ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ಗ್ರಾಮದ ಜವಳಾಪೂರ ಪ್ಲಾಟ್‌ನಲ್ಲಿ ಶನಿವಾರ ಮಧ್ಯಾಹ್ನ ೨ರ ಸುಮಾರಿಗೆ ಬೆಂಕಿ ತಗುಲಿ 5 ತಗಡಿನ ಮನೆಗಳು ಸಂಪೂರ್ಣ ಭಸ್ಮವಾಗಿದ್ದು, 10 ಜಾನುವಾರುಗಳ ಹೊಟ್ಟಿನ ಬಣಿವೆಗಳು ಸೇರಿದಂತೆ 3 ಚಕ್ಕಡಿಗಳು ಬೆಂಕಿಗೆ ಆಹುತಿಯಾಗಿವೆ.
ಪ್ಲಾಟ್‌ನಲ್ಲಿಯ ಟಿಸಿಯಲ್ಲಿ ಜೋರಾಗಿ ಶಬ್ದ ಬಂದಿದ್ದು, ಇದರ ಕಿಡಿಯು ಬಣಿವೆಗೆ ತಗುಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ.
ನೋಡ ನೋಡುತ್ತಿದ್ದಂತೆಯೇ ಮನೆಗಳಿಗೆ ಹೊತ್ತಿಕೊಂಡ ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟರು. ಮನೆಯಲ್ಲಿನ ಎಲ್ಲ ಸಾಮಾಗ್ರಿ ಮತ್ತು ದಿನಸಿ ವಸ್ತುಗಳು ಸಹ ಸಂಪೂರ್ಣವಾಗಿ ಸುಟ್ಟುಹೋಗಿವೆ. ಶಿರಹಟ್ಟಿಯ ಅಗ್ನಿಶಾಮಕ ಠಾಣೆಯ ವಾಹನ ಬೇರೆಡೆಗೆ ಹೋಗಿದ್ದರಿಂದ ಲಕ್ಷ್ಮೇಶ್ವರದಿಂದ ಅಗ್ನಿಶಾಮಕ ವಾಹನ ಬಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ.
ಸೂಕ್ತ ಪರಿಹಾರಕ್ಕೆ ಒತ್ತಾಯ
ವಿದ್ಯುತ್ ಟಿಸಿಯಿಂದ ಹೊರಬಂದ ಕಿಡಿಯಿಂದ ಪ್ಲಾಟ್‌ನಲ್ಲಿಯ ಕುಟುಂಬಗಳ ಮನೆಗಳು ಸಂಪೂರ್ಣ ಭಸ್ಮವಾಗಿದ್ದು, ಈ ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮದ ವೀರನಗೌಡ ಪಾಟೀಲ ಆಗ್ರಹಿಸಿದ್ದಾರೆ.
ರೈತರೊಬ್ಬರಿಗೆ ಜೆಸಿಬಿ ಕೊಡಿಸುವದಾಗಿ ನಂಬಿಸಿ ಲಕ್ಷಾಂತರ ರೂ.ಗಳನ್ನು ಪಡೆದು ನಾಲ್ವರು ಉದ್ಯಮಿಗಳು ಮೋಸ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರ ಗ್ರಾಮದ ರೈತ ಬಸವಣ್ಣೆಪ್ಪ ನಾಗಪ್ಪ ಎಂಬುವರು ತಮ್ಮ ಉದ್ಯೋಗಕ್ಕಾಗಿ ಜೆಸಿಬಿ ತೆಗೆದುಕೊಳ್ಳುವ ಸಲುವಾಗಿ ಹುಬ್ಬಳ್ಳಿಯ ಅಮರಗೋಳದ ಎಪಿಎಮ್ ಸಿ ಯಾರ್ಡ್ ನ ಅಬ್ದುಲ್ ಸಾಬ ಎ ದರಗಾದ ಎಂಬುವರ ಜೊತೆಗೆ ಮಾತನಾಡಿದ್ದಾರೆ.
ಆಗ ಅಬ್ದುಲ್ ಸಾಬ ಇನ್ನುಳಿದ ತಮಿಳುನಾಡಿನ ಸುಬ್ರಮಣಿಯನ್, ಕರುಪ್ಪುಸಾಮಿ ಹಾಗೂ ಇನ್ನೊಬ್ಬ ಕರುಪ್ಪುಸ್ವಾಮಿ ವೀರಮುತ್ತು ಎಂಬುವರ ಜೊತೆಗೆ ಸೇರಿಕೊಂಡು ಕಳೆದ ವರ್ಷ 2022ರ ಸೆಪ್ಟೆಂಬರ್ 20ರಂದು ಲಕ್ಷ್ಮೇಶ್ವರದ ಬಸ್ ನಿಲ್ದಾಣದ ಬಳಿ ಜೆಸಿಬಿ ಯ ಪೋಟೋ ತೋರಿಸಿ ಇದು ಮಾರಾಟಕ್ಕೆ ಇದೆ ಎಂದು ನಂಬಿಸಿ ರೈತ ಬಸವಣ್ಣೆಪ್ಪನಿಂದ ಮುಂಗಡವಾಗಿ 50 ಸಾವಿರ ರೂ.ಗಳನ್ನು ಪಡೆದು ನಂತರ, ಎರಡು ದಿನ ಬಿಟ್ಟು ಸೆಪ್ಟೆಂಬರ್ 23ರಂದು ತಮಿಳುನಾಡಿನ ಮಧುರೈಗೆ ಕರೆದುಕೊಂಡು ಹೋಗಿ ಬೇರೆ ಯಾರಿಗೂ ಸೇರಿದ ಜೆಸಿಬಿ ತೋರಿಸಿ ರೈತನಿಂದ ಮತ್ತೆ 16 ಲಕ್ಷ ರೂ.ಗಳನ್ನು ಬ್ಯಾಂಕ್ ಮುಖಾಂತರ ತಮ್ಮ ಖಾತೆಗೆ ಹಾಕಿಸಿಕೊಂಡು ಜೆಸಿಬಿ ಕೊಡಸದೇ ಹಣವನ್ನು ಕೊಡದೆ ಮೋಸ ಮಾಡಿದ್ದಾರೆ.
ಈ ಕುರಿತು ರೈತ ಬಸವಣ್ಣೆಪ್ಪ ನಾಗಪ್ಪ ಎಂಬುವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚೀಟಿಂಗ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಆರೋಪ
ವಿಜಯಸಾಕ್ಷಿ ಸುದ್ದಿ, ಗದಗ
ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ. ಮುಖ್ಯಮಂತ್ರಿ ಮೇಲೆ ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ಕಾಮನ್ ಮ್ಯಾನ್ ಬಸವರಾಜ ಬೊಮ್ಮಾಯಿ ಅವರನ್ನು ಅವಮಾನಿಸುವುದು ರಾಜ್ಯದ ಜನರನ್ನು ಅವಮಾನಿಸಿದಂತೆ ಎನ್ನುವುದನ್ನು ಕಾಂಗ್ರೆಸ್ ಮರೆಯಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಆರೋಪಿಸಿದರು.
ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಆರೋಪ ಮಾಡಲು ಕಾಂಗ್ರೆಸ್ಸಿಗೆ ಯಾವುದೇ ವಿಷಯವಿಲ್ಲ. ಹೀಗಾಗಿ ಸ್ಯಾಂಟ್ರೋ ರವಿ ಆತ್ಮಹತ್ಯೆ ವಿಷಯ ಮುನ್ನಲೆಗೆ ತಂದಿದ್ದಾರೆ. ಕಾಂಗ್ರೆಸ್ ಕೆಲ ತಿಂಗಳಿಂದ ಇಂಥ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ಸಿಗರಿಗೆ ಸುಳ್ಳು ಹೇಳುವುದೇ ಕಾಯಕವಾಗಿದೆ. ಹೀಗಾಗಿ ಉಚಿತ ಕೊಡುಗೆ ಘೋಷಣೆ ಮಾಡುವ ಮೂಲಕ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಬೆರಳೆಣಿಕೆಯ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಲ್ಲಿನ ಸಾಧನೆಗಳನ್ನಾದರೂ ಜನರ ಮುಂದಿಡುವ ಕೆಲಸವನ್ನು ಕಾಂಗ್ರೆಸ್ ಮಾಡಲಿ ಎಂದು ಸವಾಲು ಹಾಕಿದರು.
ರಾಜ್ಯ ಬಿಜೆಪಿ ಸರಕಾರದ ಮೇಲೆ ೪೦ ಪ್ರತಿಶತ ಕಮಿಷನ್ ಆರೋಪ ಕಾಂಗ್ರೆಸ್ ಸೃಷ್ಟಿ. ಕಾಂಗ್ರೆಸ್ಸಿಗರ ಆರೋಪದಲ್ಲಿ ಸತ್ಯಾಸತ್ಯತೆ ಇದ್ದರೆ ಎಫ್‌ಐಆರ್ ದಾಖಲಿಸಲಿ, ವೃಥಾ ಆರೋಪ ಮಾಡುವುದು ಕಾಂಗ್ರೆಸ್ ಚಾಳಿ. ಬಿಜೆಪಿ ಇಂಥ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಖಾತೆ ಸಚಿವ ಸಿ.ಸಿ.ಪಾಟೀಲ, ಶಾಸಕರಾದ ಕಳಕಪ್ಪ ಬಂಡಿ, ಎಸ್ ವಿ ಸಂಕನೂರು, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಮುಖಂಡರಾದ ಎಮ್.ಎಮ್ ಹಿರೇಮಠ, ವಿನಾಯಕ ಹಬೀಬ ಇದ್ದರು.
ಕಾಂಗ್ರೆಸ್ 200 ಯುನಿಟ್ ಉಚಿತ ವಿದ್ಯುತ್ ಕೊಡುವ ವಾಗ್ದಾನ ಮಾಡಿದೆ. ಒಂದು ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಇಲ್ಲದೇ ಉಚಿತವಾಗಿ ಹೇಗೆ ಕೊಡಲು ಸಾಧ್ಯ? ಸದ್ಯ ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಲ್ಲಿ ಯಾಕೆ ಉಚಿತವಾಗಿ ವಿದ್ಯುತ್ ಕೊಟ್ಟಿಲ್ಲ? 12 ಬಾರಿ ವಿದ್ಯುತ್ ಬೆಲೆ ಏರಿಕೆ ಮಾಡಿದ್ದು ಏಕೆ ಎನ್ನುವುದನ್ನು ಕಾಂಗ್ರೆಸ್ಸಿಗರು ಉತ್ತರಿಸಬೇಕು.
ದೇವರನ್ನು ನಂಬುವ, ನಂಬದೇ ಇರುವ ಜನರಿದ್ದಾರೆ. ಆದರೆ ನಂಬುವವರ ಸಂಖ್ಯೆ ಹೆಚ್ಚಾಗಿರುವುದರಿಂದಲೇ ದೇವಸ್ಥಾನಗಳ ಸಂಖ್ಯೆಯು ಹೆಚ್ಚಾಗುತ್ತಿವೆ. ಸಾವಿರಾರು ವರ್ಷಗಳ ಹಿಂದೆ ಈ ದೇಶದಲ್ಲಿ ಕಟ್ಟಿರುವ ದೇವಸ್ಥಾನಗಳು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿವೆ ಎಂದು ಶಿರಹಟ್ಟಿಯ ಭಾವೈಕ್ಯತಾ ಮಹಾಸಂಸ್ಥಾನ ಮಠದ ಫಕ್ಕೀರದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಗುರುವಾರ ಬಸ್ತಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ಧಿವಿನಾಯಕ ಹಾಗು ಆಂಜನೇಯ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆ ಯಾವುದೇ ಯಂತ್ರಗಳ ಸಹಾಯವಿಲ್ಲದೇ ಸಮುದ್ರದ ಆಳದಲ್ಲಿ ನಿರ್ಮಿಸಿರುವ ರಾಮೇಶ್ವರ ದೇವಾಲಯದಲ್ಲಿನ ಸಿಹಿನೀರಿನ ಬಾವಿಗಳು, ತಂಜಾವೂರಿನ ಬೃಹದೇಶ್ವರ ದೇವಾಲಯದ ಗೋಪುರದ ವಿಶೇಷತೆ, ಒಡಿಸ್ಸಾದಲ್ಲಿರುವ ಪುರಿ ಜಗನ್ನಾಥ ದೇವಾಲಯದ ಧ್ವಜದ ವಿಶೇಷತೆಗಳು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿವೆ. ದಿಕ್ಕಿಲ್ಲದವರಿಗೆ ದೇವರೆ ಗತಿ, ದಿಕ್ಕಿಲ್ಲದ ದೇವಸ್ಥಾನಗಳಿಗೆ ಭಕ್ತರೆ ಗತಿ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.
ದೇವಸ್ಥಾನ ಕಟ್ಟುವುದು ಮುಖ್ಯವಲ್ಲ, ಶರಣರು ಹೇಳಿದಂತೆ ದೇಹವನ್ನು ದೇವಾಲಯವನ್ನಾಗಿ ಮಾಡಿಕೊಂಡು ಜಾತ್ಯಾತೀತ ಮನೊಭಾವನೆಯಿಂದ ನಂಬುಗೆ ವಿಶ್ವಾಸ ಸಂಸ್ಕಾರದಿಂದ ನಡೆದುಕೊಳ್ಳಬೇಕು. ಇಲ್ಲಿ ನಿರ್ಮಿಸಿರುವ ದೇವಾಲಯವು ಕೂಡ ಅತೀ ಅಚ್ಚುಕಟ್ಟಾಗಿದ್ದು ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲ ದಾನಿಗಳಿಗೂ, ಭಕ್ತರಿಗೆ ಶುಭವಾಗಲಿ ಎಂದು ಹಾರೈಸಿದರು.
ಸಿದ್ಧಿವಿನಾಯಕ ನಗರ ಹಾಗೂ ಲಕ್ಷ್ಮೀ ಪಾರ್ಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ವಾಯ್. ಬಾರಕೇರ ಅಧ್ಯಕ್ಷತೆ ವಹಿಸಿ ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಖರ್ಚು ವೆಚ್ಚದ ವಿವರಗಳನ್ನು ತಿಳಿಸಿದರು.
ಜ.22 ರಿಂದ ನಿರಂತರವಾಗಿ ಐದು ದಿನ ದೇವಸ್ಥಾನದಲ್ಲಿ ನಡೆದ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಈ ನಾಡಿನ ಹರಗುರು ಚರಮೂರ್ತಿಗಳು, ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ದಾನಿಗಳು, ಮಾಜಿ ಸೈನಿಕರು, ಪತ್ರಕರ್ತರು, ಹಾಸ್ಯ ಹಾಗೂ ಜಾನಪದ ಕಲಾವಿದರು, ಎಲೆ ಮರೆ ಕಾಯಿಯಂತೆ ಸೇವೆ ಸಲ್ಲಿಸಿದ ಎಲ್ಲರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿನಿತ್ಯವು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. .
ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಡಿ.ಜೆ.ನಾಯ್ಕರ, ಪ್ರಧಾನ ಕಾರ್ಯದರ್ಶಿ ಎಸ್. ಜಿ. ಇನಾಮತಿ, ಸದಸ್ಯರಾದ ಎಂ.ಎನ್.ಗಂಗನಗೌಡ್ರ, ಬಿ.ಎಸ್.ಕಟ್ಟಿಮನಿ, ವಿ.ಎಚ್.ಕಿರೇಸೂರ, ಎಂ.ಆರ್.ಹುಯಿಲಗೋಳ, ಆರ್.ಬಿ.ಬಾಳನಗೌಡ್ರ, ಪಿ.ಆರ್.ಹಿರೇಮಠ, ಜೆ.ಎ.ರಂಗಣ್ಣವರ, ಆರ್.ಎಚ್.ನೇಗಲಿ, ಬಿ.ಎಸ್.ಬಾಗಲಕೋಟಿ, ಎಂ.ಎಫ್.ಮಾಳವಾಡ ಹಾಗೂ ಪಿ.ಎಂ.ಹಡಪದ ಉಪಸ್ಥಿತರಿದ್ದರು.
ಗ್ರಾಹಕರು ಖಾತೆಗಳಿಗೆ ಜಮಾ ಮಾಡಲು ಕೊಟ್ಟ ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡದೆ ಸ್ವಂತಕ್ಕೆ ಬಳಿಸಿಕೊಂಡ ಪೋಸ್ಟ್ ಮಾಸ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿರಹಟ್ಟಿ ತಾಲೂಕಿನ ಸುಗ್ನಳ್ಳಿ ಗ್ರಾಮದ ಗ್ರಾಮೀಣ ಶಾಖಾ ಅಂಚೆ ಪಾಲಕ ಅಂತ ಕೆಲಸ ಮಾಡುತ್ತಿದ್ದ ರಣತೂರ ಗ್ರಾಮದ ವಿನೋದಕುಮಾರ್ ಎಚ್ ಹೆಬ್ಬಾಳ ಎಂಬುವರೇ ಗ್ರಾಹಕರಿಗೆ ಹಾಗೂ ಸರಕಾರಕ್ಕೆ ಮೋಸ ಮಾಡಿದ್ದಾರೆ ಎನ್ನಲಾಗಿದೆ.
ಆರೋಪಿತ ಪೋಸ್ಟ್ ಮಾಸ್ಟರ್ ವಿನೋದಕುಮಾರ್ , 2017ರಿಂದ ಸುಗ್ನಳ್ಳಿ ಗ್ರಾಮದಲ್ಲಿ ಅಂಚೆ ಪಾಲಕ ಎಂದು ಕಾರ್ಯನಿರ್ವಹಿಸುತ್ತಿದ್ದಾನೆ.
21-10-2021ರಿಂದ 03-03-2022ರ ನಡುವಿನ ಅವಧಿಯಲ್ಲಿ ಗ್ರಾಹಕರು ತಮ್ಮ ಖಾತೆಗಳಿಗೆ ಹಣ ತುಂಬಲು ಕೊಟ್ಟ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾನೆ.
ಗ್ರಾಹಕರ ಪಾಸ್ ಬುಕ್ ನಲ್ಲಿ ಮಾತ್ರ ಅವರು ಕೊಟ್ಟ ಹಣದ ಮೊತ್ತವನ್ನು ದಾಖಲು ಮಾಡಿದ್ದು, ತನ್ನದೊಂದು ಸಣ್ಣದೊಂದು ಸಹಿ ಮಾಡಿದ್ದಾನೆ.
ಒಟ್ಟು ಮೂರು ಜನ ಗ್ರಾಹಕರಿಗೆ ಸೇರಿದ 63,300ರೂ. ಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪಿ ಪೋಸ್ಟ್ ಮಾಸ್ಟರ್ ವಿರುದ್ಧ ಗದಗ ಹೆಡ್ ಪೋಸ್ಟ್ ನ ಅಧಿಕಾರಿ ಎಮ್. ಜಿ ಕರಣ ಎಂಬುವರು ಶಿರಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, 0015/2023-ಐಪಿಸಿ 1860-(u/s-409,420,465,468 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ಚಾಲಕನೊಬ್ಬನಿಗೆ ನಿನ್ನ ಆಟೋ ಸರಿ ಇಟ್ಟಿಲ್ಲ, ಗ್ಲಾಸ್ ಸರಿಯಾಗಿಲ್ಲ ನಿನ್ನ ಗಾಡಿಯ ದಾಖಲೆಗಳನ್ನು ತೋರಿಸು ಇಲ್ಲದಿದ್ದರೆ ನಿನ್ನ ಗಾಡಿಯನ್ನು ಸೀಜ್ ಮಾಡಿ ತೆಗೆದುಕೊಂಡು ಹೋಗುತ್ತೇನೆ ಎಂದು ಆರ್.ಟಿ.ಓ ಸೂಪರ್‌ವೈಜರ್ ಹೆಸರಿನಲ್ಲಿ ವಂಚನೆಗೆ ಮುಂದಾದ ಘಟನೆ ಜರುಗಿದೆ.
ಗಜೇಂದ್ರಗಡದ ಮುತ್ತುರಾಜ್ ಮೂಕಪ್ಪ ಗುಡೂರ ಎಂಬುವವರು ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಶಮೀರ ಜಂದಿಸಾಬ ಸರಖವಾಸ ಎಂಬ ಆಟೋ ಚಾಲಕನಿಗೆ ಆರೋಪಿ ಮುತ್ತುರಾಜ್ ಮೂಕಪ್ಪ ಗುಡೂರ ಎಂಬಾತ ಆಟೋ ಸರಿಯಾಗಿ ಇಟ್ಟುಕೊಂಡಿಲ್ಲ, ದಾಖಲೆ ತೋರಿಸು ಇಲ್ಲದಿದ್ದರೆ ನಿನ್ನ ಆಟೋ ಸೀಜ್ ಮಾಡಿ ತೆಗೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ದಲ್ಲದೇ ಹತ್ತು ಸಾವಿರ ರೂ. ದಂಡ ಕಟ್ಟು ಅಂತ ಹೇಳಿ, ಆರ್. ಟಿ.ಓ ಸೂಪರ್‌ವೈಜರ್ ಹೆಸರಿನಲ್ಲಿ ಹೆದರಿಸಿ, ವಂಚನೆ ಮಾಡಲು ಯತ್ನಿಸಲಾಗಿದೆ.
ಈ ಕುರಿತು ಬೆಟಗೇರಿ ಬಡಾವಣೆ ಠಾಣೆಯಲ್ಲಿ ಆರೋಪಿ ಮುತ್ತುರಾಜ್ ಮೂಕಪ್ಪ ಗುಡೂರ ಎಂಬಾತನ ಮೇಲೆ ಐಪಿಸಿ-1960(u/s- 511, 384, 419, 420) ೦೦೦೪/೨೦೨೩ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
74ನೇ ಗಣರಾಜ್ಯೋತ್ಸವ ದಿನಾಚರಣೆ – ಶಿಕ್ಷಣ ಇಲಾಖೆಯ ವೈಫಲ್ಯಕ್ಕೆ ಬೇಸರ……
ವಿಜಯಸಾಕ್ಷಿ ಸುದ್ದಿ, ನವಲಗುಂದ: ಹಲವಾರು ಭಾಷೆ, ಉಡುಗೆ- ತೊಡುಗೆ, ಆಚಾರ- ವಿಚಾರಗಳನ್ನು ಹೊಂದಿರುವ ಭಾರತ ದೇಶವು ವೈವಿದ್ಯತೆಯಲ್ಲಿ ಏಕತೆಯನ್ನು ಸಾಧಿಸುವ ಮೂಲಕ ಬೃಹತ್ತಾದ ಗಣರಾಜ್ಯವನ್ನು ಹೊಂದಿದೆ. ಜನರಿಂದ ಜನರಿಗೋಸ್ಕರ ಜನರಿಗಾಗಿ ನಡೆಸಕ್ಕಂತ ಸರ್ಕಾರನ್ನು ಪ್ರಜಾಪ್ರಭುತ್ವ ಸರ್ಕಾರ ಎಂದು ಹೇಳುತ್ತೇವೆ. ಅಂತಹ ಪ್ರಜಾಪ್ರಭುತ್ವ ಸರ್ಕಾರವನ್ನು ಬಲಿಷ್ಠ ಪಡಿಸಲು ಎಲ್ಲರೂ ಸಹಕರಿಸಿ ಭಾರತದ ಉತ್ತಮ ಪ್ರಜೆಗಳಾಗಿ ಏಕತೆ ಅಭಿವೃದ್ಧಿ ಕಡೆ ಕೈಜೋಡಿಸಿ ನವಭಾರತದ ನಿರ್ಮಾಣ ಮಾಡಬೇಕೆಂದು ತಹಸೀಲ್ದಾರ್ ಅನಿಲ ಬಡಿಗೇರ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ಗುರುವಾರ ಇಲ್ಲಿಯ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 74ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ನೂರಾರು ವರ್ಷಗಳ ನಿರಂತರ ಶೋಷಣೆಗೆ ಒಳಗಾಗಿ ನಲುಗಿ ಹೋಗಿದ್ದ ದೇಶದ ಸ್ವಾತಂತ್ರ್ಯವನ್ನು ಪಡೆಯಲು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಸ್ಮರಿಸುವಂತಹ ದಿನವಿದು. ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನಲ್ಲಿಯೇ ಬೃಹತ್ತಾದ ಸಂವಿಧಾನವನ್ನು ರಚನೆ ಮಾಡಿ ಅದನ್ನು ಅಂಗೀಕಾರ ಮಾಡಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ದಿನವಿದು.
ಎಲ್ಲಿಯ ತನಕ ತಾವು ಸಾಮಾಜಿಕ ಸ್ವಾತಂತ್ರ್ಯವನ್ನು ಸಾಧಿಸುವುದಿಲ್ಲವೋ ಅಲ್ಲಿಯ ತನಕ ಕಾನೂನು ಒದಗಿಸುವ ಯಾವುದೇ ಸ್ವಾತಂತ್ರ್ಯವನ್ನು ಪಡೆದರೂ ಅದು ಪ್ರಯೋಜನಾಗುವುದಿಲ್ಲವೆಂದು ಡಾ.ಬಿ.ಆರ್.ಅಂಬೇಡ್ಕರ ಹೇಳಿರುವ ಮಾತನ್ನು ನೆನಪಿನಲ್ಲಿಟ್ಟುಕೊಂಡು ಸ್ವಾತಂತ್ರ್ಯ, ಸಹೋದರತೆ, ಸಮಾನತೆ ಪಾಲನೆ ಮಾಡಿದಾಗ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ ಹೊರ ರಾಷ್ಟ್ರಗಳಿಗೆ ರಪ್ತು ಮಾಡುತ್ತಿರುವ ಈ ದೇಶ ಕೈಗಾರಿಕೆಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಶ್ರೇಷ್ಟತೆಯನ್ನು ಮೆರೆದಿದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಈ ದೇಶದ ಏಕತೆಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ವಿಜೇತ ಸಿಪಿಐ ದೃವರಾಜ ಪಾಟೀಲ, ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಸಾವಿತ್ರಮ್ಮ ಪೂಜಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ದಳಗಳ ಪರಿವೀಕ್ಷಣೆ ಮಾಡಲಾಯಿತು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪುರಸಭೆ ಅಧ್ಯಕ್ಷ ಮೋದಿನಸಾಬ ಶಿರೂರ, ಉಪಾಧ್ಯಕ್ಷೆ ಪದ್ಮಾವತಿ ಪೂಜಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಮಲ್ಲಾಡ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ, ಮುಖ್ಯಾಧಿಕಾರಿ ವಿರೇಶ ಹಸಬಿ. ಪಿಎಸ್‍ಐ ನವೀನ ಜಕ್ಕಲಿ, ಅಬಕಾರಿ ಇನ್ಸಪೆಕ್ಟರ್ ಗೀತಾ ತೆಗ್ಯಾಳ, ಪುರಸಭೆ ಸದಸ್ಯರು, ಚುನಾಯಿತ ಪ್ರತಿನಿಧಿಗಳು. ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಣ ಇಲಾಖೆಯ ವೈಪಲ್ಯತೆ ಖೇದಕರ : ಗಣರಾಜ್ಯೋತ್ಸವವನ್ನು ಶಿಸ್ತಿನಿಂದ ಆಚರಿಸಬೇಕೆಂದು ಶಿಕ್ಷಣ ಇಲಾಖೆಯ ಸಭೆ ಮಾಡಿ ಸೂಚನೆ ನೀಡಿದ್ದರು. ಸರಿಯಾದ ವ್ಯವಸ್ಥೆಯನ್ನು ಮಾಡದೇ ತಮ್ಮ ತಮ್ಮ ಶಾಲೆಯ ಮಕ್ಕಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿ ಶಾಂತತೆಗೆ ಭಗ್ನ ಉಂಟಾಗಿರುವುದು ಖೇದಕರ ಸಂಗತಿ ಎಂದು ತಹಸೀಲ್ದಾರ್ ಅನಿಲ ಬಡಿಗೇರ ಬೇಸರ ವ್ಯಕಪಡಿಸಿದರು.
ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠವಾದ ಪ್ರಜಾಪ್ರಭುತ್ವ ಹೊಂದಿರುವ ಈ ದೇಶದಲ್ಲಿ ಪ್ರಜೆಗಳಿಂದಲೇ ನೇರವಾಗಿ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಸಂವಿಧಾನಾತ್ಮಕವಾಗಿ ಬಂದಿರುವುದರಿಂದ ಭವ್ಯ ಭಾರತದ ನಿರ್ಮಾಣಕ್ಕಾಗಿ ಮುಂಬರುವ ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜಾತಿ, ಮತ, ಭಾಷೆ ಹಾಗೂ ಇನ್ನಿತರ ಯಾವುದೇ ಪ್ರೇರಣೆಗಳಿಗೆ ಪ್ರಭಾವಿತರಾಗದೆ ಪ್ರಭಲ ಅಸ್ತ್ರವಾಗಿರುವ ಮತವನ್ನು ಕಡ್ಡಾಯವಾಗಿ ಚಲಾಯಿಸುವಂತೆ ತಹಸೀಲ್ದಾರ್ ಅನಿಲ ಬಡಿಗೇರ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಬುಧವಾರ ಕಾಲೇಜು ಶಿಕ್ಷಣ ಇಲಾಖೆ, ನ್ಯಾಯಾಂಗ ಇಲಾಖೆ ಹಾಗೂ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ. ಇಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದರಿಂದ ತಮಗೆ ನೀಡಿರುವ ಪರಮಾಧಿಕಾರವನ್ನು ಉಪಯೋಗಿಸಿಕೊಂಡು ಶೇ.100 ರಷ್ಟು ಮತ ಚಲಾವಣೆ ಮಾಡಿದಾಗ ಮಾತ್ರ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದು ತಹಸೀಲ್ದಾರ್ ಅನಿಲ ಬಡಿಗೇರ ತಿಳಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಎಸ್.ವಿ.ಮರಡ್ಡಿ ಮಾತನಾಡಿ, ಮತದಾನ ಎಂಬುದೇ ಇದೊಂದು ‘ಉಡುಗೊರೆ’ ಇದ್ದಂತೆ. ಯೋಚನೆ ವಿವೇಚನೆ ಮಾಡಿ ನಿರ್ಭಿಡೆಯಿಂದ ಮತದಾನ ಮಾಡುವ ಮೂಲಕ ತಮಗಿಷ್ಟವಾದ ಸೂಕ್ತ ಜನಪ್ರತಿನಿಧಿಯನ್ನು ಚುನಾಯಿಸಿದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ಸಲಹೆ ನೀಡಿ ಕಾನೂನಿನ ಬಗ್ಗೆ ಅರಿವು ಮೂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಮಹಾದೇವ ಬಾಗಡಿ, ನಮ್ಮ ಮಹಾವಿದ್ಯಾಲಯದಲ್ಲಿ ಬಹುತೇಕ ಎಲ್ಲ ವಿದ್ಯಾರ್ಥಿಗಳು ಮತದಾನದ ಹಕ್ಕು ಪಡೆದವರಿದ್ದಾರೆ. ಶೇ.100 ರಷ್ಟು ಮತದಾನ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ಮಹಾವಿದ್ಯಾಲಯದಿಂದ ಎಲ್ಲ ಸಹಕಾರ ನೀಡಿ ಮತದಾರರ ದಿನಾಚರಣೆಯನ್ನು ಯಶಸ್ವಿಗೊಳಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಅನಿಲ ಬಡಿಗೇರ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋದನೆ ಮಾಡಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡಿದರು. ನಂತರ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಮಲ್ಲಾಡದ, ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷ ಚರಂತಯ್ಯ ಹಿರೇಮಠ, ಉಪ ತಹಸೀಲ್ದಾರ್ ಎಸ್.ಸಿ.ಹುಕ್ಕೇರಿ, ಶಿಕ್ಷಕ ಎಸ್.ಬಿ.ಬೆಂಚಿಗೇರಿ ಪಾಲ್ಗೊಂಡಿದ್ದರು. ಸಂಯೋಜಕರಾದ ವಿನಾಯಕ ಮಿರಜಕರ ಸ್ವಾಗತಿಸಿದರು. ಸವಿತಾ ಚಿಕ್ಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಸೂಡಿ ವಂದಿಸಿದರು.
ದಿ ಬ್ಯಾಲೆಟ್ ಇಸ್ ದಿ ಸ್ಟ್ರಾಂಗರ್ ದ್ಯಾನ್ ಬುಲೆಟ್
ಮತದಾನ ಮಾಡುವುದಕ್ಕಿಂತ ಶ್ರೇಷ್ಟವಾದುದು ಯಾವುದು ಇಲ್ಲ. ನಾನು ಮತದಾನವನ್ನು ಕಡ್ಡಾಯವಾಗಿ ಮಾಡಿಯೇ ಮಾಡುತ್ತೇನೆ. ನಾನು ಸಮರ್ಥವಾಗಿ ಮತ ಚಲಾವಣೆ ಮಾಡದಿದ್ದರೇ ಸಮಾಜದಲ್ಲಿ ನಾನು ಇದ್ದು ಸತ್ತಂತೆ ಮತ್ತು ನಿಷ್ಕ್ರೀಯವಾದಂತೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದ ಅವರು ಅಮೇರಿಕದ ಅಧ್ಯಕ್ಷರಾಗಿದ್ದ ಅಬ್ರಾಂ ಲಿಂಕನ್ ಹೇಳಿದ ‘ದಿ ಬ್ಯಾಲೆಟ್ ಇಸ್ ದಿ ಸ್ಟ್ರಾಂಗರ್ ದ್ಯಾನ ಬುಲೆಟ್’ ಎಂಬ ಮಾತನ್ನು ಸವಿತಾ ಚಿಕ್ಕಣ್ಣವರ ನೆನಪಿಸಿದರು.