ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಉತ್ತಮ ಮಳೆ ಹಾಗೂ ರೈತರ ಒಳಿತಿಗಾಗಿ ಸೋಮವಾರ ಮುಂಜಾನೆಯಿಂದ ಅಹೋರಾತ್ರಿ ವಿಶೇಷ ಜಲಾಭಿಷೇಕ, ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಯಿತು.
ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಜಲಾಭಿಷೇಕವು 24 ಗಂಟೆಗಳ ಕಾಲ ನಿರಂತರವಾಗಿ ನಡೆಯುತ್ತಿದ್ದು, ಶಿವಲಿಂಗದ ಮೇಲೆ ನಿರಂತರವಾಗಿ ಜಲಧಾರೆ ಹರಿಯುತ್ತಿದೆ. ಮಳೆಯ ಅಭಾವದಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಭಕ್ತರು ಮತ್ತು ರೈತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ, ದೇವಸ್ಥಾನ ಅರ್ಚಕರ ಸಮಿತಿ ಹಾಗೂ ಸೋಮೇಶ್ವರ ಜಾತ್ರಾ ಕಮಿಟಿ ಸಂಯುಕ್ತವಾಗಿ ಈ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿವೆ. ಅರ್ಚಕರಾದ ಚಿಕ್ಕರಸ ಪೂಜಾರ, ರಾಘವೇಂದ್ರ ಪೂಜಾರ ಹಾಗೂ ಕೃಷ್ಣಾಜಿ ಪೂಜಾರ ಅವರ ನೇತೃತ್ವದಲ್ಲಿ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿತು.
ಪೂಜೆಯ ಬಳಿಕ ಭಕ್ತರಿಗೆ ನೆನೆಗಡಲೆ ಹಾಗೂ ಬೆಲ್ಲದ ಪ್ರಸಾದ ವಿತರಿಸಲಾಯಿತು. ದೇವಸ್ಥಾನದ ಆವರಣದಲ್ಲಿ ನೂರಾರು ಭಕ್ತರು ಸೇರಿ “ಓಂ ನಮಃ ಶಿವಾಯ” ಮಂತ್ರ ಜಪಿಸಿ ಮಳೆಗಾಗಿ ಪ್ರಾರ್ಥಿಸಿದರು. ಸಂಜೆಯಿಂದ ವಿವಿಧ ಭಜನಾ ತಂಡಗಳು ಭಾಗವಹಿಸಿ ಭಕ್ತಿ ಸೇವೆ ಸಲ್ಲಿಸಿದವು.
ಮಂಗಳವಾರ ಬೆಳಗ್ಗೆ 8 ಗಂಟೆಯವರೆಗೆ ಜಲಾಭಿಷೇಕ ಮುಂದುವರಿಯಲಿದ್ದು, ನಂತರ ವೇದಘೋಷಗಳ ಮಧ್ಯೆ ಮಹಾ ರುದ್ರಾಭಿಷೇಕ ನಡೆಯಲಿದೆ. ಬಳಿಕ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಗುರುರಾಜ ಪಾಟೀಲಕುಲಕರ್ಣಿ, ಸುರೇಶ ರಾಚನಾಯ್ಕರ, ಚನ್ನಪ್ಪ ಜಗಲಿ, ಸೋಮಣ್ಣ ಬಂಡಿವಾಡ, ಜಿ.ಎಸ್. ಗುಡಗೇರಿ, ವಿರುಪಾಕ್ಷ ಆದಿ, ನಂದೀಶ ಬಂಡಿವಾಡ, ಮಯೂರಗೌಡ ಪಾಟೀಲ, ಜಯಪ್ರಕಾಶ ಹೊಟ್ಟಿ, ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಶಿವಯೋಗಿ ಅಂಕಲಕೋಟಿ ಸೇರಿದಂತೆ ಟ್ರಸ್ಟ್ ಕಮಿಟಿ, ಅರ್ಚಕರ ಸಮಿತಿ, ಜಾತ್ರಾ ಕಮಿಟಿ, ಪುರಾಣ ಕಮಿಟಿ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.



