Home Blog Page 3307

ಶಹರ ಪೊಲೀಸರ ಕಾರ್ಯಚರಣೆ; ರಾಬರಿಗೆ ಸಂಚು ರೂಪಿಸಿದ್ದ ಇಬ್ಬರು ಸೇರಿ ನಾಲ್ವರು ರೌಡಿ ಶೀಟರ್ಸ್ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ರಾಬರಿ ಮಾಡಲು ಸಂಚು ರೂಪಿಸಿದ್ದ ಆರೋಪದಲ್ಲಿ ಇಬ್ಬರು ರೌಡಿ ಶೀಟರ್ಸ್ ಸೇರಿದಂತೆ ನಾಲ್ವರನ್ನು ಶಹರ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಗದಗ ಶಹರದ ವೀರಶೈವ ಲೈಬ್ರರಿ ಹತ್ತಿರ ತೆಗ್ಗಿನಲಾಟದ ಉಮೇಶ್ ಅಲಿಯಾಸ್ ಕುಮಡಿ ತಂದೆ ಬಸವರಾಜ್ ಕವಲೂರ ಹಾಗೂ ಕಮ್ಮಾರ ಓಣಿಯ ವಿನೋದ್ ಅಲಿಯಾಸ್ ಡುಮ್ಮ ವಿನ್ಯಾ ತಂದೆ ಕೃಷ್ಣಾ ಚವ್ಹಾಣ ಎಂಬುವರನ್ನು ಬಂಧಿಸಿ ಅವರಿಂದ ಚೈನ್ ಹಾಗೂ ಪಂಚ್ ವಶಪಡಿಸಿಕೊಳ್ಳಲಾಗಿದೆ ಎಂದು ಇನ್ಸ್‌ಪೆಕ್ಟರ್ ಜಯಂತ ಗೌಳಿ ಮಾಹಿತಿ ನೀಡಿದ್ದಾರೆ.

ಈ ಕುರಿತು 393 r/w 34 IPC ಕಲಂ ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಂಜಾಗ್ರತಾ ಕ್ರಮವಾಗಿ 110 ಕಲಂ ಅಡಿಯಲ್ಲಿ ವಸಂತ ಪರಶುರಾಮ ಅರಕೇರಿ ಹಾಗೂ ಮಂಜುನಾಥ್ ಮಹೇಶ್ ವಾಲ್ಮೀಕಿ ಎಂಬುವರನ್ನು ಕೂಡ ಬಂಧಿಸಲಾಗಿದೆ.

ಶಹರ ಠಾಣೆಯ ಇನ್ಸ್‌ಪೆಕ್ಟರ್ ಜಯಂತ ಗೌಳಿ, ಪಿಎಸ್ಐ ರೇಣುಕಾ ಮುಂಡೆವಾಡಗಿ ಹಾಗೂ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದರು.

ದ್ವಿಚಕ್ರ ವಾಹನ ಮುಗುಚಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಸಾವು

ಶಿವಪ್ಪ ಮೃತಪಟ್ಟ ಗ್ರಾಮ ಪಂಚಾಯತಿ ಕಾರ್ಯದರ್ಶಿ

ವಿಜಯಸಾಕ್ಷಿ ಸುದ್ದಿ, ರೋಣ

ರೋಣದಿಂದ ಬೈಕ್ ನಲ್ಲಿ ಅಬ್ಬಿಗೇರಿ ಮಾರ್ಗವಾಗಿ ಕೋಟುಮಚಗಿ ಗ್ರಾಮಕ್ಕೆ ತೆರಳುತ್ತಿದ್ದ ಗ್ರಾಮ ಪಂಚಾಯತಿ ಕಾರ್ಯದರ್ಶಿಯೊಬ್ಬರು ನಿಯಂತ್ರಣ ಕಳೆದುಕೊಂಡು ಬೈಕ್ ಸ್ಕಿಡ್ ಆದ ಪರಿಣಾಮವಾಗಿ ಮೃತಪಟ್ಟ ಘಟನೆ ಜರುಗಿದೆ.

ರೋಣ ತಾಲೂಕಿನ ಕೌಜಗೇರಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಶಿವಪ್ಪ ವೀರಪ್ಪ ಗಂಗಪ್ಪನವರ (48) ಎಂಬುವರೇ ಬೈಕ್ ಸ್ಕಿಡ್ ಆದ ಪರಿಣಾಮ ಹುಬ್ಬು ಹಾಗೂ ಕಣ್ಣಿನ ಕೆಳಭಾಗದಲ್ಲಿ ಗಾಯವಾಗಿದೆ. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಕೋಟುಮಚಗಿ ಗ್ರಾಮದ ಜನ ಗಮನಿಸಿ ರೋಣ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ಶಿವಪ್ಪ ಮೃತಪಟ್ಟಿದ್ದಾರೆ.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೀತಿಗಾಗಿ ಪ್ರಾಣ ಕೊಡ್ತೀನಿ ಅಂದ; ತಾನೇ ತಂದ ಚಾಕುವಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ!

ಚಾಕು ಇರಿತ ಪ್ರಕರಣದ ಅಸಲಿ ಕಹಾನಿ.

ವಿಜಯಸಾಕ್ಷಿ ಸುದ್ದಿ, ಗದಗ

ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಯ ನಿಶ್ಚಿತಾರ್ಥ ಆಗಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಯುವತಿಯ ಮನೆಗೆ ನುಗ್ಗಿ ಮನೆ ಮಂದಿಗೆ ಜೀವ ಬೆದರಿಕೆ ಹಾಕಿ, ತಾನೇ ತಂದಿದ್ದ ಚಾಕುವಿನಿಂದ ಹೆದರಿಸಲು ಹೋಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗದಗ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಹುಡ್ಕೋ ಕಾಲೋನಿಯ ನೀಲಮ್ಮತಾಯಿ ಮಠದ ಹತ್ತಿರದ ಮನೆಯೊಂದಕ್ಕೆ ನುಗ್ಗಿದ ಆರೋಪಿ ಕಮ್ಮಾರ ಓಣಿಯ ಅಭಿಷೇಕ ಅಲಿಯಾಸ್ ಅಭಿ ಹನಮಂತಪ್ಪ ನಾಯ್ಕರ್ ಎಂಬಾತ ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಯ ಮನೆಗೆ ನುಗ್ಗಿ ಮನೆಯಲ್ಲಿದ್ದ ಸಾಮಾನುಗಳನ್ನು ಒದ್ದು ಅವಾಚ್ಯವಾಗಿ ಬೈದಾಡುತ್ತಿದ್ದಾಗ ಮನೆಯಲ್ಲಿ ಇದ್ದ ಜನರು ಯಾಕೆ ಬೈಯಿತೀದಿ ಅಂದಾಗ ಮನೆಯಿಂದ ಹೊರಗೆ ಹೋದವನೇ ಜೋರಾಗಿ ನಿಮ್ಮ ಹುಡುಗಿಯನ್ನು ನಾನು ಪ್ರೀತಿ ಮಾಡ್ತೀನಿ, ಬೇರೆದವರ ಜೊತೆಗೆ ನಿಶ್ಚಿತಾರ್ಥ ಮಾಡೀರಿ ಅಂತ ಅವಾಚ್ಯವಾಗಿ ಬೈದಾಡುತ್ತಾ ಇದ್ದಾಗ ಹುಡುಗಿಯ ತಾಯಿ ಯಾಕೆ ಬೈದಾಡ್ತೀ ಅಂತ ಕೇಳಿದಾಗ ಅವರ ಮೇಲೆ ಹಲ್ಲೆ ಮಾಡಿ, ಅವಮಾನ ಮಾಡಿದ್ದಾನೆ.

ಜಗಳ ಬಿಡಿಸಲು ಹೋದ ಪ್ರಮೋದ್ ಹಾಗೂ ವಿನೋದ್ ಸಹೋದರರ ಮೇಲೆ ಆರೋಪಿ ಅಭಿಷೇಕ ತಾನು ತಂದಿದ್ದ ಚಾಕು ಬೀಸಿದಾಗ ತನ್ನ ಎಡಗೈಗೆ ಗಾಯ ಮಾಡಿಕೊಂಡಿದ್ದಾನೆ.

ಆಗ ವಿನೋದ್ ಹಾಗೂ ಪ್ರಮೋದ್ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ಅಭಿಷೇಕ ತನ್ನ ಎದೆ ಭಾಗಕ್ಕೆ ಹಾಗೂ ರಟ್ಟೆಗೆ ಗಾಯಮಾಡಿಕೊಂಡಿದ್ದಾನೆ. ನಿಮ್ಮ ‌ಹುಡುಗಿಯನ್ನು ಯಾವುದೇ ಕಾರಣಕ್ಕೂ ನನ್ನ ಬಿಟ್ಟು ಬೇರೆದವರಿಗೆ ಮದುವೆ ಮಾಡಿಕೊಡಬೇಡಿ, ಒಂದು ವೇಳೆ ನೀವು ಬೇರೆದವರಿಗೆ ಮದುವೆ ಮಾಡಿಕೊಟ್ರೆ ನಿಮ್ಮನ್ನು ಜೀವ ಸಹಿತ ಬಿಡಂಗಿಲ್ಲ ಅಂತ ಬೆದರಿಕೆ ಹಾಕಿದ್ದಾನೆ.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ 148/2022 ಅಭಿಷೇಕ ನಾಯ್ಕರ್ ಮೇಲೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತುರ್ತು ಸಂದರ್ಭದಲ್ಲಿ ಜೀವ ರಕ್ಷಿಸಿದ ERSS-112 ತಂಡ; ಎರಡು ತಿಂಗಳಲ್ಲಿ ನಾಲ್ವರ ರಕ್ಷಣೆ

0

ಸಾರ್ವಜನಿಕರು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಶಂಸೆ

ವಿಜಯಸಾಕ್ಷಿ ಸುದ್ದಿ, ಗದಗ

ಸರಕಾರವು ಹೊಸದಾಗಿ ಜಾರಿಗೆ ತಂದಿರುವ ERSS-112 ಯೋಜನೆಯ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳು ಸಾರ್ವಜನಿಕರಿಂದ ಸ್ವೀಕೃತವಾಗುವ ತುರ್ತು ಕರೆಗಳಿಗೆ ಶೀಘ್ರವಾಗಿ ಸ್ಪಂದಿಸಿ, ಘಟನಾ ಸ್ಥಳಕ್ಕೆ ತೆರಳಿ, ರಕ್ಷಣಾ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನ.22ರಂದು ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಿಮಡಿಯಿಂದ ಓರ್ವ ಮಹಿಳೆ ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಯ ಬಳಿ ಬಂದಿದ್ದಾನೆ ಎಂದು ವಿಡಿಯೋ ಕರೆಯ ಮೂಲಕ ತಿಳಿಸಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದ ಹಿನ್ನೆಲೆಯಲ್ಲಿ, ಕರ್ತವ್ಯದಲ್ಲಿದ್ದ ಪಿ.ಎಚ್. ಮುಂಡರಗಿ, ಎಎಸ್‌ಐ ಬಿ.ಎಂ. ಕುರ್ತಕೋಟಿ, ಎಲ್.ಎಚ್. ತಿರುಮಲೆ, ಚಾಲಕ ಎನ್.ಎಫ್. ಹೆಬ್ಬಳ್ಳಿ ತಕ್ಷಣವೇ ಗಂಗಿಮಡಿ ರೈಲ್ವೆ ಹಳಿಯ ಬಳಿ ತಲುಪಿದಾಗ, ಸದರಿ ವ್ಯಕ್ತಿ ಆತ್ಮಹತ್ಯೆಯ ಉದ್ದೇಶದಿಂದ ರೈಲ್ವೆ ಹಳಿಯ ಮೇಲೆ ಮಲಗಿದ್ದು, ಸಿಬ್ಬಂದಿಗಳು ಆ ವ್ಯಕ್ತಿಗೆ ತಿಳುವಳಿಕೆ ಹೇಳಿ, ಮನವೊಲಿಸಿ ರಕ್ಷಿಸಿದ್ದರು.

ಅಂತೆಯೇ, ಅಕ್ಟೋಬರ್ 1ರ ಮಧ್ಯರಾತ್ರಿಯ ಸಮಯದಲ್ಲಿ ವಿಪರೀತ ಮಳೆಯಿಂದ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡೂರು ರಸ್ತೆಯ ಹಳ್ಳ ತುಂಬಿ ಹರಿಯುತ್ತಿದ್ದಾಗ, ವಾಹನವೊಂದರಲ್ಲಿದ್ದ ೩ ಜನರು ಹಳ್ಳ ದಾಟುತ್ತಿರುವಾಗ ಹಳ್ಳದಲ್ಲಿಯೇ ಸಿಲುಕಿಕೊಂಡಿದ್ದರು.

ಈ ವಿಷಯವಾಗಿ ಸಹಾಯವಾಣಿಗೆ ತುರ್ತು ಕರೆ ಬಂದಾಗ, ಕರ್ತವ್ಯದಲ್ಲಿದ್ದ ಎಎಸ್‌ಐ ಎಂ.ಎಸ್. ದೇಸಾಯಿ, ಎನ್.ಬಿ. ಪಾಟೀಲ, ಎಎಸ್‌ಐ ಐ.ಕೆ. ತಾವರಗೇರ್, ಎನ್.ಎಂ. ಕೊಟಗಿ, ಚಾಲಕ ಬಿ.ವಿ. ಖಾನಾಪುರ ತಕ್ಷಣ ಸ್ಪಂದಿಸಿ, ಅಪಾಯದಲ್ಲಿದ್ದವರನ್ನು ರಕ್ಷಿಸಿ, ಸುರಕ್ಷಿತ ಜಾಗಕ್ಕೆ ತಲುಪಿಸಿದ್ದರು.

ರಕ್ಷಣಾ ಕಾರ್ಯದಲ್ಲಿ ತುರ್ತು ಸ್ಪಂದನೆ ನೀಡಿ ಸಂಭವಿಸಲಿದ್ದ ಅಪಾಯದಿಂದ ಜೀವಗಳನ್ನು ರಕ್ಷಿಸಿದ ಸಿಬ್ಬಂದಿಗಳ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ಅಧೀಕ್ಷಕರು, ಹಾಗೂ ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಹರ್ಲಾಪೂರ ಗ್ರಾಮ ಪಂಚಾಯತಿ ಮತ್ತೆ ಕಾಂಗ್ರೆಸ್ ಮಡಿಲಿಗೆ

ವಿಜಯೋತ್ಸವ ಆಚರಿಸಿದ ಕಾರ್ಯಕರ್ತರು

ವಿಜಯಸಾಕ್ಷಿ ಸುದ್ದಿ, ಗದಗ

ತಾಲೂಕಿನ ಹರ್ಲಾಪೂರ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸುಮಂಗಲಾ ಕೊಟ್ರಪ್ಪ ಚಟ್ರಿ ಆಯ್ಕೆಯಾಗಿದ್ದಾರೆ.

ಸೋಮುನಗೌಡ ಕೆಂಚನಗೌಡ್ರ ಇವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆ ಕಾರಣಕ್ಕಾಗಿ ನೆಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸುಮಂಗಲಾ ಕೊಟ್ರಪ್ಪ ಚಟ್ರಿ ನಾಮಪತ್ರ ಸಲ್ಲಿಸಿದ್ದರು. ಪ್ರತಿಸ್ಪರ್ಧಿಯಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಿದ್ದು ಯಳವಾಡ ನಾಮಪತ್ರ ಸಲ್ಲಿಸಿದ್ದರು.

ಹರ್ಲಾಪೂರ ಗ್ರಾಮ ಪಂಚಾಯತಿ ಒಟ್ಟು 12 ಸ್ಥಾನವನ್ನು ಹೊಂದಿದ್ದು, ಅದರಲ್ಲಿ ಸುಮಂಗಲಾ ಚಟ್ರಿ 7 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಆ ಮೂಲಕ ಗ್ರಾಮ ಪಂಚಾಯತಿ ಕಾಂಗ್ರೆಸ್ ಪಾಲಾಯಿತು. ಇದರಿಂದಾಗಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಗೌಡ ಪಾಟೀಲ್, ಶಿವಾನಂದ ಪಟ್ಟೆದ, ಅಡಿವೆಪ್ಪ ಗೌಡಪ್ಪನವರ, ವೀಣಾ ಕಾತರಕಿ, ನಿರ್ಮಲಾ ಕೊತಪ್ಪನವರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಚುನಾವಣಾ ಅಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯನಿರ್ವಹಿಸಿದರು. ಪಂಚಾಯತಿ ಪಿಡಿಒ ಈ ಸಂದರ್ಭದಲ್ಲಿ ಇದ್ದರು.

ಹೃದಯಾಘಾತದಿಂದ ಎಎಸ್ಐ ನಿಂಗೋಜಿ ನಿಧನ

0

ಬುಧವಾರ ಮಧ್ಯಾಹ್ನ ಹೊಂಬಳದಲ್ಲಿ ಅಂತ್ಯಕ್ರಿಯೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ/ ಗಜೇಂದ್ರಗಡ

ERSS ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ರಾಮಣ್ಣ ಎಸ್. ನಿಂಗೋಜಿ ಮಂಗಳವಾರ ಸಂಜೆ (58) ನಿಧನರಾದರು.

ಕಳೆದ ಭಾನುವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಅವರಿಗೆ ಹೃದಯಾಘಾತ ಆಗಿತ್ತು. ತಕ್ಷಣವೇ ಚಿಕಿತ್ಸೆಗಾಗಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ಸಂಜೆ ನಿಧನರಾದರು.

ಮೂರು ವರ್ಷಗಳ ಕಾಲ ಲಕ್ಷ್ಮೇಶ್ವರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು, ಇತ್ತೀಚಿಗೆ ಗಜೇಂದ್ರಗಡ ಠಾಣೆಗೆ ವರ್ಗಾವಣೆ ಹೊಂದಿದ್ದರು. ನಂತರ ಅವರಿಗೆ ಈಆರ್ ಎಸ್‌ ಎಸ್ ವಾಹನಕ್ಕೆ ನಿಯೋಜಿಸಲಾಗಿತ್ತು.

ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದ ನಿಂಗೋಜಿ ಅವರ ನಿಧನಕ್ಕೆ ಸಹೋದ್ಯೋಗಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬುಧವಾರ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಿಂಗೋಜಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಮೃತರಿಗೆ ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಳಗವಿದೆ.

ಟಿಕೆಟ್ ಆಕಾಂಕ್ಷೆಗಳಿಂದ ಶ್ರೀಮಂತಗಡದ ಹೊಳಲಮ್ಮದೇವಿ ಮೇಲೆ ಪ್ರಮಾಣ; ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಪಣ

ಶಿರಹಟ್ಟಿ-ಲಕ್ಷ್ಮೇಶ್ವರ -ಮುಂಡರಗಿ ಬ್ಲಾಕ್ ಕಾಂಗ್ರೆಸ್ ಚುನಾವಣಾ ಪೂರ್ವಭಾವಿ ಸಭೆ

ಕೆಪಿಸಿಸಿ ಗದಗ ಜಿಲ್ಲಾಧ್ಯಕ್ಷ ಜಿ ಎಸ್. ಪಾಟೀಲ್ ಕರೆ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿ ಮೀಸಲು ಮತಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಬಯಸಿ ಈ ವರೆಗೆ 14 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಅಂತಿಮವಾಗಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಹಿತದೃಷ್ಟಿಯಿಂದ ಅವರ ಗೆಲುವಿಗೆ ಮುಖಂಡರುಗಳು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.

ಅವರು ಮಂಗಳವಾರ ಶಿರಹಟ್ಟಿ ತಾಲೂಕಿನ ಶ್ರೀಮಂತಗಡದಲ್ಲಿ ಶಿರಹಟ್ಟಿ-ಮುಂಡರಗಿ-ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಚುನಾವಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರು ಆಯ್ಕೆಯಾದ ನಂತರ ಪಕ್ಷಕ್ಕೆ ಹೊಸ ಚೈತನ್ಯ ಬಂದಿದ್ದು, ಜೊತೆಗೆ ಕಳೆದ 50 ವರ್ಷಗಳಿಂದ ಪಕ್ಷ ನಿಷ್ಠೆಯನ್ನು ಹೊಂದಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷವು ಎಐಸಿಸಿ ಅಧ್ಯಕ್ಷ ಹುದ್ದೆ ನೀಡಿದ್ದು ಪಕ್ಷಕ್ಕೆ ಹೆಚ್ಚಿನ ಶಕ್ತಿ ಲಭಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಕೂಡಾ ಬಿಜೆಪಿಗೆ ಸಿಂಹಸ್ವಪ್ನರಾಗಿರುವುದು ಮುಂದಿನ ದಿನಗಳಲ್ಲಿ ಅಧಿಕಾರ ಸಿಗುವಂತಹ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಆದ್ದರಿಂದ ಪಕ್ಷ ಸಂಘಟನೆಗೆ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಮುಂದಾಗಬೇಕು.

ಶಿರಹಟ್ಟಿಯಲ್ಲಿ ಆಕಾಂಕ್ಷಿಗಳ ಪ್ರಮಾಣ ಮಾಡಿಸಿದ್ದು ಶ್ಲಾಘನೀಯ. ಇತರರಿಗೆ ಮಾದರಿಯಾದ ಕಾರ್ಯಕ್ರಮ ಇದಾಗಿದೆ ಎಂದರು.

ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಕೆಲವು ಅಧಿಕಾರಿ ಸ್ನೇಹಿತರು ನನ್ನ ಬಳಿ ಹೇಳುತ್ತಿದ್ದಾರೆ. ಸಾರ್ವಜನಿಕರು ಸಹ ಹೆದರಿಕೆಯಿಂದ ಜೀವನ ನಡೆಸುವುದು ಅನಿವಾರ್ಯವಾಗಿದೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸೋಣ. ಪಕ್ಷದ ಅಭಿವೃದ್ದಿ ಕೆಲಸಗಳನ್ನು ಜನತೆಗೆ ತಿಳಿಸಿ ಬೇರು ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಈ ಬಾರಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದರು.

ಅರಣ್ಯ, ಕೈಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ ಮಾತನಾಡಿ, ಸ್ಥಳೀಯರೇ ಶಾಸಕರಾಗಬೇಕು, ಎಐಸಿಸಿ ಮತ್ತು ಕೆಪಿಸಿಸಿ ಸೂಚಿಸುವಂತಹ ಅಭ್ಯರ್ಥಿಗಳ ಬಗ್ಗೆ ಅಪಸ್ವರ ಎತ್ತದೇ ಅವರ ಗೆಲುವಿಗೆ ಶ್ರಮಿಸಿ ಬಿಜೆಪಿ ಸರಕಾರ ಕಿತ್ತೊಗೆದು ಕಾಂಗ್ರೆಸ್ ತರಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.

ಹಸನಸಾಬ ದೋಟಿಹಾಳ, ಪ್ರಭುಗೌಡ ಪಾಟೀಲ, ವಾಸಣ್ಣ ಕುರಡಗಿ, ಶಿವಕುಮಾರಗೌಡ ಪಾಟೀಲ, ಶಿವಪ್ರಕಾಶ ಮಹಾಜನಶೆಟ್ಟರ, ಎಸ್.ಪಿ.ಬಳಿಗಾರ, ಭರತ ನಾಯ್ಕ, ಸುಜಾತಾ ದೊಡ್ಡಮನಿ, ಆನಂದ ಗಡ್ಡದ್ದೇವರಮಠ, ಎಲ್.ಡಿ.ಪಾಟೀಲ, ಶೋಭಾ ಮೇಟಿ, ವೀರಣ್ಣ ಅಂಗಡಿ, ಮಹೇಂದ್ರ ಮುಂಡವಾಡ, ದೇವಪ್ಪ ಲಮಾಣಿ, ರಾಮಣ್ಣ ಲಮಾಣಿ (ಶಿಗ್ಲಿ), ಮುತ್ತುರಾಜ ಭಾವಿಮನಿ, ಕೋಟೆಪ್ಪ ವರದಿ, ಸುಶೀಲಾ ಲಮಾಣಿ, ಮಂಜುನಾಥ ಘಂಟಿ, ಮಾಬುಸಾಬ ಲಕ್ಷ್ಮೇಶ್ವರ, ಮಹಾಂತೇಶ ದಶಮನಿ ಮುಂತಾದವರು ಉಪಸ್ಥಿತರಿದ್ದರು.

14 ಅಭ್ಯರ್ಥಿಗಳಿಂದ ಪ್ರಮಾಣ

ಕಾರ್ಯಕ್ರಮದಲ್ಲಿ ಶಿರಹಟ್ಟಿ ಮೀಸಲು ಮತಕ್ಷೇತ್ರದಿಂದ ಈ ವರೆಗೆ 14 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಒಟ್ಟು 14 ಜನ ಆಕಾಂಕ್ಷಿಗಳಿಂದ ಪಕ್ಷದ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುವ ಶ್ರೀ ಹೊಳಲಮ್ಮದೇವಿಯ ಮೇಲೆ ಪ್ರಮಾಣವಚನ ಬೋಧಿಸಿ ಒಗ್ಗಟ್ಟು ಪ್ರದರ್ಶಿಸಿದರು.

ನಾಳೆ ಕನ್ನಡ ಪತ್ರಿಕೆ ಓದಿ- ಪತ್ರಿಕೋಧ್ಯಮ ಉಳಿಸಿ; ಪದವಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ನವಲಗುಂದ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ “ಕನ್ನಡ ಪತ್ರಿಕೆ ಓದಿ – ಪತ್ರಿಕೋಧ್ಯಮ ಉಳಿಸಿ” ಸಂವಾದ ಕಾರ್ಯಕ್ರಮವನ್ನು ಡಿ.7 ರಂದು ಬೆಳಿಗ್ಗೆ 10.30 ಕ್ಕೆ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.


ಗವಿಮಠದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಜೆಡಿಎಸ್ ಮುಖಂಡ ಶ್ರೀಶೈಲ ಮೂಲಿಮನಿ, ತಹಶೀಲ್ದಾರ್ ಅನೀಲ ಬಡಿಗೇರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಬಿ.ಬಾಗಡಿ ಆಗಮಿಸಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ  ರೈತ ಭವನದ ಎದುರುಗಡೆ “ ಕನ್ನಡ ಪತ್ರಿಕೆಗಳನ್ನು ಓದಿ ಪತ್ರಿಕೋಧ್ಯಮ ಉಳಿಸಿ”  ಪದವಿ ವಿದ್ಯಾರ್ಥಿಗಳ ಜಾಥಾಕ್ಕೆ ಮಾಜಿ ಸಚಿವ ಕೆ.ಎನ್.ಗಡ್ಡಿ ಚಾಲನೆ ನೀಡಲಿದ್ದಾರೆ.

ಅಷ್ಟೇ ಅಲ್ಲದೇ ಕಾ.ನಿ.ಪ.ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯ ಒಳಗಾಗಿ, ಇಲ್ಲಿಯ ಇತಿಹಾಸ ಪ್ರಸಿದ್ದ ನಾಗಲಿಂಗ ಸ್ವಾಮಿ ಮಠ, ಗವಿಮಠ, ಪಂಚಗೃಹ ಹಿರೇಮಠ ಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನಾಶೀರ್ವಾದ ಪಡೆದು,  ನಂತರ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ, ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಜೋಡಣೆಗಾಗಿ ನಿರಂತರ ಹೋರಾಟ ಮಾಡುತ್ತಿರುವ ರೈತ ಮುಖಂಡರೊಂದಿಗೆ ಚರ್ಚಿಸಲಿದ್ದಾರೆಂದು ತಾಲ್ಲೂಕಾ ಅಧ್ಯಕ್ಷ ಚರಂತಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಕಾನೂನು ವ್ಯವಸ್ಥೆ ಬಿಗಿಗೊಳಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ

ಗೂಂಡಾಗಳ ಹಾವಳಿ ತಡೆಗಟ್ಟಲು ಎಸ್ ಎಸ್ ಕೆ ಸಮಾಜದಿಂದ ಮನವಿ

ವಿಜಯಸಾಕ್ಷಿ ಸುದ್ದಿ, ಗದಗ

ನಗರದಲ್ಲಿ ಗೂಂಡಾಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಒಂದುವರೆ ವರ್ಷದಿಂದೀಚೆಗೆ ಶಾಂತಿ ನಗರವಾದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೊಲೆ, ಮಾರಣಾಂತಿ ಹಲ್ಲೆ, ಕಳ್ಳತನ, ಗೂಂಡಾಗಿರಿ ಹೆಚ್ಚಾಗಿದೆ. ಅವಳಿ ನಗರದಲ್ಲಿ ಕಾನೂನು ವ್ಯವಸ್ಥೆ ಬಿಗಿಗೊಳಿಸುವಂತೆ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಗದಗ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ಬಾಬು ಎನ್.ಶಿದ್ಲಿಂಗ್ ಮತ್ತು ಜಿಲ್ಲಾ ಕಾರ್ಯದರ್ಶಿ ಪ್ರವೀಣ ಕೆ.ಜಿತೂರಿ ನೇತೃತ್ವದಲ್ಲಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಬಾಬು ಶಿದ್ಲಿಂಗ, ಡಿ.೨ರ ರಾತ್ರಿ ೧೧ ಗಂಟೆಯ ಸುಮಾರಿಗೆ ನಗರದ ಕಿಲ್ಲಾ ಓಣಿಯ ಹತ್ತಿರ ಕೆಲವು ಸಮಾಜಘಾತುಕ ಗೂಂಡಾಗಳು, ಕುಡಿದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದಾಗ, ಓಣಿಯ ಜನರು ಜಗಳವಾಡಬೇಡಿ ಎಂದು ಬುದ್ಧಿ ಹೇಳಿದ ಕಾರಣಕ್ಕೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ನಗರದಲ್ಲಿ ಈ ಗೂಂಡಾಗಳ ತಂಡವೇ ಇದ್ದು, ಗದಗ ನಗರದಲ್ಲಿ ಆಶಾಂತಿಯನ್ನು ಉಂಟುಮಾಡುತ್ತಿದ್ದಾರೆ. ಆದ್ದರಿಂದ ಮಾನ್ಯರು ಅಮಾಯಕರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಎಸ್.ಎಸ್. ಸಮಾಜದ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ, ಕಿಶನ್ ಮೇರವಾಡೆ, ರಾಜು ಕಲಾಲ, ಭರತ ಕಲಾಲ, ಮನೋಜಸಿಂಗ್, ಗಣೇಶಸಿಂಗ ಮಿತಡೆ, ಗೋವಿಂದ ಹಬೀಬ, ದತ್ತು ಬಾಕಳೆ, ಗಣೇಶ ನಾಕೋಡ, ಹನಮಂತ ಮಾಂಡ್ರೆ, ಸ್ವರೂಪ ಮಾಂಡ್ರೆ, ಸಂದೀಪ ಬೇವಿನಕಟ್ಟಿ, ಎಸ್.ಎಸ್.ಕೆ. ತರುಣ ಸಂಘದ ಅಧ್ಯಕ್ಷ ವಿಶ್ವನಾಥ ಸೋಳಂಕಿ, ಉಮೇಶ ಹಬೀಬ, ನಂದು ಬೇವಿನಕಟ್ಟಿ, ರಾಜು ಶಿದ್ಲಿಂಗ, ರಾಘು ಹಬೀಬ, ವಿಜಯ ಶಿದ್ಲಿಂಗ್, ಗಣೇಶ ಬಾರಿಗಿಡದ, ಯಲ್ಲಪ್ಪ ಭಾಂಡಗೆ ಸೇರಿದಂತೆ ಕ್ಷತ್ರಿಯ ಸಮಾಜದ ಯುವಕರು ಉಪಸ್ಥಿತರಿದ್ದರು.

ಭೀಕರ ಅಪಘಾತ; ಬೈಕ್ ಗೆ ಬಸ್ ಡಿಕ್ಕಿ,‌ ಮೂವರು ಕಾರ್ಮಿಕರು ಸಾವು

0

ಊಟ ಮುಗಿಸಿಕೊಂಡು ಹೊರಟಿದ್ದವರಿಗೆ ಬಸ್ ಡಿಕ್ಕಿ

ವಿಜಯಸಾಕ್ಷಿ ಸುದ್ದಿ, ರಾಯಚೂರು

ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಮಧ್ಯರಾತ್ರಿ ನಡೆದಿದೆ.

ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ನಾಲೆ ಬಳಿ ನಡೆದಿರುವ ಈ ಘಟನೆಯಲ್ಲಿ ಆಂಧ್ರಪ್ರದೇಶದ ನಂದ್ಯಾಲದ ನಾಗರಾಜ್ (32) ಜೈಪಾಲ್ (20) ಹಾಗೂ ಶ್ರೀನಿವಾಸ್ (28) ಎಂದು ಗುರುತಿಸಲಾಗಿದೆ.

ಭತ್ತದ ಕಟಾವು ಮಿಷನ್ ನಲ್ಲಿ ಕೆಲಸ ಮಾಡುತ್ತಿದ್ದ ಇವರು ನಿನ್ನೆ ರಾತ್ರಿ ಮಸ್ಕಿಯಲ್ಲಿ ಊಟ ಮುಗಿಸಿ ಬೈಕ್ ನಲ್ಲಿ ತೆರಳುವಾಗ ಈ ದುರ್ಘಟನೆ ಜರುಗಿದೆ.

ಸ್ಥಳಕ್ಕೆ ಮಸ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.