತೂಟ್ ಪಿನ್ ಕಾರ್ಪ್ ಕಂಪನಿ ಮೋಸ, ಮ್ಯಾನೇಜರ್ ಸೇರಿ ಸಿಬ್ಬಂದಿ ಮೇಲೆ ಕೇಸ್

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಹಣದ ಅಡಚಣೆಗಾಗಿ ತಾಯಿ ನೆಕ್ಲೆಸ್ ಅಡವಿಟ್ಟಿದ್ದ ವ್ಯಕ್ತಿವೊರ್ವ ಮೃತಪಟ್ಟಿದ್ದರೂ ಆತನ ನಕಲಿ ಸಹಿ ಮಾಡಿ ಮುತ್ತೂಟ್ ಪಿನ್ ಕಾರ್ಪ್ ಕಂಪನಿ ಸಿಬ್ಬಂದಿ ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಕೆಲಸಗಾರ ಕೃಷ್ಣ ನಾಯಕ, ಬ್ರ್ಯಾಂಚ್ ಮ್ಯಾನೇಜರ್ ಹಾಸೀಮಸಾಬ ಮತ್ತು ಸಿಬ್ಬಂದಿಗಳ ಮೇಲೆ ಚೀಟಿಂಗ್ ಕೇಸ್ ದಾಖಲಾಗಿದೆ.

ಲಕ್ಷ್ಮೇಶ್ವರ ಪಟ್ಟಣದ ಮುತ್ತೂಟ್ ಪಿನ್ ಕಾರ್ಪ್ ಗೋಲ್ಡ್ ಲೋನ್ ಕಂಪನಿಯಲ್ಲಿ ಶಿವಕುಮಾರ್ ವಿ. ಎಂಬುವರು ಹಣದ ಅಡಚಣೆಗಾಗಿ ತನ್ನ ತಾಯಿ ಸಾವಿತ್ರಮ್ಮ ಇವರ 52.5 ಗ್ರಾಮ ತೂಕದ ಚಿನ್ನದ ನೆಕ್ಲೆಸ್ ಅಡವಿಟ್ಟು ಒಂದು ಲಕ್ಷ ಮೂವತ್ತು ಸಾವಿರ ರೂ.ಗಳನ್ನು 14-10-2022 ರಂದು ಸಾಲ ತೆಗೆದುಕೊಂಡಿದ್ದರು. ಆ ನಂತರ 6-11-2022 ರಂದು ಶಿವಕುಮಾರ್ ಮೃತಪಟ್ಟಿದ್ದರು.

ಇತ್ತ ಮೃತ ಶಿವಕುಮಾರ್ ತಾಯಿ ಹಾಗೂ ಸಹೋದರಿ ಭಾರತಿ ವಿರೂಪಾಕ್ಷಪ್ಪ ಆರ್ ಸೇರಿ ಲಕ್ಷ್ಮೇಶ್ವರದ ಮುತ್ತೂಟ್ ಪಿನ್ ಕಾರ್ಪ್ ಕಂಪನಿಗೆ ಅಡವಿಟ್ಟಿದ್ದ ನೆಕ್ಲೆಸ್ ಬಗ್ಗೆ ಕೇಳಲು ಹೋದಾಗ ಕಂಪನಿಯ ಕೃಷ್ಣ ನಾಯಕ ಶಿವಕುಮಾರ್ ಎಂಬ ಹೆಸರಿನಲ್ಲಿ ಯಾರೂ ಸಾಲ ಪಡೆದಿಲ್ಲ ಸುಳ್ಳು ಹೇಳಿ ಕಳುಹಿಸಿದ್ದರು.

ಆದರೆ ಇಷ್ಟಕ್ಕೆ ಸುಮ್ಮನಾಗದ ಮೃತ ಶಿವಕುಮಾರ್ ನ ಸಹೋದರಿ ಭಾರತಿ, ಸಂಬಂಧಪಟ್ಟ ಕಂಪನಿಯಲ್ಲಿ ಸಾಲದ ಬಗ್ಗೆ ಮಾಹಿತಿ ಪಡೆದಾಗ , ಅದರಲ್ಲಿ ಸಂಬಂಧಪಟ್ಟ ಕಂಪನಿಯ ಕೆಲಸಗಾರ ಕೃಷ್ಣ ನಾಯಕ ಹಾಗೂ ಬ್ರಾಂಚ್ ಮ್ಯಾನೇಜರ್ ಹಾಸೀಮಸಾಬ ಮತ್ತು ಸಿಬ್ಬಂದಿ ಎಲ್ಲರೂ ಮಿಲಾಪಿಯಾಗಿ, ಶಿವಕುಮಾರ್ 6-11-22 ರಂದು ಮೃತಪಟ್ಟಿದ್ದರೂ 02-02-23 ರಂದು ಮೃತಪಟ್ಟಿದ್ದ ಶಿವಕುಮಾರ್ ಹಣ ತುಂಬಿ ಬಂಗಾರದ ನೆಕ್ಲೆಸ್ ಬಿಡಿಸಿಕೊಂಡು ಹೋದಂತೆ ಮೃತನ ನಕಲಿ ಸಹಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿದ್ದಾರೆ ಎಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಈ ಕುರಿತು 0117/2023, IPC 1860(U/s-417,420,465,468,471,34) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿ: ತಪ್ಪಿದ ಅನಾಹುತ, ಚಾಲಕ ಗಂಭೀರ

ಪಾಟ ತುಂಡಾಗಿ ಕಂದಕಕ್ಕೆ ಉರುಳಿದ ಬಸ್….

ವಿಜಯಸಾಕ್ಷಿ ಸುದ್ದಿ, ರೋಣ/ ನರೇಗಲ್


35 ಪ್ರಯಾಣಿಕರನ್ನು ಹೊತ್ತು, ಗಜೇಂದ್ರಗಡದಿಂದ ಅರಸಿಕೇರಿಗೆ ಹೊರಟಿದ್ದ ಗಜೇಂದ್ರಗಡ ಘಟಕದ ಬಸ್ ನಿಡಗುಂದಿ ಗ್ರಾಮದ ಬಳಿ ಶುಕ್ರವಾರ ಪಲ್ಟಿಯಾಗಿದೆ. ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಜೇಂದ್ರಗಡ ಸಾರಿಗೆ ಘಟಕಕ್ಕೆ ಸೇರಿದ್ದ ಬಸ್ ಗದಗ ಮಾರ್ಗವಾಗಿ ಅರಸಿಕೇರಿಗೆ ಹೊರಟಿತ್ತು. ಮಾರ್ಗಮಧ್ಯ ನಿಡಗುಂದಿ ಗ್ರಾಮದ ಬಳಿ ಬಸ್‌ನ ಮುಂದಿನ ಭಾಗದ ಪಾಟ ತುಂಡಾದ ಪರಿಣಾಮ, ರಸ್ತೆಯ ಬದಿಯಲ್ಲಿರುವ ಕಂದಕಕ್ಕೆ ಬಸ್ ಉರುಳಿ ಬಿದ್ದಿದೆ. ಬಸ್ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಗದಗ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.

ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದ್ದು, ಮುಂಬಾಗದ ಪಾಟ ತುಂಡಾಗುತ್ತಿದ್ದಂತೆ ಎಚ್ಚರ ವಹಿಸಿದ ಚಾಲಕ, ಬಸ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಜಾಗೃತೆಯಿಂದ ಚಲಾಯಿಸಿದ್ದಾನೆ. ಇಲದಿದ್ದರೆ 20ರಿಂದ 30 ಅಡಿ ಹಿಂದಕ್ಕೆ ಬಸ್ ಪಲ್ಟಿಯಾಗಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು ಎಂದು ಪಕ್ಕದ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರು ಮಾಹಿತಿ ನೀಡಿದರು.


ಚಾಲಕನಿಗೆ ಸ್ವಲ್ಪ ಗಾಯವಾಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಘಟಕದ ಅಧಿಕಾರಿ ಕೆ.ಎಸ್ ಪಲ್ಲೇದ ತಿಳಿಸಿದ್ದಾರೆ. ಈ ಕುರಿತು ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಎಚ್.ಕೆ ಪಾಟೀಲ: ಸೆ.3ರಂದು ಟರ್ಫ್ ಹಾಕಿ ಕ್ರೀಡಾಂಗಣ ಲೋಕಾರ್ಪಣೆ

0

ವಿಜಯಸಾಕ್ಷಿ ಸುದ್ದಿ, ಗದಗ

ಹಾಕಿ ಕ್ರೀಡೆಯಲ್ಲಿ ಗದಗ ಜಿಲ್ಲೆ ತನ್ನದೇ ಆದ ಇತಿಹಾಸ ಹೊಂದಿದೆ. ಕಲ್ಕತ್ತಾ, ಮುಂಬೈ ಬಿಟ್ಟರೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಹಾಕಿ ಕ್ರೀಡಾಪಟುಗಳನ್ನು ನೀಡಿರುವ ಹೆಮ್ಮೆ ನಮ್ಮ ಗದಗ ಜಿಲ್ಲೆಯದಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ ಪಾಟೀಲ ಹೇಳಿದರು.

ಬೆಟಗೇರಿಯ ಗಾಂಧೀ ನಗರದಲ್ಲಿ ನಿರ್ಮಾಣವಾದ ಸುಸಜ್ಜಿತ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಗದಗ-ಬೆಟಗೇರಿ ನಗರದ ಹೃದಯ ಭಾಗದಲ್ಲಿ ಅಂದಾಜು 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ಟರ್ಫ್ ಹಾಕಿ ಕ್ರೀಡಾಂಗಣವು ಬರುವ ಸೆಪ್ಟೆಂಬರ 3ರಂದು ಮುಂಜಾನೆ 9 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ ಮಹದೇವಪ್ಪನವರು ಸುಸಜ್ಜಿತ ಹಾಕಿ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದು, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ನಾಗೇಂದ್ರ ಆಗಮಿಸಲಿರುವರು ಎಂದರು.

ಅದೇ ದಿನ ಮುಂಜಾನೆ 10 ಗಂಟೆಗೆ ಹಾಕಿ ಕ್ರೀಡಾಂಗಣದಲ್ಲಿ ಆರು ತಂಡಗಳು ಎ ಮತ್ತು ಬಿ ಗುಂಪುಗಳಾಗಿ ವಿಂಗಡಿಸಿ ಹಾಕಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಮೊದಲ ಗುಂಪಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಹುಬ್ಬಳ್ಳಿಯ ಹಾಕಿ ಅಕಾಡೆಮಿ, ಬಿವಾಯ್‍ಎಎಸ್ತಂ ಡಗಳು ಹಾಗೂ ಮತ್ತೊಂದು ಗುಂಪಿನಲ್ಲಿ ಗದಗ-ಘಿI, ಎಸ್‍ಡಬ್ಲೂಆರ್ ಹುಬ್ಬಳ್ಳಿ ಹಾಗೂ ಬಿವಾಯ್‍ಎಎಸ್ ಬೆಂಗಳೂರು ತಂಡಗಳು ಸೆಣಸಲಿವೆ ಎಂದರು.

ಸುಸಜ್ಜಿತ ಹಾಕಿ ಕ್ರೀಡಾಂಗಣವು ಉತ್ತರ ಕರ್ನಾಟಕ ಭಾಗದಲ್ಲಿಯೇ ಪ್ರಥಮವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತ ಟರ್ಫ್ ಹಾಕಿ ಕ್ರೀಡಾಂಗಣ ಹೊಂದಿರುವುದು ಗದಗ ಜಿಲ್ಲೆ ಮಾತ್ರ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಈ ಹಾಕಿ ಕ್ರಿಡಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಯುವ ಕ್ರೀಡಾಪಟುಗಳನ್ನು ಹಾಗೂ
ತರಬೇತುದಾರರನ್ನು ಸನ್ಮಾನಿಸಲಾಗುವದು. ಟರ್ಫ್ ಹಾಕಿ ಕ್ರೀಡಾಂಗಣ ನಿರ್ಮಿಸಲು ಅಗತ್ಯ ಸಹಕಾರ ನೀಡಿದ ಐವರನ್ನು ಗೌರವಿಸಿ ಸನ್ಮಾನಿಸಲಾಗುವದು. ಅದೇ ದಿನ ಕಳಸಾಪುರ ರಸ್ತೆಯಲ್ಲಿನ ಒಳಾಂಗಣ ಕ್ರೀಡಾಂಗಣದ ಹಿಂದುಗಡೆ ನಿರ್ಮಾಣಗೊಂಡಿರುವ ಹೊಸ ಈಜುಕೊಳ ಕೂಡ ಮಧ್ಯಾಹ್ನ 12 ಗಂಟೆಗೆ ಸಚಿವ ನಾಗೇಂದ್ರ ಅವರು ಲೋಕಾರ್ಪಣೆಗೊಳಿಸುವರು ಎಂದು ಸಚಿವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ನೇ ಮಗೌಡ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೊಗೇರಿ, ಲೋಕಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಶಿರೋಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ಹಾಕಿ ತರಬೇತಿದಾರರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಕ್ರೀಡಾ ಕೌಶಲ್ಯ ಪ್ರದರ್ಶಿಸಿದ ಸಚಿವ ಎಚ್.ಕೆ ಪಾಟೀಲ

ಸುಸಜ್ಜಿತ ಟರ್ಫ ಹಾಕಿ ಕ್ರೀಡಾಂಗಣಕ್ಕೆ ಸಚಿವ ಡಾ. ಎಚ್.ಕೆ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ, ಹಾಕಿ ಕ್ರೀಡಾಪಟುಗಳು ತಮ್ಮ ಕೌಶಲ್ಯವನ್ನು ಸಚಿವರಿಗೆ ಪ್ರದರ್ಶಿಸಿದರು. ಸಚಿವ ಎಚ್.ಕೆ ಪಾಟೀಲ ಅವರು ಹಾಕಿ ಕ್ರೀಡಾಪಟುಗಳಿಗೆ ಕಮ್ಮಿ ಇಲ್ಲದಂತೆ ತಮ್ಮಲ್ಲಿ ಅಡಗಿರುವ ಹಾಕಿ ಕೌಶಲ್ಯವನ್ನು ಪ್ರದರ್ಶಿಸಿದರು. ಗುರಿ ಸಾಧನೆಗೆ ಮರಳಿ ಪ್ರಯತ್ನ ಮಾಡು ಎನ್ನುವಂತೆ ಸಚಿವರು ಚೆಂಡನ್ನು ನಿಖರವಾಗಿ ಬಾರಿಸುವ ಮೂಲಕ ಗೋಲು ಹೊಡೆದಿದ್ದು ಮೈದಾನದಲ್ಲಿ ನೆರೆದ ಕ್ರೀಡಾಪಟುಗಳನ್ನು ರೋಮಾಂಚನಗೊಳಿಸಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ವ ರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ, ಲೋಕಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಶಿರೋಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಹಾಕಿ ಕಿಟ್‍ನ್ನು ಸಚಿವ ಎಚ್.ಕೆ ಪಾಟೀಲ ವಿತರಿಸಿದರು.

ಲಾರಿಗೆ ಕ್ಯಾಂಟರ್ ಡಿಕ್ಕಿ; ಸ್ಥಳದಲ್ಲೇ ಚಾಲಕ ಸಾವು, ಮತ್ತೊಬ್ಬ ಗಂಭೀರ

ನಿಂರಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ……..

ವಿಜಯಸಾಕ್ಷಿ ಸುದ್ದಿ, ಗದಗ

ನಿಂತಿದ್ದ ಲಾರಿಗೆ ಹಿಂದಿನಿಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ರಾತ್ರಿ ನಡೆದಿದೆ.

ಸಮೀಪದ ಲಕ್ಷ್ಮೇಶ್ವರ ರಸ್ತೆಯ ಹುಬ್ಬಳ್ಳಿ -ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ (ಬೈಪಾಸ್) ಈ ಘಟನೆ ನಡೆದಿದ್ದು, ಕ್ಯಾಂಟರ್ ಚಾಲಕ ರಘು ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕ್ಲೀನರ್ ನಾಗಣ್ಣ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತಪಟ್ಟ ಚಾಲಕ ಹಾಗೂ ಗಾಯಾಳು ಕ್ಲೀನರ್ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಲಾರಿಯ ಟೈರ್ ಬ್ಲಾಸ್ಟ್ ಆಗಿ ನಿಂತಿತ್ತು ಎನ್ನಲಾಗಿದೆ. ವೇಗವಾಗಿ ಹೊರಟಿದ್ದ ಕ್ಯಾಂಟರ್ ಲಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಾಯಾಳು ಕ್ಲೀನರ್ ನಾಗಣ್ಣ ಕ್ಯಾಂಟರ್ ನಲ್ಲಿ ಸಿಲುಕಿಕೊಂಡಿದ್ದ. ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ಹೊರಗೆ ತಗೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ತರಕಾರಿ ತುಂಬಿದ್ದ ಕ್ಯಾಂಟರ್ ಧಾರವಾಡದಿಂದ ಆಂಧ್ರಪ್ರದೇಶಕ್ಕೆ ಹೊರಟಿತ್ತು ಎನ್ನಲಾಗಿದೆ.

ಗದಗ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬಸವೇಶ್ವರ ಜಾತ್ರೆಯ ತೇರಿನ ಗಾಲಿ ಹಾಯ್ದು ವ್ಯಕ್ತಿ ಸಾವು

ರಥೋತ್ಸವದ ಗದ್ದಲದಲ್ಲಿ ನಡೆದ ಅವಘಡ….

ವಿಜಯಸಾಕ್ಷಿ ಸುದ್ದಿ, ಗದಗ

ಜಾತ್ರೆಯ ತೇರಿನ ಗಾಲಿ ಹಾಯ್ದು ವ್ಯಕ್ತಿವೊಬ್ಬ ಮೃತಪಟ್ಟ ದಾರುಣ ಘಟನೆ ನಿನ್ನೆ ಸಂಜೆ ಜರುಗಿದೆ.

ಘಟನೆಯಲ್ಲಿ ಯಲ್ಲಪ್ಪಗೌಡ ಅಲಿಯಾಸ್ ಮುತ್ತಪ್ಪ ತಂದೆ ಪರ್ವತಗೌಡ ಗೌಡ್ರ (42) ಮೃತಪಟ್ಟ ದುರ್ಧೈವಿ.

ಇದನ್ನೂ ಓದಿ ಕರ್ತವ್ಯಲೋಪ, ದುರ್ನಡೆತೆ ಆರೋಪ; ಪಿಎಸ್ಐ ನಿಖಿಲ್ ಕುಮಾರ್ ಸಸ್ಪೆಂಡ್

ಗದಗ ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದಲ್ಲಿ ನಿನ್ನೆ ಸಂಭ್ರಮದಿಂದ ಬಸವೇಶ್ವರ ಜಾತ್ರೆ ನಡೆದಿತ್ತು. ಜಾತ್ರೆಯ ಅಂಗವಾಗಿ ತೇರು ಎಳೆಯುವ ಗದ್ದಲದಲ್ಲಿ ತೇರಿನ ಗಾಲಿ ಹಾಯ್ದು ಈ ದುರ್ಘಟನೆ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪಗೌಡನನ್ನು ನರಗುಂದ ತಾಲೂಕಿನ ಶಿರೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನರಗುಂದ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಯಲ್ಲಪ್ಪಗೌಡ ಮೃತಪಟ್ಟಿದ್ದಾನೆ.

ಈ ಕುರಿತು ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಕರ್ತವ್ಯಲೋಪ, ದುರ್ನಡೆತೆ ಆರೋಪ; ಪಿಎಸ್ಐ ನಿಖಿಲ್ ಕುಮಾರ್ ಸಸ್ಪೆಂಡ್

ಎಸ್ಪಿ ಬಿ.ಎಸ್. ನೇಮಗೌಡ ಆದೇಶ..

ವಿಜಯಸಾಕ್ಷಿ ಸುದ್ದಿ, ಗದಗ

ಮೇಲಾಧಿಕಾರಿಗಳ ಆದೇಶಗಳಿಗೆ ತಾತ್ಸಾರ ಭಾವನೆ, ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ಕೆ.ಪಿ ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಲು ಮುತುವರ್ಜಿ ವಹಿಸದೇ ಕರ್ತವ್ಯಲೋಪವೆಸೆಗಿರುವ ನರೇಗಲ್ ಠಾಣೆಯ ಪಿಎಸ್ಐ ಅವರನ್ನು ಸಸ್ಪೆಂಡ್ ಮಾಡಿ ಎಸ್ಪಿ ಆದೇಶ ಮಾಡಿದ್ದಾರೆ.

ನರೇಗಲ್ ಪಿಎಸ್ಐ ನಿಖಿಲಕುಮಾರ್ ಎಂ ಕಾಂಬ್ಳೆ ಅಮಾನತು ಆದ ಪಿಎಸ್ಐ.

ನರೇಗಲ್ ಪೊಲೀಸ್ ಠಾಣೆಗೆ ಪಿಎಸ್ಐ ಅಂತ ನಿಯುಕ್ತಿಗೊಳಿಸಿ ಆದೇಶದ ನಂತರ ನಿಯಮದಂತೆ ಹಿರಿಯ ಅಧಿಕಾರಿಗಳಿಗೆ ಕಾಲ್ ಆನ್ ಮಾಡಿ ಠಾಣೆಗೆ ವರದಿ ಮಾಡಿಕೊಂಡಿಲ್ಲ ಎನ್ನಲಾಗಿದೆ.

ಅಷ್ಟೇ ಅಲ್ಲದೆ ಅಧಿಕಾರ ವಹಿಸಿಕೊಂಡ ನಂತರ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿಲ್ಲ. ಹಾಗೆಯೇ ಜುಲೈ 23 ರಿಂದ ಆಗಸ್ಟ್ 19 ರವರೆಗೆ ಕೆ.ಪಿ. ಆ್ಯಕ್ಟ್ ಅಡಿ ಕೇಸ್ ಮಾಡಲು ಮುತುವರ್ಜಿ ವಹಿಸದೆ ಮೇಲಾಧಿಕಾರಿಗಳಿಗೆ ದಿನನಿತ್ಯ ಯಾವುದೇ ಪ್ರಗತಿ ತೋರಿಸಿಲ್ಲ.

ಮೇಲಾಧಿಕಾರಿಗಳ ಆದೇಶ ಹಾಗೂ ಜ್ಞಾಪನೆ ಪಾಲನೆ ಮಾಡದೆ ಕರ್ತವ್ಯದಲ್ಲಿ ನಿರುತ್ಸಾಹ, ಬೇಜವಾಬ್ದಾರಿ ಪ್ರದರ್ಶಿಸಿ ಕರ್ತವ್ಯಲೋಪ ಎಸೆಗಿದ್ದು ಕಂಡು ಬಂದಿದೆ ಎಂಬ ವರದಿ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

ನರೇಗಲ್ ಪಟ್ಟಣದ ಪ್ರೇಮ ಪ್ರಕರಣದಲ್ಲೂ ಹಿರಿಯ ಅಧಿಕಾರಿಗಳ ಜೊತೆಗೆ ಅಗೌರವದಿಂದ ಮಾತನಾಡಿದ ಆರೋಪವಿದೆ.

ಒಟ್ಟಿನಲ್ಲಿ ಮೇಲಾಧಿಕಾರಿಗಳಿಗೆ ಅಸಭ್ಯ ರೀತಿಯಲ್ಲಿ ಮಾತನಾಡಿ, ಅವರ ಆದೇಶ ಉಲ್ಲಂಘಿಸಿ, ಇಲಾಖೆಯ ನಿಯಮಗಳನ್ನು ನಿರ್ಲಕ್ಷಿಸಿ ಸಂಪೂರ್ಣವಾಗಿ ಕರ್ರವ್ಯದಲ್ಲಿ ದುರ್ನಡೆತೆ, ಬೇಜವಾಬ್ದಾರಿತನ, ನಿಷ್ಕಾಳಜಿತನ ಮತ್ತು ಲೋಪವೆಸಗಿರುವುದನ್ನು ನರಗುಂದ ಡಿಎಸ್‌ಪಿ ಅವರ ವರದಿ 1351/2023 ಹಾಗೂ 1353/2023 ಪ್ರಕಾರ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಿ ಎಸ್ಪಿ ಬಿ.ಎಸ್. ನೇಮಗೌಡ ಅವರು ಆದೇಶ ಹೊರಡಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ಸಿ.ವಿ ಕೆರಿಮನಿ ಇನ್ನಿಲ್ಲ

0


ಲಕ್ಷ್ಮೇಶ್ವರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಸಿ.ವಿ ಕೆರಿಮನಿಯವರು ಸೊಮವಾರ ಸಂಜೆ ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ಪುಲಿಗೆರೆಯ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಸಿವಿಕೆ ಅವರು ಪತ್ನಿ, ಮೂವರು ಪುತ್ರಿಯರು, ಪುತ್ರ ಸೇರಿ ಅಪಾರ ಬಂಧುಗಳು, ಸಾಹಿತ್ಯಾಭಿಮಾನಿ ಬಳಗವನ್ನು ಅಗಲಿದ್ದಾರೆ.

ಇಳಿ ವಯಸ್ಸಿನಲ್ಲಿಯೂ ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಂಡು ದಣಿವರಿಯದ ಕನ್ನಡ ಕಾಯಕಯೋಗಿದ್ದ ಸಿವಿಕೆ, ಪುಲಿಗೆರೆ ಸಾಂಸ್ಕೃತಿಕ ಲೋಕದ ರಾಯಭಾರಿಯಂತಿದ್ದರು.

ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದವರು. ಲಕ್ಷ್ಮೇಶ್ವರದ ಪುರಸಭಾ ಕಾಲೇಜಿನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕರಾಗಿ, ಭಾಷೆಯ ಜ್ಞಾನ-ಅಭಿಮಾನ ಮೊಳಗಿಸಿದರು.

ಹಂಪಿ ಕನ್ನಡ ವಿ.ವಿ. ಆಡಳಿತ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜು ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ, ಅಭ್ಯಾಸ ಮಂಡಳಿ ಸದಸ್ಯರಾಗಿ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅನನ್ಯ.

ಗದಗ ಜಿಲ್ಲೆಯ ಮಾಹಿತಿಯನ್ನು ನೀಡುವ ಹಲವಾರು ಅರ್ಥಪೂರ್ಣ ಕೃತಿಗಳನ್ನು ಸಂಪಾದಿಸಿ, ಗದಗ ಜಿಲ್ಲೆಯ ಜನರಿಗೆ ಮಹದುಪಕಾರಗೈದಿದ್ದಾರೆ. ಇತ್ತೀಚಿಗೆ ಪ್ರಕಟಗೊಂಡ `ಗದಗ ಜಿಲ್ಲೆ ಒಂದು ಅಧ್ಯಯನ’ ಕೃತಿ ಗದಗ ಜಿಲ್ಲೆಯ ಸಮಗ್ರ ಮಾಹಿತಿಯನ್ನು ನೀಡುವ ಪ್ರಮುಖ ಆಕರ ಗ್ರಂಥವಾಗಿ ಹೊರಹೊಮ್ಮಿದೆ.

ಎರಡು ಅವಧಿಗೆ ಲಕ್ಷ್ಮೇಶ್ವರದ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಗಳನ್ನು ನೆರವೇರಿಸಿದ್ದರು. 1999 ರಲ್ಲಿ ಸಿಂಗಾಪೂರದಲ್ಲಿ ಜರುಗಿದ ಜಾಗತಿಕ ರೋಟರಿ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ರಾಷ್ಟ್ರೀಯ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರೊ.ಸಿ.ವಿ.ಕೆರಿಮನಿಯವರ ಸಾಧನೆಗೆ ಶರೀಫ ಪ್ರಶಸ್ತಿ, ಉತ್ತಮ ಎನ್‌ಎಸ್ ಅಧಿಕಾರಿ, ರಾಜ್ಯಮಟ್ಟದ ಮನುಕುಲ ಪ್ರಶಸ್ತಿಗಳೊಂದಿಗೆ, 2012ನೇ ಸಾಲಿನ ಕರ್ನಾಟಕ ಸರಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು.

ಸಂತಾಪ: ಸಿವಿಕೆ ಅವರ ನಿಧನಕ್ಕೆ ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು, ರಾಜಕಾರಣಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಆ 29ರ ಮಂಗಳವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ಲಕ್ಷ್ಮೇಶ್ವರದಲ್ಲಿ ನೆರವೇರಲಿದೆ.

ಗಾಂಜಾ ಬೆಳೆದ ಆರೋಪಿಗೆ 2 ವರ್ಷ ಜೈಲು, 25 ಸಾವಿರ ರೂ. ದಂಡ

ವಿಜಯಸಾಕ್ಷಿ ಸುದ್ದಿ, ಗದಗ

ತನ್ನ ಸ್ವಂತ ಲಾಭಕ್ಕೋಸ್ಕರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ತಾಂಡಾದಿಂದ ಶಿಂಗಟರಾಯನಕೆರೆ ತಾಂಡಾಕ್ಕೆ ಹೋಗುವ ಕಚ್ಚಾ ರಸ್ತೆಯ ಬಳಿಯಿರುವ ಸರ್ವೆ ನಂ. 212/2ರಲ್ಲಿ ಒಟ್ಟು 180 ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆಸಲಾಗಿತ್ತು.


21.10.2016 ರಂದು ಆರೋಪಿತ ಅಮರಪ್ಪ ಈಶ್ವರಪ್ಪ ಲಮಾಣಿ ಸಿಕ್ಕಿಬಿದ್ದಿದ್ದು, ಇವನಿಂದ ಸುಮಾರು 11 ಕೆಜಿ 900 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ ಗದಗ ಉಪವಿಭಾಗದ ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.


ಸಾಕ್ಷಿ ವಿಚಾರಣೆ ನಡೆಸಿದ ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಎಸ್‌ ಶೆಟ್ಟಿ ಇವರು ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಆಗಸ್ಟ್‌ 17ರಂದು ಶಿಕ್ಷೆ ವಿಧಿಸಿದ್ದಾರೆ.

ಎನ್‌ಡಿಪಿಎಸ್‌ ಕಾಯ್ದೆಯ ಕಲಂ 20(ಎ)(ಬಿ) (2)(ಸಿ), 8(ಸಿ) ಅಡಿಯಲ್ಲಿ 2 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಬಸವನಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

error: Content is protected !!