Home Blog Page 3269

10 ದಿನಗಳಲ್ಲಿಯೇ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇನ್ನು ಕೇವಲ 10 ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಲಾಗುವುದು ಎಂದು ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ. ಅಲ್ಲದೇ, ಆಗಷ್ಟ್ ಒಳಗೆ 360 ಘಟಕಗಳಿಂದ ಆಮ್ಲಜನಕ ಉತ್ಪಾದನೆ ಸೇರಿದಂತೆ 2,800 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ಸೋಮವಾರ ಒಂದೇ ದಿನ ರಾಜ್ಯದ 94 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ. ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಕೊರೊನಾ ಲಸಿಕೆಯ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಎಂಜಿನೀಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ಡಿಪ್ಲೋಮಾ, ಜಿಸಿಐಟಿ, ಐಟಿಐ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಚುರುಕಾಗಿ ಲಸಿಕೆ ಕೊಡಲಾಗುವುದು. ಮುಖ್ಯಮಂತ್ರಿಗಳ ಕೌಶಲ್ಯ ಯೋಜನೆ ಅಡಿ ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.

ಜೂನ್ ತಿಂಗಳಲ್ಲಿ 60 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಜುಲೈನಲ್ಲಿ ಇನ್ನೂ ಹೆಚ್ಚು ಕೊಡಲಾಗುವುದು. ಈಗಾಗಲೇ ಕೇಂದ್ರದಿಂದ ಉತ್ತಮವಾಗಿ ಲಸಿಕೆ ಪೂರೈಕೆ ಆಗುತ್ತಿದೆ. ಇಡೀ ದೇಶದಲ್ಲಿಯೇ ಲಸಿಕೆ ನೀಡುವಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ಸ್ನೇಹಿತರ ನಾಟಿ ಕೋಳಿ ಜಗಳ ಕೊಲೆಯಲ್ಲಿ ಅಂತ್ಯ!

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಕೋಳಿ ಊಟಕ್ಕೆ ಆಹ್ವಾನ ನೀಡಿದ್ದ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದ ಕೃಷ್ಣನಾಯ್ಕ (55) ಹತ್ಯೆಯಾದ ವ್ಯಕ್ತಿ. ಇದೇ ಗ್ರಾಮದ ರಂಗಪ್ಪ ಎಂಬ ವ್ಯಕ್ತಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ.

ಮೃತ ಕೃಷ್ಣನಾಯ್ಕ ಹಾಗೂ ಆರೋಪಿ ರಂಗಪ್ಪ ಕುಚುಕು ಗೆಳೆಯರಾಗಿದ್ದರು. ಇಬ್ಬರೂ ಸೇರಿಕೊಂಡು ಪ್ರತಿದಿನ ಮದ್ಯ ಸೇವಿಸುತ್ತಿದ್ದರು. ಜೂನ್ 23ರ ರಾತ್ರಿ ಇಬ್ಬರೂ ಮದ್ಯ ಸೇವೆನೆ ಮಾಡಿಕೊಂಡು ಮನೆಗೆ ಆಗಮಿಸಿದ್ದು, ಮನೆಯಲ್ಲಿ ರಾತ್ರಿ ಊಟಕ್ಕೆ ಕೋಳಿ ಸಾಂಬಾರು ಮಾಡುವಂತೆ ಕೃಷ್ಣನಾಯ್ಕ ಪತ್ನಿಗೆ ತಿಳಿಸಿದ್ದರು.
ಈ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿದ್ದ ಕೃಷ್ಣನಾಯ್ಕ ಹೊರಗಡೆ ಹೋಗಿ ಬರುವುದಾಗಿ ಸ್ನೇಹಿತ ರಂಗಪ್ಪನಿಗೆ ತಿಳಿಸಿ ಮತ್ತೆ ಮನೆಗೆ ಮರಳಿದ್ದನು. ಈ ಸಂದರ್ಭದಲ್ಲಿ ರಂಗಪ್ಪ ಕೋಳಿ ಸಾಂಬಾರನ್ನು ಸಂಪೂರ್ಣ ತಿಂದು ಕುಳಿತಿದ್ದನು. ಇದರಿಂದ ಕುಪಿತಗೊಂಡ ಕೃಷ್ಣನಾಯ್ಕ ಹಾಗೂ ರಂಗಪ್ಪನ ನಡುವೆ ಗದ್ದಲ ಉಂಟಾಗಿದೆ. ಪರಿಣಾಮ ರಂಗಪ್ಪ ಕೃಷ್ಣನಾಯ್ಕನಿಗೆ ಕುಡುಗೋಲಿನಿಂದ ಕೊಲೆಗೈದು ಪರಾರಿಯಾಗಿದ್ದ.

ಈ ಕುರಿತು ರಾಮಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾ ಚರಣೆ ಕೈಗೊಳ್ಳಲಾಗಿತ್ತು. ಘಟನೆಗೆ ಸಂಭಂದಿಸಿದಂತೆ ರಾಮಾಪುರ ಪೊಲೀಸರು ಆರೋಪಿಯನ್ನು ತಮಿಳುನಾಡಿನ ಹಂದಿಯೂರಿನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

7 ಐಎಎಸ್ ಅಧಿಕಾರಿಗಳ ವರ್ಗಾವಣೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯ ಸರ್ಕಾರ ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ತಕ್ಷಣದಿಂದ ಈ ವರ್ಗಾವಣೆ ಆದೇಶ ಜಾರಿಯಾಗಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಸಿ. ಶಿಖಾ, ಅಜಯ್ ನಾಗಭೂಷಣ್, ಸಲ್ಮಾ ಫಾಹಿಮಾ, ಕನಗವಲ್ಲಿ, ರಘುನಂದನ್ ಮೂರ್ತಿ, ಎಂ.ಎಸ್.ಅರ್ಚನಾ, ರಮ್ಯಾ ಸೇರಿ ಒಟ್ಟು 7 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಅಜಯ್ ನಾಗಭೂಷಣ್- ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ, ಸಿ.ಶಿಖಾ- ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಸಲ್ಮಾ ಫಾಹಿಮಾ- ಹೆಚ್ಚುವರಿ ಕಾರ್ಯದರ್ಶಿ, ಮೂಲ ಸೌಕರ್ಯ ಇಲಾಖೆ, ಕನಗವಲ್ಲಿ- ಪರೀಕ್ಷಾ ನಿಯಂತ್ರಕರು. ಕೆಪಿಎಸ್‌ಸಿ, ರಘುನಂದನ ಮೂರ್ತಿ- ಆಯುಕ್ತರು (ಜಾರಿ) ವಾಣಿಜ್ಯ ತೆರಿಗೆ ಇಲಾಖೆ, ಅರ್ಚನಾ ಎಂ.ಎಸ್.- ಸದಸ್ಯರು. ಕೆಎಟಿ, ರಮ್ಯಾ ಎಸ್- ಕಾರ್ಯಕಾರಿ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ನಟಿ ಶೃತಿ ಹಾಗೂ ಸಚಿವ ಸಿಪಿ ಯೋಗೇಶ್ವರಿಂದ ಅಂಜನಾದ್ರಿಯ ದರ್ಶನ

ರಾಜಕೀಯದ ಬಗ್ಗೆ ಮಾತನಾಡಲ್ಲ

ವಿಜಯಸಾಕ್ಷಿ ಸುದ್ದಿ, ಗಂಗಾವತಿ

ಪ್ರವಾಸೋದ್ಯಮ‌ ಸಚಿವ ಸಿಪಿ ಯೋಗೇಶ್ವರ ಹಾಗೂ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ನಟಿ ಶೃತಿ ತಾಲ್ಲೂಕಿನ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಹಂಪಿಯಿಂದ ರಸ್ತೆ ಮಾರ್ಗದ ಮೂಲಕ ಆಗಮಿಸಿದ ಉಭಯರು ಸುಮಾರು 572 ಮೆಟ್ಟಿಲುಗಳ ಎತ್ತರದಲ್ಲಿರುವ ಬೆಟ್ಟವನ್ನು ಹತ್ತಿದರು. ದೇವರ ದರ್ಶನದ ಬಳಿಕ ದೇಗಿಲದ ಆವರಣದಲ್ಲಿಯೇ ಉಪಹಾರ ಸೇವಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಯೋಗೇಶ್ವರ, ಪ್ರವಾಸೋದ್ಯಮ ಇಲಾಖೆಯಡಿ ಬರುವ ತಾಣಗಳ ಅಭಿವೃದ್ದಿ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲು ಬಂದಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಮಾತನಾಡಲು ಇಚ್ಚಿಸುವುದಿಲ್ಲ ಎಂದ ಸಚಿವರು, ಬಿಎಸ್ವೈ ತಮ್ಮ ನಾಯಕರು ಹಾಗೂ ಸರಕಾರದಲ್ಲಿ ಅವರು ಸಿಎಂ ಆಗಿಯೇ ಮುಂದುವರೆಯಲಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.

ಶಾಸಕ ಬಸನಗೌಡ ಯತ್ನಾಳ ಹಾಗೂ ಕೂಡಲಸಂಗಮ ಶ್ರೀಗಳ ಭೇಟಿ ಸೌಜನ್ಯದ ಭೇಟಿಯಷ್ಟೇ.. ಈ ಭಾಗಕ್ಕೆ ಬಂದಿದ್ದು, ಸೌಜನ್ಯಕ್ಕಾಗಿ ಅವರನ್ನು ಭೇಟಿ ಮಾಡಿದ್ದೇನೆ. ರಾಜಕೀಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರೀಕ್ಷೆ ಬರೆದಿದ್ದೇನೆ. ಶೀಘ್ರದಲ್ಲೇ ಫಲಿತಾಂಶ ಬರುತ್ತೆ ಎಂದು ಮಾರ್ಮಿಕವಾಗಿ ಹೇಳಿದರು.

ಈ ವೇಳೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ, ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಸ್ಥಳಿಯರಿಗೆ ಅನುಕೂಲಕ್ಕಿಂದ ಅನಾನುಕೂಲವೇ ಹೆಚ್ಚಾಗಿದೆ. ಈ ಹಿನ್ನೆಲೆ ಪ್ರಾಧಿಕಾರದ ವ್ಯಾಪ್ತಿಯನ್ನು ಬದಲಿಸಬೇಕು. ಇಲ್ಲ ಅಭಿವೃದ್ಧಿಗೆ ಪೂರಕವಾಗಿ ನಿರ್ಮಾಣವಾಗುವ ಕಾಮಗಾರಿಗಳಿಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಬಳಿಕ ಸಚಿವ ಯೋಗೇಶ್ವರ ಮತ್ತು ಶೃತಿ, ಆನೆಗೊಂದಿಯ ಪುರಾತನ ಶೈಲಿಯ ಅರಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ನಾರಾಯಣ ಕನಕ ರೆಡ್ಡಿ, ತಹಸೀಲ್ದಾರ್ ಯು.ನಾಗರಾಜ್ ಇತರರು ಇದ್ದರು.

ಹೋರಿ ತಿವಿತದಿಂದ ಸಾವು; ಕಾರಹುಣ್ಣಿಮೆ ಸಂಭ್ರಮದಲ್ಲಿ ದುರಂತ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ ( ಕನಕಗಿರಿ)
ಕಾರಹುಣ್ಣಿಮೆ ಕರಿ ಬಿಡುವ ಸಮಯದಲ್ಲಿ ಹೋರಿಯ ತಿವಿತಕ್ಕೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ.
ಕನಕಗಿರಿ ತಾಲ್ಲೂಕು ನವಲಿ ಗ್ರಾಮದಲ್ಲಿ ಕಾರು ಹುಣ್ಣಿಮೆ ಪ್ರಯುಕ್ತ ರೈತರು ಸಂಪ್ರದಾಯದಂತೆ ಎತ್ತುಗಳ ಕರಿ ಬಿಡುವ ಮೊದಲಿನಿಂದ ಪದ್ದತಿ ಇದೆ.
ನವಲಿ ಗ್ರಾಮದಲ್ಲಿ ಎತ್ತುಗಳ ಕರಿ ಬಿಡುವ ಸಮಯದಲ್ಲಿ ಹೋರಿಯ ಕೊಂಬುಗಳ ತಿವಿತಕ್ಕೆ 47 ವರ್ಷದ ರಾಮಣ್ಣ ನಾರಿನಾಳ ಎಂಬ ವ್ಯಕ್ತಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಸಾವನ್ನಪ್ಪಿದ್ದಾರೆ.

ಕುಷ್ಟಗಿಯ ಮುಂದಿನ ಶಾಸಕ ಬಯ್ಯಾಪುರ!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮುಂದಿನ ಶಾಸಕ ಅಮರೆಗೌಡ ಬಯ್ಯಾಪುರ ಎಂದು ಅವರ ಮೇಲಿನ ಅಭಿಮಾನದಿಂದ ಬಿಜಕಲ್ ಗ್ರಾಮದಲ್ಲಿ ಕರಿ ಹಬ್ಬದಂದು ರುದ್ರಯ್ಯ ಹಿರೇಮಠ ಅವರು ತಮ್ಮ ಎತ್ತುಗಳ ಮೇಲೆ ಬರೆದು ಅಭಿಮಾನ ವ್ಯಕ್ತಪಡಿಸಿದ ಚಿತ್ರಗಳು ಇದೀಗ ಎಲ್ಲೆಡೆ ವೈರಲ್ ಆಗಿವೆ..

ಕೊರೊನಾ; ಗದಗ ಜಿಲ್ಲೆಯಲ್ಲಿ ಮುಂದುವರೆದ ಸಾವಿನ ಸರಣಿ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರತಿದಿನವೂ ಇಬ್ಬರಂತೆ ಕೋವಿಡ್ ಗೆ ಬಲಿಯಾಗುತ್ತಿರುವುದು ಜಿಲ್ಲೆಯ ಜನರಿಗೆ ಆತಂಕ ಮೂಡಿಸಿದೆ. ಇಂದು 26 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಮಂಗಳವಾರ ಕೂಡ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು 26 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25796 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -12, ಮುಂಡರಗಿ-08, ನರಗುಂದ-00, ರೋಣ-00, ಶಿರಹಟ್ಟಿ-06, ಹೊರಜಿಲ್ಲೆಯ-00, ಸೇರಿದಂತೆ 26 ಪ್ರಕರಣಗಳು ದೃಢಪಟ್ಟಿವೆ.

ಮಂಗಳವಾರ ಕೋವಿಡ್ ನಿಂದ ಇಬ್ಬರು ಮೃತಪಟ್ಟ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ವರದಿಯಲ್ಲಿ ಮಾಹಿತಿ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ 302 ಜನರು ಮೃತಪಟ್ಟಂತಾಗಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ನಿವಾಸಿ 70 ವರ್ಷದ ವ್ಯಕ್ತಿ ಮೇ-21 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಜೂನ್ 27 ರಂದು ಮೃತಪಟ್ಟಿದ್ದಾರೆ.

ಗದಗ ನಗರದ ಹಾತಲಗೇರಿ ನಾಕಾ ನಿವಾಸಿ 68 ವರ್ಷದ ವ್ಯಕ್ತಿ ಜೂನ್ 22 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 28 ರಂದು ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದು 19 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25269 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 225 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸಿನೆಮಾ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದು ಮಾನಗೇಡಿ ಕೆಲಸ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೇಂದ್ರ ಬಿಜೆಪಿ ಸರಕಾರ ಜನರ ಮೇಲೆ ಅಘೋಷಿತ ತುರ್ತು ಪರಿಸ್ಥಿತಿ ಹೇರಿದೆ. ಇದು ಇಂದಿರಾ ಗಾಂಧಿಗಿಂತಲೂ ಕೆಟ್ಟ ತುರ್ತು ಪರಿಸ್ಥಿತಿ ಎಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಧಾನ ಕಾಯದರ್ಶಿ ಮಂಜುನಾಥ ಜಿ. ಗೊಂಡಬಾಳ ಕೇಂದ್ರದ ನೂತನ ನೀತಿಯನ್ನು ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಅಂದಿನ ಪರಿಸ್ಥಿತಿಯಲ್ಲಿ ದೇಶ ಕೈ ಮೀರಿದ ಕಾರಣಕ್ಕೆ ಕೆಲವು ತಿಂಗಳು ತುರ್ತು ಪರಿಸ್ಥಿತಿ ಹೇರಿ ಯಾರೂ ಏನೂ ಮಾತಾಡಬಾರದು ಎಂದಿದ್ದರು.
ಅದನ್ನು ಜನ ತಿರಸ್ಕರಿಸಿ ಅವರನ್ನು ಸೋಲಿಸಿದರು. ಹಾಗೂ ಮುಂದೆ ಬೇರೊಂದು ಪಕ್ಷ ಉದಯಿಸಿ ಬೆಳೆದು ಇಂದು ಅಧಿಕಾರಕ್ಕೆ ಬಂದು ಯಾವುದನ್ನು ವಿರೋಧಿಸಿ ಅಧಿಕಾರ ಹಿಡಿದರೋ ಅದನ್ನೇ ಜೀವನಪರ್ಯಂತ ತರಲು ಹೊರಟಿದೆ ಎಂದು ಅವರು ಕೇಂದ್ರದ ವಿರುದ್ಧ ಕಿಡಿ‌ ಕಾರಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಅಂದರೆ ನೂತನ ಮಾಹಿತಿ ತಂತ್ರಜ್ಞಾನ ತಿದ್ದುಪಡಿ 2021 ರಲ್ಲಿ ಸಾಮಾಜಿಕ ಜಾಲತಾಣ ನಿಯಂತ್ರಣ ಹಾಗೂ ಮಾಧ್ಯಮ ನಿಯಂತ್ರಿಸುವ ದೂರದೃಷ್ಟಿಯಿಂದ ಸರಕಾರ ತನಗೆ ಅನುಕೂಲವಾಗುವಂತಹ ಬದಲಾವಣೆ ಮಾಡಿಕೊಂಡಿದೆ.
ಒಬ್ಬ ವ್ಯಂಗ್ಯಚಿತ್ರಕಾರನೂ ಸಹ ಮಾತಾಡಬಾರದು. ಕೇಂದ್ರದ ವಿರುದ್ಧ ಯಾರೂ ಮಾತಾಡಬಾರದು. ಮುಂಬರುವ ದಿನಗಳಲ್ಲಿ ಬೇಸತ್ತ ಜನರಿಂದ ಕೇಂದ್ರದ ವಿರುದ್ಧ ಬರಬಹುದಾದ ಜನಾಕ್ರಮಣದ ನಿಯಂತ್ರಣ ಕೆಲಸಕ್ಕೆ ಅದು ಮುಂದಾಗಿದ್ದು, ಅದರ ಮುಂದುವರೆದ ಭಾಗವಾಗಿ ಸಿನೆಮಾ ಮಾಧ್ಯಮ ಮೂಲಕವೂ ಬಿಜೆಪಿ ಮತ್ತು ಅದರ ನಾಯಕರ ಮೇಲೆ ಯಾವುದೇ ಆರೋಪ ಮಾಡಬಾರದು. ಅವರ ವಿರುದ್ಧ ಚಿತ್ರ ನಿರ್ಮಾಣವಾಗದಿರಲಿ ಎಂಬ ಉದ್ದೆಶದಿಂದ ಸಿನೆಮಾಟೋಗ್ರಾಫ್ ಆಕ್ಟ್ 1952ಗೆ ತಿದ್ದುಪಡಿ ತರಲು ನಿರ್ಧರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಫಿಲ್ಮ್ ಸರ್ಟಿಫಿಕೇಟ್ ಆಫ್ ಅಪಾಲೇಟ್ ಟ್ರಿಬ್ಯೂನಲ್ ಅಂದರೆ ತ್ರಿಸದಸ್ಯ ಮೇಲ್ಮನವಿ ನ್ಯಾಯಪೀಠವನ್ನು ರದ್ದುಗೊಳಿಸಿ ಪ್ರಾದೇಶಿಕ ಸೆನ್ಸಾರ್ ಮಂಡಳಿ ವಿರುದ್ಧ ಮೇಲ್ಮನವಿ ಹೋಗದಂತೆ ಮಾಡಿ ಬೆನ್ನಿಗೆ ಬರೆ ಎಳೆದಿದೆ. ಈಗ ಕಾಯ್ದೆಗೆ ತಿದ್ದುಪಡಿ ತಂದು ಕುಂಡಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ನೂತನ ತಿದ್ದುಪಡಿಯಲ್ಲಿ ಇರುವ ಮೂರು ಅಂಶಗಳು ಸಿನೆಮಾ ಕ್ಷೇತ್ರವನ್ನು ಸರ್ವನಾಶ ಮಾಡುವ ಜೊತೆಗೆ ಕೇಂದ್ರದ ಸಂಪೂರ್ಣ ಸಿನೆಮಾ ಸ್ವಾಯತ್ತತೆ ಹೊಂದಲಿದೆ, ಅದು ಒಂದು ರೀತಿ ಸಿನಿಮಾದವರು ತಮ್ಮ ಚಿತ್ರ ಪ್ರದರ್ಶನ ಕಾಣಬೇಕು. ಸರಕಾರದ ಸಹಾಯ ಬೇಕು ಅಂದರೆ ಈಗ ರಾಜಕಾರಣಿಗಳ ರೀತಿ ವಿರೋಧ ಪಕ್ಷವನ್ನು ಬಿಟ್ಟು ಬಿಜೆಪಿ ಪಡಸಾಲೆ ಸೇರಿಕೊಂಡು ಅವರ ಅಣತಿಯಂತೆ ನಡೆದುಕೊಳ್ಳಬೇಕು ಎಂಬ ಸ್ಪಷ್ಟ ಉದ್ದೇಶವಿದೆ ಎ‌ಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಎಲ್ಲಾ ಬಹುತೇಕ ಕಾನೂನುಗಳ ಹಿಂದೆ ದಕ್ಷಿಣ ಭಾರತ, ಹಿಂದಿಯೇತರ ಜನರ ನಿಯಂತ್ರಣದ ಹುನ್ನಾರವಿದೆ, ನಮ್ಮನ್ನು ನೋಡಿದರೆ ಅವರ ಮೈ ಕುದಿಯುತ್ತದೆ. ಅದಕ್ಕಾಗಿ ಅವರು ದೇಶ ರಕ್ಷಿಸಿ, ದೇಶ ವಾಸಿಗಳನ್ನು ಉಳಿಸುವ ಬದಲಿಗೆ ಸುಳ್ಳು ದೇಶ ರಕ್ಷಕರೆಂಬ ಭ್ರಮೆ ಹುಟ್ಟಿಸಿದ್ದಾರೆ. ಮುಂದೆ ಜನರು ಮಾತನಾಡದಂತೆ ಫ್ಯಾಸಿಸ್ಟ್ ಆಡಳಿತ ತರುವ ಯೋಜಿತ ಧೀರ್ಘ ಪ್ರಯಾಣ ಆರಂಭಿಸಿದ್ದಾರೆ. ಮೊದಲು ಒಂದೊಂದೆ ಟೊಂಗೆ ಮುರಿದು ಗುಂಡಾರ ಮಾಡುತ್ತಿದ್ದಾರೆ ಎಂದು ಗೊಂಡಬಾಳ ಗುಡುಗಿದ್ದಾರೆ.
ಸಿನಿಮಾ ಸೆನ್ಸಾರ್ ಆದ ಮೇಲೂ ಆಕ್ಷೇಪಣೆ ಇದ್ದಲ್ಲಿ ಚಿತ್ರ ಪ್ರದರ್ಶನ ರದ್ದುಗೊಳಿಸುವ ತೀರ್ಮಾನ ಬಾಲಿಶವಾದದ್ದು, ಕೋಟಿ ಕೋಟಿ ಹಣ ಹಾಕಿ ಬೀದಿಗೆ ಬರುವಂತಾದರೆ ಹೆಂಗೆ ಎಂದು ಕಲಾವಿದರು, ನಿರ್ಮಾಪಕರು ಬಿಜೆಪಿ ಸೇರಬೇಕು, ಅದರ ರಕ್ಷಣೆ ಪಡೆದು ಬದುಕಬೇಕು ಎಂದು ನಿರ್ಧರಿಸಿದೆ. ದಕ್ಷಿಣ ಭಾರತದ ಸಿನೆಮಾ ಮಂದಿ ರಾಜಕಾರಣದಲ್ಲಿ ಉತ್ತಮ ಹಿಡಿತ ಹೊಂದಿದ್ದು ಅದನ್ನು ತಪ್ಪಿಸಲು ಈ ಹೊಸ ಯೋಜನೆ ಎಂಬುದು ಸ್ಪಷ್ಟವಾಗಿದ್ದು, ಇದರ ವಿರುದ್ಧ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದರು ಹೋರಾಟ ರೂಪಿಸುತ್ತಾರೆ, ಇದನ್ನು ರಾಜ್ಯದ ಮೂಲೆ ಮೂಲೆಗೆ ಶುರು ಮಾಡಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

ಕೂಡಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಿರ್ಧಾರ ಕೈ ಬಿಡಬೇಕು – ವಿಶ್ವನಾಥ್!

ವಿಜಯಸಾಕ್ಷಿ ಸುದ್ದಿ, ಮೈಸೂರು

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು ಎಂದು ಶಾಸಕ ಎಚ್. ವಿಶ್ವನಾಥ್ ಒತ್ತಾಯ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಇದು ಅವೈಜ್ಞಾನಿಕ ನಿರ್ಧಾರ. ಇದರಿಂದ ಅಕ್ಷರ, ಆರೋಗ್ಯ ಎರಡೂ ಹಾಳಾಗಲಿದೆ. ಪರೀಕ್ಷೆಯಿಂದ ಮಕ್ಕಳ ಆರೋಗ್ಯಕ್ಕೆ ತೊಂದರೆಯಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

ಜುಲೈನಲ್ಲಿ ಕೋವಿಡ್ ಮೂರನೇ ಅಲೆ ಅಪ್ಪಳಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರವೇ ಸಿಬಿಎಸ್ ಇಯಲ್ಲಿ ಪಿಯುಸಿ ಪರೀಕ್ಷೆ ನಡೆಸುವುದು ಬೇಡ ಎಂದು ಆದೇಶಿಸಿದೆ. ಆದರೂ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಲೆ ಬಾಗಿದೆ. ಕೋವಿಡ್ ಆತಂಕದ ಜೊತೆಗೆ ಇಡೀ ಶಿಕ್ಷಣ ವ್ಯವಸ್ಥೆ ಹಾಳಾಗಿ ಹೋಗಿದೆ. ಪರೀಕ್ಷೆ ನಡೆಸಲು ಹೊರಟಿರುವುದು ಆತುರ, ಅವೈಜ್ಞಾನಿಕ ತೀರ್ಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳಿಗೆ ಪಾಠವನ್ನೇ ಮಾಡದೆ ಪರೀಕ್ಷೆ ಮಾಡುವುದು ಅವೈಜ್ಞಾನಿಕವಾದುದು. ಅವೈಜ್ಞಾನಿಕ ತೀರ್ಮಾನವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ರಾಜ್ಯದಲ್ಲಿ ಯಾವ ಪುರುಷಾರ್ಥಕ್ಕೆ ಪರೀಕ್ಷೆ ನಡೆಸಲು ಸರ್ಕಾರ ಹೊರಟಿದೆ. ಜೀವ ಮತ್ತು ಜೀವನ ಎರಡನ್ನು ತೆಗೆಯಲು ಸುರೇಶ್ ಕುಮಾರ್ ಮುಂದಾಗಿದ್ದಾರೆ. ಪ್ರಧಾನಿ ಮೋದಿ ಜೀವ ಮುಖ್ಯ ನಂತರ ಜೀವನ ಅಂತ ಎಂದು ಹೇಳಿದ್ದಾರೆ. ಆದರೆ, ಸುರೇಶ್ ಕುಮಾರ್ ಗೆ ನನಗೆ ಎಲ್ಲವೂ ಗೊತ್ತು ಎಂಬ ಇಗೋ ಇದೆ. ಈ ಇಗೋ ಇಂತಹ ಸಂದರ್ಭದಲ್ಲಿ ಬಳಕೆಯಾಗಬಾರದು ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಮನೆಯೊಂದು ನೂರು ಬಾಗಿಲು ಆಗಿದೆ; ಪ್ರಿಯಾಂಕ್ ಖರ್ಗೆ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಅಲ್ಲ, ಮನೆಯೊಂದು ನೂರು ಬಾಗಿಲು ಇದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ವಿಚಾರ ಈಗ ಅಪ್ರಸ್ತುತ. ನಮ್ಮ ಪಕ್ಷ ಬಹುಮತ ಗಳಿಸಿದಾಗ ಸಿಎಲ್ ಪಿಯಲ್ಲಿರುವ ಶಾಸಕರು ಹೈಕಮಾಂಡ್ ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಆಗ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಸದ್ಯ ನಾವು ಜನರಿಗೆ ನೆರವಾಗುವ ಕುರಿತು ಯೋಚನೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ನಮ್ಮಲ್ಲಿ ಅರ್ಹರು ಬಹಳ ಜನ ಇದ್ದಾರೆ. ಹೀಗಾಗಿಯೇ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಯಾರೂ ಇಲ್ಲ. ಹೀಗಾಗಿ ಬಿಜೆಪಿಯವರು ಮೊದಲು ಅವರ ಮನೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ.

ಶಾಸಕ ಜಮೀರ್ ತಮ್ಮ ವ್ಯೆಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಆದರೆ, ಪಕ್ಷ ಕಟ್ಟುವ ಸಾಮರ್ಥ್ಯ, ಜವಾಬ್ದಾರಿ ಇರುವ ನಾಯಕ ಈ ತರಹ ಮಾತನಾಡುವುದಿಲ್ಲ ಎಂದು ಜಮೀರ್ ಗೆ ಟಾಂಗ್ ಕೊಟ್ಟಿದ್ದಾರೆ.
ದಲಿತ ಸಿಎಂ ವಿಚಾರ ಇಂತಹ ಸಂದರ್ಭದಲ್ಲಿ ಕೇಳಿ ಬರುತ್ತದೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರಿಗೆ ಸಿಎಂ ಆಗುವ ಅರ್ಹತೆ ಇರಲ್ವಾ? ಮೀಡಿಯಾದಲ್ಲಿ ಬಂದಾಗಲೆ ದಲಿತ ಸಿಎಂ ವಿಚಾರ ಚರ್ಚೆಗೆ ಬರುತ್ತದೆ. ಆದರೆ, ನಮ್ಮ ಸಮಾಜದವರು ಎಚ್ಚೆತ್ತಕೊಂಡಿಲ್ಲವೋ ಗೊತ್ತಿಲ್ಲ. ಮುಖ್ಯಮಂತ್ರಿ ವಿಚಾರ ಬಂದಾಗ ದಲಿತ ಮುಖ್ಯಮಂತ್ರಿ ಅಂತಾ ಹೆಡ್ ಲೈನ್ ಹೊಡಿತ್ತಾರೆ. ಬೇರೆ ಸಮಾಜದವರು ಆದಾಗ ಏಕೆ ಈ ರೀತಿ ಹೆಡ್ ಲೈನ್ ಕೊಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

error: Content is protected !!