Home Blog Page 3309

ಗದಗನಲ್ಲಿ ಮೂವರಿಗೆ ಚಾಕು ಇರಿತ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ನಗರದಲ್ಲಿ ಮತ್ತೆ ಚಾಕು ‌ಇರಿಯಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಮೂವರಿಗೆ‌ ಆರು ಜನರಿಂದ ಚಾಕುವಿನಿಂದ ಇರಿಯಲಾಗಿದೆ ಎಂದು ಹೇಳಲಾಗುತ್ತದೆ. ಕಿಲ್ಲಾ ಓಣಿಯಲ್ಲಿ ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ.

ವಸಂತ ಬಾಕಳೆ, ಗೋಪಾಲ ಖೋಡೆ ಹಾಗೂ ಮಾಧುಸಾ ಬದಿ ಎಂಬಾತರೇ ಚಾಕುವಿನಿಂದ ಇರಿತಕ್ಕೊಳಗಾದವರು.

ಕೆಲವರು ಬಾಯಿ ಮಾಡುತ್ತಿದ್ದರು ನಾವು ಹೋಗಿ ಬುದ್ದಿ ಹೇಳಿದ್ದಕ್ಕೆ ನಮ್ಮ ಮೇಲೆ ಈ ಚಾಕುವಿನಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ಆರೋಪಿಸಿದ್ದಾರೆ.

ರಂಗನವಾಡಿಯ ಶಿವಾನಂದ ಅಲಿಯಾಸ್ ಶಿವು, ಸಾಧಿಕ್ ಅಕಬರಸಾಬ್, ಯೂನಸ್ ಮೋದಿನಸಾಬ್, ಅಲ್ವಿನ್ ಗ್ಯಾಬ್ರೀಲ್ ಹಾಗೂ ಇನ್ನಿಬ್ಬರು ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹೊಟ್ಟೆ, ಮುಂಗೈ, ಗಲ್ಲ, ಎದೆ, ಹಣೆಯ ಭಾಗಗಳಿಗೆ ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡ ಮೂರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಸೇರಿದಂತೆ ಹಲವು ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ; ನಗದು, ಚಿನ್ನಾಭರಣ ದೋಚಿದ್ದ ಕಳ್ಳನ ಬಂಧನ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದಲ್ಲಿನ ಮನೆಯೊಂದಕ್ಕೆ ನುಗ್ಗಿ ಹಣ ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಕಳ್ಳನನ್ನು ಲಕ್ಷೇಶ್ವರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತ ಪಂಢರಾಪುರದ ಸಚಿನ್ ಮಾನೆಯಿಂದ ಪೊಲೀಸರು 18,500 ರೂ. ನಗದು ಹಾಗೂ 35 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿನ ಮನೆಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಲಕ್ಷೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಆರೋಪಿ ಪತ್ತೆಗೆ ಸಿಪಿಐ ವಿಕಾಸ ಲಮಾಣಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಡಿ.ಪ್ರಕಾಶ, ವಿ.ಜಿ.ಪವಾರ, ಎಎಸ್ಐಗಳಾದ ಎಂ.ವಿ. ಮೌಲ್ವಿ, ಜಿ.ಎಂ. ಬೂದಿಹಾಳ ಹಾಗೂ ಸಿಬ್ಬಂದಿಗಳಾದ ಎಂ.ಎ. ಶೇಖ್, ಎಚ್.ಐ. ಕಲ್ಲಣ್ಣವರ, ಡಿ.ಎಸ್. ನದಾಫ್, ಕೊರಡೂರ, ಆನಂದಸಿಂಗ್ ದೊಡ್ಡಮನಿ, ಎಂ.ಬಿ. ವಡ್ಡಟ್ಟಿ, ಮಧುಚಂದ್ರ ಧಾರವಾಡ, ಎಸ್.ಎಫ್.ತಡಸಿ, ಕೆ.ಬಿ. ಹುಲಗೂರ, ಮಹಾದೇವ ಲಮಾಣಿ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಸ್ಕಾಲರ್ಶಿಪ್ ರದ್ದು; ಕಾಂಗ್ರೆಸ್ ಮುಖಂಡ ವಿವೇಕ ಯಾವಗಲ್ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ನರಗುಂದ

ಬಡ ಮಕ್ಕಳಿಗೆ ಕೊಡುವ ಸ್ಕಾಲರ್ಶಿಪ್ ರದ್ದು ಮಾಡಿದ ನೀಚ ಬಿಜೆಪಿ ಸರ್ಕಾರ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ವಿವೇಕ ಯಾವಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡವರ ಮಕ್ಕಳು ಶಾಲೆಗೆ ಹೋಗುವ ದಾರಿಯಲ್ಲಿ ಮುಳ್ಳು ಹಾಕುವ ಕೆಲಸ ಮಾಡುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಶೇ.75 ಹಾಗೂ ರಾಜ್ಯದಿಂದ ಶೇ.25ರಷ್ಟು ಪಾಲುದಾರಿಕೆಯಲ್ಲಿ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಏಕಾಏಕಿ ಸ್ಥಗಿತಗೊಳಿಸಿದ್ದು ಸರಿಯಲ್ಲ.

ಕೇಂದ್ರ ಸರ್ಕಾರದ ಈ ನಿಲುವನ್ನು ರಾಜ್ಯ ಸರ್ಕಾರ ಖಂಡಿಸಿ, ಈ ಆದೇಶವನ್ನು ಹಿಂಪಡೆಯಬೇಕು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ನರಗುಂದ ಮತ ಕ್ಷೇತ್ರದ ಯುವ ನಾಯಕ ವಿವೇಕ ಯಾವಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೆ.27ರಂದು ದಾಖಲೆಯ ಸಾಮೂಹಿಕ ವಿವಾಹ ಕಾರ್ಯಕ್ರಮ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕಳೆದ ಅಗಸ್ಟ್ 15ರಂದು ಕಲಘಟಗಿ-ಅಳ್ನಾವರ ಮತಕ್ಷೇತ್ರದ ವಿಶ್ವದ ಅತಿ ಉದ್ದನೆಯ ತಿರಂಗಾ ರ‍್ಯಾಲಿಯು ವರ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದು ದಾಖಲೆ ನಿರ್ಮಿಸಿತ್ತು.

ಇದೀಗ ಮತ್ತೊಮ್ಮೆ ವಿಶ್ವದಾಖಲೆಯ ಕ್ಷಣಕ್ಕೆ ಸಾಕ್ಷಿಯಾಗುವ ಸಮಯ ಬಂದಿದ್ದು, ದೀನ-ದಲಿತರ ಹಾಗೂ ಬಡವರ ಬಂಧು, ಕಾಯಕಯೋಗಿ, ಶಿಕ್ಷಣ ಪ್ರೇಮಿ, ದಣಿವರಿಯದ ನಾಯಕ, ಮಾಜಿ ಸಚಿವ ಸಂತೋಷ್ ಲಾಡ್‌ರ 48ನೇ ಹುಟ್ಟುಹಬ್ಬದ ಪ್ರಯುಕ್ತ ಸಂತೋಷ್ ಲಾಡ್ ಫೌಂಡೇಶನ್, ಲಾಡ್ ಪರಿವಾರ ಹಾಗೂ ಸಂತೋಷ್ ಲಾಡ್ ಗೆಳೆಯರ ಬಳಗದ ಸಾರಥ್ಯದಲ್ಲಿ, ಕಲಘಟಗಿ ಹಾಗೂ ಅಳ್ನಾವರ ಭಾಗದ ಸಮಸ್ತ ಗುರು-ಹಿರಿಯರ ಸಮ್ಮುಖದಲ್ಲಿ ಬೃಹತ್ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನಾಲ್ಕು ಸಾವಿರವರೆಗಿನ ಜೋಡಿಗಳ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ವಿಶ್ವದಾಖಲೆಗೂ ಪಾತ್ರವಾಗುವ ಸಾಧ್ಯತೆಯಿದ್ದು, 2023ರ ಫೆಬ್ರವರಿ 27, ಸೋಮವಾರದಂದು ಕುರುವಿನಕೊಪ್ಪ, ಬೂದನಗುಡ್ಡ ರಸ್ತೆಯಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದೆ.

ವಧುವಿಗೆ ತಾಳಿ, ಕಾಲುಂಗುರ, ಸೀರೆ, ಬಾಸಿಂಗ ಹಾಗೂ ವರನಿಗೆ ಶರ್ಟ್, ಪಂಚೆ, ಬಾಸಿಂಗವನ್ನು ನೀಡಲಾಗುವುದು. ಈ ಮಹೋನ್ನತ ಕಾರ್ಯಕ್ರಮದಲ್ಲಿ ವಿವಾಹವಾಗಿ ವಿಶ್ವದಾಖಲೆಯ ಭಾಗವಾಗುವವರು 9113084540/ 8123810002 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕಳೆದಿದ್ದ ಮೊಬೈಲ್‌ಗಳನ್ನು ಹುಡುಕಿ ಹಿಂದಿರುಗಿಸಿದ ಶಹರ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ನೇ ಸಾಲಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಅಜಾಗರೂಕತೆಯಿಂದ ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಿದ್ದ ವಿಷಯಕ್ಕೆ ಸಂಬಂಧಿಸಿ, ಸಿಆರ್‌ಪಿಸಿ ಕಲಂ 155 ರಂತೆ ಹಲವು ಪ್ರಕರಣಗಳು ದಾಖಲಾಗಿದ್ದವು.

ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹಾಗೂ ಗದಗ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಶಿವಾನಂದ ಪವಾಡಶೆಟ್ಟರ ಅವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಜಯಂತ ಗೌಳಿ ಹಾಗೂ ಸಿಬ್ಬಂದಿಗಳಾದ ಗುರುರಾಜ ಬೂದಿಹಾಳ, ಯು.ಎಫ್. ಸುಣಗಾರ, ಕೆ.ಡಿ. ಜಮಾದಾರ, ಪಿ.ಎಸ್. ಕಲ್ಲೂರ, ಪಿ.ಎ. ಭರಮಗೌಡ್ರ ಸೇರಿ ಸಾರ್ವಜನಿಕರು ಕಳೆದುಕೊಂಡ ವಿವಿಧ ಕಂಪನಿಗಳ ಸುಮಾರು 2.50 ಲಕ್ಷ ರೂ. ಬೆಲೆಬಾಳುವ ಒಟ್ಟೂ 22ಮೊಬೈಲ್ ಫೋನ್‌ಗಳನ್ನು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾರೆ.


ಮೊಬೈಲ್ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಗದಗ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಪ್ರಶಂಸಿಸಿದ್ದಾರೆ.

ಎಪಿಎಂಸಿ ಆವರಣದಲ್ಲಿ ರಟ್ಟಿನ ಡಬ್ಬದಲ್ಲಿ ಪತ್ತೆಯಾದ ಹಸುಳೆ; ಛೇ! ಇವರೆಂಥಾ ಕಟುಕರು…

ವಿಜಯಸಾಕ್ಷಿ ಸುದ್ದಿ, ಗದಗ

ಈಗಿನ್ನೂ ಕಣ್ಣು ಬಿಡದ ಹಸುಗೂಸು ತಾಯಿಯ ಬೆಚ್ಚನೆಯ ಮಡಿಲಲ್ಲಿ ಆರೈಕೆಗೊಳ್ಳದೇ ರಟ್ಟಿನ ಡಬ್ಬಿಯಲ್ಲಿ ಆಕ್ರಂದಿಸುತ್ತಿತ್ತು. ಮೂರೇ ದಿನಗಳ ಹಿಂದೆ ಮಾತೃಗರ್ಭದಿಂದ ಹೊರಬಂದು ಯಾಕಾದರೂ ಈ ಹಾಳು ಕಟುಕರ ಪ್ರಪಂಚಕ್ಕೆ ಕಾಲಿಟ್ಟೆನೋ ಎಂಬ ಭಾವದಲ್ಲಿ ಒಂದೇ ಸಮನೆ ಆಕ್ರಂದಿಸುತ್ತಿತ್ತು. ಸಾರ್ವಜನಿಕರ ಹಾಗೂ ಪೊಲೀಸ್ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಬೀದಿ ನಾಯಿ/ಹಂದಿಗಳ ಪಾಲಾಗಲಿದ್ದ ಹಸುಗೂಸು ಜೀವವುಳಿಸಿಕೊಂಡಿದೆ.

ಇಂಥದೊಂದು ಅಮಾನವೀಯ ದಾರುಣ ಘಟನೆ ನಡೆದಿದ್ದು ನಮ್ಮದೇ ಗದಗ ನಗರದಲ್ಲಿ. ಮನುಷ್ಯತ್ವ ಮರೆತ ಪಾಲಕರು ಹಸುಗೂಸಿನ ಪಾಲನೆ ಮಾಡದೇ ರಟ್ಟಿನ ಡಬ್ಬಿಯೊಂದರಲ್ಲಿಟ್ಟು, ನಗರದ ಎಪಿಎಂಸಿ ಆವರಣದ ಜನನಿಬಿಡ ಸ್ಥಳವೊಂದರಲ್ಲಿ ಬೇವಿನ ತಪ್ಪಲುಗಳ ಸಂದಿನಲ್ಲಿ ಪೆಟ್ಟಿಗೆಯನ್ನಿಟ್ಟು ವಿದಾಯ ಹೇಳಿದ್ದರು. ಆಕಾಶ್ ಎಂಬ ಯುವಕನೊಬ್ಬ ಚಿಕ್ಕ ಮಗು ಅಳುತ್ತಿರುವ ಶಬ್ಧ ಕೇಳಿ ಅತ್ತಿತ್ತ ಹುಡುಕಾಡಿದಾಗ ರಟ್ಟಿನ ಡಬ್ಬದಲ್ಲಿದ್ದ ಈ ಮಗು ಕಾಣಿಸಿತ್ತು. ತಕ್ಷಣ ಎಚ್ಚೆತ್ತ ಆಕಾಶ್ ಬಡಾವಣೆಯ ಪೊಲೀಸ್ ಸಿಬ್ಬಂದಿಗಳಿಗೆ ಫೋನ್ ಮಾಡಿ ವಿಷಯ ತಿಳಿಸಿದ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿಗಳಾದ ಪರಶುರಾಮ ದೊಡ್ಡಮನಿ ಹಾಗೂ ಅಶೋಕ್ ಸ್ಥಳಕ್ಕಾಗಮಿಸಿ ಶಿಶುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.

ಮನುಷ್ಯರ ಸ್ಪರ್ಶ/ಸಂಪರ್ಕವಾಗುತ್ತಿದ್ದಂತೆಯೇ ಮಗುವಿನ ಆಕ್ರಂಧನ ಮುಗಿಲುಮುಟ್ಟುವಂತಿದ್ದು, ದೃಶ್ಯ ಎಂಥ ಕಲ್ಲು ಹೃದಯದವರಿಗೂ ಕರುಳು ಹಿಂಡುವಂತಿತ್ತು. ಇದೀಗ ಶಿಶುವಿನ ಪೋಷಕರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಯುವಕ ಆಕಾಶ್ ಹಾಗೂ ಪೊಲೀಸ್ ಸಿಬ್ಬಂದಿಗಳ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹಸುಳೆಯನ್ನು ಹೀಗೆ ಅಮಾನವೀಯವಾಗಿ ಡಬ್ಬದಲ್ಲಿ ತುಂಬಿ ಅನಾಥವಾಗಿಸಿ ಬಿಟ್ಟುಹೋದ ಪಾಪಿ ಪಾಲಕರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನೀರು ಕುಡಿಸಲು ಹೋದ ಬಾಲಕ ಕಲ್ಲು ಕ್ವಾರಿಗೆ ಬಿದ್ದು ಸಾವು

ವಿಜಯಸಾಕ್ಷಿ ಸುದ್ದಿ, ನರೇಗಲ್

ಜಾನುವಾರಿಗೆ ನೀರು ಕುಡಿಸಲೆಂದು ಹೋದ ಬಾಲಕನೊಬ್ಬ ಕಲ್ಲಿನ ಕ್ವಾರಿಯೊಳಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ತೋಟಗಂಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸುಮೀತ್(10 ವರ್ಷ) ಎಂಬುವನೇ ಮೃತ ಬಾಲಕನಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಗ್ರಾಮಸ್ಥರ ನೆರವಿನಿಂದ ಬಾಲಕನ ಮೃತ ದೇಹವನ್ನು ಕಲ್ಲಿನ ಕ್ವಾರಿಯಿಂದ ಹೊರತೆಗೆದಿದ್ದಾರೆ.

ನರೇಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕಾಂಗ್ರೆಸ್ ಮುಖಂಡನ ದಾಭಾಕ್ಕೆ ಬಂದ ನಾಗರಾಜ ಮರಳಿ ಗೂಡಿಗೆ

0

ಆರು ಅಡಿ ಉದ್ದದ ನಾಗರಹಾವು; ಸ್ನೇಕ್ ಬುಡ್ಡಾರಿಂದ ರಕ್ಷಣೆ

ವಿಜಯಸಾಕ್ಷಿ ಸುದ್ದಿ, ನರಗುಂದ

ಇಲ್ಲಿನ ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜು ಕಲಾಲ ಎಂಬುವರಿಗೆ ಸೇರಿದ ಸಂಜು ದಾಭಾದಲ್ಲಿ ಭಾರೀ ಗಾತ್ರದ ನಾಗರಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಆತಂಕ ಸೃಷ್ಟಿಸಿತು.

ಸುಮಾರು ಆರು ಅಡಿ ಉದ್ದವಿರುವ ಈ ನಾಗರಹಾವು ದಾಭಾದ ಆವರಣದಲ್ಲಿ ಸಂಗ್ರಹಿಸಿದ್ದ ಪಾಳು ಸರಕುಗಳ ಸಂದುಗಳಲ್ಲಿ ನುಗ್ಗಿ ಮರೆಯಾಗುತ್ತಿತ್ತು.

ಸದಾಕಾಲ ಉರಗಗಳ ರಕ್ಷಣೆಗೆಂದೇ ಸಿದ್ಧವಾಗಿದ್ದು, ಯಾವುದೇ ಭಾಗದಿಂದ ಕರೆಬಂದರೂ ತಕ್ಷಣ ರಕ್ಷಣಾ ಕಾರ್ಯಕ್ಕೆ ಧಾವಿಸುವ ಬುಡ್ಡೇಸಾಬ್ ಅಲಿಯಾಸ್ ಸ್ನೇಕ್ ಬುಡ್ಡಾರನ್ನು ಸ್ಥಳಕ್ಕೆ ಕರೆಯಿಸಿದಾಗ, ಅವರೂ ಕೂಡ ಈ ನಾಗರವನ್ನು ಸೆರೆಹಿಡಿಯುವಲ್ಲಿ ಹರಸಾಹಸ ಪಡಬೇಕಾಯಿತು.

ಮುಂಗುಸಿಗಳೊಂದಿಗೆ ಸೆಣಸಾಡಿ ಈಗಾಗಲೇ ತಲೆ, ಹೆಡೆಯ ಭಾಗದಲ್ಲಿ ಗಾಯಗೊಂಡಂತಿದ್ದ ನಾಗರಾಜನ ರೋಷಾವೇಷವೂ ಅಷ್ಟೇ ಇತ್ತು. ಸ್ಥಳೀಯರ ಸಹಕಾರದಲ್ಲಿ ಹಾವನ್ನು ಹಿಡಿದಾಗ ಸಿಟ್ಟಿನಿಂದ ಹೆಡೆಯೆತ್ತಿ ಭುಸ್ಸೆನ್ನುತ್ತ ಎರಡು-ಮೂರು ಅಡಿ ಎತ್ತರಕ್ಕೆ ಹೆಡೆಯೆತ್ತಿ ನಿಲ್ಲುತ್ತಿತ್ತು.

ಇದೇ ಕಾರ್ಯದಲ್ಲಿ ಪರಿಣಿತರಾಗಿರುವ ಸ್ನೇಕ್ ಬುಡ್ಡಾ ಉರಗವನ್ನು ಸುರಕ್ಷಿತವಾಗಿ ಹಿಡಿದು ಮುಚ್ಚಳವಿರುವ ಕ್ಯಾನ್‌ನಲ್ಲಿ ತುಂಬಿ ಸೂಕ್ತ ಸ್ಥಳದಲ್ಲಿ ಬಿಟ್ಟುಬಂದಾಗ ಸ್ಥಳೀಯರು ನಿಟ್ಟುಸಿರಾದರು.

‘ಹಗಲಿನಲ್ಲಿ ವಿದ್ಯಾ ಕೇಂದ್ರ, ರಾತ್ರಿಯಲ್ಲಿ ಬಾರ್!’

0

ಜಿಲ್ಲಾಧಿಕಾರಿಗಳೆದುರು ಅಳಲು ತೋಡಿಕೊಂಡ ಕಾಲೇಜಿನ ಪ್ರಾಚಾರ್ಯರು

ವಿಜಯಸಾಕ್ಷಿ ಸುದ್ದಿ, ರೋಣ

‘ನೋಡಿ ಮೇಡಂ, ಇದು ಹಗಲಿನಲ್ಲಿ ಮಾತ್ರ ವಿದ್ಯಾ ಕೇಂದ್ರ. ಸಂಜೆಯ ಕತ್ತಲು ಕವಿಯುತ್ತಿದ್ದಂತೆಯೇ ಬಾರ್ ಹಾಗೂ ರೆಸ್ಟೋರೆಂಟ್ ಆಗಿ ಪರಿವರ್ತನೆಯಾಗುತ್ತದೆ. ಈ ಅಧ್ವಾನಗಳಿಂದ ನಾವು ರೋಸಿಹೋಗಿದ್ದೇವೆ. ಈ ವಿಷಯವಾಗಿ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವ ಪ್ರಯೋಜನವಾಗುತ್ತಿಲ್ಲ’ ಎಂದು ಪಟ್ಟಣದ ಸರಕಾರಿ ಪಿಯು ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್. ಮಾನೇದರು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ರ ಬಳಿ ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿಗಳು ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ಜಾಗೃತಿ ವಿಷಯವಾಗಿ ಕಾಲೇಜಿಗೆ ಧಿಡೀರ್ ಭೇಟಿ ನೀಡಿದ ಸಂದರ್ಭದಲ್ಲಿ ಕಾಲೇಜಿನ ಅವ್ಯವಸ್ಥೆಗಳ ಕುರಿತು ಪ್ರಾಚಾರ್ಯರನ್ನು ಪ್ರಶ್ನಿಸಿದಾಗ, ಪ್ರಾಚಾರ್ಯರು ಮೇಲಿನಂತೆ ಉತ್ತರಿಸುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.

ಇಲ್ಲಿ ನಾವು ಏನೂ ಮಾತನಾಡುವ ಸ್ಥಿತಿಯಲ್ಲಿಲ್ಲ. ನಾವು ಬೇರೆ ಬೇರೆ ಸ್ಥಳಗಳಿಂದ ಇಲ್ಲಿ ಸೇವೆಗಾಗಿ ಬಂದಿದ್ದೇವೆ. ಆದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದೆವು. ಅವುಗಳನ್ನೂ ಒಡೆದು ಹಾಕಿ, ಕಾಲೇಜಿನ ಆವರಣ ಮತ್ತು ಕಟ್ಟಡದಲ್ಲಿ ಕುಳಿತು ಮದ್ಯ ಸೇವನೆ ಮಾಡಿ, ಹೀಗೆ ಗಬ್ಬೆಬ್ಬಿಸುತ್ತಿದ್ದಾರೆ ಎಂದರು.

ಪ್ರಾಚಾರ್ಯರ ಮಾತುಗಳಿಂದ ವಿಚಲಿತರಾದ ಜಿಲ್ಲಾಧಿಕಾರಿಗಳು, ಪೊಲೀಸರಿಗೆ ತಿಳಿಸಬೇಕು ಎಂದಾಗ, ಹಲವಾರು ಬಾರಿ ಪೊಲೀಸರಿಗೂ ತಿಳಿಸಿದ್ದೇವೆ. ಅವರು ನಮಗೆ ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಸುಮ್ಮನಿದ್ದೇವೆ ಎಂದರು.

ಆಕ್ರೋಶಗೊಂಡ ಜಿಲ್ಲಾಧಿಕಾರಿಗಳು, ಇಂಥಹ ಗಂಭೀರ ಸಮಸ್ಯೆಯ ಕುರಿತು ಎಸ್ಪಿಯವರಿಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸುತ್ತೇನೆ ಎಂದರು.

ಇನ್ನು ಪಟ್ಟಣದ ಗಾಂಧಿನಗರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಲ್ಲಿನ ನಾಗರಿಕರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ರೋಣ ನಗರದಲ್ಲಿ ೧೫ ದಿನಗಳಿಗೊಮ್ಮೆ ನೀರು ಬಿಡುತ್ತಿದ್ದಾರಲ್ಲದೆ, ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಶೌಚಾಲಯವೂ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಇಲ್ಲಿನ ಆಡಳಿತ ಮಂಡಳಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಸ್ಥಳದಲ್ಲಿದ್ದ ಮುಖ್ಯಾಧಿಕಾರಿ ಕೃಷ್ಣಾ ನಾಯಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಮತ್ತೊಮ್ಮೆ ಸಮಸ್ಯೆಗಳು ನನ್ನ ಗಮನಕ್ಕೆ ಬಾರದಂತೆ ಕೆಲಸ ನಿರ್ವಹಿಸಿ ಎಂದು ತಾಕೀತು ಮಾಡಿದರು. ನಂತರ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಸಿಡಿಪಿಒ ಕಚೇರಿಯ ಸಿಬ್ಬಂದಿಗಳ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ತಹಸೀಲ್ದಾರ್ ವಾಣಿ ಉಂಕಿಯವರಿಂದ ಮಾಹಿತಿ ಪಡೆದುಕೊಂಡರು.

ಮುದೇನಗುಡಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮತದಾರ ಪಟ್ಟಿ ಕುರಿತು ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ, ಸಾಮಾಜಿಕ ಭದ್ರತೆ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿದರು.

ತಹಸೀಲ್ದಾರ್ ವಾಣಿ ಉಂಕಿ, ಇಒ ಸಂತೋಷ ಪಾಟೀಲ, ಎಇಇ ಜಗದೀಶ ಮಡಿವಾಳರ, ಕಂದಾಯ ನಿರೀಕ್ಷಕ ಎನ್.ಆರ್. ಅಡಿವೇಣ್ಣವರ, ರವಿ ಬಾರಕೇರ ಉಪಸ್ಥಿತರಿದ್ದರು.

ಈ ಬಾರಿ 17 ವರ್ಷದವರು ಸಹ ಮತದಾರ ಪಟ್ಟಿಗೆ ಹೆಸರನ್ನು ಸೇರಿಸಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕಾಲೇಜಿನ ಹಾಗೂ 17 ವರ್ಷ ಪೂರೈಸಿದವರು ಈ ಲಾಭವನ್ನು ಪಡೆದುಕೊಳ್ಳಬೇಕು.

-ವೈಶಾಲಿ ಎಂ ಎಲ್, ಜಿಲ್ಲಾಧಿಕಾರಿಗಳು, ಗದಗ

ನೇಣು ಬಿಗಿದುಕೊಂಡು ಡಿಎಆರ್ ಪೊಲೀಸ್ ಆತ್ಮಹತ್ಯೆಗೆ ಶರಣು

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಳಗುಂದ ರಸ್ತೆಯ ತೇಜಾ ನಗರದಲ್ಲಿ ನಡೆದಿದೆ.

1998-99 ರ ಬ್ಯಾಚ್ ನ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿದ್ದ ಅನಿಲ ಸಜ್ಜನರ (48) ಎಂಬುವರೇ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡವರು.

ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

ಇವತ್ತು ಪತ್ನಿಗೆ ಎಳೆ ನೀರು ತರುವಂತೆ ಮಾರುಕಟ್ಟೆಗೆ ಕಳುಹಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.