Home Blog Page 33

ಹೃದಯದಿಂದ ಚರ್ಮದವರೆಗೆ…ದಾಳಿಂಬೆ ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಲಾಭಗಳು!

0

ದಾಳಿಂಬೆ ಹಣ್ಣು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಹಣ್ಣಾಗಿದೆ. ಸಣ್ಣ ಕೆಂಪು ಕಣಗಳಂತೆ ಕಾಣುವ ಬೀಜಗಳನ್ನು ಹೊಂದಿರುವ ಈ ಹಣ್ಣು ಪೋಷಕಾಂಶಗಳ ಭಂಡಾರವೆಂದೇ ಹೇಳಬಹುದು.

ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ನಾರಿನಾಂಶ, ಸಿ ಮತ್ತು ಕೆ ಜೀವಸತ್ವಗಳು, ಪೊಟ್ಯಾಸಿಯಂ ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ. ಪ್ರತಿದಿನ ದಾಳಿಂಬೆ ಸೇವನೆ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಜೀರ್ಣಾಂಗ ವ್ಯವಸ್ಥೆಯೂ ಉತ್ತಮವಾಗಿರುತ್ತದೆ.

ದಾಳಿಂಬೆ ಸೇವನೆಯಿಂದ ರಕ್ತಹೀನತೆ ನಿವಾರಣೆಯಾಗುತ್ತದೆ. ಇದರಲ್ಲಿ ಇರುವ ಕಬ್ಬಿಣಾಂಶ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ದೇಹದಲ್ಲಿ ರಕ್ತದ ಪ್ರಮಾಣವನ್ನು ಸುಧಾರಿಸುತ್ತದೆ. ಜೊತೆಗೆ ಮುಖದ ನೈಸರ್ಗಿಕ ಕಾಂತಿಯೂ ಹೆಚ್ಚುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತವೆ ಹಾಗೂ ಸಂಧಿವಾತದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತವೆ.

ಹೃದಯ ಆರೋಗ್ಯಕ್ಕೂ ದಾಳಿಂಬೆ ಬಹಳ ಉಪಯುಕ್ತವಾಗಿದೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು, ರಕ್ತನಾಳಗಳನ್ನು ಆರೋಗ್ಯಕರವಾಗಿಡಲು ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಹೃದಯಾಘಾತದ ಅಪಾಯವನ್ನೂ ಕಡಿಮೆ ಮಾಡುತ್ತದೆ. ದಾಳಿಂಬೆ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಶೀತ, ಕೆಮ್ಮು, ನೆಗಡಿ ಮುಂತಾದ ಸಾಮಾನ್ಯ ಸೋಂಕುಗಳನ್ನು ತಡೆಯಲು ನೆರವಾಗುತ್ತದೆ.

ಇದಲ್ಲದೆ ದಾಳಿಂಬೆ ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಮೆದುಳಿನ ಆರೋಗ್ಯಕ್ಕೂ ಇದು ಸಹಕಾರಿ ಆಗಿದ್ದು, ಸ್ಮರಣಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡಿ ಕಾಂತಿ ಹೆಚ್ಚಿಸುವುದಲ್ಲದೆ ವಯಸ್ಸಾಗುವ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ದಾಳಿಂಬೆ ಮಧುಮೇಹ ಇರುವವರಿಗೆ ಉಪಯುಕ್ತವಾಗಿದೆ. ಜೊತೆಗೆ ತ್ವರಿತ ಶಕ್ತಿಯನ್ನು ಒದಗಿಸುವ ಗುಣ ಹೊಂದಿರುವುದರಿಂದ ದಿನನಿತ್ಯದ ಆಹಾರದಲ್ಲಿ ಇದನ್ನು ಸೇರಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಗದಗದಲ್ಲಿ ವರುಣನ ಅಬ್ಬರ, ರೋಣದಲ್ಲಿ ಆಲಿಕಲ್ಲು ಮಳೆ: ಸಿಡಿಲು ಬಡಿದು ರೈತ ಸಾವು – ಹೊಟ್ಟು, ಮೇವು ನೀರು ಪಾಲು!

0

ಗದಗ: ಜಿಲ್ಲೆಯ ಹಲವೆಡೆ ಇಂದು ಸಂಜೆ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ರೋಣ ತಾಲೂಕಿನ ವಿವಿಧ ಭಾಗಗಳಲ್ಲಿ ಆಲಿಕಲ್ಲು ಮಳೆಯೂ ಸುರಿದಿದೆ.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯು ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪು ನೀಡಿದರೂ, ರೈತರಿಗೆ ಸಂಕಷ್ಟ ತಂದೊಡ್ಡಿದೆ.

ರೋಣ ಪಟ್ಟಣ ಸೇರಿದಂತೆ ಕುರಹಟ್ಟಿ, ಜಕ್ಕಲಿ, ಮಲ್ಲಾಪೂರ, ಸೂಡಿ, ಅಬ್ಬಿಗೇರಿ ಗ್ರಾಮಗಳಲ್ಲಿ ಮಳೆ ಜೋರಾಗಿ ಸುರಿದಿದೆ. ಸಂಜೆ ಸುಮಾರು 4 ಗಂಟೆ ವೇಳೆಗೆ ಗಾಳಿ, ಮಿಂಚು, ಗುಡುಗು-ಸಿಡಿಲಿನೊಂದಿಗೆ ವರುಣ ಆರ್ಭಟ ಮೆರೆದಿದ್ದು, ಪರಿಣಾಮ ಎರಡು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು.

ಭಾರೀ ಮಳೆಯಿಂದ ಚರಂಡಿ ನೀರು ರಸ್ತೆಗೆ ಹರಿದುಬಂದ ಪರಿಣಾಮ ವ್ಯಾಪಾರಸ್ಥರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಅಕಾಲಿಕ ಮಳೆಯಿಂದ ಜಾನುವಾರುಗಳಿಗೆ ಸಂಗ್ರಹಿಸಿದ್ದ ಹೊಟ್ಟು ಮೇವು ನೀರು ಪಾಲಾಗಿದ್ದು, ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಮಳೆ ಅವಾಂತರ: ಸಿಡಿಲು ಬಡಿದು ರೈತ ಸಾವು!

ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಇಂದು ಸುರಿದ ಧಾರಾಕಾರ ಮಳೆಗೆ ಸಿಡಿಲು ಬಡಿದು ರೈತನೋರ್ವ ಸಾವನ್ನಪ್ಪಿದ್ದಾನೆ.

ನಿಂಗಪ್ಪ ರಾಮಪ್ಪ ಅಮಾತಿ (58) ಮೃತ ರೈತ. ಇಂದು ಸಾಯಂಕಾಲ ಸರಿಸುಮಾರು 5.30ರ ಸುಮಾರಿಗೆ ಹೊಲದಿಂದ ಬರುವಾಗ ಬೆನ್ನಿ ಹಳ್ಳದ ಹತ್ತಿರ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ರೈತನ ಸಾವಿನಿಂದಾಗಿ ಕುಟುಂಬ ಕಂಗಾಲಾಗಿದ್ದು, ಘಟನೆ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗದಲ್ಲಿ ಸೈಬರ್ ವಂಚನೆ ಜಾಲ ಬಯಲು: 5 ಆರೋಪಿಗಳು ಅರೆಸ್ಟ್ – 11 ಮೊಬೈಲ್, ಬ್ಯಾಂಕ್ ದಾಖಲೆಗಳು ಸೀಜ್!

0

ಗದಗ: ಗದಗ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಭಾರೀ ಸೈಬರ್ ವಂಚನೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ 5 ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 11 ಮೊಬೈಲ್ ಫೋನ್‌ಗಳು, ಬ್ಯಾಂಕ್ ಪಾಸ್ಬುಕ್‌ಗಳು, ಎಟಿಎಂ ಕಾರ್ಡ್‌ಗಳು, ಸಿಮ್ ಕಾರ್ಡ್‌ಗಳು ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಮಾಹಿತಿಯ ಕಿಟ್‌ಗಳನ್ನು ಜಪ್ತಿ ಮಾಡಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ದಾಸರಹಳ್ಳಿ ತಾಂಡಾದ ಆರೋಪಿಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸ್ಕಾಲರ್‌ಶಿಪ್ ಹಾಗೂ ಇತರೆ ಆಮಿಷಗಳನ್ನು ನೀಡಿ ನಂಬಿಕೆ ಗಳಿಸುತ್ತಿದ್ದರು. ಬಳಿಕ ಅವರ ಹೆಸರಿನಲ್ಲಿ ಗದಗ ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾತೆಗಳನ್ನು ತೆರೆಯಿಸಿ, ಪಾಸ್ಬುಕ್, ಎಟಿಎಂ ಕಾರ್ಡ್ ಮತ್ತು ಇತರೆ ಮಾಹಿತಿಗಳನ್ನು ಪಡೆದು ಸೈಬರ್ ವಂಚನೆಗೆ ಬಳಸುತ್ತಿದ್ದರು.

ಮಾರ್ಚ್ 11, 2026ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಮಾಹಿತಿ ಆಧಾರದಲ್ಲಿ ಗೋವಾಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಜಾರ್ಖಂಡ್ ಹಾಗೂ ಛತ್ತೀಸ್‌ಗಢ ಮೂಲದವರೂ ಸೇರಿದ್ದು, ಗೋವದಲ್ಲಿ ನೆಲೆಸಿ ವಂಚನೆ ಜಾಲ ವಿಸ್ತರಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

ಆರೋಪಿತರಿಂದ 8 ಬ್ಯಾಂಕ್ ಖಾತೆಗಳ ಕಿಟ್‌ಗಳು ಹಾಗೂ ಹಾವೇರಿ, ಗದಗ ಜಿಲ್ಲೆಯ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಮೂವರು ಪ್ರಮುಖ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ಪ್ರಕರಣ ರಾಜ್ಯ ಮಟ್ಟದ ದೊಡ್ಡ ಸೈಬರ್ ವಂಚನೆ ಜಾಲವಾಗಿರುವ ಸಾಧ್ಯತೆ ಇದ್ದು, ಸಾರ್ವಜನಿಕರು ಇಂತಹ ಆಮಿಷಗಳಿಗೆ ಒಳಗಾಗದಂತೆ ಎಚ್ಚರಿಕೆಯಿಂದಿರಬೇಕೆಂದು ಎಸ್ಪಿ ರೋಹನ್ ಜಗದೀಶ್ ಮನವಿ ಮಾಡಿದ್ದಾರೆ.

ತಾಯಿ ಬಗ್ಗೆ ನಿಂದನೆ: ಸ್ನೇಹಿತನನ್ನೇ ಸುತ್ತಿಗೆಯಿಂದ ಹೊಡೆದು ಹತ್ಯೆ!

0

ಬೆಂಗಳೂರು: ನಗರದ ಅತ್ತಿಮರ ಗೊರವಿನಗೆರೆಯಲ್ಲಿ ಸುತ್ತಿಗೆಯಿಂದ ಹೊಡೆದು ಸ್ನೇಹಿತನನ್ನೇ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ.

ಕುನಾಲ್ ಕುಮಾರ್ (22) ಕೊಲೆಯಾದ ಯುವಕ. ಮೊಹಮ್ಮದ್ ನಸ್ರುಲ್ಲಾ(24) ಕೊಲೆ ಮಾಡಿದ ಸ್ನೇಹಿತ. ಘಟನೆಗೆ ಸಂಬಂಧಿಸಿದಂತೆ ಆವಲಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ,  ಮೊಹಮ್ಮದ್ ನಸ್ರುಲ್ಲಾ, ಕುನಾಲ್ ಕುಮಾರ್​​ ಒಂದೇ ಕೊಠಡಿಯಲ್ಲಿ ವಾಸವಾಗಿದ್ದು, ಶೀತಕರಣ ಯಂತ್ರ ಸೇವಾ ಕೆಲಸ ಮಾಡುತ್ತಿದ್ದರು. ಈ ವೇಳೆ ನಸ್ರುಲ್ಲಾ ತಾಯಿಯ ಬಗ್ಗೆ ಕುನಾಲ್ ಅವಾಚ್ಯ ಪದ ಬಳಸಿ ನಿಂದಿಸಿದ್ದಾನೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ನಸ್ರುಲ್ಲಾ, ಕುನಾಲ್ ಕುಮಾರ್ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಘಟನೆ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಮಗುವಿನ ವಯಸ್ಸಿಗೆ ಮಿತಿ ಇಲ್ಲ: ದತ್ತು ತಾಯಿಗೆ 12 ವಾರ ರಜೆ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

0

ನವದೆಹಲಿ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ದತ್ತು ಪಡೆದ ತಾಯಂದಿರಿಗೆ ಹೆರಿಗೆ ರಜೆ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದೆ.

ಇನ್ನು ಮುಂದೆ 3 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಗುವನ್ನು ದತ್ತು ತೆಗೆದುಕೊಂಡರೂ ಸಹ, ತಾಯಿಗೆ ಪೂರ್ಣ ಹೆರಿಗೆ ರಜೆ ಸಿಗಲಿದೆ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಪಾರ್ದಿವಾಲಾ ಮತ್ತು ಮಹಾದೇವನ್ ಅವರ ಪೀಠ, ದತ್ತು ಪಡೆದ ಮಗು ಸಹ ತಾಯಿ ಹೆತ್ತ ಮಗುವಿನಂತೆಯೇ ಎಂದು ಹೇಳಿ, ಇದನ್ನು ಮಾನವ ಹಕ್ಕಿನ ಭಾಗವೆಂದು ಅಭಿಪ್ರಾಯಪಟ್ಟಿದೆ. ಮಗುವಿನ ವಯಸ್ಸನ್ನು ಲೆಕ್ಕಿಸದೆ, ದತ್ತು ಪಡೆದ ದಿನಾಂಕದಿಂದ 12 ವಾರಗಳ ಹೆರಿಗೆ ರಜೆಗೆ ಎಲ್ಲಾ ದತ್ತು ತಾಯಂದಿರು ಅರ್ಹರಾಗಿರಬೇಕು ಎಂದು ಸ್ಪಷ್ಟಪಡಿಸಿದೆ.

ಹಿಂದಿನ ನಿಯಮ ಪ್ರಕಾರ, 3 ತಿಂಗಳೊಳಗಿನ ಮಗುವನ್ನು ದತ್ತು ತೆಗೆದುಕೊಂಡ ತಾಯಂದಿರಿಗೆ ಮಾತ್ರ ಹೆರಿಗೆ ರಜೆ ಸಿಗುತ್ತಿತ್ತು. ಈ ಮಿತಿಯನ್ನು ಅಸಂವಿಧಾನಿಕವೆಂದು ಘೋಷಿಸಿರುವ ಸುಪ್ರೀಂ ಕೋರ್ಟ್, ಯಾವುದೇ ವಯಸ್ಸಿನ ಮಗುವನ್ನು ದತ್ತು ಪಡೆದ ತಾಯಿಗೆ ರಜೆ ನಿರಾಕರಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.

ಮಗು ಮತ್ತು ತಾಯಿ ನಡುವೆ ಬಾಂಧವ್ಯ ಬೆಳೆಸಲು, ಆರೈಕೆ ಹಾಗೂ ಹೊಂದಾಣಿಕೆಗೆ ಸಮಯ ಅಗತ್ಯವಿದೆ ಎಂಬುದನ್ನು ಕೋರ್ಟ್ ಒತ್ತಿಹೇಳಿದೆ.

ಇದೇ ವೇಳೆ, ಪಿತೃತ್ವ ರಜೆ ಕುರಿತ ನಿರ್ಧಾರವನ್ನು ಸಂಬಂಧಿಸಿದ ಸರ್ಕಾರಗಳ ಮೇಲೆಯೇ ಬಿಟ್ಟಿದ್ದು, ಈ ಬಗ್ಗೆ ಅಗತ್ಯ ನಿಯಮಗಳನ್ನು ಸರ್ಕಾರವೇ ರೂಪಿಸಬೇಕು ಎಂದು ಕೋರ್ಟ್ ತಿಳಿಸಿದೆ.

 

ತಂದೆಯ ಕಾರಣಕ್ಕೆ ಸಚಿವ ಸ್ಥಾನ: ಪ್ರಿಯಾಂಕ್ ಖರ್ಗೆ ವಿರುದ್ಧ ಈಶ್ವರಪ್ಪ ವಾಗ್ದಾಳಿ!

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಇನ್ನೂ ಅನುಭವಹೀನರಾಗಿದ್ದು, ತಂದೆಯ ಪ್ರಭಾವದಿಂದಲೇ ಸಚಿವರಾಗಿದ್ದಾರೆ ಎಂದು ಟೀಕಿಸಿದರು. ಆರ್‌ಎಸ್‌ಎಸ್ ನಿಷೇಧ ಕುರಿತು ಅವರು ನೀಡಿರುವ ಹೇಳಿಕೆಗಳನ್ನು ಕೂಡ ಪ್ರಶ್ನಿಸಿದರು.

ರಾಜ್ಯ ಸರ್ಕಾರ ಹಿಂದುಳಿದವರು ಮತ್ತು ದಲಿತರ ಸಮಸ್ಯೆಗಳ ಕಡೆ ಗಮನ ಹರಿಸದೆ, ಒಂದೇ ಸಮುದಾಯಕ್ಕೆ ಆದ್ಯತೆ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ಬಾಗಲಕೋಟೆ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನಡೆದ ಕಲ್ಲು ತೂರಾಟ ಘಟನೆಗಳನ್ನು ಉಲ್ಲೇಖಿಸಿದ ಅವರು, ಸರ್ಕಾರದ ನೀತಿಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.

ಇದೇ ವೇಳೆ, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಹಜ್ ಭವನ ಘೋಷಣೆ ಸೇರಿದಂತೆ ಸರ್ಕಾರದ ಕೆಲವು ನಿರ್ಧಾರಗಳನ್ನೂ ಟೀಕಿಸಿದರು. ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯಲ್ಲಿ ದೇಶ ಒಂದಾಗಿ ನಿಲ್ಲಬೇಕು. ಆದರೆ ಕಾಂಗ್ರೆಸ್ ಆರೋಪ ರಾಜಕಾರಣ ಮಾಡುತ್ತಿದೆ ಎಂದು ಈಶ್ವರಪ್ಪ ಹೇಳಿದರು.

ವಕ್ಫ್ ಆಸ್ತಿ ವಿಚಾರದಲ್ಲಿಯೂ ಅನಿಯಮಗಳ ಬಗ್ಗೆ ಆರೋಪಗಳು ಕೇಳಿಬಂದಿರುವುದನ್ನು ಉಲ್ಲೇಖಿಸಿದ ಅವರು, ಈ ಕುರಿತು ಸಮಗ್ರ ಪರಿಶೀಲನೆ ಅಗತ್ಯವಿದೆ ಎಂದು ಹೇಳಿದರು.

ರಾಯಚೂರು ಜಿಲ್ಲೆಯಲ್ಲಿ ಹೊಸ ಕೆ.ಎಸ್.ಆರ್.ಪಿ ಪಡೆ ಸ್ಥಾಪನೆ ಬಗ್ಗೆ ಪರಿಶೀಲನೆ: ಸಚಿವ ಡಾ: ಜಿ.ಪರಮೇಶ್ವರ್

ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ಹೊಸದಾಗಿ ಕೆ.ಎಸ್.ಆರ್.ಪಿ ಪಡೆಯನ್ನು ಸ್ಥಾಪಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ. ಅಗತ್ಯತೆ ಆಧಾರದ ಮೇಲೆ ರಾಯಚೂರು ಜಿಲ್ಲೆಯಲ್ಲಿ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ: ಜಿ.ಪರಮೇಶ್ವರ್ ಅವರು ತಿಳಿಸಿದರು.

ಇಂದು ವಿಧಾನಸಭೆಯ ಕಲಾಪದ ವೇಳೆ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ್ ಇವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆ.ಎಸ್.ಆರ್.ಪಿ ಪಡೆ ಅಗತ್ಯವಿದ್ದು, 175 ಎಕರೆ ಜಾಗವನ್ನು ಹಾಗೂ ಕೆ.ಕೆ.ಆರ್.ಡಿ.ಬಿ ಯ ಅನುದಾನವನ್ನು ಸಹ ನೀಡಲಾಗುವುದು ಎಂದು ತಿಳಿಸಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಶಾಸಕರು ಗೃಹ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.

ಈ ಸಂಬಂಧ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸದನದಲ್ಲಿ ಕೋರಿದರು. ಈ ಸಮಯದಲ್ಲಿ ಉತ್ತರಿಸಿದ ಸಚಿವರು, ರಾಯಚೂರು ಭಾಗದ 30 ಶಾಸಕರು ಸಹಿ ಮಾಡಿ ರಾಯಚೂರು ಭಾಗಕ್ಕೆ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸುವಂತೆ ಮನವಿ ಸಲ್ಲಿಸಿರುತ್ತಾರೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 12 ಕೆ.ಎಸ್.ಆರ್.ಪಿ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಎಂದು ತಿಳಿಸಿದರು.

ರಾಯಚೂರು ಭಾಗದಲ್ಲಿ ವಿಶ್ವಪ್ರಸಿದ್ದ ಧಾರ್ಮಿಕ ಕ್ಷೇತ್ರಗಳು, ಅಣೆಕಟ್ಟುಗಳು, ಗಡಿಭಾಗಗಳು ಇರುವುದರಿಂದ ಈ ಕುರಿತು ಪರಿಶೀಲಿಸಿ, ಶಾಸಕರುಗಳ ಮನವಿಯನ್ನಾಧರಿಸಿ ಆರ್ಥಿಕ ಇಲಾಖೆಗೆ ಈಗಾಗಲೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅಗತ್ಯತೆ ಅನುಸಾರ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕೆ.ಎಸ್.ಆರ್.ಪಿ ಪಡೆ ಸ್ಥಾಪನೆ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಗೃಹಸಚಿವರು ತಿಳಿಸಿದರು.

ಅಕ್ರಮ ಮದ್ಯ ಮಾರಾಟವನ್ನು ಮಾದಕ ವಸ್ತುನಿಯಂತ್ರಣ ಕಾಯಿದೆ ಅಡಿ ಸೇರಿಸಲು ಕ್ರಮ: ಸಚಿವ ಆರ್.ಬಿ. ತಿಮ್ಮಾಪುರ

ಬೆಂಗಳೂರು: ರಾಜ್ಯಾದಾದ್ಯಂತ ಅಕ್ರಮವಾಗಿ ಮದ್ಯ ಮಾರಾಟ ಮಾರಾಟ ಮಾಡುವುದನ್ನು ಹಾಗೂ ಅಕ್ರಮವಾಗಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಅಕ್ರಮ ಮಾರಾಟ ತಡೆಗಟ್ಟಲು ಕರ್ನಾಟಕ ಅಬಕಾರಿ ಕಾಯ್ದೆಯನ್ನು ಪರಿಷ್ಕರಿಸಿ ಹೊಸ ಕಾಯ್ದೆ ತರುವುದಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಈ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಅಲ್ಲದೆ, ಅಕ್ರಮ ಮದ್ಯ ಮಾರಾಟವನ್ನು ಮಾದಕ ವಸ್ತು ನಿಯಂತ್ರಣ ಕಾಯಿದೆ ಅಡಿ ಸೇರಿಸಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.

ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಅವರು ರಾಯಚೂರು ಜಿಲ್ಲೆಯಲ್ಲಿ ಸ್ವಲಾಭಕ್ಕಾಗಿ ಅನಧಿಕೃತ ಸ್ಥಳಗಳಲ್ಲಿ , ಕಿರಾಣಿ ಅಂಗಡಿಗಳಲ್ಲೂ ಸಹ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ.

ಕರ್ನಾಟಕ ಅಬಕಾರಿ ಕಾಯಿದೆ 1965ರ ಕಾಯಿದೆಗಳ ರೀತ್ಯಾ ಯಾವುದೇ ಕ್ರಮ ಆಗುತ್ತಿಲ್ಲ. ಈ ಬಗ್ಗೆ ಸರ್ಕಾರ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ವಿಶೇಷ ಪಡೆಗಳನ್ನು ರಚಿಸಬೇಕು ಎಂದು ಪ್ರಶ್ನಿಸಿದರು.

ಈ ಸಮಯದಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಬಕಾರಿ ಅಕ್ರಮಗಳನ್ನು ನಿಯಂತ್ರಿಸಲು ಅಬಕಾರಿ ಇಲಾಖೆಯಿಂದ ವಲಯ ವ್ಯಾಪ್ತಿಯ ರೂಟ್ ಗಳಲ್ಲಿ ನಿರಂತರವಾಗಿ ಗಸ್ತು ನಡೆಸಲಾಗುತ್ತಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ರಸ್ತೆ ಗಾವಲು ನಡೆಸಿ ಸಂಶಯಾಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಸಭೆಯನ್ನು ಏರ್ಪಡಿಸಿ ಅಕ್ರಮ ಹತ್ತಿಕ್ಕಲು ಕ್ರಮ ವಹಿಸಲಾಗುತ್ತಿದೆ. ಕರ್ನಾಟಕ ಅಬಕಾರಿ ಕಾಯಿದೆ 1965ರ ಕಲಂ 50ರಂತೆ ಕಾರ್ಯವ್ಯಾಪ್ತಿಯಲ್ಲಿ ನಡೆಯುವ ಅಬಕಾರಿ ಅಕ್ರಮಗಳ ಕುರಿತು ನಿಯಮಗಳನುಸಾರ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದರು.

ಕರ್ನಾಟಕ ಅಬಕಾರಿ ಕಾಯಿದೆ 1965ರ ಕಾಯಿದೆಗಳ ರೀತ್ಯಾ ಯಾವುದೇ ಕ್ರಮವು ಹಳೆಯದಾಗಿದ್ದು, ಅಕ್ರಮ ಮದ್ಯ ಮಾರಾಟವನ್ನು ಮಾದಕ ವಸ್ತು ನಿಯಂತ್ರಣ ಕಾಯಿದೆ ಅಡಿ ಸೇರಿಸಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಅಕ್ರಮವಾಗಿ ಕ್ಲೋರಲ್ ಹೈಡ್ರೇಟ್ ಪೌಡರ್ ನಿಂದ ಕೃತಕವಾಗಿ ಸೇಂದಿಯನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಹಾಗೂ ಜಿಲ್ಲೆಯ ಗಡಿ ಭಾಗಗಳಿಗೆ ಆಂಧ್ರಿಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಸೇಂದಿ/ಕೃತಕ ಸೇಂದಿಯ ರಸ್ತೆ ಹಾಗೂ ರೈಲು ಮಾರ್ಗವಾಗಿ ಕಳ್ಳಸಾಗಾಣಿಕೆಯಾಗುತ್ತಿದ್ದು, ಈ ರೀತಿ ಅಕ್ರಮವಾಗಿ ಸೇಂದಿ/ಕೃತಕ ಸೇಂದಿಯನ್ನು ತಯಾರಿಸುತ್ತಿರುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ: ಹಫ್ತಾ ವಿಚಾರಕ್ಕೆ ಕೊಲೆ – 7 ಆರೋಪಿಗಳ ಬಂಧನ

0

ಬೆಂಗಳೂರು: ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ವ್ಯಕ್ತಿಯನ್ನು ಭೀಕರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಪರ್ವೇಜ್, ಅಫ್ರಿಧಿ, ಸಮೀರ್, ಶಬ್ಬೀರ್, ಸಾಧೀಕ್ ಮತ್ತು ಮುನಾವರ್ ಸೇರಿದಂತೆ ಏಳು ಮಂದಿ ಬಂಧಿತರಾಗಿದ್ದಾರೆ. ಈ ಕುರಿತು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಕೇ ಮಾಹಿತಿ ನೀಡಿದ್ದಾರೆ.

ಭಾನುವಾರ ರಾತ್ರಿ ಬಡಾ ಮಖಾನ್ ರಸ್ತೆಯಲ್ಲಿ ರಶೀದ್ ಪಾಷಾ (45) ಮೇಲೆ ಆರೋಪಿಗಳು ಬ್ಯಾಟ್ ಮತ್ತು ಬೊಂಬುಗಳಿಂದ ದಾಳಿ ನಡೆಸಿ ಹತ್ಯೆಗೈದಿದ್ದರು. ಅಂಗಡಿಯಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಆರೋಪಿಗಳು ಜಿದ್ದಿನಿಂದ ಮತ್ತೆ ಬಂದು ರಾತ್ರಿ ಸುಮಾರು 8:30ರ ವೇಳೆಗೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆ ವೇಳೆ ರಶೀದ್ ಅವರ ಇಬ್ಬರು ಮಕ್ಕಳ ಮುಂದೆಯೇ ನಿರ್ದಯವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಹಿಂದೆ ಹಣಕಾಸು ವ್ಯವಹಾರ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರೂ, ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಪರಿಸ್ಥಿತಿ ಉದ್ವಿಗ್ನವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್‌ಆರ್‌ಪಿ ಪಡೆ ನಿಯೋಜಿಸಲಾಗಿದೆ.

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್‌ ಖರೀದಿಗೆ ಒಪ್ಪಂದ: ಸಕ್ಕರೆ ಸಚಿವ ಶಿವಾನಂದ ಪಾಟೀಲ

ಬೆಂಗಳೂರು: ಮುಂದಿನ ಕಬ್ಬು ನುರಿಸುವ ಹಂಗಾಮಿನಿಂದ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್‌ ಖರೀದಿಗೆ ಒಪ್ಪಂದ ಮಾಡಿಕೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ವಿಧಾನಪರಿಷತ್ತಿನಲ್ಲಿ ಮಂಗಳವಾರ ರವಿಕುಮಾರ್‌ ಹಾಗೂ ಇತರ ಸದಸ್ಯರು ನಿಯಮ 330ರ ಅಡಿಯಲ್ಲಿ ನೀಡಿದ್ದ ಸೂಚನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರ ಸಕ್ಕರೆಯ ಎಂಎಸ್‌ಪಿ ದರ ಹೆಚ್ಚಳ ಮಾಡಿದರೆ ಸಕ್ಕರೆ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ಚರ್ಚೆ ಮಾಡಲಾಗಿದೆ. ಸಕ್ಕರೆ ಕಾರ್ಖಾನೆಗಳ ಮಾಲೀಕರ ಬೇಡಿಕೆಗಳಲ್ಲಿ ಎರಡು ಬೇಡಿಕೆಗಳು ಮಾತ್ರ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರಲಿವೆ. ವಿದ್ಯುತ್‌ ಖರೀದಿ ಒಪ್ಪಂದ ಮತ್ತು ನೀರಿನ ತೆರಿಗೆ ಬೇಡಿಕೆಗಳನ್ನು ಪರಿಗಣಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.

ಕೇಂದ್ರ ಸರ್ಕಾರ ಸಕ್ಕರೆ ರಫ್ತು ಮಾಡಲು ಅವಕಾಶ ನೀಡಬೇಕು. ಎಥೆನಾಲ್‌ ದರ ಪರಿಷ್ಕರಣೆ ಹಾಗೂ ಉತ್ಪಾದನಾ ಪ್ರಮಾಣಕ್ಕೆ ಅನುಗುಣವಾಗಿ ಹಂಚಿಮೆ ಮಾಡಬೇಕು. ಈ ಬೇಡಿಕೆಗಳಿಗೆ ಕೇಂದ್ರ ಸ್ಪಂದಿಸಿದರೆ ಕಬ್ಬು ಬೆಳೆಗಾರರ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಕ್ಕರೆಗೆ ಎಲ್‌ಪಿಜಿ ರೀತಿ ಗೃಹ ಬಳಕೆಗೆ ಬೇರೆ ಹಾಗೂ ವಾಣಿಜ್ಯ ಬಳಕೆಗೆ ಬೇರೆ ದರ ನಿಗದಿಪಡಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿದರೆ ಗ್ರಾಹಕರಿಗೂ ಅನುಕೂಲ, ಕಬ್ಬು ಬೆಳೆಗಾರರ ಸಮಸ್ಯೆಗೂ ಪರಿಹಾರ ದೊರೆಯಲಿದೆ ಎಂದರು.

ರಾಜ್ಯದಲ್ಲಿ ಸತತ ಎರಡು ವರ್ಷ ಕಬ್ಬು ಬೆಳೆಗಾರರಿಗೆ ಪೂರ್ಣ ಪ್ರಮಾಣದಲ್ಲ ಹಣ ಪಾವತಿ ಮಾಡಲಾಗಿದೆ. ಈ ವರ್ಷ ಇನ್ನೂ ಕ್ರಷಿಂಗ್‌ ನಡೆದಿದ್ದು, ಈ ಬಾರಿಯೂ ಪೂರ್ಣ ಪ್ರಮಾಣದಲ್ಲಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ಮೂರು ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಮಾತ್ರ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಕಬ್ಬಿನ ಬಿಲ್‌ ಪಾವತಿ ಮಾಡಲಾಗಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ಇನ್ನೂ ರೈತರ ಕಬ್ಬಿನ ಬಿಲ್‌ ಬಾಕಿ ಇದೆ ಎಂದು ಸಚಿವರು ವಿಧಾನಪರಿಷತ್ತಿಗೆ ತಿಳಿಸಿದರು.

error: Content is protected !!