Home Blog Page 3243

ಲಕ್ಷ್ಮೇಶ್ವರ ಪೊಲೀಸರ ಮಿಂಚಿನ ಕಾರ್ಯಾಚರಣೆ; ಸಿನಿಮೀಯ ರೀತಿಯಲ್ಲಿ ಕಾರು ಕಳ್ಳನ ಬಂಧನ

15 ಲಕ್ಷ ರೂ. ಮೌಲ್ಯದ 3 ವಾಹನಗಳು ವಶಕ್ಕೆ…ಎಸ್ಪಿ ಬಿ.ಎಸ್. ನೇಮಗೌಡ ಪ್ರಶಂಸೆ…

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಅಂತರ್‌ರಾಜ್ಯಗಳಲ್ಲಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಉಂಬಳಬೈಲ್‌ದ ಸೈಯದ್ ಇರ್ಫಾನ್ ಅಲಿಯಾಸ್ ನಿಹಾಲ್‌ನನ್ನು ಲಕ್ಷ್ಮೇಶ್ವರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.

ಬಂಧಿತನಿಂದ 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಹಿನ್ನಲೆಯಲ್ಲಿ ಆತ ಕದ್ದ ಕಾರುಗಳನ್ನು ಮಾರಾಟ ಮಾಡಲು ಲಕ್ಷ್ಮೇಶ್ವರದ ರಂಭಾಪುರಿ ನಗರದಲ್ಲಿದ್ದಾನೆಂಬ ಸುಳಿವು ಪಡೆದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತು.

ಪೊಲೀಸರನ್ನು ಕಂಡು ತಪ್ಪಿಸಿಕೊಂಡು  ಹೋಗುತ್ತಿರುವಾಗ ಪೊಲೀಸರು ತಮ್ಮ ವಾಹನದಲ್ಲಿ ಬೆನ್ನಟ್ಟಿ ಹಿಡಿದು, ವಿಚಾರಣೆಗೊಳಪಡಿಸಿ ಆತನಿಂದ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಂದಾಜು 5 ಲಕ್ಷ ರೂ. ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೋ, ಅಂದಾಜು 7 ಲಕ್ಷ ರೂ.ಗಳ ಮಾರುತಿ ಬ್ರಿಝಾ, 3 ಲಕ್ಷ ರೂ.ಗಳ ಕಿಮ್ಮತ್ತಿನ ಮಾರುತಿ ಇಕೋ ವ್ಯಾನ್ ಸೇರಿ ಒಟ್ಟು 15 ಲಕ್ಷ ರೂ. ಮೌಲ್ಯದ ಮೂರು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರು ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಸಿಪಿಐ ಎಸ್.ಎಂ ಶಿರಗುಪ್ಪಿ, ಪಿಎಸ್‌ಐ ಯೂಸುಫ್ ಜಮೂಲಾ, ಕ್ರೈಮ್ ಪಿಎಸ್‌ಐ ವಿ.ಜಿ ಪವಾರ, ಎಎಸ್‌ಐ ಎಮ್.ಎ ಮೌಲ್ವಿ, ಟಿ.ಕೆ ರಾಠೋಡ, ವೈ.ಎಸ್ ಕುಬಿಹಾಳ, ಎಸ್.ಎಸ್ ಮಕಾನದಾರ, ಜಿ.ಎಂ ಬೂದಿಹಾಳ,

ಸಿಬ್ಬಂದಿಗಳಾದ ಎಮ್.ಎ ಶೇಖ್, ಎಮ್.ಡಿ ಲಮಾಣಿ, ಆರ್.ಎಸ್ ಯರಗಟ್ಟಿ, ಪಾಂಡುರಂಗರಾವ್, ಎಮ್.ಎಸ್ ಬಳ್ಳಾರಿ, ಪ್ರಕಾಶ ಮ್ಯಾಗೇರಿ, ಆನಂದಸಿಂಗ್ ದೊಡಮನಿ, ಸಿ.ಎಸ್ ಮಠಪತಿ, ಡಿ.ಎಸ್ ನದಾಫ್, ಬಿ.ಆರ್ ಗ್ರಾಮಪುರೋಹಿತ್, ಆನಂದ ಕಮ್ಮಾರ, ಎಚ್.ಐ ಕಲ್ಲಣ್ಣವರ, ಎನ್.ಹೆಚ್ ಮಠಪತಿ, ಸೋಮು ವಾಲ್ಮೀಕಿ, ಸಂಜು ಕೊರಡೂರ, ಮದ್ದು ಧಾರವಾಡ, ಮಹಾಂತೇಶ ಐಗಾರ, ಮಲ್ಲಿಕಾರ್ಜುನ ಅಂಗಡಿ, ಕೆ. ಮುಕಾಶಿ, ಅಪ್ಪಣ್ಣ ರಾಠೋಡ ಇವರ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮತ್ತು ಡಿಎಸ್‌ಪಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕರ್ತವ್ಯಲೋಪ; ಮತ್ತೊಬ್ಬ ಗ್ರಾಮ ಆಡಳಿತ ಅಧಿಕಾರಿ ಪಾಟೀಲ ಸಸ್ಪೆಂಡ್, ಡಿಸಿ ಆದೇಶ

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಆದೇಶ

ವಿಜಯಸಾಕ್ಷಿ ಸುದ್ದಿ, ಗದಗ

ಬಿ.ಎಲ್‌.ಓ. ಗಳಿಗೆ ಮೇಲ್ವಿಚಾರಕರ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಗದಗ ತಾಲೂಕಿನ ಹುಲಕೋಟಿ ಗ್ರಾಮ ಆಡಳಿತ ಅಧಿಕಾರಿ ಶ್ರೀಮತಿ ವಿ.ಬಿ ಪಾಟೀಲ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಮತಗಟ್ಟೆ ಸಂಖ್ಯೆ 137ರಿಂದ 145 ರವರೆಗಿನ ಬಿಎಲ್ ಓ ಗಳಿಗೆ ಮೇಲ್ವಿಚಾರಕರಾಗಿ ನೇಮಿಸಲಾಗಿದೆ.

ಇದನ್ನೂ ಓದಿ ಬಿಎಲ್‌ಓ ಕರ್ತವ್ಯಕ್ಕೆ ಗೈರು: ಗ್ರಾಮ ಆಡಳಿತ ಅಧಿಕಾರಿ ಶಿರೂರು ಸಸ್ಪೆಂಡ್; ಡಿಸಿ ಆದೇಶ

ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023-24 ನೇದ್ದಕ್ಕೆ ಭಾರತ ಚುನಾವಣಾ ಆಯೋಗವು ವೇಳಾಪಟ್ಟಿ ಹೊರಡಿಸಿದೆ. ಹೀಗಾಗಿ ವೇಳಾಪಟ್ಟಿಯಂತೆ ಪ್ರಸ್ತುತ ಪೂರ್ವ ಪರಿಷ್ಕರಣೆ ಚಟುವಟಿಕೆಗಳು ಜರುಗುತ್ತಿದ್ದು, ಅದರಂತೆ ಮತಗಟ್ಟೆ ಅಧಿಕಾರಿಗಳು ಮನೆ ಮನೆ ಸಮೀಕ್ಷೆ ಕಾರ್ಯ ಜರುಗಿಸಿ ಮತದಾರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿರುತ್ತಾರೆ. ಈ ಕುರಿತಂತೆ ಹುಲಕೋಟಿ ಗ್ರಾಮ ಆಡಳಿತ ಅಧಿಕಾರಿ ಶ್ರೀಮತಿ ವಿ.ಬಿ.ಪಾಟೀಲ ಇವರನ್ನು ಮತಗಟ್ಟೆ ಸಂಖ್ಯೆ 137 ರಿಂದ 145ರವರೆಗಿನ ಬಿ.ಎಲ್.ಓ. ಗಳಿಗೆ ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿಗಳು ದಿ.19-08-23ರಂದು ಮತಗಟ್ಟೆ ಸಂಖ್ಯೆ 137 ರಿಂದ 145 ಭೇಟಿ ನೀಡಿದ್ದರು. ಆದರೆ ಈ ಮತಗಟ್ಟೆ ಬಿ.ಎಲ್.ಓ ಗಳು ಆಯೋಗದ ನಿಗದಿತ ನಮೂನೆ -03ನ್ನು ಕಾಲೋಚಿತಗೊಳಿಸಿದ್ದು ಕಂಡು ಬಂದಿಲ್ಲ.

ಅಲ್ಲದೇ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಸರಿಯಾಗಿ ನಿರ್ವಹಿಸಿದ್ದು ಕಂಡು ಬಂದಿಲ್ಲ. ಹಾಗೂ ನಿಗದಿತ ಪ್ರಮಾಣದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿರುವುದಿಲ್ಲ. ಈ ಕುರಿತಂತೆ ದಿ. 21.07.2023ರಿಂದ 21.8.2023 ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರ ಪಟ್ಟಿಯ ಕುರಿತಂತೆ ಮತಗಟ್ಟೆ ಸಂಖ್ಯೆ 137ರಿಂದ 145ರವರೆಗಿನ ಬಿ.ಎಲ್.ಓ. ಗಳ ಕಾರ್ಯವೈಖರಿ ಹಾಗೂ ಪ್ರಗತಿ ಕಾರ್ಯದ ಕುರಿತು ಹುಲಕೋಟಿ ಗ್ರಾಮ ಆಡಳಿತ ಅಧಿಕಾರಿ ಶ್ರೀಮತಿ ವಿ.ಬಿ ಪಾಟೀಲ ಸರಿಯಾಗಿ ಮೇಲ್ವಿಚಾರಣೆ ಜರುಗಿಸದೇ ತೀವ್ರ ಕರ್ತವ್ಯ ಲೋಪವೆಸಗಿದ್ದಾರೆ.

ಅಷ್ಟೇ ಅಲ್ಲದೇ ಸರಕಾರಿ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡು ಪ್ರಜಾ ಪ್ರಾತಿನಿಧ್ಯ ಕಾಯ್ದೆ, 1950 ಕಲಂ 32 ಹಾಗೂ ಕರ್ನಾಟಕ ರಾಜ್ಯ ನಾಗರಿಕ ಸೇವಾ ನಡತೆ ನಿಯಮಗಳು 2021 ರ ನಿಯಮ 3ರಲ್ಲಿನ (1)(2)(3)ಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ವಿವರಿಸಲಾಗಿದೆ.

ಹೀಗಾಗಿ ಹುಲಕೋಟಿ ಗ್ರಾಮ ಆಡಳಿತ ಅಧಿಕಾರಿ ಶ್ರೀಮತಿ ವಿ.ಬಿ. ಪಾಟೀಲ ಅವರನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)(ಡಿ)ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆ ಕಾಯ್ದಿರಿಸಿ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದ್ದು, ಈ ಸಂದರ್ಭದಲ್ಲಿ ಗದಗ ತಹಸೀಲ್ದಾರ ಅವರ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದಲ್ಲ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಆದೇಶ ಹೊರಡಿಸಿದ್ದಾರೆ.

ವಿಧಿ-ವಿಧಾನಗಳೊಂದಿಗೆ ಕೋತಿಯ ಅಂತ್ಯಕ್ರಿಯೆ…

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ

ಗ್ರಾಮದಲ್ಲಿ ಯಾವುದೇ ವ್ಯಕ್ತಿಗಳು ರಾತ್ರಿ ವೇಳೆ ಮರಣ ಹೊಂದಿದರೆ ಅಹೋರಾತ್ರಿ ಭಜನೆ ಮಾಡಿ, ಮುಂಜಾನೆ ಮೆರವಣಿಗೆ ಮೂಲಕ ಅಂತ್ಯಸಂಸ್ಕಾರ ಮಾಡುವುದುಂಟು. ಆದರೆ ಇಲ್ಲಿಯ ಮಾರುತಿ ನಗರದಲ್ಲಿ ಕೋತಿಯೊಂದು ಸಂಜೆ ವೇಳೆ ಸಾವನ್ನಪ್ಪಿದ್ದು, ಮನುಷ್ಯರಂತೆಯೇ ವಿಧಿ-ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಇಲ್ಲಿಯ ಮಾರುತಿ ನಗರದ ಆಂಜನೇಯ ಭಜನಾ ಸಂಘದ ಕಾರ್ಯಕರ್ತರೇ ಈ ಎಲ್ಲ ವಿಧಿ-ವಿಧಾನಗಳನ್ನು ನೆರವೇರಿಸಿ ಸಾವನ್ನಪ್ಪಿದ ಕೋತಿಯ ಅಂತ್ಯಕ್ರಿಯೆ ಮಾಡಿದ್ದಾರೆ.

ಆಂಜನೇಯ ದೇವಾಸ್ಥಾನದ ಹತ್ತಿರ ಶುಕ್ರವಾರ ಸಂಜೆ 7ರ ಹೊತ್ತಿಗೆ ಕೋತಿಯೊಂದು ಆಕಸ್ಮಿಕವಾಗಿ ಸಾವನಪ್ಪಿತ್ತು. ಭಜನಾ ಸಂಘದ ಕಾರ್ಯಕರ್ತರು ದೇವಸ್ಥಾನ ಹತ್ತಿರ ಕುರ್ಚಿಯಲ್ಲಿ ಕುಳ್ಳಿರಿಸಿ, ವಿಧಿ-ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಅಹೋರಾತ್ರಿ ಭಜನಾ ಪದಗಳನ್ನು ಹಾಡುತ್ತಾ ಜಾಗರಣೆಯನ್ನೂ ನಡೆಸಿದರು.


ಶನಿವಾರ ಮುಂಜಾನೆ 7ಕ್ಕೆ ಮೆರವಣಿಗೆ ಮೂಲಕ ಪಕ್ಕದ ಜಮೀನಿನಲ್ಲಿ ಧಾರ್ಮಿಕ ವಿಧಿ-ವಿದಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿ, ಮೃತ ಕೋತಿಯ ಆತ್ಮಕ್ಕೆ ಶಾಂತಿ ಕೋರಲಾಯಿತು ಎಂದು ಭಜನಾ ಸಂಘದ ಹಿರಿಯರು, ಗ್ರಾ ಪಂ ಸದಸ್ಯರಾದ ಲಕ್ಷ್ಮಣ ಗುಡಸಲಮನಿ, ಶಿವಪ್ಪ ಬಳಿಗೇರ ತಿಳಿಸಿದ್ದಾರೆ.

ನಾಗರಪಂಚಮಿ ದಿನವೇ ನಾಗರಹಾವಿಗೆ ಹಾಲಿನ ಬದಲು ನೀರು ಕುಡಿಸಿದ ಭೂಪ…!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ನಾಡಿಗೆ ದೊಡ್ಡ ನಾಗರಪಂಚಮಿ ಹಬ್ಬದ ದಿನ ಎಲ್ಲೆಡೆ ಕಲ್ಲ ನಾಗರ ಮೂರ್ತಿಗೆ ಹಾಲೆರೆಯುವದು ಸಾಮಾನ್ಯ. ಪ್ರತ್ಯಕ್ಷವಾಗಿ ಕಂಡರೆ ಜೀವಭಯದಲ್ಲಿ ಮಾರುದ್ಧ ಜಿಗಿಯುವರೇ ಹೆಚ್ಚು, ಮತ್ತು ನಾಗದೇವರೆಂದು ಪೂಜಿಸಿ ಕೈಮುಗಿದು ದೂರ ಹೋಗುವರುಗೇನು ಕಡಿಮೆ ಇಲ್ಲ.

ಆದರೆ ನಾಗರಪಂಚಮಿ ದಿನವೇ ಎರಡು ಕಡೆ ನಾಗರ ಹಾವುಗಳು ಪ್ರತ್ಯಕ್ಷವಾಗಿದ್ದು, ನಾಗರಹಾವಿಗೆ ಹಾಲಿನ ಬದಲು ನೀರು ಕುಡಿಸಿ ಸರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರಲಾಗಿದೆ. ಹಾಲಿನ ಬದಲಿಗೆ ಹಾವಿಗೆ ನೀರು ಕುಡಿಸಿದ ಲಕ್ಷ್ಮೇಶ್ವರ ಪಟ್ಟಣದ ಸಾಗರ ಧರಣಿ ಎಂಬ ಭೂಪನೇ ಅಂತಹ ಸಾಹಸ ಮೆರೆದಾತ.

ಪಟ್ಟಣದ ಜಂತ್ಲಿ ಬಸವೇಶ್ವರ ದೇವಸ್ಥಾನದ ಹೊಸಮನಿ ಎಂಬುವರ ಮನೆಯಲ್ಲಿ ಸುಮಾರು ೫/೬ ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ. ಹಾವು ನೋಡಿದ ಮನೆಯವರು ಗಾಬರಿಗೊಂಡಿದ್ದಾರೆ. ದೂರದಿಂದಲೇ ಭಕ್ತಿಯಿಂದ ಪೂಜೆ ಮಾಡಿ ಹೊರ ಹೋಗುವಂತೆ ಪ್ರಾರ್ಥಿಸಿದ್ದಾರೆ. ಅಷ್ಟಾರಲ್ಲಾಗಲೇ ಸಾಗರಗೆ ಪೋನ್ ಮುಖಾಂತರ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ ಬಿಎಲ್‌ಓ ಕರ್ತವ್ಯಕ್ಕೆ ಗೈರು: ಗ್ರಾಮ ಆಡಳಿತ ಅಧಿಕಾರಿ ಶಿರೂರು ಸಸ್ಪೆಂಡ್; ಡಿಸಿ ಆದೇಶ

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಾಗರ, ಮನೆಯಲ್ಲಿ ಪ್ರತ್ಯಕ್ಷವಾಗಿದ್ದ ಸೆಪ್ಟಿಕಲ್ ಕೋಬ್ರಾ ಎನ್ನಲಾಗುವ ನಾಗರಹಾವನ್ನು ತಮ್ಮ ಚಾಣಾಕ್ಷತದಿಂದ ತನ್ನ ಹಿಡಿತಕ್ಕೆ ತೆಗೆದುಕೊಂಡು ಕೆಲಹೊತ್ತು ಆಟವಾಡಿಸಿ ಬಾಟಲಿಯಿಂದ ನೀರು ಕುಡಿಸಿ ಬಳಿಕ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾನೆ.

ಕೆಲ ಹೊತ್ತಿನ ಬಳಿಕ ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿತಾಂಡಾದ ಮನೆಯಲ್ಲಿ ನಾಗರಹಾವು ಬಂದಿದೆ ಎಂಬ ಸುದ್ದಿ ತಿಳಿದು ಅಲ್ಲಿಗೂ ತೆರಳಿದ ಸಾಗರ ಧರಣಿ, ಅದನ್ನು ಸಹ ಕ್ಷಣಾರ್ಧದಲ್ಲಿಯೇ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾನೆ. ಯುವಕನ ಧೈರ್ಯ ಮತ್ತು ಬುದ್ದಿವಂತಿಕೆಯಿಂದ ಹಾವನ್ನು ಹಿಡಿಯುತ್ತಿರುವದನ್ನು ನೋಡಿದ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದುವರೆಗೂ ಹತ್ತಾರು ಜಾತಿಯ ಅನೇಕ ಹಾವುಗಳನ್ನು ಹಿಡಿದು ಹಲವಾರು ಕುಟುಂಬಗಳ ನೆಮ್ಮದಿಗೆ ಕಾರಣವಾಗಿರುವ ಸಾಗರ ಧರಣಿ ಸ್ನೇಕ ಸಾಗರ ಎಂದೇ ತಾಲೂಕಿನ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ. ನಾಗದೇವತೆಗಳನ್ನು ಆತನನ್ನು ಕಾಪಾಡಲಿ ಎಂಬುದು ಸ್ಥಳೀಯರು ಹಾರೈಸಿದ್ದಾರೆ.

ಬಿಎಲ್‌ಓ ಕರ್ತವ್ಯಕ್ಕೆ ಗೈರು: ಗ್ರಾಮ ಆಡಳಿತ ಅಧಿಕಾರಿ ಶಿರೂರು ಸಸ್ಪೆಂಡ್; ಡಿಸಿ ಆದೇಶ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಬಿಎಲ್‌ಓ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಪಟ್ಟಣದ ಬಸ್ತಿಬಣ ಗ್ರಾಮ ಆಡಳಿತ ಅಧಿಕಾರಿ ವ್ಹಿ.ವ್ಹಿ.ಶಿರೂರ ಅವರನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಅಮಾನತ್ತುಗೊಳಿಸಿದ್ದಾರೆ.

ಲಕ್ಷ್ಮೇಶ್ವರ ಮತಗಟ್ಟೆ ಸಂಖ್ಯೆ 103 ರ ಮತಗಟ್ಟೆ ಅಧಿಕಾರಿಯಾಗಿದ್ದ ವ್ಹಿ.ವ್ಹಿ.ಶಿರೂರ ಅವರು ಬಿಎಲ್‌ಓ ಕರ್ತವ್ಯ ನಿರ್ವಹಿಸಲು ಅನಧಿಕೃತವಾಗಿ ಗೈರು ಹಾಜರಾಗಿದ್ದರು. 7-8-2023 ರಿಂದ ಇಲ್ಲಿಯವರೆಗೂ ಅನಧಿಕೃತವಾಗಿ ಗೈರು ಮತ್ತು 12-8-2023 ರಂದು ಕರೆಯಲಾಗಿದ್ದ ಸಭೆಗೂ ಗೈರಾಗಿದ್ದರು.

ಇದನ್ನೂ ಓದಿ ಪ್ರತ್ಯೇಕ ಪ್ರಕರಣ; ನೀರಲ್ಲಿ ಮುಳುಗಿ ಇಬ್ಬರ ಸಾವು, ಕುಟುಂಬಸ್ಥರ ಆಕ್ರಂಧನ

ಮತಗಟ್ಟೆ ಸಂಖ್ಯೆ 103 ಕ್ಕೆ ಮತಗಟ್ಟೆ ಅಧಿಕಾರಿಯಾಗಿದ್ದರೂ ಮನೆ ಮನೆ ಸಮೀಕ್ಷೆ ಪ್ರಾರಂಭಿಸಿರಲಿಲ್ಲ.

ಇದನ್ನೂ ಓದಿ ಚಲಿಸುತ್ತಿರೋ ಸಾರಿಗೆ ಬಸ್ ನ ಹಿಂಬದಿ ಚಕ್ರ ರಸ್ತೆಗೆ; ಬೆಚ್ಚಿ ಬಿದ್ದ ಪ್ರಯಾಣಿಕರು- ವಿಡಿಯೋ ವೈರಲ್

ಅಲ್ಲದೆ ಅಧಿಕಾರಿಗಳ ದೂರವಾಣಿ ಕರೆಗಳನ್ನು ಸಹ ಸ್ವೀಕರಿಸುತ್ತಿಲ್ಲ. ಕರ್ತವ್ಯ ಲೋಪದಿಂದ ಕಚೇರಿ ಕೆಲಸ ಮತ್ತು ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದ್ದು ಈ ನೌಕರರ ಮೇಲೆ ಕ್ರಮ ಕೈಗೊಳ್ಳುವಂತೆ ಲಕ್ಷ್ಮೇಶ್ವರ ತಹಸೀಲ್ದಾರ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ವಿಚಾರಣೆಯನ್ನು ಕಾಯ್ದಿರಿಸಿದ ಜಿಲ್ಲಾಧಿಕಾರಿಗಳು ಅಮಾನತ್ತು ಆದೇಶ ಮಾಡಿದ್ದಾರೆ.

ಮತದಾರ ಪಟ್ಟಿಗಳ ಪರೀಕ್ಷರಣೆ ಮಾಡಲು ಚುನಾವಣಾ ಆಯೋಗ ಮನೆ ಮನೆಗೆ ತೆರಳಿ ಸಂಪೂರ್ಣ ಮಾಹಿತಿ ಸಂಗ್ರಹಿಸಲು ದಿ.21-07-2023 ರಿಂದ 21-08-2023 ರವರೆಗೆ ವೇಳಾಪಟ್ಟಿ ನಿಗದಿ ಮಾಡಿದೆ. ಆಯೋಗದ ಮಾರ್ಗಸೂಚಿಯಂತೆ ನಿಗದಿತ ನಮೂನೆಗಳಲ್ಲಿ ಬಿ.ಎಲ್.ಓಗಳು ಮಾಹಿತಿ ಕ್ರೂಡೀಕರಿಸಿ ಸಲ್ಲಿಸಬೇಕೆಂಬ ಆದೇಶವಿದ್ದರೂ ಕರ್ತವ್ಯದಲ್ಲಿ ತೋರಿದ ನಿರ್ಲಕ್ಷ್ಯದಿಂದ ಶಿರೂರು ಅಮಾನತ್ತಿಗೊಳಗಾಗಿದ್ದಾರೆ.

ಪ್ರತ್ಯೇಕ ಪ್ರಕರಣ; ನೀರಲ್ಲಿ ಮುಳುಗಿ ಇಬ್ಬರ ಸಾವು, ಕುಟುಂಬಸ್ಥರ ಆಕ್ರಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ನೀರು ಕುಡಿಯಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನೀರು ಕುಡಿಯಲು ಕೆರೆಗೆ ಹೋಗಿದ್ದ ವ್ಯಕ್ತಿಯೊಬ್ಬ ಕಾಲು ಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ಮೃತನನ್ನು ಗ್ರಾಮದ ಶಂಕರಗೌಡ (38) ಎಂದು ಗುರುತಿಸಲಾಗಿದೆ. ನುರಿತ ಈಜುಪಟುಗಳಿಂದ ಶವ ಹೊರತಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲ ಮುಟ್ಟಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಮತ್ತೊಂದು ಪ್ರಕರಣದಲ್ಲಿ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದ ಸಮೀಪದ ಸಿಂಗಟಾಲೂರು ಏತ ನೀರಾವರಿ ಕಾಲುವೆಯಲ್ಲಿ ನೀರು ಕುಡಿಯಲು ಹೋಗಿದ್ದ ಬಾಲಕ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.

ಹಾರೋಗೇರಿ ಗ್ರಾಮದ ಅಭಿಷೇಕ ಮಾದರ (14) ಮೃತಪಟ್ಟ ದುರ್ಧೈವಿ. ನೀರು ಕುಡಿಯಲು ಹೋದಾಗ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಹೊರಬರಲಾರದೆ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಸ್ಥಳೀಯರು ಅಭಿಷೇಕನ ಶವ ಹೊರತಗೆದಿದ್ದಾರೆ. ಹೆತ್ತವರ ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲಮುಟ್ಟಿದ್ದು,
ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಚಲಿಸುತ್ತಿರೋ ಸಾರಿಗೆ ಬಸ್ ನ ಹಿಂಬದಿ ಚಕ್ರ ರಸ್ತೆಗೆ; ಬೆಚ್ಚಿ ಬಿದ್ದ ಪ್ರಯಾಣಿಕರು- ವಿಡಿಯೋ ವೈರಲ್

0

ವಿಜಯಸಾಕ್ಷಿ ಸುದ್ದಿ, ಗದಗ

ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನ ಹಿಂಬದಿ ಟೈಯರ್ ವೊಂದು (ಚಕ್ರ) ಏಕಾಏಕಿ ಕಟ್ ಆಗಿ ರಸ್ತೆಯ ಬದಿಗೆ ಉರುಳಿದ ಘಟನೆ ನಿನ್ನೆ ಸಂಜೆ ಜರುಗಿದೆ. ಈ ಘಟನೆಯಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಬೆಚ್ಚಿಬಿದ್ದಿದ್ದಾರೆ. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಇದನ್ನೂ ಓದಿ ಚುನಾವಣೆ ಕರ್ತವ್ಯಕ್ಕೆ ಅಡ್ಡಿಪಡಿಸಿದ 14 ಜನ ಆರೋಪಿತರಿಗೆ ಶಿಕ್ಷೆ

ಗದಗ ತಾಲೂಕಿನ ಹೊಂಬಳ ಗ್ರಾಮದ ಬಳಿ ನಡೆದಿರುವ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.

ಗದಗನಿಂದ ನರಗುಂದ ಪಟ್ಟಣಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ಗದಗ ಡಿಪೋಗೆ ಈ ಬಸ್ ಸೇರಿದ್ದು, ಹೊಂಬಳ ಗ್ರಾಮದ ಬಳಿ ಹಿಂಬದಿಯ ಡಬಲ್ ಚಕ್ರದ (ಟೈಯರ್ ಗಳ) ಪೈಕಿ ಒಂದು ಟೈಯರ್( ಚಕ್ರ) ದಿಢೀರ್ ಬಿಚ್ಚಿ ರಸ್ತೆಯ ಪಕ್ಕದಲ್ಲಿ ಬಿತ್ತು.

ಬಸ್ ನ ಹಿಂದೆಯೇ ಹೋಗುತ್ತಿದ್ದ ಕಾರೊಂದರಲ್ಲಿನ ಜನ ತಮ್ಮ ಮೊಬೈಲ್‌ ನಲ್ಲಿ ಈ ವಿಡಿಯೋ ಸೆರೆ ಹಿಡಿದಿದ್ದು, ಅದೀಗ ವೈರಲ್ ಆಗಿದೆ.

ಚುನಾವಣೆ ಕರ್ತವ್ಯಕ್ಕೆ ಅಡ್ಡಿಪಡಿಸಿದ 14 ಜನ ಆರೋಪಿತರಿಗೆ ಶಿಕ್ಷೆ

ವಿಜಯಸಾಕ್ಷಿ ಸುದ್ದಿ, ಗದಗ

ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಯಳವತ್ತಿ ಗ್ರಾಮದಲ್ಲಿ ಚುನಾವಣೆಯ ಕರ್ತವ್ಯದಲ್ಲಿದ್ದ ಅಧಿಕಾರಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದ 14 ಜನ ಆರೋಪಿತರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2015ರ ಮೇ 29ರಂದು ಸಂಜೆ 5 ಗಂಟೆಗೆ ಬೂತ್ ನಂ.100ಕ್ಕೆ ಆರೋಪಿ ಚನ್ನಪ್ಪಗೌಡ ನಿಂಗನಗೌಡರ ಪದೇ ಪದೇ ಬಂದು ಹೋಗುತ್ತಿದ್ದಾಗ, ಕರ್ತವ್ಯದಲ್ಲಿದ್ದ ಅಧಿಕಾರಿಯು, ನಿಮ್ಮ ವರ್ತನೆಯಿಂದ ಬೇರೆಯವರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದಾಗ,

ಆರೋಪಿಯು ಇನ್ನುಳಿದ 13 ಆರೋಪಿತರೊಂದಿಗೆ ಕೂಡಿಬಂದು, ಅವಾಚ್ಯವಾಗಿ ಬೈದು, ಫಿರ್ಯಾದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ತಕರಾರು ಬಿಡಿಸಲು ಬಂದ ವ್ಯಕ್ತಿಗೂ ಕಲ್ಲು ಎಸೆದು ಗಾಯಗೊಳಿಸಿದ ಅಪರಾಧದ ಕುರಿತು ಗದಗ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ.ವಿ ನಾಗನೂರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ ವರ್ಕ್ ಫ್ರಾಮ್ ಹೋಮ್ ಟಾಸ್ಕ್ ನೀಡಿ ರೈತನಿಗೆ ವಂಚನೆ…

ಸಾಕ್ಷಿ ವಿಚಾರಣೆ ನಡೆಸಿದ ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಎಸ್ ಶೆಟ್ಟಿ, ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ 1ನೇ ಆರೋಪಿ ಚನ್ನಪ್ಪಗೌಡ ನಿಂಗನಗೌಡರ ಸೇರಿದಂತೆ ಉಳಿದ 13 ಆರೋಪಿಗಳಿಗೆ ಆಗಸ್ಟ್ 7ರಂದು ಕಲಂ 143ರ ಅಡಿಯಲ್ಲಿ 6 ತಿಂಗಳ ಸಾದಾ ಸಜೆ, 500 ರೂ ದಂಡ, 147ರಡಿ 1 ವರ್ಷ ಸಾದಾ ಶಿಕ್ಷೆ, 500 ರೂ. ದಂಡ, 148ರ ಅಡಿಯಲ್ಲಿ 1 ವರ್ಷ ಸಾದಾ ಸಜೆ, 500 ರೂ ದಂಡ,

ಕಲಂ 323ರಡಿ 1 ವರ್ಷ ಜೈಲು, 500 ರೂ ದಂಡ, ಕಲಂ 324ರಡಿ 1 ವರ್ಷ ಜೈಲು, 500 ರೂ ದಂಡ, ಕಲಂ 353ರಡಿಯಲ್ಲಿ 1 ವರ್ಷ ಜೈಲು ಹಾಗೂ 5 ಸಾವಿರ ರೂ ದಂಡ, ಕಲಂ 504ರಡಿಯಲ್ಲಿ 1 ವರ್ಷ ಸಜೆ, 1 ಸಾವಿರ ರೂ ದಂಡ, ಕಲಂ 506ರಲ್ಲಿ 1 ವರ್ಷ ಸಜೆ, 1 ಸಾವಿರ ರೂ ದಂಡ, ಕಲಂ 3(1)(×) ಪ.ಜಾ/ಪ.ಪಂ ಕಾಯ್ದೆಯಡಿ 1 ವರ್ಷ ಸಾದಾ ಶಿಕ್ಷೆ ಹಾಗೂ 1 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಇದನ್ನೂ ಓದಿ ನೀರುಪಾಲಾದ ಬಾಲಕರ ಕುಟುಂಬಗಳಿಗೆ ಎರಡು ಲಕ್ಷ ರೂ. ಪರಿಹಾರ

ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

ವರ್ಕ್ ಫ್ರಾಮ್ ಹೋಮ್ ಟಾಸ್ಕ್ ನೀಡಿ ರೈತನಿಗೆ ವಂಚನೆ…

ಯೂಟ್ಯೂಬ್ ಟಾಸ್ಕ್ ಕೊಟ್ಟು ಚೀಟಿಂಗ್….

ವಿಜಯಸಾಕ್ಷಿ ಸುದ್ದಿ, ನರಗುಂದ

ರೈತನೋರ್ವನ ಮೊಬೈಲ್ ನಂಬರ್‌ಗೆ ವರ್ಕ್ ಫ್ರಾಮ್ ಹೋಮ್ ಇದೆ ಅಂತ ವಾಟ್ಸಾಪ್ ಮೆಸೇಜ್ ಕಳುಹಿಸಿ ಕೆಲ ಟಾಸ್ಕ್ ನೀಡಿ ಹಣ ಜಮಾ ಮಾಡಿದ ರೀತಿಯಲ್ಲಿಯೇ ಆಮಿಷವೊಡ್ಡಿ ಸಾವಿರಾರು ವಂಚನೆ ಮಾಡಿದ ಘಟನೆ ನಡೆದಿದೆ.


ನರಗುಂದ ತಾಲೂಕಿನ ಶಿರೋಳ ಗ್ರಾಮದ ಸಂಗು ಈರಯ್ಯ ಅಂಕಲಿಮಠ ಮೋಸಕ್ಕೊಳಗಾದ ರೈತನಾಗಿದ್ದು, ಹಿಮಾನಿ ಹಾಗೂ ಇನ್ನೊಬ್ಬ ಅಪರಿಚತನ ವಿರುದ್ಧ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜುಲೈ 31 ರಂದು 6291535072 ನಂಬರನಿಂದ ರೈತ ಸಂಗುನ ಮೊಬೈಲ್ ನಂಬರ್‌ಗೆ ವರ್ಕ್ ಫ್ರಾಮ್ ಹೋಮ್ ಕೆಲಸ ಇದೆ ಎಂದು ಮೆಸೇಜ್ ಬಂದಿದೆ. ಇದನ್ನು ನಂಬಿದ ಸಂಗು, ಕೆಲಸ ಮಾಡಲು ನಾನು ರೆಡಿ ಇದೀನಿ ಅಂತ ವಾಪಸು ಆ ನಂಬರ್‌ಗೆ ಮೆಸೇಜ್ ಮಾಡಿದ್ದಾನೆ. ಆಗ ಮತ್ತೆ ಆ ನಂಬರ್‌ನಿಂದ ನಮ್ಮ ಕಂಪನಿಯಿಂದ ಯೂಟ್ಯೂಬ್ ಟಾಸ್ಕ್ ಸಿಗುತ್ತೆ ಟಾಸ್ಕ್ ಮಾಡಿ ಅಂತ ಮೆಸೇಜ್ ಬಂದಿದೆ. ಒಕೆ ಎಂದು ವಾಪಾಸು ಮೆಸೇಜ್ ಹಾಕಿದ ಸಂಗುನ ಸಂಪೂರ್ಣ ಹೆಸರು ಮಾಹಿತಿ ಪಡೆದಿದ್ದಾರೆ.

ನಂತರ ವಿಡಿಯೋ ಕಳುಹಿಸಿ ಅದನ್ನು ಲೈಕ್ ಮಾಡಿ ಮರಳಿ ಸ್ಕ್ರೀನ್ ಶಾಟ್ ಹೊಡೆದು ವಾಪಾಸು ಕಳುಹಿಸಲು ಹೇಳಿದ್ದಾರೆ. ಇದೇ ರೀತಿ ಮೂರು ಬಾರಿ ಯೂಟ್ಯೂಬ್ ಟಾಸ್ಕ್ ನೀಡಿದ್ದಾರೆ. ಸಂಗು ಪೂರ್ಣ ಪ್ರಮಾಣದಲ್ಲಿ ಟಾಸ್ಕ್ ಪೂರೈಸಿದ್ದಾನೆ.

ಅಷ್ಟಾರಲ್ಲಾಗಲೇ ಮತ್ತೊಂದು ನಂಬರ್‌ನಿಂದ ಟೆಲಿಗ್ರಾಂ ಆಪ್‌ನಲ್ಲಿ ಸಂಪರ್ಕಿಸಲು ಹೇಳಿ ಹೀಮಾನಿ ಎಂಬುವರು, ಪ್ರೀಪೇಡ್ ಟಾಸ್ಕ್ ಕೊಡುತ್ತಾ ಮೊದಲು ಒಂದು ಸಾವಿರ ರೂ.ಗಳ ಆಮಿಷ ತೋರಿಸಿದ್ದಾರೆ. ನಂತರ ಅದನ್ನು ಹೆಚ್ಚೆಚ್ಚು ಮಾಡಿದ್ದಾರೆ. ಆಗ ಸಂಗು ನನ್ನ ಅಕೌಂಟ್‌ಗೆ ಹಣ ಹಾಕಿ ಅಂತ ಹೇಳಿದಾಗ, ನ್ಯಾಶನಲ್ ಟ್ಯಾಕ್ಸ್ ಸರ್ವರ್ ಸಮಸ್ಯೆ ಇದೆ ಅಂದಿದ್ದಾರೆ. ನಂತರ ಸಿವಿಲ್ ಸ್ಕೋರ್ ಸಮಸ್ಯೆ ಹೇಳಿ ಇಲ್ಲದ ನೆಪವೊಡ್ಡಿದ್ದಾರೆ. ನಿಮ್ಮ ಸಿವಿಲ್ ಸ್ಕೋರ್ ಸರಿಯಾಗಬೇಕಾದರೆ ಐವತ್ತು ಸಾವಿರ ಹಣ ಹಾಕಿ ಅಂದಿದ್ದಾರೆ. ಹೀಗೆ ಇಲ್ಲಸಲ್ಲದ ನೆಪವೊಡ್ಡಿ ಒಟ್ಟು 97.304 ರೂ.ಗಳನ್ನು ಪಡೆದು ಮೋಸ ಮಾಡಿದ್ದಾರೆ.

ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ೦೧೩೫/೨೦೨೩, INFORMATION TECHNOLOGY ACT 2008(U/s-66)(D);IPC 1860 (U/s-34,420)
ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಯಾಣಿ ಓ.ಸಿ ಜೂಜಾಟ; ಇಬ್ಬರು ಅಕ್ಕಸಾಲಿಗರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ತಮ್ಮ ಲಾಭಕ್ಕಾಗಿ ಕಲ್ಯಾಣಿ ನೈಟ್ ಅಂಕಿ -ಸಂಖ್ಯೆಗಳ ಮೇಲೆ ಓ.ಸಿ ಜೂಜಾಟ ಆಡಿಸುತ್ತಿದ್ದ ಇಬ್ಬರು ಅಕ್ಕಸಾಲಿಗರನ್ನು ಶಹರ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಮಾಬುಸುಭಾನಿ ಕಟ್ಟಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿಗಳಾದ ಜೋಡಮಾರುತಿ ಗುಡಿ ಬಳಿಯ ಕಿಲ್ಲಾ ಓಣಿಯ ರಮಾಕಾಂತ ತಂದೆ ಪರಶುರಾಮ ಮಿಸ್ಕಿನ್ ಹಾಗೂ ಇನ್ನೊಬ್ಬ ಹುಡ್ಕೋ ಕಾಲೋನಿಯ ಅಮರನಾಥ ತಂದೆ ಸುನೀಲ‌ ಮಿಸ್ಕಿನ್ ತಮ್ಮ ಲಾಭಕ್ಕಾಗಿ ಕಲ್ಯಾಣಿ ನೈಟ್ ಅಂಕಿ ಸಂಖ್ಯೆಗಳ ಮೇಲೆ ಓ. ಸಿ ನಂಬರ್ ಗೆ ಹಣ ಹಚ್ಚಿದರೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ಪಡೆದುಕೊಂಡು ಜೂಜಾಟ ಆಡಿಸುತ್ತಿದ್ದಾಗ ಶಹರ ಠಾಣೆಯ ಪಿಎಸ್ಐ ಜಿ.ಟಿ ಜಕ್ಕಲಿ ರೇಡ್ ಮಾಡಿ ಬಂಧಿಸಿದ್ದಾರೆ.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ 0112/2023 Karnataka police (amendment)Act,2021(U/s-78(3) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!