ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತಮಿಳು ಚಿತ್ರರಂಗಕ್ಕೆ ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಹೊಸದಾಗಿ ಬಿಡುಗಡೆಯಾಗುವ ಸಿನಿಮಾಗಳಿಗೆ ಮೊದಲ ವಾರ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಸರ್ಕಾರ ಅಧಿಕೃತ ಅನುಮತಿ ನೀಡಿದೆ.
ಚಿತ್ರರಂಗದ ಪ್ರತಿನಿಧಿಗಳು ಮುಖ್ಯಮಂತ್ರಿ ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಮಂಡಿಸಿದ್ದ ಬೆನ್ನಲ್ಲೇ ಈ ನಿರ್ಧಾರ ಪ್ರಕಟವಾಗಿದೆ. ಚಿತ್ರೋದ್ಯಮದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ‘ತಮಿಳುನಾಡು ಸಿನಿಮಾ ಥಿಯೇಟರ್ಸ್ ರೆಗ್ಯುಲೇಶನ್’ ನಿಯಮಾವಳಿಗೆ ತಿದ್ದುಪಡಿ ತಂದಿದೆ.
ಈ ನಿರ್ಧಾರಕ್ಕೆ ನಟ ವಿಶಾಲ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ, “ಚಿತ್ರರಂಗದ ಸಂಕಷ್ಟವನ್ನು ಅರ್ಥಮಾಡಿಕೊಂಡು ತೆಗೆದುಕೊಂಡ ಈ ನಿರ್ಧಾರಕ್ಕೆ ಧನ್ಯವಾದಗಳು. ಜನಪರ ಆಡಳಿತದ ಸಂಕೇತ ಇದು” ಎಂದು ತಿಳಿಸಿದ್ದಾರೆ.
ಹೊಸ ತಮಿಳು ಸಿನಿಮಾಗಳಿಗೆ ಬಿಡುಗಡೆಯಾದ ದಿನದಿಂದ ಏಳು ದಿನಗಳವರೆಗೆ ದಿನಕ್ಕೆ ಐದು ಪ್ರದರ್ಶನಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಶನಿವಾರ, ಭಾನುವಾರ, ಹಬ್ಬ ಹಾಗೂ ಸಾರ್ವಜನಿಕ ರಜಾದಿನಗಳಲ್ಲೂ ಇದೇ ನಿಯಮ ಜಾರಿಯಲ್ಲಿರಲಿದೆ.
ಚಿತ್ರರಂಗಕ್ಕೆ ಬಾಕ್ಸ್ ಆಫೀಸ್ ಮಟ್ಟದಲ್ಲಿ ದೊಡ್ಡ ಬೂಸ್ಟ್ ನೀಡುವ ಈ ತೀರ್ಮಾನವನ್ನು ಕಾಲಿವುಡ್ ವಲಯ ಸ್ವಾಗತಿಸಿದೆ.



