Home Blog Page 3262

ಕೋವಿಡ್ ಪರೀಕ್ಷೆಯೊಂದಿಗೆ ಗೋವಾಕ್ಕೆ ಬಸ್ ಸಂಚಾರ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆಯೊಂದಿಗೆ ನಗರದಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ಸುಗಳ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಈ ಬಸ್ಸುಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.

ಗೋವಾ ಸರ್ಕಾರದ ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಆ ರಾಜ್ಯಕ್ಕೆ ಪ್ರವೇಶಿಸುವ ಅನ್ಯ ರಾಜ್ಯಗಳ ಪ್ರಯಾಣಿಕರು 72 ಗಂಟೆಗಳ ಮುಂಚಿತವಾಗಿ ಪಡೆದಿರುವ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ನಮ್ಮ ರಾಜ್ಯದಿಂದ ನಿತ್ಯ ನೂರಾರು ಜನರು ಕೆಲಸ ಕಾರ್ಯಗಳಿಗಾಗಿ ಗೋವಾಕ್ಕೆ ತೆರಳುತ್ತಾರೆ. ಆದರೆ ಪ್ರಯಾಣಕ್ಕೆ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಬಹಳಷ್ಟು ತೊಂದರೆಯಾಗಿತ್ತು.

ಪರೀಕ್ಷೆ ಮಾಡಿಸಿಕೊಳ್ಳದೆ ತೆರಳುವವರಿಗೆ ಗೋವಾ ರಾಜ್ಯದ ಗಡಿಯಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿತ್ತು. ಅದಕ್ಕೆ 270 ರೂ.ಪಾವತಿಸಬೇಕಾಗಿತ್ತು. ಸೋಂಕು ದೃಢಪಟ್ಟರೆ ಪ್ರವೇಶ ನಿರಾಕರಿಸಲಾಗುತ್ತಿತ್ತು. ಇದರಿಂದ ಅಲ್ಲಿಯವರೆಗೂ ಪ್ರಯಾಣ ಮಾಡಿದವರು ತೀವ್ರ ಸಂಕಷ್ಟ ಅನುಭವಿಸಬೇಕಾಗಿತ್ತು. ಅಂತಹವರ ಅನುಕೂಲಕ್ಕಾಗಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.

ನೆಗೆಟಿವ್ ವರದಿ ಇರುವ ಪ್ರಯಾಣಿಕರಿಗೆ ಗೋವಾಕ್ಕೆ ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ವಿಶೇಷ ಬಸ್ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಗೋವಾಕ್ಕೆ ಹೋಗುವ ಪ್ರಯಾಣಿಕರು ಬೆಳಗ್ಗೆ ೧೦ ಗಂಟೆಯ ಒಳಗೆ ಗೋಕುಲ ರಸ್ತೆ ಬಸ್ ನಿಲ್ದಾಣಕ್ಕೆ ಬರಬೇಕು. ಅಲ್ಲಿ ಅವರಿಗೆ ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಲು ತಾಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಯಾಣಿಕರಿಗೆ ಮೊದಲು ರಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲಾಗುತ್ತದೆ. ಅದರಲ್ಲಿ ನೆಗೆಟಿವ್ ವರದಿ ಬಂದವರಿಗೆ ಮಾತ್ರವೇ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿ ಮುಂದಿನ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸೋಂಕು ದೃಢಪಟ್ಟರೆ ಪ್ರಯಾಣಕ್ಕೆ ಅನುಮತಿ ನೀಡುವುದಿಲ್ಲ.

ಲಾಕ್‌ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿ ನಿತ್ಯ ಪಣಜಿಗೆ ಒಂದು ರಾಜಹಂಸ ಮತ್ತು 8 ವೇಗದೂತ ಬಸ್, ವಾಸ್ಕೋಗೆ 1 ಮತ್ತು ಮಡಗಾಂವ್‌ಗೆ 1 – ಒಟ್ಟು 11 ಬಸ್ಸುಗಳು ಸಂಚರಿಸುತ್ತಿದ್ದವು. ಕೋವಿಡ್ ಎರಡನೆ ಅಲೆ ಲಾಕ್‌ಡೌನ್ ಕಾರಣದಿಂದಾಗಿ ಏಪ್ರಿಲ್ 27ರಿಂದ ಈ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಭಾಗಶಃ ನಿರ್ಬಂಧಗಳ ತೆರವು ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಪಣಜಿಗೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಬಸ್ಸುಗಳು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಸಂಚರಿಸುತ್ತವೆ. ಪ್ರಯಾಣಿಕರ ಬೇಡಿಕೆ ಗಮನಿಸಿ ಮುಂದಿನ ದಿನಗಳಲ್ಲಿ ವಾಸ್ಕೋ ಮತ್ತು ಮಡಗಾಂವಗೆ ಬಸ್ ಗಳನ್ನು ಓಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾರಿಗೆ ಡಿಕ್ಕಿ ಹೊಡೆದ ಅಂಬ್ಯುಲೆನ್ಸ್; ಅಂಬ್ಯುಲೆನ್ಸ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ!

ವಿಜಯಸಾಕ್ಷಿ ಸುದ್ದಿ, ಗದಗ

ಕುಡಿತದ ಅಮಲಿನಲ್ಲಿ ಅಂಬ್ಯುಲೆನ್ಸ್ ಚಾಲನೆ ಮಾಡಿ ಕಾರಿಗೆ ಡಿಕ್ಕಿ ಹೊಡೆಸಿದ ಚಾಲಕನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗದಗ ನಗರದ ಮಲ್ಲಸಮುದ್ರ ಬಳಿ ನಡೆದಿದೆ.
ಘಟನೆಯಲ್ಲಿ ಕಾರು ಚಾಲಕ ಗೋವಿಂದಪ್ಪ ಲಮಾಣಿಗೆ ಗಂಭೀರ ಗಾಯವಾಗಿದೆ.

ಶಿರಹಟ್ಟಿ ಕಡೆಗೆ ಹೊರಟಿದ್ದ ಅಂಬ್ಯುಲೆನ್ಸ್ ಡಿಕ್ಕಿಯಾಗಿದೆ. ಪಾನಮತ್ತನಾಗಿ ಅಂಬ್ಯುಲೆನ್ಸ್ ಚಲಾಯಿಸುತ್ತಿದ್ದ ಚಾಲಕ ವಿಶ್ವನಾಥ್ ಬೋರಸೆಟ್ಟಿಯ ನಿರ್ಲಕ್ಷ್ಯ ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಿದ ಸ್ಥಳೀಯರು, ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇನ್ನೋರ್ವ ಸ್ನೇಹಿತನೂ ನಶೆಯಲ್ಲೇ ಅಂಬ್ಯುಲೆನ್ಸ್ ಓಡಿಸಿ, ಘಟನೆಗೆ ಕಾರಣನಾಗಿದ್ದಾನೆ.

ಘಟನೆ ಬಳಿಕ ಸ್ಥಳಕ್ಕೆ ಬಂದ ಹೈವೇ ಪೊಲೀಸರು ಅಂಬ್ಯುಲೆನ್ಸ್ ಚಾಲಕನನ್ನ ವಶಕ್ಕೆ ಪಡೆದು, ಗ್ರಾಮೀಣ ಠಾಣೆಗೆ ಕರೆದೊಯ್ದಿದ್ದಾರೆ. ಗಾಯಾಳು ಕಾರು ಚಾಲಕ ಗೋವಿಂದಪ್ಪ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಅಂಬ್ಯುಲೆನ್ಸ್ ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ಸೇರಿದ್ದು, ಚಾಲಕ ವಿಶ್ವನಾಥ್ ಶಿರಹಟ್ಟಿ ಪಟ್ಟಣದ ನಿವಾಸಿಯಾಗಿದ್ದಾನೆ. ಘಟನೆಗೆ ಕಾರಣನಾದ ಚಾಲಕನ ಮೇಲೆ ಸ್ಥಳೀಯರು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ನಕಲಿ ಬಾಬಾಗೆ ಥಳಿತ ಪ್ರಕರಣ; ಗೂಂಡಾಗಿರಿ ಮೆರೆದಿದ್ದ ಐವರ ವಿರುದ್ಧ ಕೇಸ್

ವಿಜಯಸಾಕ್ಷಿ ಸುದ್ದಿ, ಗದಗ

ಮೈಮೇಲೆ ದೇವರು ಬರುತ್ತದೆ ಕೈ ನೋವು ವಾಸಿ ಮಾಡುವುದಾಗಿ ನಂಬಿಸಿ ವಂಚನೆ ಮಾಡಿದ ಹಾಗೂ ಧರ್ಮನಿಂದನೆ ಮಾಡಿದ್ದಾನೆಂದು ಆರೋಪಿಸಿ ಡೋಂಗಿ ಬಾಬಾನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆಗೆ ಸಂಬಂಧಿಸಿದಂತೆ, ಬಾಬಾನ ಪತ್ನಿ ಗದಗ ಗ್ರಾಮೀಣ ಠಾಣೆಯಲ್ಲಿ ಐವರ ವಿರುದ್ದ ದೂರು ದಾಖಲಿಸಿದ್ದಾರೆ.

ಕಳೆದ ಜು.12ರಂದು ಗದಗ ಎಸ್.ಎಂ.ಕೃಷ್ಣ ನಗರ ಕಾಲೊನಿ ನಿವಾಸಿ ಆಸೀಫ್ ಜಾಗಿರದಾರ ಎಂಬಾತ ತನ್ನ ಮೈಮೇಲೆ ದೇವರು ಬರುತ್ತದೆ. ನಿಮ್ಮ ಕೈ ನೋವು ವಾಸಿ ಮಾಡುವುದಾಗಿ ನಂಬಿಸಿ ಗದಗ ನಗರದ ಈರಣ್ಣ ನಿಂಗಪ್ಪ ಮುರ್ಲಾಪೂರ ಅವರಿಂದ 40 ಸಾವಿರ ರೂಪಾಯಿ ಹಣ ಪಡೆದು ಲಿಂಬೆ ಹಣ್ಣು, ಬೂದಿ, ಕೈಗೆ ಹಚ್ಚಲು ಎಣ್ಣೆ ನೀಡಿದ್ದರು. ಆದರೆ ಅವರು ಹೇಳಿದಂತೆ ಮಾಡಿದರೂ ಕೈ ನೋವು ವಾಸಿ ಆಗಿರಲಿಲ್ಲ.

ಇದನ್ನೂ ಓದಿ ಹಿಂದೂ ದೇವರ ಅವಹೇಳನ ಆರೋಪ; ನಕಲಿ ಬಾಬಾನಿಗೆ ಹಿಗ್ಗಾಮುಗ್ಗಾ ಥಳಿತ 

ಈ ಬಗ್ಗೆ ವಿಚಾರಿಸಲು ಗಂಗಿಮಡಿ ಆಶ್ರಯ ಕಾಲೊನಿಗೆ ಕರೆಸಿ ಆತನನ್ನು ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ಐದಾರು ಜನರು ಸೇರಿ ಸಾರ್ವಜನಿಕವಾಗಿ ರಸ್ತೆಯಲ್ಲಿ ಥಳಿಸಿ ಗೂಂಡಾಗಿರಿ ಪ್ರದರ್ಶನ ಮಾಡಿದ್ದರು. ಅದರ ವಿಡಿಯೋ ಕೂಡಾ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಕಲಿ ಬಾಬಾನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿಲಾಗಿತ್ತು.

ಈ ಕುರಿತು ಶಿವಾನಂದ ಕುರಿ ಎಂಬುವವರು ಗದಗ ಗ್ರಾಮೀಣ ಠಾಣೆಯಲ್ಲಿ ವಂಚನೆ ಹಾಗೂ ದೇವರ ನಿಂದನೆ ದೂರು ದಾಖಲಿಸಿದ್ದರು.

ಪ್ರತಿ ದೂರು ನೀಡಿದ ಪತ್ನಿ

ಥಳಿತಕ್ಕೊಳಗಾದ ಅಸೀಪ್ ಜಾಗಿರದಾರನ ಪತ್ನಿ ಫರಿದಾ ಜಾಗಿರದಾರ ಎಂಬುವವರು
ಶಿವಾನಂದ ಕುರಿ, ಮಹೇಶ ರೋಖಡೆ, ಈಶ್ವರ ಕಾಟವಾ, ಮಹಾಂತೇಶ ಪಾಟೀಲ ಹಾಗೂ ಪ್ರೇಮಾ ಗುಡಿ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ 1860 (u/s- 143, 147, 341, 323, 504, 506, 149)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿ ಬಹಿರಂಗ ಪ್ರಕರಣ; ತನಿಖಾ ವರದಿ ಸಲ್ಲಿಸಲು ಹೈ ಸೂಚನೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ರಚಿಸಲಾಗಿದ್ದ ಎಸ್ಐಟಿ ವಿರುದ್ಧ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಆರೋಪಿ ಮನವಿ ಮೇರೆಗೆ ಎಸ್ಐಟಿ ರಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿಚಾರಣೆಗೂ ಮುನ್ನ ತನಿಖಾ ವರದಿ ಪರಿಶೀಲಿಸುವುದು ಅಗತ್ಯವಿದೆ. ಎಲ್ಲಾ ಎಫ್ಐಆರ್ ಗಳ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವಂತೆ ಎಜಿ ಗೆ ನ್ಯಾಯಾಲಯ ಸೂಚಿಸಿದೆ.

ಜುಲೈ 19ರಂದು ಮುಚ್ಚಿದ ಲಕೋಟೆಯಲ್ಲಿ ತನಿಖೆ ಮುಕ್ತಾಯದ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ 20ಕ್ಕೆ ಮುಂದೂಡಿದೆ ಎಂದು ಎಜಿ ಪ್ರಭುಲಿಂಗ ನಾವದಗಿ ತಿಳಿಸಿದ್ದಾರೆ.

ಭೀಕರ ಅಪಘಾತ; ಸ್ಥಳದಲ್ಲೇ ಮೂವರ ಸಾವು

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಟಾಟಾ ಏಸ್ ವಾಹನ ಹಾಗೂ ಗೂಡ್ಸ್ ವಾಹನ ಮಧ್ಯೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ವಿಜಯಪುರ ತಾಲೂಕಿನ ಅರಕೇರಿ ಬಳಿ ನಡೆದಿದೆ.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಗ್ರಾಮದ ನಿವಾಸಿಗಳಾದ ಶ್ರೀಶೈಲ ಮೇತ್ರಿ, ಬುದ್ದಯ್ಯ ಹಿರೇಮಠ, ಪ್ರತೀಕ‌(ಪಿಂಟೂ) ಹಿರೇಮಠ ಮೃತ ದುರ್ದೈವಿಗಳು. ಸಿದ್ದಯ್ಯ ಹಿರೇಮಠ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಸಂಚಾರ ಸುಗಮಗೊಳಿಸಿದರು. ಪಿಎಸ್ಐ ಜಿ. ಎಸ್ ಉಪ್ಪಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ.

ವೀರೇಂದ್ರ ಪಾಟೀಲರ ಕಾಲದ ಗತವೈಭವ ಮರಳಿಸಲು ಪ್ರಯತ್ನ; ಪಾಟೀಲ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಬಗ್ಗೆ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ. ವಿರೇಂದ್ರ ಪಾಟೀಲ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ 186 ಸ್ಥಾನ ಪಡೆದುಕೊಂಡಿತ್ತು. ಆಗಿನ ಗತವೈಭವ ಮರಳಿಸಲು ಪ್ರಯತ್ನಿಸುತ್ತೇವೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಹೇಳಿದರು.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
2023ರ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿದ್ದೇವೆ ಎಂದರು.

ಯಡಿಯೂರಪ್ಪ ನಂತರ ಲಿಂಗಾಯತರ ಪ್ರಮುಖ ನಾಯಕ ಎಂ.ಬಿ.ಪಾಟೀಲ್ ರೆಂಬ ಸುದ್ದಿಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ನನಗೆ ನಾನೇ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾ..? ಜನ ಸರ್ಟಿಫಿಕೇಟ್ ಕೊಡಬೇಕಾಗುತ್ತೆ. ನಮಗೆ ನಾವೇ ಸ್ವಯಂ ಘೋಷಿತ ನಾನೇ ನಾಯಕ, ನೀನೇ ನಾಯಕ, ನಾನೇ ಸಿಎಂ, ನೀನೇ ಸಿಎಂ ಎಂದು ಆಗುವುದಿಲ್ಲ. ಜನ ಏನು ಬಯಸುತ್ತಾರೆ ಅದು ಆಗುತ್ತದೆ. ಜನ ಹೇಳಿದ್ರೆ ಮಾತ್ರ ನಾಯಕರಾಗಲು ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಲಿಂಗಾಯತರಲ್ಲಿ ಯಡಿಯೂರಪ್ಪ ಅತ್ಯಂತ ಎತ್ತರದ ನಾಯಕರು. ಕಾಂಗ್ರೆಸ್‍ನಲ್ಲಿ ಪ್ರಕಾಶ ಹುಕ್ಕೇರಿ, ಎ.ಬಿ.ಪಾಟೀಲ್ ಅವರು ನಮಗಿಂತ ಬಹಳ ಹಿರಿಯ ನಾಯಕರಿದ್ದಾರೆ ಎಂದು ಹೇಳಿದರು. ಮುಂಬರುವ ಸಿಎಂ ವಿಚಾರಕ್ಕೆ ಪ್ರತಿಕ್ರಯಿಸಿದ ಎಂ.ಬಿ.ಪಾಟೀಲ್, ಯಾರು ಸ್ವಯಂ ಘೋಷಿತ ಸಿಎಂ ಆಗಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಸಿಎಂ ಆಗಲು ಮೊದಲು ಜನಾದೇಶ ಬರಬೇಕು. ಕನಿಷ್ಠ ಪಕ್ಷ 125 ಸ್ಥಾನ ಗೆಲ್ಲಬೇಕು. ನಮ್ಮ ಟಾರ್ಗೆಟ್ 150 ಇದೆ. 125 ಗೆದ್ದು ಬಹುಮತ ಪಡೆಯಬೇಕು. ಆಮೇಲೆ ವೀಕ್ಷಕರು ಬರುತ್ತಾರೆ, ಶಾಸಕರ ಅಭಿಪ್ರಾಯ ಪಡೆದುಕೊಂಡು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.

ಮಾಗಡಿ ಜಿ. ಪಂ. ಕ್ಷೇತ್ರದಿಂದ ಪುತ್ರ ಕಣಕ್ಕೆ; ಗೆಲ್ಲಿಸಲು ಶಾಸಕ ರಾಮಣ್ಣ ಲಮಾಣಿ ಮನವಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಶಿರಹಟ್ಟಿ ತಾಲೂಕಿನ ಮಾಗಡಿ ಕ್ಷೇತ್ರದಿಂದ ಪುತ್ರ ಮಹೇಶ್ ಲಮಾಣಿ ಸ್ಪರ್ಧೆ ಮಾಡುತ್ತಿದ್ದು, ಈ ಬಾರಿ ಮಹೇಶ್ ನಿಗೆ ಆಶೀರ್ವದಿಸಬೇಕೆಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಅವರು ಶುಕ್ರವಾರ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಪೂಜೆ ನೆರವೇರಿಸಿ ಗ್ರಾಮಪಂಚಾಯಿತಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾನು ಕೂಡ ಮಾಗಡಿ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಆಯ್ಕೆಯಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರ ಫಲವಾಗಿ ಎಲ್ಲ ಮುಖಂಡರು ನನ್ನನ್ನು ಒಮ್ಮತದಿಂದ ಶಾಸಕನಾಗಿ ಸತತವಾಗಿ ಎರಡು ಬಾರಿ ಆಯ್ಕೆ ಮಾಡಿದ್ದೀರಿ. ಆದ್ದರಿಂದ ಈ ಬಾರಿ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಪುತ್ರ ಮಹೇಶ್ ಲಮಾಣಿ ಅವರನ್ನು ಸಹ ಜಿಲ್ಲಾ ಪಂಚಾಯತಿ ಸದಸ್ಯನಾಗಿ ಆಯ್ಕೆ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಹ ಆಯ್ಕೆ ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮಾಗಡಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಹಳೇ ಮೊಬೈಲ್ ಬ್ಯಾಟರಿ ಸ್ಫೋಟ: ಬಾಲಕನ ಬೆರಳು ಕಟ್

 ವಿಜಯಸಾಕ್ಷಿ ಸುದ್ದಿ, ಹಾವೇರಿ

ಆಟವಾಡುತ್ತಿದ್ದಾಗ ಮೊಬೈಲ್ ನ ಹಳೇ ಬ್ಯಾಟರಿ ಸ್ಫೋಟಗೊಂಡು 10 ವರ್ಷದ ಬಾಲಕನ ಬೆರಳುಗಳು ಛಿದ್ರಗೊಂಡಿದ್ದು, ಮುಖಕ್ಕೆ ಗಂಭೀರವಾಗಿ ಗಾಯವಾಗಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

ಮನೆ ಪಕ್ಕದಲ್ಲಿ ಎಸೆದಿದ್ದ ಹಾಳಾಗಿದ್ದ ಮೊಬೈಲ್ ಬ್ಯಾಟರಿ ತೆಗೆದುಕೊಂಡು ಬಾಲಕ ಆಟವಾಡುತ್ತಿದ್ದ ವೇಳೆ ಸ್ಫೋಟಗೊಂಡಿದೆ.
ಬಾಲಕ ಕಾರ್ತಿಕ್ ನ ಮೂರು ಬೆರಳು ತುಂಡಾಗಿದ್ದು, ಮುಖಕ್ಕೆ ಗಾಯಗಳಾಗಿದೆ. ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತೀವ್ರ ಕುತೂಹಲ ಕೆರಳಿಸಿದ ಸಿಎಂ ದೆಹಲಿ ಭೇಟಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಿಎಂ ಬಿ.ಎಸ್. ಯಡಿಯೂರಪ್ಪ ದಿಢೀರ್ ದೆಹಲಿಗೆ ಹೊರಡಲು ಮುಂದಾಗಿದ್ದಾರೆ. ಕಳೆದ ಒಂದು ವರ್ಷದಿಂದ ಮುಖ ಮಾಡದಿದ್ದ ಬಿಎಸ್ ವೈ ಏಕಾಏಕಿ ಇಂದು ದೆಹಲಿಗೆ ಹೊರಟು ನಿಂತಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ದೆಹಲಿಗೆ ಪ್ರಯಾಣಿಸಲಿರುವ ಬಿಎಸ್ ವೈ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಕುರಿತಾಗಿ ರಾಷ್ಟ್ರೀಯ ನಾಯಕರ ಜತೆ ಚರ್ಚಿಸಲು ದೆಹಲಿ ಯಾತ್ರೆಗೆ ಮುಂದಾಗಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ. ಇದೆ ವೇಳೆ ರೆಬೆಲ್ ಶಾಸಕರ ವಿರುದ್ದ ಕ್ರಮಕ್ಕೆ ಸಿಎಂ ಒತ್ತಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿ ಇರುವಾಗಲೇ ಯಡಿಯೂರಪ್ಪ ದೆಹಲಿಗೆ ತೆರಳುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕೆಲವರ ಪ್ರಕಾರ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ವರಿಷ್ಠರ ಸಲಹೆ ಪಡೆಯಲಿದ್ದು, ಜತೆಗೆ ತಮ್ಮ ಸರ್ಕಾರದ ವಿರುದ್ದ ಹೇಳಿಕೆ ನೀಡುತ್ತಿರುವ ರೆಬೆಲ್ ಶಾಸಕರ ವಿರುದ್ದ ಶಿಸ್ತು ಕ್ರಮಕ್ಕೆ ಆಗ್ರಹಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ‌. ಆದರೆ, ವಿರೋಧಿ ಪಾಳೆಯದ ಪ್ರಕಾರ ಮುಖ್ಯಮಂತ್ರಿಯ ದೆಹಲಿ ಭೇಟಿ ನಿರ್ಣಾಯಕವಾಗಿದೆ.

ರಾಜ್ಯದಲ್ಲಿ ಕೊರೊನಾ ಸಂಕಟ ದೂರಾಗಿದ್ದು, ನಾಯಕತ್ವ ಬದಲಾವಣೆ ವಿಚಾರವಾಗಿ ಸ್ಪಷ್ಟ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಸಿಎಂ ಬಿಎಸ್ ವೈ ಆಪ್ತ ಶಾಸಕರ ನಿಯೋಗವನ್ನು ದೆಹಲಿಗೆ ಹೋಗಲು ಸಿದ್ಧತೆ ನಡೆಸಿದ್ದು, ಸರ್ಕಾರ ವಿರೋಧಿ ಹೇಳಿಕೆ ನೀಡುತ್ತಿರುವ ಸಿ.ಪಿ.ಯೋಗೀಶ್ವರ್, ಯತ್ನಾಳ ಹಾಗೂ ವಿಶ್ವನಾಥ ಅವರ ವಿರುದ್ದ ಕ್ರಮಕ್ಕೆ ಒತ್ತಾಯಿಸಲಿದೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಸಿಎಂ ಯಡಿಯೂರಪ್ಪ ದೆಹಲಿ ಭೇಟಿ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಅವರು ವಾಪಸ್ ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

1.5 ಲಕ್ಷ ಲಂಚ ಕೇಳಿದ ಕಮಿಷನರ್ ರಮೇಶ್ ಜಾಧವ್ ಅಂದರ್ ಯಾವಾಗ?; ಕುತೂಹಲ ‌ಮೂಡಿಸಿದ ತನಿಖೆ!

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ 36 ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಟ್ಟ ನಗರಸಭೆ ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಅವರನ್ನು ಎಸಿಬಿ ಪೊಲೀಸರು ಇನ್ನೂ ಬಂಧಿಸಿಲ್ಲ.

ಇದು ಗದಗ ಬೆಟಗೇರಿ ಅವಳಿ ನಗರದ ಜನತೆಯ ಊಹಾಪೋಹಗಳಿಗೆ ಕಾರಣವಾಗಿದೆ. ಹತ್ತು ಸಾವಿರ ಲಂಚ ಪಡೆದ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅನಿಲಕುಮಾರ್ ಮುದ್ದಾ ಅವರನ್ನು ಗುರುವಾರ ರಾತ್ರಿ ಬಂಧನ ಮಾಡುವ ಮೂಲಕ ಪ್ರಕರಣದ ಎರಡನೇ ಆರೋಪಿಯನ್ನು ಬಂಧಿಸಿದಂತಾಗಿದೆ. ಆದರೆ ದೊಡ್ಡ ಮೊತ್ತ ಕೇಳಿದ, ಅದೂ ಸಾಕ್ಷಿ, ಆದಾರ ಇದ್ದಾಗಲೂ ಆಯುಕ್ತರ ಬಂಧನ ವಿಳಂಬವಾಗಲು, ವಿಚಾರಣೆಯ ನೆಪದಲ್ಲಿ ಕಾಲಹರಣ ಮಾಡುವ ತನಿಖೆಯ ಕಾರ್ಯವೈಖರಿಗೆ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಬರೊಬ್ಬರಿ 1.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ನಗರಸಭೆ ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಅವರನ್ನು ಇದುವರೆಗೂ ಬಂಧಿಸದ ಕಾರಣ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ.

ನಗರಸಭೆ ಆಯುಕ್ತರು ವಿಜಯಪುರದಿಂದ ವರ್ಗಾವಣೆ ಆಗಿ ಬಂದಿದ್ದೆ ದೊಡ್ಡ ವಿವಾದ ಆಗಿತ್ತು. ಆಯುಕ್ತರ ಹುದ್ದೆಗೆ ಅರ್ಹತೆ ಇರದಿದ್ದರೂ ರಾಜಕಾರಣಿಯೊಬ್ಬರ ಸ್ವಹಿತಾಸಕ್ತಿಯಿಂದ ಕುರ್ಚಿಗೆ ಬಂದು ಕುಳಿತಿದ್ದು ಗದಗನ ಜನತೆ ಮರೆತಿಲ್ಲ. ಹೀಗಾಗಿಯೇ ಈ ಪ್ರಕರಣದಲ್ಲೂ ರಾಜಕಾರಣಿಗಳು ಒತ್ತಡ ಹಾಕಿ ಬಂಧಿಸದಂತೆ ನೋಡಿಕೊಳ್ಳುವ ಹಾಗೂ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ಏನಾದರೂ ಯತ್ನ ನಡೆಯುತ್ತಿದೆಯಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರ್ತಾ ಇದೆ.

ಇದನ್ನೂ ಓದಿ ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ; ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಇಇ ಬಂಧನ

ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿ ಗದಗನಲ್ಲೂ ಛಾಪು ಮೂಡಿಸಿದ್ದ ನ್ಯಾಮಗೌಡ ಸಾಹೇಬರು ಈಗ ಎಸಿಬಿಯ ಎಸ್ಪಿಯಾಗಿದ್ದಾರೆ. ಅವರು ಈ ಪ್ರಕರಣದಲ್ಲಿ ಯಾವುದೇ ಒತ್ತಡ ಬಂದರೂ ಮಣಿಯಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ.

ಈ ಕುರಿತು ಎಸಿಬಿ ಎಸ್ಪಿ ನ್ಯಾಮಗೌಡ ಅವರು ವಿಜಯಸಾಕ್ಷಿಗೆ ಪ್ರತಿಕ್ರಿಯೆ ನೀಡಿದ್ದು, ಗದಗ ನಗರಸಭೆ ಆಯುಕ್ತರ ಪ್ರಕರಣದಲ್ಲಿ ಯಾವುದೇ ಒತ್ತಡ ಇಲ್ಲ. ಎಲ್ಲವೂ ಕಾನೂನಿನ ಪ್ರಕಾರ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ ಲಂಚ ಸ್ವೀಕಾರ ಪ್ರಕರಣ, ಅನಿಲ್ ಮುದ್ದಾ ಅಂದರ್; ಎಸಿಬಿಯಿಂದ ಮುಂದುವರೆದ ರಮೇಶ್ ಜಾಧವ್ ವಿಚಾರಣೆ

ಪ್ರಕರಣ ಹಿನ್ನೆಲೆ

ಹಳೆಯ ಘನತ್ಯಾಜ್ಯ ವಿಲೇವಾರಿ ಘಟಕದಿಂದ ಹೊಸ ಘಟಕಕ್ಕೆ ಮಣ್ಣು ಸಾಗಾಟ ಮಾಡಿದ ಬಿಲ್ ಪಾಸು ಮಾಡಲು ನಗರಸಭೆ ಎಇಇ ವರ್ಧಮಾನ್ ಹುದ್ದಾರ್, ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಹಾಗೂ ನಗರಾಭಿವೃದ್ಧಿ ಕೋಶದ ಕಾರ್ಯ ಪಾಲಕ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಲಂಚದ ಬೇಡಿಕೆ ಇಟ್ಟಿದ್ದರು.

ಅನಿಲಕುಮಾರ್ ಮುದ್ದಾ ಅವರಿಗೆ ಜುಲೈ 05 ರಂದು 10 ಸಾವಿರ ಹಣ ಪಡೆದಿದ್ದರು. ನಗರಸಭೆ ಆಯುಕ್ತ ರಮೇಶ್ ಜಾಧವ್ ಕೂಡ 1.5 ಲಕ್ಷಕ್ಕೆ‌ ಬೇಡಿಕೆ ಇಟ್ಟಿದ್ದರು. ಹಾಗೆಯೇ ನಗರಸಭೆಯ ಎಇಇ ವರ್ಧಮಾನ್ ಹುದ್ದಾರ್ 40 ಸಾವಿರ ಹಣ ಕೇಳಿದ್ದರು ಎಂದು ಹೇಳಲಾಗುತ್ತದೆ. ಇದರಿಂದ ನೊಂದ ಗುತ್ತಿಗೆದಾರ ಅಬ್ದುಲ್ ಸಲಾಮ್ ಮನಿಯಾರ್ ಎಸಿಬಿ‌ಗೆ ದೂರು ನೀಡಿದ್ದರು.

ಆ ಪ್ರಕಾರ ಬುಧವಾರ ಸಂಜೆ 25 ಸಾವಿರ ಹಣ ಪಡೆಯುತ್ತಿದ್ದಾಗ ಎಇಇ ಹುದ್ದಾರ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿಲಾಗಿತ್ತು.

ಹುದ್ದಾರ್ ಅವರ ಬಂಧನದ ನಂತರ ನಗರಸಭೆ ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಹಾಗೂ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಅವರನ್ನು ಎಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ಗುರುವಾರ ರಾತ್ರಿ ಅನಿಲಕುಮಾರ್ ಮುದ್ದಾ ಅವರನ್ನು ಬಂಧಿಸಲಾಗಿದೆ.

error: Content is protected !!