‘ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕೇಲೂರು ಗ್ರಾಮದಲ್ಲಿ ಸೋಮವಾರ ಅರಣ್ಯ ಇಲಾಖೆಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಉದ್ವೇಗಕ್ಕೆ ಒಳಗಾಗಿ ಇಬ್ಬರು ಮಹಿಳೆಯರು ವಿಷ ಸೇವಿಸಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿರುವುದು ಅತ್ಯಂತ ದುರ್ದೈವದ ಘಟನೆ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ವಿಷಾದ ವ್ಯಕ್ತಪಡಿಸಿದರು.
ಈ ಘಟನೆಯ ಕುರಿತು ಸಂಬಂಧಿಸಿದ ಗದಗ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತನಾಡಿರುವ ಅವರು, ‘ಈ ರೀತಿಯ ಅವಘಡಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಒತ್ತುವರಿ ತೆರವು ಕಾರ್ಯಾಚರಣೆಯಂತಹ ಪ್ರಸಂಗಗಳಲ್ಲಿ ಮಾನವೀಯ ದೃಷ್ಟಿಯಿಂದ ನೋಡಬೇಕು ಎಂದು ಸೂಚಿಸಿದ ಅವರು, ಈ ಘಟನೆಯಲ್ಲಿ ವಿಷ ಸೇವಿಸಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸರೋಜಾ ಪಾಟೀಲ ಅವರಿಗೆ ಅಗತ್ಯವಿರುವ ಹೆಚ್ಚಿನ ಚಿಕಿತ್ಸೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲು’ ನಿರ್ದೇಶಿಸಿದರು.
‘ಈಗಾಗಲೇ ಮೃತ ಮಹಿಳೆ ನಿರ್ಮಲಾ ಪಾಟೀಲ ಅವರ ಕುಟುಂಬ ಸದಸ್ಯರನ್ನು ಜಿಲ್ಲಾಧಿಕಾರಿಗಳು ಭೇಟಿಯಾಗಿದ್ದಾರೆ. ತಾವು ಕೂಡಾ ಸದ್ಯದಲ್ಲೇ ಅಲ್ಲಿಗೆ ತೆರಳಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವುದಾಗಿ ಸಷ್ಟಪಡಿಸಿದ ಸಿ.ಸಿ.ಪಾಟೀಲರು, ಅರಣ್ಯ ಒತ್ತುವರಿ ಕಾರ್ಯಾಚರಣೆ ಮಾಡುವಾಗ ಯಾರಿಗೂ ಅನ್ಯಾಯವಾಗದಂತೆ ನಿಯಮಾನುಸಾರವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಸಚಿವ ಸಿ.ಸಿ.ಪಾಟೀಲ್ ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
5 ಲಕ್ಷ ರೂ. ಪರಿಹಾರ: ಘಟನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಚರ್ಚಿಸಿದ್ದು, ಮಾನವೀಯ ದೃಷ್ಟಿಯಿಂದ ಮೃತ ಮಹಿಳೆಯ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಘೋಷಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆ ಪ್ರಕಾರ ಅವರ ಕುಟುಂಬದವರಿಗೆ ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿ.ಸಿ.ಪಾಟೀಲ ತಿಳಿಸಿದ್ದಾರೆ.
ಗಂಡ-ಹೆಂಡತಿ ಮಧ್ಯೆದ ಜಗಳ ನ್ಯಾಯ ಹೇಳಲು ಹೋದ ತಾಂಡಾದ ಮುಖಂಡನ ಕೊಲೆಯಲ್ಲಿ ಅಂತ್ಯಗೊಂಡಿರುವ ಧಾರುಣ ಘಟನೆ ಶುಕ್ರವಾರ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ.
ಕೊಲೆಗೀಡಾದ ತಾಂಡಾದ ಮುಖಂಡ
ಹೌದು, ರಾಜೀ ಪಂಚಾಯತಿ ಮಾಡಿ ನನಗೆ ನ್ಯಾಯ ಒದಗಿಸಿ ಕೊಡಲಿಲ್ಲವೆಂದು ಕೋಪಗೊಂಡ ವಿಷ್ಣು ರೂಪಲಪ್ಪ ಪವಾರ(35) ಎಂಬ ವ್ಯಕ್ತಿ ಗಂಡ-ಹೆಂಡತಿ ನಡುವಿನ ಜಗಳ ಬಗೆಹರಿಸಲು ಮಧ್ಯಸ್ಥಿಕೆ ವಹಿಸಿದ್ದ ತಾಂಡಾದ ಮುಖಂಡನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.
ಅತ್ತಿಕಟ್ಟಿ ತಾಂಡಾದ ಸೋಮಲಪ್ಪ ನಾಯಕ್(50) ಎಂಬ ವ್ಯಕ್ತಿಯ ದಾರುಣವಾಗಿ ಕೊಲೆಗೀಡಾದ ಮುಖಂಡ. ಹೊಟ್ಟೆ, ಎದೆ ಹಾಗೂ ಗಂಟಲು ಭಾಗಕ್ಕೆ ಬಲವಾಗಿ ಚಾಕು ಇರಿದ ಪರಿಣಾಮ ಸೋಮಲಪ್ಪ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದು, ವಿಷ್ಣು ಸ್ವತಃ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.
ಘಟನೆ ವಿವರ:
ಕಳೆದ ನಾಲ್ಕೈದು ವರ್ಷಗಳಿಂದ ವಿಷ್ಣು ಪವಾರ ಮತ್ತು ಆತನ ಹೆಂಡತಿ ಸುಮಿತ್ರಾ ಇಬ್ಬರು ಮಧ್ಯೆ ಜಗಳ ಬಂದಿತ್ತು. ವಿಷ್ಣು ತನ್ನ ಹೆಂಡತಿಯ ಮೇಲೆ ಸಂಶಯ ಮಾಡುತ್ತಿದ್ದನಂತೆ. ಸಂಶಯ ಸಂಸಾರ ಹಾಳು ಮಾಡಿತು ಎಂಬಂತೆ ಪತಿಯ ಈ ನಡೆಯಿಂದ ಬೇಸತ್ತಿದ್ದ ಸುಮಿತ್ರಾ ತಾಂಡಾ ಬಿಟ್ಟು ಹೋಗಿದ್ದಳಂತೆ. ನಾಲ್ಕು ಮಕ್ಕಳ ತುಂಬು ಸಂಸಾರ ಬಿಟ್ಟು ಸುಮಿತ್ರಾ ತವರು ಮನೆಯಲ್ಲೇ ಇದ್ದಳಂತೆ.
ಇನ್ನು ರಾಜೀ ಪಂಚಾಯತಿ ಮಾಡಿ ಗಂಡ ಹೆಂಡತಿಯನ್ನು ಒಂದು ಮಾಡಲು ತಾಂಡಾದ ಮುಖಂಡರು ಮುಂದಾಗಿದ್ದರು. ಆದರೆ, ಸುಮಿತ್ರಾ ಊರ ಜನರ ಮಾತು ಕೇಳದೆ ತವರು ಮನೆಯಲ್ಲೇ ಉಳಿದಿದ್ದಳು. ಇದರಿಂದ ತಾಂಡಾದ ಮುಖಂಡರು ಸರಿಯಾಗಿ ರಾಜೀ ಪಂಚಾಯತಿ ಮಾಡಿಲ್ಲವೆಂದು ವಿಷ್ಣು ಸಿಟ್ಟು ಮಾಡಿಕೊಂಡಿದ್ದನಂತೆ. ನಿನ್ನೆ (ಶುಕ್ರವಾರ) ಗ್ರಾಮದ ಸೇವಲಾಲ್ ಉತ್ಸವದ ಕುರಿತು ಚರ್ಚಿಸಲು ಕಾರುಬಾರಿ, ನಾಯಕರುಗಳು ಸಭೆ ಸೇರಿದ್ದರು. ಈ ವೇಳೆ ಏಕಾಏಕಿ ಗಲಾಟೆ ಎಬ್ಬಿಸಿದ ವಿಷ್ಣು ಪವಾರ ತಾಂಡಾದ ನಾಯಕ ಸೋಮಲಪ್ಪನನ್ನು ಕೊಲೆ ಮಾಡಿ ಸ್ವತಃ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಯ ನಂತರ ತಾಂಡಾದ ಜನರು ಆರೋಪಿ ವಿಷ್ಣುಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಜನರ ಬಹದಿನಗಳ ಬೇಡಿಕೆಯಾಗಿದ್ದ ನೂತನ ಗದಗ-ಯಲವಗಿ, ಗದಗ-ವಾಡಿ ರೈಲು ಮಾರ್ಗಗಳ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಶುಕ್ರವಾರ ಬಸವರಾಜ್ ಬೊಮ್ಮಾಯಿ ಅವರು 2022-23ನೇ ಸಾಲಿನ ತಮ್ಮ ಚೊಚ್ಚಲ ಬಜೆಟ್‌ನಲ್ಲಿ 55 ಕಿ.ಮೀ.ಉದ್ದದ ಗದಗ-ಯಲವಗಿ ರೈಲು ಮಾರ್ಗದ ಭೂಸ್ವಾಧೀನ ವೆಚ್ಚ ಭರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಹಾಗೂ ಗದಗ-ವಾಡಿ ರೈಲು ಅನುಷ್ಠಾನಗೊಳಿಸುವುದಾಗಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ರೈಲ್ವೆ ಸಾಂದ್ರತೆ ಹೆಚ್ಚಿಸುವ ಮೂಲಕ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಸರ್ಕಾರ ನಿರ್ಧರಿಸಿದ್ದು, ರೈಲ್ವೆ ಇಲಾಖೆಯೊಂದಿಗೆ 50:50 ವೆಚ್ಚ ಹಂಚಿಕೆಯಲ್ಲಿ ಒಂಬತ್ತು ನೂತನ ರೈಲ್ವೆ ಮಾರ್ಗ ಅನುಷ್ಠಾನಗೊಳಿಸುತ್ತಿದೆ. ಗಿಣಿಗೇರಾ-ರಾಯಚೂರು, ತುಮಕೂರು-ರಾಯದುರ್ಗ, ಗದಗ-ವಾಡಿ, ಕುಡಚಿ-ಬಾಗಲಕೋಟೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, ತುಮಕೂರು-ಚಿತ್ರದುರ್ಗ-ದಾವಣಗೆರೆ, ಚಿಕ್ಕಮಗಳೂರು-ಬೇಲೂರು ಹಾಗೂ ಬೇಲೂರು-ಹಾಸನ ರೈಲು ಮಾರ್ಗಗಳಿಗೆ ಹಸಿರು ನಿಶಾನೆ ತೋರಿದ್ದಾರೆ.
ಅದರಂತೆ, 55 ಕಿ.ಮೀ.ಉದ್ದ ಗದಗ-ಯಲವಗಿ ನೂತನ ರೈಲು ಮಾರ್ಗ ಯೋಜನೆಯನ್ನು 640 ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಭೂಸ್ವಾಧೀನ ವೆಚ್ಚ ಭರಿಸಿ ಕೇಂದ್ರದ ಪಾಲಿನೊಂದಿಗೆ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದಿದ್ದಾರೆ.
ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಸ್ಕಿ, ಸಿಂಧನೂರು, ಗದಗ ಮತ್ತು ಯಾದಗಿರಿ ನಗರಗಳಿಗೆ ಬೈಪಾಸ್ ರಸ್ತೆ ನಿಮಿಸಲಾಗುವುದು. ಈ ಯೋಜನೆಗೆ ಅವಶ್ಯಕವಿರುವ ಭೂಸ್ವಾಧೀನ ವೆಚ್ಚದಲ್ಲಿ ರಾಜ್ಯ ಸರ್ಕಾರದ ಪಾಲು ಭರಿಸಲು ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸಿಎಂ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಗದಗ-ಕೊಪ್ಪಳ ರಾಷ್ಟ್ರೀಯ ಹೆದ್ದಾರಿ ಹಳ್ಳಿಕೇರಿ ಗ್ರಾಮದ ಬಳಿ ಹಾಲಿನ ಗಾಡಿಯೊಂದು ಸೇತುವೆಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದ ಪರಿಣಾಮ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ಶಿದ್ಧಲಿಂಗಯ್ಯ ಪೂಜಾರ ಹಾಗೂ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಚಾಲಕ ಸಾಧಿಕ್ ಸೈಯ್ಯದ್‌ಸಾಬ ಮುಚ್ಚಾಲೆ( 27) ಮೃತ ದುರ್ದೈವಿಗಳಾಗಿದ್ದಾರೆ.
ಜೆಕೆ ಹಾಲಿನ ಪ್ಯಾಕೇಟ್ ಸರಬರಾಜು ಮಾಡುವ ವಾಹನ ಹಳ್ಳಿಕೇರಿ ಗ್ರಾಮದ ಬಳಿ ಫೂಲ್ ಕಟ್ಟಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ವಾಹನದಲ್ಲಿದ್ದ ಹಾಲಿನ ಪ್ಯಾಕೆಟ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮುಂಡರಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗೀಯ ಕಚೇರಿ ಮೇಲೆ (ಎನ್ ಡಬ್ಲ್ಯೂಕೆಎಸ್ ಆರ್ ಟಿಸಿ) ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಗುರುವಾರ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಗದಗ ಸಾರಿಗೆ ಸಂಸ್ಥೆ ಕಚೇರಿಯ ಲೆಕ್ಕ ಅಧೀಕ್ಷಕ ಜಗದೀಶ್ ಹಲವಾಗಲಿ ಹಾಗೂ ಕಚೇರಿ ಸಹಾಯಕ ಈರಣ್ಣ ಎಲಿಬಳ್ಳಿ ಅವರ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿ ವಿಚಾರಣೆ ನಡೆಸಿದರು.
ಘಟನೆಯ ವಿವರ
ಗದಗ ಮೂಲದ ವಿನಾಯಕ ಹರವಿ ಅವರ ಸಹೋದರ ನಾಗರಾಜ ಹರವಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ಅನಾರೋಗ್ಯದಿಂದ ನಾಗರಾಜ ನಿಧನರಾಗಿದ್ದರು. ಸರ್ಕಾರದಿಂದ ಬರಬೇಕಿದ್ದ ಬಾಕಿ ಹಣವನ್ನು ಎರಡು ಕಂತ್‌ನಲ್ಲಿ ಬಿಡುಗಡೆ ಮಾಡಿದ್ದರು. ಸದ್ಯ 94,200 ರೂ. ಬಿಡುಗಡೆಯಾಗಿದ್ದು, ಈ ಗ್ರ್ಯಾಚುಟಿ ಹಣ ಬಿಡುಗಡೆಗೆ ಜಗದೀಶ ಹಲವಾಗಲಿ ಹಾಗೂ ಈರಣ್ಣ ಎಲಿಬಳ್ಳಿ 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ವಿನಾಯಕ ಹರವಿ ಎಸಿಬಿಗೆ ದೂರು ನೀಡಿದ್ದರು. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬೇಡಿಕೆಯಿಟ್ಟಿದ್ದ ಲಂಚದ ಹಣವನ್ನು ಹುಡ್ಕೊ ಕಾಲನಿಯ ನಿವಾಸಿ ಅನಿಲ್ ಹರ್ತಿ ಅವರ ಬಳಿ ಕೊಡುವಂತೆ ಸೂಚಿಸಿದ್ದರು. ಅಲ್ಲದೆ, ಹಣ ಮುಟ್ಟಿದ ತಕ್ಷಣ ಬಂದು ಚೆಕ್ ತೆಗೆದುಕೊಂಡು ಹೋಗುವಂತೆ ಈರಣ್ಣ ಎಲೆಬಳ್ಳಿ ವಿನಾಯಕ ಅವರಿಗೆ ಹೇಳಿದ್ದರು. ಅದರಂತೆ, ವಿನಾಯಕ ಹರವಿ ಅಧಿಕಾರಿಗಳು ಬೇಡಿಕೆ ಇಟ್ಟಿದ್ದ ಹಣದ ಪೈಕಿ ಶುಕ್ರವಾರ ಮುಳಗುಂದ ರಸ್ತೆಯ ನಿಸರ್ಗದ ಬಳಿ ಏಜೆಂಟ (ಮಧ್ಯವರ್ತಿ) ಅನಿಲ್ ಗೆ 7 ಸಾವಿರ ರೂ. ನೀಡುತ್ತಿದ್ದಾಗ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಈ ವೇಳೆ ವಿನಾಯಕ ಹರವಿ ಎಂಬುವವರ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಎಸ್ ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ, ಡಿಎಸ್ಪಿ ಎಂ.ವಿ.ಮಲ್ಲಾಪುರ ನೇತೃತ್ವದಲ್ಲಿ ಸಿಪಿಐಗಳಾದ ಆರ್.ಎಫ್.ದೇಸಾಯಿ, ವಿ.ಎಂ.ಹಳ್ಳಿ, ಸಿಬ್ಬಂದಿಗಳಾದ ಎಂ.ಎಂ.ಅಯ್ಯನಗೌಡರ್, ವಿಶ್ವನಾಥ್, ವಿರೇಶ್ ಜೋಳದ, ಎನ್.ಎಸ್.ತಾಯಣ್ಣವರ, ಮಂಜು ಮುಳಗುಂದ, ಶರೀಫ್ ಮುಲ್ಲಾ, ನಾರಾಯಣ ರೆಡ್ಡಿ ಈ ಕಾರ್ಯಚರಣೆಯಲ್ಲಿದ್ದರು.
ಗುರುವಾರ ಜ.ಫ.ಸಿದ್ದರಾಮ ಸ್ವಾಮೀಜಿಗಳು ಶ್ರೀಮಠದ ಪರಂಪರೆಯಂತೆ ನೇಮಕ ಪತ್ರವನ್ನು ಕರ್ತೃ ಗದ್ದುಗೆಗೆ ಮುಟ್ಟಿಸಿ ಬಳಿಕ ತುರುಮರಿ ಅವರಿಗೆ ನೀಡಿದರು.
ಈ ವೇಳೆ ಮಾತನಾಡಿದ ಜ.ಫ.ಸಿದ್ದರಾಮ ಸ್ವಾಮೀಜಿ, ‘ಶ್ರೀ ಮಠದ ಎಲ್ಲ ಕೆಲಸ ಕಾರ್ಯಗಳ ಜೊತೆಗೆ ಅಭಿವೃದ್ಧಿ ಮತ್ತು ಸುಧಾರಣೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ. ಸಮಾಧಾನ ಮತ್ತು ಶಾಂತಿಯಿಂದ ಎಲ್ಲರ ಸಹಕಾರದೊಂದಿಗೆ ಮಠದ ಅಭಿವೃದ್ಧಿಗೆ ಶ್ರಮವಹಿಸುವಂತೆ’ ಕಿವಿಮಾತು ಹೇಳಿದರು.
ಅಧಿಕಾರ ವಹಿಸಿಕೊಂಡು ಮಾತನಾಡಿದ ವೀರಣ್ಣ ತುರುಮರಿ, ‘ಉಭಯ ಶ್ರೀಗಳು ನನ್ನ ಮೇಲೆ ನಂಬಿಕೆ ಇಟ್ಟು ವಹಿಸಿರುವಂತಹ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ನಿಷ್ಪಕ್ಷಪಾತವಾಗಿ ಶ್ರೀ ಮಠದ ಶ್ರೇಷ್ಠತೆ ಹೆಚ್ಚಿಸುವುದಕ್ಕೆ ಉಭಯ ಶ್ರೀಗಳ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ’ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶಿವಪ್ರಕಾಶ್ ಮಹಾಜನಶೆಟ್ಟರ, ಯಲ್ಲಪ್ಪಗೌಡ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಚಂದ್ರಕಾಂತ್ ನೂರಶೆಟ್ಟರ ಸೇರಿ ಹಲವರು ಉಪಸ್ಥಿತರಿದ್ದರು.
ತುಂಗಭದ್ರಾ ನದಿಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಮಂಗಳವಾರ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದ ಬಳಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಯಚೂರು ಜಿಲ್ಲೆಯ ಗಬ್ಬೂರ ಗ್ರಾಮದ ಶರಣೇಗೌಡ ಬಸವನಗೌಡ ಗಬ್ಬೂರ, ವಿಜಯನಗರದ ಅಖಿಲೇಶ್ ಎಂಬ ವಿದ್ಯಾರ್ಥಿಗಳು ಮೃತಪಟ್ಟ ದುರ್ಧೈವಿಗಳು.
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಸೋಮವಾರ ರಾತ್ರಿ ಸಿಂಗಟಾಲೂರು ಗ್ರಾಮದಲ್ಲಿರುವ ವೀರಭದ್ರೇಶ್ವರ ಸ್ವಾಮಿಯ ದರ್ಶನಕ್ಕೆ ಬಂದಿದ್ದರು. ಸೋಮವಾರ ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಿದ್ದ ಶಿಕ್ಷಕರು, ವಿದ್ಯಾರ್ಥಿಗಳು, ಬೆಳಗ್ಗೆ ಸ್ನಾನಕ್ಕೆಂದು ತುಂಗಭದ್ರಾ ನದಿಗೆ ಹೋಗಿದ್ದರು. ಸ್ನಾನ ಮುಗಿಸಿ ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದಾರೆ. ಆದರೆ, ವಿಡಿಯೋ, ಫೋಟೋ ಹುಚ್ಚಿಗಾಗಿ ಶಿಕ್ಷಕರನ್ನು ಬಿಟ್ಟು ಈ ವಿದ್ಯಾರ್ಥಿಗಳು ನದಿ ಕಡೆಗೆ ಓಡಿ ಬಂದಿದ್ದು, ಈ ವೇಳೆ ದುರಂತ ಸಂಭವಿಸಿದೆ.
• ಮೇಕೆದಾಟು ಪಾದಯಾತ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಾನೆಷ್ಟು ಬಲಿಷ್ಠ ಎಂದು ತೋರಿಸುವ ಶಕ್ತಿ ಪ್ರದರ್ಶನ
ವಿಜಯಸಾಕ್ಷಿ ಸುದ್ದಿ, ಗದಗ:
ವಿಧಾನಸಭೆಯಲ್ಲಿ ಮಲಗಿರುವ ಕಾಂಗ್ರೆಸ್ಸಿಗರು ಇನ್ನೂ ನಿದ್ರೆಯಿಂದ ಎದ್ದಿಲ್ಲ. ಕಲಾಪ ಹಾಳು ಮಾಡಿದ್ದಕ್ಕೆ ಜನ ಛೀ, ತೂ ಅಂತಾ ಉಗೀತಿದ್ದಾರೆ. ಆರು ದಿನದ ಅಧಿವೇಶನವನ್ನು ಯಾವ ಪುರುಷಾರ್ಥಕ್ಕೆ ಹಾಳು ಮಾಡಿದರೋ ಗೊತ್ತಿಲ್ಲ ಎಂದು ಕೃಷಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದರು.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಅಧಿವೇಶನದಲ್ಲಿ ರಾಜ್ಯದ ಸಮಸ್ಯೆ ಚರ್ಚೆ ಮಾಡಲು ಬಿಡಲಿಲ್ಲ. ಸದನದಲ್ಲಿ ಪಲಾಯನ ಮಾಡಿದರು. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರದಿಂದ ನೋಡುತ್ತಿದ್ದಾರೆ’ ಕುಟುಕಿದರು.
‘ರಾಜ್ಯದ ಜನರ ಗಮನ ಸೆಳೆಯುವುದಕ್ಕೋಸ್ಕರ ಮೇಕೆದಾಟು 2.0 ಅಂತಾ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ, ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂಬುವುದು ಗೊತ್ತಾಗಬೇಕು. ಮೇಕೆದಾಟು ಯೋಜನೆಗೆ ಯಾರ ವಿರೋಧವೂ ಇಲ್ಲ. ಬಿಜೆಪಿ ಸರ್ಕಾರದ ವಿರೋಧವಂತು ಮೊದಲೇ ಇಲ್ಲ. ಕೇಂದ್ರದಿಂದ ಕ್ಲಿಯರನ್ಸ್ ಬಂದ ಕೂಡಲೇ ಕೆಲಸ ಆರಂಭವಾಗಲಿದೆ ಎಂದು ಭರವಸೆ ನೀಡಿದ ಅವರು, ನಮ್ಮ ನೀರು ನಮ್ಮ ಹಕ್ಕು ಅಂದರೆ ಕೇವಲ ಕಾಂಗ್ರೆಸ್ಸಿಗರಿಗಷ್ಟೆ ನೀರುನಾ..? ಉಳಿದವರಿಗೆ ಸಂಬಂಧವಿಲ್ವಾ..? ಮೇಕೆದಾಟು ಇವರ ಮನೆ ಪ್ರಾಪರ್ಟಿನಾ?’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಮರೆತು ಹೋಗುತ್ತಿದೆ, ಮುಳುಗಿದೆ. ಬದುಕಿದ್ದೇವೆಂದು ತೋರಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಮೇಕೆದಾಟು ಬಗ್ಗೆ ಇಷ್ಟು ವರ್ಷ ಯಾಕೆ ಚಿಂತಿಸಲಿಲ್ಲ. ಇದೆಲ್ಲಾ ರಾಜಕೀಯ ಗಿಮಿಕ್. ಮೇಕೆದಾಟು ಡಿ.ಕೆ.ಶಿವಕುಮಾರ್ ಅವರ ಸ್ವಪ್ರತಿಷ್ಠೆಯಾಗಿದೆ.
ಡಿಕೆಶಿ ಶಕ್ತಿ ಪ್ರದರ್ಶನ, ತಾನು ಎಷ್ಟು ಬಲಿಷ್ಠ ಎಂಬುದನ್ನು ತೋರಿಸುವ ಪ್ರದರ್ಶನ ಇದಾಗಿದೆ ಎಂದ ಅವರು, ಕಾಂಗ್ರೆಸ್ಸಿಗರಿಗೆ ಉತ್ತರ ಕರ್ನಾಟಕ, ಮಹದಾಯಿ ಬಗ್ಗೆ ಚಿಂತನೆ ಇಲ್ಲ. ಹೀಗಾಗಿ ಪಾದಯಾತ್ರೆಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂದು ಹರಿಹಾಯ್ದರು.
ಉಕ್ರೇನ್ ದೇಶದಲ್ಲಿ ಕನ್ನಡಿಗರು ಸಿಲುಕಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ‘ಉಕ್ರೇನ್ ದೇಶದಲ್ಲಿ ಸಿಲುಕಿದ ಪ್ರತಿಯೊಬ್ಬ ಭಾರತೀಯರನ್ನು ಕರೆತರುವ ವ್ಯವಸ್ಥೆ ಆಗುತ್ತಿದೆ. ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿದವರನ್ನು ರಕ್ಷಿಸಲು ರಾಜ್ಯದಿಂದಲೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಮಾಹಿತಿ ಪಡೆದು ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆದಿದ್ದು, ಇದಕ್ಕೆ ರಾಜ್ಯ, ಕೇಂದ್ರ ಸರ್ಕಾರ ಬದ್ಧವಾಗಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.
ಬಜೆಟ್ ವಿಚಾರದ ಬಗ್ಗೆ ಮಾತನಾಡಿ, ‘ಬಸವರಾಜ್ ಬೊಮ್ಮಾಯಿಯವರು ಉತ್ತಮ ಬಜೆಟ್ ಮಂಡಿಸಲಿದ್ದಾರೆ. ರಾಜ್ಯದ ಎಲ್ಲ ಭಾಗಗಳಿಗೆ ಒಪ್ಪಿಗೆಯಾಗುವ ಬಜೆಟ್ ಬರಲಿದ್ದು, ಉತ್ತರ ಕರ್ನಾಟಕಕ್ಕೆ ಈ ಬಾರಿ ಉತ್ತಮ ಸೌಲಭ್ಯ ಸಿಗಲಿವೆ’ ಎಂದು ಸಚಿವ ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಪ ಸದಸ್ಯ ಎಸ್.ವ್ಹಿ.ಸಂಕನೂರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಇದ್ದರು.
ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಕೇಂದ್ರ ಸಂಖ್ಯೆ 43 ರಲ್ಲಿ ಮಾಜಿ ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ, ಜ್ಯೋತಿ ಬೆಳಗಿಸಿ ಮಕ್ಕಳಿಗೆ ಪೋಲಿಯೊ ಹನಿ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೊದಲನೇ ದಿನ ಪೋಲಿಯೊ ಬೂತ್ ಗಳಲ್ಲಿ ಹಾಗೂ ನಂತರದ 2-3 ದಿನಗಳಲ್ಲಿ ಮನೆ-ಮನೆ ಭೇಟಿ ನೀಡುವುದರ ಮೂಲಕ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪೋಲಿಯ ಹನಿ ನೀಡಲಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಕೋರಿದರು.
ಚಿಕ್ಕನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ವೈದ್ಯಾಧಿಕಾರಿ ಡಾ.ಪ್ರಶಾಂತ ಮಲ್ಲಾಪೂರ ಮಾತನಾಡಿ, ಚಿಕ್ಕನರಗುಂದ ಗ್ರಾಮದಲ್ಲಿ ಈ ಬಾರಿಯೂ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಶೇ.100ರಷ್ಟು ಯಶಸ್ಸಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇಗಾಗಲೇ ಎರಡು ವರ್ಷಗಳಿಂದ ಕೋವಿಡ್ ಎಂಬ ಮಾಹಾಮರಿ ನಮ್ಮೆಲ್ಲರ ನೆಮ್ಮದಿ ಹಾಳು ಮಾಡಿದ್ದು, ಇದೀಗ ಒಮಿಕ್ರಾನ ಎಂಬ ಹೊಸ ವೈರಸ್ ಕಂಡು ಬಂದಿದೆ. ನೆಗಡಿ, ಕೆಮ್ಮು, ಹಾಗೂ ಜ್ವರದ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೇ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಲು ಸಲಹೆ ನೀಡಿದರು.
ಪ್ರಾಥಮಿಕ ಸುರಕ್ಷಾ ಅಧಿಕಾರಿ ಕುಮಾರಿ ಶರಾವತಿ ಹಿರೇಮಠ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಇದೇ 27 ರಿಂದ ಮಾ.2 ರವರೆಗೆ ಪಲ್ಸ ಪೋಲಿಯೊ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ನೂರರಷ್ಟು ಯಶಸ್ಸಿಗೆ ನಮ್ಮ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಸಿದ್ಧರಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ನಿರ್ಮಲಾ ತಳವಾರ ಹಾಗೂ ಪಿಡಿಓ ಶೈನಾಜ್ ಮುಜಾವರ್, ಆರೊಗ್ಯ ಇಲಾಖೆಯ ಸಂತೋಷ ಅಂಬಿಗೇರ, ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ ಕಾಡದೇವರಮಠ, ಮಂಜುಳಾ ಮೇಟಿ, ಸವಿತಾ ರಾಯರಡ್ಡಿ, ಆಶಾ ಕಾರ್ಯಕರ್ತೆ ಶೋಭಾ ಸುಳ್ಳದ, ಸುಮಾ ಮರಿಯಣ್ಣವರ, ಹಾಗೂ ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು.
-ಬಸವರಾಜ ಕರುಗಲ್. “ಮೊದಲು ಅವಳನ್ನ ಕೊಲೆ ಮಾಡ್ತಿನಿ, ಆಮೇಲೆ ನಿನ್ನನ್ನ ಸಾಯಿಸ್ತಿನಿ”- ಇದು ಚಿತ್ರದ ನಾಯಕ ಹೇಳೋ ಮೊದಲ ಡೈಲಾಗ್…
ಅರೇ ಇದೇನಪಾ ಇದು? ಲವ್ ಸ್ಟೋರಿ ಅನ್ಕೊಂಡ್ ಬಂದರೆ ಸೈಕೋ ಒಬ್ಬನ ಸ್ಟೋರಿ ಇದ್ದಂತಿದೆಯಲ್ಲ? ಅನ್ಸುತ್ತೆ. ಬರೀ ಹದಿನೈದು ನಿಮಿಷದಲ್ಲಿ ಲವ್ ಸ್ಟೋರಿ, ಟ್ರ್ಯಾಕ್‌ಗೆ ಬರುತ್ತೆ. ಅಲ್ಲಲ್ಲಿ ಟ್ವಿಸ್ಟು, ಟರ್ನು ಬರ್ತವೆ. ಹೈಸ್ಕೂಲಿನಲ್ಲೇ ಲವ್ವಲ್ಲಿ ಬೀಳೋ ಹುಡುಗ, ಕಾಲೇಜಿಗೆ ಬಂದರೂ ಅವಳನ್ನು ಬೇಜಾನ್ “ಓಡಾಡ್ತಾ”ನೇ ಲವ್ ಮಾಡ್ತಾನೆ.
ಒಂದಿನ ಪೊರ್ಕಿಯೊಬ್ಬ ಕಾಲೇಜಿಗೆ ಬಂದು ಅವಳನ್ನ ಲವ್ ಮಾಡುವಂತೆ ಕಾಡುವಾಗ ಓಡೋಡಿ ಬರುವ ಹೀರೋ ಪೊರ್ಕಿ ಗ್ಯಾಂಗ್‌ನ್ನ ಚಿತ್ರಾನ್ನ ಮಾಡ್ತಾನೆ. ಅದೇ ಕ್ಷಣ ಹುಡುಗಿ ಎದುರು ಪ್ರೇಮ ನಿವೇದನೆಗೆ ಮುಂದಾಗುತ್ತಿದ್ದಂತೆ ಕಥೆ, ಬೇರೊಂದು ಟ್ರ್ಯಾಕ್‌ಗೆ ಹೊರಳುತ್ತದೆ.
ಬ್ರಿಲಿಯಂಟ್ ಸ್ಟೂಡೆಂಟ್ ಎಣ್ಣೆದಾಸನಾಗ್ತಾನೆ. ಆದರೂ ಅವನು ರ‌್ಯಾಂಕ್ ಸ್ಟೂಡೆಂಟೇ. ಕುಡ್ಕೊಂಡೇ ಕಾಲೇಜಿಗೆ ಬರ‌್ತಾನೆ, ಕುಡ್ಕೊಂಡೇ ದಿ ಗ್ರೇಟ್ ಲಾಯರ್ ಘಟನೆಯೊಂದನ್ನ ವಿವರಿಸಿ, ಕೇಳೋ ಪ್ರಶ್ನೆಗೆ ಉತ್ತರ ಕೊಡ್ತಾನೆ, ವೇದಿಕೆಯಲ್ಲೇ ಪ್ರಮುಖ ಅತಿಥಿ, ಅದೇ ದಿ ಗ್ರೇಟ್ ಲಾಯರ್‌ನಿಂದ ಸಿಗರೇಟ್ ಪಡೀತಾನೆ. ಮದ್ಯದ ಅಮಲಿನ ಮಧ್ಯೆ ನಾಯಕನ ಗೆಳೆಯರ ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಪಡ್ಡೆಗಳಿಗೆ ಮಾತ್ರ ಇಷ್ಟವಾಗಬಹುದು.
ಮಗನಿಗಾಗಿ ಜೀವವನ್ನೇ ಕೊಡುವ ಅಪ್ಪ ಮಗನ ಈ ಸ್ಥಿತಿ ಕಂಡು ಮಮ್ಮಲ ಮರಗುತ್ತಾನೆ. ಮಗ ಹಾದಿ ತಪ್ಪಿದ್ದನ್ನ ಚಿಂತಿಸಿ ಹಾಸಿಗೆ ಹಿಡಿಯುತ್ತಾನೆ. ಕಾಯಿಲೆಯ ಅಪ್ಪನ ನೋಡಿ, ನಾಯಕ ಹುಡುಗಿ ಗುಂಗಿನಿಂದ ಹೊರ ಬಂದು, ಇನ್ನೇನು ದಿ ಗ್ರೇಟ್ ಲಾಯರ್ ಬಳಿ ಜ್ಯೂನಿಯರ್ ಆಗಿ ಸೇರಿ, ಮೊದಲ ಕೇಸ್ ಕೈಗೆತ್ತಿಕೊಳ್ಳುತ್ತಿದ್ದಂತೆ ನಿರೀಕ್ಷಿಸದ ತಿರುವು..!
ಸೆಕೆಂಡ್ ಹಾಫ್‌ನಲ್ಲಿ ಸಿನಿಮಾ ಬೇರೊಂದು ಆಯಾಮಕ್ಕೆ ಹೊರಳುತ್ತದೆ. ಅಲ್ಲಿಯವರೆಗೂ ಲವ್ ಸ್ಟೋರಿ ಎನಿಸಿದ್ದ ಸಿನಿಮಾ ಸಸ್ಪೆನ್ಸ್ ಸ್ಟೋರಿಯಾಗಿ ಮಾರ್ಪಡುತ್ತದೆ. ನಾಯಕಿಯ ಅತ್ಯಾಚಾರ ನಡೆದು, ಕೊಲೆಯತ್ನವೂ ಆಗುತ್ತದೆ. ಆದರೆ ನಾಯಕಿ ಕೋಮಾ ಸ್ಥಿತಿ ತಲುಪುತ್ತಾಳೆ. ನಾಯಕಿಯ ಈ ಸ್ಥಿತಿಗೆ ಸೈಕೋ ಕುಡುಕಾನೇ ಕಾರಣ ಅಂತ ನಾಯಕಿಯ ಹೆತ್ತವರಿಂದ ದೂರು. ಇಲ್ಲಿಂದ ಕಳ್ಳ-ಪೊಲೀಸ್ ಆಟ ಶುರು.
ನಾಯಕನಿಗೆ ಶಿಕ್ಷೆಯಾಗುತ್ತಾ? ಅಥವಾ ಬಚಾವ್ ಆಗ್ತಾನಾ? ನಾಯಕಿಯ ಕೋಮಾ ಸ್ಥಿತಿಗೆ ಯಾರು? ಹೇಗೆ? ಕಾರಣ ಎಂಬುದನ್ನ ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.
ಸಿನಿಮಾದ ಕ್ಲೈಮ್ಯಾಕ್ಸ್‌ನ ಎರಡೂವರೆ ನಿಮಿಷದಲ್ಲಿ ಅತ್ಯಾಚಾರಿಗಳಿಗೆ ಯಾವ ಶಿಕ್ಷೆಯಾಗಬೇಕು ಎಂಬ ಒಂದೊಳ್ಳೆ ಸಂದೇಶದ ಜೊತೆಗೆ ಊಹಿಸದ ಟ್ವಿಸ್ಟ್ ಸಹ ಇದೆ. ಪ್ರೇಕ್ಷಕರು ಇದನ್ನ ಮಿಸ್ ಮಾಡ್ಕೊಬಾರದು.
ನಿರ್ದೇಶಕ ಜೋಗಿ ಪ್ರೇಮ್ ತಮ್ಮ ಹಿಂದಿನ ಎಲ್ಲ ಸಿನಿಮಾಗಳಿಂದ ಹೊರ ಬಂದಿದ್ದಾರೆ. ಬದಲಾದ ಪ್ರೇಮ್, ಸೋಷಿಯಲ್ ಮೇಸೇಜ್ ಹೊತ್ತ ಕಥೆಯೊಂದಿಗೆ ಅಳಿಯ ರಾಣಾನನ್ನ ಈ ಚಿತ್ರದ ಮೂಲಕ ಹೀರೋ ಆಗಿ ಭರ್ಜರಿಯಾಗೇ ಲಾಂಚ್ ಮಾಡಿದ್ದಾರೆ. ಪ್ರೇಮ್ ಸಿನಿಮಾಗಳಲ್ಲಿ ಇರುವ ತಾಯಿ ಸೆಂಟಿಮೆಂಟ್ ಈ ಚಿತ್ರದಲ್ಲಿಲ್ಲ, ಫಾರ್ ಎ ಚೇಂಜ್ ಆ ಸೆಂಟಿಮೆಂಟ್ ತಂದೆ-ಮಗನಿಗೆ ಶಿಫ್ಟ್ ಆಗಿದೆ. ಮಹೇಂದ್ರ ಕ್ಯಾಮೆರಾ ವರ್ಕ್ ಈ ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್. ಸಾಂಗ್ಸ್, ಫೈಟ್ಸು ತುಂಬಾನೇ ರಿಚ್ ಆಗಿ ಬಂದಿವೆ.
ನಾಯಕ ರಾಣಾ ನೃತ್ಯ ಹೊಡೆದಾಟದಲ್ಲಿ ಬಹಳ ಇಷ್ಟವಾಗುತ್ತಾರೆ. ಮೂರು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿರೊ ರಾಣಾ ಕಥೆಗೆ, ಪಾತ್ರಕ್ಕೆ ಸರಿ ಹೊಂದಿದ್ದಾರೆ. ಅಭಿನಯದಲ್ಲಿ ಇನ್ನೊಂದಿಷ್ಟು ಸುಧಾರಣೆ ಬೇಕಿದೆ. ನಾಯಕಿ ರೀಷ್ಮಾ ನಾಣಯ್ಯ ಮುದ್ದು ಮುದ್ದಾಗಿ ಕಾಣಿಸಿಕೊಂಡು, ಆನಂತರ ಕೋಮಾದ ಗಂಭೀರ ಪಾತ್ರದಲ್ಲೂ ಇಷ್ಟವಾಗ್ತಾರೆ. ಮತ್ತೊಬ್ಬ ನಾಯಕಿ ರಚಿತಾರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಧಮ್, ಎಣ್ಣೆ ಹೊಡೆಯೊ ಹುಡುಗಿಯಾಗಿ ಸಿನಿಮಾದ ಮೊದಲ ಹಾಡಿನಲ್ಲೇ ಲಿಪ್ ಲಾಕ್‌ನಲ್ಲಿ ಕಾಣಿಸಿಕೊಂಡು ಹುಬ್ಬೇರುವಂತೆ ಮಾಡಿದ್ದಾರೆ. ಇದನ್ನ ಬಿಟ್ಟರೆ ಚಿತ್ರದಲ್ಲಿ ರಚಿತಾ ರಾಮ್ ಪಾತ್ರಕ್ಕೂ ಮಹತ್ವ ಇದೆ. ಅಫ್‌ಕೋರ್ಸ್ ಅದನ್ನ ಅವರು ಸರಿಯಾಗಿ ನಿಭಾಯಿಸಿದ್ದಾರೆ. ದಿ ಗ್ರೇಟ್ ಲಾಯರ್ ಆಗಿ ಚರಣ್‌ರಾಜ್, ಯುದ್ಧಕಾಂಡ ಸಿನಿಮಾದ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಪಾತ್ರವನ್ನ ಹೋಲುವಂತೆ ಕಾಣುತ್ತಾರೆ. ಶಿಷ್ಯ ದೀಪಕ್ ಪೊಲೀಸ್ ಅಧಿಕಾರಿಯಾಗಿ ಚೇಸಿಂಗ್ ದೃಶ್ಯದಲ್ಲಿ ಗಮನ ಸೆಳೀತಾರೆ. ಆದರೆ ಪೊಲೀಸ್ ಧಿರೀಸನಲ್ಲೂ ಅವರು “ಕೇಸರಿ” ಶಾಲು ಹಾಕಿದ್ಯಾಕೆ ಎಂಬ ಪ್ರಶ್ನೆಗೆ ಚಿತ್ರದಲ್ಲಿ ಎಲ್ಲೂ ಉತ್ತರ ಇಲ್ಲ. ಕಾಮಿಡಿ ಕಿಲಾಡಿಗಳ ಮೂರ್ನಾಲ್ಕು ಜನ ಏಕ್ ಲವ್ ಯಾದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನ ತಂದೆಯಾಗಿ ಸುಪ್ರೀಮ್ ಹೀರೋ ಶಶಿಕುಮಾರ್ ಇಷ್ಟವಾಗ್ತಾರೆ. ಸುಚೇಂದ್ರ ಪ್ರಸಾದ್ ಸಾಮಾಜಿಕ ಪಿಡುಗೊಂದಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ನಾಯಕಿಯ ತಂದೆಯಾಗಿ ಕೊನೆಯಲ್ಲಿ ಗಮನ ಸೆಳೆಯುತ್ತಾರೆ. ಕಾಮಿಡಿ ಅಲ್ಲಲ್ಲಿ, ಅಷ್ಟಕ್ಕಷ್ಟೇ ಇದೆ. ಚಿತ್ರದ ನಿಜವಾದ ನಾಯಕ ಎಂದರೆ ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಹಾಡುಗಳು. ಎಲ್ಲ ಹಾಡುಗಳಿಗೂ ಗುನುಗುನಿಸುವ ಗುಣವಿದೆ.
ಒಟ್ಟಾರೆ ಸಿನಿಮಾ ಪಡ್ಡೆಗಳಿಗೆ ಇಷ್ಟವಾಗುತ್ತೆ. ಫ್ಯಾಮಿಲಿ ಆಡಿಯನ್ಸ್‌ಗೆ ಒಂಚೂರು ಕಷ್ಟವಾಗುತ್ತೆ. ===== ಪ್ರದರ್ಶನ: ಶಾರದಾ ಚಿತ್ರಮಂದಿರ, ಕೊಪ್ಪಳ.