Home Blog Page 3245

ಕೊನೆ ಎಸೆತದಲ್ಲಿ‌ ಬೌಂಡರಿ ಗೆರೆ ದಾಟಿದ ಚೆಂಡು!

0

ರೇಟಿಂಗ್: **

ನಿರ್ಮಾಪಕರು: ಎಸ್.ಪೂರ್ಣಚಂದ್ರ ನಾಯ್ಡು , ಶ್ರೀಕಾಂತ್ ವೀರಮಾಚಿನೇನಿ.
ನಿರ್ದೇಶನ: ಸುಜಯ್ ಕೆ ಶ್ರೀಹರಿ
ಛಾಯಾಗ್ರಹಣ: ಕುಂಜುನ್ನಿ ಎಸ್ ಕುಮಾರ್
ಸಂಗೀತ ನಿರ್ದೇಶನ: ಜಿಬ್ರಾನ್
ಸಂಕಲನ: ಆಂಟೊನಿ
ಕಲಾ ನಿರ್ದೇಶನ: ಶ್ರೀನಿವಾಸ
ಸಾಹಸ: ಡಿಫರೆಂಟ್ ಡ್ಯಾನಿ ಮತ್ತು ಮಾರ್ಷಲ್ ರಾಮಣ್ಣ
ನೃತ್ಯ ಸಂಯೋಜನೆ: ಬಾನು ಮತ್ತು ಜಾನಿ ಮಾಸ್ಟರ್
ಸಾಹಿತ್ಯ: ನಾಗೇಂದ್ರ ಪ್ರಸಾದ್
ಸಂಭಾಷಣೆ: ಗುರು ಪ್ರಸಾದ್ ಮತ್ತು ಇ ಧರ್ಮೇಂದ್ರ
ಚಿತ್ರ ಪ್ರದರ್ಶನ: ಶ್ರೀ ಶಾರದಾ ಚಿತ್ರಮಂದಿರ, ಕೊಪ್ಪಳ.

ಬಸವರಾಜ ಕರುಗಲ್.
ಮೂರು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿರೊ ರಿಯಲ್ ಸ್ಟಾರ್ ಉಪೇಂದ್ರ, ಹೋಮ್ ಮಿನಿಸ್ಟರ್ ಸಿನಿಮಾ ಮೂಲಕ ಅವರನ್ನು ಅಭಿಮಾನಿಗಳ ಚಕ್ರವರ್ತಿಯನ್ನಾಗಿ ಮಾಡಲಾಗಿದೆ. ಐ ಲವ್ ಯು ಸಿನಿಮಾದಲ್ಲಿ ಸೋತಿದ್ದ ಉಪ್ಪಿ, ಆನಂತರ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. After long gap ಹೋಮ್ ಮಿನಿಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿರೊ ಉಪೇಂದ್ರರನ್ನ ನೋಡಲು ಬಹಳ ನಿರೀಕ್ಷೆ ಇಟ್ಟುಕೊಂಡು ಬರಬೇಕಿಲ್ಲ. ಯಾಕೆಂದರೆ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ಅನಿರೀಕ್ಷಿತವಾಗಿ ನಡೆಯುವಂಥದ್ದು, ಘಟಿಸುವಂಥದ್ದು ಏನೂ ಇಲ್ಲ. ಹಾಗಂತ ಅರ್ಧಕ್ಕೆ ಎದ್ದು ಬಂದರೆ ಒಂದೊಳ್ಳೇ ಮೇಸೇಜ್‌ನ್ನ ಮಿಸ್ ಮಾಡ್ಕೊತೀರಾ..

ನಿಜ ಹನ್ನೇರಡು ನಿಮಿಷಗಳ ಅತ್ಯುತ್ತಮ ಸಬ್ಜೆಕ್ಟ್‌ನ್ನ ಸಿನಿಮಾ ಮೂಲಕ ತೆರೆಗೆ ತರಲು ಎರಡೂವರೆ ಗಂಟೆ ಬಳಸಿಕೊಂಡದ್ದು, ಪ್ರೇಕ್ಷಕರಿಗೆ ಹೋಮ್ ಮಿನಿಸ್ಟರ್ ಮಾಡುವ ತಾಳ್ಮೆಯ ಪರೀಕ್ಷೆಯೇ ಸರಿ. ಇಂಥ ಒಳ್ಳೆಯ ವಿಷಯವನ್ನು ಅಚ್ಚುಕಟ್ಟಾಗಿ, ಇಂಟರೆಸ್ಟಿಂಗ್ ಆಗಿ ಸಿನಿಮಾ ಮಾಡುವ ಅವಕಾಶವನ್ನ ಚಿತ್ರದ ನಿರ್ದೇಶಕ ಸುಜಯ್ ಕೆ.ಶ್ರೀಹರಿ ಮಿಸ್ ಮಾಡ್ಕೊಂಡಿದ್ದಾರೆ.

ಕುಟುಂಬವನ್ನೇ ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾ ಇದು ಎಂದು ಥಟ್ಟನೇ ಹೇಳಬಹುದು. ಒಂದರ್ಧ ಸಿನಿಮಾ ಶಿವಣ್ಣ ಅಭಿನಯದ “ಅಮ್ಮಾವ್ರ ಗಂಡ” ಸಿನಿಮಾಗೆ ತಾಳೆಯಾಗುತ್ತದೆ.

ಮೊದಲೆಲ್ಲ ಮನೆ ಅಂದ್ರೆ ಅಪ್ಪ, ಅಮ್ಮ, ಗಂಡ, ಹೆಂಡತಿ ಮತ್ತು ಮಕ್ಕಳು ಇರುತ್ತಿದ್ದರು. ಗಂಡ ಹೆಂಡತಿ ಕೆಲಸಕ್ಕೆ ಹೋದರೆ ಮಕ್ಕಳನ್ನ ಅಪ್ಪ ಅಮ್ಮ ನೋಡ್ಕೊತಿದ್ರು. ಆದರೆ ಈಗ ಮನೆ ಅಂದ್ರೆ ಗಂಡ, ಹೆಂಡತಿ ಮತ್ತು ಮಗು ಎನ್ನುವ ಕಾಲವಿದು. ಗಂಡ ಹೆಂಡತಿ ಕೆಲಸಕ್ಕೆ ಹೋದ್ರೆ ಮಗುವನ್ನ ನೋಡಿಕೊಳ್ಳಲು ಆಳನ್ನು ನೇಮಿಸಬೇಕು. ಮಕ್ಕಳು ದೇವರಿದ್ದ ಹಾಗೆ ಕಾಳಜಿ ತೋರಿಸುವವರನ್ನು ಪ್ರೀತಿಸುತ್ತವೆ. ಕೆಲವರು ಕಾಳಜಿಯನ್ನು ಹಣ ಗಳಿಸುವ ಮಾರ್ಗ ಮಾಡಿಕೊಂಡು ದೇವರಿಗೆ ಮೋಸ ಮಾಡುತ್ತಾರೆ. ಅದಕ್ಕೆ ಈ ಚಿತ್ರದಲ್ಲಿ ನಾಯಕ ತಾನು ಕೆಲಸ ಬಿಟ್ಟು ಮನೆಯಲ್ಲೇ ಇರ‌್ತಾನೆ.

ಮನೆಯ ಎಲ್ಲ ಜವಾಬ್ದಾರಿ ನಾಯಕ ರೇಣು (ಉಪೇಂದ್ರ) ಹೆಗಲಿಗಿದ್ದು, ಮೇಲ್ನೋಟಕ್ಕೆ ಉಂಡಾಡಿ ಗುಂಡನ ಥರಾ ಕಾಣ್ತಾನೆ. ಅಕ್ಕ ಪಕ್ಕದ ಮನೆಯ ಗೃಹಿಣಿಯರೇ ಈತನ ಫ್ರೆಂಡ್ಸ್. ಸದಾ ಹೆಂಗಸರ ಜೊತೆಗಿದ್ದು ಅವರ ಮನೆಯ ಸಮಸ್ಯೆಗಳನ್ನು ಪರಿಹರಿಸುವ ಆಪತ್ಬಾಂಧವ. ಆದರೆ ಒಮ್ಮೆ ರೇಣುನೇ ಸಮಸ್ಯೆಯಲ್ಲಿ ಸಿಲುಕುತ್ತಾನೆ. ಆ ಸಮಸ್ಯೆ‌ ಕುಟುಂಬವನ್ನೇ ಬ್ರೇಕ್ ಮಾಡುತ್ತದೆ.

ಪ್ರತಿಭೆಗೆ ಪ್ರೋತ್ಸಾಹ ನೀಡುವ ನಾಯಕನ ಗುಣವೇ ಮುಳ್ಳಾಗಿ, ಚಿತ್ರದ ಕೊನೆಯಲ್ಲಿ ಮುಳ್ಳಿನ ಮಧ್ಯೆಯೂ ಅರಳುವ ಗುಲಾಬಿಯಂತೆ ಕಂಗೊಳಿಸುತ್ತಾನೆ. ವರ್ಕ್ ಫ್ರಂ ಹೋಮ್ ಅಂದ್ರೆ ಮನೆ  ಕೆಲಸ ಮಾಡ್ತಾ ಮಾಡ್ತಾನೇ ಮಕ್ಕಳ ಕೇರ್‌ಗೆ ಒಂದು ಆ್ಯಪ್ ಸಂಶೋಧಿಸುತ್ತಾನೆ. ಅದು ಹೇಗೆ ವರ್ಕ್ ಮಾಡುತ್ತದೆ ಅನ್ನೋದನ್ನ ಚಿತ್ರದಲ್ಲಿ ಸೂಕ್ಷ್ಮವಾಗಿ, ಸಂಕ್ಷಿಪ್ತವಾಗಿ ಹೇಳಲಾಗಿದೆ. ಇಡೀ ಚಿತ್ರದಲ್ಲಿ ಗಮನ ಸೆಳೆಯುವ ಅಂಶವೆಂದರೆ ಇದೊಂದೇ.

ಹೋಮ್ ಮಿನಿಸ್ಟರ್ ಅನ್ನೋದು ಸಿನಿಮಾದಲ್ಲಿ ಬರುವ ಟಿವಿಯ ರಿಯಾಲಿಟಿ ಷೋವೊಂದರ ಹೆಸರು. ರಿಯಾಲಿಟಿ ಷೋವನ್ನೇ ಚಿತ್ರಕ್ಕೆ ಕನೆಕ್ಟ್ ಮಾಡಿ, ಕ್ಲೈಮ್ಯಾಕ್ಸ್‌ನಲ್ಲಿ ಕಣ್ಣೀರು ಹಾಕಿಸುತ್ತಾರೆ ನಿರ್ದೇಶಕ ಸುಜಯ್.

ಆದರೆ ಚಿತ್ರದ ಕೆಲವು ಅಂಶಗಳು ಲಾಜಿಕ್ ಇಲ್ಲದೇ ಲಗಾಮಿಲ್ಲದ ಕುದುರೆಯಂತೆ ಓಡಿ ಬಿಡುತ್ತವೆ. ಕೆಲವೊಮ್ಮೆ ಏನೊ ಹೇಳಲು ಹೋಗಿ ಏನೇನೇನೋ ಹೇಳಿಬಿಡುತ್ತಾರೆ ಎಂಬ ಭಾವ ಕಾಡುತ್ತದೆ.

ಸುಜಯ್ ಕಥೆಯ ಆಯ್ಕೆಯಲ್ಲಿ ಗೆದ್ದಿದ್ದಾರೆ. ಅದನ್ನು ತೆರೆಗೆ ತರುವಲ್ಲಿ ಸೋತಿದ್ದಾರೆ ಎಂಬುದನ್ನು ಬೇಸರ ಮಾಡಿಕೊಳ್ಳದೇ ಒಪ್ಪಿಕೊಳ್ಳಬೇಕು. ಹಣ ಹಾಕಿದ ನಿರ್ಮಾಪಕ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ಬಂಡವಾಳ ವಾಪಸ್ ತೆಗೆಯಲು ಮತ್ತೊಂದು ಉತ್ತಮ ಸಿನಿಮಾ ನಿರ್ಮಾಣಕ್ಕೆ ಅಣಿಯಾಗಬೇಕಷ್ಟೇ. ಕುಂಜುನ್ನಿ ಛಾಯಾಗ್ರಹಣ ಸಾಧಾರಣ ಬಜೆಟ್ ಸಿನಿಮಾ ಇದು ಎಂಬುದನ್ನು ಎತ್ತಿ ತೋರಿಸುತ್ತದೆ. ಜಿಬ್ರಾನ್ ಮ್ಯೂಜಿಕ್‌ನಲ್ಲಿ ಮ್ಯಾಜಿಕ್ ಇಲ್ಲ. ಗುರುಪ್ರಸಾದ್ ಮತ್ತು ಧರ್ಮೇಂದ್ರ ಚಿತ್ರಕ್ಕಾಗಿ ಮಾತುಗಳನ್ನು ಬರೆದಿದ್ದು, ಅಲ್ಲಲ್ಲಿ ಬರೆ ಎಳೆಯುತ್ತವೆ. ಕಣ್ಣೀರು ತರಿಸುತ್ತವೆ. ಡಿಫರೆಂಟ್ ಡ್ಯಾನಿ ಸ್ಟಂಟ್‌ನಲ್ಲಿ ಗಮನ ಸೆಳೆಯುವಂಥ ಎಲಿಮೆಂಟ್ಸ್ ಇಲ್ಲ.

ಒಟ್ಟಾರೆ ಹೋಮ್ ಮಿನಿಸ್ಟರ್ ಹೇಗಿದ್ದಾನೆಂದರೆ  ಕೊನೆಯ ಬಾಲ್‌ನಲ್ಲಿ ಬೌಂಡರಿ ಹೊಡೆದಂತೆ ಕಾಣಿಸುತ್ತಾನೆ. ಆ ಬೌಂಡರಿ ಬರುವವರೆಗೆ ನೋಡುಗನಿಗೆ ಸಖತ್ ಬೋರು. ಬೌಂಡರಿ ಹೊಡೆದಾಗ ಸೌಂಡು ಸಿಕ್ಕಾಪಟ್ಟೆ ಜೋರು.

ವಚನಭ್ರಷ್ಟರಾದರೆ ನಿರಂತರ ಹೋರಾಟ; ಕಾಂಗ್ರೆಸ್‌ಗೆ ದಾನಪ್ಪಗೌಡರ ಎಚ್ಚರಿಕೆ

ಬಿಜೆಪಿ ಜೊತೆ ಹೊಂದಾಣಿಕೆಯೇ ಮಾಡಿಕೊಂಡಿಲ್ಲ ಎಂಬ ಕಾಂಗ್ರೆಸ್ ಸ್ಪಷ್ಟನೆಗೆ ಬಿಜೆಪಿ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಸ್ಥಳೀಯ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ನಾವು ಕೊಮುವಾದಿ ಬಿಜೆಪಿ ಜೊತೆ ಹೊಂದಾಣಿಕೆಯೇ ಮಾಡಿಕೊಂಡಿಲ್ಲ, ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ಹೊರಗಿಡಬೇಕೆಂದು ಏಕೈಕ ಉದ್ದೇಶದಿಂದ ಬಿಜೆಪಿ ಸದಸ್ಯರು ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.
 

ಅಳ್ನಾವರದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಕೋಮುವಾದಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಇದೇ ಕಾರಣದಿಂದ ನವಲಗುಂದ ಪುರಸಭೆಯಲ್ಲಿ ನಾವು ಜೆಡಿಎಸ್ ಪಕ್ಷದ ಬೆಂಬಲ ಪಡೆಯಬಾರದೆಂದು ನಿರ್ಧರಿಸಿದ್ದೇವು ಹೊರತು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ.
ಈಗ ಬಿಜೆಪಿಯವರು ಅನವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ.  ಒಪ್ಪಂದವಾಗಿದ್ದರೆ ಅಂದೇ ಧ್ವನಿ ಎತ್ತಿ ಬಹಿರಂಗವಾಗಿ ಹೇಳಬೇಕಾಗಿತ್ತು. ನಾವು ಎಂದೂ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ನಮ್ಮ ಪಕ್ಷದವರು ಯಾರಾದರೂ ಅವರೊಂದಿಗೆ ಕೈಜೊಡಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ರಾಜೀ ಮಾಡಿಕೊಳ್ಳುವ ಸಂದರ್ಭ ಎದುರಾರದರೆ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಈಗ 17 ಸದಸ್ಯರ ಬೆಂಬಲವಿದ್ದು ಸಂಪೂರ್ಣ ಬಹುಮತ ಹೊಂದಿದ್ದೇವೆ. ನಮ್ಮ ಪಕ್ಷದ ಒಮ್ಮತದ ಅಭ್ಯರ್ಥಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತೇವೆಂದು ಹೇಳಿದ್ದಾರೆ.

ವಚನಭ್ರಷ್ಟರಾದರೆ ನಿರಂತರ ಹೋರಾಟ – ಎಸ್.ಬಿ.ದಾನಪ್ಪಗೌಡರ

 ಒಳ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅನೀಲಕುಮಾರ ಪಾಟೀಲ ಅವರು ಇರಲಿಲ್ಲ. ಸ್ಥಳೀಯ ನಾಯಕರಾದ ಮಾಜಿ ಸಚಿವ ಕೆ.ಎನ್.ಗಡ್ಡಿ, ವಿನೋದ ಅಸೂಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧನಗೌಡ ಹಿರೇಗೌಡರ ಹಾಗೂ ಹಿರಿಯ ಮುಖಂಡ ವಿ.ಪಿ.ಪಾಟೀಲ ಅವರಿದ್ದರು. ಕೊಟ್ಟ ಮಾತಿನಂತೆಯೇ ಅಧ್ಯಕ್ಷ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದವರಿಗೆ, ಸ್ಥಾಯಿ ಕಮೀಟಿ ಚೇರಮನ್ ಬಿಜೆಪಿಯವರಿಗೆ ಕೊಡಬೇಕೆಂದು ಕರಾರು ಇದ್ದ ಕಾರಣ ಬಿಜೆಪಿ ಸದಸ್ಯ ಬಸವರಾಜ ಕಟ್ಟಿಮನಿ ಅವರನ್ನು ಸ್ಥಾಯಿ ಕಮೀಟಿ ಚೇರಮನ್‍ರಾಗಿ ಆಯ್ಕೆ ಮಾಡಿ ಅಧಿಕಾರ ಹಂಚಿಕೆ ಮಾಡಿದ್ದು ಸುಳ್ಳಾಗುವುದಿಲ್ಲ. ಸಾರ್ವಜನಿಕ ವಲಯದಲ್ಲಿ ಇದು ತೆರೆದಿಟ್ಟ ಪುಸ್ತಕದಂತಿದೆ.
 

ಹಿಂದೆ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಜೊತೆ ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸಿದ್ದೇವೆ. ಆದರೆ ಈಗ ಹಿರಿತನದಲ್ಲಿಯೇ ಇಲ್ಲದವರ ಹೇಳಿಕೆಯನ್ನು ನಾವು ನಂಬುವುದಿಲ್ಲ. ಸ್ಥಳೀಯ ನಾಯಕರ ಮೇಲೆ ನಮಗೆ ವಿಶ್ವಾಸವಿದೆ. ಕೊಟ್ಟ ಮಾತಿನಂತೆಯೇ ಅವರು ನಡೆದುಕೊಳ್ಳುತ್ತಾರೆಂಬ ನಂಬುಗೆ ಇದೆ.  ಒಂದು ವೇಳೆ ಸ್ಥಳೀಯ ನಾಯಕರು ವಚನಭ್ರಷ್ಟರಾದರೆ ನಿರಂತರ ಹೋರಾಟ ಮಾಡುತ್ತೇವೆಂದು ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಬಿ.ದಾನಪ್ಪಗೌಡರ ಎಚ್ಚರಿಕೆ ‌ನೀಡಿದ್ದಾರೆ.

ರಾಜಕೀಯ ಅಖಾಡಕ್ಕೆ ದೊಡ್ಮನೆ ಎಂಟ್ರಿ-ಭಾರಿ ಸಂಚಲನ!!

0

ಕೊಪ್ಪಳ ಕಣದಲ್ಲಿ ಸಿದ್ದು-ರಾಘಣ್ಣ ಮುಖಾಮುಖಿ!!

ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಬಿಜೆಪಿಯಿಂದ ಸಿವಿಸಿ

ಜೆಡಿಎಸ್‌ನಿಂದ ಕರಡಿ ಸಂಗಣ್ಣ ಅಖಾಡಕ್ಕೆ

ಬಸವರಾಜ ಕರುಗಲ್
ವಿಜಯಸಾಕ್ಷಿ ವಿಶೇಷ ಸುದ್ದಿ, ಕೊಪ್ಪಳ: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ 2023ರ ವಿಧಾನಸಭಾ ಚುನಾವಣಾ ಅಖಾಡ ಸಾಕ್ಷಿಯಾಗಲಿದೆ. ಸಿದ್ದರಾಮಯ್ಯ ಅವರ ಮಾನಸ ಪುತ್ರ ಎಂದೇ ಬಿಂಬಿತಗೊಂಡಿರುವ ರಾಘವೇಂದ್ರ ಹಿಟ್ನಾಳ ಈ ತಮ್ಮ ರಾಜಕೀಯ ಗುರು ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಲಿದ್ದಾರೆ!

ಈಗಾಗಲೇ ರಾಜ್ಯದಲ್ಲಿ ಚುನಾವಣೆಯ ಗಾಳಿ ಬೀಸತೊಡಗಿದೆ. ವರ್ಷಾಂತ್ಯಕ್ಕೆ ಚುನಾವಣೆ‌ ನಡೆಯುವ ಸಾಧ್ಯತೆಗಳು‌ ನಿಚ್ಚಳವಾಗಿವೆ. ವಿಶೇಷವೆಂದರೆ ಕನ್ನಡ ನೆಲದ ದೊಡ್ಮನೆ ಎನಿಸಿರುವ ರಾಜ್‌ಕುಮಾರ್ ಕುಟುಂಬ, ಸಮಾಜ ಸೇವೆಯಲ್ಲಿ ವಿಶ್ವದಲ್ಲೇ ದೊಡ್ಡ ಹೆಸರು ಗಳಿಸಿರುವ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಪಿಆರ್‌ಕೆ ಎಂಬ ಹೊಸ ಪಕ್ಷ ಸ್ಥಾಪಿಸಲಿದ್ದು, ಕೊಪ್ಪಳ ಕಣದಿಂದ ರಾಘವೇಂದ್ರ ಹಿಟ್ನಾಳ ಪಿಆರ್‌ಕೆ ಪಕ್ಷ ಪ್ರತಿನಿಧಿಸಿ ಸ್ಪರ್ಧಿಸಲು ಒಂದು ಸುತ್ತಿನ ಮಾತು ಕತೆ ಮುಗಿದಿದೆ ಎಂದು ಪಿಆರ್‌ಕೆ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಇನ್ನು ಬಿಜೆಪಿಯಿಂದ ಸಿ.ವಿ.ಚಂದ್ರಶೇಖರ ಹೆಸರು ಅಂತಿಮಗೊಂಡಿದ್ದು, ಕಾಂಗ್ರೆಸ್ ಮುಖಂಡ ಸುರೇಶ ಭೂಮರಡ್ಡಿ ಬಿಜೆಪಿ ಸೇರುವ ಮೂಲಕ ಬೀಗರಾದ ಸಿ.ವಿ.ಸಿ.ಯವರ ಪರ ಮತಯಾಚಿಸಲಿದ್ದಾರೆ.

ಈಗಾಗಲೇ ಕೊಪ್ಪಳ ವಿಧಾನಸಭಾ ಕ್ಷೇತ್ರ ಸೇರಿದಂತೆ ಲೋಕಸಭಾ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪ್ರಭಾವ ಹೊಂದಿರುವ ಕರಡಿ ಫ್ಯಾಮಿಲಿ ಕಮಲವನ್ನು ಕೈ‌ಬಿಡಲಿದ್ದು, ಮತ್ತೇ ತೆನೆ ಹೊರುವ ಮುನ್ಸೂಚನೆ ಸಿಕ್ಕಿದ್ದು, ಸಂಸದ ಕರಡಿ ಸಂಗಣ್ಣ ಅವರಿಗೆ ಜೆಡಿಎಸ್ ಟಿಕೆಟ್ ಬಹುತೇಕ ಫೈನಲ್ ಆಗಿದೆ.

ಒಟ್ಟಾರೆ ಈ ಬಾರಿ ಚುನಾವಣಾ ಅಖಾಡ ಭಾರಿ ಸಂಚಲನ ಸೃಷ್ಟಿಸಿದ್ದು ಮಿತ್ರರು ವಿರೋಧಿಗಳಾದರೆ, ಶತ್ರುಗಳು ಆಪ್ತರಾಗುವ ಕಾಲ ಸನ್ನೀಹಿತ.

ಏಪ್ರಿಲ್ 24ಕ್ಕೆ ಪಿಆರ್‌ಕೆ ಪಕ್ಷ ಅಸ್ತಿತ್ವಕ್ಕೆ:
ಕರುನಾಡ ಚಕ್ರವರ್ತಿ ಎನಿಸಿರುವ ಡಾ.ಶಿವರಾಜ್‌ಕುಮಾರ್ ರಾಜಕೀಯದಿಂದ ನಮ್ಮ ಕುಟುಂಬ ದೂರ ಎಂದು ಹೇಳುತ್ತಲೇ ಬಂದವರು. ಈ  ಹಿಂದೆ ಅವರ ಪತ್ನಿ ಗೀತಾ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದಾಗ ಪತ್ನಿ ಪರವಾಗಿ ಮತಯಾಚಿಸಿದ್ದರು. ಆನಂತರ ರಾಜಕೀಯದಿಂದ ದೂರವೇ ಉಳಿದಿದ್ದರು. ಇದೀಗ ಪುನೀತ್ ಅವರ ಸೋಷಿಯಲ್ ವರ್ಕ್ ಎಲ್ಲೆಡೆ ಪ್ರಶಂಸೆಗೊಳಗಾಗಿದ್ದು, ಅಭಿಮಾನಿಗಳು ಪುನೀತ್ ಮತ್ತು ಪುನೀತ್ ಕೆಲಸಗಳ ಸ್ಮರಣಾರ್ಥ ಪುನೀತ್ ಹೆಸರಿನಲ್ಲಿ ಪಕ್ಷ ಸ್ಥಾಪಿಸುವಂತೆ ಒತ್ತಾಯಿಸಿದ್ದರು. ಫಲವಾಗಿ ಪಿಆರ್‌ಕೆ ಪಕ್ಷ ಏಪ್ರಿಲ್ 24ರಂದು ರಾಜ್ ಜನ್ಮದಿನದಂದು ಅಸ್ತಿತ್ವಕ್ಕೆ ಬರಲಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಡಾ.ಶಿವರಾಜ್‌ಕುಮಾರ್ ಕಾರ್ಯನಿರ್ವಹಿಸಲಿದ್ದು, ವಿವಿಧ ಪಕ್ಷಗಳ ಪ್ರಭಾವಿ ಮುಖಂಡರು, ಚಿತ್ರ ತಾರೆಯರು ಶಿವಣ್ಣ ಸಂಪರ್ಕದಲ್ಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಾವಿಲ್ಲಿ ತಿಳಿಸಿರೋದು ಟ್ರೈಲರ್ ಮಾತ್ರ. ಪೂರ್ತಿ ವಿವರ ಗೊತ್ತಾಗಬೇಕಾದರೆ ಇಂದಿನ ವಿಜಯಸಾಕ್ಷಿ ಪತ್ರಿಕೆ ಓದಿ….

ಕೊಪ್ಪಳ ನಗರಸಭೆ: 16.85 ಲಕ್ಷ ರೂ. ಉಳಿತಾಯ ಬಜೆಟ್

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಎರಡು ವರ್ಷಗಳ ನಂತರ ಕೊಪ್ಪಳ ನಗರಸಭೆಯಲ್ಲಿ‌ ಬುಧವಾರ ಸದಸ್ಯರೆದುರು 2022-23ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಲಾಯಿತು. 16.85 ಲಕ್ಷ ರೂಪಾಯಿ ಉಳಿತಾಯ ಬಜೆಟ್‌ ಮಂಡಿಸಲಾಗಿದ್ದು,  ನಗರಸಭೆ ಸದಸ್ಯರು ಕೆಲ ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ಕಂಡು ಬಂತು.

ಸುಮಾರು ಅರ್ಧ ಗಂಟೆ ವಿಳಂಬವಾಗಿ ಆರಂಭಗೊಂಡ ಸಭೆ ಸುಸೂತ್ರವಾಗಿ ನಡೆಯಿತು. ರಾಜಶೇಖರ ಆಡೂರು ಸೇರಿದಂತೆ ಕೆಲ ಸದಸ್ಯರು ಬಜೆಟ್ ಮಂಡನೆ ಮುಗಿದ ಮೇಲೆ ಸಭೆಗೆ ಪ್ರವೇಶಿಸಿದರು.

ಬಜೆಟ್‌ನ ಸಂಕ್ಷಿಪ್ತ ವಿವರ:
ನಗರಸಭೆಗೆ 23.87 ಕೋಟಿ ರೂಪಾಯಿ ರಾಜತ್ವ ಸ್ವೀಕೃತಿಯಾಗಿದ್ದು, 8.31 ಕೋಟಿ ರೂಪಾಯಿ ಬಂಡವಾಳ ಸ್ವೀಕೃತಿ ಮತ್ತು 4.15 ಕೋಟಿ ರೂಪಾಯಿ ಅಸಾಧಾರಣ ಸ್ವೀಕೃತಿಯಾಗಿದ್ದು ಒಟ್ಟಾರೆ ನಗರಸಭೆಗೆ ಬಂದ ಸ್ವೀಕೃತಿ 36.34 ಕೋಟಿ ರೂಪಾಯಿ.

ಹಾಗೆಯೇ ಈ ಸಾಲಿನಲ್ಲಿ ಪಾವತಿಯಾದ ರಾಜಸ್ವ 22.75 ಕೋಟಿ ರೂಪಾಯಿ. 9.26 ಕೋಟಿ ರೂಪಾಯಿ ಬಂಡವಾಳ ಪಾವತಿ ಹಾಗೂ 4.15 ಕೋಟಿ ರೂಪಾಯಿ ಅಸಾಧಾರಣ ಪಾವತಿಯಾಗಿದ್ದು, ಒಟ್ಟಾರೆ‌ ನಗರಸಭೆಯಿಂದ ಪಾವತಿಯಾಗಿದ್ದು 36.17 ಕೋಟಿ ರೂಪಾಯಿ.

ನಗರಸಭೆಯ ಸ್ವೀಕೃತಿ ಮತ್ತು ಪಾವತಿಯನ್ನು ತಾಳೆ ಮಾಡಿದಾಗ 16.85 ಲಕ್ಷ ರೂಪಾಯಿ ಉಳಿತಾಯವಾಗಿದೆ. ಇದರಲ್ಲಿ ಸರಕಾರದ ಅನುದಾನ ಹೊರತುಪಡಿಸಿ ನಗರಸಭೆ ನಿಧಿಗೆ 8.93 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

ಪ್ರತಿಭಟನೆ ಹಿಂಪಡೆದ ಬಿಜೆಪಿ; ಕಾಂಗ್ರೆಸ್‌ಗೆ ನುಂಗಲಾರದ ಬಿಸಿತುಪ್ಪ- ಹೈಕಮಾಂಡ್ ಅಂಗಳಕ್ಕೆ ಚೆಂಡು!

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಒಳಒಪ್ಪಂದದಂತೆ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದಿದ್ದು ರಾಜೀನಾಮೆ ಕೊಡುವಂತೆ ಬಿಜೆಪಿ ಪಕ್ಷದವರು ಪುರಸಭೆ ಎದುರು ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಂಡಿದ್ದಾರೆ.
 

ಈ ಕುರಿತು ಸ್ಪಷ್ಟನೆ ನೀಡಿದ ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಪಿ.ದಾನಪ್ಪಗೌಡರ, ಒಳ ಒಪ್ಪಂದದಂತೆ ಎರಡೂ ಪಕ್ಷದವರಿಗೆ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದಿರುವ ಕಾರಣ ರಾಜೀನಾಮೆ ಕೊಡುವಂತೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಗೆ ಮಣಿದ ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ ರಾಜೀನಾಮೆ ಸಲ್ಲಿಸಿದ್ದಾರೆ.  ಆದರೆ ಉಪಾಧ್ಯಕ್ಷರಾದ ಖೈರುನಬಿ ನಾಶಿಪುಡಿ ಇನ್ನು ರಾಜೀನಾಮೆ ಕೊಡದ ಕಾರಣ ಪ್ರತಿಭಟನೆಯನ್ನು ಮುಂದುವರೆಸಿದ್ದೇವು. ಆದರೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳು ಇರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಕಾರಣದಿಂದ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ ಎಂದರು.
         

ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆಂಬ ವಿಶ್ವಾಸದಲ್ಲಿದ್ದೇವೆ. ಒಂದು ವೇಳೆ ರಾಜೀನಾಮೆ ಕೊಡದಿದ್ದರೆ ಮುಂದೆ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡದ ಕಾರಣ ಖೈರುನಬಿ ನಾಶಿಪುಡಿ ಅವರ ಪುತ್ರ ಸುಲೇಮಾನ ನಾಶಿಪುಡಿ ಅವರನ್ನು ಸಂಪರ್ಕಿಸಿದಾಗ, ನಮ್ಮ ತಾಯಿಯವರು ಊರಲ್ಲಿರದ ಕಾರಣ ರಾಜೀನಾಮೆ ಕೊಟ್ಟಿಲ್ಲ, ಅವರು ಬಂದ ತಕ್ಷಣ ರಾಜೀನಾಮೆ ಕೊಡಿಸುತ್ತೇವೆಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿತುಪ್ಪ

ಬಹುಮತ ಇಲ್ಲದ ಸಂದರ್ಭದಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಧಿಕಾರ ಹಂಚಿಕೆ ಮಾಡಿಕೊಂಡಿದ್ದವು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಈಗ ಕಾಂಗ್ರೆಸ್ ಪಕ್ಷದ ಬಲ 17 ಸ್ಥಾನಕ್ಕೇರಿದ್ದು ಸ್ಪಷ್ಟ ಬಹುಮತದಲ್ಲಿದ್ದಾರೆ. ಪಕ್ಷದ ಹಿರಿಯರ ಸಲಹೆಯಂತೆ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದಾರೆ, ಉಪಾಧ್ಯಕ್ಷರು ಸಲ್ಲಿಸಬಹುದು. ಆದರೆ ಅಧಿಕಾರವನ್ನು ಈಗ ಬಿಜೆಪಿಗೆ ಬಿಟ್ಟುಕೊಡುವುದಾದರೂ ಹೇಗೆಂಬ ಪ್ರಶ್ನೆ ಉದ್ಭವಿಸಿದ್ದು ನುಂಗಲಾರದ ಬಿಸಿತುಪ್ಪವಾಗಿದೆ. ಅಧಿಕಾರ ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರು ಯಾರು ಸ್ಪಷ್ಟನೆ ಕೊಡುತ್ತಿಲ್ಲ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಕೈಜೋಡಿಸಿದರೆ ಸಾರ್ವಜನಿಕ ವಲಯದಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆಂಬ ಉದ್ದೇಶದಿಂದಲೇ ಜೆಡಿಎಸ್ ಪಕ್ಷದ 9 ಸದಸ್ಯರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.

ಈಗ ಬಿಜೆಪಿಯೊಂದಿಗೆ ಈ ಹಿಂದೆ ನುಡಿದಂತೆ ನಡೆದುಕೊಳ್ಳಬೇಕೆ ಅಥವಾ ಸಂಪೂರ್ಣ ಬಹುಮತ ಇರುವ ಕಾರಣ ನಾವೇ ಅಧಿಕಾರದ ಗದ್ದುಗೆ ಏರಬೇಕೆಂಬ ಪ್ರಶ್ನೆ ಕಾಂಗ್ರೆಸ್ ಪಕ್ಷದಲ್ಲಿ ಕಗ್ಗಾಂಟಾಗಿರುವ ಕಾರಣ ಸ್ಥಳೀಯ ನಾಯಕರು ಚೆಂಡನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಳಿ ತೆಗೆದುಕೊಂಡು ಹೋಗಿದ್ದು ಅವರು ಕೊಡುವ ಸೂಚನೆಯಂತೆಯೇ ನಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ವಲಯದಿಂದ ತಿಳಿದುಬಂದಿದೆ.

ಬಿಜೆಪಿಗೆ ಅಧಿಕಾರ ಸಿಕ್ಕರೆ ನಮ್ಮವರೆ ಸಚಿವರಿದ್ದಾರೆ, ನಮ್ಮದೇ ಡಬಲ್ ಎಂಜಿನ್ ಸರ್ಕಾರವಿದ್ದು ಹೆಚ್ಚು ಅನುದಾನ ತಂದು ಪಟ್ಟಣದ ಅಭಿವೃದ್ಧಿ ಮಾಡುವುದಾಗಿ ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿಯವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಕಗ್ಗಂಟನ್ನು ಬಗೆಹರಿಸುವಲ್ಲಿ ನಿಸ್ಸಿಮರಾಗಿರುವ ಬಿಜೆಪಿಯ ಮುಖಂಡ ರಾಯನಗೌಡ ಪಾಟೀಲ ಯಾವ ನಡೆ ಇಡುತ್ತಾರೆಂಬುದು ಬಹು ಚರ್ಚಿತ ವಿಷಯವಾಗಿದೆ.
 
 

ಅತ್ಯಾಚಾರ ಆರೋಪಿಗೆ ಶಿಕ್ಷೆ ಪ್ರಕಟ

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ(ಪೋಕ್ಸೋ) ಶಂಕರ ಎಂ. ಜಾಲವಾದಿ ಅವರು ತೀರ್ಪು ಪ್ರಕಟಿಸಿದ್ದಾರೆ.

ಕೊಪ್ಪಳದ ಬಸವರಾಜ ಸತ್ಯಪ್ಪ ದೊಡ್ಡಮನಿ ಎಂಬ ವ್ಯಕ್ತಿಯು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಣ ಮಾಡಿ, ಬೇರೆ ಊರಿಗೆ ಕರೆದೊಯ್ದು ಗೃಹ ಬಂಧನದಲ್ಲಿಟ್ಟು ಅತ್ಯಾಚಾರ ಮಾಡಿದ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಮಹಿಳಾ ಠಾಣೆ ಪಿ.ಐ ಮೌನೇಶ್ವರ ಮಾಲಿಪಾಟೀಲ್ ಅವರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.20 ಸಾವಿರಗಳ ದಂಡವನ್ನು ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ರೂ.10 ಸಾವಿರಗಳನ್ನು ಬಾಧಿತಳಿಗೆ ಪರಿಹಾರ ರೂಪದಲ್ಲಿ ವಿತರಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಶಾಲೆಯ ಕಟ್ಟಡ ಉಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಕೊಪ್ಪಳದಲ್ಲಿ 100 ವರ್ಷಕ್ಕೂ ಹೆಚ್ಚಿನ ಇತಿಹಾಸ ಇರುವ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ (MHPS) ಶಾಲೆಯ ಕಟ್ಟಡ ಉಳಿಸುವಂತೆ ಶಾಲೆಯ ಹಳೇ ವಿದ್ಯಾರ್ಥಿಗಳ ಬಳಗ ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಈ ಶಾಲಾ ಕಟ್ಟಡ ಪಾರಂಪರಿಕ ಕಟ್ಟಡವಾಗಿದ್ದು ಹೈದ್ರಾಬಾದ್ ನಿಜಾಮ್ ಆಳ್ವಿಕೆಯ ಕಾಲದಲ್ಲಿ ಉಪವಿಭಾಗಿಧಿಕಾರಿಗಳ ಬಂಗಲೆಯಾಗಿತ್ತು. ಈ ಕಟ್ಟಡ ನೆಲಸಮಗೊಳಿಸಿ ಅಲ್ಲಿ ಗುರುಭವನ ಕಟ್ಟಲು ಉದ್ದೇಶಿಸಿರುವ ನಿರ್ಧಾರ ಕೂಡಲೇ ಕೈ ಬಿಡಬೇಕು. ಕಟ್ಟಡವನ್ನು ಸಂರಕ್ಷಿಸಿ ಶೈಕ್ಷಣಿಕ ಚಟುವಟಿಕೆಗೆ ಕಟ್ಟಡ ಬಳಕೆಯಾಗಲಿ ಎಂದು ಆಗ್ರಹಿಸಿದರು.

100 ವರ್ಷಕ್ಕಿಂತ ಹೆಚ್ಚು ಹಳೆಯದಾದ ಕಟ್ಟಡ ಉಳಿಸಲು ಕಾನೂನಿನಲ್ಲಿ ಅವಕಾಶ ಇದೆ. ಹೈ.ಕ.ವಿಮೋಚನೆಗೆ ಮೊದಲ ಹೆಜ್ಜೆಯಾಗಿ ಅಂದಿನ ಭಾರತ ಸರಕಾರ ಇದೇ ಬಂಗಲೆಯನ್ನು ವಶಪಡಿಸಿಕೊಂಡಿತ್ತು. ಹಳೆಯ ಕಟ್ಟಡಗಳನ್ನು ಐತಿಹಾಸಿಕ ಕಮಾನುಗಳನ್ನು ಉಳಿಸಿಕೊಳ್ಳಬೇಕು. ಈ ಕಟ್ಟಲು ಉದ್ದೇಶಿಸಿರುವ ಗುರುಭವನ ಬೇರೆ ಕಡೆ ನಿರ್ಮಿಸಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ಒತ್ತಾಯಿಸಿದರು.

ಕಟ್ಟಡವನ್ನು ನೆಲಸಮಗೊಳಿಸುವ ಬದಲು, ಅದನ್ನು ಸಂರಕ್ಷಿಸಿ ಅಲ್ಲಿ ಹೈದ್ರಾಬಾದ್ ವಿಮೋಚನೆಯ ಹೋರಾಟದ ಮ್ಯೂಸಿಯಂ, ಗ್ರಂಥಾಲಯ, ಆವರಣದಲ್ಲಿ ಸುಂದರ ಉದ್ಯಾನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಅಮರೇಶ ಮುರಳಿ, ಬಸವರಾಜ ಕರುಗಲ್, ಡಿ.ಗುರುರಾಜ, ನಾಗರಾಜ ನಾಯಕ ಡೊಳ್ಳಿನ್, ಗಿರೀಶ್ ಪಾನಘಂಟಿ, ಮುನೀರ್ ಸಿದ್ದಕಿ, ರಫೀಕ್, ಮಂಜುನಾಥ ಸೊಂಡಲಿ, ಕಾಶೀನಾಥ ಹಂಚಿನಾಳ, ಸಚ್ಚಿದಾನಂದ, ಶ್ರೀಕಾಂತ್ ಭದ್ರಾಪುರ, ಹುಸೇನ್ ಪಾಷಾ, ಜಯರಾಮರಡ್ಡಿ ತೋಟದ ಮತ್ತಿತರರು ಇದ್ದರು.

ಎಸ್ಎಸ್ಎಲ್ಸಿ ಪರೀಕ್ಷೆ; ಗುಲಾಬಿ ಹೂ ನೀಡಿ ಸ್ವಾಗತಿಸಿದ ಸಚಿವ ಮುನೇನಕೊಪ್ಪ, ಸೌಹಾರ್ದತೆ  ಮೆರೆದ ವಿದ್ಯಾರ್ಥಿಗಳು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ತಮ್ಮೋಳಗಿನ ಭಯ ಒತ್ತಡಗಳನ್ನು ಬದಿಗಿಟ್ಟು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳನ್ನು ಗಳಿಸುವುದರ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವುದರ ಮೂಲಕ ಸ್ವಾಗತಿಸಿದರು.

ಸೋಮವಾರ ಕ್ಷೇತ್ರದ ಕುಸುಗಲ್ಲ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಶುಭ ಹಾರೈಸಿದರು.

ನವಲಗುಂದ ಬಾಲಕ ಬಾಲಕಿಯರ ಮಾಡೆಲ್ ಹೈಸ್ಕೂಲ್ ಪರೀಕ್ಷಾ ಕೇಂದ್ರಗಳಲ್ಲಿ ತಹಶೀಲ್ದಾರ್ ನವೀನ ಹುಲ್ಲೂರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಎಸ್.ಮಾಯಾಚಾರಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವುದ ಮೂಲಕ ಸ್ವಾಗತಿಸಿಕೊಂಡರು.

ಪರೀಕ್ಷಾ ಅವಧಿ ಮುಗಿದ ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಮಾಯಾಚಾರಿ, ಕೊವಿಡ್ ಮಾರ್ಗಸೂಚಿಯಂತೆಯೇ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಗೆ ಹಾಜರಾಗಲು ಒಟ್ಟು 2588 ವಿದ್ಯಾರ್ಥಿಗಳು ನೊಂದಾಯಿಸಲ್ಪಟ್ಟಿದ್ದರು ಇದರಲ್ಲಿ 10 ಪರೀಕ್ಷಾ ಕೇಂದ್ರಗಳಲ್ಲಿ 24 ವಿದ್ಯಾರ್ಥಿಗಳು ಮಾತ್ರ ಗೈರಾಗಿದ್ದಾರೆ.
ಬಹು ಚರ್ಚಿತ ಹಿಜಾಬ್ ಧರಿಸುವ ವಿಚಾರವಾಗಿ ಯಾವೊಬ್ಬ ಮುಸ್ಲಿಂ ವಿದ್ಯಾರ್ಥಿನಿಯು ಗೈರಾಗದೇ ಸಾಮರಸ್ಯ ಮೆರೆದಿದ್ದು ಈ ಕ್ಷೇತ್ರದ ಕೋಮು ಸೌಹಾರ್ದತೆಗೆ ಹಿಡಿದ ಕನ್ನಡಿಯಾಗಿದೆ. ಮುನ್ನೆಚ್ಚರಿಕೆಯಾಗಿ ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷಾ ಪೂರ್ವದಲ್ಲಿಯೇ ಮೇಲಾಧಿಕಾರಿಗಳು ಹಾಗೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಮಾರ್ಗದರ್ಶನದಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಭವಿಷ್ಯದ ಬಗ್ಗೆ ತಿಳುವಳಿಕೆ ನೀಡಿದ ಪರಿಣಾಮವೇ ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದಿದ್ದು ಹೆಮ್ಮೆ ಎನಿಸುತ್ತದೆ ಎಂದು ಬಿ.ಎಸ್.ಮಾಯಾಚಾರಿ ಹೇಳಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಒದಗಿಸಲಾಗಿತ್ತು. 

ಪರೀಕ್ಷಾ ಕೇಂದ್ರಕ್ಕೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಭೇಟಿ

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮದ ಕೆಪಿಎಸ್ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಭೇಟಿ ನೀಡಿ, ಪ್ರೌಢಶಾಲೆ ವತಿಯಿಂದ ನೀಡಿದ ಪೆನ್, ಮಾಸ್ಕ್‌ಗಳನ್ನು ಪರೀಕ್ಷಾರ್ಥಿಗಳಿಗೆ ವಿತರಿಸಿ ಶುಭ ಹಾರೈಸಿದರು.

ನರಗುಂದ ಪೊಲೀಸ್ ಠಾಣೆಯ ಸಿಪಿಐ ಜಯಂತ್ ಗೌಳಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.

ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ರವಿವಾರವೇ ಗ್ರಾಮ ಪಂಚಾಯತಿ ವತಿಯಿಂದ ಪರೀಕ್ಷಾ ಕೇಂದ್ರದ ಕೊಠಡಿಗಳಿಗೆ ಗ್ರಾಪಂ ಪಿಡಿಒ ಶೈನಾಜ್ ಮುಜಾವರ ಅವರು ಸಿಬ್ಬಂದಿಗಳಿಂದ ಸ್ಯಾನಿಟೈಸ್ ಮಾಡಿಸಿ, ಸ್ವಚ್ಚಗೊಳಿಸಿದ್ದರು.

ಇನ್ನು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಶಾಂತ್ ಮಲ್ಲಾಪೂರ ಅವರು ಪ್ರತಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿದರು. ಅದರಂತೆ, ಸೋಮವಾರ ನಡೆದ ಪರೀಕ್ಷೆ ಶಾಂತಿ ಹಾಗೂ ನಿರ್ಭೀತಿಯಿಂದ ನಡೆಯಲು ಸಹಕರಿಸಿದ ಪರೀಕ್ಷಾ ಮೇಲ್ವಿಚಾರಕರು, ಮುಖ್ಯ ಅಧೀಕ್ಷಕರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮುತ್ತು ರಾಯರಡ್ಡಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಐ.ಎಂ.ಹುರಕಡ್ಲಿ, ಎಸ್‌ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಹಳೇಮನಿ ಸೇರಿದಂತೆ ಅನೇಕರು ಇದ್ದರು.

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಮಂಜು ಜಾಧವ್ ರಾಜೀನಾಮೆ

ಕೊನೆಗೂ ರಾಜೀನಾಮೆ ಸಲ್ಲಿಸಿದ ಪುರಸಭೆ ಅಧ್ಯಕ್ಷ ಮಂಜು ಜಾಧವ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ತೀವ್ರ ಕುತೂಹಲ ಮೂಡಿಸಿದ್ದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ವಿಷಯದಲ್ಲಿ ಕೊನೆಗೂ ಅಧ್ಯಕ್ಷ ಮಂಜು ಜಾಧವ್ ಧಾರವಾಡ ಜಿಲ್ಲಾ ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರಿಗೆ ಸೋಮವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಪ್ರಕರಣ ಸುಖಾಂತ್ಯ ಕಂಡಂತಾಗಿದೆ.

ಈ ಹಿಂದೆ ಯಾರಿಗೂ ಬಹುಮತ ಇಲ್ಲದ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಒಳ ಒಪ್ಪಂದ ಮಾಡಿಕೊಂಡು 30 ತಿಂಗಳ ಅಧಿಕಾರವಧಿಯಲ್ಲಿ ಮೊದಲು 15 ತಿಂಗಳು ಕಾಂಗ್ರೆಸ್ ಹಾಗೂ ಉಳಿದ 15 ತಿಂಗಳು ಬಿಜೆಪಿಯವರು ಆಡಳಿತ ಮಾಡುವುದಾಗಿ ಹಿರಿಯರ ಸಮ್ಮುಖದಲ್ಲಿ ರಾಜೀ ಸಂಧಾನ ಮಾಡಿಕೊಂಡಿದ್ದರು.

ಆ ಒಪ್ಪಂದದಂತೆ ಈಗ ಅಧ್ಯಕ್ಷ ಮಂಜು ಜಾಧವ್ ಅವರ ಅಧಿಕಾರದ ಅವಧಿ ಮುಗಿದಿದ್ದು ರಾಜೀನಾಮೆ ಕೊಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು.
ಆದರೆ ಇದಕ್ಕೆ ಒಪ್ಪದ ಮಂಜು ಜಾಧವ್ ಪಕ್ಷದ ಹಿರಿಯರು ಒಳ ಒಪ್ಪಂದ ಏನು ಮಾಡಿಕೊಂಡಿದ್ದಾರೆಂಬುದು ನನಗೆ ಗೊತ್ತಿಲ್ಲ, ಈಗ ನಮ್ಮ ಪಕ್ಷಕ್ಕೆ 17 ಸದಸ್ಯರ ಬೆಂಬಲವಿದ್ದು ಸಂಪೂರ್ಣ ಬಹುಮತ ಹೊಂದಿರುವ ಕಾರಣ ರಾಜೀನಾಮೆ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಪಕ್ಷದ ಹಿರಿಯರು ರಾಜೀನಾಮೆ ಕೊಡುವಂತೆ ಸೂಚನೆ ನೀಡಿದರೆ ಮಾತ್ರ ಕೊಡುವುದಾಗಿ ಹೇಳಿದ್ದರು.


ಕಾಂಗ್ರೆಸ್ ಪಕ್ಷದವರು ಸಮಯ ಕಳೆಯುತ್ತಿದ್ದಾರೆ ಹೊರತು ರಾಜೀನಾಮೆ ಕೊಡುತ್ತಿಲ್ಲವಾದ ಕಾರಣ ಬಿಜೆಪಿ ಸದಸ್ಯರು ಹಾಗೂ  ಪಕ್ಷದ ಮುಖಂಡರು ಪುರಸಭೆ ಎದುರು ನಿರಂತರ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ರಾಜೀ ಸಂಧಾನದ ಸಂದರ್ಭದಲ್ಲಿ ಮುತುವರ್ಜಿ ವಹಿಸಿದ್ದ ಮಾಜಿ ಸಚಿವ ಕೆ.ಎನ್.ಗಡ್ಡಿ ಅವರನ್ನು ಒತ್ತಾಯಿಸಿದ್ದರು.

ಹೊಸದಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದಿರಬಹುದು. ಆದರೆ ವಚನಭ್ರಷ್ಟರು ಎನಿಸಿಕೊಳ್ಳುವುದಕ್ಕಿಂತ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದರಿಂದ ಮಂಜು ಜಾಧವ್ ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ಈ ಮೊದಲು ಜೆ.ಡಿ.ಎಸ್ 9, ಕಾಂಗ್ರೆಸ್ 7, ಬಿಜೆಪಿ 6 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು. ಬದಲಾದ ರಾಜಕೀಯದಲ್ಲಿ ಜೆಡಿಎಸ್ ಮುಖಂಡ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಕಾರಣ ಅವರ ಜೊತೆಗಿದ್ದ ಪುರಸಭೆ ಸದಸ್ಯರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದು ಈಗ ಕಾಂಗ್ರೆಸ್ ಬಲ 17 ಕ್ಕೆ ಏರಿಕೆಯಾಗಿದೆ.  ಬಿಜೆಪಿ ಬಳಿ ಕೇವಲ 6 ಸದಸ್ಯರಿದ್ದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

error: Content is protected !!