ವಿಜಯಸಾಕ್ಷಿ ಸುದ್ದಿ, ಗದಗ: ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಕೇವಲ ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲ. ಸಾರ್ವಜನಿಕರು, ಪೋಷಕರು, ಶಿಕ್ಷಕರು ಹಾಗೂ ಯುವಜನತೆ ಕೈಜೋಡಿಸಿದಾಗ ಮಾತ್ರ ಈ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಹೇಳಿದರು.
ಅಂತರರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ‘ಮಾದಕ ವ್ಯಸನ ಮುಕ್ತ ಗದಗ ವಾಕ್‌ಥಾನ್-2026’ ಕಾರ್ಯಕ್ರಮಕ್ಕೆ ನಗರದ ಗಾಂಧಿ ವೃತ್ತದಲ್ಲಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲಿ ವೈದ್ಯ, ಇಂಜಿನಿಯರ್, ಪೊಲೀಸ್ ಅಧಿಕಾರಿ, ಕ್ರೀಡಾಪಟು ಸೇರಿದಂತೆ ದೊಡ್ಡ ಕನಸುಗಳಿರುತ್ತವೆ. ಆದರೆ ಡ್ರಗ್ಸ್‌ನಂತಹ ದುಶ್ಚಟಗಳಿಗೆ ಒಮ್ಮೆ ಬಲಿಯಾದರೆ ಆ ಎಲ್ಲ ಕನಸುಗಳು ನುಚ್ಚುನೂರಾಗುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ಮಾದಕ ವಸ್ತುಗಳತ್ತ ಆಕರ್ಷಿತರಾಗಬಾರದು ಎಂದು ಕಿವಿಮಾತು ಹೇಳಿದರು.
ಜೂನ್ 26ರಂದು ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಹಿನ್ನೆಲೆಯಲ್ಲಿ ವಾರಪೂರ್ತಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡ್ರಗ್ಸ್ ಮಾರಾಟಗಾರರಷ್ಟೇ ಅಲ್ಲ, ಮಾದಕ ವಸ್ತುಗಳನ್ನು ಸೇವಿಸುವವರ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಮಾದಕ ವ್ಯಸನವು ಕೇವಲ ವ್ಯಕ್ತಿಯನ್ನಷ್ಟೇ ಅಲ್ಲ, ಕುಟುಂಬ ಹಾಗೂ ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಸ್ನೇಹಿತರ ಒತ್ತಡಕ್ಕೆ ಮಣಿದು ಒಮ್ಮೆ ಡ್ರಗ್ಸ್ ಸೇವಿಸಿದರೂ ಅದು ಜೀವಮಾನವಿಡೀ ವ್ಯಸನಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿ, ಕಾನೂನು ಕ್ರಮಗಳ ಜೊತೆಗೆ ಜನಜಾಗೃತಿಯೂ ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಗ್ರಾಮ ಹಾಗೂ ಮನೆಗಳಲ್ಲಿ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಐಎಂಎ ಹಿರಿಯ ಅಧ್ಯಕ್ಷ ಡಾ. ಪ್ಯಾರೇಲಾಲ್ ಮುಲಾನಿ ಮಾತನಾಡಿ, ಮಾದಕ ವ್ಯಸನದಿಂದ ಹೊರಬರಲು ಕೇವಲ ಔಷಧಿಗಳಷ್ಟೇ ಸಾಕಾಗುವುದಿಲ್ಲ. ಯೋಗ, ಮನೋವೈದ್ಯಕೀಯ ಚಿಕಿತ್ಸೆ, ಸೈಕೋಥೆರಪಿ ಹಾಗೂ ಕೌನ್ಸೆಲಿಂಗ್ ಅಗತ್ಯವಾಗಿದೆ ಎಂದು ಹೇಳಿದರು.
ಗಾಂಧಿ ವೃತ್ತದಿಂದ ಆರಂಭವಾದ ವಾಕ್‌ಥಾನ್ ರೋಟರಿ ವೃತ್ತ, ಭೂಮರೆಡ್ಡಿ ವೃತ್ತ, ಹಳೆ ಡಿಸಿ ಕಚೇರಿ ಮಾರ್ಗವಾಗಿ ಬಸವೇಶ್ವರ ಮೂರ್ತಿ ಬಳಿಯ ಭೀಷ್ಮಕೆರೆಯವರೆಗೆ ಸಂಚರಿಸಿತು.
“ಮಾದಕ ವ್ಯಸನ ಜೀವನ ಮಸಣ”, “ನಮ್ಮೆಲ್ಲರ ನಡೆ ಮಾದಕ ವ್ಯಸನ ಮುಕ್ತತೆಯ ಕಡೆ”, “ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ” ಎಂಬ ಘೋಷಣೆಗಳು ನಗರದ ಪ್ರಮುಖ ರಸ್ತೆಗಳಲ್ಲಿ ಮೊಳಗಿದವು. ವಿದ್ಯಾರ್ಥಿಗಳು ಜಾಗೃತಿ ಫಲಕಗಳನ್ನು ಹಿಡಿದು ಸಾರ್ವಜನಿಕರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಮಹಾಂತೇಶ್ ಸಜ್ಜನ, ಡಿಎಸ್‌ಪಿ ಮುರ್ತುಜಾ ಖಾದ್ರಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಮ್ಸ್ ನರ್ಸಿಂಗ್ ಕಾಲೇಜು, ಲಯನ್ಸ್ ಕ್ಲಬ್, ಎಎಸ್‌ಎಸ್ ಕಾಲೇಜು, ಸಂಕಲ್ಪ ನರ್ಸಿಂಗ್ ಕಾಲೇಜು, ಕೆಎಲ್‌ಇ ಪ್ಯಾರಾಮೆಡಿಕಲ್ ಕಾಲೇಜು, ಬಸವೇಶ್ವರ ಪ್ಯಾರಾಮೆಡಿಕಲ್ ಕಾಲೇಜು, ಸಿಎಸ್‌ಐ ನರ್ಸಿಂಗ್ ಕಾಲೇಜು, ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು, ಆರ್‌ಡಿಪಿಆರ್ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
“ಡ್ರಗ್ಸ್‌ನಂತಹ ದುಶ್ಚಟಗಳಿಗೆ ಬಲಿಯಾದರೆ ಯುವಕರ ಎಲ್ಲ ಕನಸುಗಳು ನುಚ್ಚುನೂರಾಗುತ್ತವೆ. ‘ಸೇ ನೋ ಟು ಡ್ರಗ್ಸ್’ ಎಂಬ ಸಂಕಲ್ಪವನ್ನು ಜೀವನದುದ್ದಕ್ಕೂ ಪಾಲಿಸಬೇಕು.”
– ಸಂದೀಪ್ ಪಾಟೀಲ್, ಐಜಿಪಿ, ಬೆಳಗಾವಿ ಉತ್ತರ ವಲಯ
ಡ್ರಗ್ಸ್ ಜಾಲದ ವಿರುದ್ಧ ಗದಗ ಪೊಲೀಸರ ಖಡಕ್ ಕ್ರಮ
ಕಳೆದ ಒಂದು ವರ್ಷದಲ್ಲಿ ಗದಗ ಜಿಲ್ಲಾ ಪೊಲೀಸರು ಮಾದಕ ವಸ್ತುಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಿ 27 ಪ್ರಕರಣಗಳನ್ನು ದಾಖಲಿಸಿ 52 ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಗದಗ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳ ಪೈಕಿ ಮೊದಲ ಬಾರಿಗೆ ಗದಗ ಜಿಲ್ಲೆಯಲ್ಲಿ ಪಿಐಟಿ-ಎನ್‌ಡಿಪಿಎಸ್ (PIT NDPS) ಕಾಯ್ದೆಯಡಿ ಕುಖ್ಯಾತ ಡ್ರಗ್ ಪೆಡ್ಲರ್ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ ಎಂದು ಐಜಿಪಿ ಸಂದೀಪ್ ಪಾಟೀಲ್ ಮಾಹಿತಿ ನೀಡಿದರು.
ಮಾದಕ ವಸ್ತುಗಳ ಜಾಲ ಬೇರುಸಹಿತ ಕಿತ್ತೊಗೆಯಲು ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ಮುಂದುವರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.



