ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಐತಿಹಾಸಿಕ ಗಂಗಾಪುರ ಪೇಟೆಯ ದುರ್ಗಾದೇವಿ ದೇವಸ್ಥಾನ ಹಾಗೂ ವೀರೇಶ್ವರ ಪುಣ್ಯಾಶ್ರಮದ ರಥಗಳ ಗಾಲಿಗಳ ಮೇಲೆ ಅನ್ಯಕೋಮಿನ ಮಹಿಳೆಯ ಹೆಸರನ್ನು ಕೆತ್ತಿಸಿರುವುದು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದು, ಇದು ಅಕ್ಷಮ್ಯ ತಪ್ಪು ಎಂದು ಹಿಂದೂ ಸಂಘಟನೆಗಳ ಮುಖಂಡ ರಾಜೂ ಖಾನಪ್ಪನವರ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥಗಳ ಗಾಲಿಗಳ ಮೇಲೆ ‘ಜೋಹರಾ ಪೀರಸಾಬ ಕೌತಾಳ’ ಎಂಬ ಹೆಸರು ಕೆತ್ತಿಸಿರುವುದು ಸಮಸ್ತ ಹಿಂದೂ ಭಕ್ತರಿಗೆ ಮಾಡಿದ ಅವಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇವಾಲಯಗಳಿಗೆ ದಾನ ನೀಡಿದವರನ್ನು ಸ್ಮರಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ದಾನಿಗಳ ಹೆಸರನ್ನು ರಥದ ಗಾಲಿಗಳ ಮೇಲೆ ಕೆತ್ತಿಸುವ ಮುನ್ನ ಆಡಳಿತ ಮಂಡಳಿಗಳು ಭಕ್ತರ ಸಭೆ ಕರೆದು ಚರ್ಚಿಸಬೇಕಿತ್ತು. ಸಮಾಜದ ಅಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಹೇಳಿದರು.
ದುರ್ಗಾದೇವಿ ದೇವಸ್ಥಾನ ಮತ್ತು ವೀರೇಶ್ವರ ಪುಣ್ಯಾಶ್ರಮ ಎರಡಕ್ಕೂ ಶತಮಾನಗಳ ಇತಿಹಾಸವಿದೆ. ವೀರೇಶ್ವರ ಪುಣ್ಯಾಶ್ರಮವು ನಾಡಿನ ಅಂಧರ ಸಂಗೀತ ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಿದ್ದು, ದುರ್ಗಾದೇವಿ ಜಾತ್ರೆಗೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಇಂತಹ ಐತಿಹಾಸಿಕ ಧಾರ್ಮಿಕ ಕೇಂದ್ರಗಳ ರಥಗಳಲ್ಲಿ ಅನ್ಯಕೋಮಿನ ಮಹಿಳೆಯ ಹೆಸರು ಕೆತ್ತಿಸಿರುವುದು ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ವೀರೇಶ್ವರ ಪುಣ್ಯಾಶ್ರಮಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾಗೂ ದೇಣಿಗೆ ನೀಡಿದ ಅನೇಕ ದಾನಿಗಳ ಹೆಸರುಗಳನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ದಾನ ಎಂಬುದು ಪ್ರಚಾರಕ್ಕಾಗಿ ಅಲ್ಲ, ಸೇವಾ ಮನೋಭಾವಕ್ಕಾಗಿ ಇರಬೇಕು. ಇಂತಹ ಸಂದರ್ಭದಲ್ಲಿ ರಥದ ಗಾಲಿಗಳ ಮೇಲೆ ಹೆಸರು ಕೆತ್ತಿಸಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ಈ ವಿಷಯದಲ್ಲಿ ಆಗಿರುವ ಲೋಪವನ್ನು ಸಂಬಂಧಿಸಿದ ದೇವಾಲಯಗಳ ಆಡಳಿತ ಮಂಡಳಿಗಳು ಕೂಡಲೇ ಸರಿಪಡಿಸಬೇಕು. ಐದು ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ದೇವಾಲಯಗಳ ಎದುರು ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ, ಸತ್ಯಾಗ್ರಹ ಮತ್ತು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಹೇಶ ರೋಖಡೆ, ಶಿವಯೋಗಿ ಹಿರೇಮಠ, ಸತೀಶ ಕುಂಬಾರ, ವೆಂಕಟೇಶ ದೊಡ್ಡಮನಿ, ಸಿ.ಬಿ. ಕಾಳೆ, ಶಂಕರ ಕಾರದಕಟ್ಟಿ, ಈರಪ್ಪ ಹೆಬಸೂರ, ಆನಂದ ಅರಕೆರೆ, ಸುನೀಲ ಶಿಂಧೆ, ಸಂಜು ಚಟ್ಟಿ, ವಿಶಾಲ ಗೋಕಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ದಾನಿಗಳ ಹೆಸರನ್ನು ಸ್ಮರಿಸುವುದಕ್ಕೆ ವಿರೋಧವಿಲ್ಲ. ಆದರೆ ಐತಿಹಾಸಿಕ ದೇವಾಲಯಗಳ ರಥದ ಗಾಲಿಗಳ ಮೇಲೆ ಅನ್ಯಕೋಮಿನ ಮಹಿಳೆಯ ಹೆಸರು ಕೆತ್ತಿಸಿರುವುದು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ.”
– ರಾಜೂ ಖಾನಪ್ಪನವರ, ಹಿಂದೂ ಸಂಘಟನೆಗಳ ಮುಖಂಡ



