Home Blog Page 3248

ಪೊಲೀಸ್ ಪೇದೆ ಆತ್ಮಹತ್ಯೆ ಪ್ರಕರಣ; ಇಬ್ಬರು ಪತ್ರಕರ್ತರು, ಎಎಸ್ಐ, ನಾಲ್ವರು ಪೊಲೀಸರು ಸೇರಿ 9 ಜನರ ಮೇಲೆ ಎಫ್‌ಐಆರ್

ವಿಜಯಸಾಕ್ಷಿ ಸುದ್ದಿ, ಗದಗ:

ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಪಿ ಸಿ ಪಾಟೀಲ್ ಅಲಿಯಾಸ್ ಅಜ್ಜುಗೌಡ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಎಎಸ್‌ಐ ಪುಟ್ಟಪ್ಪ ಕೌಜಲಗಿ ಸೇರಿದಂತೆ ಐವರು ಪೊಲೀಸರು, ಇಬ್ಬರು ಪತ್ರಕರ್ತರು ಸೇರಿದಂತೆ ಒಂಬತ್ತು ಜನರ ಮೇಲೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪತ್ರಕರ್ತ ಗಿರೀಶ್ ಕುಲಕರ್ಣಿ, ಗುರುರಾಜ ಬಸವರಾಜ ತಿಳ್ಳಿಹಾಳ, ವಿಠ್ಠಲ ಚಿದಾನಂದ ಹಬೀಬ, ಖಾಸಗಿ ವಾಹಿನಿಯ ವರದಿಗಾರ ಭೀಮನಗೌಡ ಪಾಟೀಲ್, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಎಎಸ್ಐ ಪುಟ್ಟಪ್ಪ ಕೌಜಲಗಿ, ಪೇದೆ ಸಿ.ವ್ಹಿ.ನಾಯ್ಕರ, ಟ್ರಾಫಿಕ್ ಪೊಲೀಸ್ ಠಾಣೆಯ ದಾದಾಪೀರ ಮಂಜಲಾಪೂರ, ಸಿಇಎನ್ ಪೊಲೀಸ್ ಠಾಣೆಯ ಶರಣಪ್ಪ ಅಂಗಡಿ ಹಾಗೂ ಮುಂಡರಗಿ ಠಾಣೆಯ ಅಂದಪ್ಪ ಹಣಜಿ ಸೇರಿ ಒಂಬತ್ತು ಜನರ ಮೇಲೆ ಮೃತ ಪೊಲೀಸ್ ಪೇದೆಯ ತಂದೆ ಚನ್ನವೀರಗೌಡ ಶಂಕರಗೌಡ ಪಾಟೀಲ್ ದೂರು ದೂರು‌ ನೀಡಿದ್ದಾರೆ.



ದೂರಿನಲ್ಲಿ ಏನಿದೆ?:

ಅಜ್ಜುಗೌಡ ಪಾಟೀಲ್ (ಪಿ ಸಿ ಪಾಟೀಲ್) ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈತನಿಗೆ ನಾಲ್ಕೈದು ತಿಂಗಳಿನಿಂದ ಆರೋಪಿತರಾದ ಗಿರೀಶ್ ಕುಲಕರ್ಣಿ ಮತ್ತು ಈತನೊಂದಿಗೆ ಗುರುರಾಜ ತಿಳ್ಳಿಹಾಳ, ವಿಠ್ಠಲ ಚಿದಾನಂದ ಹಬೀಬ, ಭೀಮನಗೌಡ ಪಾಟೀಲ ಇವರು ವಿನಾಕಾರಣ ತೊಂದರೆ ಕೊಡುತ್ತಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಅಲ್ಲದೆ, ಮೊಬೈಲ್‌ನಲ್ಲಿ ಮೆಸೇಜ್‌ಗಳು, ಫೋಟೋಗಳು ನಮ್ಮ ಹತ್ತಿರವಿದ್ದು ಎಸ್‌ಪಿ ಅವರಿಗೆ ತೋರಿಸುತ್ತೇವೆ ಎಂದು ಹೆದರಿಸುತ್ತಿದ್ದರು.

ಅದರಂತೆ ಇನ್ನುಳಿದ ಆರೋಪಿಗಳು ಸ್ಟೇಶನ್ ಮಾಹಿತಿ, ಸ್ಟೇಶನ್‌ನಲ್ಲಿ ದಾಖಲಾದ ಪ್ರಕರಣದಲ್ಲಿನ ವಿಷಯದ ಬಗ್ಗೆ, ವೈಯಕ್ತಿಕ ವೀಕನೆಸ್ ಬಗ್ಗೆ ಇವರಿಗೆ ತಿಳಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳು ಕಾಟ ಕೊಡುತ್ತಿದ್ದರು ಎನ್ನಲಾಗಿದೆ.

ಇದರಿಂದಾಗಿ ನಾಲ್ಕು ಪುಟಗಳಲ್ಲಿ ತನ್ನ ಸಾವಿನ ಬಗ್ಗೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಪವಾಡಿಗೌಡ ಅವರ ಸಾವಿಗೆ ಈ ಎಲ್ಲ ಒಂಬತ್ತು ಜನ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

//ಜೇಮ್ಸ್ ಸಿನಿಮಾ ವಿಮರ್ಶೆ//ದೇಶಪ್ರೇಮಿ‌ ಸೈನಿಕನ ಸ್ನೇಹದ ಸೇಡು

0


ರೇಟಿಂಗ್:***1/2


ತಾರಾಗಣ:
ಪುನೀತ್ ‌ರಾಜ್‌ಕುಮಾರ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ರಂಗಾಯಣ ರಘು, ಅವಿನಾಶ್, ಪ್ರಿಯಾ ಆನಂದ್, ತಿಲಕ್, ಶೈನ್ ‌ಶೆಟ್ಟಿ, ಶ್ರೀಕಾಂತ್, ಶರತ್, ರಿಷಿ, ಸಾಧುಕೋಕಿಲ, ಚಿಕ್ಕಣ್ಣ, ನಯನಾ, ಗೋವಿಂದ್‌ರಾಜ್, ಹರ್ಷ, ಕಾವ್ಯಾಶಾಸ್ತ್ರಿ, ಅಶ್ವಿನಿ‌ಹಾಸನ್. , ನಿರ್ದೇಶನ: ಚೇತನ್ ನಿರ್ಮಾಪಕ: ಕಿಶೋರ ಪತ್ತಿಕೊಂಡ ಸಂಗೀತ: ಚರಣ್‌ರಾಜ್ ಛಾಯಾಗ್ರಹಣ: ಸ್ವಾಮಿಗೌಡ ಸಂಕಲನ: ದೀಪು ಎಸ್.ಕುಮಾರ್

ಬಸವರಾಜ ಕರುಗಲ್.
“ಇವ್ನು ರೇಸ್‌ಗೆ ಇಳಿಯಲ್ಲ, ಇಳಿದ್ರೆ ಅದು ರೇಸ್ ಅಲ್ಲ, ಒನ್ ಮ್ಯಾನ್ ಶೋ”

ಇದು ಜೇಮ್ಸ್ ಸಿನಿಮಾ ನಾಯಕನ ಇಂಟರ್‌ಡಕ್ಷನ್ ಡೈಲಾಗ್.. ಈ ಡೈಲಾಗ್ ಇಡೀ ಸಿನಿಮಾದುದ್ದಕ್ಕೂ ನಿಜ ಅನ್ಸುತ್ತೆ… ಜೇಮ್ಸ್ ಸಿನಿಮಾದಲ್ಲಿ ಮಾತಿನ ಅಬ್ಬರಕ್ಕಿಂತ ಗುಂಡಿನ ಆರ್ಭಟವೇ ಹೆಚ್ಚು. ಸಾಹಸ ದೃಶ್ಯಗಳಿಗೆ ತೂಕ ಅಪಾರ. ಕಥೆ ಒಂಚೂರು ಸಪೂರ.

ಜೇಮ್ಸ್ ಕಥೆ ಸರಳವಾಗಿದ್ದರೂ ಪ್ರೇಕ್ಷಕರನ್ನು ಸೀಟಿನ‌ ತುದಿಗೆ ಜಾರಿಸುವ ಉದ್ದೇಶದಿಂದಲೇ ಅಲ್ಲಲ್ಲಿ ಟ್ವಿಸ್ಟ್, ಟರ್ನ್, ಫ್ಲ್ಯಾಶ್‌ಬ್ಯಾಕ್‌ಗಳ ಮೂಲಕ ಕಥೆಯನ್ನ ಹೆಣೆಯಲಾಗಿದೆ. ದೇಶಪ್ರೇಮ‌ ಬಿಂಬಿಸುವ, ಅನಾಥನಾಗಿದ್ದರೂ ಗೆಳೆತನದ ಬಾಂಧವ್ಯ ಸಾರುವ ಜೊತೆಗೆ ಸ್ನೇಹಕ್ಕಾಗಿಯೇ ಸೇಡು ತೀರಿಸಿಕೊಳ್ಳುವ ಹೊಸತನ ಸೇರಿಸಲಾಗಿದೆ.

ಜೇಮ್ಸ್-ಇದೊಂದು ಸೆಕ್ಯುರಿಟಿ ಏಜೆನ್ಸಿಯ ಹೆಸರು. ಈ ಹೆಸರು ಇಡಲು ರೋಚಕ ಮತ್ತು‌ ಇಂಟರೆಸ್ಟಿಂಗ್ ಹಿನ್ನೆಲೆ ಇದೆ. ಅದೇನು ಅನ್ನೋದನ್ನ ಸಿನಿಮಾ ನೋಡಿ ತಿಳ್ಕೊಂಡರೇನೇ ಚೆಂದ. ಖಳನೊಬ್ಬನಿಗೆ‌ ಮೂರು ತಿಂಗಳು ಭದ್ರತೆ ನೀಡುವ ಕೆಲಸ ಒಪ್ಪಿಕೊಳ್ಳುವ ಸಂತೋಷ್‌ಕುಮಾರ್ ಜೇಮ್ಸ್ ಏಜೆನ್ಸಿಯ ರೂವಾರಿ. ಆ ಖಳನಿಗೆ ರಕ್ತಸಂಬಂಧಿಯೇ ವಿಲನ್, ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ದಂಧೆಯ ಕಿಂಗ್‌ಪಿನ್‌ಗಳು ಇಬ್ಬರೂ ವಿಲನ್‌ಗಳು ಮಾರ್ಕೆಟ್‌ನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಇಬ್ಬರು ಡಾನ್‌ಗಳ ನಡುವೆ ಆಗಾಗ ಗುಂಡಿನ ಸುರಿಮಳೆ, ಲಾಂಗುಗಳ ಜಡೀಮಳೆ, ಒಮ್ಮೆ ಅಘೋರಿಗಳ ಅಟ್ಯಾಕ್, ಮತ್ತೊಮ್ಮೆ ಸೂಟು-ಬೂಟುಧಾರಿಗಳ ಕಾರ್ ಚೇಸಿಂಗ್..ಒಂಥರಾ ಹಾಲಿವುಡ್ ಮೂವ್ ರೇಂಜ್‌ಗೆ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ..

ಸೆಕ್ಯುರಿಟಿ ನೀಡುವ ವಿಲನ್ ತಂಗಿ ಜೊತೆಗೆ ನಾಯಕ ಸಂತೋಷ್‌ಗೆ ಲವ್ವು, ಇದಕ್ಕೆ ನಾಯಕಿಯ ಅಣ್ಣ ಡಾನ್‌ನ ಗ್ರೀನ್ ಸಿಗ್ನಲ್.. ಸಂತೋಷ್ ಎಂದರೆ ಪ್ರೀತಿ, ವಿಶ್ವಾಸ, ನಂಬಿಕೆ ಎನ್ನುವ ಡಾನ್‌ನ ಡೈಲಾಗ್ ಇನ್ನು ಮುಗಿದಿರಲ್ಲ, ಸಂತೋಷ್ ಅಂದ್ರೆ ಭಯಾನೂ ಇರಬೇಕು ಸರ್ ಎಂದು ಹೇಳಿ ನಾಯಕನಿಂದ ವಿಲನ್ ಪಡೆ ಛಿದ್ರ ಛಿದ್ರ…ಈ ಹೊತ್ತಿಗೆ ಸಂತೋಷ್ ನಾಯಕನೋ? ಖಳನಾಯಕನೋ? ಎನ್ನುವ ಹುಳ ತಲೆಗೆ ಬೀಳುತ್ತಿದ್ದಂತೆ ವಿರಾಮ.

ಆನಂತರ ಶುರುವಾಗೋದು ಫ್ಯಾಮಿಲಿ ಡ್ರಾಮಾ, ಸಿನಿಮಾದ ಎರಡನೇ ಭಾಗದಲ್ಲಿ‌ ನಿಜವಾದ ಕಥೆ ಗರಿಗೆದರುತ್ತೆ. ವಿಲನ್‌ ಎನಿಸಿದವನು ಮತ್ತೇ ಹೀರೋ ಆಗ್ತಾನೆ. ಸಂತೋಷ್ ಮಿಲ್ಟ್ರಿಯಲ್ಲಿ‌ ಮೇಜರ್ ಆಗಿ ಭಯೋತ್ಪಾದಕರನ್ನು‌ ಮಟ್ಟ ಹಾಕುವ ಸಣ್ಣ ಎಳೆ ಇಣುಕಿ ಹೋಗುತ್ತದೆ. ಇದೇ ಫ್ಲ್ಯಾಶ್‌ಬ್ಯಾಕ್‌ನಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸಹ ಬಂದು ಹೋಗುತ್ತಾರೆ. ಪುನೀತ್‌ಗೆ ಶಿವಣ್ಣ‌ ಗುರಿ ತೋರಿದರೆ, ರಾಘಣ್ಣ ಗುರುವಾಗಿ ಮುನ್ನಡೆಸುವ ಝಲಕ್ ಪ್ರೇಕ್ಷಕರನ್ನು ಪುಳಕಿತರನ್ನಾಗಿಸುತ್ತದೆ. ಆನಂತರ ಮತ್ತದೇ ಗುಂಡಿನ ಮೊರೆತ, ಸಿಡಿಮದ್ದುಗಳ ಸದ್ದು, ಅಂತಿಮವಾಗಿ ಖಳರ ಹೆಡೆಮುರಿ..

ಒಟ್ಟಾರೆ ಜೇಮ್ಸ್ ಗೆಳೆತನಕ್ಕಾಗಿ‌ ರಿವೇಂಜ್ ತೆಗೆದುಕೊಳ್ಳುವ ದೇಶಪ್ರೇಮಿ ಸೈನಿಕನ ಕಥೆ ಹೊಂದಿದ್ದು, ಅಪ್ಪು ಅಭಿಮಾನಿಗಳಿಗೆ‌ ದೊಡ್ಡ ಹಬ್ಬ. ಜೊತೆಗೆ ಪುನೀತ್‌ರ ಕೊನೆಯ ಸಿನಿಮಾ ಬೇರೆ.. ಎಲ್ಲ ವರ್ಗದ‌ ಜನರನ್ನು ಸೆಳೆಯಲು ಸರ್ಕಸ್‌ ಮಾಡಿರುವುದು‌ ಗೊತ್ತಾಗುತ್ತದೆ. ಕೆಲವು ಕಡೆ ಪುನೀತ್ ಡ್ಯೂಪ್ ಬಳಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪುನೀತ್ ನಟನೆಗೆ ಶಿವಣ್ಣ ಧ್ವನಿ‌ ನೀಡಿರುವುದು ಹೇಗಿದೆ ಎಂದರೆ ಇಡೀ ಸಿನಿಮಾದುದ್ದಕ್ಕೂ ಇಬ್ಬಿಬ್ಬರು ಹೀರೋಗಳನ್ನು ನೋಡಿದಂತೆ ಭಾಸವಾಗುತ್ತೆ. ತೆರೆಯಲ್ಲಿ‌ ಪುನೀತ್ ಕಂಡರೆ ಧ್ವನಿ‌ ಕೇಳುತ್ತಿದ್ದಂತೆ ಪುನೀತ್ ಪಾತ್ರದಲ್ಲಿ ಶಿವಣ್ಣ ಸಹ ಕಲ್ಪನೆಯಲ್ಲಿ ಬರ್ತಾರೆ.

ಜೇಮ್ಸ್‌ನಲ್ಲಿ ಕಲಾವಿದರ ದೊಡ್ಡ ದಂಡೇ‌ ಇದೆ. ಎಲ್ಲ ಕಲಾವಿದರಿಗೂ ಸ್ಕ್ರೀನ್ ಸಿಕ್ಕಿದೆ. ಆದರೆ ಬಹುತೇಕ ಕಲಾವಿದರು ಹೀಗೇ ಬಂದು, ಹಾಗೇ ಹೋಗುವಷ್ಟು ಮಾತ್ರ ಸ್ಪೇಸ್ ಪಡೆದಿದ್ದಾರೆ. ಚಿಕ್ಕಣ್ಣ, ಸಾಧುಕೋಕಿಲ ಇದ್ದರೂ ಕಾಮಿಡಿ ಅಷ್ಟಾಗಿ ವರ್ಕೌಟ್ ಆಗಿಲ್ಲ. ಚೇಸಿಂಗ್ ಸೀನ್‌ಗಳಲ್ಲಿ ಸ್ವಾಮಿಗೌಡ ಅವರ ಕ್ಯಾಮೆರಾ ಕಣ್ಣಿಗೆ ಒಂದು ಸಲಾಂ ಹೇಳಬಹುದು. ಸಂಗೀತ ನಿರ್ದೇಶಕ ಚರಣ್‌ರಾಜದ ಹಿನ್ನೆಲೆ ಸಂಗೀತದಲ್ಲಿ ಗೆದ್ದಿದ್ದಾರೆ, ಹಾಡುಗಳಿಗೆ ಸಂಗೀತ ನೀಡುವಲ್ಲಿ ಎಡವಿದ್ದಾರೆ.

ನಾಯಕ ಪುನೀತ್ ಅವರನ್ನ ತೆರೆಯ ಮೇಲೆ‌ ನೋಡುವುದೇ ಖುಷಿ. ಕೊನೆ ಸಿನಿಮಾ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ‌ ಕ್ರೇಜ್ ಕ್ರಿಯೆಟ್ ಮಾಡಿದ ಜೇಮ್ಸ್‌, ಜಗತ್ತಿನಾದ್ಯಂತ ಕೆಜಿಎಫ್‌ ನಂತರ ಗ್ರ್ಯಾಂಡ್ ಒಪನಿಂಗ್ ಪಡೆದ ಕನ್ನಡದ ಎರಡನೇ ಸಿನಿಮಾ. ಪುನೀತ್ ಅವರ ಅಭಿನಯದ ಬಗ್ಗೆ ಹೇಳೋದೇನಿಲ್ಲ, ಕರ್ನಾಟಕದ ಮತ್ತೊಂದು ರತ್ನ. ಈಚೆಗಷ್ಟೇ ಅವರಿಗೆ ಮೈಸೂರು ವಿವಿ ಗೌಡಾ ನೀಡಿದ್ದನ್ನ ಚಿತ್ರತಂಡ ಅಪ್ಡೇಟ್ ಮಾಡಿಕೊಂಡು ಡಾ.ಪುನೀತ್ ರಾಜ್‌ಕುಮಾರ್ ಅಂತ ಟೈಟಲ್ ಕಾರ್ಡ್‌ನಲ್ಲಿ ಸೇರಿಸಿರುವುದು ಖುಷಿಯ ಸಂಗತಿ. ಅಪ್ಪು ಎಲ್ಲ ಸಿನಿಮಾಗಳಂತೆ ಡ್ಯಾನ್ಸ್, ಫೈಟ್‌‌ನಲ್ಲಿ ಸಖತ್ ಪವರ್. ಅದರಲ್ಲೂ ಜೇಮ್ಸ್‌ನ ಫೈಟಿಂಗ್ ಸೀನ್‌ಗಳು ಹಾಲಿವುಡ್ ಮಾದರಿಯಲ್ಲಿವೆ. ನಾಯಕಿ ಪ್ರಿಯಾ ಆನಂದ್ ರಾಜಕುಮಾರ ಸಿನಿಮಾ ನಂತರ ಮತ್ತೇ ಅಪ್ಪುಗೆ‌ ಜೋಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರ ನಟನೆ ಸುಧಾರಣೆ ಕಂಡಿದೆ ಎನ್ನಬಹುದು. ಖಳರಾಗಿ ಶರತ್‌ಕುಮಾರ್, ಶ್ರೀಕಾಂತ್, ಮುಕೇಶ್ ರಿಷಿ, ಆದಿತ್ಯ ಮೆನನ್ ಮತ್ತಿತರರು ಖಳರಾಗಿ ವಿಜೃಂಭಿಸಿದ್ದಾರೆ. ಇಡೀ ಸಿನಿಮಾ ತುಂಬಾ ರಿಚ್ ಆಗಿ ಮೂಡಿ ಬಂದಿದ್ದು, ಸ್ಥಳೀಯವಾಗಿ ಕೊಪ್ಪಳದ ಗಂಗಾವತಿ, ಹೊಸಪೇಟೆ, ಮಡಿಕೇರಿ, ಬೆಂಗಳೂರು, ಮೈಸೂರು ಸೇರಿದಂತೆ ಕಾಶ್ಮೀರ ಹಾಗೂ ವಿದೇಶದ‌ ಕೆಲ ಲೋಕೇಷನ್‌‌ಗಳಲ್ಲಿ ಶೂಟಿಂಗ್ ಆಗಿದೆ. ನಿರ್ಮಾಣದಲ್ಲಿ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಎಲ್ಲೂ ಕಾಂಪ್ರೊಮೈಸ್ ಆಗಿಲ್ಲ. ನಿರ್ದೇಶಕ ಚೇತನ್‌ ಹರಿತವಾದ, ಕಚಗುಳಿ ಇಡುವ ಮಾತುಗಳನ್ನು ಬರೆಯುವಿಕೆಯಲ್ಲಿ‌ ಹಿಡಿತ ಸಾಧಿಸಿದವರು. ಆದ್ರೆ ಜೇಮ್ಸ್‌ನಲ್ಲಿ ಚೇತನ್ ಲೇಖನಿ ಯೊಕೊ ಹರಿತವಾಗಿಲ್ಲ. ಕೆಲವು ಕಡೆ ಕಣ್ಣಂಚು ಒದ್ದೆಯಾಗಿಸುವ ದೃಶ್ಯಗಳನ್ನು ಸೇರಿಸಿ ಹೆಣ್ಮಕ್ಕಳು‌ ಸಹ ಜೇಮ್ಸ್ ಕಣ್ತುಂಬಿಕೊಳ್ಳಬಹುದು ಎಂಬುದನ್ನು ಹೇಳಲು ಒದ್ದಾಡಿರುವುದು ಗೊತ್ತಾಗುತ್ತದೆ. ನಿರ್ದೇಶಕನಾಗಿ‌ ದೊಡ್ಡ ಬಜೆಟ್ ಸಿನಿಮಾ‌ ನಿರ್ದೇಶಿಸಿದ್ದು ಚೇತನ್‌ ಹೆಗ್ಗಳಿಕೆ ಎನ್ನಬಹುದು.

ಒಟ್ಟಾರೆ ಜೇಮ್ಸ್ ಸಿನಿಮಾ, ಪುನೀತ್ ಅಭಿಮಾನಿಗಳಿಗೆ ಹೋಳಿ‌ಹಬ್ಬ, ಹೆಣ್ಮಕ್ಕಳಿಗೆ ಯುಗಾದಿ, ಯುವಕರಿಗೆ ದಸರಾ, ಫ್ಯಾಮಿಲಿಗೆ ದೀಪಾವಳಿ. ಗನ್‌ಗಳ ಮೊರೆತ ಸಹಿಸುವುದಾದರೆ ಮುಜುಗರ‌ ಇಲ್ಲದೇ ಕುಟುಂಬಸಮೇತ ಜೇಮ್ಸ್‌ನನ್ನು‌ ನೋಡಿ, ಹರಸಿ, ಹಾರೈಸಿ, ಆಶಿರ್ವದೀಸಬಹುದು.

ಪ್ರದರ್ಶನ: ಶ್ರೀ ಲಕ್ಷ್ಮೀ ಚಿತ್ರಮಂದಿರ, ಕೊಪ್ಪಳ.

ಸ್ಟಾರ್ ರೇಟಿಂಗ್: * : ಚನ್ನಾಗಿಲ್ಲ ** : ಸುಮಾರಾಗಿದೆ *** : ಚನ್ನಾಗಿದೆ **** : ತುಂಬಾ ಚನ್ನಾಗಿದೆ ***** : ಮಿಸ್ ಮಾಡ್ದೆ ನೋಡಿ

ದುಷ್ಕರ್ಮಿಗಳಿಂದ ಬ್ಲ್ಯಾಕ್ ಮೇಲ್?; ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ಪೊಲೀಸ್

ವಿಜಯಸಾಕ್ಷಿ ಸುದ್ದಿ, ಗದಗ

ಕೆಲವರ ಕಿರುಕಳಕ್ಕೆ ಬೇಸತ್ತು ತಾಲೂಕಿನ ಲಕ್ಕುಂಡಿ ಗ್ರಾಮದ ಮನೆಯಲ್ಲಿ ಪೊಲೀಸ್ ಪೇದೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಘಟನೆ ಬುಧವಾರ ನಡೆದಿದೆ.

ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಕುಂಡಿ ಗ್ರಾಮದ ಅಜ್ಜುಗೌಡ ಪಾಟೀಲ್ ಸಾವಿಗೆ ಶರಣಾಗಿದ್ದಾರೆ.

ಕಳೆದ ವರ್ಷ ಹಣ ಡಬ್ಲಿಂಗ್ ಪ್ರಕರಣದಲ್ಲಿ ಆರೋಪಿ ಒಬ್ಬನನ್ನು ಬಂಧಿಸಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ಆರೋಪಿಯ ಸಂಬಂಧಿಯೊಬ್ಬಳ ಜೊತೆ ಮೃತ ಪೇದೆ ಪ್ರೇಮಪಾಶದಲ್ಲಿ ಬಿದ್ದಿದ್ದನೆಂದು ಆರೋಪ ಕೇಳಿ ಬಂದಿತ್ತು. ಈ ವೇಳೆ ಮೊಬೈಲ ಚಾಟಿಂಗ್ ಸಂದರ್ಭದಲ್ಲಿ ಅರೆಬರೆ ದೃಶ್ಯವೊಂದರ ವಿಡಿಯೋ ವೈರಲ್ ಆಗಿತ್ತು ಎನ್ನಲಾಗಿದೆ. ವೈರಲ್ ಆಗಿದ್ದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಮೃತ ಪೇದೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವಿಷಯ ಕುಟುಂಬದವರಿಗೂ ತಿಳಿದಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಅಜ್ಜುಗೌಡ ಮಾನಸಿಕವಾಗಿ ಕುಗ್ಗಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೆ, ಅಜ್ಜುಗೌಡ ತನಗೆ ಯಾರ‍್ಯಾರು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಆಪ್ತರೆದುರಿಗೆ ಬಾಯಿ ಬಿಟ್ಟಿದ್ದ ಎನ್ನಲಾಗಿದೆ. ಬುಧವಾರ ಕುಟುಂಬಸ್ಥರು ಊರಿಗೆ ಹೋಗಿದ್ದನ್ನೇ ಅವಕಾಶವೆಂದು ಭಾವಿಸಿಕೊಂಡ ಅಜ್ಜುಗೌಡ ಮಹಡಿ ಮನೆಯ ಬೆಡ್ ರೂಮ್‌ನಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾನೆ.

ಸಾವಿಗೂ ಮುನ್ನ ನಾಲ್ಕು ಪುಟಗಳ ಸುದೀರ್ಘ ಡೆತ್‌ನೋಟ್ ಬರೆದಿಟ್ಟಿದ್ದಾನೆ ಎನ್ನಲಾಗಿದೆ. ಡೆತ್‌ನೋಟ್‌ನಲ್ಲಿ ಕೆಲವರ ಹೆಸರನ್ನು ಬರೆದಿಟ್ಟಿದ್ದಾನೆ ಎಂದು ಹೇಳಲಾಗುತ್ತಿದ್ದು, ಅಜ್ಜುಗೌಡಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವರು ಯಾರು ಎಂಬುವುದು ಪೊಲೀಸರ ನಿಷ್ಪಕ್ಷಪಾತ ‌ತನಿಖೆಯಿಂದ ಹೊರಬರಬೇಕಿದೆ.

ಸುದ್ದಿ ತಿಳಿದ ತಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಮಾಹಿತಿ ಕೇಳಲು ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ರವಿ ಕಪ್ಪತನವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಗದಗ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಪ್ರಮಾದ; ಕಾಂಗ್ರೆಸ್‌ನ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ವಿಜಯಸಾಕ್ಷಿ ಸುದ್ದಿ, ಧಾರವಾಡ/ಗದಗ:

ಜ.24ರಂದು ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಪ್ರಮಾದಗಳನ್ನು ಪ್ರಶ್ನಿಸಿ ಕಾಂಗ್ರೆಸ್‌ನ ನಗರಸಭೆ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠ ಸೋಮವಾರ ವಜಾಗೊಳಿಸಿ ಆದೇಶಿಸಿದೆ.

ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅಲ್ಲಿಯೇ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಅಲ್ಲದೆ, ಚುನಾವಣಾಧಿಕಾರಿಗಳು ಆಗಿದ್ದ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರ ಕರ್ತವ್ಯಲೋಪದ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಬೇಕು. ಬಳಿಕ ತೆಗೆದುಕೊಂಡ ಕ್ರಮದ ಬಗ್ಗೆ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗೆ ಆದೇಶಿಸಿದೆ. ಇದರಿಂದ ಕಾಂಗ್ರೆಸ್ ಸದಸ್ಯರಿಗೆ ತೀವ್ರ ಮುಖಭಂಗ ಅನುಭವಿಸುವಂತಾಗಿದ್ದರೂ, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದೆ ಎನ್ನಲಾದ ಪ್ರಮಾದಗಳ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಪೈಲ್ ಮಾಡಲು ಹೈಕೋರ್ಟ್ ಅವಕಾಶ ನೀಡಿದ್ದಕ್ಕೆ ತೃಪ್ತಿಪಡುವಂತಾಗಿದೆ.

ಜ.24ರಂದು ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಪ್ರಮಾದಗಳನ್ನು ಪ್ರಶ್ನಿಸಿ ನಗರಸಭೆ ಸದಸ್ಯರಾದ ಲಕ್ಷ್ಮಣ ಚಂದಾವರಿ, ಶಕುಂತಲಾ ಅಕ್ಕಿ, ಕೃಷ್ಣಾ ಪರಾಪುರ, ಬರಕತ್ ಅಲಿ ಮುಲ್ಲಾ, ರವಿಕುಮಾರ್ ಕಮತರ, ಜೈನುಲಾಬ್ದಿನ್ ನಮಾಜಿ ಹಾಗೂ ಚಂದ್ರಶೇಖರಗೌಡ ಕರಿಸೋಮನಗೌಡರ ಸೇರಿ ಏಳು ಜನ ಕಾಂಗ್ರೆಸ್ ಸದಸ್ಯರು ಜ.28ರಂದು ಹೈಕೋರ್ಟ್ ಮೊರೆ ಹೋಗಿದ್ದರು. ಅಧಿಕಾರಿಗಳು ಪಾರದರ್ಶಕ ಚುನಾವಣೆ ನಡೆಸಿಲ್ಲ. ಹೀಗಾಗಿ ಮರು ಚುನಾವಣೆ ನಡೆಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ಫೆ.1ರಂದು ಎಲ್.ಡಿ.ಚಂದಾವರಿ ಸೇರಿ ಏಳು ಜನ ಕಾಂಗ್ರೆಸ್ ಸದಸ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ಪೀಠ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಗೆಜೆಟ್‌ನಲ್ಲಿ ಪ್ರಕಟಿಸದಂತೆ ಮಧ್ಯಂತರ ಆದೇಶ ನೀಡಿ ಫೆ.21ಕ್ಕೆ ವಿಚಾರಣೆ ಮುಂದೂಡಿತ್ತು. ಫೆ.21ರಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಮಾರ್ಚ್ 2ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿ, ಅಂದು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ತೀರ್ಪು ಕಾಯ್ದಿರಿಸಿತ್ತು. ಬಳಿಕ ಸೋಮವಾರ (ಮಾ.14)ದಂದು ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.

ನಗುವೇ ಜೀವನಕ್ಕೆ ಔಷಧಿ; ಬಿ ಸಿ ಹನಮಂತಗೌಡ್ರ

ವಿಜಯಸಾಕ್ಷಿ ಸುದ್ದಿ, ನರಗುಂದ:

ನಗು ಜೀವನಕ್ಕೆ ಔಷಧಿ ಇದ್ದಂತೆ. ಪ್ರತಿಯೊಬ್ಬರೂ ಜೀವನದಲ್ಲಿ ನಗು-ನಗುತ್ತಾ ಬಾಳಬೇಕು. ಇಂದಿನ ಒತ್ತಡದ ಬದುಕಿನಲ್ಲಿ ನಗುವಿಗೆ ಅವಕಾಶ ಕಡಿಮೆಯಾಗಿದೆ. ಈ ಒತ್ತಡದ ಬದುಕಿನಿಂದ ಹೊರಬರಲು ನಗುವೇ ದಿವ್ಯ ಔಷಧ ಎಂದು‌ ಕಸಾಪ ಅಧ್ಯಕ್ಷರಾದ ಬಿ.ಸಿ ಹನಮಂತಗೌಡ್ರ ಹೇಳಿದರು.
ಅವರು, ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾಣಿಜ್ಯ ಸೌರಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಲೇಜ್ ಪ್ರಾಚಾರ್ಯರಾದ ಪ್ರೊ. ಸಿ. ಎಸ್ ಸುಳ್ಳದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಣ್ಯ ವ್ಯಾಪಾರಸ್ಥರಾದ ಜಿ ಟಿ ಗುಡಿಸಾಗರ, ಬಿ ಎಮ್ ಲೆಂಕನ್ನವರ, ಎಸ್ ಬಿ ಭಜಂತ್ರಿ, ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಧೀರ ಸಜ್ಜನ, ಎಸ್ ಸಿ ಸುರಕೊಂಡ, ಸುಜಾತಾ ಮೆಳವಂಕಿ,ಲಕ್ಷ್ಮೀ ಕಲ್ಲಾಪೂರ, ಎಸ್ ಹಿರೇಮನಿ, ಚನ್ನು ನೀಲಗುಂದ, ರಮೇಶ ಐನಾಪೂರ, ಕಾಲೆಜು ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗದಗ-ಬೆಟಗೇರಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ರಮೇಶ್ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ:

ತಾಯಿ ಇಲ್ಲದ ತಬ್ಬಿಲಿಯಂತಾಗಿದ್ದ ಗದಗ-ಬೆಟಗೇರಿ ನಗರಸಭೆಗೆ ನಗರಾಭಿವೃದ್ಧಿ ಇಲಾಖೆ ಖಾಯಂ ಪೌರಾಯುಕ್ತರನ್ನು ನೇಮಕಗೊಳಿಸಿ ಬುಧವಾರ ಆದೇಶಿಸಿದ್ದು, ಕಾಟಚಾರಕ್ಕೆ ವಹಿಸಿಕೊಳ್ಳುತ್ತಿದ್ದ ಪ್ರಭಾರ ಪೌರಾಯುಕ್ತರಿಗೆ ಸರ್ಕಾರ ಕೊನೆ ಹಾಡಿದೆ. ಇದರಿಂದ ಅವಳಿ ನಗರದ ಜನರಲ್ಲಿ ಮಂದಹಾಸ ಮೂಡಿದೆ.

ಸ್ಥಳ‌ ನಿರೀಕ್ಷೆಯಲ್ಲಿದ್ದ ಪೌರಸೇವ ವೃಂದದ ರಮೇಶ್ ಎಸ್.ಸುಣಗಾರ ಅವರನ್ನು ಸರ್ಕಾರ ಗದಗ-ಬೆಟಗೇರಿ ನಗರಸಭೆಯಲ್ಲಿ ಖಾಲಿ ಇರುವ ಪೌರಾಯುಕ್ತರ ಹುದ್ದೆಗೆ ನೇಮಕಗೊಳಿಸಿ ಆದೇಶಿಸಿದೆ.

ಫೆ.೧೮ರಂದು ವಿಜಯಸಾಕ್ಷಿ ಪತ್ರಿಕೆಯು ‘ನಗರಸಭೆಗಿಲ್ಲ ಖಾಯಂ ಪೌರಾಯುಕ್ತರು! ಎಂಬ ಶೀರ್ಷಿಕೆಯಡಿ ಪೂರ್ಣ ಪ್ರಮಾಣದ ಪೌರಾಯುಕ್ತರಿಲ್ಲದೇ ಅವಳಿ ನಗರದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತ್ರತ ವರದಿ ಪ್ರಕಟಿಸಿತ್ತು. ಅಲ್ಲದೆ, ಖಾಯಂ ಪೌರಾಯುಕ್ತರನ್ನು ನಿಯೋಜಿಸುವಂತೆ ಗದಗ-ಬೆಟಗೇರಿ ಜನರ ಬೇಡಿಕೆಯೂ ಹೆಚ್ಚಾಗಿತ್ತು. ಈ ಬೆನ್ನಲ್ಲೇ ಸರ್ಕಾರ ಜನರ ಈ ಸಮಸ್ಯೆ ನಿವಾರಿಸಲು ಪೂರ್ಣ ಪ್ರಮಾಣದ ಪೌರಾಯುಕ್ತರನ್ನು ನಿಯೋಜಿಸಿದೆ.

ಕಳೆದ ಹಲವು ತಿಂಗಳಿಂದ ಪೂರ್ಣ ಪ್ರಮಾಣದ ಪೌರಾಯುಕ್ತರಿಲ್ಲದೆ, ನಗರದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಪ್ರಭಾರಿ ಪೌರಾಯುಕ್ತರಿದ್ದರೂ ಸಾರ್ವಜನಿಕರ ಕಡತಗಳು ಸಕಾಲಕ್ಕೆ ವಿಲೇವಾರಿಯಾಗದೇ ಬಾಕಿ ಉಳಿಯುತ್ತಿದ್ದವು. ಇದರಿಂದಾಗಿ ಅವಳಿ ನಗರದ ಜನರು ಪರಿತಪಿಸುವಂತಾಗಿತ್ತು. ಇದೀಗ ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಸರ್ಕಾರ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಪೌರಾಯುಕ್ತರನ್ನು ನೇಮಕಗೊಳಿಸಿದೆ.

ನಗರಸಭೆ ಪೌರಾಯುಕ್ತ ರಮೇಶ್ ಜಾಧವ್, ಎಇಇ ವರ್ಧಮಾನ್ ಹುದ್ದಾರ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಘನತ್ಯಾಜ್ಯ ವಿಲೇವಾರಿ ಘಟಕದ ಮಣ್ಣು ಸಾಗಾಟದ ಹಣ ಬಿಡುಗಡೆಗೆ ಲಂಚ ಕೇಳಿದ್ದ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆಸಿತ್ತು. ಇದು ನಗರಸಭೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಗದಗ-ಬೆಟಗೇರಿ ನಗರಸಭೆ ಆಡಳಿತಕ್ಕೆ ಕಪ್ಪುಚುಕ್ಕೆ ಅಂಟಿದ್ದು, ಇದನ್ನೆಲ್ಲಾ ಶಮನಗೊಳಿಸಲು ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕಿದೆ. ಈ ನಿಟ್ಟಿನಲ್ಲಿ ನೂತನ ಪೌರಾಯುಕ್ತರು ಕಾರ್ಯೋನ್ಮುಖರಾಗಬೇಕು ಎಂಬುವುದು ಅವಳಿ ನಗರದ ಜನರ ನಿರೀಕ್ಷೆಯಾಗಿದೆ.


10 ತಿಂಗಳಲ್ಲಿ ಮೂವರು ಪೌರಾಯುಕ್ತರು

ಎಸಿಬಿ ದಾಳಿ ಬಳಿಕ ಅನಧಿಕೃತ ರಜೆ ಪಡೆದಿದ್ದ ರಮೇಶ್ ಜಾಧವ್‌ಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಕಡ್ಡಾಯ ರಜೆ ನೀಡಿ ಅಂದಿನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್ ವಟಗಲ್‌ಗೆ ಜುಲೈ 20ರಂದು ಪೌರಾಯುಕ್ತರ ಪ್ರಭಾರ ವಹಿಸಿದ್ದರು. ರಮೇಶ್ ವಟಗಲ್ ಬಳಿಕ ಗುರುಪ್ರಸಾದ್‌ಗೆ ಪೌರಾಯುಕ್ತರ ಪ್ರಭಾರ ವಹಿಸಲಾಗಿತ್ತು. ಅವರು ಅನಾರೋಗ್ಯ ನಿಮಿತ್ತ ರಜೆ ಹೋದ ಹಿನ್ನೆಲೆಯಲ್ಲಿ ನಗರಸಭೆಯ ಬಂಡಿ ಸಾಗಿಸಲು ಎಸ್.ಬಿ.ಮರಿಗೌಡ ಎಂಬುವವರಿಗೆ ಪ್ರಭಾರ ವಹಿಸಲಾಗಿತ್ತು. ಜುಲೈನಿಂದ ಇಲ್ಲಿಯವರೆಗೆ ಮೂವರು ಪೌರಾಯುಕ್ತರಾಗಿ ನೇಮಕಗೊಂಡರೂ ಸಾರ್ವಜನಿಕರ ಗೋಳು ತಪ್ಪಿರಲಿಲ್ಲ.

ಪ್ರಾಧಿಕಾರದ ಅಧ್ಯಕ್ಷರಾಗಿ ಶ್ರೀಪತಿ ಉಡುಪಿ ನೇಮಕ: ಬಿಜೆಪಿ ಪಾಳೆಯದಲ್ಲಿ ತೀವ್ರ ಅಸಮಾಧಾನ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶ್ರೀಪತಿ ಉಡುಪಿ ಅವರನ್ನು ಮೂರು ವರ್ಷಗಳ ಅವಧಿಯವರೆಗೆ ರಾಜ್ಯ ಸರ್ಕಾರ ನೇಮಕ ಮಾಡಿ ಮಂಗಳವಾರ ಆದೇಶಿಸಿದೆ. ಇದು ಬಿಜೆಪಿಯ ಮುಖಂಡರ, ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯದಲ್ಲಿ ಇದುವರೆಗೂ ಯಾರೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರಲಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಮುಖಂಡ ಸಿದ್ದು ಪಲ್ಲೇದ ಅವರು ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದರು. ಆದರೆ, ಸರ್ಕಾರ ಹಾಗೂ ಪಕ್ಷ ಈ ಹಿಂದೆ ಬ್ರಾಹ್ಮಣ ಕೋಟಾದಲ್ಲಿ ಕೃಷ್ಣ ಹೊಂಬಾಳೆಯವರು ಅಧ್ಯಕ್ಷರಾಗಿದ್ದರೂ, ಬ್ರಾಹ್ಮಣ ಸಮುದಾಯದ ಶ್ರೀಪತಿ ಉಡುಪಿಯವರೆಗೆ ಮತ್ತೆ ಮಣೆ ಹಾಕಿದೆ.

ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಶ್ರೀಪತಿ ಉಡುಪಿ ಅವರು ಪ್ರಾಧಿಕಾರದ ಅಧ್ಯಕ್ಷರಾಗಿರುವುದಕ್ಕೆ ಪಕ್ಷದಲ್ಲಿ ಕೆಲವರಿಗೆ ಅಸಮಾಧಾನವನ್ನುಂಟು ಮಾಡಿದೆ. ಏಕೆಂದರೆ, ಕಳೆದ ಬಾರಿ ಬಣಜಿಗ ಸಮುದಾಯ ಸಂಗಮೇಶ ದುಂದೂರ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಹೀಗೆ ಬಹುತೇಕ ಎಲ್ಲ ಸಮುದಾಯವರಿಗೂ ಅಧ್ಯಕ್ಷ ಪಟ್ಟ ಸಿಕ್ಕಿತ್ತು. ಆದರೆ, ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯದವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯದ ಬಹುತೇಕ ಜನ ಸಿದ್ದು ಪಲ್ಲೇದ ಅವರ ನೇಮಕ ಮಾಡಲು ಸಂಪೂರ್ಣ ಬೆಂಬಲ‌ ನೀಡಿದ್ದರು. ಇದೀಗ ಶ್ರೀಪತಿ ಉಡುಪಿ ಅವರ ನೇಮಕ ಸಮುದಾಯದ ಬಹುತೇಕ ಜನರಲ್ಲಿ ಅಸಮಾಧಾನ ಉಂಟು ಮಾಡಿದೆ.

ಅದರಂತೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟ್ಟಕ್ಕೆ ಪ್ರಬಲ ಲಿಂಗಾಯತ ಸಮುದಾಯದವರಿಗೆ ಅವಕಾಶ ಕೊಟ್ಟಿದ್ದರೆ ಮುಂಬರುವ ವಿಧಾನಸಭೆ, ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿಗೆ ಅನುಕೂಲವಾಗುತ್ತಿತ್ತು. ಆದರೆ, ಸರ್ಕಾರ ಶ್ರೀಪತಿ ಉಡುಪಿ ಅವರನ್ನು ನೇಮಕ ಮಾಡಿದ್ದು, ಮುಂದಿನ ಚುನಾವಣೆಗಳಲ್ಲಿ ಕಮಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಸಿದ್ದು ಪಲ್ಲೇದ ಅವರನ್ನು ಪಕ್ಷದತ್ತ ಸೆಳೆಯಲು ಕಾಂಗ್ರೆಸ್‌ನವರು ಕಸರತ್ತು ನಡೆಸಿದ್ದರೂ ಸಿದ್ದು ಪಲ್ಲೇದ ಅವರು ಪಕ್ಷ ನಿಷ್ಠೆ ತೋರಿದ್ದರು. ಆದರೆ, ಇದೀಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನೇಮಕ ವೇಳೆ ಹೆಸರು ಕೈಬಿಟ್ಟಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಹೆಣ್ಣು ಬದುಕಿನ ಕಣ್ಣು: ಮುತ್ತು ರಾಯರಡ್ಡಿ

ವಿಜಯಸಾಕ್ಷಿ ಸುದ್ದಿ, ನರಗುಂದ:

‘ಮಹಿಳೆಯರು ಜನನಕ್ಕೆ ತಾಯಿಯಾಗಿ, ಸಹಕಾರಕ್ಕೆ ಸಹೋದರಿಯಾಗಿ, ಸಲಹೆಗೆ ಸ್ನೇಹಿತೆಯಾಗಿ, ಸಂಸಾರಕ್ಕೆ ಮಗಳಾಗಿ, ಜನನದಿಂದ ಮರಣದವರೆಗೂ ಜೊತೆಯಾಗಿ ಬರುವ ಹೆಣ್ಣು ನಮ್ಮ ಬದುಕಿನ ಕಣ್ಣು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ತಾಲ್ಲೂಕು ಅಧ್ಯಕ್ಷ ಹಾಗೂ‌ ಚಿಕ್ಕನರಗುಂದ ಗ್ರಾ.ಪಂ.ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಿ ಮಾತನಾಡಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಸಿ.ಹನಮಂತಗೌಡ್ರ ಮಾತನಾಡಿ, ‘ಮಹಿಳೆ ಇಂದು ಎಲ್ಲ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದು, ಅವರ ಸಾಧನೆಗಳು ಇನ್ನು ಹೆಚ್ಚಾಗಲಿ ಎಂದು ಶುಭ ಹಾರೈಸಿದರು.

ಇದೇ ವೇಳೆ ಡಾಕ್ಟರೇಟ್ ಪದವಿ ಪಡೆದ ಬಾಲ ಪ್ರತಿಭೆ ವೈದ್ಯತಿ ಕೋರಿಶೆಟ್ಟರ್, ಕವಿವಿ ಕಬಡ್ಡಿ ತಂಡಕ್ಕೆ ಆಯ್ಕೆಯಾದ ಸಂಗೀತಾ ತಳವಾರ, ಪ್ರೇಮಾ ಹಲಗೌಡ್ರ, ಲೇಖಕಿ ಡಾ.ಕಲಾಶ್ರೀ ಹಾದಿಮನಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಜೆ.ಪಿ.ಪತಂಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

  ಈ ಸಂದರ್ಭದಲ್ಲಿ ರಾಘವೇಂದ್ರ ಗುಜಮಾಗಡಿ, ಚನ್ನು ನಂದಿ, ಶರಣಬಸಪ್ಪ ಹಳೇಮನಿ, ನಬಿ ಕಿಲ್ಲೇದಾರ, ಬಸು ತಾವರೆ, ಶರಣು ಚಲವಾದಿ, ವಿಜಯ ಚಲವಾದಿ, ಪಿ.ವಿ.ಜಾಧವ, ಬಿ.ಎಸ್.ಕ್ಯಾರಕೊಪ್ಪ, ವಿಲಾಸ ಹಿರೇಮಠ, ಮಾರುತಿ ತಳವಾರ, ನಾಗರಾಜ ಕೋರಿಶೆಟ್ಟರ್, ನವೀನ್ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು.

ಕಣ್ಣೀರು ಹಾಕಿದ ಮಾಲಾಶ್ರೀ!

0

ಸ್ವ ಪಕ್ಷ ಕಾಂಗ್ರೆಸ್ ಸದಸ್ಯರ ನಡೆಗೆ ಬೇಸರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಅಧಿಕಾರದಲ್ಲಿದ್ದ ಮಹಿಳೆಯನ್ನು ಕೆಳಗಿಳಿಸಲು ಸ್ವಪಕ್ಷ ಕಾಂಗ್ರೆಸ್ ಸದಸ್ಯರ ನಡೆಯಿಂದ ಅಸಮಾಧಾನಗೊಂಡು ಗಂಗಾವತಿ ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಕಣ್ಣೀರು ಸುರಿಸಿದರು.

ಗಂಗಾವತಿ ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಇದೆ. ಅಧಿಕಾರದ ಗದ್ದುಗೆ ಏರುವಾಗ ಮಾಲಾಶ್ರೀ ಸಂದೀಪ್‌ಕುಮಾರ್ ಅವರನ್ನು ರಾಣಿಯಂತೆ ಮೆರೆಸಿದ್ದ ಕಾಂಗ್ರೆಸ್ ಸದಸ್ಯರು, ಇದೀಗ ಕಿರುಕುಳ ನೀಡಲಾರಂಭಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ನಗರಸಭೆ ಅಧ್ಯಕ್ಷ ಸ್ಥಾನದಿಂದ ಮಾಲಾಶ್ರೀ ಅವರನ್ನು ಕೆಳಗಿಳಿಸಲು ಸ್ವಪಕ್ಷದ ಸದಸ್ಯರೇ ಜಿಲ್ಲಾಧಿಕಾರಿಗಳಿಗೆ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮನವಿ ಸಲ್ಲಿಸಿದ್ದರಿಂದ ಮಾಲಾಶ್ರೀ ಮನ ನೊಂದಿದ್ದಾರೆ.

ನಾನೇ ರಾಜೀನಾಮೆ ಕೊಡ್ತಿನಿ:
ನನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವರೇನು ಮನವಿ ಸಲ್ಲಿಸೋದು? ಅಧ್ಯಕ್ಷ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡ್ತಿನಿ. ಸ್ವ ಪಕ್ಷದ ಸದಸ್ಯರ ಈ ನಡೆ ನಿಜಕ್ಕೂ ನನಗೆ ಬೇಸರ ತರಿಸಿದೆ.
-ಮಾಲಾಶ್ರೀ ಸಂದೀಪ್‌ಕುಮಾರ್, ನಗರಸಭೆ ಅಧ್ಯಕ್ಷೆ, ಗಂಗಾವತಿ.

ಯಾವ ಗಂಡಸು ಬಂಧಿಸಲಿಕ್ಕೆ ಬರುತ್ತಾನೋ ನೋಡೋಣ; ಪೊಲೀಸರಿಗೆ ಜಿ ಎಸ್ ಪಾಟೀಲ್ ಸವಾಲು

25 ಲಕ್ಷ ರೂ. ಪರಿಹಾರ ಘೋಷಿಸುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ್ ಸರ್ಕಾರಕ್ಕೆ ಒತ್ತಾಯ

ವಿಜಯಸಾಕ್ಷಿ ಸುದ್ದಿ, ಗದಗ:

ಅಲ್ಲ್ಯಾರೋ ಸತ್ತರೆ 25 ಲಕ್ಷ ರೂ. ಪರಿಹಾರ ಘೋಷಿಸುವ ಸರ್ಕಾರ, ಹಕ್ಕಿಗಾಗಿ ಹೋರಾಡಿ ಮೃತಪಟ್ಟ ಮಹಿಳೆ ಪರಿಶಿಷ್ಟ ಪಂಗಡ ಜನಾಂಗಕ್ಕೆ ಸೇರಿದವಳೆಂದು ಕೇವಲ 5 ಲಕ್ಷ ರೂ. ಘೋಷಿಸಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ್ ಕಿಡಿಕಾರಿದರು.

ಮಂಗಳವಾರ ಜಿಮ್ಸ್ ಆವರಣದಲ್ಲಿರುವ ಸರ್ಕಾರಿ ಶುಶ್ರೂಷಾ ಶಾಲೆಯ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಮೃತ ಮಹಿಳೆ ಎಸ್ಟಿ ಜನಾಂಗಕ್ಕೆ ಸೇರಿದವರಾಗಿದ್ದು, ಎಷ್ಟು ಪರಿಹಾರ ಕೊಟ್ಟರೂ ತೆಗೆದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಐದು ಲಕ್ಷ ರೂ. ಘೋಷಿಸಿರುವುದು ಖಂಡನೀಯ. ಕೊಡುವುದಾದರೆ 25 ಲಕ್ಷ ರೂ. ಪರಿಹಾರ‌ ಕೊಡಿ. ಇಲ್ಲದಿದ್ದರೆ, ಅದು ಸಹಿತ ಬೇಡ. ನಾವೇ ಅಷ್ಟು ಪರಿಹಾರ ಕೊಡುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖಾಧಿಕಾರಿಗಳು ಗ್ರಾಮದ ರೈತರನ್ನು ರಕ್ಷಿಸಲು ಹೋಗದೆ, ಬಂಧಿಸಿಲು ಹೋಗಿದ್ದರು. ಗ್ರಾಮದ ಕೆಲವರ ಮೇಲೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಅವರು ಎಲ್ಲಿಯೂ ಹೊಗದೆ ಇಲ್ಲಿಯೇ ಇದ್ದಾರೆ ಯಾವ ಗಂಡಸು ಬಂಧಿಸಲಿಕ್ಕೆ ಬರುತ್ತಾನೋ ನೋಡೋಣ. ಅವರನ್ನು ಅರೆಸ್ಟ್ ಮಾಡಿದ್ರೆ ಅವರ ಜೊತೆ ನಾನು ಹೋಗುತ್ತೇನೆ ಎಂದು ಜಿ.ಎಸ್‌.ಪಾಟೀಲ್ ಎಚ್ಚರಿಕೆ ನೀಡಿದರು.

ಸ್ಥಳೀಯ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದದ್ದು ಎಂದು ಆರೋಪಿಸಿದ ಜಿ.ಎಸ್.ಪಾಟೀಲರು ಸರ್ಕಾರ ಅರಣ್ಯ ಅಧಿಕಾರಿಗಳ ಗರ್ವ ಅಡಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ‌ಸೇರಿದಂತೆ ಅನೇಕರು ‌ಇದ್ದರು.

error: Content is protected !!