Home Blog Page 328

ಯಕ್ಷಗಾನ ಕಲಾವಿದರಿಗೆ ಬೆದರಿಕೆ: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ FIR

0

ಮಂಗಳೂರು: ಧರ್ಮಸ್ಥಳ ಪ್ರಕರಣದ ಹಿನ್ನೆಲೆ ಸುದ್ದಿಯಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಇದೀಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ‘ಬುರುಡೆ ಗ್ಯಾಂಗ್’ ಎಂಬ ಯಕ್ಷಗಾನ ಪ್ರಸಂಗದ ವಿಚಾರವಾಗಿ ಯಕ್ಷಗಾನ ಕಲಾವಿದರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಆರೋಪ ಅವರ ವಿರುದ್ಧ ಕೇಳಿಬಂದಿದೆ.

ಈ ಸಂಬಂಧ ಪುತ್ತೂರು ಮಹಿಳಾ ಠಾಣೆ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ತಿಮರೋಡಿ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಧರ್ಮಸ್ಥಳ ಪ್ರಕರಣದಂತೆ ಕಥಾವಸ್ತು ಹೊಂದಿರುವ ‘ಬುರುಡೆ ಗ್ಯಾಂಗ್’ ಯಕ್ಷಗಾನ ಪ್ರಸಂಗ ನಿರ್ಮಾಣಗೊಂಡಿತ್ತು.

ಇದರಿಂದ ಅಸಮಾಧಾನಗೊಂಡ ತಿಮರೋಡಿ ಏಪ್ರಿಲ್ 11ರಂದು ಯಕ್ಷಗಾನ ಹಾಸ್ಯ ಕಲಾವಿದ ಪ್ರಜ್ವಲ್ ಗುರುನಾಯನಕೆರೆಗೆ ಕರೆ ಮಾಡಿ, ಕಲಾವಿದರಾದ ದಿನೇಶ್ ಶೆಟ್ಟಿಗಾರ್ ಮತ್ತು ನಟ ಮಂದಾರ ಸುಂದರ ರೈ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಅವರ ತಾಯಂದಿರ ಕುರಿತು ಕೂಡ ಅವಮಾನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕರೆಗಿನ ಆಡಿಯೋವನ್ನು ಪ್ರಜ್ವಲ್ ಅವರು ಸಂಬಂಧಿತ ಕಲಾವಿದರಿಗೆ ಕಳುಹಿಸಿದ್ದು, ಅದನ್ನು ಕೇಳಿ ಅವರು ಮನಸ್ತಾಪಗೊಂಡಿದ್ದಾರೆ. ಈ ಹಿನ್ನೆಲೆ ಮಂದಾರ ಸುಂದರ ರೈ ನೀಡಿದ ದೂರಿನಡಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ FIR ದಾಖಲಾಗಿದ್ದು, ದಿನೇಶ್ ಶೆಟ್ಟಿಗಾರ್ ತಾಯಿ ಲೀಲಾವತಿ ಶೆಟ್ಟಿಗಾರ್ ನೀಡಿದ ದೂರಿನಡಿ ಮಹಿಳಾ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಆಡಿಯೋದಲ್ಲಿರುವ ವಿಷಯ:

ಆಡಿಯೋದಲ್ಲಿ ತಿಮರೋಡಿ ಯಕ್ಷಗಾನ ಕಲಾವಿದರ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು ಕೇಳಿಸುತ್ತದೆ. “ಒಂದು ಮಗುವಿಗೆ ಅನ್ಯಾಯವಾಗಿರುವ ವಿಷಯದಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ. ಅದನ್ನು ಹಾಸ್ಯ ಮಾಡುವುದು ಸರಿಯಲ್ಲ. ಯಕ್ಷಗಾನಕ್ಕೆ ತನ್ನದೇ ಆದ ಗೌರವವಿದೆ, ಇಂತಹ ಕಥೆ ಮಾಡುವ ಮೊದಲು ಜಾಗ್ರತೆ ಇರಬೇಕು” ಎಂದು ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ರಾಜ್ಯಾದ್ಯಂತ ಬಿಸಿಲಿನ ಕಾಟ: ಕಲಬುರಗಿಯಲ್ಲಿ 45°C, ಬೆಂಗಳೂರಿನಲ್ಲಿ ಉಷ್ಣತೆ ಏರಿಕೆ!

ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ದಿನೇದಿನೇ ಏರಿಕೆಯಾಗುತ್ತಿದ್ದು, ಜನರು ತೀವ್ರ ಬೇಗೆಯಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ 44°–45°C ತಾಪಮಾನ ದಾಖಲಾಗಿದ್ದು, ಆತಂಕ ಹೆಚ್ಚಿಸಿದೆ.

ಇನ್ನೊಂದೆಡೆ ಬೆಂಗಳೂರಿನಲ್ಲಿ ಬುಧವಾರ 35.8°C ತಾಪಮಾನ ದಾಖಲಾಗಿದ್ದು, ಕಳೆದ ಕೆಲ ದಿನಗಳಿಂದ ಏಪ್ರಿಲ್ ತಿಂಗಳ ಹಿಂದಿನ ದಾಖಲೆಗಳನ್ನು ಮೀರುವ ಮಟ್ಟದಲ್ಲಿ ಉಷ್ಣತೆ ಏರಿಕೆಯಾಗುತ್ತಿದೆ.

ಹವಾಮಾನ ಇಲಾಖೆ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36°C ರಿಂದ 37°C ನಡುವೆ ಇರಲಿದೆ. ಮಂಗಳವಾರ 36.6°C ದಾಖಲಾಗಿದ್ದು, ಈ ವರ್ಷದಲ್ಲೇ ಅತ್ಯಂತ ಬಿಸಿಯಾದ ದಿನವಾಗಿತ್ತು. ಮುಂದಿನ ದಿನಗಳಲ್ಲಿ 38°C ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಕೆಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ ಇದ್ದರೂ, ಅದು ಸೀಮಿತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಲಿದೆ.

ಇದೇ ವೇಳೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಆರೆಂಜ್ ಹಾಗೂ ಯೆಲ್ಲೋ ಹೀಟ್‌ವೇವ್ ಅಲರ್ಟ್ ನೀಡಲಾಗಿದೆ. ಕಲಬುರಗಿಯ ಅವ್ರಾದ್ ಬಿ ಪ್ರದೇಶದಲ್ಲಿ 45°C, ಚಿಂಚೋಳಿ ಮತ್ತು ಅಫ್ಜಲ್ಪುರದಲ್ಲಿ 44°C ಕ್ಕೂ ಅಧಿಕ ತಾಪಮಾನ ದಾಖಲಾಗಿದೆ.

ಸಾಮಾನ್ಯಕ್ಕಿಂತ 3°C ರಿಂದ 4°C ಹೆಚ್ಚು ತಾಪಮಾನ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ಕಲಬುರಗಿ ಜಿಲ್ಲಾಧಿಕಾರಿ ನಾಗರಿಕರಿಗೆ ಬೆಳಿಗ್ಗೆ 11:30ರಿಂದ ಸಂಜೆ 5ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಲು ಸೂಚಿಸಿದ್ದಾರೆ.

ಇನ್ನೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಗದಗ, ಹಾವೇರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಬಿಸಿ ಮತ್ತು ತೇವಾಂಶಯುಕ್ತ ಹವಾಮಾನದ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಲೋಕಸಭೆಯಲ್ಲಿ ಗದ್ದಲ ಮಧ್ಯೆ ಮಹಿಳಾ ಮೀಸಲಾತಿ ಮಸೂದೆ ಮಂಡನೆ

0

ನವದೆಹಲಿ: ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಮಹಿಳಾ ಮೀಸಲಾತಿ ಸೇರಿದಂತೆ ಮಹತ್ವದ ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆ ಜೊತೆಗೆ, ಕ್ಷೇತ್ರ ಪುನರ್ವಿಂಗಡಣೆ ಹಾಗೂ ಲೋಕಸಭೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯೂ ಇದರಲ್ಲಿ ಒಳಗೊಂಡಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಸೂದೆ ಮಂಡಿಸಿದ ವೇಳೆ, ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸದನದಲ್ಲಿ ಗದ್ದಲ ಉಂಟಾಯಿತು.

ಲೋಕಸಭೆ ಬಲ ಹೆಚ್ಚಿಸುವ ಪ್ರಸ್ತಾವನೆ

ಈ ಮಸೂದೆಯ ಪ್ರಕಾರ, ಪ್ರಸ್ತುತ 543 ಸದಸ್ಯರಿರುವ ಲೋಕಸಭೆಯನ್ನು 850 ಸದಸ್ಯರ ತನಕ ವಿಸ್ತರಿಸುವ ಉದ್ದೇಶವಿದೆ. ಇದರಲ್ಲಿ ರಾಜ್ಯಗಳಿಂದ 815 ಸದಸ್ಯರು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35 ಸದಸ್ಯರು ಆಯ್ಕೆಯಾಗುವಂತೆ ಯೋಜನೆ ರೂಪಿಸಲಾಗಿದೆ. ಆದರೆ, ಈ ಬದಲಾವಣೆ ಕ್ಷೇತ್ರ ಪುನರ್ವಿಂಗಡಣೆಯ ಬಳಿಕವೇ ಜಾರಿಯಾಗಲಿದೆ.

ಮಹಿಳಾ ಮೀಸಲಾತಿ ವಿವಾದ

ಮಹಿಳೆಯರಿಗೆ 33% ಮೀಸಲಾತಿ ನೀಡುವ ‘ನಾರಿ ಶಕ್ತಿ ವಂದನ ಅಧಿನಿಯಮ’ ಜಾರಿಗೆ ಸರ್ಕಾರ ಮುಂದಾಗಿದ್ದರೂ, ಅದನ್ನು ಕ್ಷೇತ್ರ ಪುನರ್ವಿಂಗಡಣೆಗೆ ಕಟ್ಟಿ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷಗಳು, ಇದು ಮೀಸಲಾತಿಯನ್ನು ವಿಳಂಬಗೊಳಿಸುವ ತಂತ್ರ ಎಂದು ಆರೋಪಿಸಿವೆ.

ಇದೇ ವಿಚಾರವಾಗಿ ಕಾಂಗ್ರೆಸ್ ಮುಖಂಡ  ಜೈರಾಮ್ ರಮೇಶ್ ಕೂಡ ಪ್ರಶ್ನೆ ಎತ್ತಿದ್ದು, “ಈಗಲೇ ಜಾರಿಗೆ ತರಲು ಏನು ಅಡ್ಡಿ?” ಎಂದು ಕೇಳಿದ್ದಾರೆ.

ಡಿಲಿಮಿಟೇಶನ್ ಮಸೂದೆ

‘ಡಿಲಿಮಿಟೇಶನ್ ಮಸೂದೆ, 2026’ ಮೂಲಕ ಹಳೆಯ 2002ರ ಕಾಯ್ದೆಯನ್ನು ರದ್ದುಗೊಳಿಸಿ, ಹೊಸ ಆಯೋಗವನ್ನು ರಚಿಸಲು ಸರ್ಕಾರ ಮುಂದಾಗಿದೆ. ಈ ಆಯೋಗವು ಇತ್ತೀಚಿನ ಜನಗಣತಿ ಅಂಕಿಅಂಶಗಳ ಆಧಾರದ ಮೇಲೆ ಕ್ಷೇತ್ರಗಳ ಗಡಿಗಳನ್ನು ಮರುನಿರ್ಧರಿಸಲಿದೆ.

ಕೇಂದ್ರಾಡಳಿತ ಪ್ರದೇಶಗಳಿಗೂ ಮೀಸಲಾತಿ

ಇದೇ ವೇಳೆ, ದೆಹಲಿ, ಜಮ್ಮು-ಕಾಶ್ಮೀರ ಮತ್ತು ಪುದುಚೇರಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲೂ ಮಹಿಳೆಯರಿಗೆ 33% ಮೀಸಲಾತಿ ಜಾರಿಗೆ ತರಲು ಮತ್ತೊಂದು ತಿದ್ದುಪಡಿ ಮಸೂದೆ ಮಂಡಿಸಲಾಗಿದೆ.

ಮಹಿಳಾ ಮೀಸಲಾತಿಗೆ ಮೋದಿ ಸ್ವಾಗತ: ಮಹಿಳೆಯರನ್ನು ಗೌರವಿಸುವುದು ದೇಶದ ಗೌರವ ಎಂದ ಪ್ರಧಾನಿ

0

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಮಹಿಳಾ ಮೀಸಲಾತಿ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ  ಸ್ವಾಗತ ಸೂಚಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, “ದೇಶವು ಮಹಿಳಾ ಸಬಲೀಕರಣದತ್ತ ಐತಿಹಾಸಿಕ ಹೆಜ್ಜೆ ಇಡಲು ಸಜ್ಜಾಗಿದೆ” ಎಂದು ತಿಳಿಸಿದ್ದಾರೆ.

ಇಂದಿನಿಂದ ಆರಂಭವಾಗುತ್ತಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಮಹತ್ವದ ಚರ್ಚೆಗಳು ನಡೆಯಲಿವೆ. “ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ನೀಡುವ ಗೌರವವೇ ರಾಷ್ಟ್ರಕ್ಕೆ ನೀಡುವ ಗೌರವ” ಎಂದು ಮೋದಿ ಬರೆದುಕೊಂಡಿದ್ದಾರೆ.

ಇದಲ್ಲದೆ, ಮಹಿಳೆಯರು ಸಮಾಜದಲ್ಲಿ ಜ್ಞಾನ ಹರಡುವಲ್ಲಿ ಹಾಗೂ ಅಜ್ಞಾನವನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂಬ ಅರ್ಥದ ಸಂಸ್ಕೃತ ಶ್ಲೋಕವನ್ನೂ ಅವರು ಹಂಚಿಕೊಂಡಿದ್ದಾರೆ.

ಏಪ್ರಿಲ್ 16ರಿಂದ 18ರವರೆಗೆ ನಡೆಯಲಿರುವ ಈ ವಿಶೇಷ ಅಧಿವೇಶನದಲ್ಲಿ, 2029ರ ಸಾರ್ವತ್ರಿಕ ಚುನಾವಣೆಗಳಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಜಾರಿಗೆ ತರಲು ಸಂಬಂಧಿಸಿದ ತಿದ್ದುಪಡಿ ಮಸೂದೆ ಚರ್ಚೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

SSLC ತೃತೀಯ ಭಾಷೆಗೆ ಗ್ರೇಡ್ ಬೇಡ: ಅಂಕಗಳೇ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು: ಪ್ರಸ್ತುತ ಸಾಲಿನಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲು ಅಂಕಗಳನ್ನು ನೀಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಕುರಿತು ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ ಸೇರಿ ಮೂವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 2025-2026ನೇ ಸಾಲಿನಿಂದ ತೃತೀಯ ಭಾಷಾ ವಿಷಯಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ನಿರ್ಧಾರವನ್ನು ಸರ್ಕಾರ ಕೊನೆಯ ಕ್ಷಣದಲ್ಲಿ ತೆಗೆದುಕೊಂಡಿದೆ ಎಂದು ಆಕ್ಷೇಪಿಸಿದರು. ಇದಕ್ಕೂ ಮುನ್ನ ಮಂಡಳಿ ಹೊರಡಿಸಿದ್ದ ಮಾರ್ಗಸೂಚಿಯ ಪ್ರಕಾರ, 100 ಅಂಕಗಳ ವ್ಯವಸ್ಥೆ (80 ಲಿಖಿತ + 20 ಆಂತರಿಕ) ಜಾರಿಯಲ್ಲಿತ್ತು ಎಂದು ಹೇಳಿದರು.

ಇದಲ್ಲದೆ, ಯುಪಿಎಸ್‌ಸಿ ಹಾಗೂ ಬ್ಯಾಂಕಿಂಗ್ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರೇಡ್ ಪರಿಗಣಿಸಲಾಗುವುದಿಲ್ಲ. ಕೇವಲ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಹೀಗಾಗಿ ಗ್ರೇಡ್ ನೀಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಯಾಗಬಹುದು ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದೆಯೇ ಎಂದು ಪ್ರಶ್ನಿಸಿತು. ಸರ್ಕಾರಿ ವಕೀಲರು, ಸದ್ಯ ಕರಡು ಅಧಿಸೂಚನೆ ಮಾತ್ರ ಹೊರಬಂದಿದೆ ಎಂದು ತಿಳಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಹಾಲಿ ಇರುವ ನಿಯಮಗಳು ಹಾಗೂ ಮಾರ್ಗಸೂಚಿಯ ಪ್ರಕಾರವೇ 2025-2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಅಂಕಗಳನ್ನು ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ರಷ್ಯಾ, ಇರಾನ್ ತೈಲ ಖರೀದಿಗೆ ಭಾರತಕ್ಕೆ ನೀಡಿದ ವಿನಾಯಿತಿಯಲ್ಲಿ ಬದಲಾವಣೆ ಇಲ್ಲ: ಅಮೆರಿಕ

0

ವಾಷಿಂಗ್ಟನ್: ಅಮೆರಿಕ ಸರ್ಕಾರವು ಇರಾನ್ ಮತ್ತು ರಷ್ಯಾದ ತೈಲ ಖರೀದಿಗೆ ನೀಡಿದ್ದ ನಿರ್ಬಂಧ ವಿನಾಯಿತಿಯನ್ನು ಇನ್ನು ಮುಂದೆ ನವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರವು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮಾತನಾಡಿ, ರಷ್ಯಾ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನು ಮುಂದುವರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ, ಇಂಧನ ಪೂರೈಕೆಯನ್ನು ಸಮತೋಲನಗೊಳಿಸಲು ನೀಡಿದ್ದ ತಾತ್ಕಾಲಿಕ ವಿನಾಯಿತಿಗಳನ್ನು ಈಗ ಹಿಂತೆಗೆದುಕೊಳ್ಳಲಾಗುತ್ತಿದೆ.

ಈ ವಿನಾಯಿತಿಗಳ ಪ್ರಮುಖ ಪ್ರಯೋಜನವನ್ನು ಭಾರತ ಸೇರಿದಂತೆ ಹಲವು ದೇಶಗಳು ಪಡೆದುಕೊಂಡಿದ್ದವು. ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಸಮಸ್ಯೆಗಳ ಹಿನ್ನೆಲೆ, ಭಾರತಕ್ಕೆ ಬರುತ್ತಿದ್ದ ಅನೇಕ ತೈಲ ಹಡಗುಗಳು ಅಡಕವಾಗಿದ್ದವು. ಇದರಿಂದ ರಷ್ಯಾದ ತೈಲ ಖರೀದಿಗೆ ತಾತ್ಕಾಲಿಕ ಅನುಮತಿ ನೀಡಲಾಗಿತ್ತು.

ಅಮೆರಿಕ ಈ ಹಿಂದೆ ಇಂಧನ ಬೆಲೆ ಏರಿಕೆಯನ್ನು ನಿಯಂತ್ರಿಸಲು ಹಾಗೂ ಯುದ್ಧಕಾಲದಲ್ಲಿ ಪೂರೈಕೆ ಅಡಚಣೆಗಳನ್ನು ಕಡಿಮೆ ಮಾಡಲು ಸೀಮಿತ ಅವಧಿಗೆ ವಿನಾಯಿತಿ ನೀಡಿತ್ತು. ಮಾರ್ಚ್ 20ರಂದು ಇರಾನ್ ತೈಲಕ್ಕೂ ಇದೇ ರೀತಿಯ ಸಡಿಲಿಕೆ ನೀಡಲಾಗಿದ್ದು, ಸುಮಾರು 140 ಮಿಲಿಯನ್ ಬ್ಯಾರೆಲ್ ತೈಲ ಜಾಗತಿಕ ಮಾರುಕಟ್ಟೆಗೆ ತಲುಪಲು ಸಹಾಯ ಮಾಡಿತ್ತು.

ಈ ವಿನಾಯಿತಿ ಏಪ್ರಿಲ್ 19ರಂದು ಮುಕ್ತಾಯಗೊಳ್ಳಲಿದ್ದು, ಬಳಿಕ ಜಾಗತಿಕ ತೈಲ ಸರಬರಾಜು ಮತ್ತು ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ನಾನು ಇನ್ನೂ 100% ಫಿಟ್ ಆಗಿಲ್ಲ: ಹೆಲ್ತ್ ಬಗ್ಗೆ ಅಪ್ಡೇಟ್ ಕೊಟ್ಟ ಕಿಂಗ್ ಕೊಹ್ಲಿ!

0

ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಮೈದಾನದಲ್ಲಿ ಕೇವಲ ಆಟಗಾರರಷ್ಟೇ ಅಲ್ಲ, ಅದಮ್ಯ ಉತ್ಸಾಹದ ಪ್ರತೀಕ.

ಆದರೆ ಇದೇ ಮೊದಲ ಬಾರಿಗೆ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು, ಫೀಲ್ಡಿಂಗ್ ಮಾಡದೇ ಬ್ಯಾಟಿಂಗ್‌ಗೆ ಮಾತ್ರ ಬಂದಿರುವುದು ಗಮನಸೆಳೆದಿದೆ. ಇದಕ್ಕೆ ಪ್ರಮುಖ ಕಾರಣವಾಗಿ ಫಿಟ್‌ನೆಸ್ ಸಮಸ್ಯೆ ಹೊರಹೊಮ್ಮಿದೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ 34 ಎಸೆತಗಳಲ್ಲಿ 49 ರನ್ ಬಾರಿಸಿ ಉತ್ತಮ ಪ್ರದರ್ಶನ ನೀಡಿದರು. ಫಿಟ್‌ನೆಸ್ ಸಮಸ್ಯೆಯ ನಡುವೆಯೂ ಅವರ ಈ ಬ್ಯಾಟಿಂಗ್ ತಂಡಕ್ಕೆ ಬಲವಾಯಿತು.

ಪಂದ್ಯದ ನಂತರ ಮಾತನಾಡಿದ ಕೊಹ್ಲಿ, “ನಾನು ಇನ್ನೂ 100% ಫಿಟ್ ಆಗಿಲ್ಲ. ಕಳೆದ ಪಂದ್ಯದಲ್ಲಿ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಕಳೆದ 4-5 ದಿನಗಳಿಂದ ಆರೋಗ್ಯದ ಏರುಪೇರಿನಿಂದ ವೈದ್ಯಕೀಯ ತಪಾಸಣೆಯಲ್ಲಿದ್ದೆ. ಆದರೂ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಸಂತೋಷ ತಂದಿದೆ,” ಎಂದು ತಿಳಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬಗ್ಗೆ ಮಾತನಾಡಿದ ಅವರು, ಬಿಸಿಲಿನ ತಾಪಮಾನದಿಂದ ಪಿಚ್ ಒಣಗಿದ್ದರಿಂದ ಚೆಂಡು ನಿಧಾನವಾಗಿ ಬರುತ್ತಿತ್ತು. ಹೀಗಾಗಿ ಪವರ್‌ಪ್ಲೇನಲ್ಲಿ ಹೆಚ್ಚು ರನ್ ಗಳಿಸುವ ಯೋಜನೆ ರೂಪಿಸಿದ್ದೆವು ಎಂದು ಹೇಳಿದರು. ಫಿಲ್ ಸಾಲ್ಟ್ ಜೊತೆಗೂಡಿ ಆರಂಭದಲ್ಲೇ ತಂಡಕ್ಕೆ ಬಲವಾದ ಅಡಿಪಾಯ ಹಾಕಿದುದರಿಂದ ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಯಿತು ಎಂದು ವಿವರಿಸಿದರು.

ತಂಡದ ನಾಯಕ ರಜತ್ ಪಾಟಿದಾರ್ ಅವರ ಆಟವನ್ನು ಶ್ಲಾಘಿಸಿದ ಕೊಹ್ಲಿ, “ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆಡುವ ರೀತಿ ಅದ್ಭುತವಾಗಿದೆ. ಬ್ಯಾಟಿಂಗ್ ಕ್ರಮಾಂಕ ನಮಗೆ ಸ್ವಾತಂತ್ರ್ಯ ನೀಡಿದ್ದು, ರಜತ್, ರೊಮಾರಿಯೋ ಮತ್ತು ಟಿಮ್ ಡೇವಿಡ್ ಇದ್ದರಿಂದ ಒತ್ತಡವಿಲ್ಲದೆ ಆಡಲು ಸಾಧ್ಯವಾಗುತ್ತಿದೆ,” ಎಂದರು.

ಆಧುನಿಕ ಕ್ರಿಕೆಟ್ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, ಪ್ರತಿಯೊಂದು ಪಂದ್ಯವೂ 230-240 ರನ್‌ಗಳದ್ದಾಗುವುದಿಲ್ಲ. ಪರಿಸ್ಥಿತಿಗೆ ಹೊಂದಿಕೊಂಡು ಆಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

ಮೊಣಕಾಲು ನೋವು ಹಾಗೂ ಆರೋಗ್ಯ ಸಮಸ್ಯೆಯ ನಡುವೆಯೂ ತಂಡಕ್ಕಾಗಿ ಕಣಕ್ಕಿಳಿದ ಕೊಹ್ಲಿಯ ಬದ್ಧತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಾನು ಕೇವಲ 10 ಪ್ರತಿಶತ ರಿದಮ್‌ನಲ್ಲಿದ್ದೇನೆ” ಎಂದಿದ್ದರೂ, ಅವರ ಆಟ ಎದುರಾಳಿ ಬೌಲರ್‌ಗಳಿಗೆ ಸವಾಲಾಗಿರುವುದು ವಿಶೇಷವಾಗಿದೆ.

IPL 2026: ಚಿನ್ನಸ್ವಾಮಿಯಲ್ಲಿ ಹಾಡು ವಿವಾದ: ಬಿಸಿಸಿಐಗೆ ಸಿಎಸ್‌ಕೆ ದೂರು

0

ಐಪಿಎಲ್ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡದ ಡಿಜೆ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಬಿಸಿಸಿಐಗೆ ಅಧಿಕೃತ ದೂರು ಸಲ್ಲಿಸಿದೆ.

ಏಪ್ರಿಲ್ 5ರಂದು ನಡೆದ ಪಂದ್ಯದಲ್ಲಿ ಸಿಎಸ್‌ಕೆ ಆಟಗಾರರು ಔಟಾದಾಗ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ…” ಎಂಬ ಹಾಡನ್ನು ಡಿಜೆ ಪದೇ ಪದೇ ಪ್ಲೇ ಮಾಡಿದ್ದಾಗಿ ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಹಾಡು ದಕ್ಷಿಣ ಭಾರತೀಯರನ್ನು, ವಿಶೇಷವಾಗಿ ತಮಿಳು ಜನರನ್ನು ಅಣಕಿಸಲು ಬಳಸಲಾಗುತ್ತದೆ ಎನ್ನಲಾಗಿದ್ದು, ಇದು ಸಿಎಸ್‌ಕೆ ತಂಡದ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಿಎಸ್‌ಕೆ ಮ್ಯಾನೇಜಿಂಗ್ ಡೈರೆಕ್ಟರ್ ಕಾಶಿ ವಿಶ್ವನಾಥನ್, ಆಟಗಾರರ ಹಾಗೂ ಅಭಿಮಾನಿಗಳ ಗೌರವಕ್ಕೆ ಧಕ್ಕೆ ಉಂಟುಮಾಡುವ ರೀತಿಯ ವರ್ತನೆ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಆಟಗಾರರು ಪೆವಿಲಿಯನ್‌ಗೆ ಹಿಂತಿರುಗುವ ವೇಳೆ ಡಿಜೆ ಮೈಕ್‌ನಲ್ಲಿ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿರುವುದಾಗಿ ಆರೋಪಿಸಿದ್ದಾರೆ.

“ತವರು ತಂಡವನ್ನು ಬೆಂಬಲಿಸುವುದು ಸರಿ, ಆದರೆ ಎದುರಾಳಿ ತಂಡವನ್ನು ಅವಮಾನಿಸುವುದು ತಪ್ಪು” ಎಂದು ಸಿಎಸ್‌ಕೆ ಸ್ಪಷ್ಟಪಡಿಸಿದೆ. ಕಳೆದ ಸೀಸನ್‌ನಲ್ಲಿಯೂ ಇದೇ ರೀತಿಯ ಘಟನೆಗಳ ಹಿನ್ನೆಲೆ ಇರುವುದರಿಂದ, ಈ ವಿವಾದ ಮತ್ತಷ್ಟು ತೀವ್ರವಾಗಿದೆ.

ಈ ದೂರನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು, ಕ್ರೀಡಾಂಗಣಗಳಲ್ಲಿ ಮನರಂಜನೆಯ ಹೆಸರಿನಲ್ಲಿ ಯಾವುದೇ ಪ್ರಾದೇಶಿಕ ಅಥವಾ ಅವಹೇಳನಕಾರಿ ಅಂಶಗಳು ನಡೆಯದಂತೆ ಹೊಸ ಮಾರ್ಗಸೂಚಿಗಳನ್ನು ತರಲು ಚಿಂತನೆ ನಡೆಸುತ್ತಿದೆ. ಮುಂದಿನ ಪಂದ್ಯಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕ್ಯಾಂಟರ್ ಗುದ್ದಿ ಮಿನಿ ಟೆಂಪೋ ಪಲ್ಟಿ: ರಸ್ತೆ ಮೇಲೆಲ್ಲಾ ಚಲ್ಲಾಪಿಲ್ಲಿಯಾದ ಮೊಟ್ಟೆಗಳು!

ಬೆಂಗಳೂರು: ಕೆಆರ್ ಪುರದ ಟಿಸಿ ಪಾಳ್ಯ ಸಿಗ್ನಲ್ ಬಳಿ ಇಂದು ಬೆಳಗ್ಗೆ ಬೃಹತ್ ಕ್ಯಾಂಟರ್ ಮತ್ತು ಮೊಟ್ಟೆ ತುಂಬಿದ್ದ ಮಿನಿ ಟೆಂಪೋ ನಡುವೆ ಅಪಘಾತ ಸಂಭವಿಸಿದೆ.

ಈ ಘಟನೆಯಲ್ಲಿ ಸಾವಿರಾರು ಮೊಟ್ಟೆಗಳು ರಸ್ತೆ ಮೇಲೆ ಬಿದ್ದು ಸಂಪೂರ್ಣವಾಗಿ ನಾಶವಾಗಿವೆ.

ಮಾರುಕಟ್ಟೆಗೆ ಮೊಟ್ಟೆ ಸಾಗಿಸುತ್ತಿದ್ದ ಮಿನಿ ಟೆಂಪೋಗೆ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಪಲ್ಟಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನದಲ್ಲಿ ತುಂಬಿದ್ದ ಮೊಟ್ಟೆಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದು ಹಾನಿಗೊಂಡಿವೆ.

ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳಕ್ಕೆ ಕೆಆರ್ ಪುರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಅಪಘಾತ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RCB Vs LSG: ಲಕ್ನೋ ಮಣಿಸಿ ಅಗ್ರಸ್ಥಾನಕ್ಕೇರಿದ ಬೆಂಗಳೂರು; ಕಿಂಗ್ ಕೊಹ್ಲಿ ಆರ್ಭಟಕ್ಕೆ ವಿಶ್ವ ದಾಖಲೆ ಧೂಳಿಪಟ!

0

ಬೆಂಗಳೂರು: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು.

ಸುಲಭ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ 15.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಉತ್ತಮ ನೆಟ್ ರನ್‌ರೇಟ್ ಸಹಾಯದಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಪಂದ್ಯದಲ್ಲಿ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 49 ರನ್​ ಬಾರಿಸಿದ್ದರು. ಈ 49 ರನ್​ಗಳೊಂದಿಗೆ ಕಿಂಗ್ ಕೊಹ್ಲಿ ಟಿ20 ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಇಂತಹದೊಂದು ಭರ್ಜರಿ ದಾಖಲೆ ಇಂಗ್ಲೆಂಡ್​ನ ಜೇಮ್ಸ್​ ವಿನ್ಸ್​ ಹೆಸರಿನಲ್ಲಿತ್ತು. ಸೌತಂಪ್ಟನ್​ನ ರೋಸ್ ಬೌಲ್​ ಮೈದಾನದಲ್ಲಿ 117 ಇನಿಂಗ್ಸ್​ಗಳಲ್ಲಿ 3585 ರನ್​ ಕಲೆಹಾಕುವ ಮೂಲಕ ಜೇಮ್ಸ್​ ವಿನ್ಸ್, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಗ್ರೌಂಡ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್​ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಅಳಿಸಿ ಹಾಕಿದ್ದಾರೆ. ಕಿಂಗ್ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈವರೆಗೆ 109 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಕೊಹ್ಲಿ ಬರೋಬ್ಬರಿ 3750+ ರನ್​ ಗಳಿಸಿದ್ದಾರೆ. ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.