ವಿಜಯಸಾಕ್ಷಿ ಸುದ್ದಿ, ಗದಗ: ವಿಜಯಪುರ ಮಾರ್ಗಕ್ಕೆ ಸಂಚರಿಸುವ ಎಲ್ಲ ಪ್ರಯಾಣಿಕ ರೈಲುಗಳನ್ನು ಗದಗ ನಗರದ ಮುಖ್ಯ ರೈಲ್ವೆ ನಿಲ್ದಾಣದ ಮೂಲಕವೇ ಓಡಿಸಬೇಕು. ಹೊಂಬಳ ಗೇಟ್ ಸಮೀಪದ ಬೈಪಾಸ್ ನಿಲ್ದಾಣದ ಮೂಲಕ ರೈಲು ಸಂಚಾರ ನಡೆಸುವ ನಿರ್ಧಾರವನ್ನು ರೈಲ್ವೆ ಇಲಾಖೆ ಕೈಬಿಡಬೇಕು ಎಂದು ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಪಾಸ್ ನಿಲ್ದಾಣದಲ್ಲಿ ಸಮರ್ಪಕ ಮೂಲಸೌಕರ್ಯಗಳ ಕೊರತೆಯಿದ್ದು, ಅಲ್ಲಿಂದ ನಗರಕ್ಕೆ ಸಂಪರ್ಕ ಸಾಧಿಸುವುದು ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಹೀಗಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ವಿಜಯಪುರ ಮಾರ್ಗದ ರೈಲುಗಳನ್ನು ಗದಗ ಮುಖ್ಯ ರೈಲ್ವೆ ನಿಲ್ದಾಣದ ಮೂಲಕವೇ ಸಂಚರಿಸಬೇಕು ಎಂದು ಒತ್ತಾಯಿಸಿದರು.
ರೈಲುಗಳನ್ನು ತಿರುಗಿಸಲು ತಾಂತ್ರಿಕ ಸಮಸ್ಯೆಗಳಿವೆ ಎಂಬ ಕಾರಣವನ್ನು ರೈಲ್ವೆ ಇಲಾಖೆ ನೀಡುತ್ತಿದೆ. ಆದರೆ ಲೊಕೊಮೊಟಿವ್ ವ್ಯವಸ್ಥೆ ಅಳವಡಿಸಿಕೊಂಡರೆ ಈ ಸಮಸ್ಯೆ ನಿವಾರಣೆಯಾಗುತ್ತದೆ. ಅಗತ್ಯವಿದ್ದರೆ ಸರಕು ಸಾಗಣೆ ರೈಲುಗಳನ್ನು ಬೈಪಾಸ್ ಮಾರ್ಗದಲ್ಲಿ ಓಡಿಸಬಹುದು. ಆದರೆ ಪ್ರಯಾಣಿಕರ ರೈಲುಗಳನ್ನು ಬೈಪಾಸ್‌ಗೆ ವರ್ಗಾಯಿಸುವುದು ಸಮಂಜಸವಲ್ಲ ಎಂದು ಹೇಳಿದರು.
ಈ ಕುರಿತು ರೈಲ್ವೆ ಸಚಿವರು, ರೈಲ್ವೆ ಮಂಡಳಿ ಅಧ್ಯಕ್ಷರು, ಪ್ರಧಾನ ವ್ಯವಸ್ಥಾಪಕರು ಹಾಗೂ ವಿಭಾಗೀಯ ವ್ಯವಸ್ಥಾಪಕರಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗುವುದು. 15 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಮಾನ ಮನಸ್ಕ ಸಂಘ–ಸಂಸ್ಥೆಗಳೊಂದಿಗೆ ಸಭೆ ನಡೆಸಿ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಧ್ಯಾ ಗುಂಡಿ, ಮನ್ಸುಖ್‌ಲಾಲ್ ಪುಣೇಕರ್, ಎಸ್.ವಿ. ಸುಲಾಖೆ, ಬೋಜಪ್ಪ ಹೆಗ್ಗಡಿ, ಆಂಜನೇಯ ಗುಂತಕಲ್ ಹಾಗೂ ಅಶೋಕ ಅಂಗಡಿ ಉಪಸ್ಥಿತರಿದ್ದರು.
“ಸರಕು ಸಾಗಣೆ ರೈಲುಗಳನ್ನು ಬೈಪಾಸ್ ಮಾರ್ಗದಲ್ಲಿ ಓಡಿಸಬಹುದು. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ವಿಜಯಪುರ ಮಾರ್ಗದ ಎಲ್ಲ ರೈಲುಗಳು ಗದಗ ಮುಖ್ಯ ನಿಲ್ದಾಣದ ಮೂಲಕವೇ ಸಂಚರಿಸಬೇಕು.”
– ಗಣೇಶಸಿಂಗ್ ಬ್ಯಾಳಿ, ಅಧ್ಯಕ್ಷರು, ಬೆಟಗೇರಿ ರೈಲ್ವೆ ಹೋರಾಟ ಸಮಿತಿ



