ಮಹಾರಾಷ್ಟ್ರದಲ್ಲಿ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಲಾಶಯಗಳು ತುಂಬಿ ತುಳುಕುತ್ತಿದ್ದು, ಹೆಚ್ಚಿನ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಇದರ ಪರಿಣಾಮ ಚಿಕ್ಕೋಡಿ ತಾಲೂಕಿನಲ್ಲಿ ನದಿಗಳು ಉಕ್ಕಿಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.
ಮಹಾರಾಷ್ಟ್ರದ ಕೊಯ್ನಾ, ರಾಧಾನಗರಿ, ವಾರಣಾ, ರಾಜಾಪೂರ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚಿನ ನೀರನ್ನು ನದಿಗಳಿಗೆ ಹರಿಬಿಡಲಾಗುತ್ತಿದೆ. ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ 10 ಸಾವಿರ ಕ್ಯೂಸೆಕ್, ರಾಜಾಪೂರ ಜಲಾಶಯದಿಂದ 1 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ಕೃಷ್ಞಾ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳು ಉಕ್ಕಿಹರಿಯುತ್ತಿದ್ದು, ಚಿಕ್ಕೋಡಿ ತಾಲೂಕಿನ 4 ಸೇತುವೆಗಳು ಜಲಾವೃತ್ತವಾಗಿವೆ.
ಇಂಗಳಿ, ಮಾಂಜರಿ, ಯಡೂರ, ಚಂದೂರ, ಅಂಕಲಿ, ಸೌಂದತ್ತಿ ಸೇರಿದಂತೆ ನದಿತೀರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಬೋಟ್ ಗಳ ವ್ಯವಸ್ಥೆ ಮಾಡಿದ್ದು, ಎನ್ ಡಿಆರ್ ಎಫ್ ತಂಡದ ನಿಯೋಜನೆ ಮಾಡಲಾಗಿದೆ. ನದಿ ತೀರದತ್ತ ಜನರು ಹೋಗದಂತೆ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ನನಗೆ ಸಿಎಂ ಆಗೋಕೆ ಆತುರ ಇಲ್ಲ. ಜನರ ಸಮಸ್ಯೆಗಳ ಬಗ್ಗೆ ಅರ್ಥಮಾಡಿಕೊಂಡಿದ್ದೇನೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಳವಳ್ಳಿ ತಾಲ್ಲೂಕಿನ ಬೆಳಕವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಸಂಕಷ್ಟದಲ್ಲಿದ್ದಾರೆ. 30 ಸಾವಿರಕ್ಕೂ ಹೆಚ್ಚು ಜನ ಕೊವಿಡ್ ಗೆ ಬಲಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡಬಾರದು. ಸತ್ತ ಮನೆಯಲ್ಲಿ ರಾಜಕಾರಣ ಸಲ್ಲ ಎಂದು ಹೇಳಿದ್ದಾರೆ. ಸರ್ಕಾರಕ್ಕೆ ಒಳ್ಳೆಯ ಕೆಲಸ ಮಾಡಿ ಎಂದು ಸಲಹೆ ಕೊಟ್ಟಿದ್ದೆ. ಅದನ್ನು ಎಷ್ಟು ಸರಿಯಾಗಿ ಪಾಲಿಸದ್ರೋ ಗೊತ್ತಿಲ್ಲ ಎಂದು ಬಿಜೆಪಿಯಲ್ಲಿನ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದರು.
ನನಗೆ ಜಾತಿ ಇಲ್ಲ. ನಾಡಿನ ಜನತೆ ನನ್ನನ್ನು ಜಾತಿಯಿಂದ ಗುರುತಿಸಿಲ್ಲ. ಆರುವರೆ ಕೋಟಿ ಜನರು ನನ್ನ ಅಣ್ಣ ತಮ್ಮಂದಿರು. ಜಾತಿ ಹೆಸರಿನಿಂದ ಪಕ್ಷ ಕಟ್ಟೋಕೆ ಹೋಗಲಾರೆ ಎಂದು ಹೇಳಿದರು.
ಈ ನಾಡಿನಲ್ಲಿ ಜನ ಸಂಕಷ್ಟದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಐದು ಕಾರ್ಯಕ್ರಮ ಅನುಷ್ಠಾನ ಬಗ್ಗೆ ಚರ್ಚೆ ಮಾಡ್ತಿದ್ದೇನೆ. ಆ ಕಾರ್ಯಕ್ರಮಗಳನ್ನು ತರುವುದಕ್ಕೆ ನಾಡಿನ ಜನತೆ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಬೇಕು ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು. ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯ ಸರಿಪಡಿಸುವುದರ ಸವಾಲು ಸ್ವೀಕರಿಸುತ್ತೇನೆ. ಮುಂದಿನದನ್ನು ಜನರ ತೀರ್ಮಾನಕ್ಕೆ ಬಿಡುತ್ತೇನೆ ಎಂದರು.
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕಾರಣ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.
ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಲ್ಲಿ ಒಳಹರಿವು ಹೆಚ್ಚಳಗೊಂಡಿದ್ದು, ಗುರುವಾರ ಒಂದೇ ದಿನ 8 ಅಡಿಯಷ್ಟು ನೀರು ಏರಿಕೆಯಾಗಿದ್ದು, ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಬುಧವಾರ ಕೃಷ್ಣಾ ನದಿಯ ಒಳಹರಿವು 63 ಸಾವಿರ ಕ್ಯೂಸೆಕ್ ಇದ್ದದ್ದು, ಗುರುವಾರ 77 ಸಾವಿರ ಕ್ಯೂಸೆಕ್‍ಗೆ ಏರಿಕೆಯಾಗಿದೆ.
ನದಿಯಂತಾದ ಹೆದ್ದಾರಿ
ಬೆಳಗಾವಿ ಜಿಲ್ಲೆಯಾದ್ಯಂತ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದೆ. ಗುರುವಾರ ಬೆಳಗಾವಿಯ ಹೊರವಲಯ ವಂಟಮೂರಿ ಘಾಟ್ ಬಳಿ ರಾಷ್ಟ್ರೀಯ ಹೆದ್ದಾರಿ 4 ಜಲಾವೃತಗೊಂಡು ನದಿಯಂತೆ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರಿನ ರಭಸಕ್ಕೆ ಕಾರೊಂದು ಜಾರಿಹೋದ ಪ್ರಸಂಗ ನಡೆದಿದೆ.
ಕುಸಿದ ಮನೆ
ಖಡೇ ಬಜಾರದಲ್ಲಿ ಹಳೆಯ ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲ. ಇನ್ನು ಮಹಾಂತೇಶ ನಗರದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳು ತೀವ್ರ ಪರದಾಡುವಂತಾಗಿದೆ. ಬಳ್ಳಾರಿ ನಾಲಾ ನೀರು ನುಗ್ಗಿ ಯಳ್ಳೂರು ಗ್ರಾಮದ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ.
ಗ್ರಾಮಗಳ ಸಂಪರ್ಕ ಕಡಿತ
ಖಾನಾಪೂರ ತಾಲೂಕಿನ ಕಣಕುಂಬಿ, ಜಾಂಬೋಟ್ಟಿ, ಲೋಂಡಾ ಮತ್ತು ನೀಲಾವಡೆ ಬ್ರಿಜ್ ಹಾಗೂ ಹೆಬ್ಬಾನಟ್ಟಿ ಬ್ರಿಜ್ ಗಳ ಮೇಲೆ ನೀರು ಬಂದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಖಾನಾಪೂರ ತಾಲೂಕಿನಲ್ಲಿ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ನೀಲಾವಡೆ, ಅಂಬೋಲಿ, ಕಬನಾಳ್ಳಿ ಹೆಬ್ಬಾನಟ್ಟಿ ಗ್ರಾಮಗಳಿಗೂ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಭಾನುವಾರ ರಾತ್ರಿ ರೌಡಿ ಶೀಟರ್ ಮುತ್ತು ಅಲಿಯಾಸ್ ಗೋವಿಂದಪ್ಪ ಯಲ್ಲಪ್ಪ ಚಲವಾದಿಯ ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು, ರೌಡಿ ಶೀಟರ್ ಪ್ರಕಾಶ್ ಕೋರಿಶೆಟ್ಟರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಇಂದು ಎಸ್ಪಿ ಕಚೇರಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್, ಕೊಲೆ ನಂತರ ಆರೋಪಿಗಳ ಬಂಧನಕ್ಕೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರಿಗೆ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಲಾಗಿತ್ತು.
ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರು, ಶಹರ ಠಾಣೆ ಇನ್ಸ್‌ಪೆಕ್ಟರ್ ಪಿ ವಿ ಸಾಲಿಮಠ, ಬೆಟಗೇರಿ ಸಿಪಿಐ ಬಿ ಜಿ ಸುಬ್ಬಾಪೂರಮಠ, ಶಹರ ಠಾಣೆಯ ಪಿಎಸ್ಐ ಗಿರಿಜಾ ಜಕ್ಕಲಿ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡು ಮೂರು ತಂಡಗಳು ಆರೋಪಿಗಳ ಹೆಡಮುರಿ ಕಟ್ಟಿ ಕೊಲೆಯ ಬಗ್ಗೆ ಬಾಯಿ ಬಿಡಿಸಿದ್ದಾರೆ.
ಸಂಶಯಾಸ್ಪದವಾಗಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಸಿಮೆಂಟ್ ವ್ಯಾಪಾರಿ, ರೌಡಿ ಶೀಟರ್, ಬಯಲು ಆಂಜನೇಯ ದೇವಸ್ಥಾನದ ಬಳಿ ನಿವಾಸಿ ಪ್ರಕಾಶ್ @ ಫಕ್ಕೀರೇಶ್ @220 ಫಕ್ಕ್ಯಾ ತಂದೆ ಬಸವರಾಜ್ ಕೋರಿಶೆಟ್ಟರ್, ವಿವೇಕಾನಂದ ನಗರದ ಪ್ರವೀಣ್ @ ಪವನ್ ಯಮನಪ್ಪ ಸಕ್ರಿ, ಇನ್ಬೊಬ್ಬ ಹೊಟೇಲ್ ವೊಂದರಲ್ಲಿ ಸಪ್ಲಾಯರ್ ಆಗಿದ್ದ ಕಮ್ಮಾರ ಸಾಲಿನ ಅಮೀರಸೋಹೈಲ್ ಸುಭಾನಸಾಬ್ ನದಾಫ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕೊಲೆಗೆ ಬಳಸಿದ ಎರಡು ಚಾಕು ಹಾಗೂ ಡಿಯೋ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.
ಕೊಟ್ಟ ಹಣ ಕೇಳಿದಾಗ ಮುತ್ತು ಚಲವಾದಿ ಸತಾಯಿಸಿದ್ದಲ್ಲದೇ ನಿನ್ನನ್ನೇ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಕ್ಕೆ ಪ್ರಕಾಶ್ ಕೋರಿಶೆಟ್ಟರ್ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನೊಬ್ಬ ಆರೋಪಿ ಪ್ರವೀಣ್ ಸಕ್ರಿಗೆ ಪದೇ ಪದೇ ಜೀವ ಬೆದರಿಕೆ ಹಾಕುತ್ತಿದ್ದ ಆ ಕಾರಣಕ್ಕಾಗಿ ನಾನು ಕೊಲೆ ಮಾಡಿದ್ದೇನೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಯತೀಶ್ ಎನ್ ಮಾಹಿತಿ ನೀಡಿ ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದರು.
ಅಮೀರಸೋಹೈಲ್ ನದಾಫ್ ಎಂಬಾತ ಇಬ್ಬರು ಆರೋಪಿಗಳೊಂದಿಗೆ ಸಹಾಯ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆಯ ನಂತರ ಹುಲಕೋಟಿ ಬಳಿಯ ಟೆಕ್ಸ್ ಟೈಲ್ ಮಿಲ್ ಬಳಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಇನ್ಸ್‌ಪೆಕ್ಟರ್ ಸಾಲಿಮಠ ಬಂಧಿಸಿದ್ದಾರೆ.
ಕೊಲೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿದ್ದಕ್ಕಾಗಿ ಬೆಳಗಾವಿ ಉತ್ತರ ವಲಯದ ಐಜಿಪಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಇಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿ ಈ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಯಾಕೆ ಮಾಡಲು ಹೊರಟಿದೆ? ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ. ಸಿಎಂ ಯಡಿಯೂರಪ್ಪ ಬದಲಾವಣೆಗೆ ರಾಜ್ಯದ ಮಠಾಧೀಶರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿಯ ಹಿರಿಯ ನಾಯಕ ಅವರ ಪರ ಬ್ಯಾಟ್ ಬೀಸಿರಿವುದು ಬಿಎಸ್ ವೈ ಗೆ ಆನೆ ಬಲ ಬಂದಂತಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರೇ ಯಡಿಯೂರಪ್ಪ. ಅವರು ಬೇರೆ ನಾಯಕರಿಗೆ ಚಮಚಾ ಆಗದೇ ಕಾರ್ಯನಿರ್ವಹಿಸುತ್ತಿರುವುದರಿಂದ ಸಿಎಂ ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರ್ಯವನ್ನು ಕೆಲವರು ನಡೆಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನಿಗೆ ಮತ್ತೆ ಮನೆ ಕಡೆ ಬರಬೇಡ ಎಂದು ತಾಕೀತು ಮಾಡಿದ ವ್ಯಕ್ತಿಗೆ ಕಂದ್ಲಿಯಿಂದ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ಮುಂಡರಗಿ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದ ಮೈಲಾರಪ್ಪನ ಪತ್ನಿ ಹಾಗೂ ಅದೇ ಗ್ರಾಮದ ಗಾಳೆಪ್ಪ ಕಟಗಿ ನಡುವೆ ಅನೈತಿಕ ಸಂಬಂಧ ಇತ್ತು. ಎಷ್ಟೋ ಸಲ ಇಬ್ಬರಿಗೂ ಬುದ್ದಿ ಮಾತು ಹೇಳಿದರೂ ಕೇಳಿರಲಿಲ್ಲ.
ಇತ್ತೀಚೆಗೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಇದರಿಂದಾಗಿ ಕೆರಳಿದ ಮೈಲಾರಪ್ಪ ಪತ್ನಿಗೆ ಥಳಿಸಿ ಗಾಳೆಪ್ಪನಿಗೆ ಮತ್ತೊಮ್ಮೆ ತನ್ನ ಮನೆಯ ಕಡೆಗೆ ಬಾರದಂತೆ ತಾಕೀತು ಮಾಡಿದ್ದ. ಇದರಿಂದ ಕೋಪಗೊಂಡ ಗಾಳೆಪ್ಪ, ಮೈಲಾರಪ್ಪ ತನ್ನ ಮನೆಯಲ್ಲಿ ಮಲಗಿದ್ದಾಗ ಕಂದ್ಲಿಯಿಂದ ಕುತ್ತಿಗೆ ಹಾಗೂ ತಲೆಗೆ ಚುಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ ಪರಾರಿಯಾಗಿದ್ದ.
ಗಾಯಗೊಂಡ ಮೈಲಾರಪ್ಪನನ್ನು ಮನೆಯವರು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಯನ್ನು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊಡಸಿದ್ದರು.
ಈ ಕುರಿತು ಮೈಲಾರಪ್ಪನ ಸಹೋದರನ ಮಗ ಸರೆಪ್ಪ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಿಲ್ಲೆಯ ಬ್ಯಾಡಗಿಯಲ್ಲಿ ಮಾಜಿ ಶಾಸಕ ಸುರೇಶಗೌಡರಿಗೆ ಸೇರಿದ ಅತಿಥಿಗೃಹದಲ್ಲಿ ಮೂರು ದಿನಗಳಿಂದ ವಾಸ್ತವ್ಯ ಹೂಡಿದ್ದ ದರ್ಶನ್ ತೂಗುದೀಪ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಪ್ರಸಂಗ ನಡೆದಿದೆ.
ಸೋಮವಾರ ರಾತ್ರಿಯಿಂದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಈ ಸುದ್ದಿ ತಿಳಿದು ಇಂದು ಬೆಳಗ್ಗೆ ಸಾವಿರಾರು ಅಭಿಮಾನಿಗಳು ಸೇರಿದ್ದರಿಂದ ಅತಿಥಿ ಗೃಹದಿಂದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಕಾರು ಹತ್ತಿ ದರ್ಶನ ಹೊರಟಿದ್ದಾರೆ. ಅತಿಥಿ ಗೃಹದಿಂದ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮನೆಗೆ ಉಪಹಾರಕ್ಕೆ ತೆರಳಿದರು.
ನಟ ದರ್ಶನ ನಿರ್ಗಮನದ ನಂತರ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಎರಡು ದಿನಗಳ ಕಾಲ ವಿಶ್ರಾಂತಿಗಾಗಿ ಅತಿಥಿ ಗೃಹಕ್ಕೆ ಬಂದಿದ್ದರು. ವಿಶ್ರಾಂತಿ ಮುಗಿಸಿ ಮನೆಗೆ ಬಂದು ಉಪಹಾರ ಮುಗಿಸಿ ಹೋದರು. ಮೈಸೂರು, ಬೆಂಗಳೂರು ಭಾಗದಲ್ಲಿ ಗಲಾಟೆ ಆಗುತ್ತದೆ ಅಂದುಕೊಂಡು ಇಲ್ಲಿಗೆ ಬಂದಿದ್ದರು. ವಾಸ್ತವ್ಯ ಯಾರಿಗೆ ಗೊತ್ತಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದರು ಎಂದು ಪ್ರತಿಕ್ರಿಯಿಸಿದರು.
ಬೀದರ್ ನಗರದ ಮಾರ್ಕೆಟ್ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಮನೆಯೊಂದರ ಮೇಲೆ ದಾಳಿ ನಡೆಸಿ 3,17,709 ಲಕ್ಷ ರೂ. ಮೌಲ್ಯದ 1.58 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೀದರ್ ನಗರದ ಕಾನನ ಕಾಲೋನಿ ಮನೆಯೊಂದರಲ್ಲಿ ಭಾರಿ ಪ್ರಮಾಣದಲ್ಲಿ ಗಾಂಜಾ ಸಂಗ್ರಹಿಸಿದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಗಾಂಜಾ ಸಂಗ್ರಹಿಸಿಟ್ಟಿದ್ದ ಆರೋಪಿ ಮಹ್ಮದ್ ಆರೀಫ್ ಎಂಬಾತನನ್ನು ಬಂಧಿಸಿದ್ದು, ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಕ್ಕದ ತೆಲಂಗಾಣ ರಾಜ್ಯದಿಂದ ಗಾಂಜಾ ತಂದು ಸ್ಟಾಕ್ ಮಾಡಿರುವ ಶಂಕೆಯಿದೆ ಎಂದರು. 3,17,709 ಲಕ್ಷ ರೂ. ಮೌಲ್ಯದ 1.58 ಕ್ವಿಂಟಾಲ್ ಗಾಂಜಾ ಹಾಗೂ ಸಾಗಾಟಕ್ಕೆ ಬಳಸುವ ಸ್ಕಾರ್ಪಿಯೋ ವಾಹನ, ಫೋರ್ಡ್ ಕಂಪನಿ ಕಾರು ಮತ್ತು ಆಟೋ ವಾಹನ ಜಪ್ತಿ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳಾದ ಹೆಚ್ಚುವರಿ ಎಸ್ಪಿ ಗೋಪಲ ಕೃಷ್ಣ, ಡಿಎಸ್ಪಿ ಕೆ.ಎಂ ಸತೀಶ್ ಸಿಪಿಐ ಶ್ರಿಕಾಂತ ಅಲ್ಲಾಪೂರೆ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಮಹಾಮಾರಿಗೆ ವರುಣ ಕ್ಷೇತ್ರದಲ್ಲಿ 120ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಸಹಾಯಹಸ್ತ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಗ್ರಾ.ಪಂ ಮಟ್ಟದಿಂದಲೂ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸದ್ಯದ ಮಾಹಿತಿ ಪ್ರಕಾರ ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ 120ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ ಎಂದು ಹೇಳಿದರು.
ವರುಣ ಕ್ಷೇತ್ರದಲ್ಲಿ ಮೈಸೂರು, ಟಿ. ನರಸೀಪುರ, ನಂಜನಗೂಡು ತಾಲೂಕುಗಳು ಒಳಗೊಂಡಿದ್ದು,ಶಾಸಕ ಯತೀಂದ್ರ ಅವರು, ಕೊರೊನಾಗೆ ಬಲಿಯಾದ ಪ್ರತಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದಾರೆ.