ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ ಧರ್ಮ, ಪ್ರಭು ಶ್ರೀರಾಮ ಹಾಗೂ ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಜೂನ್ 9ರಂದು ನಡೆದ ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಸ್. ಭಗವಾನ್ ಅವರು ಹಿಂದೂ ಧರ್ಮ, ಶ್ರೀರಾಮ ಹಾಗೂ ಧಾರ್ಮಿಕ ಆಚರಣೆಗಳ ಕುರಿತು ನೀಡಿದ ಹೇಳಿಕೆಗಳು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಇಂತಹ ಹೇಳಿಕೆಗಳು ಸಮಾಜದಲ್ಲಿ ಉದ್ವಿಗ್ನತೆ ಹಾಗೂ ಸಮುದಾಯಗಳ ನಡುವೆ ವೈಮನಸ್ಸು ಸೃಷ್ಟಿಸುವ ಸಾಧ್ಯತೆ ಇರುವುದರಿಂದ ಅವರ ಭಾಷಣದ ವಿಡಿಯೋ, ಧ್ವನಿಮುದ್ರಣ ಸೇರಿದಂತೆ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಅನ್ವಯವಾಗುವ ಕಾನೂನು ವಿಧಿಗಳಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮಂಜುನಾಥ ಮಾಗಡಿ, ಹೊನ್ನಪ್ಪ ವಡ್ಡರ, ಶಿವರಾಜ ಪಟ್ಟಣಶೆಟ್ಟಿ, ಗಜೇಂದ್ರಗೌಡ ಪಾಟೀಲ, ನಾಗರಾಜ ಚಿಂಚಲಿ, ಎಚ್.ಎಸ್. ವಾಲಿ, ಡಿ.ಎಂ. ಕೋಟಗಿ, ಶಂಕರ ಬ್ಯಾಡಗಿ, ಮಲ್ಲಪ್ಪಗೌಡರ, ಮುತ್ತು ನೀರಲಗಿ, ಜಿ.ಎಸ್. ಮಲ್ಲಪ್ಪಗೌಡರ, ಫಕ್ಕೀರಪ್ಪ ಹಾವನೂರು, ಯಲ್ಲಪ್ಪಗೌಡ ಪಾಟೀಲ ಸೇರಿದಂತೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.



